Tag: ಕೆ.ಆರ್.ಮಾರುಕಟ್ಟೆ

  • ಪಿತೃಪಕ್ಷ ಹಿನ್ನೆಲೆ ಗಗನಕ್ಕೇರಿದ ಹೂವಿನ ಬೆಲೆ – ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ

    ಪಿತೃಪಕ್ಷ ಹಿನ್ನೆಲೆ ಗಗನಕ್ಕೇರಿದ ಹೂವಿನ ಬೆಲೆ – ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ

    ಬೆಂಗಳೂರು: ಪಿತೃಪಕ್ಷದ ಹಿನ್ನೆಲೆ ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಹೀಗಿದ್ದರೂ ಜನ ಹೂ ಖರೀದಿಗಾಗಿ ಮುಗಿ ಬೀಳುತ್ತಿದ್ದಾರೆ.

    K.R Market

    ಪಿತೃಪಕ್ಷ ಹಬ್ಬದ ಹಿನ್ನಲೆ ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಖರೀದಿಲು ಜನ ಮುಗಿಬೀಳುತ್ತಿದ್ದು, ವೀಕೆಂಡ್‍ನಲ್ಲಿ ವ್ಯಾಪಾರಿಗಳಿಗೆ ಭರ್ಜರಿಯಾಗಿ ವ್ಯಾಪಾರ ನಡೆಯುತ್ತಿದೆ. ಕಳೆದ ಎರಡು – ಮೂರು ದಿನಗಳಿಂದ ಹೂವಿನ ದರದಲ್ಲಿ ಏರಿಕೆಯಾಗಿದ್ದು, ದಸರಾ ಮುಗಿಯುವವರೆಗೂ ಬೆಲೆ ಹೆಚ್ಚಾಗಿಯೇ ಇರುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಬಿಲ್ಡಪ್‍ಗಾಗಿ ಪೊಲೀಸರಿಗೆ ಅವಾಜ್ ಹಾಕಿದ್ದ ಮೆಂಟಲ್ ಮಂಜ ಅರೆಸ್ಟ್

    K.R Market

    ಪಿತೃ ಪಕ್ಷ, ಮಹಾಲಯ ಅಮಾವಾಸ್ಯೆ, ನವರಾತ್ರಿ ಹಾಗೂ ಕಾರ್ತಿಕ ಸೋಮವಾರ ದೀಪಾವಳಿ ಹೀಗೆ ಸಾಲು, ಸಾಲು ಹಬ್ಬಗಳು ಈ ತಿಂಗಳಿನಲ್ಲಿದ್ದು, ಜನರು ಹಬ್ಬದ ಸಂಭ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೂವು, ಹಣ್ಣ ಖರೀದಿಸುತ್ತಾ ಕೊರೊನಾ ನಿಯಮ ಉಲಂಘಿಸುತ್ತಿದ್ದಾರೆ. ಈ ಮಧ್ಯೆ ಮಾರ್ಷಲ್ಸ್‌ಗಳು ಜನರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬುದ್ಧಿ ಹೇಳಿ ದಂಡ ವಿಧಿಸುತ್ತಿದ್ದರೆ, ಜನ ಅದಕ್ಕೆ ಕ್ಯಾರೆ ಮಾಡದೇ ಮಾರ್ಷಲ್‍ಗಳ ಜೊತೆಯಲ್ಲಿಯೇ ವಾಗ್ವಾದಕ್ಕಿಳಿದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ

    K.R Market

    ಹೂವಿನ ದರ:
    ಮಲ್ಲಿಗೆ – 600 – 800 ರೂಪಾಯಿ
    ಕನಕಾಂಬರ- 400-600 ರೂಪಾಯಿ
    ಕಾಕಡ ಹೂ- 100-300 ರೂಪಾಯಿ
    ಸುಗಂಧರಾಜ – 40- 80 ರೂಪಾಯಿ
    ಮಲ್ಲಿಗೆ – 400-600 ರೂಪಾಯಿ
    ಸೇವಂತಿಗೆ-30-60 ರೂಪಾಯಿ
    ಗುಲಾಬಿ – 30 – 100 ರೂಪಾಯಿ

  • ಮಳೆಯ ನಡುವೆಯೂ ಕೆ.ಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು

    ಮಳೆಯ ನಡುವೆಯೂ ಕೆ.ಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು

    – ರಾಜ್ಯಾದ್ಯಂತ ಮೂರ್ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಬೆಳ್ಳಂಬೆಳಗ್ಗೆ ಸುರಿಯುತ್ತಿರುವ ಮಳೆಯ ನಡುವೆಯೂ ಕೆ.ಆರ್ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು. ಹೂ, ಸೊಪ್ಪು, ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ. ಮಳೆ ಹಿನ್ನೆಲೆ ಹೂವಿನ ವ್ಯಾಪಾರ ಸಹ ಜೋರಾಗೆ ಇದ್ದು, ಮಳೆ ಕಾರಣಕ್ಕೆ ಕಡಿಮೆ ಬೆಲೆಗೆ ವ್ಯಾಪಾರಿಗಳು ಹೂವು ಮಾರಾಟ ಮಾಡುತ್ತಿದ್ದಾರೆ.

    ಬೆಳ್ಳಂಬೆಳಗ್ಗೆ ನಿಯಮ ಉಲ್ಲಂಘನೆ ಮಾಡುವವರಿಗೆ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲೆ ಮಾರ್ಷಲ್ ಗಳು ದಂಡ ಪ್ರಯೋಗಕ್ಕೆ ಮುಂದಾಗಿದ್ದರು. ನಿಯಮ ಉಲ್ಲಂಘನೆ ಹಿನ್ನೆಲೆ ದಂಡ ಹಾಕಿದಕ್ಕಾಗಿ ಕೆಲವರು ಮಾರ್ಷಲ್ ಗಳು ಜೊತೆ ಮಾತಿನ ಚಕಮಕಿಗೆ ಮುಂದಾದರೆ. ಇನ್ನೂ ಕೆಲವರು ನಿರ್ಲಕ್ಷದ ಉತ್ತರದ ಜೊತೆಗೆ ದಂಡ ಪಾವತಿ ಮಾಡಿ ತೆರಳಿದ್ರು.

    ಮಾಸ್ಕ್ ಹಾಕದೇ ಬಿಬಿಎಂಪಿ ಸಿಬ್ಬಂದಿ ಎಂದು ಹೇಳಿ ಬಂದ ಯುವಕನಿಗೆ ಅಧಿಕಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಯುವಕ 6 ತಿಂಗಳಿಂದ ಸಂಬಳ ಆಗಿಲ್ಲ ಬಿಟ್ಟುಬಿಡಿ ಸರ್ ಎಂದು ಗೊಗರೆದಿದ್ದಾನೆ. ಬಳಿಕ ಯುವಕನಿಕೆ ಆರೋಗ್ಯಾಧಿಕಾರಿ ಸರಿಯಾಗಿ ಮಾಸ್ಕ್ ಧರಿಸುವಂತೆ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಗೆ ಸೇರಿದ್ರೆ, ಮಕ್ಕಳ ಖಾತೆಗೆ 1 ಸಾವಿರ ರೂ. ಜಮೆ

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಬೆಂಗಳೂರಲ್ಲಿ ರಾತ್ರಿಯಿಡೀ ಮಳೆಯಾಗಿದ್ದು, ಬೆಳಗ್ಗೆಯೂ ಮುಂದುವರಿದಿದೆ. ರಾಜ್ಯಾದ್ಯಂತ ಮೂರ್ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಜುಲೈ 17ರವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಂಭವವಿದ್ದು, ಕರಾವಳಿ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿ, ಅದ್ರೇ ಬೆಂಗಳೂರಲ್ಲಿ ಜಡಿ ಮಳೆ ಮುಂದುವರೆಯೋ ಸಾಧ್ಯತೆ ಇದೆ.

  • ಮಧ್ಯರಾತ್ರಿ ರೈತರ ಸಮಸ್ಯೆ ಆಲಿಸಿದ ಡಿ.ಕೆ ಶಿವಕುಮಾರ್

    ಮಧ್ಯರಾತ್ರಿ ರೈತರ ಸಮಸ್ಯೆ ಆಲಿಸಿದ ಡಿ.ಕೆ ಶಿವಕುಮಾರ್

    – ಸಿಎಂ ಬಿಎಸ್‍ವೈ ಬಳಿ ಡಿಕೆಶಿ ಮನವಿ

    ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯಿಂದ ಇದೀಗ ಮತ್ತೆ ಮೇ 17ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದ್ದು, ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಪರದಾಡುತ್ತಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾತ್ರೋ ರಾತ್ರಿ ರೈತರ ಸಮಸ್ಯೆ ಆಲಿಸಿದ್ದಲ್ಲದೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಬೆಂಗಳೂರು ಹೊರವಲಯದ ಹೊಸಕೋಟೆ, ಕೋಲಾರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ದೇವನಹಳ್ಳಿ ಮತ್ತಿತರ ಕಡೆಯ ರೈತರು ತಾವು ಬೆಳೆದ ತರಕಾರಿ, ಹಣ್ಣು, ಹೂವು ಉತ್ಪನ್ನಗಳನ್ನು ತಂದು ಮಾರಾಟ ಮಾಡಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಅಲ್ಲದೆ ಅವರ ವಾಹನಗಳನ್ನು ತಡೆದು ತೊಂದರೆ ಕೊಡುತ್ತಿದ್ದರು.

    ಹೀಗಾಗಿ ಬೆಂಗಳೂರಿನ ಕೆ.ಆರ್. ಪುರ ಮಾರುಕಟ್ಟೆ ಸಮೀಪ ಶುಕ್ರವಾರ ಮಧ್ಯರಾತ್ರಿ 12.15ರ ಸುಮಾರಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರೈತರ ಸಮಸ್ಯೆ ಆಲಿಸಿದ್ದಾರೆ. ಅಲ್ಲದೆ ಅವರಿಗೆ ನೆರವಾಗುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಲ್ಲಿಂದಲೇ ಮನವಿ ಮಾಡಿದರು.

    ಇದೇ ವೇಳೆ ಹಲವಾರು ರೈತರು ತಮಗಾಗುತ್ತಿರುವ ತೊಂದರೆ ಬಗ್ಗೆ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ನಿವೇದಿಸಿಕೊಂಡಿದ್ದರು. ಶಿವಕುಮಾರ್ ಅವರ ಭೇಟಿ ಸಂದರ್ಭದಲ್ಲಿ ಎಂಎಲ್ ಸಿ ನಾರಾಯಣ ಸ್ವಾಮಿ ಹಾಗೂ ಹೊಸಕೋಟೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾಯಣಗೌಡ ಜೊತೆಗಿದ್ದರು.

  • ಅರ್ಧ ಕೆ.ಆರ್.ಮಾರ್ಕೆಟ್ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರ

    ಅರ್ಧ ಕೆ.ಆರ್.ಮಾರ್ಕೆಟ್ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರ

    – ಶನಿವಾರದಿಂದಲೇ ಮಾರಾಟ ಪ್ರಕ್ರಿಯೆ ಆರಂಭ

    ಬೆಂಗಳೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಲಾಸಿಪಾಳ್ಯದ ಹೋಲ್‍ಸೇಲ್ ತರಕಾರಿ ಮಾರ್ಕೆಟ್ ನ್ನು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

    ಈ ಕುರಿತು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮತ್ತು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿದ್ದು, ತಾತ್ಕಾಲಿಕವಾಗಿ 15 ದಿನಗಳ ಕಾಲ ಕೆ.ಆರ್.ಮಾರ್ಕೆಟ್ ನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಯನ್ನು ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಸ್ಟಾಲ್‍ಗಳು ಸಿದ್ಧವಾಗಿದ್ದು, 20 ಅಡಿ ಅಂತರದಲ್ಲಿ 10 ಸ್ಟಾಲ್‍ಗಳನ್ನು ಹಾಕಲಾಗಿದೆ. ಸಾರ್ವಜನಿಕರು ಅಂತರ ಕಾಯ್ದುಕೊಳ್ಳಲು 5 ಅಡಿ ಅಂತರದಲ್ಲಿ ಸರ್ಕಲ್ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

    ಹೀಗಾಗಿ ನಾಳೆಯಿಂದ ತರಕಾರಿ ಮಾರ್ಕೆಟ್ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಇರಲಿದೆ. ಸಾರ್ವಜನಿಕರು ಅಂತರ ಕಾಯ್ದು ಕೊಳ್ಳು 6 ಅಡಿ ಅಂತರದಲ್ಲಿ ಸರ್ಕಲ್ ಹಾಕಲಾಗಿದೆ. ಬೆಳಗ್ಗೆ ಕೆ.ಆರ್.ಮಾರ್ಕೆಟ್ ಗೆ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಉದಯ್ ಗರುಡಾಚಾರ್, ಮಾರುಕಟ್ಟೆಯಲ್ಲಿನ ಜನ ಸಂದಣಿ ಕಂಡು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆಸಿದ್ದಾರೆ.

    ಸದ್ಯಕ್ಕೆ 10 ಸ್ಟಾಲ್ ಗಳ ನಿರ್ಮಾಣ ಮಾಡಲಾಗಿದ್ದು, ನಾಳೆಯಿಂದ ಪೂರ್ತಿ ಮೈದಾನದಲ್ಲಿ ಸ್ಟಾಲ್ ನಿರ್ಮಾಣ ಮಾಡಲಾಗುವುದು. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ತರಕಾರಿ ಟೆಂಪೋಗಳು ನ್ಯಾಷನಲ್ ಕಾಲೇಜು ಮೈದಾನಕ್ಕೆ ಬರುತ್ತಿವೆ. ಶನಿವಾರ ಬೆಳಗ್ಗೆಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾರಾಟ ಆರಂಭವಾಗಲಿದೆ.

    ಕಲಾಸಿಪಾಳ್ಯ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯನ್ನು ಮಾತ್ರ ಸ್ಥಳಾಂತರಿಸಲಾಗುತ್ತಿದ್ದು, ಕೆ.ಆರ್.ಮಾರ್ಕೆಟ್ ನಲ್ಲಿ ಹೂವಿನ ಮಂಡಿ, ಚಿಲ್ಲರೆ ತರಕಾರಿ ವ್ಯಾಪಾರ ನಡೆಯಲಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕೆ.ಆರ್.ಮಾರ್ಕೆಟ್ ನಲ್ಲಿನ ಅಂಗಡಿಗಳನ್ನು ಸ್ಥಾಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದ್ದು, ಸದ್ಯಕ್ಕೆ ಕಲ್ಯಾಸಿಪಾಳ್ಯದ ಅತಿ ದೊಡ್ಡ ಹೋಲ್ ಸೆಲ್ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ.

  • ಕೆ.ಆರ್ ಮಾರ್ಕೆಟ್‍ನಲ್ಲಿ ನಿಲ್ಲುತ್ತಿಲ್ಲ ರೋಲ್ ಕಾಲ್ ದಂಧೆ – ಬಾಲಕನಿಗೆ ಹೆದರಿಸಿ ಬಾಳೆ ದಿಂಡು ಪಡೆದ ಬಿಬಿಎಂಪಿ ಅಧಿಕಾರಿ

    ಕೆ.ಆರ್ ಮಾರ್ಕೆಟ್‍ನಲ್ಲಿ ನಿಲ್ಲುತ್ತಿಲ್ಲ ರೋಲ್ ಕಾಲ್ ದಂಧೆ – ಬಾಲಕನಿಗೆ ಹೆದರಿಸಿ ಬಾಳೆ ದಿಂಡು ಪಡೆದ ಬಿಬಿಎಂಪಿ ಅಧಿಕಾರಿ

    ಬೆಂಗಳೂರು: ಕೆ.ಆರ್ ಮಾರ್ಕೆಟ್‍ನಲ್ಲಿ ಬಡ ವ್ಯಾಪರಸ್ಥರ ಮೇಲೆ ಪಾಲಿಕೆಯ ಅಧಿಕಾರಿಗಳು ಘರ್ಜಿಸುತ್ತಿದ್ದಾರೆ. ಹಾಡಹಗಲೇ ರೋಲ್ ಕಾಲ್ ದಂಧೆಗಿಳಿದು, ಕಾಸು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಕೆ.ಆರ್ ಮಾರ್ಕೆಟ್‍ನ ಮಾಮೂಲು ಜಗತ್ತಿನ ಕರಾಳ ದಂಧೆಯನ್ನ ನಿಮ್ಮ ಪಬ್ಲಿಕ್ ಟಿವಿ ಬಟಾಬಯಲು ಮಾಡುತ್ತಿದೆ.

    ಕೆ.ಆರ್ ಮಾರ್ಕೆಟ್‍ನಲ್ಲಿ ನಡೆಯುವ ಮಾಮೂಲು ವಸೂಲಿ ದಂಧೆಗೆ ವ್ಯಾಪಾರಸ್ಥರು ಹೈರಣಾಗಿದ್ದಾರೆ. ಗಸ್ತು ತಿರುಗುವ ಪೊಲೀಸರು, ಕಸ ಎತ್ತುವ ಬಿಬಿಎಂಪಿಯ ಸಿಬ್ಬಂದಿ, ಅವರ ಮೇಲ್ವಿಚಾರಕರು, ಪುಡಿ ರೌಡಿಗಳು, ಹೀಗೆ ಇಲ್ಲಿ ಎಲ್ಲರೂ ಮಾಮೂಲಿ ವೀರರಾಗಿ ಘರ್ಜಿಸುತ್ತಿದ್ದಾರೆ.

    ತುತ್ತಿನ ಚೀಲ ತುಂಬಿಸಿಕೊಳ್ಳಲು ಅದೆಷ್ಟೋ ವ್ಯಾಪಾರಸ್ಥರು ಕೆ.ಆರ್ ಮಾರ್ಕೆಟ್‍ಗೆ ಬರುತ್ತಾರೆ. ಆದರೆ ಪಾಲಿಕೆಯ ಅಧಿಕಾರಿಗಳು, ಪೊಲೀಸರು ರಾಜಾರೋಷವಾಗಿ ಪ್ರತಿಯೊಬ್ಬ ವ್ಯಾಪಾರಸ್ಥರಿಂದ ದಿನಕ್ಕೆ 10, 20, 50 ರೂ.ಯಂತೆ ಬೆಳಗ್ಗೆಯಿಂದ ಸಂಜೆ ತನಕ 30ಕ್ಕೂ ಹೆಚ್ಚು ಜನರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡಲ್ಲ ಎಂದರೆ ಅವರ ಮೇಲೆ ಅಟ್ಯಾಕ್ ಮಾಡಿ ಅಂಗಡಿಯನ್ನು ಎತ್ತಿಸುತ್ತಾರೆ. ಅದಕ್ಕಾಗಿಯೇ ಈ ಬಗ್ಗೆ ಧ್ವನಿಯೆತ್ತಲು ವ್ಯಾಪಾರಸ್ಥರು ಹೆದರುತ್ತಾರೆ.

    ಪ್ರತಿನಿತ್ಯ ಈ ಅಧಿಕಾರಿ, ಪುಡಿ ರೌಡಿಗಳಿಂದ ರೋಸಿ ಹೋಗಿದ್ದ ಕೆಲ ವ್ಯಾಪಾರಸ್ಥರು ಪಬ್ಲಿಕ್ ಟಿವಿಯೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಳೆದ ಎರಡು ದಿನದ ಹಿಂದೆ ದಸರಾ ಹಬ್ಬಕ್ಕೆ ಬಾಳೆ ದಿಂಡನ್ನು ಖರೀದಿಸಲು ಬಂದಿದ್ದ ಬಿಬಿಎಂಪಿ ಅಧಿಕಾರಿಯೊಬ್ಬ ಪುಟ್ಟ ವ್ಯಾಪಾರಿ ಬಾಲಕನ ಮೇಲೆ ದರ್ಪ ತೋರಿಸಿದ್ದಾನೆ. ಪುಗ್ಸಟ್ಟೆಯಾಗಿ ಬಾಳೆ ದಿಂಡನ್ನು ಕೇಳಿದ್ದಾನೆ. ಕೊಡಲ್ಲ ಎಂದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ, ದರ್ಪ ಮೆರೆದಿದ್ದಾನೆ.

    ಉತ್ತರ ಕುಮಾರನ ಪೌರುಷ ಒಲೆ ಮುಂದೆ ಅಂತಾರಲ್ಲ. ಹಾಗಾಯ್ತು ಈ ಬಿಬಿಎಂಪಿ ಅಧಿಕಾರಿಯ ದರ್ಪ, ದೌಲತ್ತು. ಊರಿಗೆಲ್ಲಾ ಬುದ್ಧಿ ಹೇಳುವ ಬಿಬಿಎಂಪಿ, ತನ್ನ ಸಿಬ್ಬಂದಿಯೇ ಹಗಲು ದರೋಡೆಗೆ ಇಳಿದಿರುವುದು ಇದು ಬಿಬಿಎಂಪಿಗೆ ನಾಚಿಕೆಗೇಡಿನ ಸಂಗತಿಯೇ ಸರಿ. ಪ್ರತಿನಿತ್ಯ ಅಂದಾಜು ಲೆಕ್ಕದಲ್ಲಿ ಎಷ್ಟು ಹಣವನ್ನು ವಸೂಲಿ ಮಾಡುತ್ತಾರೆ ಎನ್ನುವುದನ್ನು ನೋಡುವುದಾದರೆ,

    (ಒಂದು ದಿನಕ್ಕೆ ವಸೂಲಿಯಾಗುವ ಹಣ) ಅಂದಾಜು ಲೆಕ್ಕದಲ್ಲಿ
    1 ಸಾವಿರ ವ್ಯಾಪಾರಿಗಳಿಂದ ವಸೂಲಿ
    ಒಂದು ದಿನಕ್ಕೆ 30 ರೂ. 30 ಜನರಿಂದ ವಸೂಲಿ ಮಾಡಿದರೂ ಒಂದು ದಿನಕ್ಕೆ 90 ಸಾವಿರ ರೂ.

    ಇದು ಕೇವಲ ಸಣ್ಣಪುಟ್ಟ ವ್ಯಾಪಾರಸ್ಥರಿಂದ ವಸೂಲಿಯಾಗುವ ಹಣ. ದೊಡ್ಡ ದೊಡ್ಡ ಅಂಗಡಿಗಳಲ್ಲಿ 50, 60 ರೂ.ಯಂತೆ ವಸೂಲಿ ಮಾಡುತ್ತಾರೆ. ಇವೆಲ್ಲವನ್ನು ಲೆಕ್ಕಚಾರ ಮಾಡಿದರೆ, ದಿನಕ್ಕೆ ಏನಿಲ್ಲಾ ಅಂದರೂ 2 ಲಕ್ಷ ರೂ. ದಾಟುತ್ತೆ. ತಿಂಗಳಿಗೆ ಮೈ ಬಗ್ಗಿಸದೆ, ಬೆವರು ಸುರಿಸದೇ ಪುಕ್ಕಟ್ಟೆಯಾಗಿ ಅಕ್ರಮವಾಗಿ ಸಂಪಾದಿಸುವ ಹಣವಿದು. ಹಾಡಹಗಲೇ ಈ ವಸೂಲಿ ದಂಧೆ ನಡೆಯುತ್ತಿದ್ದರೂ ನಮ್ಮ ಬೆಂಗಳೂರು ಪೊಲೀಸ್ ಕಮೀಷನರ್ ಕಣ್ಣಿಗೆ ಬಿದ್ದಿಲ್ವಾ ಎಂದು ಬಡ ವ್ಯಾಪಾರಸ್ಥರು ಪ್ರಶ್ನಿಸುತ್ತಿದ್ದಾರೆ.

  • ಮೊಬೈಲ್‍ಗಾಗಿ ಎದೆಗೆ ಚಾಕು ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

    ಮೊಬೈಲ್‍ಗಾಗಿ ಎದೆಗೆ ಚಾಕು ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

    ಬೆಂಗಳೂರು: ಮೊಬೈಲ್‍ಗಾಗಿ ಎದೆಗೆ ಚಾಕು ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಕೆಆರ್ ಮಾರುಕಟ್ಟೆಯ ಜಮೀಯಾ ಮಸೀದಿ ಬಳಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಮೆಹಬೂಬ್ ಎಂದು ಗುರುತಿಸಲಾಗಿದೆ. ಫೋನ್ ಮಾಡಬೇಕು ಎಂದು ಮೊಬೈಲ್ ಪಡೆದುಕೊಂಡ ಸದ್ದಾಂ, ನಂತರ ಮೊಬೈಲ್ ವಾಪಸ್ ಕೇಳಲು ಹೋದಾಗ ಎದೆಗೆ ಚಾಕು ಹಾಕಿದ್ದಾನೆ.

    ಮಾರುಕಟ್ಟೆಯ ಜಮೀಯಾ ಮಸೀದಿ ಬಳಿ ಮೆಹಬೂಬ್ ಮತ್ತು ಅವನ ಸ್ನೇಹಿತ ಅಕ್ರಂ ಇಬ್ಬರು ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಸದ್ದಾಂ ಫೋನ್ ಮಾಡಬೇಕು ಮೊಬೈಲ್ ಕೊಡಿ ಎಂದು ಮೆಹಬೂಬ್ ಬಳಿ ಮೊಬೈಲ್ ಪಡೆದುಕೊಂಡಿದ್ದಾನೆ. ನಂತರ ಮೊಬೈಲ್ ಎಷ್ಟು ಬಾರಿ ವಾಪಸ್ ಕೇಳಿದರೂ ಕೊಟ್ಟಿರಲಿಲ್ಲ. ಯಾವ ಮೊಬೈಲ್? ನಂಗೆ ನೀನು ಏನು ಕೊಟ್ಟೆ ಇಲ್ಲ ಎಂದು ಹೇಳಿ ಗಲಾಟೆ ಮಾಡಿದ್ದಾನೆ.

    ಈ ವಿಚಾರಕ್ಕೆ ಮೆಹಬೂಬ್ ಮತ್ತು ಸದ್ದಾಂ ನಡುವೆ ಜಗಳವಾಗಿದೆ. ಈ ವೇಳೆ ಆರೋಪಿ ಸದ್ದಾಂ ಚಾಕುವಿನಿಂದ ಮೆಹಬೂಬ್ ಎದೆಭಾಗಕ್ಕೆ ಇರಿದಿದ್ದಾನೆ. ನಂತರ ತೀವ್ರವಾಗಿ ಗಾಯಗೊಂಡಿದ್ದ ಮೆಹಬೂಬ್‍ನನ್ನು ಪೊಲೀಸರು ಮತ್ತು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೆಹಬೂಬ್ ಮೃತಪಟ್ಟಿದ್ದಾನೆ.

    ಈ ಸಂಬಂಧ ಕೆ.ಆರ್ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಸದ್ದಾಂನನ್ನು ಬಂಧಿಸಿ ಕೆ.ಆರ್ ಮಾರ್ಕೆಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಕೆ.ಆರ್.ಮಾರುಕಟ್ಟೆಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ- ಉಪ ಆಯುಕ್ತೆ ಅಮಾನತು

    ಕೆ.ಆರ್.ಮಾರುಕಟ್ಟೆಗೆ ಡಿಸಿಎಂ ಪರಮೇಶ್ವರ್ ದಿಢೀರ್ ಭೇಟಿ- ಉಪ ಆಯುಕ್ತೆ ಅಮಾನತು

    ಬೆಂಗಳೂರು: ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಬಿಬಿಎಂಪಿ ಮೇಯರ್ ಗಂಗಾಬಿಕೆ ಅವರು ಕೆ.ಆರ್.ಮಾರುಕಟ್ಟೆ ಗೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ.

    ನಗರಾಭಿವೃದ್ಧಿ ಸಚಿವರಾದ ಬಳಿಕ ಇದೇ ಮೊದಲ ಬಾರಿ ಪರಮೇಶ್ವರ್ ಅವರು ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. ಅಲ್ಲಿನ ಅವ್ಯವಸ್ಥೆ ನೋಡಿದ ಅವರು, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

    ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಾರುಕಟ್ಟೆಯ ಸ್ಥಿತಿ ಕೆಟ್ಟದಾಗಿದೆ. ಹೊಸದಾಗಿ ನಿರ್ಮಾಣವಾದ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಇಲ್ಲಿ ಯಾರೊಬ್ಬರೂ ಬಾಡಿಗೆ ಪಡೆದು, ಪ್ರತಿ ತಿಂಗಳು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಹಣವನ್ನು ಪಾವತಿ ಮಾಡುತ್ತಿಲ್ಲ. ಇದನ್ನು ಸರಿಪಡಿಸಲು ನಿರ್ಧಾರ ಕೈಗೊಳ್ಳಲಿದ್ದೇವೆ. ಮೇಯರ್ ಗಂಗಾಬಿಕೆ, ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

    ಯಾವುದೇ ಅಂಗಡಿ ಮುಂಗಟ್ಟುಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲ. ಹೀಗಾಗಿ ಮಾರುಕಟ್ಟೆ ಉಪ ಆಯುಕ್ತೆ ಮುನಿಲಕ್ಷ್ಮಿ ಅವರನ್ನು ಅಮಾನತುಗೊಳಿಸಿ ವರ್ಗಾವಣೆಗೆ ಆದೇಶ ನೀಡಿರುವೆ. ಸದ್ಯದಲ್ಲಿಯೇ ಹೊಸ ಉಪ ಆಯುಕ್ತರ ನೇಮಕ ಮಾಡಲಾಗುತ್ತದೆ. ಬೇರೆ ಕಡೆಯಲ್ಲಿ ಇಂತಹದ್ದೇ ಮಾರುಕಟ್ಟೆ ತರೆಯಲು ಚಿಂತನೆ ನಡೆಸಿದ್ದೇವೆ. ಮಾರುಕಟ್ಟೆಯಲ್ಲಿ ಅವ್ಯವ್ಯವಸ್ಥೆ ಹೆಚ್ಚಾಗಿದೆ. ಸ್ವಚ್ಛತೆ ಕೊರತೆಯಿದ್ದು, ಇಂತಹ ಆಹಾರ ಪದಾರ್ಥ ತಿಂದರೆ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ 15 ದಿನದ ಒಳಗಡೆ ಎಲ್ಲಾ ವ್ಯವಸ್ಥೆ ಬದಲಾಗಬೇಕು ಅಂತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಾರುಕಟ್ಟೆಯಲ್ಲಿ ತಿರುಗಾಡಿ, ಅವ್ಯವಸ್ಥೆಯನ್ನು ಪರಮೇಶ್ವರ್ ಅವರು ಕಣ್ಣಾರೆ ಕಂಡರು. ಬಳಿಕ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದರು. ಈ ವೇಳೆ ಡಿಸಿಎಂ ಪರಮೇಶ್ವರ್ ಅವರ ಜೊತೆಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv