Tag: ಕೆ.ಆರ್.ಪೇಟೆ

  • ಟಿಕೆಟ್‍ಗಾಗಿ ಕೈ ರಾಜ್ಯನಾಯಕರ ಮುಂದೆ ಆಕಾಂಕ್ಷಿಗಳು ಪೆರೇಡ್

    ಟಿಕೆಟ್‍ಗಾಗಿ ಕೈ ರಾಜ್ಯನಾಯಕರ ಮುಂದೆ ಆಕಾಂಕ್ಷಿಗಳು ಪೆರೇಡ್

    ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಠಿಕಾಣಿ ಹೂಡಿದ್ದಾರೆ. ಟಿಕೆಟ್‍ಗಾಗಿ ಕಾಂಗ್ರೆಸ್ಸಿನ ರಾಜ್ಯ ನಾಯಕರ ಮುಂದೆ ಆಕಾಂಕ್ಷಿಗಳು ಪೆರೇಡ್ ನಡೆಸುತ್ತಿದ್ದಾರೆ.

    ಕೆ.ಆರ್.ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಎರಡು ಬಾರಿ ಸೋಲಿನ ಬಳಿಕ ಗೆಲ್ಲುವಿನ ನಿರೀಕ್ಷೆಯಲ್ಲಿರುವ ಕೈಗೆ ಬಂಡಾಯದ ಬಿಸಿ ತಟ್ಟುತ್ತಿದೆ. ಕಾಂಗ್ರೆಸ್ ವರಿಷ್ಠರಿಗೆ ಟಿಕೆಟ್ ಆಕಾಂಕ್ಷಿಗಳ ದಂಡು ತಲೆನೋವು ತಂದಿಟ್ಟಿದೆ. ತಮಗೆ ಉಪಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿ ಎಂದು ಆಕಾಂಕ್ಷಿಗಳು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ.

    ಯಾರಿಗೇ ಟಿಕೆಟ್ ನೀಡಿದರೂ ಉಳಿದವರು ಬಂಡಾಯ ಏಳುವ ಸಾಧ್ಯತೆ ಇದ್ದು, ಅಸಮಾಧಾನಗೊಂಡ ಆಕಾಂಕ್ಷಿತರು ಬಂಡಾಯವಾಗಿ ಸ್ಪರ್ಧೆಗಿಳಿದರೆ ಏನು ಗತಿ ಎಂದು ಕಾಂಗ್ರೆಸ್ಸಿನಲ್ಲಿ ಮತ್ತೊಮ್ಮೆ ಸೋಲಿನ ಆತಂಕ ಮನೆ ಮಾಡಿದೆ. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಡಿಕೆ ಶಿವಕುಮಾರ್ ಅವರ ಆಪ್ತ ಹರಳಹಳ್ಳಿ ವಿಶ್ವನಾಥ್, ಕಿಕ್ಕೇರಿ ಸುರೇಶ್, ಎಂ.ಡಿ.ಕೃಷ್ಣಮೂರ್ತಿ, ಜಿಪಂ ಸದಸ್ಯ ಕೆ.ಎಲ್.ದೇವರಾಜು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯಿಂದ ಟಿಕೆಟ್‍ಗಾಗಿ ಲಾಭಿ ನಡೆಯುತ್ತಿದೆ ಎನ್ನಲಾಗಿದೆ.

    ಈಗಾಗಲೇ ಕೆ.ಆರ್.ಪೇಟೆ ಉಪಚುನಾವಣೆಗೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿರುವುದಾಗಿ ಜಿಪಂ ಸದಸ್ಯ ದೇವರಾಜು ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ಟಿಕೆಟ್ ನೀಡದಿದ್ದರೆ ಬಂಡಾಯವಾಗಿ ಸ್ಪರ್ಧಿಸುವುದಾಗಿ ಆಕಾಂಕ್ಷಿಗಳು ಕಾಂಗ್ರೆಸ್ಸಿಗೆ ಎಚ್ಚರಿಕೆ ರವಾನಿಸಿದ್ದಾರೆ.

  • ಸಕ್ಕರೆ ನಾಡಲ್ಲಿ ರಂಗೇರಿತು ಉಪಸಮರ- ಭದ್ರಕೋಟೆ ಉಳಿಸಿಕೊಳ್ಳಲು ‘ದಳ’ ಕಸರತ್ತು

    ಸಕ್ಕರೆ ನಾಡಲ್ಲಿ ರಂಗೇರಿತು ಉಪಸಮರ- ಭದ್ರಕೋಟೆ ಉಳಿಸಿಕೊಳ್ಳಲು ‘ದಳ’ ಕಸರತ್ತು

    ಮಂಡ್ಯ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್ 21ಕ್ಕೆ ಉಪಚುನಾವಣೆ ನಡೆಯುವ ಘೋಷಣೆಯ ಬೆನ್ನಲ್ಲೇ ಸಕ್ಕರೆ ನಾಡು ಮಂಡ್ಯದಲ್ಲಿ ಎಲೆಕ್ಷನ್ ಚಟುವಟಿಕೆಗಳು ಗರಿಗೆದರಿದೆ.

    ಕೆ.ಆರ್ ಪೇಟೆ ಕ್ಷೇತ್ರ ದಳಪತಿಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಸೂಕ್ತ ಅಭ್ಯರ್ಥಿಗಾಗಿ ಜೆಡಿಎಸ್ ತಲಾಶ್ ಮಾಡುತ್ತಿದೆ. ಈ ಮೂಲಕ ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್ ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ಆರಂಭ ಮಾಡಿದೆ. ಜೆಡಿಎಸ್ ನಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿದ್ದ ಕೆ.ಸಿ ನಾರಾಯಣಗೌಡರ ಅನರ್ಹತೆಯಿಂದ ಕೆ.ಆರ್.ಪೇಟೆ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಈ ಉಪ ಚುನಾವಣೆಯಲ್ಲಿ ಗೆದ್ದು ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್ ಕಸರತ್ತು ನಡೆಸುತ್ತಿದೆ.

    ಈಗಾಗಲೇ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆಯಿಂದ ನಿಖಿಲ್ ಸ್ಪರ್ಧೆ ಇಲ್ಲ ಎಂದಿದ್ದಾರೆ. ಇದರಿಂದ ಸ್ಥಳೀಯ ಅಭ್ಯರ್ಥಿಗಳಿಂದ ಟಿಕೆಟ್ ಗಾಗಿ ಫೈಟ್ ಶುರುವಾಗಿದೆ. ಮಾಜಿ ಜಿಪಂ ಸದಸ್ಯ ಬಿ.ಎಲ್.ದೇವರಾಜು, ಪ್ರಭಾವಿ ಮುಖಂಡ ಬಸ್ ಕೃಷ್ಣೇಗೌಡ, ಜಿಪಂ ಹಾಲಿ ಸದಸ್ಯ ಎಚ್.ಟಿ.ಮಂಜುನಾಥ್ ರಿಂದ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದೆ. ಮೂವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದೇವೇಗೌಡರ ಪುತ್ರಿ ಅನುಸೂಯ, ಕುಮಾರಸ್ವಾಮಿ ಮೂಲಕ ಟಿಕೆಟ್ ಗಿಟ್ಟಿಸಲು ತಂತ್ರ ಆರಂಭ ಮಾಡಿದ್ರೆ, ಇತ್ತ ಅನುಸೂಯ ಮೂಲಕ ದೇವೇಗೌಡರ ಮೇಲೆ ಬಸ್ ಕೃಷ್ಣೇಗೌಡ ಒತ್ತಡ ಹಾಕುತ್ತಿದ್ದಾರೆ. ಜೆಡಿಎಸ್ ನಾಯಕರ ಮೂಲಕ ಕುಮಾರಸ್ವಾಮಿ ಮೇಲೆ ಎಚ್.ಟಿ.ಮಂಜುನಾಥ್ ಒತ್ತಡ ಹಾಕುತ್ತಿದ್ದಾರೆ. ಎಚ್‍ಡಿಡಿ ಮನೆಯಿಂದ ಯಾರೇ ಸ್ಪರ್ಧಿಸಿದ್ರೂ ಕೆಲಸ ಮಾಡುತ್ತೇವೆ. ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವುದಾದರೆ ತಮಗೆ ಅವಕಾಶ ನೀಡಿ ಎಂದು ಮೂವರೂ ದುಂಬಾಲು ಬಿದ್ದಿದ್ದಾರೆ. ಒಟ್ಟಿನಲ್ಲಿ ದೇವೇಗೌಡರ ಪುತ್ರಿ ಅನುಸೂಯ ಅವರು ಸೂಚಿಸಿದ ವ್ಯಕ್ತಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ.

     

  • ನಿಖಿಲ್ ಕುಮಾರಸ್ವಾಮಿ ಮಗ ಇದ್ದಂಗೆ, ಒಳ್ಳೆ ಹುಡ್ಗ- ಚಲುವರಾಯಸ್ವಾಮಿ

    ನಿಖಿಲ್ ಕುಮಾರಸ್ವಾಮಿ ಮಗ ಇದ್ದಂಗೆ, ಒಳ್ಳೆ ಹುಡ್ಗ- ಚಲುವರಾಯಸ್ವಾಮಿ

    – ದೊಡ್ಡವರ ಸುಳ್ಳುಗಳಿಂದ ನಿಖಿಲ್‍ಗೆ ಸೋಲು

    ಮಂಡ್ಯ: ಜೆಡಿಎಸ್ ಅನರ್ಹ ಶಾಸಕ ನಾರಾಯಣ ಗೌಡರ ಬಳಿಕ ಇದೀಗ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೆ.ಆರ್ ಪೇಟೆ ಉಪ ಚುನಾವಣೆ ಹೊಸ್ತಿಲಲ್ಲಿ ಮತ್ತೆ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಪರಾಮರ್ಶೆ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಒಳ್ಳೆಯ ಹುಡುಗ. ರಾಜಕಾರಣ ಮಾಡುವುದಕ್ಕೆ ಇನ್ನೂ ಸಮಯ ಇತ್ತು. ದೊಡ್ಡದಾಗಿ ಮೀಸೆ ತಿರುಗಿಸಿ ಕರೆತಂದು ಸೋಲಿಸಿದರು. ನಿಖಿಲ್ ಎಲ್ಲೋ ಒಂದು ಕಡೆ ರಾಜಕಾರಣ ಮಾಡುಕೊಳ್ಳುತ್ತಿದ್ದರು. ಅವರನ್ನು ಕರೆತಂದು ಸೋಲಿಸಿದರು. ಸಿ.ಎಸ್ ಪುಟ್ಟರಾಜು ಅವರೇ ಚುನಾವಣೆಯ ಜವಾಬ್ದಾರಿ ತೆಗೆದುಕೊಂಡಿದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿಖಿಲ್ ಸೋಲಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಾರಣ ಎಂದು ಆರೋಪಿಸಿದರು.

    ನನಗೂ ಕುಮಾರಸ್ವಾಮಿಗೂ ವೈರತ್ವ ಇದೆ. ಹಾಗಂತ ನಿಖಿಲ್ ಜೊತೆಗೂ ವೈರತ್ವ ಕಟ್ಟಿಕೊಳ್ಳೋದಕ್ಕೆ ಆಗುತ್ತಾ. ಅವನೂ ನನ್ನ ಮಗ ಇದ್ದಂಗೆ. ಸಿ.ಎಸ್ ಪುಟ್ಟರಾಜು ಮಂಡ್ಯ ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿದ್ದಾರೆ. ರಾಜ್ಯಕ್ಕೆ ದೇವೇಗೌಡರು ಇದ್ದಂತೆ ಮಂಡ್ಯಕ್ಕೆ ಸಿ.ಎಸ್.ಪುಟ್ಟರಾಜು ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸಿಲ್ವಾ? ಹಾಗೆ ನಾರಾಯಣಗೌಡರಿಗೂ ಜನ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

    ಪುಟ್ಟರಾಜು ಕ್ಷೇತ್ರದಲ್ಲಿ ನಿಖಿಲ್ ಗೆ ಎಷ್ಟು ಲೀಡ್ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಮಾಜಿ ಸಚಿವರು, ಸಚಿವರಾಗಿದ್ದಾಗ ಕುದುರೆ ಮೇಲಿದ್ರೆ ಮಾತಾಡ್ತಾರೆ ಅಂದುಕೊಂಡಿದ್ದೆವು. ಆದರೆ ಕುದುರೆ ಮೇಲಿಂದ ಇಳಿದ ಮೇಲೂ ಮಾತನಾಡೋದನ್ನ ಎಲ್ಲೂ ನೋಡಿಲ್ಲ. ಎರಡೂವರೆ ಲಕ್ಷ ಲೀಡ್ ಬರದಿದ್ದರೆ ರಾಜಕೀಯ ನಿವೃತ್ತಿ ಅಂದಿದ್ದರು. ಆ ಮೇಲೆ ತಮಾಷೆಗೆ ಅಂದೆ ಎಂದು ಹೇಳುತ್ತಾರೆ. ಈವಾಗ ಯಾಕೆ ಈ ವಿಚಾರ ಮಾತನಾಡಲ್ಲ. ರಾಜಕಾರಣದಲ್ಲಿರುವಾಗ ಮಾತಿನಲ್ಲಿ ಸ್ವಲ್ಪ ಹಿಡಿತವಿರಬೇಕು ಎಂದು ಪುಟ್ಟರಾಜು ವಿರುದ್ಧ ಮತ್ತೆ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

    8 ಸಾವಿರ ಕೋಟಿ ಕೊಟ್ಟಿದ್ದೀವಿ ಅಂತಾರೆ. ಎಲ್ಲಿ ಟೆಂಡರ್ ಆಗಿದೆ. ಯಾವ ಕೆಲಸ ಪ್ರಾರಂಭವಾಗಿದೆ. ಇದಕ್ಕೆಲ್ಲ ಕೆ.ಆರ್ ಪೇಟೆ ಚುನಾವಣೆಗೂ ಮುನ್ನ ಉತ್ತರ ಹೇಳಲೇ ಬೇಕು. ಕುಮಾರಸ್ವಾಮಿ ಅವರು 14 ತಿಂಗಳ ಅವಧಿಯಲ್ಲಿ ಮಂಡ್ಯಕ್ಕೆ 8 ಸಾವಿರ ಕೋಟಿ ಹಣ ಬಿಡುಗಡೆಯಾಗಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಈ ಹಿಂದೆ ನಾರಾಯಣ ಗೌಡ ಅವರು ಕೂಡ ನಿಖಿಲ್ ಸೋಲಿನ ಬಗ್ಗೆ ಪರಾಮರ್ಶೆ ಮಾಡಿದ್ದು, ಜೆಡಿಎಸ್ ವರಿಷ್ಠರ ಸುಳ್ಳಿನಿಂದ ನಿಖಿಲ್‍ಗೆ ಸೋಲಾಯಿತು ಎಂದಿದ್ದರು.

  • ಕಾರ್ಯಕರ್ತರ ಒತ್ತಡವಿದೆ, ನಿಖಿಲ್ ಉಪಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಾ.ರಾ.ಮಹೇಶ್

    ಕಾರ್ಯಕರ್ತರ ಒತ್ತಡವಿದೆ, ನಿಖಿಲ್ ಉಪಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಾ.ರಾ.ಮಹೇಶ್

    ಹಾಸನ: ಉಪಚುನಾವಣೆಯಲ್ಲಿ ಕೆ.ಆರ್.ಪೇಟೆಯಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ಪ್ರಸ್ತಾಪ ಪಕ್ಷದ ವರಿಷ್ಠರ ಬಳಿ ಇಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, ಕೆಲ ಕಾರ್ಯಕರ್ತರು ಈ ಕುರಿತು ಒತ್ತಡ ಹೇರುತ್ತಿರುವುದು ನಿಜ. ಇಂತಹ ಯಾವುದೇ ಪ್ರಸ್ತಾಪ ರಾಷ್ಟ್ರೀಯ ನಾಯಕರು ಹಾಗೂ ಕುಮಾರಸ್ವಾಮಿ ಅವರ ಬಳಿ ಇಲ್ಲ. ಕುಮಾರಸ್ವಾಮಿಯವರೇ ಈ ಕುರಿತು ಸ್ಪಷ್ಟಪಡಿಸುತ್ತಾರೆ ಎಂದು ತಿಳಿಸಿದ್ದಾರೆ.

    ಕೆಲ ಕಾರ್ಯಕರ್ತರ ಒತ್ತಡ ಇದೆ. ಆದರೆ ನಿಖಿಲ್ ಅವರ ಸ್ಪರ್ಧೆ ಇಲ್ಲ ಎಂದು ತೀರ್ಮಾನ ಮಾಡಲಾಗಿದೆ. ಪಕ್ಷದಲ್ಲಿ ನಿಷ್ಟಾವಂತರಾಗಿ ಕೆಲಸ ಮಾಡುತ್ತಿರುವ ಯಾರನ್ನಾದರು ಅಭ್ಯರ್ಥಿ ಮಾಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.

    ಈ ಕುರಿತು ಚರ್ಚಿಸಲು ಇಂದು ಸಭೆ ಕರೆಯಲಾಗಿದೆ. ಜೆಡಿಎಸ್ ಒಂದು ಕುಟುಂಬದ ಪಕ್ಷ ಎಂಬ ಆರೋಪ ಕೆಲ ವೇಳೆ ಇತ್ತು. ಹಾಗಾಗಿಯೇ ಹಿಂದುಳಿದವರನ್ನು ಕರೆತಂದು ಅವಕಾಶ ನೀಡಲಾಗಿತ್ತು. ಆದರೆ, ಅವರು ಹೀಗೆ ಮಾಡಿ ಹೋಗಿದ್ದಾರೆ. ಹುಣಸೂರಿನಲ್ಲಿಯೂ ಕಾರ್ಯಕರ್ತರ ಸಭೆ ಕರೆದು ಪಕ್ಷದ ನಿಷ್ಠರಿಗೆ ಅವಕಾಶ ನೀಡಲಾಗುತ್ತದೆ ಎಂದು ಅನರ್ಹಗೊಂಡ ಹುಣಸೂರು ಶಾಸಕ ವಿಶ್ವನಾಥ್ ವಿರುದ್ಧ ಸಾ.ರ.ಮಹೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಬಿಎಸ್‍ವೈ ಫೋಟೋವಿರುವ ಫ್ಲೆಕ್ಸ್‌ನಲ್ಲಿ ಜೆಡಿಎಸ್‍ನ ಅನರ್ಹ ಶಾಸಕ

    ಬಿಎಸ್‍ವೈ ಫೋಟೋವಿರುವ ಫ್ಲೆಕ್ಸ್‌ನಲ್ಲಿ ಜೆಡಿಎಸ್‍ನ ಅನರ್ಹ ಶಾಸಕ

    ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್‍ನ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಬಿಜೆಪಿ ಸೇರಿದ್ದಾರಾ ಎಂಬ ಅನುಮಾನ ಮೂಡಿದೆ. ಯಾಕಂದರೆ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರವುಳ್ಳ ಫ್ಲೆಕ್ಸ್‌ಗಳಲ್ಲಿ ನಾರಾಯಣಗೌಡರ ಫೋಟೋ ರಾರಾಜಿಸುತ್ತಿದೆ.

    ಒಂದೆಡೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಗ ನಿಖಿಲ್ ಅವರನ್ನು ಕೆ.ಆರ್.ಪೇಟೆಯ ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇತ್ತ ಎಚ್‍ಡಿಕೆಗೆ ಟಕ್ಕರ್ ಕೊಡಲು ಕೆ.ಆರ್.ಪೇಟೆ ಬಿಜೆಪಿ ಘಟಕ ಮುಂದಾಗಿದ್ದು, ಬಸವಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಭಕೋರಿ ಅಳವಡಿಸಿರುವ ಫ್ಲೆಕ್ಸ್‌ಗಳಲ್ಲಿ ಬಿಎಸ್‍ವೈ ಜೊತೆ ನಾರಾಯಣಗೌಡರ ಫೋಟೋವನ್ನು ಹಾಕಲಾಗಿದೆ. ಆ ಫ್ಲೆಕ್ಸ್‌ಗಳು ಕೆ.ಆರ್.ಪೇಟೆ ಪಟ್ಟಣದಾದ್ಯಂತ ರಾರಾಜಿಸುತ್ತಿವೆ.

    ಇಂದು ಸಂಜೆ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆಗೆ ಆಗಮಿಸುತ್ತಿದ್ದಾರೆ. ಈ ವೇಳೆ ಕಾರ್ಯಕರ್ತರ ಸಭೆ ನಡೆಸಿ ಉಪಚುನಾವಣೆ ಸಿದ್ಧತೆಗೆ ಕರೆ ನೀಡುವ ಸಾಧ್ಯತೆ ಇದೆ. ಕುಮಾರಸ್ವಾಮಿ ಭೇಟಿ ಹಿನ್ನೆಲೆಯಲ್ಲಿ ಸಿಎಂ ಬಿಎಸ್‍ವೈ ಜೊತೆ ನಾರಾಯಣಗೌಡರ ಫೋಟೋಗಳಿರುವ ಫ್ಲೆಕ್ಸ್ ಅಳವಡಿಸಿ ಟಾಂಗ್ ಕೊಡಲು ಬಿಜೆಪಿ ಘಟಕ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

    ಸದ್ಯಕ್ಕೆ ನಾರಾಯಣಗೌಡ ಶಾಸಕ ಸ್ಥಾನದ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅನರ್ಹತೆ ಪ್ರಕರಣ ಇತ್ಯರ್ಥವಾಗದಿದ್ದರೂ ಶಾಸಕರು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಎಂದೇ ಫ್ಲೆಕ್ಸ್‌ಗಳಲ್ಲಿ ಮುದ್ರಿಸಲಾಗಿದೆ. ಈ ಮೂಲಕ ಅನರ್ಹತೆ ಪ್ರಕರಣ ಇತ್ಯರ್ಥದ ಬಳಿಕ ನಾರಾಯಣಗೌಡ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.

  • ಕೆ.ಆರ್.ಪೇಟೆ ಅಖಾಡದಲ್ಲಿ ನಿಖಿಲ್ ವಿರುದ್ಧ ಫೈಟ್‍ಗೆ ಅಭಿಷೇಕ್ ಬ್ರೇಕ್

    ಕೆ.ಆರ್.ಪೇಟೆ ಅಖಾಡದಲ್ಲಿ ನಿಖಿಲ್ ವಿರುದ್ಧ ಫೈಟ್‍ಗೆ ಅಭಿಷೇಕ್ ಬ್ರೇಕ್

    ಬೆಂಗಳೂರು: ಕೆ.ಆರ್.ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಬೇಕು ಎಂಬ ಅಭಿಮಾನಿಗಳ ಮನವಿಗೆ ಅಭಿಷೇಕ್ ಅಂಬರೀಶ್ ತಡೆ ಒಡ್ಡಿದ್ದಾರೆ.

    ಕೆ.ಆರ್.ಪೇಟೆಯಲ್ಲಿ ನಿಖಿಲ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಅಭಿಷೇಕ್ ಸ್ಪರ್ಧೆ ಮಾಡಬೇಕು. ಮಂಡ್ಯದ ಜನರು ಸ್ವಾಭಿಮಾನಿಗಳು ಎಂದು ಮತ್ತೆ ಸಾಬೀತು ಮಾಡೋಣ. ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಎಂಬ ಸಂದೇಶವನ್ನು ಅಭಿಷೇಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಜೆಡಿಎಸ್‍ನಿಂದ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಕೇಳಿ ಬರುತ್ತಿದ್ದಂತೆ ಕೆಲವರು ಅಭಿಷೇಕ್ ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಜನತೆ ಕಂಡ ರೋಚಕ ಫೈಟ್ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲೂ ಆಗಬೇಕು ಎಂಬುದು ಅಭಿಷೇಕ್ ಅಭಿಮಾನಿಗಳ ಇಚ್ಛೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರೋಚಕ ಫೈಟ್ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ಇದು ಬಿಲ್ ಕುಲ್ ಆಗಲ್ಲ ಎಂದು ಅಭಿಷೇಕ್ ಬ್ರೇಕ್ ಹಾಕಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅಭಿಷೇಕ್ ಅವರು, ಅಭಿಮಾನಿಗಳ ಪ್ರೀತಿಗೆ ನಾನು ಚಿರಋಣಿ. ಆದರೆ ಅಮ್ಮ ರಾಜಕಾರಣದಲ್ಲಿ ಇರುವವರೆಗೂ ರಾಜಕೀಯ ಪ್ರವೇಶ ಮಾಡಲ್ಲ. ಕೆ.ಆರ್.ಪೇಟೆ ಉಪ ಚುನಾವಣೆಗೆ ಸ್ಪರ್ಧೆಯ ಬಗ್ಗೆ ಯೋಚಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಮೂಲಕ ಕೆ.ಆರ್.ಪೇಟೆ ಅಖಾಡದಲ್ಲಿ ನಿಖಿಲ್ ವರ್ಸಸ್ ಅಭಿಷೇಕ್ ಫೈಟ್‍ಗೆ ಬ್ರೇಕ್ ಹಾಕಿದ್ದಾರೆ. ಆದರೂ ಅಂಬರೀಶ್ ಹಾಗೂ ಅಭಿಷೇಕ್ ಬೆಂಬಲಿಗರು ಅಂತದೊಂದು ಫೈಟ್‍ಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಎಂಪಿ ಆಗಿಲ್ಲ, ಎಂಎಲ್‍ಎ ಆಗ್ಲೇಬೇಕು- ಮಗನ ಭವಿಷ್ಯಕ್ಕಾಗಿ ಎಚ್‍ಡಿಕೆ ಶಪಥ

    ಎಂಪಿ ಆಗಿಲ್ಲ, ಎಂಎಲ್‍ಎ ಆಗ್ಲೇಬೇಕು- ಮಗನ ಭವಿಷ್ಯಕ್ಕಾಗಿ ಎಚ್‍ಡಿಕೆ ಶಪಥ

    ಬೆಂಗಳೂರು/ಮಂಡ್ಯ: ಎಲ್ಲಿ ಕಳೆದುಕೊಂಡಿದ್ದೀವೋ ಅಲ್ಲೇ ಪಡೆಯಬೇಕು. ಸಂಸದನಾಗದಿದ್ದರೆ ಶಾಸಕನಾದರೂ ಆಗಲೇಬೇಕು ಎಂದು ನಿಖಿಲ್ ರಾಜಕೀಯ ಭವಿಷ್ಯಕ್ಕಾಗಿ ತಂದೆ ಕುಮಾರಸ್ವಾಮಿ ಶಪಥ ಮಾಡಿದ್ದಾರೆ.

    ಮಂಡ್ಯ ಎಂಪಿ ಎಲೆಕ್ಷನ್ ಸೋಲಿಗೆ ಕೆ.ಆರ್ ಪೇಟೆ ಎಂಎಲ್‍ಎ ಎಲೆಕ್ಷನ್ ಸವಾಲ್ ಆಗಿದೆ. ಹೀಗಾಗಿ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇ 23ರಂದೇ ಮಗನಿಗಾಗಿ ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಂಡ್ಯದಲ್ಲೇ ನಿಖಿಲ್ ರಾಜಕೀಯ ಭವಿಷ್ಯ ರೂಪಿಸಲು ಅಂದೇ ಎಚ್‍ಡಿಕೆ ಶಪಥ ಮಾಡಿದ್ದು, ಕೆ.ಆರ್.ಪೇಟೆ ಕ್ಷೇತ್ರ ಉಪ ಚುನಾವಣೆಗೆ ಮಗನನ್ನ ಇಳಿಸಲು ಕುಮಾರಸ್ವಾಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದ ಬಳಿಕ ನಿಖಿಲ್ ಸ್ಪರ್ಧೆ ಬಗ್ಗೆ ಘೋಷಣೆ ಸಾಧ್ಯತೆ ಗಳಿವೆ. ಇದನ್ನೂ ಓದಿ: ನಿಖಿಲ್ ಸ್ಪರ್ಧೆ ಹೊತ್ತಲ್ಲೇ ‘ಕೈ’ ತ್ರಿಶೂಲ ವ್ಯೂಹ

    ಕೆ.ಆರ್ ಪೇಟೆಗೇನೆ ಯಾಕೆ?
    ಕೆಆರ್ ಪೇಟೆ ಜೆಡಿಎಸ್ ಭದ್ರಕೋಟೆ ಕೋಟೆಯಾಗಿದ್ದು, ಒಕ್ಕಲಿಗ ಮತದಾರರ ಪ್ರಾಬಲ್ಯವಿದೆ. ಎಚ್‍ಡಿಕೆ ಸರ್ಕಾರ ಕೆಡವಲು ನಾರಾಯಣಗೌಡ ಸಹ ಕಾರಣ ಅನ್ನೋ ಜನರ ಸಿಟ್ಟು ಗೌಡ್ರ ಕುಟುಂಬಕ್ಕೆ ಸಹಾಯವಾಗಬಹುದು. ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದ್ರೂ ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ನೆಲೆ ಇಲ್ಲದಂತಾಗಿದೆ. ತಂದೆಗೆ ಶಾಸಕರ ಬಂಡಾಯ, ಮಗನಿಗೆ ಎಂಪಿ ಸೋಲಿನ ಅನುಕಂಪವಿರಬಹುದು. ಮಂಡ್ಯದಲ್ಲಿ ಕಳೆದ ವಿಧಾನಸಭೆ ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನಪ್ಪಿರುವುದದರಿಂದ ನಿಖಿಲ್ ನನ್ನು ಕೆ.ಆರ್ ಪೇಟೆಯಲ್ಲೇ ಉಪ ಚುನಾವಣೆಗೆ ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ತೀರ್ಮಾನ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಎಚ್‍ಡಿಡಿ ಕುಟುಂಬದಲ್ಲಿ ಅಳಿಯ, ಅತ್ತೆ ಮಧ್ಯೆ ಟಿಕೆಟ್ ಲೆಕ್ಕಾಚಾರ ಶುರು

  • ಕೆಆರ್ ಪೇಟೆ ಎಲೆಕ್ಷನ್‍ಗೆ ದಳಪತಿಗಳ ಭರ್ಜರಿ ಸಿದ್ಧತೆ- ಲೋಕಸಮರದಲ್ಲಿ ಸೋತ ನಿಖಿಲ್‍ಗೆ ಸಿಗುತ್ತಾ ಟಿಕೆಟ್?

    ಕೆಆರ್ ಪೇಟೆ ಎಲೆಕ್ಷನ್‍ಗೆ ದಳಪತಿಗಳ ಭರ್ಜರಿ ಸಿದ್ಧತೆ- ಲೋಕಸಮರದಲ್ಲಿ ಸೋತ ನಿಖಿಲ್‍ಗೆ ಸಿಗುತ್ತಾ ಟಿಕೆಟ್?

    ಬೆಂಗಳೂರು: ಇಂದು ಕೆ.ಆರ್ ಪೇಟೆಯ ಜೆಡಿಎಸ್ ಅಭ್ಯರ್ಥಿ ಫೈನಲ್ ಆಗುತ್ತಾ ಎನ್ನುವ ಚರ್ಚೆ ವ್ಯಾಪಕವಾಗಿದೆ.

    ನಾರಾಯಣಗೌಡ ಅನರ್ಹತೆಯಿಂದಾಗಿ ಕೆ.ಆರ್ ಪೇಟೆ ಕ್ಷೇತ್ರಕ್ಕೆ ನಿಖಿಲ್ ಹೆಸರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಎಚ್.ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಸಂಬಂಧ, ಇಂದು ಕೆ.ಆರ್ ಪೇಟೆಗೆ ಭೇಟಿ ನೀಡುತ್ತಿದ್ದು, ಸಂಜೆ 4 ಗಂಟೆಗೆ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

    ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸಲಿದ್ದಾರೆ. ಕೆ.ಆರ್ ಪೇಟೆ ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಚರ್ಚೆ ನಡೆಯಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿಸುವ ಹಿಂದಿರುವ ಲೆಕ್ಕಾಚಾರ:
    1) ಜೆಡಿಎಸ್ ಭದ್ರಕೋಟೆಯಾದ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಗೆಲುವು ಸುಲಭವಾಗಲಿದೆ.
    2) ಕುಮಾರಸ್ವಾಮಿಯವರ ಸರ್ಕಾರ ಕೆಡವಲು ನಾರಾಯಣಗೌಡರು ಸಹ ಕಾರಣ ಎನ್ನುವ ಜನರ ಸಿಟ್ಟು ಸಹಾಯವಾಗಲಿದೆ.
    3) ಒಕ್ಕಲಿಗ ಸಮುದಾಯದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಹಾಯವಾಗಲಿದೆ.
    4) ಶಾಸಕರ ಬಂಡಾಯದಿಂದ ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿಯವರ ಬಗ್ಗೆ ಇರುವ ಸಿಂಪತಿ ಮರವಾಗಿ ಪರಿವರ್ತನೆ ಆಗಲಿದೆ.
    5) ಲೋಕಸಭಾ ಚುನಾವಣೆಯಲ್ಲಿ ಸೋತ ನಿಖಿಲ್ ಅವರನ್ನು ಈ ಬಾರಿ ಜನ ಅನುಕಂಪದಲ್ಲಿ ಕೈ ಹಿಡಿತಾರೆ ಎನ್ನುವ ಲೆಕ್ಕಾಚಾರ.
    6) ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದ್ರು ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ.
    7) ಕಾಂಗ್ರೆಸ್‍ಗಿಂತ ಜೆಡಿಎಸ್ ವಿಚಾರದಲ್ಲಿ ಜನರಿಗೆ ಅನುಕಂಪ ಇದೆ ಎನ್ನುವ ಅಂಶ ಸಹಾಯವಾಗಬಹುದು.

    ಹೀಗೆ ಎಲ್ಲಾ ರೀತಿಯಲ್ಲೂ ಅಳೆದು ತೂಗಿ ನಿಖಿಲ್ ಅವರನ್ನ ಅಭ್ಯರ್ಥಿಯಾಗಿಸಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • ಕೆಆರ್.ಪೇಟೆ ಶಾಸಕ ರಾಜೀನಾಮೆ ಕೊಟ್ಟಿದ್ದು ನಿಖಿಲ್‍ಗೆ ವರವಂತೆ!

    ಕೆಆರ್.ಪೇಟೆ ಶಾಸಕ ರಾಜೀನಾಮೆ ಕೊಟ್ಟಿದ್ದು ನಿಖಿಲ್‍ಗೆ ವರವಂತೆ!

    ಬೆಂಗಳೂರು: ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರು ರಾಜೀನಾಮೆ ಕೊಟ್ಟಿದ್ದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಅವರಿಗೆ ದೇವರ ವರ ಎಂದು ಬೆಂಬಲಿಗರು ಹೇಳಿದ್ದಾರೆ.

    ಸಾಮಾಜಿಕ ಜಾಲತಾಣವಾಗಳಲ್ಲಿ ನಿಖಿಲ್ ಅವರ ಬೆಂಬಲಗರು ಈ ಬಗ್ಗೆ ಭಾರೀ ಚರ್ಚೆ ನಡೆಸಿದ್ದಾರೆ. ಮೈತ್ರಿ ಬುಡ ಅಲ್ಲಾಡುತ್ತಿದ್ದು, ಸಿಎಂ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೂ ನಿಖಿಲ್ ಫ್ಯಾನ್ಸ್ ಮಾತ್ರ ಫುಲ್ ಖುಷಿಯಲ್ಲಿದ್ದಾರೆ.

    ನಿಖಿಲ್ ಅವರನ್ನು ಸಂಸದರಾಗಿ ನೋಡುವ ಭಾಗ್ಯ ಸಿಗದಿದ್ದರೂ ಭಾವಿ ಶಾಸಕರನ್ನಾಗಿ ನೋಡುವ ವರವನ್ನು ದೇವರು ನೀಡಿದ್ದಾನೆ. ನಾರಾಯಣ ಗೌಡ ಅವರ ರಾಜೀನಾಮೆಯಿಂದ ತೆರವಾಗುವ ಕೆ.ಆರ್.ಪೇಟೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಮಾಡುತ್ತಾರೆ. ಆಗ ಅವರು ಭಾರೀ ಅಂತರಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶ ಮಾಡುತ್ತಾರೆ ಎಂದು ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನಾರಾಯಣ್‍ಗೌಡ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಒಂದು ವೇಳೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾದರೆ ಕೆ.ಆರ್.ಪೇಟೆ ಕ್ಷೇತ್ರದಿಂದ ನಿಖಿಲ್ ಅವರ ಸ್ಪರ್ಧೆ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ನಿಖಿಲ್ ಅವರ ಬೆಂಬಲಿಗರು ಫುಲ್ ಖುಷಿಯಾಗಿದ್ದಾರೆ. ಇತ್ತ ಅಮೆರಿಕದಿಂದ ಆಗಮಿಸಿರುವ ಸಿಎಂ ಅಧಿಕಾರ ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ.

  • ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತೆ – ಚಂದ್ರಶೇಖರ್ ಭವಿಷ್ಯ

    ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತೆ – ಚಂದ್ರಶೇಖರ್ ಭವಿಷ್ಯ

    ಮಂಡ್ಯ: ಮೈತ್ರಿ ಸರ್ಕಾರ ಅಂತ್ಯ ಆಗುವುದು ಪಕ್ಕಾ. ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಭವಿಷ್ಯ ನುಡಿದಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ತಮ್ಮ ಪಕ್ಷದಲ್ಲಿ 125 ಶಾಸಕರು ಇರೋ ಹಾಗೇ ಸರ್ಕಾರ ನಡೆಸಲು ಮುಂದಾಗಿದ್ದು ತಪ್ಪು. ಹೆಚ್ಚು ಶಾಸಕರಿರುವ ಕಾಂಗ್ರೆಸ್ ಪಕ್ಷದ ಮಾತನ್ನು ಕೇಳದೇ ಆಡಳಿತ ನಡೆಸಿದ್ದಕ್ಕೆ ಸಿಟ್ಟಾಗಿ ನಮ್ಮ ಶಾಸಕರು ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಸಹವಾಸ ಬಿಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತದೆ ಎಂದು ಹೇಳಿದರು.

    ಕೆ.ಆರ್ ಪೇಟೆ ಅಭಿವೃದ್ಧಿಗೆ ರಾಜೀನಾಮೆ ಕೊಟ್ಟಿದ್ದೇನೆ ಎಂಬ ನಾರಾಯಣಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಗೆ ಆತ ಮಾರಾಟವಾಗಿದ್ದಾನೆ. ಕುಣಿಯಲಾರದ ವೇಶ್ಯೆ ನೆಲ ಡೊಂಕು ಎಂಬಂತೆ ನಾರಾಯಣಗೌಡ ಮಾತನಾಡ್ತಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದರು.

    ನಾನು ಈ ಹಿಂದೆಯೇ ಲೋಕಸಭಾ ಚುನಾವಣೆ ಮುಗಿದ ಬಳಿಕ ಅವನು ಪಕ್ಷ ಬಿಡುತ್ತಾನೆ ಎಂದು ಹಿಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ. ಆತ ಹಣ ಮಾಡಲು ಕೆ.ಆರ್ ಪೇಟೆಗೆ ಬಂದಿದ್ದ. ಮುಖ್ಯಮಂತ್ರಿ ಹಾಗೂ ಬಿಜೆಪಿ ಅವರ ಹತ್ತಿರ ಹಣ ಮಾಡಿಕೊಂಡು ಮುಂಬೈಗೆ ವಾಪಸ್ಸಾಗಿದ್ದಾನೆ. ಆತ ಮತ್ತೆ ರಾಜಕೀಯಕ್ಕೆ ಬರಲ್ಲ ಮುಂಬೈನಲ್ಲೇ ನೆಲೆಯಾಗುತ್ತಾನೆ. ಕೆ.ಸಿ.ನಾರಾಯಣಗೌಡ ಒಬ್ಬ ನಾಯಿ. ನನ್ನ ಒಂದು ಕೂದಲಿಗೂ ಆತ ಸಮವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

    ನಿಖಿಲ್ ಕುಮಾರಸ್ವಾಮಿ ಕೆ.ಆರ್.ಪೇಟೆಯಿಂದ ಚುನಾವಣೆಗೆ ಸ್ಪರ್ಧೆ ವಿಚಾರ ಕೇಳಿದಾಗ, ಹಾಗಾದರೆ ಮಂಡ್ಯದಲ್ಲಿ ಬಂದ ಫಲಿತಾಂಶ ಕೆ.ಆರ್ ಪೇಟೆಯಲ್ಲಿ ರಿಪೀಟ್ ಆಗುತ್ತೆ. ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಲಿ. ನಿಖಿಲ್ ಬೇಕಂದರೆ ಹಾಸನದಲ್ಲಿ ಹೋಗಿ ಸ್ಪರ್ಧೆ ಮಾಡಲಿ ಎಂದು ಹೇಳಿದರು.