Tag: ಕೆಸಿ ವ್ಯಾಲಿ

  • ಕೆಸಿ ವ್ಯಾಲಿ ನೀರಿಗೆ ಪಂಪ್‌ ಹಾಕಿ ರೈತರಿಂದ ಬಳಕೆ – ಮಾಧುಸ್ವಾಮಿ

    ಕೆಸಿ ವ್ಯಾಲಿ ನೀರಿಗೆ ಪಂಪ್‌ ಹಾಕಿ ರೈತರಿಂದ ಬಳಕೆ – ಮಾಧುಸ್ವಾಮಿ

    – ಶೀಘ್ರವೇ ಸಮಸ್ಯೆಗೆ ಪರಿಹಾರ

    ಬೆಂಗಳೂರು: ಕೋರಮಂಗಲ ಚಲ್ಲಘಟ್ಟ ವ್ಯಾಲಿ (ಕೆಸಿ ವ್ಯಾಲಿ) ನೀರನ್ನ ರೈತರು ಪಂಪ್ ಮೂಲಕ ನೇರವಾಗಿ ಬಳಕೆ ಮಾಡಿಕೊಳ್ತಿದ್ದಾರೆ ಅಂತ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಆರೋಪಿಸಿದ್ದಾರೆ.

    ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330 ಅಡಿ ಬಿಜೆಪಿ ನಾರಾಯಣಸ್ವಾಮಿ ವಿಷಯ ಪ್ರಸ್ತಾಪ ಮಾಡಿ, ಕೆಸಿ ವ್ಯಾಲಿ 400 ದಶಲಕ್ಷ ಲೀಟರ್( ಎಂಎಲ್‌ಡಿ) ನೀರು ತುಂಬಿಸುವ ಯೋಜನೆ. ಆದರೆ 294 ಎಂಎಲ್‌ಡಿ ನೀರು ಮಾತ್ರ ಹೋಗುತ್ತಿದೆ. 126 ಕೆರೆಗೆ ನೀರು ಹೋಗಬೇಕಿತ್ತು. ಈಗ ಕೇವಲ 82 ಕೆರೆಗಳಿಗೆ ಮಾತ್ರ ಹೋಗುತ್ತಿದೆ. ಜಲ ಮಂಡಳಿ ಮತ್ತು ಸಣ್ಣ ನಿರಾವರಿ ಇಲಾಖೆಗಳ ಕಿತ್ತಾಟದಿಂದ 100 ಎಂಎಲ್‌ಡಿ ನೀರು ನಷ್ಟವಾಗುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಮಾಧುಸ್ವಾಮಿ, ಜಲ ಮಂಡಳಿ ಪ್ರಕಾರ 380 ಎಂಎಲ್‌ಡಿ ನೀರು ಹರಿಸಲಾಗುತ್ತಿದೆ. ನೀರಿನ ಪ್ರಮಾಣ ನಮಗೆ ಕಡಿಮೆ ಆಗುತ್ತಿದೆ. ಸಮಗ್ರ ಯೋಜನೆ ಪ್ರಕಾರ( ಡಿಪಿಆರ್) ಪ್ರಕಾರ ಶೇ.50 ಕೆರೆ ಮಾತ್ರ ತುಂಬಿಸಬೇಕು. ಶೇ.50 ತುಂಬಿದ ಬಳಿಕ ಮುಂದಿನ ಕೆರೆಗೆ ಹರಿಸಬೇಕಿತ್ತು. ಆದರೆ ಸ್ಥಳೀಯರು ಕೆರೆ ತುಂಬೋವರೆಗೂ ನೀರು ಮುಂದೆ ಬಿಡುತ್ತಿಲ್ಲ ಎಂದರು.

    ಕೆಸಿ ವ್ಯಾಲಿ ನೀರನ್ನು ನೇರವಾಗಿ ರೈತರು ಪಂಪ್ ಹಾಕಿ ನೀರು ತೆಗೆಯುತ್ತಿದ್ದಾರೆ‌. ಇದಕ್ಕೆ ಕಾನೂನು ಇದ್ದರು ಏನು ಪ್ರಯೋಜನ ಆಗಿಲ್ಲ. ಜಲ ಮಂಡಳಿ ಅಧಿಕಾರಿಗಳ ಸಭೆ ಇನ್ನೊಂದು ವಾರದಲ್ಲಿ ಕರೆದು ಸಮಸ್ಯೆ ಬಗ್ಗೆ ಪರಿಹಾರ ಮಾಡುತ್ತೇವೆ ಎಂದು ಉತ್ತರ ನೀಡಿದರು.

    KC Valley water lake

  • ಸಚಿವ ಮಾಧುಸ್ವಾಮಿ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್

    ಸಚಿವ ಮಾಧುಸ್ವಾಮಿ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್

    – ಸಾಮಾಜಿಕ ಅಂತರವನ್ನೇ ಮರೆತ ಸಚಿವರು, ಶಾಸಕರು, ಸಂಸದರು.
    – ಚಿಂತಾಮಣಿಯಲ್ಲಿ ಕೆ.ಸಿ.ವ್ಯಾಲಿ ನೀರಿನ ವಿಚಾರದಲ್ಲಿ ಮಾಜಿ, ಹಾಲಿ ಶಾಸಕರ ನಡ್ವೆ ಫೈಟ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಟಹಳ್ಳಿ ಕೆರೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವರಿಗೆ ಕೋಲಾರ ಸಂಸದ ಮುನಿಸ್ವಾಮಿ, ಚಿಂತಾಮಣಿ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸಾಥ್ ನೀಡಿದ್ದರು.

    ಭೇಟಿ ವೇಳೆ ಸಚಿವರು, ಶಾಸಕರು ಹಾಗೂ ಸಂಸದರು ಸಾಮಾಜಿಕ ಅಂತರವನ್ನು ಮರೆತಿದ್ದರು. ಸಂಸದ ಮುನಿಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದರೆ, ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕೂಡ ತಮ್ಮ ಬೆಂಬಲಿಗರೊಂದಿಗೆ ಗುಂಪು ಗುಂಪಾಗಿ ಆಗಮಿಸಿದ್ದು, ಸಾಮಾಜಿಕ ಅಂತರ ಪಾಲನೆ ಮಾಡಲಿಲ್ಲ.

    ಸಚಿವರ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್: ಇದೇ ವೇಳೆ ಬಿಜೆಪಿ ಕಾರ್ಯಕರ್ತ ಸಂಸದ ಮುನಿಸ್ವಾಮಿ, ಸಚಿವರು ತಮ್ಮ ತಾಲೂಕಿಗೆ ಬರುವ ಮಾಹಿತಿಯನ್ನೇ ಕೊಟಿಲ್ಲ. ನಾವು ನಿಮಗೆ ಮತ ಹಾಕಿದ್ದು, ನೀವೇ ಹೀಗೆ ಮಾಡಿದರೇ ಹೇಗೆ ಎಂದು ಆಕ್ರೋಶ ಹೊರಹಾಕಿದ್ದರು. ಈ ವೇಳೆ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ, ಶಿವು ಪ್ರದೀಪ್ ವಿರುದ್ಧ ತಿರುಗಿಬಿದ್ದು ಮಾತಿನ ಚಕಮಕಿ ಆರಂಭಿಸಿದ್ದರು. ಅಲ್ಲದೇ ಅಂತಿಮವಾಗಿ ಎಂಪಿ ಆದವನಿಗೆ ಮಾನ ಇಲ್ಲ. ಯಾರ್ಯಾರನ್ನೋ ಜೊತೆಯಲ್ಲಿ ಇಟ್ಟುಕೊಂಡು ಬರ್ತಾನೆ ಎಂದು ಬಿಜೆಪಿ ಕಾರ್ಯಕರ್ತ ಪ್ರದೀಪ್ ಏಕವಚನದಲ್ಲೇ ತಮ್ಮದೇ ಪಕ್ಷದ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದ.

    ಮಾಧುಸ್ವಾಮಿ ಗರಂ: ಕುರುಟಹಳ್ಳಿ ಕೆರೆಗೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿಗೆ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿತೆ ಹಾಗೂ ನೀರಾವರಿ ಹೋರಾಟಗಾರ್ತಿ ಆಯಿಷಾ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಸಚಿವರ ಉತ್ತರಿಸುತ್ತಿದ್ದರೂ ಮರು ಪ್ರಶ್ನೆ ಮಾಡುತ್ತಿದ್ದ ವೇಳೆ ಗರಂ ಆದ ಸಚಿವ ಮಾಧುಸ್ವಾಮಿ ಅವರು, ‘ನಾನು ನೀನು ಹೇಳಿದ ಹಾಗೆ ಕೇಳಲು ಮಂತ್ರಿ ಆಗಿಲ್ಲ’ ಎಂದು ತಿರುಗೇಟು ನೀಡಿದರು. ಇತ್ತ ಮಾಧ್ಯಮದವರಿಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡುವ ವೇಳೆ, ಆಯಿಷಾರನ್ನು ಉದ್ದೇಶಿಸಿ ಮಾತು ಸ್ವಲ್ಪ ಸಾಕು ಮಾಡಮ್ಮ ಎಂದು ಸಂಸದ ಮುನಿಸ್ವಾಮಿ ಹೇಳಿದರು. ಇದರಿಂದ ಮತ್ತಷ್ಟು ಕೆರಳಿದ ಆಯಿಷಾ ಸಚಿವರು ಹಾಗೂ ಸಂಸದರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

    ನೀರಿಗಾಗಿ ಮಾಜಿ, ಹಾಲಿ ಶಾಸಕರ ರಾಜಕಾರಣ: ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್.ಎನ್.ವ್ಯಾಲಿ ಹಾಗೂ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಹೆಬ್ಬಾಳ ನಾಗವಾರ ಕೆರೆಯ ನೀರನ್ನು ಶುದ್ಧೀಕರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಆದರೆ ಚಿಂತಾಮಣಿ ತಾಲೂಕಿನ 5 ಕೆರೆಗಳಿಗೆ ಕೆ.ಸಿ.ವ್ಯಾಲಿಯ ನೀರನ್ನು ಹರಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಈಗಾಗಲೇ ಕುರುಟಹಳ್ಳಿ ಕೆರೆಗೆ ಕಳೆದ ಒಂದು ವಾರದಿಂದ ನೀರು ಹರಿಸಲಾಗುತ್ತಿದೆ.

    ಆದರೆ ಈ ನಡುವೆ ಕೆರೆಗೆ ಭೇಟಿ ನೀಡಿದ್ದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರು, ಕೆರೆಯಲ್ಲಿನ ಜಾಲಿ ಮರಗಳನ್ನು ಸ್ವಚ್ಚಗೊಳಿಸದೆ ನೀರು ಹರಿಸೋದು ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ಪರಿಣಾಮ ನೀರಿನ ಹರಿಯುವಿಕೆ ನಿಲ್ಲಿಸಿಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈಗಾಗಲೇ ಬಿಜೆಪಿಯವರ ಜೊತೆ ಗುರುತಿಸಿಕೊಂಡಿರುವ ಮಾಜಿ ಶಾಸಕ ಎಂ.ಸಿ.ಸುಧಾಕರ್ ರೆಡ್ಡಿ ಬೆಂಬಲಿಗರೊಂದಿಗೆ ಕುರುಟಹಳ್ಳಿ ಕೆರೆ ಬಳಿ ಪ್ರತಿಭಟನಾ ಧರಣಿ ನಡೆಸಿದರು. ಸದ್ಯ ಈ ವಿಚಾರದಲ್ಲಿ ಹಾಲಿ, ಮಾಜಿ ಶಾಸಕರ ರಾಜಕಾರಣದ ಫೈಟ್ ಜೋರಾಗಿ ನಡೆಯುತ್ತಿದೆ. ಹೀಗಾಗಿ ಇಂದು ಸಚಿವ ಮಾಧುಸ್ವಾಮಿ ಕುರುಟಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಾತನಾಡಿದ ಸಚಿವರು, ಕೆರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೀವಿ. ಸಂಸದರು, ಶಾಸಕರು ಎಲ್ಲಾ ಸೇರಿ ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ಹೇಳಿ ಸ್ಥಳದಿಂದ ಹೊರಟರು.

  • ತುಂಬಿದ ಬಾಗಲೂರು ಕೆರೆ- ಕಣ್ಮನ ಸೆಳೆಯುತ್ತಿದೆ ರಮಣೀಯ ದೃಶ್ಯ

    ತುಂಬಿದ ಬಾಗಲೂರು ಕೆರೆ- ಕಣ್ಮನ ಸೆಳೆಯುತ್ತಿದೆ ರಮಣೀಯ ದೃಶ್ಯ

    – ಕೆಸಿ ವ್ಯಾಲಿ ಯೋಜನೆಯಡಿ ತುಂಬಿದ ಕೆರೆ
    – ಕೃಷಿ, ಜಾನುವಾರುಗಳಿಗೆ ಮಾತ್ರ ಉಪಯುಕ್ತ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ನೀರನ್ನ ಪೈಪ್ ಮೂಲಕ ಬೆಂಗಳೂರು ಉತ್ತರ ಭಾಗದ ಕೆರೆಗಳನ್ನ ತುಂಬಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿತ್ತು. ಈಗ ಬಾಗಲೂರು ಕೆರೆ ಕೆಸಿ ವ್ಯಾಲಿ ಯೋಜನೆಯಡಿ ತುಂಬಿದೆ. ಈ ರಮಣೀಯ ದೃಶ್ಯ ಎಲ್ಲರ ಕಣ್ಮನ ಸೆಳೆಯುತ್ತಿದೆ.

    ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 65 ಕೆರೆಗಳಿಗೆ ತುಂಬಿಸುವ ಯೋಜನೆಯ ಮೊದಲ ಹಂತಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಚಾಲನೆ ಸಿಕ್ಕಿತ್ತು. ಆದರೆ ಈಗ ಬಾಗಲೂರು ಕೆರೆ ತುಂಬಿದ್ದು, ಈ ನೀರನ್ನು ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳಿಗೆ ಮಾತ್ರ ಬಳಸಬಹುದಾಗಿದೆ.

    ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ 12 ಕೆರೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ 9 ಕೆರೆಗಳು, ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳು ಸೇರಿ ಒಟ್ಟು 65 ಕೆರೆಗಳು ಈ ಯೋಜನೆಯಡಿ ಬರುತ್ತವೆ. ಈ ಯೋಜನೆಯಿಂದ ವರ್ಷಕ್ಕೆ ಸುಮಾರು 2.70 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ನೀರಿನೊಂದಿಗೆ ಆ ಭಾಗದ ವಾರ್ಷಿಕ ವಾಡಿಕೆ ಮಳೆಯಿಂದ ಲಭ್ಯವಾಗುವ ನೀರು ಸೇರಿದಲ್ಲಿ ಅನೇಕ ಕೆರೆಗಳು ತುಂಬಲಿವೆ. ರೈತಾಪಿ ವರ್ಗಕ್ಕೂ ಯೋಜನೆಯಿಂದ ಅನುಕೂಲವಾಗಲಿದೆ.

    ಬಾಗಲೂರು ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಮಾಜಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ. “ನಮ್ಮ ಕ್ಷೇತ್ರದ ಬಾಗಲೂರು ಕೆರೆ ತುಂಬಿರುವ ಒಂದು ರಮಣೀಯ ದೃಶ್ಯ. ಅಂದು ನಾವು ಕಂಡ ಕನಸು ಇಂದು ನನಸಾಗ ತೊಡಗಿದೆ. ಕಾಂಗ್ರೆಸ್ ಸರ್ಕಾರದ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಬೆಂಗಳೂರಿನ ನೀರನ್ನು ಪೈಪ್‍ಲೈನ್ ಮೂಲಕ ಬೆಂಗಳೂರು ಉತ್ತರ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯಕ್ರಮವು ಹಂತಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೆರೆ ತುಂಬಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

  • ಕೆಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂ

    ಕೆಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂ

    ನವದೆಹಲಿ: ಬರ ಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆಗಳಿಗೆ ಬೆಂಗಳೂರಿನ ಕಲುಷಿತ ನೀರನ್ನು ಶುದ್ಧಿಕರಿಸಿ ನೀರು ಹರಿಸುವ ಕೆಸಿ ವ್ಯಾಲಿ(ಕೋರಮಂಗಲ- ಚಲ್ಲಘಟ್ಟ ವ್ಯಾಲಿ) ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಅಲ್ಲದೇ ಹೈಕೊರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಸುವಂತೆ ಸೂಚನೆ ನೀಡಿ, ವಿಚಾರಣೆ ಮುಗಿಯುವವರೆಗೂ ಯೋಜನೆ ಮುಂದುವರಿಸಬಹುದು ಎಂದು ತಿಳಿಸಿದೆ.

    ಶಾಶ್ವತ ನೀರಾವರಿ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದಿಂದ ವಿಚಾರಣೆ ನಡೆಸಿ ಯೋಜನೆ ಮುಂದುವರಿಸಲು ಗ್ರೀನ್ ಸಿಗ್ನಲ್ ನೀಡಿದೆ. ಯೋಜನೆ ಮುಂದುವರಿಸಲು ಹೈಕೋರ್ಟ್ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅಂಜನೇಯ ರೆಡ್ಡಿ ಸಲ್ಲಿಸಿದ್ದರು.

    ವಿಚಾರಣೆ ವೇಳೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಬರ ಪೀಡಿತ ಜಿಲ್ಲೆಗಳಾಗಿದ್ದು, ಇಲ್ಲಿ ಬೇರೆ ನೀರಿನ ಮೂಲ ಇಲ್ಲ. ಕೆ.ಸಿ ವ್ಯಾಲಿ ನೀರು ಭೂಮಿ ಒಳಗೆ ಸೇರಿದ ಮೇಲೆ ನೈಸರ್ಗಿಕವಾಗಿ ಸ್ವಚ್ಛವಾಗಲಿದೆ. ಹಾಗಾಗಿ ಯೋಜನೆ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದ ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು. ರಾಜ್ಯ ಸರ್ಕಾರದ ಪರ ವಕೀಲರ ವಾದ ಮನ್ನಿಸಿದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ. ಈ ಪ್ರಕರಣದ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆಗೆ ತುರ್ತು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

  • ಕೆ.ಸಿ.ವ್ಯಾಲಿ ಯೋಜನೆಗೆ  ನೊರೆ ಮಿಶ್ರಿತ ನೀರು ಹರಿಸುವುದನ್ನ ನಿಲ್ಲಿಸಿ-ರೈತರಿಂದ ಪ್ರತಿಭಟನೆ

    ಕೆ.ಸಿ.ವ್ಯಾಲಿ ಯೋಜನೆಗೆ ನೊರೆ ಮಿಶ್ರಿತ ನೀರು ಹರಿಸುವುದನ್ನ ನಿಲ್ಲಿಸಿ-ರೈತರಿಂದ ಪ್ರತಿಭಟನೆ

    ಕೋಲಾರ: ಕೆ.ಸಿ.ವ್ಯಾಲಿ ಯೋಜನೆಗೆ ನೊರೆ ಮಿಶ್ರಿತ ಮಾರಕ ನೀರನ್ನು ಹರಿಸುವುದನ್ನು ನಿಲ್ಲಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.

    ಬುಧವಾರ ಯೋಜನೆ ಮೂಲಕ ಕಲುಷಿತ ನೊರೆ ನೀರು ಬಂದ ಹಿನ್ನೆಲೆ ಕೆಸಿ ವ್ಯಾಲಿ ಯೋಜನೆಗೆ ಜಿಲ್ಲೆಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಶುದ್ಧೀಕರಣ ಖಾತ್ರಿ ಇಲ್ಲದ ನೀರನ್ನ ಕೂಡಲೇ ನಿಲ್ಲಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ಮೂಲಕ ಒತ್ತಾಯ ಮಾಡಿದ್ರು. ಬೆಂಗಳೂರಿನ ತ್ಯಾಜ್ಯ ನೀರನ್ನ ಎರಡು ಹಂತದಲ್ಲಿ ಸಂಸ್ಕರಣ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಹರಿಸಿದ ಪರಿಣಾಮ ಕೋಲಾರ ಜಿಲ್ಲೆಯ ಕೆರೆಗಳನ್ನ ಕೊಳಕು ಮಾಡಲು ಮುಂದಾಗಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

    ಲಕ್ಷ್ಮಿಸಾಗರ ಕೆರೆಯ ಸುತ್ತಮುತ್ತಲ ಗಾಳಿಯಲ್ಲಿ ವಿಷಕಾರಕ ನೊರೆ ಹಾರಾಡಿದೆ. ಮಲೀನವಾದ ನೊರೆ ನೀರನ್ನು ಹರಿಸಿ ಅಂತರ್ಜಲ ಹಾಗೂ ಕೆರೆಯ ನೀರು ಹಾಳಾಗುತ್ತಿದೆ ಎಂಬ ಆತಂಕದಲ್ಲಿ ಜಿಲ್ಲೆಯ ರೈತರಿದ್ದಾರೆ. ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ಹಿನ್ನೆಲೆಯಲ್ಲಿ 126 ಕೆರೆಗಳನ್ನು ತುಂಬಿಸುವ 1,400 ಕೋಟಿ ವೆಚ್ಚದಲ್ಲಿ ಕೆ.ಸಿ.ವ್ಯಾಲಿ ಯೋಜನೆಯನ್ನ ರಾಜ್ಯ ಸರ್ಕಾರ ರೂಪಿಸಿದೆ.

    ಶುದ್ಧತೆಯ ಖಾತ್ರಿ ನೀಡದೆ ಹಲವು ಆರೋಪ-ಪ್ರತ್ಯಾರೋಪಗಳ ಮಧ್ಯೆ ನೀರು ಹರಿಸುತ್ತಿರುವ ಹಿನ್ನೆಲೆ ಜಿಲ್ಲೆಯ ಜಿನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

  • ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಹರಿದು ಬಂತು ನೀರು: ಸ್ಪೀಕರ್ ರಮೇಶ್ ಕುಮಾರ್ ಆನಂದಭಾಷ್ಪ

    ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಹರಿದು ಬಂತು ನೀರು: ಸ್ಪೀಕರ್ ರಮೇಶ್ ಕುಮಾರ್ ಆನಂದಭಾಷ್ಪ

    ಕೋಲಾರ: ಬರದ ನಾಡು ಕೋಲಾರಕ್ಕಿಂದು ಐತಿಹಾಸಿಕ ದಿನ, ಕಳೆದ 60 ವರ್ಷಗಳಿಂದ ನಿರೀಕ್ಷೆಯ ಕಣ್ಣುಗಳಿಂದ ಕಾದು ಕುಳಿತಿದ್ದ ಲಕ್ಷಾಂತರ ಮನಸ್ಸುಗಳಿಗೆ ತೃಪ್ತಿಯಾದ ದಿನ. ಕಳೆದ ಅರವತ್ತು ವರ್ಷಗಳ ಬೇಡಿಕೆ ಇಂದು ಈಡೇರಿದ ಸಂತೃಪ್ತಿ ಒಂದೆಡೆಯಾದ್ರೆ, ಬರಗಾಲದ ಕರಿನೆರಳು ದೂರವಾಗುತ್ತಾ ಅನ್ನೋ ನಿರೀಕ್ಷೆ ಚಿನ್ನದ ನಾಡಿನ ಜನರದ್ದು.

    ಕೆ.ಸಿ.ವ್ಯಾಲಿ ಯೋಜನೆಯ ನೀರು ಲಕ್ಷ್ಮೀಸಾಗರ ಕೆರೆಯನ್ನು ಪ್ರವೇಶಿಸಿದ ಸಂದರ್ಭ ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್ ನಮ್ಮ ತಾಯಿ ಜ್ಞಾಪಕಕ್ಕೆ ಬರುತ್ತಿದ್ದಾಳೆ, ನನ್ನಿಂದ ಈ ರೀತಿಯ ಒಳ್ಳೆ ಕಾರ್ಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿ ಸ್ಪೀಕರ್ ರಮೇಶ್ ಕುಮಾರ್ ಆನಂದಭಾಷ್ಪ ಹಾಕಿದ್ದಾರೆ.

    ಕೋಲಾರ ಜಿಲ್ಲೆಯ ಜನ ಕಳೆದ 60 ವರ್ಷಗಳಿಂದ ಮಾಡಿದ ನೂರಾರು ಹೋರಾಟ, ಉಪವಾಸ, ಕಣ್ಣೀರು, ಆಕ್ರೋಶ, ಎಲ್ಲದಕ್ಕೂ ಇಂದು ಉತ್ತರ ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಲಾದ ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಯ ನೀರು ಇಂದು ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಕೆರೆಯನ್ನು ಪ್ರವೇಶಿಸಿದೆ.

    1400 ಕೋಟಿ ರೂ. ವೆಚ್ಚದಲ್ಲಿ ಕೋಲಾರ ಜಿಲ್ಲೆಯ 130 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದ್ದು, ಯೋಜನೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಇನ್ನು ಸಣ್ಣ ಪುಟ್ಟ ಮಾರ್ಪಾಟುಗಳನ್ನ ಸರಿಪಡಿಸಿದ ನಂತರ ಜಿಲ್ಲೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸಲಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ವೆಂಕಟೇಶ್ ತಿಳಿಸಿದ್ದಾರೆ.

    ಕಳೆದ ಒಂದುವರೆ ವರ್ಷದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಅಡಿಗಲ್ಲು ಹಾಕಿ, ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ರು. ಅಲ್ಲದೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್‍ಕುಮಾರ್ ಈ ಯೋಜನೆಗಾಗಿ ಇನ್ನಿಲ್ಲದ ಹೋರಾಟಗಳನ್ನು ಮಾಡಿದ್ರು. ಯೋಜನೆಗೆ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಲು ಸತಾಯಿಸಿದ್ದು, ಬೆಂಗಳೂರು ನಗರ ವ್ಯಾಪ್ತಿ ಯಲ್ಲಿ ಪೈಪ್‍ಲೈನ್ ಅಳವಡಿಸುವ ಕಾರ್ಯದಲ್ಲಿ ಆದ ಸಾಕಷ್ಟು ಅಡೆತಡೆಗಳು, ಅಕಾಲಿಕ ಮಳೆ ಇದೆಲ್ಲವನ್ನು ನಿಭಾಯಿಸಿಕೊಂಡು ಚುನಾವಣೆಗೆ ಮುನ್ನ ನೀರು ತರಬೇಕೆಂದು ಪ್ರಯತ್ನ ಮಾಡಿದ್ದರು ಎಂದು ಸ್ಥಳೀಯರಾದ ಕೆಎಸ್ ಗಣೇಶ್ ತಿಳಿಸಿದರು.

    ಸಂಸ್ಕರಿಸಿದ ತ್ಯಾಜ್ಯ ನೀರು ಜಿಲ್ಲೆಗೆ ಬಂದಿದ್ದು ಖುಷಿಯಾದ್ರು, ಇದರಿಂದ ಏನಾದ್ರು ಅಪಾಯ ಆಗಬಹುದಾ ಅನ್ನೋ ಆತಂಕವನ್ನು ಜನರಲ್ಲಿದೆ.