Tag: ಕೆಸಿಸಿ

  • ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ – ಸುದೀಪ್

    ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ – ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳು ಸೇರಿ ಆರಂಭಿಸಿರುವ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಲೀಗ್ (ಕೆಸಿಸಿ)ನಿಂದ ನಟ ದರ್ಶನ್ ದೂರವೇ ಉಳಿದಿದ್ದು, ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಕಿಚ್ಚ ಸುದೀಪ್ ನಾವು ಯಾರಿಗೂ ಬರಬಾರದು ಎಂದು ಗೇಟ್ ಹಾಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಸತತವಾಗಿ 2ನೇ ಬಾರಿಗೆ ಆಯೋಜನೆಗೊಳ್ಳುತ್ತಿರುವ ಕೆಸಿಸಿ ಟೂರ್ನಿಯ ಸುದ್ದಿಗೋಷ್ಠಿ ಇಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಡೆಯಿತು. ನಟರಾದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ದೊಡ್ಡಣ್ಣ ಸೇರಿದಂತೆ ಹಲವು ಸ್ಟಾರ್ ಗಳು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸುದೀಪ್, ಕಳೆದ ಬಾರಿ ಕೆಸಿಸಿ ಆರಂಭಿಸಿದಾಗ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಎರಡನೇ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇತಿಹಾಸದಲ್ಲೇ ಇಂತಹ ಒಂದು ಪ್ರಯತ್ನ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಹರ್ಷವ್ಯಕ್ತಪಡಿಸಿದರು.

    ಈ ವೇಳೆ ನಟ ದರ್ಶನ್ ಕೆಸಿಸಿ ಟೂರ್ನಿಯಲ್ಲಿ ಭಾಗವಹಿಸದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಅವರು ಬರಬಾರದು ಅಂತ ಯಾರು ತಡೆದಿಲ್ಲ. ಸಮಸ್ಯೆ ಎಲ್ಲಿ ಆಗಿದೆಯೋ ಅಲ್ಲೇ ಪರಿಹಾರ ಆಗಬೇಕು. ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ. ಇದು ಒಳ್ಳೆ ವಿಚಾರಕ್ಕಾಗಿ ಆಡುತ್ತಿರುವ ಪಂದ್ಯಾವಳಿ ಎಂದು ತಿಳಿಸಿದರು.

    ಟೂರ್ನಿಗೆ 6 ಅಂತರಾಷ್ಟ್ರೀಯ ಆಟಗಾರರು ಆಹ್ವಾನ ನೀಡಿ ಕಷ್ಟಪಟ್ಟು ಕರೆತಂದಿದ್ದೇವೆ. ಕನ್ನಡ ಚಿತ್ರರಂಗ ಇದಕ್ಕೆ ಸಾಕ್ಷಿಯಾಗಿದ್ದು, ಇಂತಹ ಒಂದು ಯೋಚನೆ ನನ್ನಿಂದ ಆರಂಭವಾದರೂ ಚಿತ್ರರಂಗದವರು ಇದನ್ನು ಬೆಳೆಸಲು ಸಹಾಯ ಮಾಡಿದ್ದಾರೆ. ಇಂದು ಕೆಸಿಸಿ ದೊಡ್ಡದಾಗಿ ಬೆಳೆದಿದ್ದು, ದೊಡ್ಡ ದೊಡ್ಡ ಪ್ರಯೋಜಕರು ನಮ್ಮೊಂದಿಗಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

    ಕೆಸಿಸಿ ಕುರಿತು ಈಗಾಗಲೇ ಅಂತರ್ಜಾಲದಲ್ಲಿ ಬಗ್ಗೆ ಮಾಹಿತಿ ಹೊರಬಿಟ್ಟಿದ್ದೇವೆ. ಇದೇ ತಿಂಗಳ 8 ಮತ್ತು 9 ರಂದು ಕೆಸಿಸಿ ಟೂರ್ನಿ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ವೇಳೆ ಅರ್ಬಾಜ್ ಖಾನ್, ಸೊಹೈಲ್ ಖಾನ್, ಸುನಿಲ್ ಶೆಟ್ಟಿ, ಧನುಷ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಇದೇ 8 ರಂದು ಕೆಸಿಸಿ 2ನೇ ಟೂರ್ನಿ ಉದ್ಘಾಟನೆಯಾಗಲಿದೆ. ಮೊದಲ ದಿನ 4 ಪಂದ್ಯಗಳು ಹಾಗೂ 2ನೇ ದಿನ 2 ತಂಡಗಳ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.

    ಕೆಸಿಸಿ ಟೂರ್ನಿಯ ಪಂದ್ಯಗಳ ಟಿಕೆಟ್ ಸೋಮವಾರದಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದೇ 5 ರಿಂದ ಎಲ್ಲಾ ಅಂತರಾಷ್ಟ್ರೀಯ ಆಟಗಾರರು ಆಗಮಿಸುತ್ತಿದ್ದು ಅವರೊಂದಿಗೆ ಎಲ್ಲರೂ ಅಭ್ಯಾಸ ಮಾಡಲಿದ್ದೇವೆ. ಟೂರ್ನಿಗೆ ಸಹಕಾರ ನೀಡಿದ ಎಲ್ಲಾ ಆಟಗಾರರು, ನಿರ್ಮಾಪಕರ ಸಂಘ, ನಿರ್ದೇಶಕ ಸಂಘ ಸೇರಿದಂತೆ ಎಲ್ಲಾ ಕಲಾವಿದರು, ತಂತ್ರಜ್ಞಾನರಿಗೂ ಧನ್ಯವಾದ ಎಂದರು.

    ಕೊಡಗು ಸಂತ್ರಸ್ತರಿಗೆ ಸಹಾಯ: ಕೆಸಿಸಿ 2ನೇ ಆವೃತ್ತಿಯಿಂದ ಬರುವ ಲಾಭವನ್ನು ಕೊಡಗು ಸಂತ್ರಸ್ತರಿಗೆ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸುದೀಪ್, ನಿರಾಶ್ರಿತರಿಗೆ ಸಹಾಯ ಮಾಡುವುದು ಖಚಿತ ಎಂದರು. ಆದರೆ ಎಷ್ಟು ಹಣ ಕೊಡುತ್ತಾರೆ ಎಂಬುವುದನ್ನು ಸ್ಪಷ್ಟಪಡಿಸಲಿಲ್ಲ.

    ಈ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನನಗೆ ಕ್ರಿಕೆಟ್ ಅಂದ್ರೆ ಬಹಳ ಇಷ್ಟ. ನಾನು ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ಕೆಸಿಸಿ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದೇನೆ. ನನ್ನ ನೆಚ್ಚಿನ ಕ್ರಿಕೆಟರ್ ಜಿ. ಆರ್ ವಿಶ್ವನಾಥ್. ನಾನು ಚಿಕ್ಕಂದಿನಿಂದಲೂ ಅವರ ಅಭಿಮಾನಿ. ಚೆನ್ನೈನಲ್ಲಿ ಇದ್ದಾಗಲೂ ಬೆಂಗಳೂರು, ಮುಂಬೈಗೆ ಬಂದು ಕ್ರಿಕೆಟ್ ನೋಡುತ್ತಿದ್ದೆ. ಕಳೆದ ಬಾರಿ ಎರಡು ದಿನ ಅಭ್ಯಾಸ ಮಾಡಿ ಟೂರ್ನಿಯಲ್ಲಿ ಭಾಗವಹಿದ್ದೆ. ಆದರೆ ಈ ಬಾರಿ ಹೆಚ್ಚಿನ ಅಭ್ಯಾಸ ನಡೆಸಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಟೂರ್ನಿಯ ರೂವರಿ ಸುದೀಪ್ ಗೆ ಜೊತೆ ನಾವೆಲ್ಲರೂ ಇದ್ದೇವೆ, ಅವರು ಎಲ್ಲೆ ಕರೆದರೂ ಒಗ್ಗಟ್ಟಾಗಿ ಹೋಗಿ ಆಡುತ್ತೇವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುದೀಪ್ ಜೊತೆ ವೇದಿಕೆ ಹಂಚಿಕೊಂಡಿದ್ದು ಖುಷಿ ಕೊಟ್ಟಿದೆ: ವೀರೇಂದ್ರ ಸೆಹ್ವಾಗ್

    ಸುದೀಪ್ ಜೊತೆ ವೇದಿಕೆ ಹಂಚಿಕೊಂಡಿದ್ದು ಖುಷಿ ಕೊಟ್ಟಿದೆ: ವೀರೇಂದ್ರ ಸೆಹ್ವಾಗ್

    ಬೆಂಗಳೂರು: ನನ್ನ ಮಕ್ಕಳಿಗೆ ಸೌತ್ ಇಂಡಿಯನ್ ಸಿನಿಮಾಗಳೆಂದರೆ ತುಂಬಾ ಇಷ್ಟ. ಈ ಸಭೆಯ ಮೂಲಕ ಸುದೀಪ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಹೆಚ್ಚು ಖುಷಿ ಕೊಟ್ಟಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

    ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಸೀಸನ್ 2 ಹರಾಜು ಪ್ರಕ್ರಿಯೆ ಭಾಗವಾಗಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಸೆಹ್ವಾಗ್ ಕನ್ನಡ ನಟರ ಪ್ರಯತ್ನದ ಕುರಿತು ಮೆಚ್ಚುಗೆ ಸೂಚಿಸಿದರು. ಈ ಹಿಂದೆ ಕೆಸಿಸಿಯಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗಲಿಲ್ಲ. ಏಕೆಂದರೆ ಬಿಸಿಸಿಐನೊಂದಿಗೆ ಒಪ್ಪಂದವಾಗಿದ್ದರಿಂದ ಭಾಗವಹಿಸಿದರೆ ಅಮಾನತು ಮಾಡಲಾಗುತ್ತಿದ್ದು. ಸದ್ಯ ಇಂತಹ ಯಾವುದೇ ತೊಂದರೆಗಳಿಲ್ಲ. ಈ ಬಾರಿ ನಾನು ಸಹ ಸೂಪರ್ ಸ್ಟಾರ್ ಗಳೊಂದಿಗೆ ಆಟವಾಡಲು ಅವಕಾಶ ದೊರೆತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

    ಈ ಹಿಂದೆ ಬಾಲಿವುಡ್ ಸ್ಟಾರ್ ಆಟಗಾರರೊಂದಿಗೆ ಪಂದ್ಯವಾಡಿದ್ದ ವೇಳೆ ಜಹೀರ್, ಶ್ರೀನಾಥ್ ಬೌಲಿಂಗ್ ನಲ್ಲಿ ಕೆಲ ಸ್ಟಾರ್ ಆಟಗಾರರು ಬೌನ್ಸರ್ ಎದುರಿಸಲಾಗದೆ ಪೆಟ್ಟು ತಿಂದಿದ್ದರು. ಈ ಭಯವು ಸದ್ಯ ನಿವಾರಣೆಯಾಗಿದ್ದು, ಈ ಲೀಗ್ ನಲ್ಲಿ ಬೌನ್ಸರ್ ಎಸೆಯುವಂತಿಲ್ಲ ಎಂದು ಸುದೀಪ್ ಹೇಳಿದ್ದಾಗಿ ತಿಳಿಸಿದರು.

    ಇದಕ್ಕೂ ಮುನ್ನ ಮಾತನಾಡಿದ ನಟ ಸುದೀಪ್, ಕೆಸಿಸಿ ಮೊದಲ ಸೀಸನ್ ಉತ್ತಮವಾಗಿತ್ತು. ಆದರೆ ಈ ಬಾರಿ ಹೆಚ್ಚಿನ ಮನರಂಜನೆ ನೀಡಬೇಕು. ಆ ಮೂಲಕ ಕೆಸಿಸಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕು. ಹೀಗಾಗಿ ಇವರನ್ನೆಲ್ಲಾ ಕರೆದರೆ ಹೇಗೆ ಎಂಬ ಆಲೋಚನೆ ಬಂತು. ಆದರೆ ನನ್ನ ಆಹ್ವಾನ ಕೇಳಿದ ಕೂಡಲೇ ಎಲ್ಲರೂ ಬರಲು ಒಪ್ಪಿಗೆ ನೀಡಿದರು. ಇದು ಅವರ ಗೌರವವನ್ನು ಹೆಚ್ಚಿಸಿದೆ ಎಂದರು.

    ಕೆಸಿಸಿ ಆರಂಭ ಮಾಡುವಾಗ ಯಾವುದೇ ಇತಿಹಾಸ ಸೃಷ್ಟಿಸುತ್ತೇನೆ ಎಂದು ಹೊರಟವರು ಇತಿಹಾಸ ಸೃಷ್ಟಿಸಿಲ್ಲ. ನಾನು ಸುಮ್ಮನೆ ಶುರು ಮಾಡಿದೆ. ಸದ್ಯ ಎಲ್ಲವೂ ಸಹ ಹಾಗೆ ನಡೆಯುತ್ತಿದೆ. ಈ ಯಶಸ್ಸಿಗೆ ನಾನೊಬ್ಬನೇ ಕಾರಣ ಅಲ್ಲ. ಇಡೀ ಚಿತ್ರರಂಗದ ಸಹಕಾರ ಇದೆ. ಶಿವಣ್ಣ ಅವರು ತುಂಬಾ ಬೆಂಬಲ ನೀಡಿದ್ದಾರೆ. ಅಲ್ಲದೇ ಪುನೀತ್, ಉಪೇಂದ್ರ, ಯಶ್ ಎಲ್ಲರ ಬೆಂಬಲದಿಂದ ಇದು ಸಾಧ್ಯವಾಗಿದೆ ಎಂದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಲಂಕಾ ಆಟಗಾರ ತಿಲಕರತ್ನೆ ದಿಲ್ಶಾನ್ ಸೇರಿದಂತೆ ಹಲವು ಆಟಗಾರರು ಹಾಜರಾಗಿದ್ದರು.

  • ಕೆಪಿಎಲ್, ಸಿಸಿಎಲ್ ಆಯ್ತು, ಈಗ ಸ್ಯಾಂಡಲ್‍ವುಡ್ ನಲ್ಲಿ ಶುರುವಾಯ್ತು ಕೆಸಿಸಿ

    ಕೆಪಿಎಲ್, ಸಿಸಿಎಲ್ ಆಯ್ತು, ಈಗ ಸ್ಯಾಂಡಲ್‍ವುಡ್ ನಲ್ಲಿ ಶುರುವಾಯ್ತು ಕೆಸಿಸಿ

    ಬೆಂಗಳೂರು: ಕೆಪಿಎಲ್, ಸಿಸಿಎಲ್ ಆಯ್ತು. ಸ್ಯಾಂಡಲ್‍ವುಡ್‍ನಲ್ಲಿ ಇದೀಗ ನೂತನವಾಗಿ ಕೆಸಿಸಿ ಪಂದ್ಯಾವಳಿ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದ ‘ಕರ್ನಾಟಕ ಚಲನಚಿತ್ರ ಕಪ್’ ಕ್ರಿಕೆಟ್ ಟೂರ್ನಮೆಂಟ್ ಗೆ ಅದ್ಧೂರಿ ಚಾಲನೆ ಸಿಕ್ಕಿದೆ.

    ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಒಟ್ಟಿಗೆ ಸೇರಿ ಫೀಲ್ಡ್ ಗಿಳಿಯುವ ಸಮಯ ಬಂದಿದೆ. ಸಿಸಿಎಲ್ ಮಾದರಿಯಲ್ಲಿ ಕನ್ನಡ ಚಿತ್ರೋದ್ಯಮದವರು ಸೇರಿ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್‍ಗೆ ಸಿದ್ಧವಾಗಿದ್ದಾರೆ. ಶುಕ್ರವಾರದಂದು ನಗರದ ಅರಮನೆ ಮೈದಾನದಲ್ಲಿ ಕೆಸಿಸಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಈ ಸಮಾರಂಭಕ್ಕೆ ಸಾಕ್ಷಿಯಾದರು.

    ಕಿಚ್ಚ ಸುದೀಪ್ ಸಾರಥ್ಯದ ಕೆಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ನಟರಾದ ಪುನೀತ್ ರಾಜ್‍ಕುಮಾರ್, ಶಿವರಾಜ್‍ಕುಮಾರ್, ಸುದೀಪ್, ಧನಂಜಯ್, ರಕ್ಷಿತ್ ಶೆಟ್ಟಿ, ನಿರೂಪ್ ಭಂಡಾರಿ, ಅನೀಶ್, ಚಂದನ್, ಯೋಗಿ, ದಿಗಂತ್, ಜೆಕೆ ಸೇರಿದಂತೆ ನೂರಾರು ಕಲಾವಿದರು ಭಾಗವಹಿಸಲಿದ್ದಾರೆ.

    ಒಟ್ಟು ಆರು ತಂಡಗಳು, 10 ಓವರ್‍ಗಳ ಟಿ-10 ಪಂದ್ಯವಾಡಲಿವೆ. ಏಪ್ರಿಲ್ 7 ಮತ್ತು 8 ರಂದು ಬೆಂಗಳೂರಿನಲ್ಲಿ ಪಂದ್ಯಾವಳಿ ನಡೆಯಲಿದೆ. ಈ ಆರು ತಂಡಗಳಿಗೆ ಕ್ಯಾಪ್ಟನ್ ಬದಲು ಪೇಟ್ರನ್ಸ್ ಇರ್ತಾರೆ. ತಂಡಗಳ ಪೇಟ್ರನ್ಸ್ ಆಗಿ ನಿರ್ದೇಶಕ ಕೃಷ್ಣ, ಜಾಕ್ ಮಂಜು, ಸುದೀಪ್, ಸದಾಶಿವ ಶೆಣೈ, ಕೆ.ಪಿ.ಶ್ರೀಕಾಂತ್, ಇಂದ್ರಜಿತ್ ಲಂಕೇಶ್, ನಂದಕಿಶೋರ್ ಇರಲಿದ್ದಾರೆ.

    ಕೆಸಿಸಿ ಕಪ್‍ನಲ್ಲಿ ಬರೀ ಕಲಾವಿದರಷ್ಟೇ ಅಲ್ಲದೆ ನಿರ್ದೇಶಕರು, ತಂತ್ರಜ್ಞರು, ನಿರ್ಮಾಪಕರು ಮತ್ತು ಪೋಷಕನಟರು ಸಹ ಭಾಗಿಯಾಗಲಿದ್ದಾರೆ. ಹಾಗೆ ಈ ಟೂರ್ನಮೆಂಟ್ ನಲ್ಲಿ ಪತ್ರಕರ್ತರ ತಂಡವೂ ಇರಲಿದೆ. ಪ್ರತಿ ತಂಡದಲ್ಲೂ ಸ್ಟಾರ್ ಆಟಗಾರರು ಇರ್ತಾರೆ.