Tag: ಕೆಬಿಸಿ-11

  • ಅವಮಾನಿಸುವ ಉದ್ದೇಶವಿರಲಿಲ್ಲ, ನೋವಾಗಿದ್ದರೆ ಕ್ಷಮೆ ಇರಲಿ: ಅಮಿತಾಬ್ ಬಚ್ಚನ್

    ಅವಮಾನಿಸುವ ಉದ್ದೇಶವಿರಲಿಲ್ಲ, ನೋವಾಗಿದ್ದರೆ ಕ್ಷಮೆ ಇರಲಿ: ಅಮಿತಾಬ್ ಬಚ್ಚನ್

    ಮುಂಬೈ: ಯಾರನ್ನು ಅವಮಾನಿಸುವ ಉದ್ದೇಶ ನಮಗಿರಲಿಲ್ಲ. ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಕ್ಷಮೆ ಕೇಳುವ ಮೂಲಕ ಎಲ್ಲ ವಿವಾದಗಳಿಗೆ ಅಮಿತಾಬ್ ಬಚ್ಚನ್ ಇತಿಶ್ರೀ ಹಾಕಿದ್ದಾರೆ.

    ಅಮಿತಾಬ್ ಬಚ್ಚನ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಇಲ್ಲಿ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಲಾಗುತ್ತದೆ. ಹಾಗೆಯೇ ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ಕೇಳಲಾದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿತ್ತು.

    ಪ್ರಶ್ನೆ: ಈ ಕೆಳಗಿನವರಲ್ಲಿ ಯಾರು ಮೊಗಲ್ ಸಾಮ್ರಾಟ್ ಔರಂಗಜೇಬ್ ಸಮಕಾಲೀನ ರಾಜ?
    ಎ. ಮಹಾರಾಣಾ ಪ್ರತಾಪ್ ಬಿ. ರಾಣಾ ಸಾಂಗಾ ಸಿ. ಮಹಾರಾಜ ರಣ್‍ಜಿತ್ ಸಿಂಹ ಡಿ. ಶಿವಾಜಿ

    ಈ ಪ್ರಶ್ನೆಯ ಉತ್ತರ ನಾಲ್ಕನೇ ಆಯ್ಕೆಯಾಗಿತ್ತು. ಆದರೆ ಪ್ರಶ್ನೆಯಲ್ಲಿ ಎಲ್ಲ ರಾಜರ ಹೆಸರನ್ನು ಪೂರ್ಣವಾಗಿ ಬಳಸಿ, ಛತ್ರಪತಿ ಶಿವಾಜಿ ಮಹಾರಾಜ ಅವರ ಹೆಸರನ್ನು ಏಕವಚನದಲ್ಲಿ ಬಳಸಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಶಿವಾಜಿ ಮಹಾರಾಜ ಮರಾಠರಿಗೆ ಮಾದರಿ ನಾಯಕ. ಎಲ್ಲರಿಗೂ ಅವರ ಬಿರುದಾಂಕಿತಗಳಿಂದ ಸಂಭೋದಿಸಿ ಶಿವಾಜಿ ಅವರಿಗೆ ಅವಮಾನಿಸಲಾಗಿದೆ. ಹಾಗಾಗಿ ವಾಹಿನಿ ಮತ್ತು ಅಮಿತಾಬ್ ಬಚ್ಚನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ನೆಟ್ಟಿಗರು ಟ್ವೀಟ್ ಮಾಡಲಾರಂಭಿಸಿದ್ದರು.

    ಎಚ್ಚೆತ್ತಕೊಂಡ ಖಾಸಗಿ ವಾಹಿನಿ ತನ್ನ ವಕ್ತಾರರ ಮೂಲಕ ಕ್ಷಮೆಯನ್ನು ಕೇಳಿದೆ. ಕಾರ್ಯಕ್ರಮದ ಆಯೋಜಕರಾದ ಸಿದ್ಧಾರ್ಥ ಬಸು ಸಹ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಅವರ ಗೌರವ ಸ್ಮರಣಾರ್ಥವಾಗಿ ಈ ಪ್ರಶ್ನೆಯನ್ನು ಕೇಳಲಾಗಿತ್ತೇ ವಿನಃ ಅಗೌರವ ತೋರಿಸುವ ಉದ್ದೇಶದಿಂದ ಅಲ್ಲ. ಈ ಸೀಸನ್ ನಲ್ಲಿ ಹಲವು ರಾಜರ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಎಲ್ಲರ ಹೆಸರನ್ನು ಗೌರವಪೂರ್ವಕವಾಗಿಯೇ ಬಳಸಲಾಗಿದೆ. ಅಜಾಗರೂಕತೆ ಮತ್ತು ಸಿಬ್ಬಂದಿಯ ಲೋಪದಿಂದಾಗಿ ಈ ತಪ್ಪಾಗಿದ್ದು ಎಲ್ಲರಲ್ಲಿ ಕ್ಷಮೆ ಕೇಳುತ್ತೇವೆ ಎಂದು ಸಿದ್ಧಾರ್ಥ್ ಬಸು ಸ್ಪಷ್ಟಪಡಿಸಿದ್ದಾರೆ.

    ಸಿದ್ಧಾರ್ಥ್ ಬಸು ಮಗದೊಂದು ಟ್ವೀಟ್ ನಲ್ಲಿ ಪ್ರಶ್ನೆಯನ್ನು ಸರಿ ಮಾಡಲಾಗಿದೆ ಎಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, ಕ್ಷಮೆ ಕೇಳಿದ್ದಾರೆ.

  • 1 ಕೋಟಿ ಗೆದ್ದ ಸರ್ಕಾರಿ ಶಾಲೆ ಬಿಸಿಯೂಟ ತಯಾರಕಿ

    1 ಕೋಟಿ ಗೆದ್ದ ಸರ್ಕಾರಿ ಶಾಲೆ ಬಿಸಿಯೂಟ ತಯಾರಕಿ

    ನವದೆಹಲಿ: ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‍ಪತಿ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಬಿತಾ ತಾಡೆ ಅವರು 1 ಕೋಟಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ.

    ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಕಿಯಾಗಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಅಮರಾವತಿಯವರಾದ ಬಬಿತಾ ತಾಡೆ ಕೆಬಿಸಿ 11ರಲ್ಲಿ ಕೋಟ್ಯಧಿಪತಿಯಾಗಿ ಹೊರಹೊಮ್ಮೆದ್ದಾರೆ. ಪ್ರತಿದಿನ ಸರಿ ಸುಮಾರು 450 ಕ್ಕೂ ಅಧಿಕ ಮಕ್ಕಳಿಗೆ ಇತರೆ ಅಡುಗೆ ಸಹಾಯಕಿಯರ ಜೊತೆ ಸೇರಿ ಊಟ ಸಿದ್ದಪಡಿಸುತ್ತಾರೆ. ಪ್ರತಿ ತಿಂಗಳು 1,500 ರೂ. ಸಂಬಳ ಪಡೆಯುತ್ತಿದ್ದ ಬಬಿತಾ ಅವರು ಈಗ ಕೆಬಿಸಿ 11ನೇ ಆವೃತ್ತಿ ಕಾರ್ಯಕ್ರಮದಿಂದ ಕೋಟ್ಯಧಿಪತಿ ಆಗಿದ್ದಾರೆ. ಇದನ್ನೂ ಓದಿ:ಕೆಬಿಸಿ ಸೀಸನ್ 11- ಒಂದು ಕೋಟಿಗೆ ಒಡೆಯನಾದ ರೈತನ ಪುತ್ರ

    80 ಸಾವಿರದ ಪ್ರಶ್ನೆಗೆ ಬಬಿತಾ ಅವರು ತಮ್ಮ ಮೊದಲ ಲೈಫ್‍ಲೈನ್ ಬಳಸಿದ್ದರು. ಆ ಪ್ರಶ್ನೆಯೂ ಪುರಾಣ ಕಥೆಗೆ ಸಂಬಂಧಿಸಿದಾಗಿತ್ತು. ಅದಕ್ಕೆ ಅವರು ಆಡಿಯನ್ಸ್ ಪೋಲ್ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ತಮ್ಮ 1.6 ಲಕ್ಷ ರೂ. ಪ್ರಶ್ನೆಗೆ ಬಬಿತಾ ಅವರು ತಮ್ಮ ಎರಡನೇ ಲೈಫ್‍ಲೈನ್ ಬಳಸಿಕೊಂಡಿದ್ದರು. ಆಗ 50:50 ಆಯ್ಕೆ ಮಾಡಿಕೊಂಡು ಸರಿಯಾದ ಉತ್ತರ ಕೊಟ್ಟಿದ್ದರು. ಬಳಿಕ 50 ಲಕ್ಷದ ಪ್ರಶ್ನೆಗೆ ಅವರು ತಮ್ಮ ಮೂರನೇ ಲೈಫ್‍ಲೈನ್ ಉಪಯೋಗಿಸಿಕೊಂಡರು. ಬಳಿಕ ಕೊನೆ ಹಂತ 1 ಕೋಟಿ ಪ್ರಶ್ನೆಗೆ ಎಕ್ಸಪರ್ಟ್ ಲೈಫ್‍ಲೈನ್ ತೆಗೆದುಕೊಂಡು ಕೋಟ್ಯಧಿಪತಿಯಾದರು.

    “ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಅವರ ಆಸ್ಥಾನದಲ್ಲಿ ಯಾವ ಕವಿ 1857ರ ದಂಗೆಯ ಕುರಿತಾದ ತಮ್ಮ ವೈಯಕ್ತಿಕ ದಸ್ತಾನ್-ಎ-ಗದರ್ ನ್ನು ಬರೆದಿದ್ದಾರೆ?” ಇದು ಬಬಿತಾ ಅವರ 1 ಕೋಟಿಗೆ ಬಿಗ್ ಬಿ ಕೇಳಿದ ಪ್ರಶ್ನೆಯಾಗಿತ್ತು. ಅಂತಿಮವಾಗಿ ಬಬಿತಾ ಅವರಿಗೆ ಜಾಕ್ ಪಾಟ್ ಪ್ರಶ್ನೆಯಾಗಿ “ಈ ಕೆಳಗಿನ ಯಾವ ರಾಜ್ಯಗಳಲ್ಲಿನ ಅಧಿಕ ರಾಜ್ಯಪಾಲರು ಭಾರತದ ರಾಷ್ಟ್ರಪತಿಗಳಾಗಿದ್ದಾರೆ” ಎಂದು ಕೇಳಲಾಗಿತ್ತು. ಆಗ ಅವರಿಗೆ ಉತ್ತರ ಖಚಿತವಿರದಿದ್ದ ಕಾರಣಕ್ಕೆ ಅವರು ಆಟವನ್ನು ಬಿಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಅಮಿತಾಬ್ ಯಾವ ಉತ್ತರ ಸರಿ ಇರಬಹುದು ಎಂದು ಕೇಳಿದಾಗ ಅವರು ಬಿಹಾರ ಎಂದು ಉತ್ತರಿಸಿದರು. ಆದರೆ ಬಬಿತಾ ಅವರ ಉತ್ತರ ಸರಿಯಾಗಿತ್ತು. ಒಂದು ವೇಲೆ ಬಬಿತಾ ಅವರು ಆಟವನ್ನು ಬಿಡದೆ ಮುಂದುವರಿಸಿದ್ದರೆ ಇಂದು 7 ಕೋಟಿಯ ಒಡತಿಯಾಗುತ್ತಿದ್ದರು.

    ತಿಂಗಳಿಗೆ 1,500 ರೂ. ಸಂಬಳ ಪಡೆಯುತ್ತಿದ್ದ ಬಿಸಿಯೂಟ ತಯಾರು ಮಾಡುವ ಸಿಬ್ಬಂದಿ 1 ಕೋಟಿ ರೂ. ಗೆದ್ದಿದ್ದಕ್ಕೆ ಅಮಿತಾಬ್ ಬಚ್ಚನ್ ಕೂಡ ಖುಷಿಯಾದರು. ಬಬಿತಾ ಅವರು 3.2 ಲಕ್ಷ ರೂ. ಗೆದ್ದಾಗ ಈ ಹಣವನ್ನು ಏನು ಮಾಡುತ್ತಿರಿ ಎಂದು ಬಿಗ್ ಬಿ ಕೇಳಿದ್ದರು. ಈ ಹಣದಿಂದ ನಾನು ಮೊಬೈಲ್ ಖರೀದಿಸುತ್ತೇನೆ ಎಂದು ಬಬಿತಾ ಅವರು ಹೇಳಿದ್ದರು. ಇದನ್ನು ನೆನಪಿಟ್ಟುಕೊಂಡು ಬಿಗ್‍ಬಿ ಬಬಿತಾ ಅವರಿಗೆ ಹೊಸ ಮೊಬೈಲ್ ಉಡುಗೊರೆಯಾಗಿ ನೀಡಿದ್ದಾರೆ. ಬಬಿತಾ ಅವರು ಕೆಬಿಸಿ 11 ಕಾರ್ಯಕ್ರಮದಲ್ಲಿ ಕೇವಲ 1 ಕೋಟಿಯ ಮಾತ್ರವಲ್ಲ ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದಿದ್ದಾರೆ.

  • ಕೆಬಿಸಿ ಸೀಸನ್ 11- ಒಂದು ಕೋಟಿಗೆ ಒಡೆಯನಾದ ರೈತನ ಪುತ್ರ

    ಕೆಬಿಸಿ ಸೀಸನ್ 11- ಒಂದು ಕೋಟಿಗೆ ಒಡೆಯನಾದ ರೈತನ ಪುತ್ರ

    -16ನೇ ಪ್ರಶ್ನೆಗೆ ಉತ್ತರಿಸಿದ್ರೆ ಸಿಗುತ್ತೆ 7 ಕೋಟಿ ರೂ.

    ಮುಂಬೈ: ಬಿಹಾರದ ರೈತನ ಪುತ್ರನೋರ್ವ ಹಿಂದಿಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಒಂದು ಕೋಟಿ ರೂ. ತಮ್ಮದಾಗಿಸಿಕೊಂಡಿದ್ದಾರೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಿರೂಪಣೆಯಲ್ಲಿ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮ ಮೂಡಿ ಬರುತ್ತಿದೆ.

    ಸನೋಜ್ ರಾಜ್ ಒಂದು ಕೋಟಿ ರೂ.ಯನ್ನು ಗೆದ್ದಿರುವ ಸ್ಪರ್ಧಿ. ಬಿಹಾರ ರಾಜ್ಯದ ಜೆಹ್ನಾಬಾದ್ ಜಿಲ್ಲೆಯ ಹುಲಸಗಂಜ್ ಬ್ಲಾಕ್ ನ ಡೋಂಗ್ರಾ ಗ್ರಾಮದ ನಿವಾಸಿಯಾಗಿರುವ ಸನೋಜ್ ಇಂದು 7 ಕೋಟಿ ರೂ. ಪ್ರಶ್ನೆಗೆ ಉತ್ತರಿಸಬೇಕಿದೆ. ಈಗಾಗಲೇ ಸನೋಜ್ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು, 16ನೇ ಪ್ರಶ್ನೆ ಏನಿರಲಿದೆ ಎಂಬ ಕೂತುಹಲ ವೀಕ್ಷಕರಲ್ಲಿ ಮನೆ ಮಾಡಿದೆ.

    ಸನೋಜ್ ಬಾಲ್ಯದಿಂದ ಬುದ್ಧಿವಂತ ಮತ್ತು ಜಾಣ ವಿದ್ಯಾರ್ಥಿ. ಸಂಚಿಕೆ ಪ್ರಸಾರಗೊಂಡ ಕ್ಷಣದಿಂದ ಇದೂವರೆಗೂ ಶುಭಾಶಯದ ಸಂದೇಶಗಳು ಬರುತ್ತಿವೆ. ನನ್ನ ಮಗನ ಸಾಧನೆ ಬಗ್ಗೆ ನನಗೆ ಹೆಮ್ಮೆ ಆಗುತ್ತಿದೆ ಎಂದು ಸನೋಜ್ ತಂದೆ ರಾಮ್‍ಜತನ್ ಶರ್ಮಾ ತಿಳಿಸುತ್ತಾರೆ.

    ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವ ಸನೋಜ್, ಪಶ್ಚಿಮ ಬಂಗಾಳದ ವರ್ಧಮಾನ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಪದವಿ ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸದ ಬಳಿಕ ಸನೋಜ್ ಟಿಸಿಎಸ್ ಕಂಪನಿಯಲ್ಲಿ ಉದ್ಯೋಗ ಸಹ ಪಡೆದುಕೊಂಡಿದ್ದರು. 2018ರಲ್ಲಿ ಯುಪಿಎಸ್‍ಸಿ ಪರೀಕ್ಷೆಗಳ ತಯಾರಿಗಾಗಿ ಉದ್ಯೋಗ ತೊರೆದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ 15 ಮತ್ತು 16ನೇ ಪ್ರಶ್ನೆ ಯಾವುದು ಎಂಬುವುದು ತಿಳಿಯಲಿದೆ.

    ಸನೋಜ್ ತಾಯಿ ಕಲಿಂದಿ ದೇವಿ ಪ್ರತಿಕ್ರಿಯಿಸಿ, ಬಡತನ ಸ್ಥಿತಿಯಲ್ಲಿ ಪುತ್ರ ಓದುವುದನ್ನು ನಿಲ್ಲಿಸಿಲ್ಲ. ಇಷ್ಟು ದಿನಗಳ ಆತನ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಮಗನ ಸಾಧನೆ ಕಂಡು ಖುಷಿಯಾಗುತ್ತಿದ್ದು, ಬಂಧು-ಬಳಗ, ಗ್ರಾಮಸ್ಥರು ಶುಭಾಶಯ ತಿಳಿಸುತ್ತಿದ್ದಾರೆ. ಇಂದಿನ ಸಂಚಿಕೆ ನೋಡಲು ಕಾತುರಳಾಗಿದ್ದೇನೆ ಎಂದು ತಿಳಿಸಿದ್ದಾರೆ.