Tag: ಕೆರೆಬೇಟೆ

  • ‘ಕೆರೆಬೇಟೆ’ ಟ್ರೈಲರ್ ತುಂಬಾ ಕಾಡ ಗರ್ಭದ ಕಥೆಯ ಗಾಢ ಛಾಯೆ

    ‘ಕೆರೆಬೇಟೆ’ ಟ್ರೈಲರ್ ತುಂಬಾ ಕಾಡ ಗರ್ಭದ ಕಥೆಯ ಗಾಢ ಛಾಯೆ

    ಗೌರಿಶಂಕರ್ ಅಭಿನಯದ `ಕೆರೆಬೇಟೆ’ (Kerebete) ಚಿತ್ರದ ಟ್ರೈಲರ್ (Trailer) ಲಾಂಚ್ ಆಗಿದೆ. ಹಾಗೆ ಬಿಡುಗಡೆಗೊಂಡಿರುವ ಈ ಟ್ರೈಲರ್ ದಿನಗಳು ಹೊರಳಿಕೊಳ್ಳುತ್ತಲೇ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಾ, ಟ್ರೆಂಡಿಂಗ್ ನತ್ತ ದಾಪುಗಾಲಿಡುತ್ತಿದೆ. ಸಾಮಾನ್ಯವಾಗಿ ಒಂದು ಜನಪ್ರಿಯ ಅಲೆಯ ಅಬ್ಬರದ ನಡುವೆ ಅದಕ್ಕೆ ಹೊರತಾದಂತೆ ಕಾಣಿಸುವ ಚಿತ್ರವೊಂದರ ಸುಳಿವು ಸಿಕ್ಕರೂ ಸಾಕು, ತಾನೇ ತಾನಾಗಿ ಅದರತ್ತ ಪ್ರೇಕ್ಷಕರು ಆಕರ್ಷಿತರಾಗುತ್ತಾರೆ. ಆ ರೀತಿಯಲ್ಲಿಯೇ ಕೆರೆಬೇಟೆ ಕೂಡಾ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಇದೀಗ ಟ್ರೈಲರ್ ನೋಡಿದವರೆಲ್ಲ ರೋಮಾಂಚಿತರಾಗಿದ್ದಾರೆ. ಅದರ ಸುತ್ತ ಗರಿಗೆದರಿಕೊಂಡಿರುವ ನಿರೀಕ್ಷೆಗಳನ್ನು ಕಂಡು ಚಿತ್ರತಂಡ ಅಕ್ಷರಶಃ ಥ್ರಿಲ್ ಆಗಿದೆ.

    ಹಳ್ಳಿ ವಾತಾವರಣದ ಕಥೆ ಎಂದಾಕ್ಷಣ ಒಂದಷ್ಟು ಭಾಗಗಳ ಭಾಷಾ ಶೈಲಿಯನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮಲೆನಾಡಿನಲ್ಲಿ ಘಟಿಸುವ ಒಂದಷ್ಟು ಕಥಾನಕಗಳು ಬಂದಿದ್ದರೂ ಕೂಡಾ, ಆ ಭಾಗದ ಭಾಷೆಯನ್ನು ಪರಿಪೂರ್ಣವಾಗಿ ಬಳಸಿಕೊಂಡಿದ್ದು ವಿರಳ. ಆದರೆ, ಕೆರೆಬೇಟೆ ಚಿತ್ರವಿಡೀ ಅಂತಹ ಮಲೆನಾಡು ಭಾಷೆಗಳ ಗಂಧ ತುಂಬಿಕೊಂಡಂತಿದೆ. ಅದು ಕರುನಾಡಿನ ಎಲ್ಲ ಭಾಗಗಳ ಪ್ರೇಕ್ಷಕರಿಗೂ ಹೊಸತನದೊಂದಿಗೆ ಸೋಕುವ ಸೂಚನೆಗಳೂ ಕಾಣಿಸುತ್ತಿವೆ. ಇದೇ ಟ್ರೈಲರ್ ಮೂಲಕ ಒಟ್ಟಾರೆ ಕೆರೆಬೇಟೆ ಕಥನದ ನಾನಾ ಮಜಲುಗಳು ಅನಾವರಣಗೊಂಡಿವೆ. ಇದು ಎಲ್ಲ ಅಭಿರುಚಿಯ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಫುಲ್ ಮೀಲ್ಸ್ ಅನ್ನೋದು ಕೂಡಾ ಸದರಿ ಟ್ರೈಲರ್ ನೊಂದಿಗೆ ಸಾಬೀತಾಗಿದೆ.

    ಕೆರೆಬೇಟೆಯ ಸುತ್ತಾ ಪ್ರೀತಿ, ಜಾತಿ, ಮೇಲು ಕೀಳು, ಬಡತನ ಮುಂತಾದ ಅಂಶಗಳೊಂದಿಗೆ ರಗಡ್ ಕಥಾನಕದ ಝಲಕ್ಕುಗಳು ಈ ಟ್ರೈಲರ್ ಮೂಲಕ ತೆರೆದುಕೊಂಡಿದೆ. ಕಾಡ ಗರ್ಭದ ಸಹಜ ಛಾಯೆಯಲ್ಲಿ ಚಲಿಸೋ ಕಥೆಯೆಂದರೇನೇ ಥ್ರಿಲ್ ಆಗಿ ಕಾಯೋ ಬಹುದೊಡ್ಡ ಪ್ರೇಕ್ಷಕ ವರ್ಗವಿದೆ. ಅದರಲ್ಲಿಯೂ ಕ್ಲಾಸ್, ಮಾಸ್ ಕಂಟೆಂಟಿನ ಸಮಾಗಮದಂಥಾ ಚಿತ್ರವೆಂದಮೇಲೆ ಸಂಚಲನ ಸೃಷ್ಟಿಯಾಗೋದುಜಜ ಸಹಜ. ಈ ನಿಟ್ಟಿನಲ್ಲಿ ನೋಡಹೋದರೆ, ಕೆರೆಬೇಟೆ ಕಟ್ಟುಮಸ್ತಾದ ಕಥೆಯ ಮೂಲಕ ಮೈಕೈ ತುಂಬಿಕೊಂಡಿರೋದನ್ನು ಈ ಟ್ರೈಲರ್ ಸಾಕ್ಷೀಕರಿಸಿದೆ.

    ಜೋಕಾಲಿ, ರಾಜಹಂಸ ಮುಂತಾದ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ಗೌರಿಶಂಕರ್ (Gowrishankar) ಕೆರೆಬೇಟೆ ನಾಯಕನಾಗಿ ಮರಳಿದ್ದಾರೆ. ಅವರ ಪಾತ್ರದ ರಗಡ್ ಲುಕ್ ನೋಡುಗರನ್ನೆಲ್ಲ ಸೆಳೆಯುವಂತಿದೆ. ಜೈಶಂಕರ್ ಪಟೇಲ್ ಜನಮನ ಸಿನಿಮಾ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಕೆರೆಬೇಟೆ, ರಾಜ್ ಗುರು ನಿರ್ದೇಶನದಲ್ಲಿ ರೂಪುಗೊಂಡಿದೆ. ಇದರ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯನ್ನು ಗೌರಿಶಂಕರ್ ಮತ್ತು ನಿರ್ದೇಶಕರು ಒಟ್ಟುಗೂಡಿ ರೂಪಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ರಾಜ್ ಗುರು ವಿಶಿಷ್ಟವಾದ ಕಥೆಯೊಂದನ್ನು ಕೈಗೆತ್ತಿಕೊಂಡಿದ್ದಾರೆಂಬುದಕ್ಕೂ ಈ ಟ್ರೈಲರಿನಲ್ಲಿ ಸಾಕ್ಷಿಗಳಿದ್ದಾವೆ.

    ನಿಖರವಾಗಿ ಹೇಳಬೇಕೆಂದರೆ, ಕೆರೆಬೇಟೆ ಟ್ರೈಲರ್ ಈ ವರ್ಷದ ಪ್ರಾಮಿಸಿಂಗ್ ಟ್ರೈಲರ್ ಆಗಿ ದಾಖಲಾಗುತ್ತದೆ. ಈ ವರ್ಷದ ಆರಂಭದಿಂದಲೇ ಭಿನ್ನ ಪ್ರಯೋಗಗಳ, ಹೊಸಾ ಹಾದಿಯ ಒಂದಷ್ಟು ಸಿನಿಮಾಗಳು ತೆರೆಗಾಣುತ್ತಿವೆ. ಅದರಲ್ಲಿ ಬಹುತೇಕ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿವೆ. ಕನ್ನಡ ಚಿತ್ರರಂಗದ ಪಾಲಿಗೆ ಭಿನ್ನವಾದೊಂದು ಪಥ ತೆರೆದುಕೊಂಡಿರುವ ಈ ಘಳಿಗೆಯಲ್ಲಿ ಕೆರೆಬೇಟೆ ಟ್ರೈಲರ್ ಮತ್ತಷ್ಟು ನಿರೀಕ್ಷೆ ಮೂಡಿಸುವಂತಿದೆ. ಇದೀಗ ಟ್ರೈಲರ್ ನೋಡಿದವರೆಲ್ಲರೊಳಗೂ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಕೌತುಕ ಮೂಡಿಕೊಂಡಿದೆ. ಅದು ಕೆರೆಬೇಟೆ ಟ್ರೈಲರಿನ ನಿಜವಾದ ಸಾರ್ಥಕತೆ.

     

    ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ವಲ್ಲಭ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಕೆರೆಬೇಟೆ ಇದೇ ಮಾರ್ಚ್ 15ರಂದು ಬಿಡುಗಡೆಗೊಳ್ಳಲಿದೆ.

  • ವಿಶಿಷ್ಟ ರೀತಿಯಲ್ಲಿ `ಕೆರೆಬೇಟೆ’ ಟ್ರೈಲರ್ ಲಾಂಚ್: ಬೆಂಗಳೂರಿನಲ್ಲಿ ಮಲೆನಾಡ ಸಂಪ್ರದಾಯ

    ವಿಶಿಷ್ಟ ರೀತಿಯಲ್ಲಿ `ಕೆರೆಬೇಟೆ’ ಟ್ರೈಲರ್ ಲಾಂಚ್: ಬೆಂಗಳೂರಿನಲ್ಲಿ ಮಲೆನಾಡ ಸಂಪ್ರದಾಯ

    ಕೇವಲ ಸಿನಿಮಾ ರೂಪಿಸುವ ವಿಚಾರದಲ್ಲಿ ಮಾತ್ರವಲ್ಲ; ಆ ಸಿನಿಮಾವನ್ನು ಪ್ರೇಕ್ಷಕರನ್ನು ತಲುಪಿಸುವಲ್ಲಿಯೂ ಹೊಸತನದ ಹಾದಿ ಹಿಡಿಯೋ ನಡೆಯೊಂದು ಇತ್ತೀಚೆಗೆ ಶುರುವಾಗಿದೆ. ಈ ನಿಟ್ಟಿನಲ್ಲಿ ನೋಡೋದಾದರೆ, ಕೆರೆಬೇಟೆ (Kerebete) ಚಿತ್ರದ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಅತ್ಯಂತ ವಿಶೇಷವಾಗಿ ನೆರವೇರಿಸಿದೆ. ಈ ಈವೆಂಟಿನ ರೂಪುರೇಷೆ, ಅದು ನಡೆದ ರೀತಿಗಳೆಲ್ಲವೂ ಭಿನ್ನವಾಗಿವೆ. ಈ ಮೂಲಕ ಹಲವು ಸಂಸ್ಕೃತಿಗಳ ಸಂಗಮದಂಥಾ ಬೆಂಗಳೂರಿನ ಒಡಲಲ್ಲಿ ಅಪ್ಪಟ ಮಲೆನಾಡಿನ ಸಂಸ್ಕೃತಿಯೊಂದು ಮಿಂಚಿದೆ.

    ಆರಂಭದಲ್ಲಿ ಕಿಚ್ಚ ಸುದೀಪ್ ಅವರ ಕಡೆಯಿಂದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಿಕ್ಕಿಯಾಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಹಾಗಂತ ಕೆರೆಬೇಟೆಗೆ ಕಿಚ್ಚನ ಸಾಥ್ ಇದ್ದೇ ಇದೆ. ಬಿಡುಗಡೆಗೂ ಮುನ್ನವೇ ಸುದೀಪ್ ಸಮ್ಮುಖದಲ್ಲಿ ಅರ್ಥಪೂರ್ಣವಾದೊಂದು ಈವೆಂಟು ನಡೆಸಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಇದೇ ಹೊತ್ತಿನಲ್ಲಿ ಟ್ರೈಲರ್ ಲಾಂಚ್ ಗೆ ಭಿನ್ನ ಹಾದಿಯಲ್ಲಿ ಹೆಜ್ಜೆಯೂರಿರುವ ಚಿತ್ರತಂಡ, ಒಟ್ಟಾರೆ ಸಿನಿಮಾದ ಆಂತರ್ಯಕ್ಕನುಗುಣವಾಗಿ ಜ್ಯೋತಿ ಬೆಳಗಿಸಿಕೊಂಡು ಮನೆ ಮನೆಗೆ ತೆರಳಿ, ಎಣ್ಣೆ ಎರೆಸಿಕೊಂಡು ಆಶೀರ್ವಾದ ಪಡೆದು ನಂತರ ಪುಟ್ಟ ಮಗುವಿನ ಕೈಯಲ್ಲಿ ಟ್ರೈಲರ್ ಬಿಡುಗಡೆ ಮಾಡಿಸಲಾಗಿದೆ.

    ಅಂದಹಾಗೆ, ಈ ಜ್ಯೋತಿ ಬೆಳಗಿಸಿಕೊಂಡು ಮನೆ ಮನೆಗೆ ತೆರಳೋ ಕ್ರಮಕ್ಕೆ ಮಲೆನಾಡು ಭಾಗದಲ್ಲಿ ಅಂಟಿಗೆಪಿಂಟಿಗೆ ಅನ್ನೋ ಹೆಸರಿದೆ. ಅದು ದೀಪಾವಳಿಯ ಸಂದರ್ಭದಲ್ಲಿ ಕಳೆಗಟ್ಟಿಕೊಳ್ಳುವ ಜನಪದೀಯ ಆಚರಣೆ. ಅದಕ್ಕೆ ಹೊಸೆದುಕೊಂಡಂಥಾ ಜನಪದ ಶೈಲಿಯ ಚೆಂದದ ಹಾಡುಗಳಿವೆ. ಮಲೆನಾಡಲ್ಲಿಯೇ ಮರೆಗೆ ಸರಿಯುತ್ತಿರುವ ಈ ಸಂಪ್ರದಾಯವನ್ನು ಬೆಂಗಳೂರಿಗೆ ಪರಿಚಯಿಸಿದ ಖುಷಿ ಚಿತ್ರತಂಡಕ್ಕಿದೆ. ಇಂಥಾ ಆಚರಣೆಯ ತರುವಾಯ, ನಾಯಕ ನಟ ಗೌರಿಶಂಕರ್ ಅವರ ಪುಟ್ಟ ಮಗಳು ಈಶ್ವರಿ ತನು ಮೂಲಕ ಕೆರೆಬೇಟೆ ಟ್ರೈಲರ್ ಅನಾವರಣಗೊಂಡಿದೆ.

    ಕೆರೆಬೇಟೆ ಎಂಬುದು ಮಲೆನಾಡು ಭಾಗದ ಒಂದು ಸಂಪ್ರದಾಯ. ಅದರ ಸುತ್ತ ಚಲಿಸುತ್ತಲೇ ಮಲೆನಾಡಿನ ಕಟ್ಟುಪಾಡುಗಳು, ಆಚರಣೆ, ರೀತಿ ರಿವಾಜುಗಳ ಸುತ್ತ ಪಕ್ಕಾ ರಗಡ್ ಶೈಲಿಯ ಕಥಾನಕವನ್ನೊಳಗೊಂಡಿರುವ ಚಿತ್ರ ಕೆರೆಬೇಟೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದಲ್ಲಿ ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಜೀಕಾಲಿ ಮತ್ತು ರಾಜಹಂಸ ಚಿತ್ರದಲ್ಲಿಯೂ ಇವರು ನಾಯಕನಾಗಿ ನಟಿಸಿದ್ದರು. ಗೌರಿಶಂಕರ್ ಸಹೋದರ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

     

    ಈಗಾಗಲೇ ಪವನ್ ಒಡೆಯರ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕಾರ್ಯನಿರ್ವಹಿಸಿದ್ದ ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈಗಾಗಲೇ ಒಂದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಕೆರೆಬೇಟೆ ಇದೇ ಮಾರ್ಚ್ 15ರಂದು ಬಿಡುಗಡೆ ಗೊಳ್ಳಲಿದೆ.

  • ಕಲಾಲೋಕಕ್ಕೆ ‘ಕೆರೆಬೇಟೆ’ ಪರಿಚಯ: ಕಿಚ್ಚನ ಕೈಲಿ ಟ್ರೈಲರ್ ಅನಾವರಣ

    ಕಲಾಲೋಕಕ್ಕೆ ‘ಕೆರೆಬೇಟೆ’ ಪರಿಚಯ: ಕಿಚ್ಚನ ಕೈಲಿ ಟ್ರೈಲರ್ ಅನಾವರಣ

    ಕೆರೆಬೇಟೆ (Kerebete) ಶೀರ್ಷಿಕೆಯಿಂದಲೇ ಕಲಾಭಿಮಾನಿಗಳ ಗಮನ ಸೆಳೆದಿರುವ ಸಿನಿಮಾ. ಚಿತ್ರದ ಟೀಸರ್‌ ಮತ್ತು ಹಾಡುಗಳನ್ನ ನೋಡಿದವರು ಕೆರೆಬೇಟೆ ನೋಡಲಿಕ್ಕೆ ಒಂಟಿಕಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಈ ಚಿತ್ರಕ್ಕೆ ಕೋಟಿಗೊಬ್ಬ ಕಿಚ್ಚನ (Sudeep) ಸಪೋರ್ಟ್‌ ಸಿಗ್ತಿದೆ. ಹೌದು, ಅಭಿನಯ ಚಕ್ರವರ್ತಿ ಬಾದ್‌ ಷಾ ಕಿಚ್ಚ ಸುದೀಪ್‌ ಕೆರೆಬೇಟೆ ಟ್ರೈಲರ್‌ (Trailer) ರಿಲೀಸ್‌ ಮಾಡೋದಕ್ಕೆ ಒಪ್ಕೊಂಡಿದ್ದಾರೆ. ಇದೇ ಫೆಬ್ರವರಿ 20ರಂದು ರಾತ್ರಿ 7 ಗಂಟೆಗೆ ಕೆರೆಬೇಟೆ ಟ್ರೈಲರ್‌ ಅನಾವರಣಗೊಳ್ತಿದೆ.

    ‘ಕೆರೆಬೇಟೆ’ ನಿರ್ದೇಶಕ ರಾಜ್ ಗುರು ಕೈಚಳದಲ್ಲಿ ತಯಾರಾಗಿರುವ ಚಿತ್ರ. ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ನಾಯಕನಟನಾಗಿ ಮಿಂಚಿದ್ದ ಗೌರಿಶಂಕರ್‌ (Gauri Shankar) ಈಗ ʻಕೆರೆಬೇಟೆʼ ಮೂಲಕ ನಾಯಕನಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷಗಿಳಿದಿದ್ದಾರೆ. ಬಿಂದು ಶಿವರಾಮ್‌ ನಾಯಕಿಯಾಗಿ ಚಂದನವನಕ್ಕೆ ಪರಿಚಯಗೊಳ್ತಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಮಲೆನಾಡ ಗೊಂಬೆ ಹಾಡಲ್ಲಿ ಬಿಂದು-ಗೌರಿಶಂಕರ್‌ ಕೆಮಿಸ್ಟ್ರಿ ವರ್ಕೌಟ್‌ ಆಗಿದ್ದು, ರಿಯಲ್‌ ಸ್ಟಾರ್‌ ಉಪೇಂದ್ರ ಸಾಂಗ್‌ ರಿಲೀಸ್‌ ಮಾಡ್ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಂಪತ್‌, ಗೋಪಾಲ ದೇಶ್‌ಪಾಂಡೆ, ನಟಿ ಹರಿಣಿ ಸೇರಿದಂತೆ ಇನ್ನಿತರರಿಂದ ಕೂಡಿರುವ ಕೆರೆಬೇಟೆ ಯಶಸ್ವಿಯಾಗಲೆಂದು ಹಾರೈಸಿದ್ದರು.

    ವಿಶೇಷ ಅಂದರೆ ಕೆರೆಬೇಟೆ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರ ಸಾಥ್‌ ಸಿಕ್ಕಿದೆ. ಈ ಹಿಂದೆ ಡಾಲಿ ಧನಂಜಯ್‌, ದಿನಕರ್‌ ತೂಗುದೀಪ್‌ ಸೇರಿದಂತೆ ಹಲವರು ಟೀಸರ್‌ ಲಾಂಚ್‌ ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದ್ದರು. ನೆಲದ ಕಥೆಗಳನ್ನ ನಮ್ಮ ನಾಡಿನ ಜನರು ಯಾವತ್ತೂ ಕೈ ಬಿಟ್ಟಿಲ್ಲ ಸೋ ಮಲೆನಾಡ ಮಣ್ಣಿನ ಸೊಗಡಿರುವ ಈ ಚಿತ್ರವನ್ನು ಕೈ ಬಿಡಲ್ಲವೆಂದು ಹಾರೈಸಿದ್ದರು. ಅವರೆಲ್ಲರ ಹಾರೈಕೆಯ ಜತೆಗೆ ಅದ್ದೂರಿಯಾಗಿಯೇ ತಯಾರಾಗಿರುವ ಕೆರೆಬೇಟೆ ಚಿತ್ರ ಬಿಡುಗಡೆಗೆ ಅಣಿಯಾಗಿದೆ.

     

    ಇದೇ ಮಾರ್ಚ್‌ 15ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡ್ತಿದೆ. ಗಗನ್‌ ಬಡೇರಿಯಾ ಸಂಗೀತ, ಕೀರ್ತನ್‌ ಪೂಜಾರಿ ಛಾಯಾಗ್ರಹಣ ಸಿನಿಮಾಗಿದೆ. ಜೈ ಶಂಕರ್‌ ಪಟೇಲ್‌ಮತ್ತು ಗೌರಿಶಂಕರ್‌ ಜಂಟಿಯಾಗಿ ಜನಮನ ಸಿನಿಮಾಸ್‌ ಬ್ಯಾನರ್‌ಮೂಲಕ ಈ ಚಿತ್ರ ನಿರ್ಮಿಸಿದ್ದಾರೆ. ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.