ಬೆಂಗಳೂರು: ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಎಂಬಿಎ ಪದವೀಧರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ.ದಾಸರಹಳ್ಳಿಯಲ್ಲಿ ನಡೆದಿದೆ.
ಅಶ್ವತ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಶ್ವತ್ ತಂದೆ ತಾಯಿ ಮೂಲತಃ ನಂಜನಗೂಡಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಪೋಷಕರು ಇದ್ದ ಒಬ್ಬ ಮಗನನ್ನು ಕಷ್ಟಪಟ್ಟು ಎಂಬಿಎ ಓದಿಸಿದ್ದರು. ಅಶ್ವತ್ ಇತ್ತೀಚೆಗಷ್ಟೆ ಎಂಬಿಎ ಪದವಿ ಮುಗಿಸಿದ್ದನು. ಆದರೆ ಹುಡುಗರ ಸಹವಾಸಕ್ಕೆ ಬಿದ್ದು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದನು.
ಓದು ಮುಗಿದ ಮೇಲೂ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದೀಯಾ. ಅಲ್ಲದೆ ಹುಡುಗರ ಜೊತೆ ಸೇರಿಕೊಂಡು ಪರೋಡಿ ಬೀಳುತ್ತಿದ್ದೀಯಾ ಕೆಲಸಕ್ಕೆ ಹೋಗು ಎಂದು ತಾಯಿ ಬುದ್ಧಿವಾದ ಹೇಳಿ ಕೆಲಸಕ್ಕೆ ಹೋಗಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಮಗ ಅಶ್ವತ್, ತಂದೆ-ತಾಯಿ ಇಬ್ಬರು ಕೆಲಸಕ್ಕೆ ಹೋಗಿರುವಾಗ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಯಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಹಾಲಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಳಗಡೆ ಹೋಗಿ ನೋಡುವಷ್ಟರಲ್ಲಿ ಅಶ್ವತ್ ಸಾವನ್ನಪ್ಪಿದ್ದನು.
ಈ ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇತ್ತ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ರಾಮನಗರ: ಬಿಬಿಎಂಪಿಯಲ್ಲಿ ಹಾಗೂ ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಪದವೀಧರರಿಂದ ಲಕ್ಷಾಂತರ ರೂಪಾಯಿ ಪೀಕುತ್ತಿದ್ದ ಜಿಲ್ಲೆಯ ಖತರ್ನಾಕ್ ದಂಪತಿ ಜೈಲುಪಾಲಾಗಿದ್ದಾರೆ.
ಕನಕಪುರ ತಾಲೂಕಿನ ಯಡುವನಹಳ್ಳಿ ಗ್ರಾಮದ ಚೇತನ್ ಹಾಗೂ ಕನಕಪುರದ ಹೌಸಿಂಗ್ ಬೋರ್ಡ್ ನಿವಾಸಿ ಬೇಬಿ ಬೆನಕಜಾದವ್ ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ ದಂಪತಿ. ಆರೋಪಿ ಚೇತನ್ ತಾನು ಬಿಬಿಎಂಪಿಯಲ್ಲಿ ಮುಖ್ಯ ಹಿರಿಯ ಅಧಿಕಾರಿ ಎಂದು ಲೆಟರ್‍ಹೆಡ್, ಸೀಲು, ತಯಾರಿಸಿಕೊಂಡಿದ್ದ. ಆ ಮೂಲಕ ಯುವಕರಿಗೆ ಗಾಳ ಹಾಕಿದ್ದ ಚೇತನ್ ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬರೋಬ್ಬರಿ 70ಕ್ಕೂ ಹೆಚ್ಚು ಯುವಕರಿಗೆ ಪಂಗನಾಮ ಹಾಕಿದ್ದಾನೆ. ಸರ್ಕಾರಿ ಕೆಲಸ ಸಿಗುತ್ತೆ ಅಂತಾ ಸಾಲ ಮಾಡಿ, ಜಮೀನು ಮಾರಿ, ಒಡವೆಗಳನ್ನು ಅಡವಿಟ್ಟು ಹಣ ಕೊಟ್ಟ ಯುವಕರಿಗೆ ಇದೀಗ ದಿಕ್ಕು ತೋಚದಂತಾಗಿದೆ.
ಯುವಕರನ್ನೇ ಟಾರ್ಗೇಟ್ ಮಾಡಿಕೊಂಡಿದ್ದ ಚೇತನ್ ಪತ್ನಿ ಬೇಬಿ ಬೆನಕಜಾದವ್ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಲಕ್ಷಾಂತರ ರೂಪಾಯಿ ಪೀಕಿದ್ದಾರೆ. ಕೆಲಸವಿಲ್ಲದೇ ಡಿಗ್ರಿ ಮಾಡಿ ಓಡಾಡುತ್ತಿದ್ದ ನಿರುದ್ಯೋಗಿ ಯುವಕರು ಕೆಲಸ ಸಿಗುತ್ತೆ ಅಂತೇಳಿ ಹಣ ಕೊಟ್ಟು ಇಂಗು ತಿಂದ ಮಂಗನಂತಾಗಿದ್ದರೆ, ಇದೀಗ ನಿರುದ್ಯೋಗಿ ಯುವಕರಿಗೆ ಪಂಗನಾಮ ಹಾಕಿದ್ದ ಕಿಲಾಡಿ ಜೋಡಿ ಪೊಲೀಸರ ಅತಿಥಿಯಾಗಿದ್ದಾರೆ.
ಬಿಬಿಎಂಪಿಯಲ್ಲಿ ಏನು ಕೆಲಸ:
ಬಿಬಿಎಂಪಿಯಲ್ಲಿ ಸರ್ಕಾರಿ ಕೆಲಸವಿದ್ದು 1 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ 23 ಸಾವಿರ ರೂ. ವೇತನ ನೀಡುತ್ತಾರೆ. ಅದರಲ್ಲಿ ಇಎಸ್‍ಐ, ಪಿಎಫ್ ಕಡಿತಗೊಳಿಸಿ 21 ಸಾವಿರ ರೂ. ವೇತನ ಸಿಗುತ್ತದೆ ಎಂದು ಕೆಲವು ಪದವೀಧರರಿಗೆ ಮೊದಲು ಚೇತನ್ ಹಾಗೂ ಬೇಬಿ ಬಲೆ ಬೀಸಿ ಅವರಿಂದ ಹಣವನ್ನ ಪೀಕಿದ್ದರು. ಅಷ್ಟೇ ಅಲ್ಲದೆ ಬಿಬಿಎಂಪಿಯ ನಕಲಿ ಲೆಟರ್‍ಹೆಡ್, ನಕಲಿ ಸೀಲ್‍ಗಳನ್ನು ಬಳಸಿಕೊಂಡು ಕೆಲವು ಯುವಕರಿಗೆ ಕೆಲಸದ ಅಪಾಯಿಂಟ್‍ಮೆಂಟ್ ಲೆಟರ್ ನೀಡಿದ್ದಾರೆ.
ಅಪಾಯಿಂಟ್‍ಮೆಂಟ್ ಲೆಟರ್ ಪಡೆದ ಯುವಕರಿಗೆ ಬಿಬಿಎಂಪಿಯ ಐಡಿ ಕಾರ್ಡ್ ಗಳನ್ನು ತಾವೇ ತಯಾರಿಸಿ ನೀಡಿದ್ದಾರೆ. ಜೊತೆಗೆ ಬೆಂಗಳೂರಿನ ವಾರ್ಡ್ ವಾರು ಸ್ವಚ್ಛತೆ ಬಗ್ಗೆ ಫೀಲ್ಡ್ ವರ್ಕ್ ಮಾಡಬೇಕು. ನಿಮ್ಮ ಕೆಲಸ ಬೆಂಗಳೂರಿನ ಶಿವಾಜಿನಗರ, ವಸಂತನಗೆ, ಜಯನಗರ, ಆರ್‍ಎಂಸಿ ಯಾರ್ಡ್, ಯಶವಂತಪುರ ಹೀಗೆ ವಾರ್ಡ್ ವಾರು ತೆರಳಿ ಕೆಲಸ ಮಾಡಬೇಕು. ಪ್ರತಿನಿತ್ಯ ಎಷ್ಟು ಗಂಟೆಗೆ ಬಿಬಿಎಂಪಿ ಕಸದ ವಾಹನ ಬಂತು ಎಷ್ಟು ಗಂಟೆಗೆ ಹೋಯಿತು. ವಾರ್ಡ್ ಸ್ವಚ್ಛವಾಗಿದೆಯಾ ಎಂದು ಪರಿಶೀಲನೆ ನಡೆಸುವುದು. ಅಲ್ಲದೇ ತಾವು ಕೆಲಸ ಮಾಡುತ್ತಿರುವ ಬಗ್ಗೆ ಎಲ್ಲಿದ್ದೀರಿ ಎಂಬ ಬಗ್ಗೆ ವಾಟ್ಸಪ್‍ನಲ್ಲಿ ಲೊಕೇಶನ್ ಶೇರ್ ಮಾಡಬೇಕು. ಕೆಲಸ ಮುಗಿದ ಬಳಿಕ ಕಚೇರಿಗೆ ಬಂದು ಸಹಿ ಮಾಡಿ ತೆರಳಬೇಕು ಎಂದು ತಿಳಿಸಿದ್ದರು.
ಈ ಫ್ರಾಡ್ ದಂಪತಿ ಬಳಿ ಸರ್ಕಾರಿ ಕೆಲಸ ಅಂತ ಸೇರಿದ್ದ ಅಲ್ಲದೇ ಮೊದಲು ಕೆಲಸಕ್ಕೆ ಸೇರಿದ್ದ ಯುವಕರಿಗೆ ಮೂರು ತಿಂಗಳು 21 ಸಾವಿರ ರೂಪಾಯಿಗಳ ಸಂಬಳವನ್ನು ಸಹ ನೀಡಿದ್ದರು. ಬಳಿಕ ಸೇರಿದ ನಿರುದ್ಯೋಗಿಗಳಿಗೆ ಅಪಾಯಿಂಟ್‍ಮೆಂಟ್ ಲೆಟರ್ ಕೊಡದ ಹಿನ್ನೆಲೆಯಲ್ಲಿ ಯುವಕರು ಪರಿಶೀಲನೆಗೆ ಇಳಿದಾಗ ದಂಪತಿಗಳ ಅಸಲಿ ಮುಖ ಹೊರಬಿದ್ದಿದೆ.
ಮೋಸ ಹೋಗಿದ್ದ 23 ಯುವಕರು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖತರ್ನಾಕ್ ದಂಪತಿಯನ್ನ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲೂ ಸಹ ಈ ಕಿಲಾಡಿಗಳ ಜಾಲ ಹರಡಿರುವ ಶಂಕೆಯೂ ವ್ಯಕ್ತವಾಗಿದೆ.
ಬೆಂಗಳೂರು: ಉದ್ಯೋಗ ಅರಿಸಿ ದೂರದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವಕನೊಬ್ಬ ಕೆಲಸಕ್ಕೆ ಸೇರಿದ ದಿನವೇ ಸಾವನ್ನಪ್ಪಿದ್ದಾನೆ.
ರಾಣೆಬೆನ್ನೂರು ಮೂಲದ ಪ್ರಕಾಶ್ ಸಾವನ್ನಪ್ಪಿದ ಯುವಕ, ಊರಿನಲ್ಲಿ ಕೆಲಸವಿಲ್ಲದ ಹಿನ್ನೆಲೆ ಪ್ರಕಾಶ್ ಕೆಲಸ ಅರಸಿ ಬೆಂಗಳೂರಿನ ರಾಜಗೋಪಾಲನಗರಕ್ಕೆ ಬಂದಿದ್ದ. ಬೆಂಗಳೂರಿನಲ್ಲಿಯೂ ಯಾವುದೇ ಕೆಲಸ ಸಿಗದ ಹಿನ್ನೆಲೆ ಲೈನ್ ಮ್ಯಾನ್ ಕಂಟ್ರಾಕ್ಟರ್ ಆಗಿದ್ದ ವ್ಯಕ್ತಿಯೊಬ್ಬರ ಬಳಿ ಕೆಲಸಕ್ಕೆ ಸೇರಿದ್ದನು.
ಸೇರಿದ ಮೊದಲ ದಿನವೇ, ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ್ದಾನೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ರಿಪೇರಿ ಕೆಲಸಕ್ಕಾಗಿ ಯುವಕನನ್ನು ಕಂಬ ಹತ್ತಿಸಿದ್ದಾರೆ. ಪ್ರಕಾಶ್ ಹತ್ತಿದ ಕಂಬದ ವೈರ್ ಗಳಲ್ಲಿ ವಿದ್ಯುತ್ ಇರಲಿಲ್ಲ. ಆದರೆ ಅದೇ ಕಂಬದಲ್ಲಿ ಮತ್ತೊಂದು ಏರಿಯಾಗೆ ಹೋಗುವ ವೈರಿನಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ವಿದ್ಯುತ್ ಸಂಪರ್ಕ ಇರುವ ವಿಚಾರ ತಿಳಿಯದೇ ಪ್ರಕಾಶ್ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ.
ಈ ವೇಳೆ ಮತ್ತೊಂದು ಏರಿಯಾಗೆ ಕನೆಕ್ಟ್ ಆಗಿದ್ದ ವೈರಿನಿಂದ ಶಾಕ್ ಹೊಡೆದು ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಯಾದಗಿರಿ: ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಬಂದರೂ ನನ್ನನ್ನು ಏನು ಮಾಡಲ್ಲ, ನೀನು ಯಾವ ಲೆಕ್ಕ ಅಂತ ನಗರಸಭೆ ಕಮಿಷನರ್‌ಗೆ ಯಾದಗಿರಿ ಕುಂಚ ಕಲಾವಿದನೋರ್ವ ತರಾಟೆಗೆ ತೆಗೆದುಕೊಂಡಿದ್ದಾನೆ.
ಕೆಲಸ ಕೊಡದಕ್ಕೆ ಕೋಪಗೊಂಡ ಕುಂಚ ಕಲಾವಿದ, ಯಾದಗಿರಿ ನಗರಸಭೆ ಕಮಿಷನರ್ ರಮೇಶ್‍ಗೆ ನಗರದ ಡಿಸಿ ಸರ್ಕಾರಿ ಮನೆ ಎದುರು ನಡು ರಸ್ತೆಯಲ್ಲಿ ಮಲ್ಲು ಆರ್ಟ್ಸ್ ಮಾಲೀಕ ಮಲ್ಲಿಕಾರ್ಜುನ ಅವಾಜ್ ಹಾಕಿದ್ದಾನೆ.
ನಗರ ಸುಂದರವಾಗಿ ಕಾಣಲು ಪ್ರವಾಸೋದ್ಯಮ, ನಗರಸಭೆ ಮತ್ತು ಜಿಲ್ಲಾಡಳಿತದಿಂದ ಸರ್ಕಾರಿ ಕಟ್ಟಡಗಳ ಗೋಡೆಗಳಿಗೆ ಕಲಾಕೃತಿಗಳನ್ನು ಬಿಡಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಖಾಸಗಿ ಕುಂಚ ಕಲಾವಿದರ ಹೊಟ್ಟೆ ಮೇಲೆ ಹೊಡೆದಂತೆ ಎನ್ನುವುದು ಕಲಾವಿದನ ಆರೋಪವಾಗಿದೆ. ಹೀಗಾಗಿ ನಡು ರಸ್ತೆಯಲ್ಲಿ ನಗರದ ಸಭೆ ಕಮಿಷನರ್ ರಮೇಶ್‍ಗೆ ಬೈದು ಕುಂಚ ಕಲಾವಿದ ತನ್ನ ಆಕ್ರೋಶ ಹೊರಹಾಕಿದ್ದಾನೆ.
ಧಾರವಾಡ: ಛಲವೊಂದಿದ್ರೆ ಏನೆಲ್ಲಾ ಸಾಧಿಸಬಹುದು ಎಂಬುವುದಕ್ಕೆ ಧಾರವಾಡದ ಇವತ್ತಿನ ಪಬ್ಲಿಕ್ ಹೀರೋ ಸಾಕ್ಷಿ. ಚಿಕ್ಕದಾಗಿ ಆರಂಭ ಮಾಡಿದ್ದ ಒಂದು ಕಂಪನಿ, ಈಗ 20 ಬಡ ಮಹಿಳೆಯರ ಹೊಟ್ಟೆ ತುಂಬಿಸುತ್ತಿದೆ. ತಾಯಿ ಮಗಳು ಹಗಲು ರಾತ್ರಿ ಎನ್ನದೇ ದುಡಿದಿದ್ದಕ್ಕೆ ಇಂದು ಕಂಪನಿ ಎತ್ತರಕ್ಕೆ ಬೆಳದು ನಿಂತಿದೆ.
ಧಾರವಾಡದ ಮುರುಘಾಮಠದ ಬಳಿಯ ನಿವಾಸಿ ಸುಮಿತ್ರಾ ನವಲಗುಂದ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಕಳೆದ 13 ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡ ಇವರು, ತಾಯಿ ಹಾಗೂ ಮಗಳ ಜೊತೆ ಬಾಡಿಗೆ ಮನೆಯಲ್ಲಿ ವಾಸ ಮಾಡುತಿದ್ದರು. ಆಗ ಏನು ಮಾಡಬೇಕು ಎಂದು ತೋಚದೇ ಒಂದು ಎನ್‍ಜಿಓದಲ್ಲಿ ಕೆಲಸ ಮಾಡಲು ಆರಂಭಿಸಿದರು. ನಂತರ ಬ್ಯೂಟಿ ಪಾರ್ಲರ್ ಮಾಡುತ್ತಲೇ, ಮಕ್ಕಳು ತಿನ್ನುವ ಹುಣಸೆಹಣ್ಣಿನ ಚಿಗಳಿ ಮಾಡಲು ಅವಕಾಶ ಸಿಕ್ಕಿತು.
ಸಿಕ್ಕ ಅವಕಾಶ ಬಿಡಬಾರದು ಎಂದು ಆರಂಭ ಮಾಡಿದ ಈ ಕೆಲಸ, ಇವತ್ತು 20 ಮಹಿಳೆಯರಿಗೆ ಕೆಲಸ ಕೊಡುವಷ್ಟು ದೊಡ್ಡದಾಗಿ ಬೆಳೆದಿದೆ. ಮೊದಲು ಈ ಚಿಗಳಿ ಮಾಡುವ ಕೆಲಸ ಹಿಡಿದಾಗ, ಯಾಕಾದ್ರು ಈ ಕೆಲಸಕ್ಕೆ ಕೈ ಹಾಕಿದೆ ಎಂದು ಎನಿಸಿತ್ತಂತೆ. ಹುಣಸೆಹಣ್ಣು ಕುಟ್ಟಲು ಯಾರೂ ಮುಂದೆ ಬಾರದೇ ಇದ್ದಾಗ, ತಾಯಿ ಈರಮ್ಮ ಹಾಗೂ ಸುಮಿತ್ರಾ ರಾತ್ರಿ ಹುಣಸೇಹಣ್ಣನ್ನ ಕೈಯಿಂದ ಕುಟ್ಟುತ್ತ ಕೆಲಸ ಮಾಡಿದ್ದಾರೆ. ನಂತರದ ದಿನಗಳಲ್ಲಿ ತಮ್ಮದೇ ಆದ ಹುಣಸೆಹಣ್ಣು ಕುಟ್ಟುವ ಮಶಿನ್ ತಂದ ಇವರು, ಈಗ ಮೊದಲಿಗಿಂತ ಹೆಚ್ಚು ಚಿಗಳಿ ಮಾಡಿ ಕಳಿಸುತ್ತಿದ್ದಾರೆ.
ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಚಿಗಳಿ ಮಾಡಲು ಆರಂಭ ಮಾಡಿದ್ದ, ಸುಮಿತ್ರಾ ಈಗ ದೊಡ್ಡವರು ತಿನ್ನುವಂತೆ ಮಾಡಿದ್ದಾರೆ. ಸದ್ಯ ಸುಮಿತ್ರಾವರು ತಯಾರಿಸಿದ ಉತ್ಪನ್ನ ಬೆಂಗಳೂರು ಹಾಗೂ ಮೈಸೂರಿಗೆ ಕಳಿಸಲಾಗುತ್ತಿದೆ. ಮೊದಲು ಒಂದು ವಾರಕ್ಕೆ 1800 ಪೀಸ್ ಚಿಗಳಿ ಕಳಿಸುತಿದ್ದ ಇವರು, ಈಗ ದಿನಕ್ಕೆ 8 ಸಾವಿರ ಚಿಗಳಿ ಕಳಿಸುತ್ತಿದ್ದಾರೆ. ಸದ್ಯ ಎಲ್ಲ ಮಾರ್ಕೆಟ್ ಮಾಡುವುದರಿಂದ ಹಿಡಿದು, ಪ್ಯಾಕಿಂಗ್ ಮಾಡಿ ಪಾರ್ಸಲ್ ಹಾಕುವುದರವರೆಗೆ ಎಲ್ಲ ಕೆಲಸವನ್ನು ಸುಮಿತ್ರಾ ಮಾಡುತ್ತಿದ್ದಾರೆ. ಇವರ ಕಡೆ ಕೆಲಸಕ್ಕೆ ಬಂದಿರುವ ಮಹಿಳೆಯರು ಎಲ್ಲರೂ ಬಡವರೇ ಆಗಿದ್ದು, ಇವರಿಂದ ನಮ್ಮ ಹೊಟ್ಟೆ ಕುಡಾ ತುಂಬುತ್ತಿದೆ ಎಂದು ಹೇಳುತ್ತಾರೆ.
ತಮ್ಮ ಹೊಟ್ಟೆಯ ಜೊತೆಗೆ ಇನ್ನೊಬ್ಬರ ಹೊಟ್ಟೆಯನ್ನ ಸುಮಿತ್ರಾ ತುಂಬಿಸುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಸಾಧನೆ ಮಾಡಿದ ಇವರು, ಇನ್ನೂ ಹಲವು ಜನರಿಗೆ ನಾನು ಕೆಲಸ ಕೊಡಬೇಕು ಎಂಬ ಆಸೆ ಇಟ್ಟಿದ್ದಾರೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರಿಗೆದಾರರ ಹಣ ಪೋಲು ಮಾಡಲು ದಾರಿ ಹುಡುಕಿದೆ. ಪೌರಕಾರ್ಮಿಕರ ಹೆಸರಲ್ಲಿ ಕೋಟಿ ಕೋಟಿ ಲೂಟಿಯಾಗುತ್ತಿದೆ. ನೀವು ಕೆಲಸಕ್ಕೆ ಬರುವ ಅಗತ್ಯವಿಲ್ಲ, ಬರೀ ಥಂಬ್ ಇಂಪ್ರೆಷನ್ ಹಾಕಿ ಹೋದರೆ ಸಾಕು. ಸಂಬಳ ನಿಮ್ ಅಕೌಂಟ್ ಗೆ ಬಂದು ಬೀಳುತ್ತದೆ. ಇದು ಬೇನಾಮಿ ಪೌರಕಾರ್ಮಿಕರ ಜಾಲದ ಎಳೆ ಪತ್ತೆಯಾಗಿದೆ.
ಸಿನಿಮಾದಲ್ಲಿ ಮಾತ್ರ ಡಬಲ್ ಆ್ಯಕ್ಟಿಂಗ್ ನೋಡಿರುತ್ತೀವಿ, ಆದರೆ ಜಯನಗರದ ಲೋಕೇಶ್ ಎಂಬಾತ ಡಬಲ್ ಸಂಬಳಕ್ಕಾಗಿ ಏಕಕಾಲದಲ್ಲಿ ಡಬಲ್ ರೋಲ್ ಪ್ಲೇ ಮಾಡುತ್ತಾ ಇರುವುದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.
ಜಯನಗರದ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ವಾಹನಗಳ ನಿಲುಗಡೆ ಮೇಲ್ವಿಚಾರಣೆ ಸಿಬ್ಬಂದಿಯಾಗಿರುವ ಲೋಕೇಶ್ ಬೆಳಗ್ಗೆ 8 ಗಂಟೆಯಾದರೆ ಸಾಕು ಡಬಲ್ ಡ್ಯೂಟಿ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡಿ ಪೌರಕಾರ್ಮಿಕ ಕೆಲಸ ಮಾಡಿದ್ದೀನಿ ಎಂದು ಡಬಲ್ ಸಂಬಳ ಪಡೆಯುತ್ತಾರೆ. ಖಾಸಗಿ ಆಸ್ಪತ್ರೆ ಉದ್ಯೋಗಿ ಶಾಕಂಬರಿ ನಗರ ವಾರ್ಡ್ ಬಿಬಿಎಂಪಿ ಕಚೇರಿಯಲ್ಲಿ ಪೌರಕಾರ್ಮಿಕ ಕೆಲಸ ಮಾಡಿದ್ದೀನಿ ಎಂದು ಬೆರಳಚ್ಚು ಹಾಜರಾತಿ ಹಾಕಿದರು ಕೇಳುವವರು ಇಲ್ಲದಂತಾಗಿದೆ.
ಪೊರಕೆ ಹಿಡಿಯಲಿಲ್ಲ, ಕೆಲಸ ಮಾಡಿಲ್ಲ ಆದರೆ ಸಂಬಳ ಮಾತ್ರ 3 ವರ್ಷಗಳಿಂದ ಲೋಕೇಶ್ ಅಕೌಂಟ್ ಗೆ ಪಕ್ಕಾ ಬೀಳ್ತಾ ಇದೆ. ಸಾವಿರಾರು ಮಂದಿ ಬಯೋಮೆಟ್ರಿಕ್ ಫೇಕ್ ಮಾಡಿ ಮಿಸ್ ಯೂಸ್ ಮಾಡುತ್ತಿದ್ದಾರೆ. ಈ ಸತ್ಯವನ್ನ ಖುದ್ದು ಪೌರಕಾರ್ಮಿಕರ ಕೆಲಸಗಳನ್ನ ನೋಡಿಕೊಳ್ಳಬೇಕಾದ ಮೇಲ್ವಿಚಾರಕ ಕುಮಾರ್ ಬಾಯಿಬಿಟ್ಟಿದ್ದಾರೆ.
ಪೌರಕಾರ್ಮಿಕರ ಸಂಖ್ಯೆ ಹಾಗೂ ತಪ್ಪು ಲೆಕ್ಕದಿಂದ ಸೋರಿಕೆ ತಡೆಯಲು ಈ ಹೆಲ್ತ್ ಇನ್ಸ್‍ಪೆಕ್ಟರ್‍ಗಳಿಗೆ ಸೂಚನೆ ನೀಡಿದೆ. ಆದರೆ ಆರೋಗ್ಯಾಧಿಕಾರಿಗಳೇ ಫೇಕ್ ಪೌರಕಾರ್ಮಿಕರ ಸೃಷ್ಟಿಸಿ ಎಟಿಎಂ ಕಾರ್ಡ್ ಕಸಿದು ತಮ್ಮ ಬಳಿ ಇಟ್ಟುಕೊಂಡು ಸಂಬಳದಲ್ಲಿ 50-50 ಸಂಬಳ ಡಿವೈಡ್ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ತ್ಯಾಗರಾಜು ಆರೋಪಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೇ ಪಾಲಿಕೆಗೆ ವಂಚಿಸುತ್ತಿರುವ ಲೋಕೇಶ್ ಅವರನ್ನೇ ಮಾತಿಗೆ ಎಳೆದಾಗ ಸತ್ಯವನ್ನ ಒಪ್ಪಿಕೊಂಡಿದ್ದಾರೆ. ಪ್ರತಿನಿಧಿ – ಏನ್ ಕೆಲಸ ಮಾಡ್ತೀರಾ ಲೋಕೇಶ್ – ಆಸ್ಪತ್ರೆ ಡ್ಯೂಟಿ ಮಾಡ್ತೀನಿ ಪ್ರತಿನಿಧಿ – ಬಿಬಿಎಂಪಿ ಥಂಬ್ ಯಾಕೆ ಹಾಕ್ತೀರಾ ಲೋಕೇಶ್ – ಅದು ನಮ್ ಅಪ್ಪನ ಕೆಲಸ ಮಾಡ್ತಾ ಇದ್ದೀನಿ
ಪ್ರತಿನಿಧಿ – ತಪ್ಪಲ್ವ ಎರಡೆರಡು ಸಂಬಳ ಲೋಕೇಶ್ – ಅಲ್ಲಿ ಸಂಬಳ ನಾನ್ ತಗೋತ್ತಿಲ್ಲ ಪ್ರತಿನಿಧಿ – ಮತ್ಯಾರಿಗೆ, ನಿಮ್ ಎಟಿಎಂ ಕಾರ್ಡ್ ಯಾರ ಹತ್ರ ಇದೆ..? ಲೋಕೇಶ್ – ಗೊತ್ತಿಲ್ಲ ಅಪ್ಪನ ಕೇಳಿ ಹೇಳ್ತೀನಿ
ಪೌರಕಾರ್ಮಿಕರಿಗೆ ವಂಚನೆಯಾಗಬಾರದೆಂದು ಬಿಬಿಎಂಪಿ ನೇರ ವೇತನಕ್ಕೆ ಮುಂದಾಗಿದೆ. ಇದರಿಂದ ಪಾಲಿಕೆಗೆ ಆಗುತ್ತಿರುವ ಖರ್ಚಿನ ವಿವರ ಹೀಗಿದೆ…
* ಬಿಬಿಎಂಪಿ ಪೌರಕಾರ್ಮಿಕರು 2 ಸಾವಿರ ತಲಾ35 ಸಾವಿರ ಒಟ್ಟು 7 ಕೋಟಿ
* ಗುತ್ತಿಗೆ ಪೌರಕಾರ್ಮಿಕರು 16 ಸಾವಿರ ತಲಾ 18 ಸಾವಿರ ಒಟ್ಟು 28 ಕೋಟಿ
* ಪೌರಕಾರ್ಮಿಕರ ಸಂಬಳಕ್ಕಾಗಿ ತಿಂಗಳಿಗೆ 35 ಕೋಟಿ ಖರ್ಚು
* ಪೌರಕಾರ್ಮಿಕರಿಗೆ ನೇರ ವೇತನ ಮೂಲಕ ಮಧ್ಯವರ್ತಿಗಳ ತಡೆಯಾಗಲಿತು
* ಬಯೋಮೆಟ್ರಿಕ್ ಮೂಲಕ ಫೇಕ್ ಪೌರಕಾರ್ಮಿಕರ ತಡೆಯಲು ಯತ್ನ
ಹೀಗೆ ಬಯೋಮೆಟ್ರಿಕ್‍ಗೆ ದೋಖಾ ಮಾಡಿರುವ ಜಾಲವನ್ನ ಪಬ್ಲಿಕ್ ಟಿವಿ ಬಯಲಿಗೆಳೆದಿದೆ. ಈಗ ಪಾಲಿಕೆ ಮುಂದಿನ ಕ್ರಮ ಏನು ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಕೆಳಕೆರೆ ಗ್ರಾಮದ ತುಂಗಾನದಿ ತೀರದಲ್ಲಿ ಸುಮಾರು 12 ವರ್ಷದ ಬಾಲಕಿ ಪತ್ತೆಯಾಗಿದ್ದು, ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಾಲಕಿಯನ್ನು ಒಪ್ಪಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಬಾಲಕಿ ಹಲವು ದಿನದ ಹಿಂದೆ ಬುಕ್ಲಾಪುರದ ಶ್ರೀಮಂತರೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಬಾಲಕಿ ತಾಯಿ ಶ್ರೀಮಂತರಿಂದ ಹಣ ಪಡೆದು ಆಕೆಯನ್ನು ಕೆಲಸಕ್ಕೆ ಸೇರಿಸಿದ್ದಳು ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಖಿನ್ನತೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಶಿಶು ಅಭಿವೃದ್ಧಿ ಅಧಿಕಾರಿಗಳು ಶಿವಮೊಗ್ಗದ ಮಕ್ಕಳ ಘಟಕಕ್ಕೆ ಒಪ್ಪಿಸಿದ್ದಾರೆ.
ಇಲಾಖೆಯಿಂದ ಬಾಲಕಿ ಮೇಲ್ವಿಚಾರಣೆಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕೆಲಸಕ್ಕೆ ಇರಿಸಿಕೊಂಡಿದ್ದ ಶ್ರೀಮಂತ ವ್ಯಕ್ತಿ ಬಾಲಕಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ಪ್ರತಿದಿನ ಹೊಡೆಯುತ್ತಿದ್ದ. ಈ ಕಾರಣಕ್ಕೆ ಹೆದರಿ ತಪ್ಪಿಸಿಕೊಂಡು ಬಂದೆ ಎಂದು ಬಾಲಕಿ ಗ್ರಾಮಸ್ಥರ ಬಳಿ ಹೇಳಿದ್ದಾಳೆ. ಈ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಬೆಂಗಳೂರು: ಯುವತಿಗೆ ಕೆಲಸಕ್ಕೆಂದು ಕರೆ ತಂದು ಗೃಹಬಂಧನದಲ್ಲಿಟ್ಟು ಮೌಲ್ವಿಯೊಬ್ಬ ಅತ್ಯಾಚಾರವೆಸಗಿ ರಾಕ್ಷಕನ ರೀತಿಯಲ್ಲಿ ನಡೆದುಕೊಂಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಫರ್ವೆಜ್ ಯುವತಿಗೆ ಅಮಾನಿಯವಾಗಿ ನಡೆಸಿಕೊಂಡಿರುವ ಮೌಲ್ವಿ. ಆರೋಪಿ ಮೌಲ್ವಿ ಕೋರಮಂಗಲದ 8ನೇ ಕ್ರಾಸ್‍ನಲ್ಲಿ ಮದರಸ ಹಾಗೂ ಟ್ಯುಟೋರಿಯಲ್ ನಡೆಸುತ್ತಿದ್ದನು. ಅಲ್ಲದೆ ಮದರಸದಲ್ಲಿ ಕೆಲಸ ಮಾಡಲು ಬಿಹಾರದಿಂದ ಯುವತಿಯನ್ನು ಕರೆದು ತಂದು ಇರಿಸಿಕೊಂಡಿದ್ದಾನೆ.
ಕಳೆದ ನಾಲ್ಕು ವರ್ಷದಿಂದ ಮೌಲ್ವಿ ಫರ್ವೇಜ್ ನ ಮದರಸದಲ್ಲಿ ಯುವತಿ ಕೆಲಸ ಮಾಡಿಕೊಂಡಿದ್ದಳು. ಈ ಸಂದರ್ಭದಲ್ಲಿ ಮೌಲ್ವಿ ಯುವತಿಗೆ ಅತ್ಯಾಚಾರವೆಸಗಿ ಐರನ್ ಬಾಕ್ಸ್‌ನಿಂದ ಸುಟ್ಟು ವಿಕೃತಿ ಮೆರೆದಿದ್ದಾನೆ ಎಂದು ಸಂತ್ರಸ್ತ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪೊಲೀಸರು ಮೌಲ್ವಿಯನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಈ ಘಟನೆ ಸಂಬಂದ ಆರೋಪಿ ಫರ್ವೇಜ್ ವಿರುದ್ಧ ಐಪಿಸಿ ಸೆಕ್ಷನ್ 344 (ಅಕ್ರಮ ಬಂಧನ), 376 (ಅತ್ಯಾಚಾರ), 307 (ಕೊಲೆ ಯತ್ನ), 506, 507 (ಬೈಗುಳ), (ಜೀವ ಬೆದರಿಕೆ) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ಮನೆಯಲ್ಲೇ ಸೋಮಾರಿಯಾಗಿದ್ದ ಮಗನನ್ನು ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಸಿಟ್ಟಿಗೆದ್ದು ಆತ ತಂದೆಯ ಕತ್ತನ್ನೇ ಕಡಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಪಾಣಾಜೆ ಗ್ರಾಮದ ಬೊಳ್ಳಿಂಬಳ ಗ್ರಾಮದ ನಿವಾಸಿ ಕೃಷ್ಣ ನಾಯ್ಕ್(65) ಮೃತ ದುರ್ದೈವಿ. ಉದಯ್ ನಾಯ್ಕ್(28) ಕೊಲೆ ಮಾಡಿದ ಪಾಪಿ ಮಗ. ಕೃಷ್ಣ ನಾಯ್ಕ್ ತನ್ನ ಪತ್ನಿ ಹಾಗೂ ಮಗನೊಂದಿಗೆ ವಾಸವಾಗಿದ್ದರು. ಮಗ ವಯಸ್ಸಿಗೆ ಬಂದಿದ್ದರು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು ಸೋಮಾರಿಯಾಗಿದ್ದನು. ಅಲ್ಲದೆ ಮನೆಯಲ್ಲಿ ಬಡತನವಿದ್ದ ಹಿನ್ನೆಲೆ ಕೃಷ್ಣನಾಯ್ಕ್ ಪ್ರತಿದಿನ ಮಗನನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುತ್ತಿದ್ದರು.
ಆದರೆ ಮಗ ಮಾತ್ರ ಕೆಲಸಕ್ಕೆ ಹೋಗದೆ ತಂದೆಯೊಂದಿಗೆ ಜಗಳವಾಡುತ್ತಿದ್ದನು. ಎಂದಿನಂತೆ ಬುಧವಾರ ಸಂಜೆ ಕೂಡ ಕೆಲಸಕ್ಕೆ ಹೋಗು ಎಂದಾಗ ಉದಯ್ ತಂದೆಯೊಂದಿಗೆ ಜಗಳವಾಡಿದ್ದಾನೆ. ಗಲಾಟೆ, ಮಾತು ಜೋರಾಗುತ್ತಿದ್ದಂತೆ ಕೋಪಗೊಂಡ ಮಗ ಮನೆಯೊಳಗಿಂದ ಕತ್ತಿ ತಂದು ಮನೆಯ ಅಂಗಳದಲ್ಲೇ ತಂದೆಯ ಕತ್ತನ್ನು ಕಡಿದಿದ್ದಾನೆ. ತೀವ್ರ ರಕ್ತಸ್ರಾವ ಆಗಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಮಗನನ್ನು ಬಂಧಿಸಿದ್ದಾರೆ. ಸದ್ಯ ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ: ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವಿವಿಧ ಶಾಲೆಗಳ 50 ಮಕ್ಕಳನ್ನು ಇಂದು ಬೆಳಂಬೆಳಗ್ಗೆ ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ವ್ಯಾಪ್ತಿಯಲ್ಲಿ ಈ ರಕ್ಷಣಾ ಕಾರ್ಯ ನಡೆದಿದೆ. ಕೆಂಭಾವಿ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಶಾಲೆಯನ್ನು ಬಿಡಿಸಿ ಮಕ್ಕಳನ್ನು ಹತ್ತಿ ಬಿಡಿಸುವ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಶಾಲೆ ಶಿಕ್ಷಕರು ಶಾಲಾ ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವುದು ಕಾನೂನು ಬಾಹಿರ ಎಂದು ಮಕ್ಕಳ ಪೋಷಕರಿಗೆ ಎಷ್ಟು ಬಾರಿ ತಿಳಿಸಿ ಹೇಳಿದರೂ ಪ್ರಯೋಜನವಾಗಿರಲಿಲ್ಲ.
ಇಂದು ಮಕ್ಕಳ ಹಕ್ಕು ರಕ್ಷಣೆ ಅಧಿಕಾರಿಗಳು ಇಂದು ವಿವಿಧ ಗ್ರಾಮಗಳ ವ್ಯಾಪ್ತಿಯ ಜಮೀನುಗಳ ಮೇಲೆ ದಾಳಿ ಮಾಡಿ, ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಕೆಲಸಕ್ಕೆ ಹೋಗುತ್ತಿದ್ದ ಮಕ್ಕಳನ್ನು ರಕ್ಷಣೆ ಮಾಡಿ ಸುಮಾರು 15 ಆಟೋಗಳನ್ನು ಜಪ್ತಿ ಮಾಡಿದ್ದಾರೆ. ದಾಳಿ ವೇಳೆ ಕೆಲ ಮಕ್ಕಳ ಪೋಷಕರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.