Tag: ಕೆ.ಆರ್.ಪೇಟೆ

  • ನಾಪತ್ತೆಯಾಗಿರುವ ಜೆಡಿಎಸ್ ಶಾಸಕ ಮುಂಬೈ ಆಸ್ಪತ್ರೆಗೆ ದಾಖಲು

    ನಾಪತ್ತೆಯಾಗಿರುವ ಜೆಡಿಎಸ್ ಶಾಸಕ ಮುಂಬೈ ಆಸ್ಪತ್ರೆಗೆ ದಾಖಲು

    ಮಂಡ್ಯ: ಕೆಲ ದಿನಗಳಿಂದ ಯಾರ ಕೈಗೂ ಸಿಗದೇ ನಾಪತ್ತೆಯಾಗಿರುವ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ನಾರಾಯಣಗೌಡ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಾರಾಯಣ ಗೌಡ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಮಂಡ್ಯದ ವಾಟ್ಸಪ್ ಗ್ರೂಪ್‍ಗಳಲ್ಲಿ ಹರಿದಾಡುತ್ತಿದೆ. ನನಗೆ ಆಕಸ್ಮಿಕವಾಗಿ ಫುಡ್ ಪಾಯ್ಸನ್ ಆಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಹೀಗಾಗಿ ಇಂದು ನಡೆಯಲಿರುವ ಬಜೆಟ್ ಅಧಿವೇಶನಕ್ಕೆ ನಾನು ಹಾಜರಾಗುತ್ತಿಲ್ಲ ಎಂದು ನಾರಾಯಣ ಗೌಡ ಆಪ್ತರ ಜೊತೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಸರ್ಕಾರ ಬೀಳಿಸಲು ಪೊಲೀಸ್ ಅಸ್ತ್ರ ಪ್ರಯೋಗಿಸಿದ ಬಿಜೆಪಿ!

    ಇಂದು ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ವೈದ್ಯರು ಡಿಸ್ಚಾರ್ಜ್ ಮಾಡುತ್ತಿಲ್ಲ. ಹಾಗಾಗಿ ಇಂದು ನಾನು ಸದನಕ್ಕೆ ಹಾಜರಾಗುತ್ತಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳು ಹಾಗೂ ಸ್ಪೀಕರ್ ಗಮನಕ್ಕೂ ತಂದಿದ್ದೇನೆ. ಡಿಸ್ಚಾರ್ಜ್ ಆದ ಕೂಡಲೇ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ. ಕೆ ಆರ್ ಪೇಟೆಗೂ ಶೀಘ್ರದಲ್ಲೇ ಬರುತ್ತೇನೆ ಎಂದು ಆಪ್ತರ ಬಳಿ ನಾರಾಯಣ ಗೌಡ ಹೇಳಿಕೊಂಡಿದ್ದಾರೆ.

    ನಾಪತ್ತೆಯಾಗಿರುವ ನಾರಾಯಣ ಗೌಡ ಇಲ್ಲಿಯವರೆಗೂ ಯಾರ ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ. ಇಂದು ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಲಿರುವ ಹಿನ್ನೆಲೆಯಲ್ಲಿ ತನ್ನ ಎಲ್ಲ ಸದಸ್ಯರು ಸದನದಲ್ಲಿ ಹಾಜರು ಇರಬೇಕೆಂದು ಜೆಡಿಎಸ್ ಮತ್ತು ಕಾಂಗ್ರೆಸ್ ವಿಪ್ ಜಾರಿ ಮಾಡಿದೆ. ವಿಪ್ ಜಾರಿಯಾದ ಬಳಿಕ ಸದನಕ್ಕೆ ಗೈರು ಹಾಜರಿ ಆದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಸದಸ್ಯರನ್ನು ಅನರ್ಹತೆ ಮಾಡಲು ಪಕ್ಷಗಳಿಗೆ ಅಧಿಕಾರವಿದೆ. ಅನರ್ಹತೆ ಭೀತಿಯಿಂದ ಪಾರಾಗಲು ನಾರಾಯಣ ಗೌಡ ಆಸ್ಪತ್ರೆಗೆ ದಾಖಲಾಗಿದ್ದಾರಾ ಎನ್ನುವ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 9ನೇ ಕ್ಲಾಸ್ ವಿದ್ಯಾರ್ಥಿ ಶಶಾಂಕ್ ಕೊಲೆ: ಬೆಟ್ಟಿಂಗ್ ಹಣಕ್ಕಾಗಿ ಕೊಲೆ ಮಾಡಿದ್ದ ಆರೋಪಿಯ ಬಂಧನ

    9ನೇ ಕ್ಲಾಸ್ ವಿದ್ಯಾರ್ಥಿ ಶಶಾಂಕ್ ಕೊಲೆ: ಬೆಟ್ಟಿಂಗ್ ಹಣಕ್ಕಾಗಿ ಕೊಲೆ ಮಾಡಿದ್ದ ಆರೋಪಿಯ ಬಂಧನ

    ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದಿದ್ದ 9ನೇ ತರಗತಿ ವಿದ್ಯಾರ್ಥಿ ಶಶಾಂಕ್ ಕೊಲೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದ್ದು, ಬೆಟ್ಟಿಂಗ್ ದಂಧೆಕೋರನ ಅಟ್ಟಹಾಸಕ್ಕೆ ಅಮಾಯಕ ಬಾಲಕ ಕೊಲೆಯಾಗಿರುವ ಭೀಕರ ಸತ್ಯ ಬಯಲಾಗಿದೆ.

    ಶಶಾಂಕ್‍ನನ್ನು ಕೊಲೆ ಮಾಡಿದ್ದ ಡಿಪ್ಲೊಮಾ ವಿದ್ಯಾರ್ಥಿ, 18 ವರ್ಷದ ದೀಕ್ಷಿತ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸುಜಾತ ಮತ್ತು ಲೋಕೆಶ್ ದಂಪತಿಯ ಪುತ್ರನಾದ ಶಶಾಂಕ್ ತೇಗನಹಳ್ಳಿಯ ಆಶೀರ್ವಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಂಟನೇ ತರಗತಿ ಪಾಸಾಗಿ ಒಂಬತ್ತನೇ ತರಗತಿಗೆ ಕಾಲಿಟ್ಟಿದ್ದ. ಆದ್ರೆ ಶಶಾಂಕ್ ಇದ್ದಕ್ಕಿದ್ದಂತೆ ಮೇ 16 ರಂದು ಮನೆಯಿಂದ ನಾಪತ್ತೆಯಾಗಿದ್ದ. ನಂತರ ಶಶಾಂಕ್ ಶವವಾಗಿ ಪತ್ತೆಯಾಗಿದ್ದ.

    ಅಂದು ನಡೆದಿದ್ದೇನು?: ಮೇ 15ರಂದು ಶಶಾಂಕ್ ಮನೆಯಿಂದ ಕಾಣೆಯಗಿದ್ದ. ದೀಕ್ಷಿತ್‍ಗೆ ವಿಪರೀತ ಕ್ರಿಕೆಟ್ ಬೆಟ್ಟಿಂಗ್ ಚಟವಿದ್ದು, ಬೆಟ್ಟಿಂಗ್‍ನಲ್ಲಿ ಸೋತು ಏಳು ಸಾವಿರ ಹಣ ಕೊಡಲಾಗದೇ ಸಂಕಟಕ್ಕೆ ಸಿಲುಕಿದ್ದ. ಹೀಗಾಗಿ ಬೆಟ್ಟಿಂಗ್‍ನಲ್ಲಿ ಸೋತ ಹಣ ತೀರಿಸಲು ಶಶಾಂಕ್ ಮನೆಗೆ ಕಳ್ಳತನಕ್ಕೆ ದೀಕ್ಷಿತ್ ಬಂದಿದ್ದ. ಶಶಾಂಕ್ ಗೆ ಈ ಮೊದಲೇ ದೀಕ್ಷಿತ್‍ನ ಪರಿಚಯವಿದ್ದುದ್ದರಿಂದ ಆತನನ್ನು ಗುರುತಿಸಿದ್ದ. ಆಗ ದೀಕ್ಷಿತ್ ಶಶಾಂಕ್‍ನನ್ನು ಉಪಾಯವಾಗಿ ಮನೆಯಿಂದ ಸ್ವಲ್ಪ ದೂರ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಶಶಾಂಕ್ ಕೊರಳಲ್ಲಿದ್ದ ಬೆಳ್ಳಿಯ ಸರ ಕಿತ್ತುಕೊಂಡು ನಂತರ ಶಶಾಂಕ್ ಬಳಿಯಿದ್ದ ಮನೆಯ ಬೀಗದ ಕೀ ತೆಗೆದುಕೊಂಡು ಬಂದು ಮನೆಯಲ್ಲಿದ್ದ ಬೆಳ್ಳಿ ವಸ್ತು ಮತ್ತು ಕೆಲವೊಂದು ಉಮಾಗೋಲ್ಡ್ ಆಭರಣಗಳನ್ನ ಕದ್ದು ಮಾರಾಟ ಮಾಡಿ ಏನೂ ತಿಳಿಯದಂತೆ ಇದ್ದ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

    ತಮ್ಮ ಮುದ್ದಿನ ಮಗ ಕಾಣದೇ ಇದ್ದಾಗ ಪೋಷಕರು ಶಶಾಂಕ್ ಮೊಬೈಲ್‍ಗೆ ಕರೆ ಮಾಡಿದ್ರು. ಆದ್ರೆ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಇದ್ರಿಂದ ಹೆದರಿದ ತಂದೆ ತಾಯಿ ತಮ್ಮ ಸಂಬಂಧಿಕರಿಗೆಲ್ಲ ವಿಷಯ ತಿಳಿಸಿ ಶಶಾಂಕ್‍ಗಾಗಿ ಇಡೀ ಪಟ್ಟಣವನ್ನೆಲ್ಲ ಹುಡುಕಾಟ ನಡೆಸಿದ್ರು. ಆದ್ರೆ ಶಶಾಂಕ್ ಮಾತ್ರ ಎಲ್ಲಿಯೂ ಪತ್ತೆಯಾಗಿರಲಿಲ್ಲ. ನಂತರ ಮೇ 17 ರಂದು ಶಶಾಂಕ್ ತನ್ನ ಮನೆಯ ಕೂಗಳತೆ ದೂರದಲ್ಲಿ ಹೆಣವಾಗಿ ಸಿಕ್ಕಿದ್ದ.

    ಶಶಾಂಕ್ ತಲೆ, ಮೈ, ಕೈಗೆಲ್ಲ ಹಲ್ಲೆ ನಡೆಸಲಾಗಿತ್ತು. ಆ ನಂತ್ರ ಆತನ ಮರ್ಮಾಂಗಕ್ಕೆ ಹೊಡೆದು ಕತ್ತು ಬಿಗಿದು ಬರ್ಬರವಾಗಿ ಕೊಲೆ ಮಾಡಿದ್ರು. ಕೊನೆಗೆ ಅಲ್ಲೇ ಇದ್ದ ಚಿಕ್ಕ ಮರವನ್ನು ಕತ್ತರಿಸಿ ಶಶಾಂಕ್ ಮೃತದೇಹ ಯಾರಿಗೂ ಕಾಣದಂತೆ ಮುಚ್ಚಿ ಪರಾರಿಯಾಗಿದ್ರು. ಬೆಳಗ್ಗೆ ಸಾರ್ವಜನಿಕರು ವಾಕಿಂಗ್ ಹೋದಾಗ ಶಶಾಂಕ್ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು.

    ಪೊಲೀಸರು ಬೀಸಿದ ಬಲೆಗೆ ಇದೀಗ ಆರೋಪಿ ದೀಕ್ಷಿತ್ ಅಂದರ್ ಆಗಿದ್ದು, ಕ್ರಿಕೆಟ್ ಬೆಟ್ಟಿಂಗ್ ಕೋರನ ಕೃತ್ಯಕ್ಕೆ ಅಮಾಯಕ ಬಾಲಕ ಬಲಿಯಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

     

  • ಪೊಲೀಸರ ಮನೆಯಲ್ಲೇ ಕೈಚಳಕ ತೋರಿಸಿದ ಕಳ್ಳರು

    ಪೊಲೀಸರ ಮನೆಯಲ್ಲೇ ಕೈಚಳಕ ತೋರಿಸಿದ ಕಳ್ಳರು

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಹೇಮಾವತಿ ಜಲಾಶಯದ ವಸತಿ ಸಮುಚ್ಚಯದಲ್ಲಿಯ ಪೊಲೀಸರೊಬ್ಬರ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.

    ಶೀಲಾ ಚಂದ್ರಶೇಖರ್ ಎಂಬವರ ಮನೆಯಲ್ಲಿ ಶುಕ್ರವಾರ ತಡರಾತ್ರಿ ಕಳ್ಳತನ ನಡೆದಿದೆ. ಶೀಲಾ ಅವರು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶೀಲಾ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ, ರಾತ್ರಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.

    ಮನೆಯ ಬಾಗಿಲು ಮುರಿದು ಒಳನುಗ್ಗಿರೋ ಕಳ್ಳರು ಬೀರುವಿನ ಬಾಗಿಲು ತೆರೆದು ಅದರೊಳಗಿದ್ದ ಸುಮಾರು ಒಂದು ಲಕ್ಷದ 20 ಸಾವಿರ ನಗದು ಹಣ ದೋಚಿದ್ದಾರೆ.

    ನಗದು ದೋಚಿದ ನಂತರ ಮನೆಯ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.