Tag: ಕೆಮಿಕಲ್

  • ರಾಸಾಯನಿಕ ಮಿಶ್ರಿತ ಗಾಳಿ ಸೇವಿಸಿ 6 ವಿದ್ಯಾರ್ಥಿಗಳು ಅಸ್ವಸ್ಥ

    ರಾಸಾಯನಿಕ ಮಿಶ್ರಿತ ಗಾಳಿ ಸೇವಿಸಿ 6 ವಿದ್ಯಾರ್ಥಿಗಳು ಅಸ್ವಸ್ಥ

    ಮಡಿಕೇರಿ: ಇಂದು ಬೆಳ್ಳಂಬೆಳಗ್ಗೆ ಅರ್ಧ ಕೊಡಗು ಆತಂಕದ ಕೂಪಕ್ಕೆ ತಳ್ಳಲ್ಪಟ್ಟಿತ್ತು. ರಸ್ತೆಗಿಳಿಯುವುಕ್ಕೆ ಹೆದರಿ ಜನ ಮನೆಯೊಳಗೆ ಕುಳಿತುಬಿಟ್ಟಿದ್ದರು. ರಸ್ತೆಗಿಳಿದವರು ಉಸಿರಾಡಲು ಪರದಾಡಿದರು. ಆ ಒಂದು ಲಾರಿ ಹೋದ ದಾರಿಯೆಲ್ಲಾ ವಿಷಯುಕ್ತವಾಗಿತ್ತು. 60 ಕಿಲೋ ಮೀಟರ್ ರಾಜ್ಯ ಹೆದ್ದಾರಿ ಉದ್ದಕ್ಕೂ ಸೋರಿಕೆಯಾದ ಆ ದ್ರವ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ.

    ಹೌದು ನೆಮ್ಮದಿಯಾಗಿ ಉಸಿರಾಡುತ್ತಿದ್ದ ಕೊಡಗಿನ ಮಂದಿ ಇಂದು ಬೆಳಗ್ಗೆ ಶಾಕ್‍ಗೆ ಒಳಗಾಗಿದ್ದರು. ಆ ಮಾರ್ಗದಲ್ಲಿ ಹಾದು ಹೋದ ಒಂದು ಲಾರಿಯಿಂದ 60 ಕಿಲೋ ಮೀಟರ್ ಉದ್ದಕ್ಕೂ ಕೆಂಪುಬಣ್ಣದ ದ್ರವ ಸೋರಿಕೆಯಾಗಿತ್ತು. ಆ ರಸ್ತೆಗೆ ಇಳಿದವರಿಗೆ ಉಸಿರಾಡಲು ಆಗಲಿಲ್ಲ. ಉಸಿರು ಎಳೆದುಕೊಂಡರೆ ಕೆಮ್ಮು, ಎದೆ ಉರಿ, ತಲೆನೋವು ಕಾಡಿತ್ತು. ಕಣ್ಣು ಬಿಟ್ಟರೆ ಉರಿ ಉರಿಯ ಅನುಭವವಾಗುತ್ತಿತ್ತು. ಏನಾಗುತ್ತಿದೆ ಅಂತ ಗೊತ್ತಾಗುವಷ್ಟರಲ್ಲಿ ಶಾಲೆಗೆ ಹೋಗುವ 6 ಮಕ್ಕಳು ಅಸ್ವಸ್ಥರಾಗಿದ್ದರು. ಇದು ಅರ್ಧ ಕೊಡಗಿನಲ್ಲಿ ಆತಂಕ ಸೃಷ್ಟಿಸಿತ್ತು. ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಹಲ್ಲಿ ಬಿದ್ದಿದ್ದ ಮಜ್ಜಿಗೆ ಕುಡಿದು 16 ಮಂದಿ ಅಸ್ವಸ್ಥ

    ಕೊಡಗಿನ ಕುಶಾಲನಗರದಿಂದ ಸಿದ್ದಾಪುರ ಮಾರ್ಗವಾಗಿ ಕೇರಳ ಗಡಿಯ ಮಾಕುಟ್ಟ ಚೆಕ್‍ಪೋಸ್ಟ್ ಮೂಲಕ ಕೇರಳಕ್ಕೆ ಹೋಗುತ್ತಿದ್ದ ಲಾರಿಯಿಂದ ಸೋರಿಕೆಯಾದ ದ್ರವವೇ ಇಷ್ಟೊಂದು ಅನಾಹುತ ಸೃಷ್ಟಿಸಿದ್ದು. ಮೇಲ್ನೋಟಕ್ಕೆ ಮೆಣಸಿನಕಾಯಿ ಸಾಸ್ ಸೋರಿಕೆ ಅಂತ ಹೇಳಲಾಗುತ್ತಿದೆ. ಆದರೆ ಸಾಸ್ ಸೋರಿಕೆಯಿಂದ ಹೀಗಾಗುತ್ತಾ ಎಂಬ ಅನುಮಾನ ಮೂಡಿದ್ದು, ಈಗಾಗಲೇ ಲಾರಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಲಾರಿಯಲ್ಲಿ ಇದ್ದ ದ್ರವವನ್ನು ಲ್ಯಾಬ್‍ಗೆ ಕಳುಹಿಸಿದ್ದಾರೆ.

    ಸದ್ಯ ಅಸ್ವಸ್ಥಗೊಂಡಿರುವ ಸಿದ್ದಾಪುರ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖುದ್ದು ಡಿಹೆಚ್‍ಓ ವೆಂಕಟೇಶ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯದ ತಪಾಸಣೆಯನ್ನು ಸ್ವತಃ ಅವರೇ ವಿಚಾರಿಸಿದ್ದಾರೆ. ಇದನ್ನೂ ಓದಿ: 75 ಲಕ್ಷ ಲಂಚ ಕೊಟ್ಟಿದ್ದೇನೆ, ಬ್ಲೂಟೂತ್‍ನಲ್ಲಿ ಪರೀಕ್ಷೆ ಬರೆದಿದ್ದೇನೆ – ತನಿಖೆಗೆ ಡಿಜಿಗೆ ಪತ್ರ ಬರೆದ ಅಭ್ಯರ್ಥಿ

    ಬಳಿಕ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ. ದ್ರವ ಸೋರಿಕೆಯಾದ ಮಾರ್ಗದುದ್ದಕ್ಕೂ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡುತ್ತಿದ್ದು, ಆರೋಗ್ಯದಲ್ಲಿ ಏರುಪೇರಾದವರ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೇ ಸ್ಥಳಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಯಾವ ಕೆಮಿಕಲ್ ಅಂತ ಹೇಳಬಹುದು ಎಂದು ತಿಳಿಸಿದ್ದಾರೆ.

    ಸದ್ಯ ಮಾಕುಟ್ಟ ಚೆಕ್‍ಪೋಸ್ಟ್‌ನಲ್ಲಿ ದ್ರವ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

  • ನೀವು ತಿನ್ನುವ ಬಟಾಣಿ ಆರೋಗ್ಯಕ್ಕೆ ತರಬಹುದು ಕುತ್ತು!

    ನೀವು ತಿನ್ನುವ ಬಟಾಣಿ ಆರೋಗ್ಯಕ್ಕೆ ತರಬಹುದು ಕುತ್ತು!

    ಚಿಕ್ಕೋಡಿ(ಬೆಳಗಾವಿ): ಬಟಾಣಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಪಲಾವ್, ಪಲ್ಯ, ಫ್ರೈಡ್ ರೈಸ್ ಹೀಗೆ ನಾನಾ ವಿಧದ ಅಡುಗೆಗೆ ಬಳಸುತ್ತೇವೆ. ಆದರೆ ಅದೇ ಬಟಾಣಿ ಇದೀಗ ಕೆಮಿಕಲ್‍ಮಯವಾಗಿ ಪರಿವರ್ತನೆಯಾಗಿದ್ದು, ಆರೋಗ್ಯಕ್ಕೆ ಕುತ್ತು ತರುತ್ತಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಾಗೂ ಚಿಕ್ಕೋಡಿ ಭಾಗದಲ್ಲಿ ಪ್ರತಿನಿತ್ಯ ಇಂಥ ವಿಷಪೂರಿತ ತರಕಾರಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಲಬೆರಕೆ ದಂಧೆ ಈಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ. ಗ್ರಾಮೀಣ ಜನರಿಗೂ ಈಗ ಮೋಸದ ದಂಧೆ ಕಾಡಲು ಆರಂಭಿಸಿದೆ. ಹಸಿ ತರಕಾರಿ ಕಾಳುಗಳು ಹಚ್ಚ ಹಸಿರಾಗಿ, ಅಂದವಾಗಿ ಕಾಣಲು ಕೆಮಿಕಲ್ ಬಣ್ಣ ಬಳಿದು ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಬಟಾಣಿ ಪ್ರಮುಖ. ಇಂತಹ ದಂಧೆಯನ್ನು ‘ಪಬ್ಲಿಕ್ ಟಿವಿ’ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿದೆ.

    ಹಚ್ಚ ಹಸಿರಾಗಿ ಕಾಣುವ ಬಟಾಣಿ ಕಾಳುಗಳು ನೈಸರ್ಗಿಕವಲ್ಲ. ಇದಕ್ಕೆ ಕೆಮಿಕಲ್ ಮಿಶ್ರಿತ ಬಣ್ಣವನ್ನ ಬಳಸಿ ಫುಲ್ ಕಲರ್‍ಫುಲ್ ಮಾಡುತ್ತಾರೆ. ಹಸಿರಾಗಿ ಕಾಣಲು ಹೀಗೆ ವಿಷಪೂರಿತ ಬಣ್ಣ ಬಳಿಯಲಾಗುತ್ತದೆ. ಕಲರ್ ನೋಡಿದ ಗ್ರಾಮೀಣ ಭಾಗದ ಜನತೆ ಮೋಸ ಹೋಗಿ ಕೊಂಡುಕೊಳ್ಳುತ್ತಿದ್ದು, ತಮ್ಮ ಆರೋಗ್ಯಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಕೆಮಿಕಲ್ ಮಿಶ್ರಣ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ನಿದ್ರಾ ಸ್ಥಿತಿಯಲ್ಲಿದ್ದಾರೆ.

    ಈ ದಂಧೆಕೋರರು ಪಟ್ಟಣ ಪ್ರದೇಶಗಳಿಗೆ ಆಗಮಿಸುವ ಗ್ರಾಮೀಣ ಜನರನ್ನು ಟಾರ್ಗೆಟ್ ಮಾಡಿಕೊಂಡು, ಪಟ್ಟಣಗಳ ಸಂತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಸಂತೆಗೆ ಹೆಚ್ಚು ಗ್ರಾಮೀಣ ಪ್ರದೇಶದ ಜನ ಬರುತ್ತಾರೆ. ಬಣ್ಣಕ್ಕೆ ಮಾರು ಹೋಗಿ ಇಂತಹ ಕೆಮಿಕಲ್ ಮಿಶ್ರಿತ ತರಕಾರಿಯನ್ನು ಖರೀದಿ ಮಾಡುತ್ತಿದ್ದಾರೆ. ಹಳ್ಳಿ ಜನರಿಗೆ ಇದ್ಯಾವುದರ ಅರಿವಿಲ್ಲದೆ ಖರೀದಿ ಮಾಡುತ್ತಿದ್ದರೆ, ನಗರದ ವಿದ್ಯಾವಂತರು ಸಹ ಇಂತಹ ಕಲರ್‍ಫುಲ್ ಬಟಾಣಿಗಳಿಗೆ ಮಾರು ಹೋಗುತ್ತಿದ್ದಾರೆ.

    ಮೊದಲು ಬೆಂಗಳೂರು ಸೇರಿದಂತೆ ಮಹಾ ನಗರಗಳ ಜನರನ್ನು ಟಾರ್ಗೆಟ್ ಮಾಡಿ ಈ ದಂಧೆ ನಡೆಯುತ್ತಿತ್ತು. ಆದರೆ ಇದೀಗ ಗ್ರಾಮೀಣ ಭಾಗಕ್ಕೂ ಈ ದಂಧೆ ಒಕ್ಕರಿಸಿದ್ದು, ತಾಜಾ ತರಕಾರಿ ಸೇವಿಸುತ್ತಿದ್ದ ಗ್ರಾಮೀಣ ಜನ ಕೂಡ ಈಗ ವಿಷಪೂರಿತ ತರಕಾರಿ ಸೇವನೆ ಮಾಡುವಂತಾಗಿದೆ.

    ಇಂತಹ ವಿಷಪೂರಿತ ಬಣ್ಣದ ಸೇವನೆಯಿಂದ ಕ್ಯಾನ್ಸರ್ ನಂತ ಮಾರಕ ರೋಗಗಳು ಬರುವ ಸಾಧ್ಯತೆ ಹೆಚ್ಚು. ಆದರೂ ಈ ದಂಧೆ ರಾಜರೋಷವಾಗಿ ಪ್ರತಿನಿತ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ದಂಧೆ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಬಟಾಣಿಗೆ ಬಳಸುವ ಕೆಮಿಕಲ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಬಗ್ಗೆ ನಮ್ಮ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ. ಜನ ಸಹ ಈ ಕುರಿತು ಜಾಗೃತವಾಗಬೇಕು. ಇಲಾಖೆಯಿಂದ ಸಹ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

  • ವೃಷಭಾವತಿ ದಡದಲ್ಲಿ ಸುಡ್ತಿದ್ದಾರೆ ಕೆಮಿಕಲ್, ಪ್ಲಾಸ್ಟಿಕ್ – ದೂರು ಕೊಟ್ರು ಕ್ಯಾರೆ ಅನ್ನಲ್ಲ

    ವೃಷಭಾವತಿ ದಡದಲ್ಲಿ ಸುಡ್ತಿದ್ದಾರೆ ಕೆಮಿಕಲ್, ಪ್ಲಾಸ್ಟಿಕ್ – ದೂರು ಕೊಟ್ರು ಕ್ಯಾರೆ ಅನ್ನಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯ ಕೊಳಚೆ ನೀರು ಸೇರಿ ವೃಷಭಾವತಿ ನದಿ ಈಗಾಗಲೇ ಕೊಳಚೆ ಗುಂಡಿ ರೀತಿ ಆಗಿ ಹೋಗಿದೆ. ಇನ್ನು ನದಿ ಜಾಗವನ್ನ ಸುತ್ತಲಿನ ಹಲವು ಕಾರ್ಖಾನೆಗಳು ಒತ್ತುವರಿ ಮಾಡಿಕೊಂಡಿದೆ ಎನ್ನುವ ಆರೋಪವೂ ಇದೆ. ಈ ಮಾಲಿನ್ಯ ಮಧ್ಯೆ ವೃಷಭಾವತಿ ನದಿ ದಡದಲ್ಲಿ ಪ್ಲಾಸ್ಟಿಕ್ ಸುಡುವ ಕೆಲಸ ಕೂಡ ಇತ್ತೀಚೆಗೆ ಹೆಚ್ಚಾಗಿದೆ.

    ಕತ್ತಲಾಗುತ್ತಲೇ ವೇಸ್ಟ್ ಪ್ಲಾಸ್ಟಿಕ್ ತಂದು ನದಿ ದಡದಲ್ಲಿ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಅದರಿಂದ ಬರುವ ವಿಷಪೂರಿತ ಹೊಗೆಯಿಂದ ವೃಷಭಾವತಿಯ ಅಸುಪಾಸಿನ ಅಪಾರ್ಟ್‌ಮೆಂಟ್‌ ನಿವಾಸಿಗಳು ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ತರೇಹವರಿ ಪ್ಲಾಸ್ಟಿಕ್ ಸುಡುವುದರ ಜೊತೆಗೆ ಬಾಯ್ಲರ್ ಗಳಿಂದ ಹೊರಬರುವ ಕೆಮಿಕಲ್ ಮಿಶ್ರಿತ ನೀರನ್ನ ಕೂಡ ವೃಷಭಾವತಿ ನದಿಗೆ ಬಿಡಲಾಗುತ್ತಿದೆ. ಈ ಕೆಮಿಕಲ್‍ಗಳು ನದಿ ನೀರು ಸೇರುತ್ತಿರುವುದರಿಂದ ಪ್ಲಾಸ್ಟಿಕ್, ಕೆಮಿಕಲ್ ಸೇರಿ ಹೊಗೆ ಹೆಚ್ಚಾಗುತ್ತಿದ್ದು, ನದಿ ಪಾತ್ರದ ಜನರಿಗೆ ಉಸಿರಾಡಲು ಕೂಡ ಕಷ್ಟವಾಗುತ್ತಿದೆ.

    ಗ್ರಾಮ ಪಂಚಾಯ್ತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿ, ನಮಗೆ ಈ ಕೆಮಿಕಲ್ ಹೊಗೆಯಿಂದ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೆಡೆ ಬೆಂಗಳೂರಿನ ಏಕ ಮಾತ್ರ ನದಿಯನ್ನ ಹಾಳು ಮಾಡಿ, ನದಿ ಜಾಗವನ್ನ ಕಬ್ಜ ಮಾಡಿಕೊಂಡು, ನದಿ ಹಾಗೂ ಅದರ ಸುತ್ತಲಿನ ಪರಿಸರವನ್ನ ಹಾಳು ಮಾಡುತ್ತಿದ್ದಾರೆ. ಇನ್ನೊಂದೆಡೆ ನದಿ ಆಸುಪಾಸಿನ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.

    ಅಷ್ಟೇ ಅಲ್ಲದೆ ಪರಿಸರಕ್ಕೆ ಮಾರಕವಾಗಿರುವ ಈ ಕೆಮಿಕಲ್ ಹಾಗೂ ಪ್ಲಾಸ್ಟಿಕ್ ಸುಡುವುದರ ಹೊಗೆಯಿಂದಾಗಿ ಸುತ್ತಲಿನ ಪ್ರಾಣಿ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಿ, ಕೆಮಿಕಲ್, ಪ್ಲಾಸ್ಟಿಕ್ ಸುಡುವ ಕಿಡಿಗೇಡಿಗಳಿಗೆ ಶಿಕ್ಷೆ ನೀಡದೇ ಇದ್ದರೆ, ಈ ಮಾಲಿನ್ಯ ಪರಿಸರವನ್ನು ಅಪೋಷನೆ ತೆಗೆದುಕೊಳ್ಳೊಸಂತು ಸತ್ಯ. ಈಗಲಾದರೂ ಅಧಿಕಾರಿಗಳು ಇತ್ತ ಗಮನ ಕೊಟ್ಟು ವೃಷಭಾವತಿ ನದಿಯನ್ನು, ಅದರ ಜಲಚರಗಳನ್ನು ಹಾಗೂ ಸುತ್ತಮುತ್ತಲು ವಾಸಿಸುವ ಪ್ರಾಣಿ, ಪಕ್ಷಿ, ಜನರ ಜೀವವನ್ನು ರಕ್ಷಿಸಬೇಕಿದೆ.

  • ಬಲೂನ್ ಊದುವ ವೇಳೆ ಕೆಮಿಕಲ್ ಮಿಶ್ರಿತ ನೀರು ಸೇವನೆ- ಎಚ್.ವೈ.ಮೇಟಿ ಪುತ್ರಿ ಅಸ್ವಸ್ಥ

    ಬಲೂನ್ ಊದುವ ವೇಳೆ ಕೆಮಿಕಲ್ ಮಿಶ್ರಿತ ನೀರು ಸೇವನೆ- ಎಚ್.ವೈ.ಮೇಟಿ ಪುತ್ರಿ ಅಸ್ವಸ್ಥ

    ಬಾಗಲಕೋಟೆ: ಬಲೂನ್ ಊದುವ ವೇಳೆ ಆಕಸ್ಮಿಕವಾಗಿ ಕೆಮಿಕಲ್ ಮಿಶ್ರಿತ ನೀರು ಸೇವಿಸಿದ ಮಾಜಿ ಸಚಿವ ಎಚ್.ವೈ.ಮೇಟಿ ಪುತ್ರಿ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚಾಲನೆ ನೀಡಿದ್ದರು. ಬಳಿಕ ಶಾಲಾ ಶಿಕ್ಷರು ಬಲೂನ್ ಊದಲು ಮನವಿ ಮಾಡಿದ್ದು, ಈ ವೇಳೆ ಬಾಯಕ್ಕ ಅವರ ದೇಹದಲ್ಲಿ ಕೆಮಿಕಲ್ ಮಿಶ್ರಿತ ಬಲೂನ್ ನೀರು ಸೇರ್ಪಡೆಯಾಗಿದೆ.

    ಕಾರ್ಯಕ್ರಮದ ವೇದಿಕೆಯಲ್ಲೇ ಬಾಯಕ್ಕ ಅವರು ಅಸ್ವಸ್ಥರಾಗಿ ವಾಂತಿ ಮಾಡಿಕೊಂಡರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಶಾಲಾ ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಸದ್ಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಬಾಯಕ್ಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಬಲೂನ್‍ನಲ್ಲಿದ್ದ ಗ್ಲಿಸರಿನ್ ಹಾಗೂ ಶಾಂಪೂ ಮಿಶ್ರಿತ ನೀರು ಬಾಯಕ್ಕ ಅವರ ದೇಹ ಸೇರಿರುವುದು ಅವರು ಅಸ್ವಸ್ಥರಾಗಲು ಕಾರಣವಾಗಿದ್ದು, ಹೀಗಾಗಿ ವಾಂತಿ ಶುರುವಾಗಿದೆ. ಈಗಾಗಲೇ ಅವರ ದೇಹ ಸೇರಿದ್ದ ಕೆಮಿಕಲ್ ನೀರನ್ನು ಹೊರ ತೆಗೆಯಲಾಗಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಪಿ.ಎ.ಬಿರಾದಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಕಬಾಬ್‌ಗೆ ಹಾಕಲಾಗುತ್ತೆ ಕಿಲ್ಲರ್ ಕೆಮಿಕಲ್ – ಕಲರ್‌ಗಾಗಿ ಡೇಂಜರ್ ಪೌಡರ್ ಮಿಕ್ಸ್

    ಕಬಾಬ್‌ಗೆ ಹಾಕಲಾಗುತ್ತೆ ಕಿಲ್ಲರ್ ಕೆಮಿಕಲ್ – ಕಲರ್‌ಗಾಗಿ ಡೇಂಜರ್ ಪೌಡರ್ ಮಿಕ್ಸ್

    ಬೆಂಗಳೂರು: ಚಿಕನ್ ಕಬಾಬ್ ಕಂಡ ತಕ್ಷಣ ಅಹಾ ಎಂದು ತಿನ್ನುವವರು ಈ ಸುದ್ದಿಯನ್ನು ನೋಡಲೇ ಬೇಕು. ಏಕೆಂದರೆ ರಸ್ತೆ ಬದಿಯಲ್ಲಿ ತಿನ್ನುವ ಕಲರ್‌ಫುಲ್ ಕಬಾಬ್ ಅನ್ನು ಕೊಳಕು ಜಾಗದಲ್ಲಿ ತಯಾರಿಸುತ್ತಾರೆ.

    ಹಣ ಕೊಟ್ಟು ಸಿಕ್ಕ ಸಿಕ್ಕ ಕಡೆ ಕಬಾಬ್ ತಿಂದರೆ ಫ್ರೀಯಾಗಿ ಕಾಯಿಲೆಗಳು ಕೂಡ ಬರುತ್ತದೆ. ಏಕೆಂದರೆ ಕಬಾಬ್ ತಯಾರಿಸುವ ವ್ಯಕ್ತಿ ಸಿಗರೇಟ್ ಸೇದಿಕೊಂಡು ಅದರ ಹೊಗೆಯನ್ನು ಕಬಾಬ್ ಮಸಾಲೆ ಪಕ್ಕ ಉಫ್ ಉಫ್ ಎಂದು ಉದುತ್ತಾನೆ. ಅಲ್ಲದೆ ಸಿಗರೇಟಿನ  ವೇಸ್ಟ್ ಅನ್ನು ಕಬಾಬ್ ಮಸಾಲೆಯ ಪಕ್ಕವೇ ಹಾಕುತ್ತಾನೆ.

    ಸಿಗರೇಟು ಸೇದಿದ ಹಾಗೂ ಪದೇಪದೇ ಬಾಯಿಯೊಳಗೆ ಕೈಹಾಕಿರುವ ಅದೇ ಕೈಯಲ್ಲಿ ವ್ಯಕ್ತಿ ಮಸಾಲೆ ರುಬ್ಬುತ್ತಾನೆ. ಇರೋ ಬರೋ ಕೆಮಿಕಲ್ ಜೊತೆಗೆ ಸಿಗರೇಟಿನ ಹೊಗೆ, ಅಳಿದುಳಿದ ಸಿಗರೇಟಿನ ಅವಶೇಷವೂ ಕೂಡ ಮಸಾಲೆಯ ಕಬಾಬ್‌ನೊಳಗೆ ಚಂದಗೆ ಬೆರೆತು ಹೋಗುತ್ತೆ.

    ರಸ್ತೆ ಬದಿಯಲ್ಲಿ ಕೊಂಚವೂ ಸ್ವಚ್ಛತೆಯಂತೂ ಇಲ್ಲ. ಗಲೀಜು ಗಲೀಜಾಗಿರುವ ಜಾಗದಲ್ಲಿ ಈ ಕಬಾಬ್‌ಗಳು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ತಯಾರಾಗುತ್ತೆ. ಅಲ್ಲಲ್ಲಿ ನೊಣಗಳು ಹಾರಾಡುವ ಗಲೀಜು ಜಾಗದಲ್ಲಿ ಚೆಲ್ಲಿರುವ ಚಿಕನ್ ತುಂಡುಗಳು, ತೊಳೆಯದ ಕೈಯಲ್ಲಿ ಮಸಾಲೆ ಬೆರೆಸುವ ಕೈಗಳು, ಕಬಾಬ್ ಕರಿಯುವ ಬಾಣಲೆ ನೋಡಿದ್ದರೆ ಜನರು ಕಬಾಬ್ ತಿನ್ನುವುದನ್ನು ಬಿಟ್ಟು ಬಿಡುತ್ತಾರೆ.

    ಸಿಕ್ಕ ಸಿಕ್ಕ ಲೋಕಲ್ ಕೆಮಿಕಲ್‌ಗಳನ್ನು ಈ ಕಬಾಬ್‌ಗೆ ಬಳಕೆ ಮಾಡುತ್ತಾರೆ. ಅಲ್ಲದೆ ಈ ಕಬಾಬ್ ಟೇಸ್ಟ್ ಬರುವುದಕ್ಕೆ ಅಜಿನಾಮೋಟೋ ಎನ್ನುವ ಡೇಂಜರಸ್ ಪೌಡರ್‌ಗಳ ಬಳಕೆಯನ್ನು ಮಾಡಲಾಗುತ್ತೆ. ಇಂತಹ ಕಬಾಬ್ ಸೇವಿಸಿದ್ದರೆ ಹೊಟ್ಟೆಯ ಸಮಸ್ಯೆಯ ಜೊತೆಗೆ ಕಲರ್ ಬರುವುದ್ದಕ್ಕೆ ಪೌಡರ್, ಟೇಸ್ಟಿಂಗ್ ಪೌಡರ್ ಹಾಕುವುದರಿಂದ ಕ್ಯಾನ್ಸರ್, ಕರುಳು ಬೇನೆಯಂತಹ ಕಾಯಿಲೆನೂ ಬರುತ್ತೆ.

  • ಕೆಮಿಕಲ್ ಬಳಸಿ ಕಾರಿನ ಗ್ಲಾಸ್ ಒಡೆದು ಹಣ ಎಗರಿಸಿದ ಖತರ್ನಾಕ್ ಕಳ್ಳರು

    ಕೆಮಿಕಲ್ ಬಳಸಿ ಕಾರಿನ ಗ್ಲಾಸ್ ಒಡೆದು ಹಣ ಎಗರಿಸಿದ ಖತರ್ನಾಕ್ ಕಳ್ಳರು

    ಹಾವೇರಿ: ಕಚೇರಿ ಒಳಗಡೆ ಹೋಗಿ ಬರುವಷ್ಟರಲ್ಲಿ ಕಾರಿನಲ್ಲಿದ್ದ ಹಣ ಎಗರಿಸಿದ ಚೋರರು ಪರಾರಿಯಾದ ಘಟನೆ ಹಾವೇರಿ ನಗರದ ಹಳೆ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ನಡೆದಿದೆ.

    ಗುತ್ತಿಗೆದಾರ ರಾಜಶೇಖರ್ ಮಾದರ ಎಂಬುವರಿಗೆ ಸೇರಿದ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿರುವ ಕಳ್ಳರು, ಕಾರಿನಲ್ಲಿದ್ದ 80 ಸಾವಿರ ರುಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ.

    ರಾಜಶೇಖರ್ ಬ್ಯಾಂಕ್ ಆಫ್ ಬರೋಡಾದಲ್ಲಿ 2 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಒಬ್ಬರಿಗೆ 1.20 ಲಕ್ಷ ಇಪ್ಪತ್ತು ಸಾವಿರ ನೀಡಿ ಉಳಿದ ಹಣವನ್ನು ಕಾರಿನಲ್ಲಿ ಇಟ್ಟುಕೊಂಡಿದ್ದರು. ಜಿಲ್ಲಾಪಂಚಾಯಿತ್ ಕಟ್ಟಡಕ್ಕೆ ಆಗಮಿಸಿದ ಬಳಿಕ ಕೆಲಸಕ್ಕೆ ಎಂದು ಒಳ ಪ್ರವೇಶಿಸಿದ್ದಾರೆ.

    ಈ ವೇಳೆ ಕೆಮಿಕಲ್ ಬಳಸಿ ಕಾರಿನ ಗ್ಲಾಸ್ ಒಡೆದ ಕಳ್ಳರು ಹಾಡಹಗಲೇ ಹಣ ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ನಗರದಲ್ಲಿರೋ ಸಿಸಿಟಿವಿ ಸರಿಪಡಿಸಬೇಕು. ಇಲ್ಲ ಎಂದರೆ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಕೆಮಿಕಲ್ ಸೋರಿಕೆಯಿಂದ ಸುಟ್ಟು ಕರಕಲಾದ ಮರಗಳು

    ಕೆಮಿಕಲ್ ಸೋರಿಕೆಯಿಂದ ಸುಟ್ಟು ಕರಕಲಾದ ಮರಗಳು

    ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಕೆಮಿಕಲ್ ಸಾಗಿಸುತ್ತಿದ್ದ ಲಾರಿಯಿಂದ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿರುವ ಘಟನೆ ಕಾಳಿ ನದಿಯ ಬಳಿ ನಡೆದಿದೆ.

    ಕೈಗಾಗೆ ಹೋಗಬೇಕಿದ್ದ ಲಾರಿ ದಾರಿ ತಪ್ಪಿ ಕದ್ರಾ ಕಡೆ ಬಂದಿದೆ. ಕೈಗಾ ಕಡೆ ಲಾರಿ ತಿರುಗಿಸುವಾಗ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿವೆ. ಪಕ್ಕದಲ್ಲೇ ಹರಿಯುತ್ತಿದ್ದ ನೀರಿಗೂ ಕೆಮಿಕಲ್ ಸೇರಿಕೊಂಡಿದೆ. ಇದರಿಂದ ನೂರಾರು ಮೀನುಗಳು ಸಾವನ್ನಪ್ಪಿವೆ ಹಾಗೂ ಒಂದು ಎಮ್ಮೆ ಸತ್ತಿದೆ ಎಂದು ತಿಳಿದುಬಂದಿದೆ.

    ಕದ್ರಾ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರು ಇದಾಗಿದ್ದು, ಮುನ್ನೇಚ್ಚರಿಕಾ ಕ್ರಮವಾಗಿ ಗ್ರಾಮಕ್ಕೆ ಎರಡು ದಿನ ಕುಡಿಯುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕದ್ರಾ ಗ್ರಾಮದಲ್ಲಿ ಸುಮಾರು 5 ಸಾವಿರ ಜನ ವಾಸಮಾಡುತ್ತಾರೆ. ಎರಡು ದಿನ ಕುಡಿಯುವ ನೀರನ್ನು ಸ್ಥಗಿತ ಮಾಡಿದಲ್ಲಿ ತೊಂದರೆಯಾಗುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

    ಕರ್ನಾಟಕ ವಿದ್ಯುತ್ ನಿಗಮ, ಎನ್ ಪಿ ಸಿ ಕಾಲೋನಿಗಳು ಇದೇ ಗ್ರಾಮದಲ್ಲಿ ಇವೆ. ಎರಡು ದಿನ ಕುಡಿಯುವ ನೀರನ್ನು ಬಂದ್ ಮಾಡಿದಲ್ಲಿ ಬೇರೆ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

    ಲಾರಿ ಸಿಬ್ಬಂದಿಗಳು ಸೋರಿಕೆಯನ್ನು ಸರಿಪಡಿಸಿಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಯಾವುದೇ ದೂರು ದಾಖಲಾಗಿಲ್ಲ.

  • ಮಾರ್ಕೆಟ್‍ ನಲ್ಲಿ ಸಿಗೋ ಚಿಲ್ಲಿಪೌಡರ್ ಖರೀದಿಗೂ ಮುನ್ನ ಈ ಸ್ಟೋರಿ ಓದಿ

    ಮಾರ್ಕೆಟ್‍ ನಲ್ಲಿ ಸಿಗೋ ಚಿಲ್ಲಿಪೌಡರ್ ಖರೀದಿಗೂ ಮುನ್ನ ಈ ಸ್ಟೋರಿ ಓದಿ

    ಬೆಂಗಳೂರು: ಮಾರುಕಟ್ಟೆಗಳ ಚಿಲ್ಲಿಪೌಡರ್ ಬಳಸುವ ಗ್ರಾಹಕರೇ ಎಚ್ಚರ. ಯಾಕಂದ್ರೆ ರಾಜ್ಯದಲ್ಲಿ  ಮಾರಾಟವಾಗುತ್ತಿರುವ ಮೆಣಸಿನ ಪುಡಿಯಲ್ಲಿದೆ ವಿಷಯುಕ್ತ ರಾಸಾಯನಿಕ ಸೇರಿಕೊಂಡಿದೆ ಎಂದು ಕೇಂದ್ರ ಸ್ಪೈಸಿ ಬೋರ್ಡ್ ಎಚ್ಚರಿಕೆ ನೀಡಿದೆ.

    ಚಿಲ್ಲಿ ಪೌಡರ್, ಮೆಣಸಿನ ಪೌಡರ್ ನಲ್ಲಿ ಡೇಂಜರಸ್ ಕೆಮಿಕಲ್ ಮಿಕ್ಸ್ ಆಗಿದ್ದು, ಇದನ್ನು ತಿಂದರೆ ಜನರ ಆರೋಗ್ಯದ ಸ್ಥಿತಿ ಹದಗೆಡುತ್ತದೆ. ಮಾರುಕಟ್ಟೆಗಳಲ್ಲಿ ಸಿಗುವ ಚಿಲ್ಲಿಪೌಡರ್ ನಲ್ಲಿ ಶೂ ಪಾಲಿಷ್ ಮಾಡುವ ಕಲರ್, ಬಟ್ಟೆಗಳಿಗೆ ಬಳಸುವ ಸುಡಾನ್ ಕೆಮಿಕಲ್ ಬಳಕೆಯಾಗಿದೆ. ಅಷ್ಟೇ ಅಲ್ಲದೇ ಕ್ಯಾನ್ಸರ್ ಕಾರಕ ಅಂಶವಿರುವ ಸುಡಾನ್ ಫೋರ್ ಕೆಮಿಕಲ್ ಕೂಡ ಬಳಕೆಯಾಗಿರುವುದು ಮೈಸೂರಿನ ಕಾಂಪ್ರೆಸ್ ಚಿಲ್ಲಿ ಪೌಡರ್ ನಲ್ಲಿ ಪತ್ತೆಯಾಗಿದೆ. ಈ ಕುರಿತು ಕೇಂದ್ರ ಸ್ಪೈಸಿ ಬೋರ್ಡ್ ಟೆಸ್ಟ್ ಪರಿಶೀಲಿಸಿದಾಗ ವಿಷಯುಕ್ತ ಕೆಮಿಕಲ್ ಬಳಕೆ ರಹಸ್ಯ ಬಯಲಾಗಿದೆ. ಕೂಡಲೇ ಕರ್ನಾಟಕ ಆಹಾರ ಸುರಕ್ಷತಾ ಇಲಾಖೆಗೆ ಪತ್ರ ಬರೆದು ಮಂಡಳಿ ಎಚ್ಚರಿಸಿದೆ.

    ಆಹಾರ ಸುರಕ್ಷತಾ ಇಲಾಖೆ ಕೊಪ್ರಾಸ್ ಕಂಪನಿಯ ಮೆಟ್ರಿಕ್ ಟನ್ ನಷ್ಟು ಚಿಲ್ಲಿ ಪೌಡರ್ ನನ್ನ ವೈಜ್ಞಾನಿಕವಾಗಿ ಸುಡುವುದಕ್ಕೆ ಮಂಡಳಿ ಆದೇಶಿಸಿದ್ದು, ಉಳಿದ ಎಲ್ಲಾ ಬ್ರ್ಯಾಂಡ್‍ಗಳ ಮೆಣಸಿನ ಪೌಡರ್ ಸ್ಯಾಂಪಲ್ ಟೆಸ್ಟ್ ಗೆ ಮುಂದಾಗಿದೆ. ಅಷ್ಟೇ ಅಲ್ಲದೇ ಕರ್ನಾಟದ ಚಿಲ್ಲಿಪೌಡರ್ ಈಗ ವಿದೇಶದಲ್ಲೂ ಬ್ಯಾನ್ ಆಗಿದೆ.

  • ಅಪಾಯಕಾರಿ ಕೆಮಿಕಲ್ ಇಂಜೆಕ್ಟ್ ಮಾಡ್ಕೊಂಡು ನರ್ಸ್ ಆತ್ಮಹತ್ಯೆ

    ಅಪಾಯಕಾರಿ ಕೆಮಿಕಲ್ ಇಂಜೆಕ್ಟ್ ಮಾಡ್ಕೊಂಡು ನರ್ಸ್ ಆತ್ಮಹತ್ಯೆ

    ನೆಲ್ಲೂರು: ಸರ್ಕಾರಿ ಆಸ್ಪತ್ರೆಯ ನರ್ಸ್‍ವೊಬ್ಬರು ಅಪಾಯಕಾರಿ ಕೆಮಿಕಲ್ ಇಂಜೆಕ್ಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

    26 ವರ್ಷದ ಮಮತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ಮಲತಃ ಗುಂಟೂರು ಜಿಲ್ಲೆಯ ನರಸರಪೇಟ್‍ನ ಕೇಸನಪಲ್ಲಿ ಗ್ರಾಮದವರು. ಮಮತಾ ತಂದೆ ಯೇಸುರತ್ನಂ ಕೆಲವು ವರ್ಷಗಳ ಹಿಂದೆ ಹೆಂಡತಿಯಿಂದ ದೂರವಾಗಿದ್ದರು. ಮಮತಾ ಹಾಗೂ ಸಹೋದರ ಕೋಟೇಶ್ವರ್ ರಾವ್‍ನನ್ನು ತಾಯಿ ಮಾರ್ತಮ್ಮ ಸಾಕಿ ಬೆಳೆಸಿದ್ದರು. ಸಂಕಷ್ಟದ ನಡುವೆಯೂ ಮಗಳಿಗೆ ಒಳ್ಳೇ ವಿದ್ಯಾಭ್ಯಾಸ ಕೊಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಮಮತಾ ನರ್ಸಿಂಗ್ ಪದವಿ ಮುಗಿಸಿದ ಬಳಿಕ ನೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ 11 ತಿಂಗಳ ಗುತ್ತಿಗೆ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು. ಮೊದಲಿಗೆ ಆಸ್ಪತ್ರೆಗೆ ಸೇರಿದ ವಸತಿ ನಿಲಯದಲಿ ವಾಸವಿದ್ದರು. ಬಳಿಕ ತನ್ನ ಸ್ನೇಹಿತೆಯರಾದ ಭವಾನಿ ಹಾಗೂ ಪದ್ಮಶ್ರೀಯೊಂದಿಗೆ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು.

    ಸೋಮವಾರದದು ಕೆಲಸ ಮುಗಿಸಿ ಮನೆಗೆ ಬಂದ ಮಮತಾ ಎಂದಿನಂತೆ ತನ್ನ ಸ್ನೇಹಿತೆಯರೊಂದಿಗೆ ಊಟ ಸೇವಿದ್ದರು. ಸ್ನೇಹಿತೆಯರು ಮಲಗಲು ಹೋದ ಬಳಿಕ ಮಮತಾ ತನ್ನ ಪ್ರಿಯಕರ ತೇಜಾನೊಂದಿಗೆ ಮಾತನಾಡಿದ್ದರು. ಬಳಿಕ ತಾನು ತಂದಿದ್ದ ಸಿರಿಂಜ್ ಹಾಗೂ ಕೆಮಿಕಲ್ ತೆಗೆದುಕೊಂಡು ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಕಲವೇ ಕ್ಷಣಗಳಲ್ಲಿ ಮಮತಾ ಕುಸಿದು ಬಿದ್ದಿದ್ದಾರೆ. ನಂತರ ನಸುಕಿನ ಜಾವ ಸುಮಾರು 4 ಗಂಟೆ ವೇಳೆಗೆ ಮಮತಾ ಸ್ನೇಹಿತೆಯೊಬ್ಬರು ಹಾಸಿಗೆ ಮೇಲೆ ಬಿದ್ದಿದ್ದ ಮಮತಾರನ್ನು ನೋಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮಮತಾರನ್ನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗಾಗಲೇ ತಡವಾಗಿತ್ತು. ಮಮತಾ ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ವಿಷಯ ತಿಳಿದು ಮಮತಾ ತಾಯಿ ಹಾಗೂ ಸಹೋದರ ಕೂಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

    ಸದ್ಯ ಮಮತಾ ತಾಯಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರೇಮ ವೈಫಲ್ಯದಿಂದ ಮಮತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಮಮತಾ ತಾಯಿ ಫೋನ್ ಮಾಡಿ ಆಕೆಗೆ ಮದುವೆ ನಿಶ್ಚಯಿಸಿರುವುದಾಗಿ ಹೇಳಿದ್ದರು. ಆದ್ರೆ ಈಗಲೇ ಮದುವೆ ಬೇಡ ಎಂದು ಮಮತಾ ತನ್ನ ತಾಯಿಯೊಂದಿಗೆ ವಾದಿಸಿದ್ದರು ಎಂದು ವರದಿಯಾಗಿದೆ.