Tag: ಕೆರೆಗಳು

  • ಭಾರೀ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 63 ಕೆರೆಗಳು ಸಂಪೂರ್ಣ ಭರ್ತಿ: ಪ್ರೀತಿ ಗೆಹ್ಲೋಟ್

    ಭಾರೀ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 63 ಕೆರೆಗಳು ಸಂಪೂರ್ಣ ಭರ್ತಿ: ಪ್ರೀತಿ ಗೆಹ್ಲೋಟ್

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ವ್ಯಾಪ್ತಿಯಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ನೀರಿನ ಮಟ್ಟವು ಗಣನೀಯವಾಗಿ ಹೆಚ್ಚಾಗಿದೆ. ಇದರಲ್ಲಿ 63 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್(Preeti Gehlot) ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ(Lakes) ಒಟ್ಟು ಸಂಗ್ರಹಣಾ ಸಾಮರ್ಥ್ಯವು 32,514 ದಶಲಕ್ಷ ಲೀಟರ್‌ಗಳಾಗಿದೆ. 2025ರ ಏಪ್ರಿಲ್‌ನಲ್ಲಿ ಕೆರೆಗಳ ಒಟ್ಟು ನೀರಿನ ಸಂಗ್ರಹಣೆಯ ಪ್ರಮಾಣವು 10,595 ದಶಲಕ್ಷ ಲೀಟರ್‌ಗಳಿಗೆ ಕುಸಿದು ಕೇವಲ 3 ಕೆರೆಗಳಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿತ್ತು. ಸುಮಾರು 63 ಕೆರೆಗಳಲ್ಲಿ ನೀರಿಲ್ಲದೆ ಒಣಗುವ ಹಂತದಲ್ಲಿತ್ತು ಎಂದಿದ್ದಾರೆ. ಇದನ್ನೂ ಓದಿ: ಇಡಿ ತನಿಖೆಗೆ ಸಂಪೂರ್ಣ ಸಹಕಾರ – ದಾಳಿ ಉದ್ದೇಶ ಗೊತ್ತಿಲ್ಲ, ನಾನೇನೂ ಮುಚ್ಚಿಟ್ಟಿಲ್ಲ ಅಂದ ಪರಂ

    ಇದೀಗ ನಗರದಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಒಟ್ಟು 26,056 ದಶಲಕ್ಷ ಲೀಟರ್‌ನಷ್ಟು ನೀರು ಕೆರೆಗಳಲ್ಲಿ ಸಂಗ್ರಹವಾಗಿದ್ದು, ಕಳೆದ ಏಪ್ರಿಲ್‌ಗೆ ಹೋಲಿಸಿದರೆ ನೀರಿನ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ. ಇದೀಗ ಪಾಲಿಕೆ ವ್ಯಾಪ್ತಿಯ 63 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿರುತ್ತವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪರಮೇಶ್ವರ್‌ ಬೆನ್ನಿಗೆ ನಿಂತ ಸಿಎಂ, ಸಚಿವರು – ನಾವಿದ್ದೇವೆ ಎಂದ ಹೈಕಮಾಂಡ್

    ತುಂಬಿರುವ ಎಲ್ಲಾ ಕೆರೆಗಳ ತೂಬುಗಳ ಬಳಿ ಹಾಗೂ ಕೆರೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ. ಕೆರೆಗಳು ನೀರು ಹೋಗುವ ಕಾಲುವೆಗಳಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯವನ್ನು ತೆರವುಗೊಳಿಸಲು ಸಿಬ್ಬಂದಿಯನ್ನ ನಿಯೋಜಿಸಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

  • ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನ ತುಂಬಿಸಿ – ಸಚಿವ ಬೋಸರಾಜು ಸೂಚನೆ

    ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನ ತುಂಬಿಸಿ – ಸಚಿವ ಬೋಸರಾಜು ಸೂಚನೆ

    ಬೆಂಗಳೂರು: ರಾಜ್ಯಾದ್ಯಂತ ಮಳೆಯ (Karnataka Rains) ಪ್ರಮಾಣ ಹೆಚ್ಚಾಗಿದ್ದು ಅಣೆಕಟ್ಟುಗಳು ತುಂಬಿವೆ. ನಮ್ಮ ಇಲಾಖೆಯ ವ್ಯಾಪ್ತಿಯ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌ ಬೋಸರಾಜು (NS Bosaraju) ಅಧಿಕಾರಿಗಳಿಗೆ ಸೂಚನೆ ನೀಡಿದರು.

    ವಿಕಾಸಸೌಧದಲ್ಲಿಂದು ಪಿಎಂಕೆಎಸ್‌ವೈ ಕಾಮಗಾರಿಗಳ (PMKSY works) ಪ್ರಗತಿ ಪರಿಶೀಲನೆ ಹಾಗೂ ಕೇಂದ್ರ ಅನುದಾನದ ಕುರಿತು ಚರ್ಚಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕರು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯ ನಡೆಸಲಾಯಿತು.

    ಪಿಎಂಕೆಎಸ್‌ವೈ ಯೋಜನೆ ಅಡಿಯಲ್ಲಿ ಈಗಾಗಲೇ ಮಂಜೂರಾಗಿರುವ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಈಗಾಗಲೇ ಸಲ್ಲಿಸಲಾಗಿರುವ ಪ್ರಸ್ತಾವನೆಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಜಲ ಆಯೋಗದ ನಿರ್ದೇಶಕರು, ಅದಕ್ಕೆ ಬೇಕಾದಂತಹ ಅಗತ್ಯ ಕ್ರಿಯಾಯೋಜನೆ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ:
    ರಾಜ್ಯಾದ್ಯಾಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹತೇಕ ಅಣೆಕಟ್ಟುಗಳು ತುಂಬಿವೆ. ಆದರೂ ಕೆಲವು ಕೆರೆಗಳಲ್ಲಿ ಹೆಚ್ಚಿನ ನೀರಿನ ಸಂಗ್ರಹವಾಗದೇ ಇರುವ ಬಗ್ಗೆ ಅಧಿಕಾರಿಗಳು ವರದಿಯನ್ನು ನೀಡಿದ್ದಾರೆ. ಅಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಕೆರೆ ತುಂಬಿಸುವ ಕಾರ್ಯವನ್ನ ಮರುಚಾಲನೆಗೊಳಿಸಬೇಕು. ಎಲ್ಲಾ ಕೆರೆಗಳು ತುಂಬುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳುವುದಲ್ಲದೇ, ಅವುಗಳ ಸಮರ್ಪಕ ನಿರ್ವಹಣೆಗೂ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

    ನಿಷ್ಕ್ರಿಯಗೊಂಡಿರುವ ಏತ ನೀರಾವರಿ ಯೋಜನೆ ವರದಿ ನೀಡಿ:
    ಆಯಾ ಕಾಲಕ್ಕೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಹಲವಾರು ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳ ನಿರ್ಮಾಣ ಮಾಡಲಾಗಿದೆ. ಅವುಗಳ ನಿರ್ವಹಣೆ ಅವಧಿ ಮುಗಿದ ನಂತರ ಹಾಗೂ ಕಾಲಕ್ರಮೇಣ ಹಲವು ನಿಷ್ಕ್ರಿಯಗೊಂಡಿವೆ. ಆಯಾ ವಲಯವಾರು ಕೈಗೊಂಡಿರುವ ಏತ ನೀರಾವರಿ ಯೋಜನೆಗಳ ಬಗ್ಗೆ, ಈಗ ಚಾಲ್ತಿಯಲ್ಲಿರುವ, ಸರಿಯಾದ ನಿರ್ವಹಣೆ ಆಗುತ್ತಿರುವ ಹಾಗೂ ನಿಷ್ಕ್ರಿಯಗೊಂಡಿರುವ ಯೋಜನೆಗಳ ಬಗ್ಗೆ ವರದಿ ನೀಡಬೇಕು. ಇವುಗಳನ್ನು ಪುನರುಜ್ಜೀವನಗೊಳಿಸಿದರೇ ಆಗುವ ಅನುಕೂಲಗಳು ಹಾಗೂ ಅದಕ್ಕೆ ತಗಲುವ ವೆಚ್ಚದ ಬಗ್ಗೆಯು ಮಾಹಿತಿಯನ್ನು ಅದರಲ್ಲಿ ಅಳವಡಿಸುವಂತೆ ಸೂಚನೆ ನೀಡಿದರು.

    ವಿಭಾಗವಾರು ಹಾಗೂ ಉಪವಿಭಾಗವಾರು ಕಚೇರಿಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಜಾಗದ ಕೊರತೆಯಿದ್ದಲ್ಲಿ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರುವಂತೆ ಸೂಚನೆ ನೀಡಿದರು. ತೆರೆದ ಬಾವಿಗಳು ಹಾಗೂ ಹೂಳು ಎತ್ತುವ ಹೊಸ ಯೋಜನೆಗಳ ಪ್ರಸ್ತಾವನೆ ಸಲ್ಲಿಸುವುದನ್ನೂ ನಿಲ್ಲಿಸುವಂತೆ ಸೂಚಿಸಿದರು.

    ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ರಾಘವನ್‌, ಕೇಂದ್ರ ಜಲ ಆಯೋಗದ ನಿರ್ದೇಶಕ ಹರ್ಷ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ಸ್‌ ಉಪಸ್ಥಿತರಿದ್ದರು.

  • ಆರ್‌ಸಿಬಿ ಹಸಿರು ಅಭಿಯಾನ; ಬೆಂಗ್ಳೂರು ಕೆರೆಗಳಿಗೆ ಕಾಯಕಲ್ಪ ನೀಡಲು ಮುಂದಾದ ಫ್ರಾಂಚೈಸಿಗೆ ಭೇಷ್‌ ಎಂದ ಫ್ಯಾನ್ಸ್‌

    ಆರ್‌ಸಿಬಿ ಹಸಿರು ಅಭಿಯಾನ; ಬೆಂಗ್ಳೂರು ಕೆರೆಗಳಿಗೆ ಕಾಯಕಲ್ಪ ನೀಡಲು ಮುಂದಾದ ಫ್ರಾಂಚೈಸಿಗೆ ಭೇಷ್‌ ಎಂದ ಫ್ಯಾನ್ಸ್‌

    – ಹಸಿರು ಜೆರ್ಸಿಯಲ್ಲಿ ಆರ್‌ಸಿಬಿಗೆ ಗೆಲುವಿಗಿಂತ ಸೋಲೇ ಹೆಚ್ಚು

    ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ (RCB) ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೆ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ. ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು (RCB Fans) ಇವರಾಗಿದ್ದಾರೆ.

    ಇಂದಿಗೂ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸಮಾಜ ಸೇವಾ ಕಾರ್ಯಗಳಿಗೂ ಮುಂದಾಗಿದೆ. ಪ್ರತಿ ಬಾರಿ ತನ್ನ ಆವೃತ್ತಿಯಲ್ಲಿ ಹಸಿರು ಜೆರ್ಸಿ ಧರಿಸಿ ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಆರ್‌ಸಿಬಿ ಕ್ರಿಕೆಟ್ ಫ್ರಾಂಚೈಸಿ, ಈ ಬಾರಿ ಬೆಂಗಳೂರಿನಲ್ಲಿ ಮೂರು ಕೆರೆಗಳನ್ನು (Benglauru Lakes) ಮರು ಅಭಿವೃದ್ಧಿಗೊಳಿಸಲು ಮುಂದಾಗಿದೆ. ತಂಡದ ಹಸಿರು ಅಭಿಯಾನ ಯೋಜನೆಯಡಿ ಈ ಕೆಲಸಕ್ಕೆ ಫ್ರಾಂಚೈಸಿ ಮುಂದಾಗಿದೆ. ಇದನ್ನೂ ಓಧಿ: ಫೇಕ್‌ ನ್ಯೂಸ್‌ ಬಗ್ಗೆ ಹಿಟ್‌ಮ್ಯಾನ್‌ ಸ್ಪಷ್ಟನೆ – ಟಿ20 ವಿಶ್ವಕಪ್‌ಗೆ ಹೀಗಿದೆ ಭಾರತದ ಸಂಭಾವ್ಯ ತಂಡ!

    ಬೆಂಗಳೂರಿನ ಇಟ್ಟಗಾಲಪುರ ಕೆರೆ ಮತ್ತು ಸದೇನಹಳ್ಳಿ ಕೆರೆ (Ittgalpura and Sadenahalli lakes) ಮರು ಅಭಿವೃದ್ಧಿ ಕಾರ್ಯವು ಮುಕ್ತಾಯ ಹಂತ ತಲುಪಿದೆ. ಕಣ್ಣೂರು ಕೆರೆಯಲ್ಲಿ ನಾಗರಿಕರಿಗೆ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆರ್‌ಸಿಬಿಯು ಕಳೆದ ಅಕ್ಟೋಬರ್‌ನಿಂದಲೇ ಇಎಸ್‌ಜಿ ಬದ್ಧತೆಯಡಿಯಲ್ಲಿ ಕೆರೆ ಸುಧಾರಣೆ ಕಾರ್ಯ ಯೋಜನೆಯನ್ನು ಆರಂಭಿಸಿದೆ. ಕಾವೇರಿ ನೀರಿನಿಂದ ವಂಚಿತವಾಗಿರುವ ಹಾಗೂ ಅಂತರ್ಜಲ ಮತ್ತು ಮಳೆ ನೀರಿನ ಮೂಲದ ಮೇಲೆಯೇ ಅವಲಂಬಿತವಾಗಿರುವ ಪ್ರದೇಶಗಳ ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಗುರಿಯೂ ಇದಾಗಿದೆ.

    ಇಟ್ಟಗಾಲಪುರ ಮತ್ತು ಸದೇನಹಳ್ಳಿ ಕೆರೆಗಳಿಂದ ಇದುವರೆಗೆ 1.20 ಲಕ್ಷ ಟನ್ ಹೂಳು (Silt) ಮತ್ತು ಮರಳನ್ನು ಹೊರತೆಗೆಯಲಾಗಿದೆ. ಅದೇ ಮಣ್ಣನ್ನು ಕೆರೆಗಳಿಗೆ ಒಡ್ಡು ಕಟ್ಟಲು ಮತ್ತು ಕಾಲುಹಾದಿ ನಿರ್ಮಿಸಲು ಬಳಸಲಾಗಿದೆ. ಅಲ್ಲದೇ ಸುತ್ತಮುತ್ತಲಿಗೆ 52 ರೈತರು ತಮ್ಮ ಹೊಲ. ಗದ್ದೆಗಳಿಗಾಗಿ ಈ ಮಣ್ಣು ತೆಗೆದುಕೊಂಡೂ ಹೋಗಿದ್ದಾರೆ ಎಂದು ಆರ್‌ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸ್ಥಳೀಯ ಸಮುದಾಯಗಳ ಕಲ್ಯಾಣ ನಮ್ಮ ಗುರಿಯಾಗಿದೆ. ಬೆಂಗಳೂರಿನ ಪ್ರಮುಖ ಕೆರೆಗಳನ್ನು ಮರಳಿ ಅಭಿವೃದ್ಧಿಪಡಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಲಿದೆ. ಅಲ್ಲದೇ ಅಕ್ಕಪಕ್ಕದ ಗ್ರಾಮಗಳಿಗೆ ಕೃಷಿ ಮತ್ತಿತರ ಕಾರ್ಯಗಳಿಗೂ ನೀರಿನ ಸೌಲಭ್ಯ ಒದಗಿಸಲಿದೆ ಎಂದು ಆರ್‌ಸಿಬಿ ಮುಖ್ಯಸ್ಥ ರಾಜೇಶ್ ಮೆನನ್ ಹೇಳಿದ್ದಾರೆ. ಇದನ್ನೂ ಓಧಿ: ಕೊನೇ ಓವರ್‌ನಲ್ಲಿ 26 ರನ್‌ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್‌ ಕಳಪೆ ಬೌಲಿಂಗ್‌ಗೆ ಫುಲ್‌ ಕ್ಲಾಸ್‌

    ಹಸಿರು ಬಣ್ಣದ ಜೆರ್ಸಿಯಲ್ಲಿ ಗೆಲುವಿಗಿಂತ ಸೋಲೆ ಹೆಚ್ಚು:
    2011ರ ಐಪಿಎಲ್‌ ಆವೃತ್ತಿಯಿಂದ ಆರ್‌ಸಿಬಿ ಋತುವಿನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸಿ ಆಡಲು ಆರಂಭಿಸಿತು. ಹಸಿರು ಪರಿಸರವನ್ನು ಸಂರಕ್ಷಿಸುವಂತೆ ಜಾಗೃತಿಗೊಳಿಸುವ ಉದ್ದೇಶವೂ ಇದ್ದಾಗಿತ್ತು. 2011ರಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ 2012, 2013, 2014ರಲ್ಲಿ ಸೋಲು ಕಂಡಿತು. 2015ರಲ್ಲಿ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾಯಿತು. 2016ರಲ್ಲಿ ಗೆಲುವು ಸಾಧಿಸಿತ್ತು. ನಂತರ 2017, 2018, 2019, 2020ರಲ್ಲಿ ಸೋತಿತ್ತು. 2021 ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರೂ ಸೋಲು ಕಂಡಿತ್ತು. 2023ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ತವರು ಕ್ರೀಡಾಂಗಣದಲ್ಲೇ ಗೆಲುವು ಸಾಧಿಸಿತ್ತು. 2024ರ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓಧಿ: RCBಗೆ ‘ಹೆಡ್ಡೇಕ್’- ತನ್ನದೇ ದಾಖಲೆ ಮುರಿದು IPLನಲ್ಲಿ ಮತ್ತೆ ಇತಿಹಾಸ ನಿರ್ಮಿಸಿದ ಹೈದರಾಬಾದ್

  • ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ನೆಲಮಂಗಲ: ಬೆಂಗಳೂರಿನ ಕೊಳಚೆ ನೀರು ಗ್ರಾಮೀಣ ಭಾಗದ ಕೆರೆಗಳಿಗೆ ಹರಿದು ಬರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದ್ದಾರೆ.

    ದಾಸನಪುರ ಹೋಬಳಿಯ ಕಾಚೋಹಳ್ಳಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲುಷಿತ ನೀರು ಸೇರದಂತೆ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ. ನಗರದಿಂದ ಯಥೇಚ್ಛವಾಗಿ ಕೊಳಚೆ ನೀರು ಹರಿದು ಬರುತ್ತಿರುವ ಪರಿಣಾಮ ಯಲಹಂಕ ಕ್ಷೇತ್ರ ವ್ಯಾಪ್ತಿಯ ಕಾಚೋಹಳ್ಳಿ, ಮಾಚೋಹಳ್ಳಿ ಹಾಗೂ ಗಂಗೊಂಡನಹಳ್ಳಿ ಕೆರೆಗಳು ಮಲಿನಗೊಂಡಿದ್ದು ಪುನರುಜ್ಜೀವನಗೊಳಿಸಲು ಪ್ರತಿ ಕೆರೆಯ ಅಭಿವೃದ್ಧಿಗೆ ತಲಾ ಎರಡು ಕಾಲು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

    ಜಲಮೂಲಗಳ ರಕ್ಷಣೆಗೆ ಬಿಜೆಪಿ ಸರ್ಕಾರ ವಿಶೇಷ ಒತ್ತು ನೀಡಿದ್ದು, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಶುದ್ಧೀಕರಿಸಿದ ನೀರನ್ನು ಮಾತ್ರ ಹರಿಸುವ ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಇದೇ ವೇಳೆ ದಾಸನಪುರ ಹೋಬಳಿ ಸೇರಿದಂತೆ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಗ್ರಾಮಸ್ಥರ ಜೀವನಮಟ್ಟ ಸುಧಾರಣೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕಾಚೋಹಳ್ಳಿ ಹಾಗೂ ಕಿತ್ತನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಶುದ್ಧ ನೀರಿನ ಘಟಕ, ಅಂಗನವಾಡಿ ನಿರ್ಮಾಣ ಸೇರಿದಂತೆ ಇಪ್ಪತ್ತೈದು ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

  • ಚೆನ್ನೈನಲ್ಲಿ ನೀರಿಗೆ ಹಾಹಾಕಾರ – ಮಳೆಗಾಗಿ ತಮಿಳುನಾಡು ಸರ್ಕಾರದಿಂದ ಯಜ್ಞ

    ಚೆನ್ನೈನಲ್ಲಿ ನೀರಿಗೆ ಹಾಹಾಕಾರ – ಮಳೆಗಾಗಿ ತಮಿಳುನಾಡು ಸರ್ಕಾರದಿಂದ ಯಜ್ಞ

    ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಹಾಹಾಕಾರ ಮುಂದುವರಿದಿದ್ದು, ರಾಜ್ಯ ಸರ್ಕಾರ ವರುಣನ ಮೊರೆ ಹೋಗಿದೆ.

    ತಮಿಳುನಾಡು ಸರ್ಕಾರ ಪೆರೂರಿನ ಪಟ್ಟೀಶ್ವರ ದೇವಸ್ಥಾನದಲ್ಲಿ ಹಾಗೂ ಎಐಎಡಿಎಂಕೆ ನಾಯಕರು ಪುರಸವಾಲ್ಕಂನಲ್ಲಿರುವ ಅರುಲ್ಮಿಗು ಗಂಗಾದೀಶ್ವರ ದೇವಸ್ಥಾನದಲ್ಲಿ ವರುಣನಿಗಾಗಿ ಯಜ್ಞ ನಡೆಸುತ್ತಿವೆ.

    ಚೆನ್ನೈ ನಗರದಲ್ಲಿ ಅನೇಕ ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಕೆಲವು ಕೆರೆಗಳನ್ನು ನೆಲಸಮಗೊಳಿಸಿ ಐಟಿ ಕಂಪನಿಗಳನ್ನು ತೆರೆಯಲಾಗಿದೆ. ಇದರಿಂದಾಗಿ ನೀರಿನ ಸಂಗ್ರಹಿಸಲು ಸೂಕ್ತ ವ್ಯವಸ್ಥೆಯಿಲ್ಲ ಸರ್ಕಾರ ಭಾರೀ ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ ನೀರಿನ ಹಾಹಾಕಾರವನ್ನು ಚೆನ್ನೈ ಎದುರಿಸುತ್ತಿದೆ ಎಂದು ವರದಿಯಾಗಿದೆ.

    2400 ಎಕರೆ ಕಣ್ಮರೆ:
    ಚೆನ್ನೈ ಕಳೆದ ನಾಲ್ಕು ದಶಕಗಳಲ್ಲಿ ವೆಲಾಚೇರಿ ಸರೋವರದ ಹತ್ತು ಪಟ್ಟು ಪ್ರಮಾಣದಲ್ಲಿ ಜಲಮೂಲಗಳನ್ನು ಕಳೆದುಕೊಂಡಿದೆ. ಹೀಗಾಗಿ ದೀರ್ಘಕಾಲಿಕ ನೀರಿನ ಮೂಲಗಳಿಂದ ಚೆನ್ನೈ ಪರದಾಡುವಂತಾಗಿದೆ.

    ವೇಗವಾಗಿ ಬೆಳೆದ ನಗರೀಕರಣದಿಂದ ಚೆನ್ನೈನ ನಗರದ ವ್ಯಾಪ್ತಿಯ ಕೆರೆಗಳು ಮತ್ತು ಗದ್ದೆಗಳು ನಿಧಾನವಾಗಿ ಮುಚ್ಚಲ್ಪಟ್ಟವು. ಈ ನಿರ್ಲಕ್ಷ್ಯದ ಅತ್ಯಂತ ಭೀಕರವಾದ ದೋಷಾರೋಪಣೆಯು ಪ್ರವಾಹದ ನಂತರ ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಬೆಳಕಿಗೆ ಬಂದಿತ್ತು.

    ಈ ವರದಿಯಲ್ಲಿ ನಿಯಮಗಳನ್ನು ಪಾಲಿಸದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಚೆನ್ನೈ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಸಿಎಂಡಿಎ) ಲೋಪವನ್ನು ಎತ್ತಿ ತೋರಿಸಿದೆ. ಸಿಎಂಡಿಎ ನಿರ್ಲಕ್ಷ್ಯದಿಂದಾಗಿ 1979 ಮತ್ತು 2016ರ ನಡುವೆ ಜಲಮೂಲಗಳ ಪ್ರದೇಶವು 2389 ಎಕರೆಗಳಷ್ಟು ಕುಗ್ಗಿದೆ ಎಂದು ತಿಳಿಸಿತ್ತು.

    ಮೊಗಪ್ಪೈರ್ ಸರೋವರ, ಅಂಬತ್ತೂರು ಟ್ಯಾಂಕ್ ಮತ್ತು ಪಲ್ಲಿಕರಾನೈ ಮಾರ್ಷ್ ಇತರ ಜಲಮೂಲಗಳು ಕುಗ್ಗುತ್ತಿರುವ ಬಗ್ಗೆಯೂ ವರದಿಯಲ್ಲಿ ತಿಳಿಸಲಾಗಿದೆ.

    ನಗರದಲ್ಲಿನ ಜಲಾಶಯಗಳು, ಸರೋವರಗಳು, ಟ್ಯಾಂಕ್‍ಗಳ ಪುನಃಸ್ಥಾಪನೆ ಮತ್ತು ಸರಿಯಾದ ನಿರ್ವಹಣೆ ಕಳೆದ ಎರಡು ದಶಕಗಳಿಂದ ನಿರ್ಲಕ್ಷ್ಯೆಗೆ ಒಳಗಾಗಿದೆ. ಜಲಮೂಲಗಳನ್ನು ನಿರ್ಮಿಸಲು ಮತ್ತು ಪುನಃಸ್ಥಾಪಿಸಲು ಕಳಪೆ ಪ್ರಯತ್ನಗಳು ನಡೆದಿವೆ.

    ಜಲಮೂಲಗಳ ಪುನಃಸ್ಥಾಪನೆಗೆ ಸಂಬಂಧಿಸಿದಂತೆ, ನೀರಿನ ಕೊರತೆ ಕುರಿತು ಮದ್ರಾಸ್ ಹೈಕೋರ್ಟ್ ಗೆ ಚೆನ್ನೈ ಮೆಟ್ರೋ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ಮಾಹಿತಿ ನೀಡಿ, ನಗರದ 210ರ ಜಲಮೂಲಗಳ ಪೈಕಿ ಐದು ಮಾತ್ರ ಪುನಃಸ್ಥಾಪಿಸಲಾಗಿದೆ. ಇದು 2017 ರಲ್ಲಿ ಪ್ರಾರಂಭವಾದ ಸಹಕಾರಿ ನೀರು ನಿರ್ವಹಣಾ ಯೋಜನೆಗೆ ಸಂಬಂಧಿಸಿದೆ. ಅನೇಕ ಪ್ರದೇಶಗಳಲ್ಲಿನ ಸಮುದಾಯಗಳು ಸ್ವಯಂಸೇವಾ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತಿವೆ ಎಂದು ತಿಳಿಸಿದ್ದಾರೆ.

    ಸಾಮರ್ಥ್ಯ ಇಳಿಕೆ:
    ಪೂಂಡಿ, ರೆಡ್ ಹಿಲ್ಸ್, ಚೋಲವರಂ ಮತ್ತು ಚೆಂಬರಂಬಕ್ಕಂ ನಾಲ್ಕು ಪ್ರಮುಖ ಜಲಾಶಯಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಅವುಗಳ ಶೇಖರಣಾ ಸಾಮರ್ಥ್ಯದಲ್ಲಿ ಶೇ.20 ರಷ್ಟು ಇಳಿಕೆಯಾಗಿದೆ. ಚೆನ್ನೈಗೆ ನೀರು ಸರಬರಾಜಿಗಾಗಿ 1944ರಲ್ಲಿ ಪೂಂಡಿ ಜಲಾಶಯ ನಿರ್ಮಿಸಲಾಯಿತು. ಥರ್ವೊಯ್ ಕಂಡಿಗೈನಲ್ಲಿ ದೀರ್ಘಾವಧಿಯ ಐದನೇ ಜಲಾಶಯವನ್ನು 2013ರಲ್ಲಿ ಕಾರ್ಯಾರಂಭ ಮಾಡಲಾಯಿತು. ಆದರೆ ಭೂಸ್ವಾಧೀನ ವಿಳಂಬದಿಂದಾಗಿ ಈ ವರ್ಷದ ಅಂತ್ಯದವರೆಗೂ ಜಲಾಶಯವು ಕಾರ್ಯನಿರ್ವಹಿಸದಂತಾಗಿದೆ.

    ನಗರದಲ್ಲಿ ಹರಿಯುವ ಮೂರು ನದಿಗಳು ಹೆಚ್ಚು ಕಲುಷಿತಗೊಂಡಿದ್ದು, ಅವುಗಳ ಶುದ್ಧಿಕರಣಕ್ಕೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಸಿಎಜಿ ವರದಿಯು ರಾಜ್ಯದ ಕಡೆಯಿಂದ ಈ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಕೊಸಸ್ಥಲಿಯಾರ್ ನದಿಯಲ್ಲಿ ಕೈಗಾರಿಕಾ ತಾಜ್ಯವನ್ನ ಹರಿಬಿಡಲಾಗುತ್ತಿದೆ. ಅಡ್ಯಾರ್ ನದಿಯಲ್ಲೂ ಕಸದ ರಾಶಿ ಹೆಚ್ಚಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯಪೀಠ ಈ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಲ್ಲಿ ರಾಜ್ಯ ಸರ್ಕಾರಕ್ಕೆ 100 ಕೋಟಿ ರೂ. ದಂಡ ವಿಧಿಸಿತ್ತು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]