Tag: ಕೆರಿಬಿನ್ ಪ್ರೀಮಿಯರ್ ಲೀಗ್

  • ಮೈದಾನದಲ್ಲೇ ಕುಸಿದು ಬಿದ್ದ ಆ್ಯಂಡ್ರೂ ರಸ್ಸೆಲ್

    ಮೈದಾನದಲ್ಲೇ ಕುಸಿದು ಬಿದ್ದ ಆ್ಯಂಡ್ರೂ ರಸ್ಸೆಲ್

    ಜಮೈಕಾ: ವೆಸ್ಟ್ ಇಂಡೀಸ್ ಸ್ಫೋಟಕ ಆಟಗಾರ ಆ್ಯಂಡ್ರೂ ರಸ್ಸೆಲ್‍ ಮೈದಾನದಲ್ಲೇ ಕುಸಿದು ಬಿದ್ದ ಘಟನೆ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಭಾಗವಾಗಿ ನಡೆದ ಪಂದ್ಯದಲ್ಲಿ ನಡೆದಿದೆ.

    ಸಿಪಿಎಲ್ ಟೂರ್ನಿಯ ಭಾಗವಾಗಿ ಜಮೈಕಾ ತಲ್ಲಾವಾಸ್ ಪರ ಆಡುತ್ತಿದ್ದ ರಸ್ಸೆಲ್ ಪಂದ್ಯದ 14ನೇ ಓವರಿನಲ್ಲಿ ಭಾರೀ ಹೊಡೆತಕ್ಕೆ ಕೈಹಾಕಿದ್ದರು. ಈ ವೇಳೆ ಬೌಲರ್ ಹಾರ್ಡಸ್ ವಿಲ್ಜೋಯೆನ್ ಎಸೆದ ಚೆಂಡು ರಸ್ಸೆಲ್ ಅವರ ಹೆಲ್ಮೆಟ್‍ನ ಹಿಂಭಾಗದಲ್ಲಿ ಬಡಿದಿತ್ತು. ಪರಿಣಾಮ ರಸ್ಸೆಲ್ ಮೈದಾನದಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಸ್ಥಳದಲ್ಲಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಸೇಂಟ್ ಲೂಸಿಯಾ ಜೌಕ್ಸ್ ತಂಡದ ವಿರುದ್ಧ ಪಂದ್ಯದ 14ನೇ ಓವರಿನಲ್ಲಿ ಘಟನೆ ನಡೆದಿದೆ.

    ಚೆಂಡು ರಸ್ಸೆಲ್‍ರ ಎಡ ಕಿವಿಯ ಹಿಂಭಾಗದಲ್ಲಿ ಬಡಿದ ಕಾರಣ ಅವರು ಮೈದಾನದಲ್ಲಿ ಮತ್ತೆ ಬ್ಯಾಟಿಂಗ್ ನಡೆಸಲು ಸಾಧ್ಯವಾಗಲಿಲ್ಲ. ಘಟನೆ ನಡೆದ ವೇಳೆ ತಂಡದ ಆಟಗಾರರು ಕ್ಷಣ ಕಾಲ ಆತಂಕಕ್ಕೆ ಒಳಗಾಗಿದ್ದರು. ಕೂಡಲೇ ಸಹ ಆಟಗಾರರು ರಸ್ಸೆಲ್‍ರ ನೆರವಿಗೆ ಧಾವಿಸಿದ್ದರು.

    ರಸ್ಸೆಲ್ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಹಾಗೂ ಸ್ಕ್ಯಾನಿಂಗ್ ನಡೆಸಲಾಗಿದೆ ಎಂಬ ಮಾಹಿತಿಯನ್ನು ಸಿಪಿಎಲ್ ಟೂರ್ನಿಯ ಆಯೋಜಕರು ನೀಡಿದ್ದಾರೆ. ಅಲ್ಲದೇ ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಅವರಿಗೆ ಹೆಚ್ಚಿನ ವಿಶ್ರಾಂತಿ ಪಡೆಯಲು ಸೂಚನೆ ನೀಡಲಾಗಿದೆ. ಪಂದ್ಯದಲ್ಲಿ ಲೂಸಿಯಾ ತಂಡ 5 ವಿಕೆಟ್ ಜಯವನ್ನು ಪಡೆದಿದೆ.