Tag: ಕೆ.ಆರ್.ಪೇಟೆ
-

ಸೋತ ಸಿಟ್ಟಿಗೆ ಅವಾಚ್ಯ ಪದಗಳಿಂದ ಕೆ.ಆರ್ ಪೇಟೆ ಮತದಾರರಿಗೆ ನಿಂದನೆ
– ಜೆಡಿಎಸ್ ಕಾರ್ಯಕರ್ತರಿಗೆ, ಪೇಜ್ ಅಡ್ಮಿನ್‍ಗೆ ನೆಟ್ಟಿಗರಿಂದ ಕ್ಲಾಸ್
– ಕೆ.ಆರ್.ಪೇಟೆ ಬಗ್ಗೆ ಮಾತನಾಡಲು ನೀವು ಯಾರು?ಮಂಡ್ಯ: ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವು ಪಡೆದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಫೇಸ್‍ಬುಕ್ ಖಾತೆಯಲ್ಲಿ ಕ್ಷೇತ್ರದ ಮತದಾರರನ್ನು ನಿಂದಿಸಿ ಪೋಸ್ಟ್ ಮಾಡಲಾಗಿದೆ.

‘ನಿಖಿಲ್ ಕುಮಾರಸ್ವಾಮಿ ಸಪೋರ್ಟರ್ಸ್’ ಎಂಬ ಹೆಸರಿನ ಫೇಸ್‍ಬುಕ್ ಪೇಜ್‍ನಲ್ಲಿ ಡಿ.ಕೆ ಸಿನಿಮಾದ ವಿಡಿಯೋ ತುಣುಕನ್ನು ಹಾಕಿ ಅವಾಚ್ಯ ಶಬ್ದಗಳಿಂದ ಮತದಾರರನ್ನು ನಿಂದಿಸಲಾಗಿದೆ. ಕೆ.ಆರ್ ಪೇಟೆ ಮತದಾರರ ತಾಯಿ ಕುರಿತು ಅವಹೇಳನವಾಗಿ ಪೋಸ್ಟ್ ಹಾಕಲಾಗಿದೆ. ಮತದಾರರು ದುಡ್ಡಿಗಾಗಿ ತಾಯಿಯನ್ನೇ ಮಾರಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ಈ ಬಗ್ಗೆ ಫೇಸ್‍ಬುಕ್ಕಿಗರು ಕಮೆಂಟ್ ಮೂಲಕ ಜೆಡಿಎಸ್ ಕಾರ್ಯಕರ್ತರನ್ನು ಹಾಗೂ ಅಡ್ಮಿನ್‍ನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಕೆ.ಆರ್ ಪೇಟೆಯ ಬಗ್ಗೆ ಮಾತನಾಡಲು ನೀವು ಯಾರು? ನೀವೇನ್ ಸಾಚಾನಾ? ಮೊದಲು ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಕಟ್ಟಿ, ಕೈಗೆ ಎಟುಕದ ದ್ರಾಕ್ಷಿಯನ್ನು ಹುಳಿ ಅಂತೀರಾ. ನೀವು ಎಂಪಿ ಚುನಾವಣೆಯಲ್ಲಿ ದುಡ್ಡು ಹಂಚಲಿಲ್ವಾ? ಬೇರೆ ಅವರಿಗೆ ಹೇಳೋ ಮುಂಚೆ ನೀವು ನೆಟ್ಟಗೆ ಇರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಹಲವಾರು ರೀತಿ ಕಮೆಂಟ್ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರಿಗೆ ಫೇಸ್‍ಬುಕ್ಕಿಗರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದಲ್ಲದೇ ದೇವೇಗೌಡರ ಕೈ ಮುಗಿಯುವ ಫೋಟೋ ಒಂದನ್ನು ಹಾಕಿ ದಯವಿಟ್ಟು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಮರ್ಯಾದೆ ಕಳೆಯ ಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್‌ನ ಕುರಿತು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
-

ಕೆ.ಆರ್ ಪೇಟೆ ಗೆಲುವಿನ ಹಿಂದೆ ಸೀಕ್ರೆಟ್ – ಅದೃಷ್ಟ ತಂದು ಕೊಟ್ಟ ತೋಟದ ಮನೆ
ಮಂಡ್ಯ: ಕೆ.ಆರ್ ಪೇಟೆ ಉಪಚುನಾವಣೆಯ ಫಲಿತಾಂಶ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಉಲ್ಟಾ ಮಾಡುವುದರ ಜೊತೆಗೆ ಜೆಡಿಎಸ್ ಭದ್ರಕೋಟೆಯನ್ನು ಒಡೆದು ಬಿಜೆಪಿ ತನ್ನ ಅಸ್ತಿತ್ವಕ್ಕೆ ಇದೀಗ ಭದ್ರ ಬುನಾದಿ ಹಾಕಿಕೊಂಡಿದೆ.
ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದು, ವಿಜಯೇಂದ್ರ ಎಂಬ ಮಾಸ್ಟರ್ ಮೈಂಡ್. ಸಿಎಂ ಬಿಎಸ್‍ವೈ ಪುತ್ರ ವಿಜಯೇಂದ್ರ 15 ದಿನ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಪಟ್ಟನ್ನು ಹಾಕಿದ್ದೇ ನಾರಾಯಣಗೌಡ ಅವರ ಗೆಲುವಿಗೆ ಪ್ರಮುಖ ಕಾರಣ. ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

ತೋಟದ ಮನೆಯ ಗೆಲುವಿನ ರಹಸ್ಯ:
ವಿಜಯೇಂದ್ರ ಉಸ್ತುವಾರಿ ವಹಿಸಿಕೊಂಡರೂ ಪ್ರತಿದಿನ ಬೆಂಗಳೂರಿನಿಂದ ಬರುವುದು ಕಷ್ಟ. ಮೈಸೂರಿನ ಯಾವುದೋ ಹೋಟೆಲ್‍ನಲ್ಲಿ ಉಳಿದುಕೊಂಡು ಬರಬಹುದು ಎಂದು ಬಿಜೆಪಿ ಕಾರ್ಯಕರ್ತರು ಊಹಿಸಿದ್ದರು. ಆದರೆ ವಿಜಯೇಂದ್ರ ಉಪಚುನಾವಣೆ ಘೋಷಣೆ ಆದಾಗಿನಿಂದಲೂ ಕೆಆರ್‍ಪೇಟೆ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿದ್ದರು.ತನ್ನ ಮೇಲೆ ಹೊರಿಸಿದ್ದ ಉಸ್ತುವಾರಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಕೆ.ಆರ್ ಪೇಟೆ ಕ್ಷೇತ್ರದಲ್ಲೇ 15 ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಅದು ಕೂಡ ಒಂದು ತೋಟದ ಮನೆಯಲ್ಲಿ. ಕೆ.ಆರ್ ಪೇಟೆಯಿಂದ 4 ಕಿ.ಮೀ ದೂರವಿರುವ ಪುರ ಗ್ರಾಮದ ಹೊರಭಾಗದ ಒಂದು ತೋಟದ ಮನೆಯಲ್ಲಿ ವಿಜಯೇಂದ್ರ ನೆಲೆಸಿದ್ದರು. ಇದನ್ನು ಓದಿ: ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ

ವಿಜಯೇಂದ್ರ ಈ ತೋಟದ ಮನೆಯಲ್ಲಿ ಸುಮ್ಮನೆ ಮಲಗಿಕೊಂಡು ಅಥವಾ ವಿಶ್ರಾಂತಿ ಪಡೆಯುತ್ತ ಕಾಲ ಕಳೆಯುತ್ತಿರಲಿಲ್ಲ. ಈ ತೋಟದ ಮನೆಯಲ್ಲಿ ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸುವುದು ಹೇಗೆ ಎಂದು ರಣತಂತ್ರವನ್ನು ಹೆಣೆಯುತ್ತಿದ್ದರು. ಪ್ರತಿನಿತ್ಯ ಈ ತೋಟದ ಮನೆಯಲ್ಲಿ ಕಾರ್ಯಕರ್ತರನ್ನು ಕರೆದು ಸಭೆ ಮಾಡಿ ಯಾವ ಊರುಗಳಲ್ಲಿ ಎಷ್ಟು ಮತಗಳಿವೆ ಎಷ್ಟು ಮತಗಳನ್ನು ಪಡೆಯಬೇಕು ಎಂಬ ಸ್ಟಾಟರ್ಜಿ ಮಾಡುತ್ತಿದ್ದರು. ಇದನ್ನೂ ಓದಿ: 43 ರೋಡ್ ಶೋ, 10 ಬೈಕ್ ರ‍್ಯಾಲಿ – ತವರಿನಲ್ಲಿ ಅಪ್ಪನ ಕೈಲಾಗದ್ದು ಮಗನಿಗೆ ಸಾಧ್ಯವಾಗಿದ್ದು ಹೇಗೆ?
ಪ್ರಶಾಂತ ವಾತಾವರಣ:
ಕೆ.ಆರ್ ಪೇಟೆಯ ಹೊರವಲಯದ ತೋಟದ ಮನೆಯಲ್ಲಿ ಉಳಿದುಕೊಂಡಿದ್ದ ವಿಜಯೇಂದ್ರ ಅಲ್ಲಿನ ಪ್ರಶಾಂತ ವಾತಾವರಣವನ್ನು ಸವಿಯುತ್ತಿದ್ದರು. ಪ್ರತಿದಿನ ವಿಜಯೇಂದ್ರ ತೋಟದಲ್ಲಿ ಇದ್ದ ಕೆರೆಯ ಏರಿ ಮೇಲೆ ವಾಕ್ ಮಾಡುತ್ತಿದ್ದರು. ಇದಲ್ಲದೇ ಇಡೀ ತೋಟವನ್ನು ಒಂದು ಸುತ್ತು ಹಾಕುತ್ತಿದ್ದರು. ವಿಜಯೇಂದ್ರ ರಣತಂತ್ರ ಹೆಣೆಯಲು ಈ ಪ್ರಶಾಂತವಾದ ವಾತಾವರಣ ತುಂಬಾ ಅನುಕೂಲವಾಗಿದೆ ಎಂದು ಅವರ ಆಪ್ತರು ಸಹ ಹೇಳಿದ್ದಾರೆ. ಇದಲ್ಲದೇ ಈ ತೋಟದ ಮನೆ ವಿಜಯೇಂದ್ರ ಅವರಿಗೆ ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಅದೃಷ್ಟವನ್ನು ತಂದುಕೊಟ್ಟಿದೆ ಎಂದು ಸಹ ವಿಜಯೇಂದ್ರ ಆಪ್ತರು ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೇಳುತ್ತಿದ್ದಾರೆ. -

43 ರೋಡ್ ಶೋ, 10 ಬೈಕ್ ರ‍್ಯಾಲಿ – ತವರಿನಲ್ಲಿ ಅಪ್ಪನ ಕೈಲಾಗದ್ದು ಮಗನಿಗೆ ಸಾಧ್ಯವಾಗಿದ್ದು ಹೇಗೆ?
ಮಂಡ್ಯ: ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದ್ದು ಕೆ.ಆರ್ ಪೇಟೆಯಲ್ಲಿ ಭರ್ಜರಿ ಜಯಸಾಧಿಸಿದೆ. ಸಿಎಂ ಬಿಎಸ್‍ವೈ ತವರಿನಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಸಿಎಂ ಪುತ್ರ ವಿಜಯೇಂದ್ರನ ಶ್ರಮಕ್ಕೆ ಫಲ ಸಿಕ್ಕಿದೆ.
ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ 9,509 ಮತಗಳಿಂದ ಗೆಲ್ಲುವ ಮೂಲಕ ಮಂಡ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಎಲ್ಲ 7 ಕ್ಷೇತ್ರಗಳನ್ನು ಜೆಡಿಎಸ್ ಗೆದ್ದ ಹಿನ್ನೆಲೆಯಲ್ಲಿ ಈ ಬಾರಿ ಇಲ್ಲಿ ಗೆಲ್ಲುವುದು ಕಷ್ಟ ಎನ್ನಲಾಗಿತ್ತು. ಆದರೆ ಎಲ್ಲ ವಿಶ್ಲೇಷಣೆಗಳು ವಿಜಯೇಂದ್ರ ಅವರ ಸ್ಟಾಟರ್ಜಿಗೆ ತಲೆಕೆಳಗಾಗಿದ್ದು ಮೊದಲ ಬಾರಿಗೆ ಬಿಜೆಪಿ ಜಯಭೇರಿ ಭಾರಿಸಿದೆ.

ನಮ್ಮ ತವರು ಜಿಲ್ಲೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದ ವಿಜಯೇಂದ್ರ, ಇಪ್ಪತ್ತು ದಿನ ಕೆಆರ್ ಪೇಟೆಯಲ್ಲೇ ಇದ್ದರು. ಜೊತೆಗೆ 43 ರೋಡ್ ಶೋ, 10 ಬೈಕ್ ರ‍್ಯಾಲಿ ಮತ್ತು 20 ಕ್ಕಿಂತ ಹೆಚ್ಚು ಸಭೆಗಳನ್ನು ಮಾಡಿದ್ದರು. ಪ್ರತಿದಿನ ಊರಿನ ದೇವಸ್ಥಾನ, ಊರಿನ ಕಟ್ಟೆಯಲ್ಲಿ ಬಿಜೆಪಿ ಮುಖಂಡರು ಸಭೆ ಮಾಡಿದ್ದು, ಪಕ್ಷದ ಕಾರ್ಯಕರ್ತರ ಜೊತೆ ಊರಿನ ಮುಖಂಡರನ್ನು ಅವರು ವಿಜಯೇಂದ್ರ ಅವರ ಹತ್ತಿರಕ್ಕೆ ಕರೆದುಕೊಂಡು ಬಂದಿದ್ದರು. ಅವರ ಬೇಡಿಕೆಯ ಪಟ್ಟಿ ಕೇಳಿದ್ದ ವಿಜಯೇಂದ್ರ ಅವರು ಪ್ರತಿ ಮುಖಂಡರಿಗೆ ತನ್ನ ಫೋನ್ ನಂಬರ್ ಹಾಗೂ ಪಿಎ ನಂಬರ್ ಅನ್ನುಕೊಟ್ಟು ಸಮಸ್ಯೆಯನ್ನು ಆಲಿಸಿ ಅದಕ್ಕೆ ಬೇಕಾದ ಪರಿಹಾರವನ್ನು ಮಾಡಿಸಿಕೊಟ್ಟಿದ್ದರು.

ಸಚಿವ ಮಾಧುಸ್ವಾಮಿಯ ಹೇಳಿಕೆಯಿಂದ ಡ್ಯಾಮೇಜ್ ಆಗುತ್ತಿದ್ದಂತೆ ಅಶ್ವಥ್ ನಾರಾಯಣರನ್ನು ತನ್ನ ಜೊತೆ ಉಸ್ತುವಾರಿಗೆ ಸೇರಿಸಿಕೊಂಡು ಒಕ್ಕಲಿಗ ಮತ ಸೆಳೆಯುವಲ್ಲಿ ಬಿಜೆಪಿ ಸಫಲವಾಗಿತ್ತು. ಇದರ ಜೊತೆಗೆ ವಿಜಯೇಂದ್ರ ಅವರು ಯುವಜನರ ಜೊತೆ ಸಮಾಲೋಚನೆ ನಡೆಸಿ ತನ್ನ ತಂದೆಯವರ ಹುಟ್ಟೂರು ಇದು ಇಲ್ಲಿ ಬಿಜೆಪಿ ಗೆದ್ದರೇ ನಿಮ್ಮೂರಿನ ಅಭಿವೃದ್ಧಿಯಾಗುತ್ತೆ ಎಂದು ಭಾವನಾತ್ಮಕ ದಾಳ ಉರುಳಿಸಿದ್ದರು. ಈ ಎಲ್ಲಾ ಕಾರಣದಿಂದ ಬಿಜೆಪಿ ಮೊದಲ ಬಾರಿಗೆ ಮಂಡ್ಯದಲ್ಲಿ ತನ್ನ ಖಾತೆ ತೆರೆದಿದೆ.

ಮತ ಎಣಿಕೆಯ ಮೊದಲ ಮೂರು ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿತ್ತು. 4ನೇ ಸುತ್ತಿನಲ್ಲಿ ನಾರಾಯಣ ಗೌಡರಿಗೆ ಮನ್ನಡೆ ಸಿಗಲು ಆರಂಭವಾಯಿತು. ಕೊನೆಗೆ 17ನೇ ಸುತ್ತು ಮುಕ್ತಾಯದ ವೇಳೆ ನಾರಾಯಣ ಗೌಡ 9,509 ಮತಗಳ ಅಂತರದಿಂದ ಜಯಗಳಿಸಿದರು. ಬಿಜೆಪಿ 62,265 ಮತಗಳನ್ನು ಪಡೆದರೆ ಜೆಡಿಎಸ್ 52,756 ಮತಗಳನ್ನು ಪಡೆದಿದೆ. ಕಾಂಗ್ರೆಸ್ 37,938 ಮತಗಳನ್ನು ಪಡೆದಿದೆ.
-

ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ
ಮಂಡ್ಯ: ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ತಾಲೂಕಿನ ಜನರ ಕನಸನ್ನು ನನಸು ಮಾಡುವತ್ತ ಕೆಲಸಗಳನ್ನು ಆರಂಭಿಸುತ್ತೇನೆ ಎಂದು ಕೆ.ಆರ್.ಪೇಟೆಯಲ್ಲಿ ಗೆಲುವು ದಾಖಲಿಸಿರುವ ಬಿಜೆಪಿ ನಾರಾಯಣಗೌಡ ಹೇಳಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸ್ಪಲ್ಪ ಕೆಲಸ ಮಾಡಿದ್ದೇನೆ. ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಮತ್ತು ನನ್ನ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಕ್ಷೇತ್ರದ ಜನತೆ ಮತ ನೀಡಿದ್ದಾರೆ. ಆದ್ದರಿಂದ ಗೆಲುವು ಲಭಿಸಿದೆ ಎಂದು ನಾರಾಯಣಗೌಡ ಮಾಧ್ಯಮಗಳ ಜೊತೆ ಸಂತೋಷ ಹಂಚಿಕೊಂಡರು.

ಇದೇ ವೇಳೆ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರ ಮಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ, ಬಿಜೆಪಿ ಶಾಸಕ ಪ್ರೀತಂಗೌಡ ಮತ್ತು ಸಿಎಂ ಪುತ್ರ ವಿಜಯೇಂದ್ರ ಸೇರಿದಂತೆ ಪಕ್ಷದ ಪ್ರತಿ ಕಾರ್ಯಕರ್ತರಿಗೂ ನಾರಾಯಣ ಗೌಡರು ಧನ್ಯವಾದ ಸಲ್ಲಿಸಿದರು.
ಕೆ.ಆರ್.ಪೇಟೆ ಅಖಾಡದಲ್ಲಿ ಬಿಜೆಪಿಗೆ ಜೆಡಿಎಸ್ ಭಾರೀ ಪೈಪೋಟಿ ನೀಡಿತ್ತು. ಎರಡು ಪಕ್ಷದ ಅಭ್ಯರ್ಥಿಗಳ ಮಧ್ಯೆ ಒಂದು ರೀತಿಯ ಹಾವು-ಏಣಿ ಆಟವೇ ನಡೆದಿತ್ತು. ಅಂತಿಮವಾಗಿ ಜೆಡಿಎಸ್ ನ ದೇವರಾಜು ಅವರನ್ನು ಸೋಲಿಸಿ ಗೆಲುವಿನ ಗುರಿಯನ್ನು ನಾರಾಯಣಗೌಡರು ತಲುಪಿದರು. ಇತ್ತ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚಾರಣೆ ಮಾಡುತ್ತಿದ್ದಾರೆ.
-

ಕೆ.ಆರ್ ಪೇಟೆಯಲ್ಲಿ ‘ಒಕ್ಕಲಿಗ’ ಮತಗಳತ್ತ ಎಲ್ಲರ ಚಿತ್ತ
-ಬಿಜೆಪಿಯಿಂದ ಪ್ರತಿ ಜಾತಿಗೊಂದು ಸಮಾವೇಶ
ಮಂಡ್ಯ: ಉಪಚುನಾವಣೆ ನಡೆಯುತ್ತಿರುವ ಕೆ.ಆರ್.ಪೇಟೆಯಲ್ಲಿ ಒಕ್ಕಲಿಗರ ಪ್ರ್ರಾಬಲ್ಯ ಹೆಚ್ಚಿದೆ. ಹೀಗಾಗಿ ರಾಜಕೀಯ ಪಕ್ಷಗಳು ಒಕ್ಕಲಿಗರ ಮತಗಳ ಬೇಟೆಗೆ ಮುಂದಾಗಿವೆ. ಆದರೆ ಬಿಜೆಪಿ ಒಕ್ಕಲಿಗರ ಜೊತೆ ಜೊತೆಗೆ ಸಣ್ಣ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನ ಮಾಡುತ್ತಿದೆ.
ಉಪಚುನಾವಣೆಗೆ ಇವತ್ತು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬೀಳುತ್ತಿದ್ದು, ಎಲ್ಲಾ 15 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಕೊನೆ ಕಸರತ್ತು ಜೋರಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ರಣಕಣದಲ್ಲಿ ಮೂರು ಪಕ್ಷಗಳು ತಮ್ಮ ಅಭ್ಯರ್ಥಿ ಗೆಲುವಿಗಾಗಿ ಸಾಕಷ್ಟು ಸರ್ಕಸ್ ಮಾಡುತ್ತಿವೆ. ಅತೀ ಹೆಚ್ಚು ಅಂದ್ರೆ 95 ಸಾವಿರ ಇರುವ ಒಕ್ಕಲಿಗ ಮತಗಳ ಮೇಲೆ ಎಲ್ಲರ ಕಣ್ಣು ಇದೆ. ಈ ಸಮುದಾಯದ ಮತಗಳನ್ನು ಪಡೆಯಬೇಕೆಂದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪೈಪೋಟಿಗೆ ಬಿದ್ದು ಒಕ್ಕಲಿಗ ಸಮುದಾಯದ ಮತಗಳ ಬೇಟೆಗೆ ನಿಂತಿವೆ.

ಈ ಎರಡು ಪಕ್ಷಗಳಿಗಿಂತ ವಿಭಿನ್ನ ಎಂಬಂತೆ ಬಿಜೆಪಿ ಒಕ್ಕಲಿಗ ಸಮುದಾಯದ ಜೊತೆ ಈ ಕ್ಷೇತ್ರದಲ್ಲಿ ಇರುವ ಕುರುಬ, ಕುಂಬಾರ, ದಲಿತ, ಈಡಿಗ, ಲಿಂಗಾಯಿತ, ಬ್ರಾಹ್ಮಣ, ಮಡಿವಾಳ, ಶೆಟ್ಟರು, ವಿಶ್ವಕರ್ಮ ಅಲ್ಲದೇ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮ ಸೇರಿದಂತೆ ಇತರೆ ಸಣ್ಣ ಸಮುದಾಯದ ಮತಗಳನ್ನು ಸಂಪೂರ್ಣವಾಗಿ ತಮ್ಮ ಕಡೆ ಸೆಳೆಯಬೇಕೆಂದು ತಂತ್ರಗಾರಿಕೆ ರಚಿಸಿಕೊಂಡಿವೆ.
ಒಕ್ಕಲಿಗ ಸಮುದಾಯದ ಮತಗಳನ್ನು ಶೇಕಡ 20ರಷ್ಟು ಪಡೆಯುವುದರ ಜೊತೆ ಸಣ್ಣ ಸಮುದಾಯದ ಎಲ್ಲಾ ಮತಗಳನ್ನು ಪಡೆದರೆ ಗೆಲುವು ನಿಶ್ಚಿತ ಎಂಬುವುದು ಬಿಜೆಪಿಯ ಲೆಕ್ಕಾಚಾರ. ಇದರ ಜೊತೆ ಒಕ್ಕಲಿಗ ಸಮುದಾಯದಲ್ಲಿ ಇರುವ ಉಪ ಜಾತಿಗಳ ಮತಗಳನ್ನು ಪಡೆಯುವುದು ಬಿಜೆಪಿಯ ಮೊದಲ ಆದ್ಯತೆ ಆಗಿದೆ. ಹೀಗಾಗಿ ಬಿಜೆಪಿ ಪ್ರತಿನಿತ್ಯ ಆಯಾ ಜಾತಿಗಳ ಮುಖಂಡರನ್ನು ಕರೆಸಿ, ಸಣ್ಣ ಸಣ್ಣ ಸಮುದಾಯಗಳ ಸಮಾವೇಶ ನಡೆಸಿ ಅವರುಗಳನ್ನು ಬಿಜೆಪಿ ಕಡೆ ವಾಲುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಆಯಾ ಜಾತಿಗಳ ನಾಯಕರುಗಳು ಕ್ಷೇತ್ರದಲ್ಲಿ ಆಯಾ ಸಮುದಾಯದ ಜನರನ್ನು ನಾರಾಯಣಗೌಡ ಅವರಿಗೆ ಮತ ಹಾಕುವಂತೆ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಒಟ್ಟಾರೆ ಬಿಜೆಪಿ ಒಕ್ಕಲಿಗರ ಸಮುದಾಯದ ಮತಗಳ ಜೊತೆಗೆ ಇತರೆ ಸಣ್ಣ ಜಾತಿ-ಧರ್ಮಗಳ ಮತಗಳನ್ನು ಸೆಳೆಯುವ ಮೂಲಕ, ಜೆಡಿಎಸ್-ಕಾಂಗ್ರೆಸ್ ಭದ್ರ ಕೋಟೆಯನ್ನು ಭೇದಿಸಲು ಮಾಸ್ಟರ್‍ಪ್ಲಾನ್ ಮಾಡಿದೆ. ಈ ಸ್ಟಾಟರ್ಜಿ ಬಿಜೆಪಿಗೆ ಎಷ್ಟರ ಮಟ್ಟಿಗೆ ವರದಾನವಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
-

ಕೆ.ಆರ್ ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ- ಕೈ, ದಳಕ್ಕೆ ಬಿಜೆಪಿ ಟಕ್ಕರ್
ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಮಾತ್ರ ನೇರ ಹಣಾಹಣಿ ನಡೆಯುತ್ತಿತ್ತು. ಆದರೆ ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಈ ಎರಡು ಪಕ್ಷಗಳಿಗೆ ಬಿಜೆಪಿ ಸಾಕಷ್ಟು ಪೈಪೋಟಿ ನೀಡುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕೆ.ಆರ್.ಪೇಟೆ ಉಪಚುನಾವಣೆ ಅಖಾಡ ರಂಗೇರಿದೆ. ಗೆಲುವಿಗಾಗಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದುವರೆಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಮಾತ್ರ ನೇರ ಹಣಾಹಣಿ ಇತ್ತು. 1994ರಲ್ಲಿ ಬಿಜೆಪಿ ಅಭ್ಯರ್ಥಿ ಕೆಂಗೇಗೌಡ ಮಾತ್ರ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಅದನ್ನು ಹೊರತು ಪಡಿಸಿದರೆ ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿ ಸದ್ದೇ ಮಾಡಿರಲಿಲ್ಲ. ಆದರೆ ಈ ಬಾರಿ ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಕಣದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಟಕ್ಕರ್ ನೀಡಲು ಸಜ್ಜಾಗಿದೆ.

ಸಿಎಂ ಯಡಿಯೂರಪ್ಪ ಅವರ ಹುಟ್ಟುರೂ ಕ್ಷೇತ್ರವಾದ ಕೆ.ಆರ್ ಪೇಟೆಯಲ್ಲಿ ಕಮಲವನ್ನು ಅರಳಿಸಲು ಚತುರೋಪಾಯಗಳನ್ನೇ ನಡೆಸಿದ್ದಾರೆ. ಕಳೆದ ಒಂದು ವಾರದಿಂದ ಸಿಎಂ ಪುತ್ರ ವಿಜಯೇಂದ್ರ ಕೆ.ಆರ್ ಪೇಟೆ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿ ನಾರಾಯಣಗೌಡ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದಲ್ಲದೆ ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳ ಪ್ರಾಬಲ್ಯ ಇರುವುದರಿಂದ ಬಿಜೆಪಿಯ ಒಕ್ಕಲಿಗ ಮುಖಂಡರನ್ನೇ ಹಾಕಿಕೊಂಡು ಪ್ರಚಾರ ನಡೆಸುತ್ತಿದೆ.

ಕೆ.ಆರ್ ಪೇಟೆ ಇತಿಹಾಸದಲ್ಲಿ ನಡೆದ ಚುನಾವಣೆಗಳಲ್ಲಿ ಅಬ್ಬರ ಮಾಡದ ಬಿಜೆಪಿ, ಇದೀಗ ಉಪ ಕದನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರು ಪಕ್ಷದ ಅಭ್ಯರ್ಥಿಗಳ ಪೈಕಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಅನ್ನೋದನ್ನ ಕಾದುನೋಡಬೇಕಿದೆ.
-

ಟೀ ಮಾರಿದ್ದ ಮೋದಿ ಪ್ರಧಾನಿಯಾದ್ರು, ನಾನು ಟೀ ಗ್ಲಾಸು ತೊಳೆದ್ರೆ ತಪ್ಪೇನು- ನಾರಾಯಣ ಗೌಡ
ಮಂಡ್ಯ: ಕೆಆರ್ ಪೇಟೆ ಕದನ ಕಣದಲ್ಲಿ ಮುಂಬೈ ವಿಚಾರ ಸಖತ್ ಸದ್ದು ಮಾಡುತ್ತಿದೆ. ನಾನು ಕೂಲಿ ಮಾಡಿದ್ದೇನೆ. ಹೊಟೇಲ್‍ನಲ್ಲಿಯೂ ಕೆಲಸ ಮಾಡಿದ್ದೇನೆ. ಈಗಲೂ ನಾನು ಲೋಟ ತೊಳೆಯುತ್ತೇನೆ. ನನ್ನ ಹೊಟೇಲಿನಲ್ಲಿ ತಟ್ಟೆ, ಗ್ಲಾಸು ತೊಳೆದ್ರೆ ಏನು ತಪ್ಪು ಅಂತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪ್ರಶ್ನಿಸಿದ್ದಾರೆ.
ಕೆಆರ್ ಪೇಟೆಯ ವಡ್ಡರಹಳ್ಳಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಟೀ ಮಾರುತ್ತಿದ್ದರು. ಈಗ ಅವರು ನಮ್ಮ ದೇಶದ ಪ್ರಧಾನಿ ಆಗಿದ್ದಾರೆ. ತಟ್ಟೆ ಗ್ಲಾಸು ತೊಳೆದ್ರೆ ಏನು ತಪ್ಪು ಅನ್ನೋ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ಗುದ್ದು ನೀಡಿದ್ದಾರೆ. ಜೊತೆಗೆ ಇದೇ ವಿಚಾರವನ್ನೇ ಪ್ರಚಾರದಲ್ಲಿ ಪ್ರಸ್ತಾಪಿಸಿ ಅನುಕಂಪ ಗಿಟ್ಟಿಸಲು ನಾರಾಯಣಗೌಡ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ದೇವೇಗೌಡರ ಬೀಗರು ಕೆಆರ್ ಪೇಟೆಯನ್ನು ಕಮಾಟಿಪುರ ಮಾಡುವುದಾಗಿ ಹೇಳುತ್ತಾರೆ. ನನ್ನ ಮನಸ್ಸಿನಲ್ಲಿ ಇದುವರೆಗೂ ಅಂತಹ ಭಾವನೆ ಬಂದಿಲ್ಲ. ಡಿ.ಸಿ.ತಮ್ಮಣ್ಣ ಕಮಾಟಿಪುರನಾ ಅವರ ತಾಲೂಕಿನಲ್ಲಿ ಮಾಡಿಕೊಳ್ಳಲಿ. ನನ್ನ ಶರೀರದಲ್ಲಿ ಉಸಿರಿರುವವರೆಗೆ ನನ್ನ ತಾಲೂಕಿನಲ್ಲಿ ಹೀಗೆ ಮಾಡೋಕೆ ಬಿಡಲ್ಲ. ರಾಜ್ಯದಲ್ಲೂ ಹೀಗೆ ಮಾಡೋಕೆ ಬಿಡಲ್ಲ. ವೀರಭದ್ರಸ್ವಾಮಿ ದೇವಸ್ಥಾನದ ಮುಂದೆ ಹೇಳುತ್ತಿದ್ದೀನಿ ಎಂದು ಪ್ರಮಾಣ ಮಾಡಿದರು. ಇದನ್ನೂ ಓದಿ: ನಾನೇನು ತಪ್ಪು ಮಾಡಿದೆ, ನನ್ನನ್ನು ಯಾಕೆ ಕೈ ಬಿಟ್ಟಿರಿ – ಮಂಡ್ಯದಲ್ಲಿ ಎಚ್‍ಡಿಕೆ ಮತ್ತೆ ಕಣ್ಣೀರು
ನಾನು ಇದುವರೆಗೂ ಸರಿಯಾಗಿ ಕಮಾಟಿಪುರ ನೋಡೇ ಇಲ್ಲ. ಕಾರಲ್ಲಿ ಹೋಗುವಾಗ ನಾನು ದೂರದಿಂದ ನೋಡಿದ್ದೇನೆ ಅಷ್ಟೇ. ಕಮಾಟಿಪುರನಾ ಹತ್ತಿರದಿಂದ ತಮ್ಮಣ್ಣ ಅವರು ನೋಡಿಕೊಂಡು ಬಂದಿದ್ದಾರೆ. ಅದಕ್ಕೆ ಬೇಕಿದ್ರೆ ಅವರ ತಾಲೂಕಿನಲ್ಲಿ ಮಾಡಿಕೊಳ್ಳಲಿ. ನಾನು ಬಿಜೆಪಿ ಸೇರಿದ್ದೇನೆ ಎಂದು ಜೆಡಿಎಸ್ ಕುಟುಂಬ ಮನೆ ಮನೆಗೆ ಪ್ರಚಾರಕ್ಕೆ ಬರುತ್ತಾ ಇದೆ. ಅಂದು ನಾನು ಎಲೆಕ್ಷನ್‍ನಲ್ಲಿ ನಿಂತಾಗ ಯಾಕೆ ಅವರು ಬರಲಿಲ್ಲ. ನನ್ನ ಸೋಲಿಸಲು ಗ್ರೂಪ್ ಮಾಡಿಕೊಂಡು ತಿರುಗಿದರು ಎಂದು ವಾಗ್ದಾಳಿ ನಡೆಸಿದರು.

ನನ್ನ ಬಾಂಬೆ ಕಳ್ಳ ಅಂತಾರೇ. ಹಾಗಿದ್ರೆ ನನ್ನ ಮನೆಗೆ 15 ವರ್ಷದಿಂದ ಯಾಕೆ ಬರ್ತಾ ಇದ್ರಿ. ಇಡೀ ಕುಟುಂಬ ಯಾಕೆ ನನ್ನ ಹತ್ತಿರ ಬರ್ತಾ ಇದ್ರಿ. ಇಡೀ ಕುಟುಂಬ ಬಾಂಬೆಗೆ ಬಂದ್ರೆ ನನಗೆ ಹೇಳ್ತಾ ಇದ್ರಿ. ಆಗ ನಾನು ಕಳ್ಳ ಆಗಿರಲಿಲ್ವಾ. ನಾನು ಬಿಜೆಪಿಗೆ ಸೇರಿದ ಮೇಲೆ ಕಳ್ಳನಾ. ಬಿಜೆಪಿ ಪಕ್ಷ ಕಳ್ಳತನದ ಪಕ್ಷ ಅಲ್ಲ. ನಾನು ಚೆಕ್ ಮಾಡಿದ್ದೇನೆ. ಮಹಾರಾಷ್ಟ್ರ, ದೆಹಲಿ ಎಲ್ಲಾ ಕಡೆ ಚೆಕ್ ಮಾಡಿದ್ದೇನೆ. ಬಿಜೆಪಿ ಪ್ರಮಾಣಿಕರ ಪಕ್ಷ ಎಂದರು.
-

ಕೆ.ಆರ್.ಪೇಟೆಯಲ್ಲಿ ಪ್ರಚಾರ ಮಾಡ್ತಾರಾ ಯಶ್, ದರ್ಶನ್?
ಮಂಡ್ಯ: ಸ್ವಾಭಿಮಾನದ ಮಂತ್ರ ಜಪಿಸಿ ಮಂಡ್ಯ ಜನರ ಮನ ಗೆದ್ದಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್-ಬಿಜೆಪಿ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿವೆ. ಆದರೆ ಸುಮಲತಾ ಯಾರ ಪ್ರಚಾರಕ್ಕೆ ತೆರಳದೇ ತಟಸ್ಥ ನಿಲುವು ತೋರಿದ್ದಾರೆ. ನೀವು ಬರದಿದ್ದರೂ ಪರವಾಗಿಲ್ಲ, ನಟರಾದ ಯಶ್ ಮತ್ತು ದರ್ಶನ್ ಅವರನ್ನು ಪ್ರಚಾರಕ್ಕೆ ಕಳಿಸುವಂತೆ ಪಕ್ಷಗಳು ದುಂಬಾಲು ಬಿದ್ದಿವೆ ಎನ್ನಲಾಗಿದೆ.

ಕೆ.ಆರ್. ಪೇಟೆ ವಿಧಾನಸಭೆಯ ಉಪ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇದರ ಜೊತೆ ಜೊತೆಗೆ ಹೊಸ ಹೊಸ ತಿರುವು ಸಹ ಪಡೆದುಕೊಳ್ಳುತ್ತಿದೆ. ಬಿಜೆಪಿಯವರು ಸಿಎಂ ಬಿಎಸ್ ಯಡಿಯೂರಪ್ಪ ತವರು ಕ್ಷೇತ್ರ ಕೆಆರ್ ಪೇಟೆಯಲ್ಲಿ ಹೇಗಾದ್ರೂ ಮಾಡಿ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇತ್ತ ಜೆಡಿಎಸ್ ಕ್ಷೇತ್ರವನ್ನು ಉಳಿಸಿಕೊಳ್ಳಲು ದಳಪತಿಗಳು ಸಮಾವೇಶಗಳನ್ನು ಮಾಡುತ್ತಿದ್ದಾರೆ. ಎರಡೂ ಪಕ್ಷಗಳಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕೂಡ ಸಿದ್ಧಗೊಂಡಿದೆ.
ಇಷ್ಟು ದಿನ ಕಾಂಗ್ರೆಸ್ ಮತ್ತು ಬಿಜೆಪಿಯವರು ಸುಮಲತಾರಿಂದ ತಮ್ಮ ಪರ ಪ್ರಚಾರ ಮಾಡಿಸಬೇಕು. ಈ ಮೂಲಕ ಒಂದಷ್ಟು ವೋಟುಗಳನ್ನ ಸೆಳೆಯಬೇಕು ಎಂದು ಪ್ರಯತ್ನ ಪಟ್ಟಿದ್ದರು ಇದೀಗ ಬಿಜೆಪಿ ಜೋಡೆತ್ತುಗಳಿಗೆ ಗಾಳ ಹಾಕಲು ಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.



