Tag: ಕೆ.ಎಂ.ಚೈತನ್ಯ

  • ಕನ್ನಡಕ್ಕೆ ಬಂದ ‘ಕಲ್ಕಿ’ ಚಿತ್ರದ ಮ್ಯೂಸಿಕ್ ಡೈರೆಕ್ಟರ್

    ಕನ್ನಡಕ್ಕೆ ಬಂದ ‘ಕಲ್ಕಿ’ ಚಿತ್ರದ ಮ್ಯೂಸಿಕ್ ಡೈರೆಕ್ಟರ್

    ದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಿಸುತ್ತಿರುವ ಹಾಗೂ “ಆ ದಿನಗಳು” ಖ್ಯಾತಿಯ ಕೆ‌.ಎಂ.ಚೈತನ್ಯ (K.M. Chaitanya) ನಿರ್ದೇಶನದಲ್ಲಿ ಟೈಗರ್ (Vinod Prabhakar) ನಾಯಕರಾಗಿ ನಟಿಸುತ್ತಿರುವ 25 ನೇ ಚಿತ್ರ “ಬಲರಾಮನ ದಿನಗಳು”. ಕಳೆದ ಕೆಲವು ತಿಂಗಳ ಹಿಂದಷ್ಟೇ ಈ ಚಿತ್ರದ ಘೋಷಣೆಯಾಗಿತ್ತು. ಈಗ ಈ ಚಿತ್ರದ ಕುರಿತು ಮತ್ತೊಂದು ಮಹತ್ವದ ಸುದ್ದಿ ಹೊರಬಂದಿದೆ. ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ‌. ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಂತೋಷ್ ನಾರಾಯಣನ್ ಅವರನ್ನು “ಬಲರಾಮನ ದಿನಗಳು” ಚಿತ್ರತಂಡ ಅದ್ದೂರಿಯಾಗಿ ಕನ್ನಡಕ್ಕೆ ಬರಮಾಡಿಕೊಂಡರು. ನಂತರ ಸಂತೋಷ್ ನಾರಾಯಣನ್  (Santosh Narayanan)ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಪ.ರಂಜಿತ್ ಅವರ “ಅಟ್ಟಕತ್ತಿ” ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದ ಇವರು, “ಕಾಲ”, ” ಕಬಾಲಿ”, “ಭೈರವ”, ” ದಸರಾ” ಹಾಗೂ ಇತ್ತೀಚಿಗೆ ತೆರೆಕಂಡ “ಕಲ್ಕಿ” ಸಿನಿಮಾವರೆಗೂ 50 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಹಲವು ಚಿತ್ರಗಳಲ್ಲಿ ಹಾಡಿದ್ದಾರೆ ಕೂಡ‌. “ನನ್ನ ತಾಯಿಗೆ ಕನ್ನಡ ಬರುತ್ತದೆ. ಅವರು ನನಗೂ ಸ್ವಲ್ಪ ಕನ್ನಡ ಹೇಳಿಕೊಟ್ಟಿದ್ದಾರೆ. ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನೆ. “ಬಲರಾಮನ ದಿನಗಳು” ನನ್ನ 51ನೇ ಚಿತ್ರ ಹಾಗೂ ನಾನು ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಚಿತ್ರ. ಪದ್ಮಾವತಿ ಫಿಲಂಸ್, ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಈ ಸಂದರ್ಭದಲ್ಲಿ ಗುರುಗಳಾದ ಇಳಯರಾಜ, ಎ.ಆರ್.ರೆಹಮಾನ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ರಘು ದೀಕ್ಷಿತ್ ಅವರ  “ನಿನ್ನ ಪೂಜೆಗೆ ಬಂದೆ ಮಾದೇಶ್ವರ” ಸೇರಿದಂತೆ ಕೆಲವು ಹಾಡುಗಳಿಗೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದೇನೆ. ಅಜನೀಶ್ ಲೋಕನಾಥ್ ಹಾಗೂ ರವಿ ಬಸ್ರೂರ್ ಅವರ ಸಂಗಿತ ಇಷ್ಟ ಎಂದು ಹೇಳಿದ ಸಂತೋಷ್ ನಾರಾಯಣನ್, ಈ ಚಿತ್ರದಲ್ಲೂ ಒಳ್ಳೆಯ ಹಾಡುಗಳನ್ನು ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.

    ಇದು ನನ್ನ 25ನೇ ಸಿನಿಮಾ, ಕೆ.ಎಂ. ಚೈತನ್ಯ ನಿರ್ದೇಶನದ 10ನೇ ಸಿನಿಮಾ. “ಬಲರಾಮನ ದಿನಗಳು” ಗೆ ಬಲ ನೀಡುವುದಕ್ಕೆ ಸಂತೋಷ್‍ ನಾರಾಯಣನ್ ಅವರು ಇಲ್ಲಿಗೆ ಬಂದಿದ್ದಾರೆ. ಸಂತೋಷ್‍ ನಾರಾಯಣನ್ ಅವರೇ ಯಾಕೆ? ಎಂಬ ಪ್ರಶ್ನೆ ಬರಬಹುದು. ಅವರ ಕೆಲಸವನ್ನು ನಮ್ಮಲ್ಲಿ ಜನ ಒಪ್ಪಿಕೊಂಡಿದ್ದಾರೆ. ಅವರು ಯಾರು ಎಂದು ಗೊತ್ತಿಲ್ಲದಿರಬಹುದು, ಅವರ ಮುಖ ನೋಡದಿರಬಹುದು. ಆದರೆ, ಗ್ಯಾಂಗ್‍ಸ್ಟರ್ ಸಿನಿಮಾ ಸಂಬಂಧ ಪಟ್ಟ ಯಾವುದೇ ಪೋಸ್ಟ್ ನೋಡಿ, ಇವರ ಸಿಗ್ನೇಚರ್ ಸಂಗೀತ ಇದ್ದೇ ಇರುತ್ತದೆ. ಹಾಗಾಗಿ, ನಮ್ಮ ಚಿತ್ರತಂಡದವರೆಲ್ಲಾ ನಿರ್ಧಾರ ತೆಗೆದುಕೊಂಡು ಅವರನ್ನು ಕರೆಸಿದ್ದೇವೆ. ಇದೊಂದು ಗ್ಯಾಂಗ್‍ಸ್ಟರ್ & ಕಲ್ಟ್ ಸಿನಿಮಾ ಆಗಿರುವುದರಿಂದ ಅವರೇ ಸೂಕ್ತ ಎಂದನಿಸಿತು. ಅವರು ದೊಡ್ಡ ಸಂಗೀತ ನಿರ್ದೇಶಕ. ಅವರನ್ನು ಕರೆದುಕೊಂಡು ಬರುವುದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಕಷ್ಟಪಟ್ಟು ಅವರನ್ನು ಕರೆದುಕೊಂಡು ಬಂದಿದ್ದೇವೆ. ‘ಕಲ್ಕಿ’ ಬಿಡುಗಡೆಗೂ ಮೊದಲೇ, ಮೇ ತಿಂಗಳಲ್ಲಿ ಅವರನ್ನು ಮಾತನಾಡಿಸಿದ್ದೆವು. ಅವರಿಗೆ ಚಿತ್ರಕಥೆ ರೀಡಿಂಗ್‍ ಕೊಡುತ್ತಿದ್ದಂತೆಯೇ ಒಪ್ಪಿಕೊಂಡರು. ಚಿತ್ರ ವಿಭಿನ್ನವಾಗಿದೆ, 70-80ರ ಕಾಲಘಟ್ಟದ ಚಿತ್ರವಾಗಿರುವುದರಿಂದ ಸಾಕಷ್ಟು ಪ್ರಯೋಗ ಮಾಡಬಹುದು ಎಂದು ಖುಷಿಪಟ್ಟು ಒಪ್ಪಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕನ್ನಡಕ್ಕೆ ಕರೆದುಕೊಂಡು ಬಂದಿರುವ ಹೆಮ್ಮೆ ಇದೆ. ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು ನಾಯಕ ಟೈಗರ್.

    ಇದು 90 ರ ದಶಕದ ಕಾಲಘಟ್ಟದ ಭೂಗತಲೋಕದ ಕಥೆ. ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಕಾಲ್ಪನಿಕ ಕಥೆ. ಟೈಗರ್ ಅವರ ಚಿತ್ರವನ್ನು ನಿರ್ದೇಶಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ನಿರ್ಮಾಪಕರಾದ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್‍ ಗೆ ವಂದನೆಗಳು. ಸಂತೋಷ್ ನಾರಾಯಣ್ ಅವರ ಸಂಗೀತ ನಿರ್ದೇಶನದಲ್ಲಿ ಒಳ್ಳೆಯ ಹಾಡುಗಳು ಬರಲಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದರು.

     ನಾನು ಚಿಕ್ಕ ವಯಸ್ಸಿನಿಂದ ಟೈಗರ್ ಅವರ ಅಭಿಮಾನಿ ಎಂದು ಮಾತನಾಡಿದ ನಿರ್ಮಾಪಕ ಶ್ರೇಯಸ್, ಇಂದು ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷವಾಗಿದೆ. ನಮ್ಮ ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾವಿದು. ನಮ್ಮ ಮೊದಲ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ ಹಾಗೂ ಕೆ.ಎಂ.ಚೈತನ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ.  ಈ ಹಿಂದೆ ನಮ್ಮ ಚಿತ್ರದ ಘೋಷಣೆ ಮಾಡಿದಾಗ ತಾವೆಲ್ಲರು ನೀಡಿದ ಪ್ರೋತ್ಸಾಹಕ್ಕೆ ಚಿರ ಋಣಿ.   ನನ್ನ ಕನಸಿಗೆ ಆಸರೆಯಾದ ಅಪ್ಪ ಅಮ್ಮನಿಗೆ ಧನ್ಯವಾದ. ಮುಂದೆ ಕೂಡ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂದರು ನಿರ್ಮಾಪಕ ಶ್ರೇಯಸ್. ನಿರ್ಮಾಪಕಿ  ಪದ್ಮಾವತಿ ಜಯರಾಂ ಹಾಗೂ ಜಯರಾಂ ಅವರು ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ಚೈತನ್ಯ ಡೈರೆಕ್ಟರ್

    ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ಚೈತನ್ಯ ಡೈರೆಕ್ಟರ್

    ವಿನೋದ್ ಪ್ರಭಾಕರ್ (Vinod Prabhakar) ನಾಯಕರಾಗಿ ನಟಿಸುತ್ತಿರುವ 25 ನೇ ಚಿತ್ರದ ಶೀರ್ಷಿಕೆ ಅನಾವರಣ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಇದೇ ಸಂದರ್ಭದಲ್ಲಿ ಪದ್ಮಾವತಿ ಫಿಲಂಸ್ ಎಂಬ ನೂತನ ನಿರ್ಮಾಣ ಸಂಸ್ಥೆ ಕೂಡ ಆರಂಭವಾಯಿತು. ಗೃಹ ಸಚಿವ ಜಿ.ಪರಮೇಶ್ವರ್  ನೂತನ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು. ‘ಬಲರಾಮನ ದಿನಗಳು’ (Balaramana Dinagalu)  ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.  ಆ ದಿನಗಳು ಖ್ಯಾತಿಯ ಕೆ.ಎಂ.ಚೈತನ್ಯ (KM Chaitanya) ಈ  ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ನಿರ್ಮಾಪಕ ಶ್ರೇಯಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರದ ಶೀರ್ಷಿಕೆ ಅನಾವರಣ ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಟೈಗರ್ ಎಂದು ಬಿರುದು ನೀಡಿ ಸನ್ಮಾನಿಸಲಾಯಿತು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಪ್ರತಿಯೊಬ್ಬರಿಗೂ ಜೀವನದಲ್ಲಿ ವೈದ್ಯ, ಪೊಲೀಸ್‍, ರಾಜಕಾರಣಿ, ವಿಜ್ಞಾನಿ  ಹೀಗೆ ಏನೇನೋ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ, ನಮ್ಮ ಶ್ರೇಯಸ್‍ಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಆಸೆ ಇದ್ದು, ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ  ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಹಿಂದೆ ಸಿನಿಮಾದಲ್ಲಿ ಸಂದೇಶ ಇರುತ್ತಿತ್ತು. ಮೌಲ್ಯಗಳ ಪಾಠ ಇರುತ್ತಿತ್ತು. ಈಗ ಕಮರ್ಷಿಯಲ್‍ ಚಿತ್ರಗಳ ಸಂಖ್ಯೆ ಜಾಸ್ತಿ ಆಗಿದೆ. ಹಣ ಮಾಡಬೇಕು ನಿಜ. ಆದರೆ, ಜೊತೆಗೆ ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದು ಸಂದೇಶ ಸಹ ಹೋಗಬೇಕು. ಚಲನಚಿತ್ರ ಒಂದು ಪ್ರಬಲವಾದ ಮಾಧ್ಯಮ. ಈ ಮಾಧ್ಯಮದ ಮೂಲಕ ಜನರ ಮನಸ್ಸು ಬದಲಾವಣೆ ಮಾಡುವ ಅವಕಾಶವಿರುತ್ತದೆ. ಹಾಗಾಗಿ, ಯಾವ ಸಿನಿಮಾ ಮಾಡಿದರೂ ಅದರ ಮೂಲಕ ಪ್ರೇಕ್ಷಕರಿಗೆ ಒಂದು ಸಂದೇಶ ಕೊಡಿ. ನನಗೆ ಟೈಗರ್ ಪ್ರಭಾಕರ್ ಪರಿಚಿತರು. ಅವರ ಮಗ ಇಂದು ತಮ್ಮ 25ನೇ ಸಿನಿಮಾ ಮಾಡುತ್ತಿದ್ದಾರೆ. ಇದು ತಮಾಷೆ ವಿಷಯವಲ್ಲ. ಅವರು ಇನ್ನೂ 25 ಸಿನಿಮಾಗಳನ್ನು ಮಾಡಲಿ ಎಂಬುದು ನನ್ನ ಹಾರೈಕೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

    ಚಿತ್ರ ನಿರ್ಮಿಸಬೇಕು ಎಂಬುದು ನನ್ನ ಕನಸು ಎಂದು ಮಾತನಾಡಿದ ನಿರ್ಮಾಪಕ ಶ್ರೇಯಸ್,  ಆ ಕನಸಿಗೆ ನನ್ನ ತಂದೆ, ತಾಯಿ ಮತ್ತು ಸಹೋದರ ಶಕ್ತಿ ತುಂಬುತ್ತಿದ್ದಾರೆ. ವಿನೋದ್‍ ಪ್ರಭಾಕರ್ ಅವರು ನನ್ನ ಚಿತ್ರರಂಗದ ಗುರುಗಳು. ಅವರ ಸಹಕಾರದಿಂದ ನಾನು ಪದ್ಮಾವತಿ  ಫಿಲಂಸ್ ಎಂಬ ಸಂಸ್ಥೆ ಹುಟ್ಟುಹಾಕಿ ಈ ಚಿತ್ರ ನಿರ್ಮಿಸುತ್ತಿದ್ದೇನೆ ಎಂದರು. ನನಗೆ ಈ ಸಂಸ್ಥೆಯವರು ಟೈಗರ್ ಎಂಬ ಬಿರುದು ಕೊಟ್ಟಿದ್ದಾರೆ. ನನ್ನ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೆ ಸಿದ್ದವಾಗುತ್ತಿದೆ.  ಬಿರುದಿಗೆ ಆ ಚಿತ್ರಗಳು ಧಕ್ಕೆ ತರದಂತೆ ನೋಡಿಕೊಳ್ಳುತ್ತೇನೆ. ಚೈತನ್ಯ ಅವರ ‘ಆ ದಿನಗಳು’ ಚಿತ್ರ ನೋಡಿದಾಗಿನಿಂದ ನಾನು ಅವರ ಅಭಿಮಾನಿ. ಅವರ ಜೊತೆಗೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ. ಅವರೇನು ಬಲರಾಮನ ಪಾತ್ರ ಸೃಷ್ಠಿ ಮಾಡಿದ್ದಾರೋ, ಪ್ರಾಣ ಒತ್ತೆಯಿಟ್ಟು, ಬೆವರು-ರಕ್ತ ಹರಿಸಿ ಅದಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂದರು ನಾಯಕ ವಿನೋದ್ ಪ್ರಭಾಕರ್.

    ಹೆಚ್ಚಿನ ಸಿನಿಮಾಗಳಲ್ಲಿ ಮನರಂಜನೆ ಇರುತ್ತದೆ. ಸಂದೇಶಗಳು ಕಡಿಮೆಯಾಗುತ್ತಿವೆ ಎಂದು ಮಾತು ಅರಂಭಿಸಿದ ನಿರ್ದೇಶಕ ಕೆ.ಎಂ.ಚೈತನ್ಯ,  ನಾನು ನಿರ್ದೇಶಿಸಿರುವ ಸಿನಿಮಾಗಳಲ್ಲಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಸಂದೇಶ ಹೇಳಿದ್ದೇನೆ. ಇದರಲ್ಲೂ ಅದು ಮುಂದುವರೆಯುತ್ತದೆ. ಈ ಚಿತ್ರ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಶ್ರೇಯಸ್‍. ಈ ಕಥೆ ಆಯ್ಕೆ ಮಾಡಿದ್ದು ಅವರು. ಭೂಗತಲೋಕದ ಬಗ್ಗೆ ಸಾಕಷ್ಟು ಕಥೆಗಳನ್ನು ಮಾಡಿದ್ದೆ. ಅದರಲ್ಲಿ ಯಾವ ಕಥೆ ಮಾಡಬೇಕು ಅಂತ ಹೇಳಿದ್ದು ಅವರೆ. ಜೊತೆಗೆ ಬಹಳ ವರ್ಷಗಳಿಂದ ವಿನೋದ್‍ ಪ್ರಭಾಕರ್ ಜೊತೆಗೆ ಚಿತ್ರ ಮಾಡುವ ಆಸೆ ಇತ್ತು. ಅದಕ್ಕೆ ಪೂರಕವಾಗಿ ಕಥೆ ಸಿಕ್ಕಿದೆ. ಈ ಚಿತ್ರಕ್ಕೆ ಅವರು ಬಹಳ ಅತ್ಯುತ್ತಮ ಆಯ್ಕೆ. ಇದು ಭೂಗತಲೋಕದ ಸಿನಿಮಾ.  ಭೂಗತ ಲೋಕದ ಜೊತೆಗೆ ಸಮಾಜ, ರಾಜಕೀಯ ಹೀಗೆ ಎಲ್ಲಾ ಆಯಾಮಗಳು ಇರುತ್ತವೆ. ಚಿತ್ರದ ಬಗ್ಗೆ ಈಗಲೇ ಹೆಚ್ಚು ಹೇಳುವುದು ಕಷ್ಟ. ನಿಜಜೀವನದ ಕಥೆ ಆಧರಿಸಿದ ಕಾಲ್ಪನಿಕ ಚಿತ್ರ. ಇದು ಯಾವುದೇ ವ್ಯಕ್ತಿಯ ಕುರಿತಾದ ಚಿತ್ರ ಅಲ್ಲ. ಇದರಲ್ಲಿ ಮನರಂಜನೆ ಇರುತ್ತದೆ. ಇಡೀ ಕುಟುಂಬ ನೋಡುವ ಚಿತ್ರ ಎಂದು ತಿಳಿಸಿದರು.