Tag: ಕೆಲಸ

  • ಗದ್ದೆ ಹದ ಮಾಡುತ್ತಿದ್ದ ರೈತನ ಮೇಲೆ ಬಿದ್ದ ವಿದ್ಯುತ್ ತಂತಿ

    ಗದ್ದೆ ಹದ ಮಾಡುತ್ತಿದ್ದ ರೈತನ ಮೇಲೆ ಬಿದ್ದ ವಿದ್ಯುತ್ ತಂತಿ

    ಉಡುಪಿ: ಗದ್ದೆಯಲ್ಲಿ ಬೇಸಾಯ ಕೆಲಸ ಮಾಡುತ್ತಿದ್ದ ರೈತ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಬ್ರಹ್ಮಾವರ ತಾಲೂಕಿನ ರೈತ ಸಾಧು (70) ಬೇಸಾಯ ಚಟುವಟಿಕೆ ಮಾಡುತ್ತಿದ್ದಾಗ ಮೃತಪಟ್ಟಿದ್ದಾರೆ.

    ಚೇರ್ಕಾಡಿ ಗ್ರಾಮದ ಜಾರ್ ಜೆಡ್ಡು ಎಂಬಲ್ಲಿ ಈ ಘಟನೆ ನಡೆದಿದ್ದು, ಸಾಧು ಅವರು ಗದ್ದೆಯ ಬದು ಕಟ್ಟುತ್ತಿದ್ದರು. ನಾಳೆ ಬಿತ್ತನೆ ಮತ್ತು ನಾಟಿ ಕೆಲಸ ಮಾಡಬೇಕಿತ್ತು. ಹೀಗಾಗಿ ಇಂದು ದಿನ ಪೂರ್ತಿ ಬೇಸಾಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ತಂತಿ ಸಾಧು ಅವರ ಮೇಲೆ ಬಿದ್ದಿದೆ. ಪರಿಣಾಮ ಅವರು ಹೊಲದಲ್ಲೇ ಮೃತಪಟ್ಟಿದ್ದಾರೆ.

    ಬ್ರಹ್ಮಾವರ ತಾಲೂಕು ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ಮಾಡಿದ್ದಾರೆ. ಬ್ರಹ್ಮಾವರ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ವರದಿಯನ್ನು ತಕ್ಷಣ ರವಾನೆ ಮಾಡುತ್ತಿದ್ದು, ತಾಂತ್ರಿಕ ಸಮಸ್ಯೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಹಶೀಲ್ದಾರರು ಭರವಸೆ ಕೊಟ್ಟಿದ್ದಾರೆ. ಸೂಕ್ತ ಪರಿಹಾರ ಒದಗಿಸುವುದಾಗಿ ಹೇಳಿದ್ದಾರೆ.

  • ಲಾಕ್‍ಡೌನ್ ವೇಳೆ ಕಂಪನಿ ಹಣ ಬಳಸಿದ್ದನೆಂದು ಉದ್ಯೋಗಿಯ ಮರ್ಮಾಂಗಕ್ಕೆ ಸ್ಯಾನಿಟೈಸರ್ ಸುರಿದ್ರು!

    ಲಾಕ್‍ಡೌನ್ ವೇಳೆ ಕಂಪನಿ ಹಣ ಬಳಸಿದ್ದನೆಂದು ಉದ್ಯೋಗಿಯ ಮರ್ಮಾಂಗಕ್ಕೆ ಸ್ಯಾನಿಟೈಸರ್ ಸುರಿದ್ರು!

    ಪುಣೆ: ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲೆಂದು ಇಡೀ ದೇಶವನ್ನೇ ಹಲವು ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಲವರು ಸಿಲುಕಿಕೊಂಡು ಪರದಾಟ ಅನುಭವಿಸಿದ್ದರು. ಹಾಗೆಯೇ ಯುವಕನೊಬ್ಬ ಕೂಡ ದೆಹಲಿಯಲ್ಲಿ ಸಿಲುಕಿಕೊಂಡಿದ್ದನು. ಈ ವೇಳೆ ಈತ ಕಂಪನಿ ಹಣ ಬಳಕೆ ಮಾಡಿದ್ದನೆಂದು ಆರೋಪಿಸಿ ಆತನನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

    ಹೌದು. 30 ವರ್ಷದ ಯುವಕನನ್ನು ಕಂಪನಿ ಮಾಲೀಕ ಸೇರಿ ಮೂವರು ಅಪಹರಿಸಿದ್ದಲ್ಲದೇ ಆತನಿಗೆ ಚಿತ್ರಹಿಂಸೆ ಕೊಟ್ಟ ಘಟನೆ ಮಹಾರಾಷ್ಟ್ರದ ಕೊತ್ರುಡ್ ಎಂಬಲ್ಲಿ ನಡೆದಿದೆ. ಈ ಘಟನೆ ಜೂನ್ 13, 14ರಂದು ಸಂಸ್ಥೆಯ ಕಚೇರಿಯಲ್ಲಿಯೇ ನಡೆದಿದ್ದರೂ, ಜುಲೈ 2ರಂದು ಪೌಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಾರ್ಚ್ ತಿಂಗಳಲ್ಲಿ ಯುವಕ ಕಂಪನಿಗೆ ಸಂಬಂಧಿಸಿದ ಕೆಲಸದ ನಿಮಿತ್ತ ನವದೆಹಲಿಗೆ ತೆರಳಿದ್ದನು. ಈ ವೇಳೆ ಆತನಿಗೆ ಕಂಪನಿಯೇ ಅಲ್ಲಿ ಉಳಿದುಕೊಳ್ಳಲು ಹೋಟೆಲ್ ಒಂದನ್ನು ಬುಕ್ ಮಾಡಿಕೊಟ್ಟಿತ್ತು. ಆದರೆ ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯುವಕ ದೆಹಲಿಯ ಅದೇ ಹೊಟೇಲಿನಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಯ್ತು. ಪರಿಣಾಮ ಕಂಪನಿ ಹಣದಲ್ಲಿಯೇ ಆತ ಲಾಕ್ ಡೌನ್ ಕಳೆದಿದ್ದಾನೆ.

    ಹೀಗೆ ಲಾಕ್ ಡೌನ್ ಮುಗಿದ ಬಳಿಕ ಅಂದರೆ ಮೇ 7ರಂದು ಯುವಕ ವಾಪಸ್ ಪುಣೆಗೆ ಬಂದಿದ್ದಾನೆ. ಈ ವೇಳೆ ಕಂಪನಿಯವರು ಆತನನ್ನು 17 ದಿನಗಳ ಕಾಲ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿತ್ತು. ಹೀಗಾಗಿ ಯುವಕ ಸ್ವಂತ ಹಣದಲ್ಲಿ ಹೋಟೆಲೊಂದರಲ್ಲಿ ಕ್ವಾರಂಟೈನ್ ಆಗಿದ್ದಾನೆ. ವಿಪರ್ಯಾಸ ಎಂದರೆ ಕ್ವಾರಂಟೈನ್ ಮಗಿಯುವುದರೊಳಗೆ ಯುವಕನ ಕೈಯಲ್ಲಿ ಹಣ ಖಾಲಿಯಾಗಿತ್ತು.

    ಇತ್ತ ಜೂನ್ 13ರಂದು ಯುವಕ ಕೆಲಸಕ್ಕೆ ಹಾಜರಾಗಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಕಂಪನಿ ಮಾಲೀಕ ಮತ್ತು ಇನ್ನಿಬ್ಬರು ಸೇರಿ ಆತನನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಯುವಕನಿಗೆ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೆ ಆತನ ಮರ್ಮಾಂಗಕ್ಕೆ ಸ್ಯಾನಿಟೈಸರ್ ಸುರಿದು ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಸದ್ಯ ಯುವಕ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ಮುಂದುವರಿದಿದ್ದು, ಇದೂವರೆಗೂ ಯಾರನ್ನೂ ಬಂಧಿಸಿಲ್ಲ.

  • ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್

    ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್

    ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗದ ಹಿನ್ನೆಲೆ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

    ಯಾವಾಗ ಕೆಲಸಕ್ಕೆ ಹೋಗಬೇಕು? ಯಾವಾಗ ಹೋಗಬಾರದು? ಸರ್ಕಾರಿ ನೌಕರರು ವಾರಕ್ಕೆ ಎಷ್ಟು ದಿನ ಕೆಲಸ ಮಾಡಬೇಕು ಎಂಬ ನಿಯಮಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

    ನಿಯಮಗಳೇನು?:
    ಸರ್ಕಾರಿ ನೌಕರರಿಗೆ ಇನ್ಮುಂದೆ ಐಟಿ-ಬಿಟಿ ಉದ್ಯೋಗಿಗಳ ರೀತಿ ಕೆಲಸ ನೀಡಲಾಗುತ್ತದೆ. ಅಂದ್ರೆ ವಾರಕ್ಕೆ 6 ದಿನ ಕೆಲಸ ಮಾಡಂಗಿಲ್ಲ, ವಾರಕ್ಕೆ ಬರೀ 5 ದಿನ ಮಾತ್ರ ಕೆಲಸ ಇರುತ್ತದೆ. ಸರ್ಕಾರಿ ನೌಕರರಿಗೆ ಶನಿವಾರ, ಭಾನುವಾರ ರಜೆ ಎರಡು ದಿನ ರಜೆ ಇರಲಿದೆ. ಜುಲೈ 10ರಿಂದ ತಿಂಗಳ ನಾಲ್ಕೂ ಶನಿವಾರಗಳೂ ಸರ್ಕಾರಿ ರಜೆ ಸಿಗಲಿದೆ. ಎಲ್ಲ ಶನಿವಾರ ರಜೆಯು ಸದ್ಯಕ್ಕೆ ಜುಲೈ ತಿಂಗಳಲ್ಲಿ ಅನ್ವಯವಾಲಿದೆ.

    ಸರ್ಕಾರಿ ನೌಕರರು ಆಯಾ ಏರಿಯಾಗಳಿಗೆ ಅನುಗುಣವಾಗಿ ಒಂದು ದಿನ ಬಿಟ್ಟು ಒಂದು ದಿನ ಕೆಲಸ ಮಾಡಬೇಕು. ಈ ನಿರ್ಧಾರವನ್ನು ಆಯಾ ಸ್ಥಳೀಯ ಕಚೇರಿಗಳ ಮುಖ್ಯಸ್ಥರೇ ತೆಗೆದುಕೊಳ್ಳಬಹುದು. ವಾರದ 5 ದಿನಗಳು ಕಚೇರಿ ಇರಬೇಕು. ಆದರೆ ನೌಕರರಿಗೆ ಒಂದು ದಿನ ಬಿಟ್ಟು ಒಂದು ದಿನ ಕೆಲಸ ನೀಡಬೇಕು.

    ವಿಶೇಷ ಸೂಚನೆ ನೀಡಿರುವ ರಾಜ್ಯ ಸರ್ಕಾರವು, ವಾರಕ್ಕೆ 2 ದಿನ ರಜೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗಲ್ಲ. ಸೋಂಕು ಹೆಚ್ಚಾದ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಮುಖ್ಯಸ್ಥರು ಕ್ರಮ ಕೈಗೊಳ್ಳಬಹುದು. ದಿನಕ್ಕೆ ಶೇ.50ರಷ್ಟು ನೌಕರರು ಮಾತ್ರ ಕಾರ್ಯ ನಿರ್ವಹಿಸಬೇಕು. ಇವತ್ತು ಬಂದವರು, ನಾಳೆ ಬರುವಂತಿಲ್ಲ. ಒಂದು ದಿನ ಗ್ಯಾಪ್ ಮಾದರಿಯಲ್ಲಿ ಕೆಲಸ ನಿರ್ಹಹಿಸಬೇಕು ಎಂದು ತಿಳಿಸಲಾಗಿದೆ.

  • 2 ತಿಂಗಳ ಹಸುಗೂಸನ್ನ 3 ಸಾವಿರಕ್ಕೆ ಪೋಷಕರು ಮಾರಾಟ

    2 ತಿಂಗಳ ಹಸುಗೂಸನ್ನ 3 ಸಾವಿರಕ್ಕೆ ಪೋಷಕರು ಮಾರಾಟ

    – ಹಾಲುಣಿಸಲು ಪರದಾಡ್ತಿದ್ದ ತಂದೆ-ತಾಯಿ
    – ಮೂರು ತಿಂಗಳಿಂದ ಮಾಡಲು ಕೆಲಸ ಇಲ್ಲ

    ಕೋಲ್ಕತಾ: ಪೋಷಕರೇ ತಮ್ಮ ಎರಡು ತಿಂಗಳ ಮಗುವನ್ನು ದೂರದ ಸಂಬಂಧಿಕರಿಗೆ ಮೂರು ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.

    ಮಗುವಿನ ತಂದೆ ಬಾಪನ್ ಧಾರಾ ಮತ್ತು ತಾಯಿ ತಾಪ್ಸಿ ಎಂದು ಗುರುತಿಸಲಾಗಿದೆ. ತಾಯಿ ಮನೆ ಕೆಲಸ ಮಾಡುತ್ತಿದ್ದಳು. ತಂದೆ ದೈನಂದಿನ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳಿಂದ ದೇಶವೇ ಲಾಕ್‍ಡೌನ್ ಆಗಿತ್ತು. ಹೀಗಾಗಿ ದಂಪತಿ ಕಳೆದ ಮೂರು ತಿಂಗಳಿನಿಂದ ನಿರುದ್ಯೋಗಿಗಳಾಗಿದ್ದರು ಎಂದು ತಿಳಿದು ಬಂದಿದೆ.

    ಹೌರಾದಲ್ಲಿರುವ ಮಗುವಿನ ಪೋಷಕರ ದೂರದ ಸಂಬಂಧಿಕರ ಮನೆಯಿಂದ ಪೊಲೀಸ್ ಅಧಿಕಾರಿಗಳ ತಂಡ ಮಗುವನ್ನು ವಶಪಡಿಸಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವಿಚಾರ ಬೆಳಕಿಗೆ ಬಂದ ನಂತರ ಮಗುವಿನ ಪೋಷಕರು ಪರಾರಿಯಾಗಿದ್ದಾರೆ. ತನಿಖೆಯ ವೇಳೆ ದಂಪತಿ ತಮ್ಮ ಮಗುವನ್ನು 3,000 ರೂಗಳಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಗ್ನಿಶ್ವರ್ ಚೌಧರಿ ತಿಳಿಸಿದರು.

    ತಾಪ್ಸಿ ಮನೆ ಕೆಲಸ ಮಾಡುತ್ತಿದ್ದಳು. ಆದರೆ ಕೊರೊನಾ ಸೋಂಕು ಹರಡುವ ಭಯದಿಂದ ಆಕೆಯನ್ನ ಮನೆ ಕೆಲಸಕ್ಕೆ ಬರಬಾರದೆಂದು ಹೇಳಲಾಗಿತ್ತು. ಪತಿ ಬಾಪನ್ ದೈನಂದಿನ ಕೂಲಿ ಕೆಲಸ ಮಾಡುತ್ತಿದ್ದನು. ಹೀಗಾಗಿ ದಂಪತಿ ಕಳೆದ ಮೂರು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು. ಹೀಗಾಗಿ ಊಟ ಮಾಡಲು ಆಹಾರವಿಲ್ಲದೆ, ಮಗುವಿಗೆ ಹಾಲುಣಿಸಲು ಕೂಡ ಸಾಧ್ಯವಾಗದೇ ಪರದಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.

    ತಾಪ್ಸಿ ಮನೆಯಲ್ಲಿ ಮಗುವಿನ ಅಳುವಿನ ಶಬ್ದ ಕೇಳುತ್ತಿರಲಿಲ್ಲ. ಅಲ್ಲದೇ ಮಗು ಕೂಡ ಕಾಣುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆಯವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ತನಿಖೆ ಮಾಡಿದಾಗ ದಂಪತಿಯ ದೂರದ ಸಂಬಂಧಿಕರ ಮನೆಯಲ್ಲಿ ಮಗುವಿರುವುದು ಪತ್ತೆಯಾಗಿದೆ. ಅವರಿಂದ ಮಗುವನ್ನು ವಶಪಡಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಂದೀಪ್ ಕುಮಾರ್ ಬೋಸ್ ತಿಳಿಸಿದ್ದಾರೆ.

  • ಬೈಕಿಗೆ ಅಪರಿಚಿತ ವಾಹನ ಡಿಕ್ಕಿ- ಕೆಲಸ ಮುಗಿಸಿ ಊರಿಗೆ ಬರ್ತಿದ್ದ ಯುವಕರು ದುರ್ಮರಣ

    ಬೈಕಿಗೆ ಅಪರಿಚಿತ ವಾಹನ ಡಿಕ್ಕಿ- ಕೆಲಸ ಮುಗಿಸಿ ಊರಿಗೆ ಬರ್ತಿದ್ದ ಯುವಕರು ದುರ್ಮರಣ

    ಮಂಡ್ಯ: ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಬುಗತಗಹಳ್ಳಿ ಗ್ರಾಮದ ರೇಷ್ಮೆ ಮಾರುಕಟ್ಟೆ ಬಳಿ ನಡೆದಿದೆ.

    ನರಸಿಪುರ ತಾಲೂಕಿನ ಮಲಿಯೂರು ಗ್ರಾಮದ ಮಹೇಶ್ (30) ಹಾಗೂ ಮಾದೇಶ್ (23) ಮೃತ ದುರ್ದೈವಿಗಳು. ಮೃತರಿಬ್ಬರು ಬೆಂಗಳೂರಿನ ಎವಿಬಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಮಹೇಶ್ ಮತ್ತು ಮಾದೇಶ್ ಶುಕ್ರವಾರ ತಡರಾತ್ರಿ ಬೆಂಗಳೂರಿನಿಂದ ಕೆಲಸ ಮುಗಿಸಿ ಊರಿಗೆ ಬರುತ್ತಿದ್ದರು. ಆದರೆ ಬುಗತಗಹಳ್ಳಿ ಗ್ರಾಮದ ರೇಷ್ಮೆ ಮಾರುಕಟ್ಟೆ ಬಳಿ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಅಪಘಾತದ ನಂತರ ಅಪರಚಿತ ವಾಹನದ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹಗಳನ್ನು ಆಸ್ಪತ್ರೆ ರವಾನಿಸಿದ್ದಾರೆ. ಈ ಕುರಿತು ಮಳವಳ್ಳಿ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಏಕಾಏಕಿ ಕೆಲಸದಿಂದ ವಜಾ- ಕಂಪನಿ ಮುಂದೆ ಕಾರ್ಮಿಕರು ಕಣ್ಣೀರು

    ಏಕಾಏಕಿ ಕೆಲಸದಿಂದ ವಜಾ- ಕಂಪನಿ ಮುಂದೆ ಕಾರ್ಮಿಕರು ಕಣ್ಣೀರು

    ಬೆಂಗಳೂರು: ಲಾಕ್‍ಡೌನ್ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯ ಕಂಪನಿ ಯಾವುದೇ ಸೂಚನೆ ನೀಡದೆ ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿರುವ ಆರೋಪ ಕೇಳಿಬಂದಿದ್ದು, ಕಾರ್ಮಿಕರು ಕಣ್ಣೀರಿಡುತ್ತಿದ್ದಾರೆ.

    ನಗರದ ಟಿ.ದಾಸರಹಳ್ಳಿಯ ಪೀಣ್ಯ ಕೈಗಾರಿಕಾ ಪ್ರದೇಶದ ಎಸ್.ಎ.ಪಿ.ಎಲ್ ಇಂಡಸ್ಟ್ರೀಸ್ ಪ್ರೈ.ಲಿ.ನ 1ನೇ ಯೂನಿಟ್‍ನಿಂದ ಸುಮಾರು 500ರಿಂದ 600 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿರುವ ಆರೋಪ ಕೇಳಿಬಂದಿದೆ. ಎರಡು ತಿಂಗಳು ಸಂಬಳವನ್ನೂ ನೀಡದೆ ಕೆಲಸದಿಂದ ತೆಗೆದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಸಂಬಳ ನೀಡಬೇಕು ಹಾಗೂ ಮರಳಿ ಕೆಲಸ ನೀಡುವಂತೆ ನೂರಾರು ಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ.

    ಮನೆಯಲ್ಲಿ ದಿನಸಿ ಇಲ್ಲ, ಜೀವನ ನಡೆಸಲು ಆಗದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸಂಬಳ ನೀಡುವಂತೆ ಮಹಿಳಾ ಕಾರ್ಮಿಕರು ಆಗ್ರಹಿಸಿದ್ದಾರೆ. ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳ ಕಂಪನಿಗಳಿಗೆ ತೊಂದರೆ ಉಂಟಾಗಿದೆ. ಆದರೆ ಕಾರ್ಮಿಕರಿಗೆ ತೊಂದರೆ ನೀಡಬಾರದು, ಕೆಲಸದಿಂದ ವಜಾ ಮಾಡಬಾರದು ಎಂದು ಸರ್ಕಾರ ಹೇಳಿದೆ. ಆದರೂ ಕೆಲ ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿವೆ.

  • ಮಲಗಿದ್ದ ತಂದೆ-ತಾಯಿಯನ್ನ ಕೊಚ್ಚಿ ಕೊಂದ ಪಾಪಿ ಮಗ

    ಮಲಗಿದ್ದ ತಂದೆ-ತಾಯಿಯನ್ನ ಕೊಚ್ಚಿ ಕೊಂದ ಪಾಪಿ ಮಗ

    – ಪತ್ನಿಯನ್ನ ಮನೆಗೆ ಕರ್ಕೊಂಡು ಬರದಿದ್ದೆ ತಪ್ಪಾಯ್ತು

    ಕೊಪ್ಪಳ: ಪಾಪಿ ಮಗನೊಬ್ಬ ಮಲಗಿದ್ದ ಹೆತ್ತ ತಂದೆ-ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ.

    ಗಿರಿಯಪ್ಪ (65) ಮತ್ತು ಅಕ್ಕಮ್ಮ (60) ಮೃತ ಪೋಷಕರು. ಆರೋಪಿ ಮಗ ರಮೇಶ್ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಆರೋಪಿ ರಮೇಶ್ ಪತ್ನಿ ತವರು ಮನೆ ಹೋಗಿದ್ದರು. ಈ ವೇಳೆ ಪೋಷಕರಿಗೆ ಆರೋಪಿ ರಮೇಶ್ ಪತ್ನಿಯನ್ನು ಮನೆಗೆ ಕರೆದುಕೊಂಡು ಬರುವಂತೆ ಒತ್ತಾಡ ಹಾಕುತ್ತಿದ್ದನು. ಆಗ ತಂದೆ ಗಿರಿಯಪ್ಪ ನೀನು ಮೊದಲು ಕೆಲಸ ಮಾಡು ನಂತರ ಕರೆದುಕೊಂಡು ಬರುತ್ತೀವಿ ಎಂದು ಹೇಳಿದ್ದರು. ರಾತ್ರಿ ಇದರಿಂದ ಕೋಪಗೊಂಡ ಆರೋಪಿ ರಮೇಶ್ ಸೋಮವಾರ ಮಲಗಿದ್ದ ಸಮಯದಲ್ಲಿ ಮಾರಕಾಸ್ತ್ರಗಳಿಂದ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ.

    ಪರಿಣಾಮ ತಾಯಿ ಅಕ್ಕಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಗಿರಿಯಪ್ಪನನ್ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆಯಲ್ಲಿ ಗಿರಿಯಪ್ಪ ಸಾವನ್ನಪ್ಪಿದ್ದಾರೆ.

    ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಕನಕಗಿರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಒಂದೇ ವಿಡಿಯೋ – 20 ಕ್ಯಾಮೆರಾಮ್ಯಾನ್‍ಗಳಿಗೆ ಕೆಲಸ ಕೊಟ್ಟ ಸೃಜನ್

    ಒಂದೇ ವಿಡಿಯೋ – 20 ಕ್ಯಾಮೆರಾಮ್ಯಾನ್‍ಗಳಿಗೆ ಕೆಲಸ ಕೊಟ್ಟ ಸೃಜನ್

    – ಬನ್ನಿ ಮತ್ತೆ ದುಡಿಯೋಣ ನಮ್ಮ ದೇಶ ಮತ್ತೆ ಕಟ್ಟೋಣ

    ಬೆಂಗಳೂರು: ಲಾಕ್‍ಡೌನ್‍ನಿಂದ ಚಿತ್ರರಂಗದ ಕೆಲಸಗಳು ಸ್ಥಗಿತವಾಗಿವೆ. ಇದರಿಂದ ಕಲಾವಿದರು, ಕ್ಯಾಮೆರಾಮ್ಯಾನ್‍ಗಳು ಸೇರಿದಂತೆ ಅನೇಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಆತ್ಮನಿರ್ಭರ್ ಭಾರತಕ್ಕೆ ಕೈ ಜೋಡಿಸುವ ಮೂಲಕ ಕಲಾವಿದರಿಗೆ ಸಹಾಯ ಮಾಡಿದ್ದಾರೆ.

    ನಟ ಸೃಜನ್ ಲೋಕೇಶ್ ಚಿತ್ರರಂಗದ ಕೆಲಸಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಕ್ರಿಯೇಟಿವ್ ವಿಡಿಯೋ ತಯಾರಿಸಿದ್ದಾರೆ. 20 ಕ್ಯಾಮೆರಾಮ್ಯಾನ್‍ಗಳನ್ನು ಬಳಸಿ ಈ ವಿಡಿಯೋ ತಯಾರಿಸಿದ್ದು, ಕ್ಯಾಮೆರಾ ವಿಭಾಗದವರಿಗೆ ಕೆಲಸ ಸೃಷ್ಟಿಸಬೇಕೆಂಬ ಉದ್ದೇಶದಿಂದ ಈ ರೀತಿ ವಿಡಿಯೋವನ್ನು ತಯಾರಿಸಿದ್ದಾರೆ. 20 ಶಾಟ್‍ಗಳ ಮೂಲಕ ಸೃಜನ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಇದಕ್ಕಾಗಿ ನಟ ಸೃಜನ್ ಲೋಕೇಶ್ ಅವರಿಗೆ ಸಂಭಾವನೆ ಕೂಡ ನೀಡಿದ್ದಾರೆ.

    ಸೃಜನ್ ಲೋಕೇಶ್ ಇನ್‍ಸ್ಟಾಗ್ರಾಮ್, ಫೇಸ್‍ಬುಕ್‍ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋಗೆ “ಬನ್ನಿ ಮತ್ತೆ ದುಡಿಯೋಣ ನಮ್ಮ ದೇಶವನ್ನ ಮತ್ತೆ ಕಟ್ಟೋಣ” ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಜೊತೆ #beindianbuyindian ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

    “ಎಲ್ಲರಿಗೂ ನಮಸ್ಕಾರ ಅಂದಿನಿಂದ ಇಂದಿನವರೆಗೆ ಎಂತಹ ಯುದ್ಧನೇ ಆಗಿರಲಿ, ಎಂತಹ ಸಂಕಷ್ಟನೇ ಆಗಿರಲಿ. ಈಗಿನ ಮಹಾಮಾರಿ ಕೊರೊನಾವೇ ಆಗಿರಲಿ ಸಮಸ್ಯೆಗೆ ಹೆದರಿ ಮುಂದಿಟ್ಟಿದ್ದ ಹೆಜ್ಜೆಯನ್ನು ಹಿಂದಿಟ್ಟ ಇತಿಹಾಸ ನಮ್ಮ ಭಾರತದಲ್ಲೇ ಇಲ್ಲ. ಆರೋಗ್ಯವೇ ನಮ್ಮ ಭಾಗ್ಯ, ಇಷ್ಟು ದಿನ ದೇಹದ ಆರೋಗ್ಯಕ್ಕಾಗಿ ಹೋರಾಡುದ್ವಿ, ಇನ್ನೂ ಮುಂದೆ ದೇಶದ ಸಂಪತ್ತಿಗೋಸ್ಕರ ಹೋರಾಡೋಣ. ಹೂ, ಹಣ್ಣು, ತರಕಾರಿನೇ ಆಗಿರಲಿ, ದಿನ ಬಳಸುವ ವಸ್ತುಗಳಾಗಿರಲಿ, ಲೋಕಲ್‍ನಿಂದ ಗ್ಲೋಬಲ್‍ವರೆಗೂ ಬೆಳೆಯೋಣ. ‘beindianbuyindian’ ಆತ್ಮನಿರ್ಭರ್ ಭಾರತಕ್ಕೆ ನಾವೆಲ್ಲಾ ಕೈ ಜೋಡಿಸೋಣ” ಎಂದು ಸಂದೇಶ ಸಾರಿದರು.

    40 ಸೆಕೆಂಡ್‍ವರೆಗೂ ಮಾತನಾಡುವ ವಿಡಿಯೋದಲ್ಲಿ ಸೃಜನ್ ತುಂಬಾ ಶಾಟ್ ತೆಗೆದುಕೊಂಡಿದ್ದಾರೆ. ಅಲ್ಲದೇ ಯಾಕೆ ಇಷ್ಟೊಂದು ಶಾಟ್ ತೆಗೆದುಕೊಂಡೆ ಎಂಬುದನ್ನು ಅವರೇ ತಿಳಿಸಿದ್ದಾರೆ. ಇಷ್ಟು ಮಾತನ್ನು ಒಂದೇ ಶಾಟಿನಲ್ಲಿ ಹೇಳಬಹುದಿತ್ತು. ಆದ್ರೆ ಇಷ್ಟು ಶಾಟ್ ಕಟ್ ಯಾಕೆಂದು ಥಿಂಕ್ ಮಾಡುತ್ತಿದ್ದೀರ. ಈ ಶಾಟ್ ಕಟ್‍ಗಳ ಹಿಂದೆಯೂ ಒಂದು ಕಥೆಯಿದೆ ಎಂದು ತಿಳಿಸಿದರು.

    “ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಕಲಾವಿದರು, ದಿನಗೂಲಿ ಕಾರ್ಮಿಕರು, ಟೆಕ್ನಿಷಿಯನ್ಸ್ ಸೇರಿದಂತೆ ಅನೇಕರಿಗೆ ತುಂಬಾನೇ ಕಷ್ಟವಾಗಿದೆ. ಇದಕ್ಕೆ ಸ್ಪಂದಿಸಿ ಹಲವಾರು ಜನರು ಸಹಾಯ ಮಾಡಿದ್ದಾರೆ. ಅವರಿಗೆಲ್ಲ ಧನ್ಯವಾದ, ಆದರೆ ನಮ್ಮ ಲೋಕೇಶ್ ಪ್ರೊಡಕ್ಷನ್‍ನಲ್ಲಿ ಕೆಲಸ ಮಾಡುತ್ತಿರುವ ಕ್ಯಾಮೆರಾಮ್ಯಾನ್‍ಗಳು, 10 ವರ್ಷದಿಂದ ನನ್ನ ಜೊತೆ ಕೆಲಸ ಮಾಡುತ್ತಿರುವವರಿಗೆ ಸಹಾಯ ಮಾಡಬೇಕೆಂದುಕೊಂಡೆ.

    ಆದ್ರೆ ಅವರು, ನಮಗೆ ಸಹಾಯ ಮಾಡಬೇಕು ಎನಿಸಿದರೆ ದಯವಿಟ್ಟು ಕೆಲಸ ಕೊಡಿ ಎಂದು ಕೇಳಿಕೊಂಡರು. ಈ ವಿಡಿಯೋದಲ್ಲಿರುವ 20 ಶಾಟ್‍ಗಳನ್ನು ನನ್ನ 20 ಜನ ಕ್ಯಾಮೆರಾಮ್ಯಾನ್‍ಗಳು ಕಂಪೋಸ್ ಮಾಡಿ ಅವರ ಸಂಭಾವನೆಯನ್ನ ಅವರೇ ದುಡಿದಿದ್ದಾರೆ. ಈ ಲಾಕ್‍ಡೌನ್ ಸಮಯದಲ್ಲಿ ನನ್ನ ಕೈಯಲ್ಲಿ ಅವರಿಗೆ ಈ ಕೆಲಸ ಕೊಡಲು ಮಾತ್ರ ಸಾಧ್ಯವಾಯಿತು” ಎಂದು ತಿಳಿಸಿದ್ದಾರೆ. ಜೊತೆಗೆ ಪ್ರತಿಯೊಬ್ಬ ಕ್ಯಾಮೆರಾಮ್ಯಾನ್‍ ಹೆಸರುಗಳನ್ನು ವಿಡಿಯೋ ನಮೂದಿಸಿದ್ದಾರೆ.

    ಈ ಜೀವನ ಭಗವಂತ ಹೇಳಿದ ಆ್ಯಕ್ಷನ್‍ನಿಂದ ಶುರುವಾಗುತ್ತೆ, ಅವನು ಹೇಳಿದ ಕಟ್‍ನಿಂದ ಮುಕ್ತಾಯವಾಗುತ್ತೆ. ಈ ಆ್ಯಕ್ಷನ್-ಕಟ್ ಮಧ್ಯದ ಜೀವನದಲ್ಲಿ ನಾವು ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡೋಣ. ಬನ್ನಿ ಮತ್ತೆ ನಾವೆಲ್ಲರೂ ಸೇರಿ ದುಡಿಯೋಣ, ನಮ್ಮ ದೇಶವನ್ನು ಮತ್ತೆ ಕಟ್ಟೋಣ ಎಂಬ ಸಂದೇಶವನ್ನು ಸಾರಿದ್ದಾರೆ.

    https://www.facebook.com/srujanlokesh/videos/vb.490600890982778/1165816490464005/?type=2&theater

  • ಕೊರೊನಾ ಡ್ಯೂಟಿ ಮಾಡ್ಲಾ, ಪತಿ ಹುಡುಕ್ಲಾ, ಮಗು ನೋಡಿಕೊಳ್ಳಾ- ನರ್ಸ್ ಕಣ್ಣೀರ ಕಥೆ

    ಕೊರೊನಾ ಡ್ಯೂಟಿ ಮಾಡ್ಲಾ, ಪತಿ ಹುಡುಕ್ಲಾ, ಮಗು ನೋಡಿಕೊಳ್ಳಾ- ನರ್ಸ್ ಕಣ್ಣೀರ ಕಥೆ

    ಬೆಂಗಳೂರು: ಕೊರೊನಾ ಶುರುವಾದಾಗಿನಿಂದ ನರ್ಸ್ ಗಳು ಹಗಲಿರುಳು ಎನ್ನದೇ ಜನರ ಜೀವ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತಹ ಕೊರೊನಾ ವಾರಿಯರ್ಸ್ ನರ್ಸ್ ಪತಿ ಲಾಕ್‍ಡೌನ್ ಹೊತ್ತಲ್ಲೇ ನಾಪತ್ತೆಯಾಗಿದ್ದಾನೆ. ಇದೀಗ ನರ್ಸ್ ನನಗೆ ನನ್ನ ಗಂಡ ಬೇಕು, ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

    ದಾವಣಗೆರೆ ಮೂಲದ ನರ್ಸ್ ಶಾಂತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಪತಿ ಸಿದ್ದರಾಜು ನಾಪತ್ತೆಯಾಗಿದ್ದಾನೆ. ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ. ಹೀಗಾಗಿ ನಾಪತ್ತೆ ಆಗಿರುವ ಗಂಡ ಬೇರೆ ಮದುವೆ ಆಗಿರಬಹುದು ಎಂದು ನರ್ಸ್ ಕಣ್ಣೀರು ಹಾಕುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನರ್ಸ್, ನನ್ನ ಪತಿ ದಾವಣಗೆರೆಯ ಕುರುಡಿಯವರು. ಮಗುವನ್ನು ನೋಡಿಕೊಂಡು ದಾವಣಗೆರೆಗೆ ಹೋಗಿ ಬಂದು ಮಾಡುತ್ತಿದ್ದ. ಲಾಕ್‍ಡೌನ್‍ನಿಂದ ‘ಡೇ ಕೇರ್’ ಮುಚ್ಚಿದೆ. ಆದರೆ ಕೊರೊನಾ ಇರುವುದರಿಂದ ನಾನು ಡ್ಯೂಟಿ ಮಾಡಲೇಬೇಕು. ಇಲ್ಲಿ 5 ತಿಂಗಳಿಂದ ಬಾಡಿಗೆ ಕಟ್ಟಿಲ್ಲ. ಊರಲ್ಲಿ ಕೆಲಸ ಇದೆ ಬರುತ್ತೀನಿ ಎಂದು ಹೋದವನು ಒಂದು ತಿಂಗಳಾದರೂ ಬಂದಿಲ್ಲ. ಫೋನ್ ಸ್ವಿಚ್ ಆಫ್ ಬೇರೆ ಮಾಡಿಕೊಂಡಿದ್ದಾನೆ ಎಂದು ನೋವಿನಿಂದ ಹೇಳಿದರು.

    ಈಗ ಬೇರೆ ಯಾರನ್ನೋ ಮನೆಯಲ್ಲಿ ಕರೆದುಕೊಂಡು ಬಂದು ಇರಿಸಿಕೊಂಡಿದ್ದಾನಂತೆ. ನನಗೆ ಕುಟುಂಬದವರಿಂದ ಯಾವುದೇ ರೀತಿಯ ಬೆಂಬಲ ಇಲ್ಲ. ಮಗುವನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ನನಗೆ ಮುಂದೆ ಏನು ಮಾಡಬೇಕು ಎಂದು ಕೂಡ ಗೊತ್ತಿಲ್ಲ. ದಯವಿಟ್ಟು ನನ್ನ ಪತಿಯ ಬಳಿ ಕಳುಹಿಸಿಕೊಡಿ ಎಂದು ನರ್ಸ್ ಕಣ್ಣೀರು ಹಾಕಿದರು.

    ನನ್ನ ಮಗುವಿಗೆ ತಂದೆ ಬೇಕು. ಪ್ರತಿದಿನ ಅಪ್ಪ ಎಲ್ಲಿ ಎಂದು ಮಗು ಕೇಳುತ್ತದೆ. ದಯವಿಟ್ಟು ಪೊಲೀಸರು ನಮಗೆ ಸಹಾಯ ಮಾಡಿ. ನನ್ನ ಮತ್ತು ಮಗುವನ್ನು ಪತಿಯ ಬಳಿ ಕಳುಹಿಸಿಕೊಡಿ. ಇಲ್ಲವಾದರೆ ನಾನು ಮತ್ತು ನನ್ನ ಮಗು ಏನಾದರೂ ಮಾಡಿಕೊಂಡು ಸಾಯುತ್ತೇವೆ. ಇಲ್ಲಿ ನನ್ನ ಮಗುವನ್ನು ನೋಡಿಕೊಳ್ಳುವವರು ಇಲ್ಲ. ನಾನು ಕೊರೊನಾ ಡ್ಯೂಟಿ ಮಾಡಲಾ, ಪತಿಯನ್ನು ಹುಡುಕಲಾ, ನನಗೆ ನ್ಯಾಯ ಬೇಕು ಎಂದು ಮನವಿ ಮಾಡಿಕೊಂಡರು.

    ದಾವಣಗೆರೆಯಲ್ಲಿ ಪರಿಯಚ ಇರುವವರಿಗೆ ಫೋನ್ ಮಾಡಿದ್ದೆ. ಆಗ ಪತಿ ಯಾರನ್ನೋ ಕರೆದುಕೊಂಡು ಬಂದಿದ್ದಾನೆ ಎಂಬುದು ಗೊತ್ತಾಗಿದೆ. ನಾನು ಪಾಸ್ ವ್ಯವಸ್ಥೆ ಮಾಡಿಸುತ್ತೀನಿ ಬಾ ಎಂದು ಫೋನ್ ಮಾಡಿ ಹೇಳಿದ್ದೆ. ಆದರೆ ಮತ್ತೆ ಫೋನ್ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನನ್ನ ಮದುವೆಯಾದ ಮೇಲೆ ಬೇರೊಬ್ಬರ ಜೊತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ. ನಂತರ ನಾನು ಆ ಹುಡುಗಿಗೆ ನಮ್ಮ ಮದುವೆ ವಿಚಾರ ಹೇಳಿದೆ. ಬಳಿಕ ಮದುವೆ ಕಾನ್ಸಲ್ ಆಗಿತ್ತು. ಅಂದಿನಿಂದ ಮತ್ತೆ ನನ್ನ ಜೊತೆ ಚೆನ್ನಾಗಿದ್ದ. ಈಗ ಮತ್ತೆ ನನ್ನ ಮತ್ತು ಮಗುವನ್ನು ಬಿಟ್ಟು ಹೋಗಿದ್ದಾನೆ ಎಂದು ಕಣ್ಣೀರು ಹಾಕಿದರು.

  • ನೀವಿರುವ ಊರಿನ ಶಾಲೆಗಳಲ್ಲೇ ಕೆಲಸ ಮಾಡಿ: ಶಿಕ್ಷಕರಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

    ನೀವಿರುವ ಊರಿನ ಶಾಲೆಗಳಲ್ಲೇ ಕೆಲಸ ಮಾಡಿ: ಶಿಕ್ಷಕರಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

    ಬೆಂಗಳೂರು: ಅನ್ಯ ಶಾಲೆಗಳಲ್ಲಿ ಕೆಲಸ ನಿರ್ವಹಿಸಿಸುತ್ತಿರುವ ಶಿಕ್ಷಕರು ತಾವು ಇರುವ ಸ್ಥಳದಲ್ಲಿ ಕೆಲಸ ನಿರ್ವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ಈ ಕುರಿತು ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದು, ಬೇರೆ ಬೇರೆ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ತಾವಿರುವ ಊರು ಅಥವಾ ನಗರದ ಶಾಲೆಗಳಲ್ಲೇ ಕಾರ್ಯನಿರ್ವಹಿಸಬೇಕು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಸದ್ಯ ಇರುವ ಸ್ಥಳದಲ್ಲಿ ಕೆಲಸ ಮುಂದುವರೆಸುವಂತೆ ತಿಳಿಸಿದ್ದಾರೆ. ಸರ್ಕಾರದ ಅನುಮತಿ ಮೇರೆಗೆ ಸುರೇಶ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದು, ಶಿಕ್ಷಕರು ತಾವಿರುವ ಸ್ಥಳದಲ್ಲೇ ಕಾರ್ಯನಿರ್ವಹಿಸಬಹುದಾಗಿದೆ.

    ಇದೆಲ್ಲದರ ಮಧ್ಯೆ ಈ ಬಾರಿ ಶುಲ್ಕ ಹೆಚ್ಚಳ ಮಾಡದಂತೆ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಲಾಗಿದ್ದು, ಕೊರೊನಾ ಹಿನ್ನೆಲೆ ಯಾವುದೇ ಖಾಸಗಿ ಶಾಲೆ ಶುಲ್ಕವನ್ನು ಹೆಚ್ಚಳ ಮಾಡಕೂಡದು ಎಂದು ಸುರೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ.

    ಕ್ಷೌರಿಕ ಹಾಗೂ ದಂತ ವೈದ್ಯಕೀಯ ಚಿಕಿತ್ಸೆಯನ್ನು ಸಹ ಪುನರಾರಂಭಿಸಲು ಅನುಮತಿ ನೀಡಬೇಕೆಂದು ಮುಖ್ಯಮಂತ್ರಿಗಳಿವೆ ಸಚಿವ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕ್ಷೌರಿಕ ವೃತ್ತಿ(ಸವಿತಾ ಸಮಾಜ)ಯವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ದಂತ ವೈದ್ಯಕೀಯ ಚಿಕಿತ್ಸೆಯೂ ಅವಶ್ಯಕವಾಗಿದೆ. ಈ ಎರಡು ವಲಯಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಪ್ರಾರಂಭ ಮಾಡಲು ಅವಕಾಶ ಕೊಡಬೇಕು ಎಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.