Tag: ಕೆಲಸ

  • ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ: ರಾಹುಲ್ ಗಾಂಧಿ

    ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ: ರಾಹುಲ್ ಗಾಂಧಿ

    – ಇಂದಿನ ದೇಶದ ಈ ಪರಿಸ್ಥಿತಿಗೆ ಮಾಧ್ಯಮಗಳೇ ಕಾರಣ

    ಮುಂಬೈ: ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.

    ಇಂದು ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಯುವಕರು ಕೇಂದ್ರ ಸರ್ಕಾರವನ್ನು ಕೆಲಸದ ಬಗ್ಗೆ ಕೇಳಿದಾಗ, ಬಿಜೆಪಿ ಸರ್ಕಾರ ಚಂದ್ರನ ಕಡೆ ತೋರಿಸುತ್ತಾರೆ. ದೇಶದ ಜನರನ್ನು ಬೇರೆ ಕಡೆ ಸೆಳೆಯುತ್ತಾರೆ ಎಂದು ಬಿಜೆಪಿ ಮೇಲೆ ಕಿಡಿಕಾರಿದರು.

    ಇತ್ತೀಚಿಗೆ ಪ್ರಧಾನಿ ಮೊದಿ ಅವರು, ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರನ್ನು ಭೇಟಿ ಮಾಡಿದರು, ಈ ಭೇಟಿಯಲ್ಲಿ ಅವರು 2017 ಚೀನಾದ ಸೈನ್ಯ ಭಾರತೀಯ ಭೂಪ್ರದೇಶದ ಮೇಲೆ ಅಕ್ರಮಣ ಮಾಡಿದರ ಬಗ್ಗೆ ಕೇಳಿಲ್ಲ. ಮೋದಿ ಅವರು ಮೇಕ್ ಇನ್ ಇಂಡಿಯಾ ಮಾಡುತ್ತಿಲ್ಲ. ಬದಲಾಗಿ ಮೇಕ್ ಇನ್ ಚೀನಾ ಮಾಡುತ್ತಿದ್ದಾರೆ ಎಂದು ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ದೇಶದ ಜನ ಉದ್ಯೋಗ ಮತ್ತು ಸಮಸ್ಯೆಗಳ ಬಗ್ಗೆ ಕೇಳಿದಾಗ, ಚಂದ್ರಯಾನ, 370ನೇ ವಿಧಿ ರದ್ದು ಈ ರೀತಿಯ ವಿಚಾರಗಳನ್ನು ತೋರಿಸಿ ಜನರ ಗಮನವನ್ನು ಬೇರೆ ಕಡೆ ಸಳೆಯುವುದು ಮಾಧ್ಯಮ, ಮೋದಿ ಮತ್ತು ಅಮಿತ್ ಶಾ ಅವರ ಕೆಲಸವಾಗಿದೆ. 370ನೇ ವಿಧಿ ಮತ್ತು ಚಂದ್ರಯಾನದ ಬಗ್ಗೆ ಸದಾ ಮಾತನಾಡುವ ಕೇಂದ್ರ ಸರ್ಕಾರ ದೇಶದ ಸಮಸ್ಯೆ ಬಗ್ಗೆ ಮೌನ ವಹಿಸಿದೆ ಎಂದು ಕಿಡಿಕಾರಿದರು.

    ಈ ವೇಳೆ ಮಾಧ್ಯಮಗಳ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ ಅವರು 15 ಜನ ಶ್ರೀಮಂತರ 5.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು. ಆಗ ಈ ಮಾಧ್ಯಮಗಳು ಮೋದಿಯನ್ನು ಪ್ರಶ್ನೆ ಮಾಡಲಿಲ್ಲ. ಇಂದಿನ ರೈತರ ಸಂಕಟ ದೇಶದಲ್ಲಿನ ಉದ್ಯೋಗದ ಕೊರತೆಗೆ ಮಾಧ್ಯಮಗಳು ಕೂಡ ಕಾರಣ ಎಂದು ಗುಡುಗಿದರು.

    ಮೋದಿ ಅವರ ಅಮಾನೀಕರಣದಿಂದ (ನೋಟ್ ಬ್ಯಾನ್) ಯಾರಿಗೆ ಲಾಭ ಸಿಕ್ಕಿತು. ಉದ್ಯಮಿ ನೀರವ್ ಮೋದಿ ದೇಶ ಬಿಟ್ಟು ಓಡಿ ಹೋದರು. ಪ್ರಧಾನಿ ಅವರ ನೋಟ್ ಬ್ಯಾನ್ ನಿಂದ ಬಡವರಿಗೆ ಪ್ರಯೋಜನವಾಗಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ಚಂದ್ರನ ಬಳಿ ರಾಕೆಟ್ ಕಳುಹಿಸುವುದರಿಂದ ಮಹಾರಾಷ್ಟ್ರದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ಮೋದಿ ಅವರ ಯೋಜನೆಗಳ ಮೇಲೆ ವಾಗ್ದಾಳಿ ಮಾಡಿದರು.

    ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮತ್ತು ನೋಟ್ ಬ್ಯಾನ್ ಉದ್ದೇಶ ಬಡವರ ಜೇಬಿನಲ್ಲಿರುವ ಹಣವನ್ನು ತೆಗೆದುಕೊಂಡು ಹೋಗಿ ಶ್ರೀಮಂತರಿಗೆ ನೀಡುವುದು ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

  • ಕೆಲಸದಿಂದ ಏಕಾಏಕಿ ತೆಗೆದಿದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಯತ್ನ

    ಕೆಲಸದಿಂದ ಏಕಾಏಕಿ ತೆಗೆದಿದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಯತ್ನ

    ಚಾಮರಾಜನಗರ: ಹಿರಿಯ ಅಧಿಕಾರಿಗಳು ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದು ಹೊರಗುತ್ತಿಗೆ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಿಡಿಪಿಒ ಕಚೇರಿಯಲ್ಲಿ ನಡೆದಿದೆ.

    ಹೊರಗುತ್ತಿಗೆ ನೌಕರ ಮೋಹನ್ ಕುಮಾರ್ (42) ಆತ್ಮಹತ್ಯೆಗೆ ಯತ್ನಿಸಿದ ನೌಕರ. ಮೋಹನ್ ಕುಮಾರ್ ಸಿಡಿಪಿಒ ಕಚೇರಿಯಲ್ಲಿ 3 ವರ್ಷಗಳಿಂದ ಮೆಸೆಂಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಮೋಹನ್ ಅವರನ್ನು ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಶನಿವಾರ ಮೋಹನ್ ಕುಮಾರ್ ಅವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿತ್ತು. ಈ ಕಾರಣಕ್ಕಾಗಿ ಮೋಹನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ವಿಷ ಸೇವಿಸಿದ ಮೋಹನ್ ಕುಮಾರ್ ರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಈ ಬಗ್ಗೆ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಂಬಳ ನೀಡದೇ ಕೆಲಸದಿಂದ ವಜಾ- ಮಹಿಳೆ ಆತ್ಮಹತ್ಯೆಗೆ ಯತ್ನ

    ಸಂಬಳ ನೀಡದೇ ಕೆಲಸದಿಂದ ವಜಾ- ಮಹಿಳೆ ಆತ್ಮಹತ್ಯೆಗೆ ಯತ್ನ

    ಮಂಡ್ಯ: ಸಂಬಳ ನೀಡದೆ ಕೆಲಸದಿಂದ ವಜಾ ಮಾಡಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಮಂಡ್ಯದ ಕೋಡಿ ಶೆಟ್ಟಿಪುರ ಗ್ರಾಮದಲ್ಲಿ ನಡೆದಿದೆ.

    28 ವರ್ಷದ ಸುನೀತಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದು, ಈಕೆ ಡಿಎಚ್‍ಒ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಡಿ ಗ್ರೂಪ್ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದರು. 11ತಿಂಗಳಿಂದ ಸಂಬಳ ನೀಡದೆ ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆ. ಸಂಬಳ ಕೇಳಲು ಹೋದಾಗ ಮಂಡ್ಯ ಜಿಲ್ಲಾ ಆರೋಗ್ಯ ಅಧಿಕಾರಿ ಮಂಚೇಗೌಡ ಅವರು ಕೆಲಸಕ್ಕೆ ಬಾರದಂತೆ ಹೇಳಿದ್ದಾರೆ ಎಂದು ಸುನೀತಾ ಆರೋಪ ಮಾಡಿದ್ದಾರೆ.

    ಇದರಿಂದ ಮನನೊಂದು ಮಹಿಳೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ ಸಂಬಳ ನೀಡಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸುನೀತಾ ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ಮಹಿಳೆಯರು ತಾವೇ ಸ್ಕೂಟಿಯಲ್ಲಿ ತೆರಳಿ ಕೃಷಿ ಕೆಲಸ ಮಾಡ್ತಾರೆ

    ಮಹಿಳೆಯರು ತಾವೇ ಸ್ಕೂಟಿಯಲ್ಲಿ ತೆರಳಿ ಕೃಷಿ ಕೆಲಸ ಮಾಡ್ತಾರೆ

    – ಪುರುಷರನ್ನು ಅವಲಂಬಿಸಲ್ಲ
    -ಸಮಯ ಉಳಿಸಲು ಈ ಉಪಾಯ

    ಹೈದರಾಬಾದ್: ತೆಲಂಗಾಣದಲ್ಲಿರುವ ಸಣ್ಣ ಹಳ್ಳಿ ಲಕ್ಷ್ಮೀಪುರ ಇದೀಗ ಮಹಿಳಾ ಸಬಲೀಕರಣದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದ್ದು, ಮಹಿಳೆಯರು ತಾವೇ ಸ್ಕೂಟಿಯಲ್ಲಿ ತೋಟಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾರೆ.

    ಲಕ್ಷ್ಮೀಪುರ ಗ್ರಾಮ ಜಗ್ತಿಯಾಲ್‍ದಿಂದ ಸುಮಾರು ಏಳು ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ರೈತ ಮಹಿಳೆಯರು ವಿವಿಧ ಕೆಲಸಗಳಿಗೆ ಹೋಗಲು ಪುರುಷರ ಸಹಾಯಕ್ಕಾಗಿ ಕಾಯುವುದಿಲ್ಲ. ಬದಲಾಗಿ ಪ್ರತಿದಿನ ತಮ್ಮದೇ ಆದ ದ್ವಿಚಕ್ರ ವಾಹನವನ್ನು ತಾವೇ ಓಡಿಸಿಕೊಂಡು ತೋಟಗಳಿಗೆ ಹೋಗಿ ಕೆಲಸ ಮಾಡಿ ಬರುತ್ತಾರೆ. ಅಷ್ಟೇ ಅಲ್ಲದೆ ಇತರೆ ಮಹಿಳಾ ಕಾರ್ಮಿಕರನ್ನು ತಮ್ಮ ವಾಹನದ ಮೇಲೆ ಕರೆದುಕೊಂಡು ಹೋಗುತ್ತಾರೆ.

    ಲಕ್ಮೀಪುರದಲ್ಲಿ ಒಟ್ಟು 5 ಸಾವಿರ ಜನಸಂಖ್ಯೆ ಇದೆ. ಅದರಲ್ಲಿ 1200 ಕುಟುಂಬಗಳು ಮಾತ್ರ ಕೃಷಿಯನ್ನು ಅವಲಂಭಿಸಿವೆ. ಇಲ್ಲಿ ರೈತ ಮಹಿಳೆಯರು ಪುರುಷರ ಜೊತೆ ಕೃಷಿ ಕೆಲಸವನ್ನು ಮಾಡುತ್ತಾರೆ. ಜೊತೆಗೆ ತೋಟಕ್ಕೆ ಹೋಗಲು ಪುರಷರನ್ನು ಕಾಯದೆ ತಮ್ಮ ಸ್ಕೂಟಿಗಳ ಮೂಲಕ ಹೊಲಕ್ಕೆ ಹೋಗುತ್ತಾರೆ. ಅದೇ ಸ್ಕೂಟಿಯಲ್ಲಿ ತರಕಾರಿಯನ್ನು ಜಗ್ತಿಯಾಲ್ ಮಾರುಕಟ್ಟೆಗೆ ಸ್ವತಃ ಅವರೇ ಸಾಗಿಸುತ್ತಾರೆ.

    ನಾವು ಮಹಿಳೆಯಾದರೂ ಪುರುಷರಿಗಿಂತ ಹೆಚ್ಚು ಕೆಲಸ ಮಾಡುತ್ತೇವೆ. ನಮ್ಮ ತೋಟಕ್ಕೂ ಮನೆಗೂ ಸುಮಾರು ಮೂರು ಕಿ.ಮೀ. ದೂರವಿದೆ. ಹೀಗಾಗಿ ನಾನು ತೋಟಕ್ಕೆ ಹೋಗುವ ಸಮಯವನ್ನು ಉಳಿಸುವ ಸಲುವಾಗಿ ಸ್ಕೂಟಿಯಲ್ಲಿ ಹೋಗುತ್ತೇವೆ. ಎಲ್ಲ ಕೆಲಸಗಳಿಗೆ ಪುರುಷರನ್ನು ಅವಲಂಭಿಸಿಲ್ಲ ಎಂದು ರೈತ ಮಹಿಳೆ ಎಸ್ ಸರಿತಾ ಹೇಳಿದ್ದಾರೆ.

    ಲಕ್ಷ್ಮೀಪುರ ಗ್ರಾಮದಲ್ಲಿ ಸುಮಾರು 70ಕ್ಕೂ ಅಧಿಕ ರೈತ ಮಹಿಳೆಯರು ಸ್ಕೂಟಿಯಲ್ಲೇ ತೋಟಕ್ಕೆ ಹೋಗುತ್ತಾರೆ. ಈ ಗ್ರಾಮದಲ್ಲಿ, ಅರಿಶಿಣ, ಶುಂಠಿ, ಬಾಳೆಹಣ್ಣು, ಕಡಲೆಕಾಯಿ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಇಲ್ಲಿ ಹೆಚ್ಚಾಗಿ ಟೊಮೆಟೋ ಬೆಳೆಯುತ್ತಾರೆ. ಪುರುಷರು ಕೂಡ ತಮ್ಮ ಕೃಷಿ ಕೆಲಸದಲ್ಲಿ ಮಹಿಳೆಯರು ಸಹಾಯ ಮಾಡುತ್ತಿರುವುದರಿಂದ ಸಂತೋಷ ವ್ಯಕ್ತಪಡಿಸಿದ್ದಾರೆ.

  • ತಂದೆಯ ಕೆಲಸ ಮರಳಿ ಕೊಡಿ- ಪ್ರಧಾನಿಗೆ ಬಾಲಕನಿಂದ 37ನೇ ಪತ್ರ

    ತಂದೆಯ ಕೆಲಸ ಮರಳಿ ಕೊಡಿ- ಪ್ರಧಾನಿಗೆ ಬಾಲಕನಿಂದ 37ನೇ ಪತ್ರ

    ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ 8ನೇ ತರಗತಿಯ ಬಾಲಕನೊಬ್ಬ ತನ್ನ ತಂದೆಯ ಕೆಲಸವನ್ನು ಮರಳಿ ಕೊಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಬರೋಬ್ಬರಿ 37 ಪತ್ರವನ್ನು ಬರೆದಿದ್ದಾನೆ.

    ಸರ್ಥಕ್ ತ್ರಿಪಾಠಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಬಾಲಕ. ಈತನ ತಂದೆ ಉತ್ತರ ಪ್ರದೇಶದಲ್ಲಿ ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ(ಯುಪಿಎಸ್‍ಇ)ಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ತಂದೆ ಕೆಲಸ ಕಳೆದುಕೊಂಡಿದ್ದರಿಂದ ನಮ್ಮ ಕುಟುಂಬದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಾಲಕ ಪತ್ರದಲ್ಲಿ ತಿಳಿಸಿದ್ದಾನೆ. ಜೊತೆಗೆ ತನ್ನ ತಂದೆಗೆ ಕೆಲಸವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ತಮ್ಮ ತಂದೆಯನ್ನು ಯುಪಿಎಸ್‍ಇ ಕೆಲಸದಿಂದ ಬಲವಂತವಾಗಿ ಕಳುಹಿಸಿದ್ದಾರೆ ಎಂದು ಬಾಲಕ ತಿಳಿಸಿದ್ದಾನೆ.

    13 ವರ್ಷದ ಈ ಬಾಲಕ 2016ರಿಂದ ಮೋದಿಗೆ ಪತ್ರಗಳನ್ನು ಬರೆಯುತ್ತಿದ್ದಾನೆ. ಇದುವರೆಗೆ 36 ಪತ್ರಗಳನ್ನು ಬರೆದಿದ್ದಾನೆ. ಆದರೆ ಪ್ರಧಾನಿ ಮೋದಿ ಅವರಿಂದ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

    ಬಾಲಕ ಪತ್ರದಲ್ಲಿ ನಾನು “ಮೋದಿ ಹೈ ತೊ ಮಮ್ಕಿನ್ ಹೈ”(ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬ ಘೋಷಣೆಯನ್ನು ಕೇಳಿದ್ದೇನೆ. ಹಾಗಾಗಿ ನಿಮಗೆ ಪತ್ರ ಬರೆಯುತ್ತಿದ್ದೇನೆ. ದಯವಿಟ್ಟು ಒಂದು ಸಾರಿ ನನ್ನ ಮನವಿಯನ್ನು ಕೇಳಿ ಮತ್ತು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

    ಕಾರಣ ಇಲ್ಲದೆ ಕೆಲ ಜನರು ಸೇರಿ ನನ್ನ ತಂದೆಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಹಾಗಾಗಿ ನನ್ನ ತಂದೆಗೆ ಸಹಾಯ ಮಾಡುವಂತೆ ನಾನು ಮೋದಿಯ ಬಳಿ ಕೋರಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಜೊತೆಗೆ ನನ್ನ ತಂದೆಗೆ ಅನ್ಯಾಯ ಮಾಡಿದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕು ಎಂದು ಬಾಲಕ ಒತ್ತಾಯಿಸಿದ್ದಾನೆ.

  • ತಲಾ 1.10 ಲಕ್ಷದಂತೆ ಹಣ ಪಡೆದು 76 ವಿದ್ಯಾರ್ಥಿಗಳಿಗೆ ಪ್ರಾಂಶುಪಾಲನಿಂದ ಮೋಸ!

    ತಲಾ 1.10 ಲಕ್ಷದಂತೆ ಹಣ ಪಡೆದು 76 ವಿದ್ಯಾರ್ಥಿಗಳಿಗೆ ಪ್ರಾಂಶುಪಾಲನಿಂದ ಮೋಸ!

    ಕಾರವಾರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಳೆದ 2016ರಿಂದ ಕಲ್ಪತರು ಎನ್ನುವ ಹೋಟೆಲ್ ಮ್ಯಾನೇಜ್‍ಮೆಂಟ್ ಕಾಲೇಜು ಪ್ರಾರಂಭವಾಗಿತ್ತು. ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್ ಮುಗಿಸಿದರೆ ವಿದೇಶದಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ವಿದ್ಯಾರ್ಥಿಗಳನ್ನು ಕೋರ್ಸ್‍ಗೆ ದಾಖಲಾತಿ ಮಾಡಿಕೊಂಡಿದ್ದನು.

    ಕಾಲೇಜು ಶುಲ್ಕ ಎಂದು ಪ್ರತಿಯೊಬ್ಬರಿಂದ 60 ಸಾವಿರ ಹಣ ಸಹ ಪಡೆದಿದ್ದ. ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಹಾಂಕಾಂಗ್‍ನಲ್ಲಿ ಕೆಲಸ ಕೊಡಿಸುವುದಾಗಿ ಸುಮಾರು 76 ವಿದ್ಯಾರ್ಥಿಗಳಿಂದ ತಲಾ 1.10 ಲಕ್ಷದಂತೆ 83,60,000 ಲಕ್ಷ ಪಡೆದಿದ್ದಾನೆ. ಆದರೆ ಸಾಲಸೋಲ ಮಾಡಿ ಹಣ ಖರ್ಚು ಮಾಡಿದ್ದ ವಿದ್ಯಾರ್ಥಿಗಳು ಇದೀಗ ಕೆಲಸ ಇಲ್ಲದೆ ಕೊಟ್ಟ ಹಣವೂ ವಾಪಾಸ್ ಸಿಗದೇ ಬೀದಿಗೆ ಬಿದ್ದು ನ್ಯಾಯಕ್ಕಾಗಿ ಹೋರಾಡುತಿದ್ದಾರೆ.

    2016ರಿಂದ ಪ್ರಾಂಶುಪಾಲನಾಗಿ ಸೇರಿಕೊಂಡಿದ್ದ ಗಂಗಾಧರ್ ಕಾಲೇಜಿನಲ್ಲಿ ಮೊದಲ ಬ್ಯಾಚ್‍ನವರು ಕೋರ್ಸ್ ಮುಗಿಸಿ ಎರಡನೇ ಬ್ಯಾಚ್‍ನವರು ಪರೀಕ್ಷೆ ಬರೆದಿದ್ದು, ಕೆಲಸಕ್ಕಾಗಿ ಕಾಯುವ ವೇಳೆ ವಂಚನೆಗೊಳಗಾಗಿರುವುದು ತಿಳಿದು ಬಂದಿದೆ. ಅಲ್ಲದೆ ಒಳ್ಳೆಯವನಂತೆ ನಟಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದನು.

    ವಿದೇಶದಲ್ಲಿ ಕೆಲಸ ಸಿಗುತ್ತೆ ಎಂದು ಎಲ್ಲರೂ ಹಣವನ್ನು ಕಟ್ಟಿದ್ದು ಪಾಸ್‍ಪೋರ್ಟ್ ಮಾಡಿಸಿಕೊಂಡ ನಂತರ ಪ್ರವಾಸಿಗರಿಗೆ ಕೊಡುವ ವೀಸಾವನ್ನು ಹೊರದೇಶಕ್ಕೆ ಕೆಲಸಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ನೀಡಿದ್ದನು. ಮೆಡಿಕಲ್ ಮಾಡಿಸಬೇಕು, ಬೇರೆ ಸರ್ಟಿಫಿಕೇಟ್ ಮಾಡಿಸಬೇಕು ಎಂದು ಹಲವು ಬಾರಿ ಈ ಪ್ರಾಂಶುಪಾಲ ವಿದ್ಯಾರ್ಥಿಗಳಿಂದ ಹಣ ಪಡೆದು ಪರಾರಿಯಾಗಿದ್ದಾನೆ.

  • ಕೆಲಸದಿಂದ ತೆಗೆದಿದ್ದಕ್ಕೆ ಯುವತಿಯಿಂದ ಆತ್ಮಹತ್ಯೆ ಬೆದರಿಕೆ

    ಕೆಲಸದಿಂದ ತೆಗೆದಿದ್ದಕ್ಕೆ ಯುವತಿಯಿಂದ ಆತ್ಮಹತ್ಯೆ ಬೆದರಿಕೆ

    ಗುರುಗ್ರಾಮ: ಕೆಲಸದಿಂದ ತೆಗೆದಿದ್ದಕ್ಕೆ ಯುವತಿಯೊಬ್ಬಳು ಕಚೇರಿಯ ಟೆರೇಸ್‍ಗೆ ತಲುಪಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಮಾಡಿದ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಯುವತಿ ಗುರುಗ್ರಾಮ ಸೆಕ್ಟರ್ 18ನಲ್ಲಿರುವ ಪ್ರೈವೇಟ್ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು. ಯಾವುದೋ ಕಾರಣಕ್ಕಾಗಿ ಯುವತಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಆಘಾತಗೊಂಡ ಯುವತಿ ಕಟ್ಟಡದ ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಳೆ.

    ಯುವತಿ ಟೆರೇಸ್‍ಗೆ ಹೋಗಿ ಕಟ್ಟಡದ ಅಂಚಿನಲ್ಲಿ ನಿಂತು ಇಲ್ಲಿಂದ ಹಾರುವುದಾಗಿ ಕಿರುಚುತ್ತಿದ್ದಳು. ಇದನ್ನು ಕೇಳಿದ ಆಕೆಯ ಸಹದ್ಯೋಗಿಗಳು ಹಾಗೂ ಕೌನ್ಸಲರ್‍ಗಳು ಯುವತಿಯನ್ನು ತಡೆಯಲು ಮುಂದಾದರು. ಆದರೆ ಯುವತಿ ಇವರ ಯಾರ ಮಾತನ್ನು ಒಪ್ಪಲಿಲ್ಲ.

    ಯುವತಿಯ ವರ್ತನೆ ನೋಡಿದ ಆಕೆಯ ಸಹದ್ಯೋಗಿಗಳು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಯುವತಿ ಪೊಲೀಸರನ್ನು ನೋಡಿ ಕೋಪಗೊಂಡು ಜಿಗಿಯುವುದಾಗಿ ಬೆದರಿಕೆ ಹಾಕಿದ್ದಳು.

    ಯುವತಿಯ ವರ್ತನೆಗೆ ಬೇಸೆತ್ತ ಕಂಪನಿಯ ಆಡಳಿತ ಮಂಡಳಿ ಕೆಲಸದಿಂದ ತೆಗೆಯುವುದಿಲ್ಲ ಎಂದು ಮಾತು ನೀಡಿದ್ದರು. ಆಗ ಯುವತಿ ಕಟ್ಟಡದಿಂದ ಕೆಳಗೆ ಇಳಿದಿದ್ದು, ಸಹದ್ಯೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

  • ವಿದೇಶದಲ್ಲಿ ಕೆಲಸದ ಆಫರ್ – ಲಕ್ಷಾಂತರ ರೂ. ಹಣ ಪಡೆದು ಪ್ರಿನ್ಸಿಪಾಲ್ ಪರಾರಿ

    ವಿದೇಶದಲ್ಲಿ ಕೆಲಸದ ಆಫರ್ – ಲಕ್ಷಾಂತರ ರೂ. ಹಣ ಪಡೆದು ಪ್ರಿನ್ಸಿಪಾಲ್ ಪರಾರಿ

    ಕಾರವಾರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಪ್ರಾಂಶುಪಾಲನೋರ್ವ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಪರಾರಿಯಾದ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.

    ಹೊನ್ನಾವರದಲ್ಲಿ ಕಳೆದ 2016ರಿಂದ ‘ಕಲ್ಪತರು’ ಹೆಸರಿನಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜು ಪ್ರಾರಂಭವಾಗಿತ್ತು. ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮುಗಿಸಿದರೆ ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಕಾಲೇಜಿನ ಪ್ರಾಂಶುಪಾಲ ಚೆನ್ನೈ ಮೂಲದ ಗಂಗಾಧರ ವಿದ್ಯಾರ್ಥಿಗಳನ್ನು ಕೋರ್ಸ್‍ಗೆ ದಾಖಲು ಮಾಡಿಕೊಂಡಿದ್ದ.

    ಕಾಲೇಜು ಶುಲ್ಕ ಎಂದು ಪ್ರತಿಯೊಬ್ಬರಿಂದ 60 ಸಾವಿರ ಹಣವನ್ನು ಸಹ ಪಡೆದಿದ್ದ. ಇನ್ನು ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಹಾಂಕಾಂಗ್‍ನಲ್ಲಿರುವ ‘ಶಾಂಗ್ರಿಲಾ’ ಹೋಟೆಲ್ ನಲ್ಲಿ ಕೆಲಸ ಕೊಡಿಸುವುದಾಗಿ ಪ್ರಾಂಶುಪಾಲ ಗಂಗಾಧರ ಸುಮಾರು 76 ವಿದ್ಯಾರ್ಥಿಗಳಿಂದ 1.10 ಲಕ್ಷ ಹಣವನ್ನ ಪಡೆದಿದ್ದ. ವಿದ್ಯಾರ್ಥಿಗಳಿಗೆ ಪಾಸ್ ಪೋರ್ಟ್ ವೀಸಾ ಮಾಡಿಸಿ ಕೆಲಸಕ್ಕೆ ಕಳುಹಿಸುವುದಾಗಿ ಹೇಳಿ ಮೇ 6ರಂದು ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ. ಅಲ್ಲಿಂದ ಮೇ 10 ರಂದು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಹೋಟೆಲ್ ಒಂದರಲ್ಲಿ ತಂಗುವಂತೆ ಹೇಳಿ ಶಾಂಗ್ರಿಲಾ ಹೋಟೆಲ್ ನವರು ಇಲ್ಲಿ ಸಂದರ್ಶನ ತೆಗೆದುಕೊಳ್ಳುತ್ತಾರೆ ಎಂದು ಪ್ರಾಂಶುಪಾಲ ಹೇಳಿದ್ದ.

    ಮೇ 12 ರಂದು ಗಂಗಾಧರ, ನಾನು ಕೆಲಸ ಇರುವ ಕಾರಣ ಮುಂಬೈಗೆ ಹೋಗುತ್ತಿದ್ದೇನೆ. ಒಂದು ವಾರದ ಒಳಗೆ ಬಂದು ನಿಮ್ಮ ಹಣ ವಾಪಸ್ ಕೊಡುತ್ತೇನೆ ಎಂದು ವಾಟ್ಸಪ್ ಮೆಸೇಜ್ ಮಾಡಿದ್ದಾನೆ. ಇದಾದ ನಂತರ ಕಷ್ಟಪಟ್ಟು ಹೋಟೆಲ್ ಬಿಲ್ ಕಟ್ಟಿ ವಾಪಸ್ ಊರಿಗೆ ಬಂದ ವಿದ್ಯಾರ್ಥಿಗಳು ಒಂದು ವಾರ ಪ್ರಾಂಶುಪಾಲನಿಗಾಗಿ ಕಾದರೂ ಪ್ರಾಂಶುಪಾಲ ಮಾತ್ರ ವಾಪಸ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಂಚನೆಗೊಳಗಾದ ವಿದ್ಯಾರ್ಥಿಗಳು ನ್ಯಾಯ ಕೊಡಿಸುವಂತೆ ಅಪರ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಕೆಲಸ ಸಿಕ್ಕಿದ ಮೇಲೆ ಕಷ್ಟ ನಿವಾರಣೆ ಆಗುತ್ತದೆ ಎಂದು ಸಾಲ ಮಾಡಿ ಹಣ ಖರ್ಚು ಮಾಡಿದ್ದ ವಿದ್ಯಾರ್ಥಿಗಳು ಇದೀಗ ಕೆಲಸವೂ ಇಲ್ಲದೇ ಕೊಟ್ಟ ಹಣವೂ ವಾಪಸ್ ಸಿಗದೇ ಬೀದಿಗೆ ಬಿದ್ದು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

    ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಹಣವನ್ನು ಹೇಗಾದರೂ ಮಾಡಿ ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

  • ಕುವೈಟ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದ 35 ಮಂದಿ ಮಂಗ್ಳೂರಿಗರು!

    ಕುವೈಟ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದ 35 ಮಂದಿ ಮಂಗ್ಳೂರಿಗರು!

    ಮಂಗಳೂರು: ಜಿಲ್ಲೆಯ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಇರುವ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‍ಮೆಂಟ್ ಎನ್ನುವ ಕಂಪನಿಯಿಂದ ಮೋಸಕ್ಕೊಳಗಾದ 35 ಮಂದಿ ಮಂಗಳೂರಿಗರು ಕಳೆದ 6 ತಿಂಗಳಿನಿಂದ ಕುವೈಟ್‍ನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.

    ಕುವೈಟ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‍ಮೆಂಟ್ ಕಂಪನಿಯ ಪ್ರಸಾದ್ ಶೆಟ್ಟಿ ಎಂಬವರು ಪ್ರತಿಯೊಬ್ಬರಿಂದ 65 ಸಾವಿರ ರೂ. ವಸೂಲಿ ಮಾಡಿದ್ದರು. ಇದನ್ನು ನಂಬಿ ಕುವೈಟ್‍ಗೆ ತೆರಳಿದ್ದ ಜನರು ಮಾತ್ರ ಸರಿಯಾದ ಕೆಲಸ ದೊರೆಯದೆ, ಕಳೆದ 6 ತಿಂಗಳಿಂದ ಪರದಾಡುತ್ತಿದ್ದಾರೆ.

    ಪ್ರಸ್ತುತ ಊಟಕ್ಕೂ ಗತಿಯಿಲ್ಲದೆ ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗದೆ ಕೊನೆಯದಾಗಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಅವರನ್ನು ವಿಡಿಯೋ ರೆಕಾರ್ಡ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.

    ಸಂತ್ರಸ್ತರ ವಿಡಿಯೋ ವೈರಲ್‍ಗೊಳ್ಳುವ ಮೂಲಕ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ತಲುಪಿದ್ದು, ಕೂಡಲೇ ಸ್ಪಂದಿಸಿದ ಶಾಸಕರು ಕುವೈಟ್‍ನಲ್ಲಿರುವ ತನ್ನ ಗೆಳೆಯರನ್ನು ಸಂಪರ್ಕಿಸಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

    ಅಲ್ಲದೆ ಕೇಂದ್ರ ಸಚಿವಾಲಯದ ಮೂಲಕ ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿ ಸಂತ್ರಸ್ತರನ್ನು ಹಿಂದಕ್ಕೆ ಕರೆಸಿಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಕ್ರಮ ಕೈಗೊಂಡಿದ್ದಾರೆ. ಇಂದು ಇಂಡಿಯನ್ ಎಂಬೆಸಿ ಸಂತ್ರಸ್ತರನ್ನು ಭೇಟಿಯಾಗಲಿದೆ.

  • ಮಗನ ಜೊತೆಗಿನ ಎಮೋಶನಲ್ ವಿಡಿಯೋ ಹಂಚಿಕೊಂಡ ಪೊಲೀಸ್ ಅಧಿಕಾರಿ

    ಮಗನ ಜೊತೆಗಿನ ಎಮೋಶನಲ್ ವಿಡಿಯೋ ಹಂಚಿಕೊಂಡ ಪೊಲೀಸ್ ಅಧಿಕಾರಿ

    ಭುವನೇಶ್ವರ: ಕೆಲಸಕ್ಕೆ ಹೋಗುತ್ತಿದ್ದ ತಂದೆಯ ಕಾಲು ಹಿಡಿದು ಹೋಗಬೇಡ ಎಂದು ಮಗ ಅತ್ತು ಗೋಗರೆಯುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪೊಲೀಸ್ ಅಧಿಕಾರಿ ಅರುಣ್ ಬೋತ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, “ಪೊಲೀಸ್ ವೃತ್ತಿಯಲ್ಲೇ ಇದು ತುಂಬಾ ಭಾವುಕವಾದ ಕ್ಷಣ. ಏಕೆಂದರೆ ಕಷ್ಟದ ಸಮಯದಲ್ಲೂ ಪೊಲೀಸರು ಇಂತಹ ಕ್ಷಣಗಳನ್ನು ಎದುರಿಸಬೇಕಾಗುತ್ತದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಮಗ ತನ್ನ ತಂದೆಯ ಕಾಲು ಹಿಡಿದುಕೊಂಡು ಕೆಲಸಕ್ಕೆ ಹೋಗಬೇಡ ಎಂದು ಜೋರಾಗಿ ಅಳುತ್ತಿದ್ದಾನೆ. ತಂದೆ ಕೂಡ ನಾನು ಬೇಗ ಹಿಂತಿರುಗುತ್ತೇನೆ ಎಂದು ಸಮಾಧಾನಪಡಿಸಲು ಮುಂದಾಗುತ್ತಾರೆ. ಆದರೆ ತಂದೆಯ ಮಾತನ್ನು ಕೇಳದ ಬಾಲಕ ಅವರ ಕಾಲನ್ನು ಹಿಡಿದುಕೊಂಡು ಜೋರಾಗಿ ಅತ್ತಿದ್ದಾನೆ.

    ಈ ವಿಡಿಯೋ 1 ನಿಮಿಷ 25 ಸೆಕೆಂಡ್‍ಗಳಿದ್ದು, ನೋಡುವವರ ಮನ ಕರಗುವಂತೆ ಮಾಡುತ್ತಿದೆ. ಕೆಲವರು ಈ ವಿಡಿಯೋ ನೋಡಿ ಅಪ್ಪ- ಮಗನ ಬಾಂಧವ್ಯ ನೋಡಿ ಸಂತಸಪಟ್ಟರೆ, ಮತ್ತೆ ಕೆಲವರು ಈ ವಿಡಿಯೋ ನೋಡಿ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

    ಸದ್ಯ ಈ ವೈರಲ್ ವಿಡಿಯೋ 1 ಲಕ್ಷಕ್ಕೂ ಅಧಿಕ ವ್ಯೂ ಪಡೆದಿದೆ. ಅಲ್ಲದೆ 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 5 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್‍ಗಳು ಪಡೆದುಕೊಂಡಿದೆ.

    https://twitter.com/arunbothra/status/1122326391620427777?ref_src=twsrc%5Etfw%7Ctwcamp%5Etweetembed%7Ctwterm%5E1122326391620427777&ref_url=https%3A%2F%2Fwww.punjabkesari.in%2Fnational%2Fnews%2Fthe-police-shared-the-son-with-the-emotional-video-987841