Tag: ಕೆಫೆ ಕಾಫಿ ಡೇ

  • ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ್ ಅಂತ್ಯಕ್ರಿಯೆ

    ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ್ ಅಂತ್ಯಕ್ರಿಯೆ

    ಮಂಗಳೂರು/ಚಿಕ್ಕಮಗಳೂರು: ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾಫಿ ಕಿಂಗ್ ಸಿದ್ದಾರ್ಥ್ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ರವಾನೆ ಮಾಡಲಾಗುತ್ತಿದೆ.

    11 ಗಂಟೆಗೆ ಸುಮಾರಿಗೆ ಮೃತದೇಹ ಚಿಕ್ಕಮಗಳೂರಿಗೆ ರವಾನೆಯಾಗುತ್ತಿದ್ದು, ಎರಡು ಕಡೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲಿ ಕಾಫಿ ಡೇ ಸಿಬ್ಬಂದಿ ದರ್ಶನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ಬೇಲೂರು ಚೇತನಹಳ್ಳಿಯ ಸಿದ್ಧಾರ್ಥ್ ಕಾಫಿ ಎಸ್ಟೇಟ್ ಹಾಗೂ ಎಬಿಸಿ ಕಾಫಿ ಕ್ಯೂರಿಂಗ್ ಆವರಣದಲ್ಲಿಯೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನೌಕರರು ಹಾಗೂ ಕುಟುಂಬಸ್ಥರ ಅಂತಿಮ ದರ್ಶನದ ಬಳಿಕ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರುವ ಸಾಧ್ಯೆತೆಗಳಿವೆ.

    ಸೋಮವಾರ ಸಂಜೆಯಿಂದ ಮಂಗಳೂರಿನ ನೇತ್ರಾವತಿ ನದಿ ಸೇತುವೆಯ ಬಳಿಯಿಂದ ಕಾಣೆಯಾಗಿದ್ದ ಸಿದ್ದಾರ್ಥ್ ಅವರಿಗಾಗಿ ಸತತ 36 ಗಂಟೆಗಳ ಕಾಲ ಹುಡುಕಾಟ ನಡೆಸಲಾಗಿತ್ತು. ಆದರೆ ಇದೀಗ ಅವರ ಮೃತದೇಹ ನೇತ್ರಾವತಿಯ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕಾಫಿ ಡೇ ನೌಕಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    https://www.youtube.com/watch?v=i3MTQLbm1KE

  • ಸಿದ್ಧಾರ್ಥ್ ಮೃತದೇಹ ಪತ್ತೆ ಮಾಡಿದ ಮೀನುಗಾರ ಹೇಳಿದ್ದೇನು?

    ಸಿದ್ಧಾರ್ಥ್ ಮೃತದೇಹ ಪತ್ತೆ ಮಾಡಿದ ಮೀನುಗಾರ ಹೇಳಿದ್ದೇನು?

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಸ್ಥಳೀಯ ಮೀನುಗಾರ ರಿತೇಶ್ ಎಂಬವರು ಅನುಮಾನದ ಮೇರೆಗೆ ಡೆಡ್ ಬಾಡಿಯನ್ನು ದಡಕ್ಕೆ ತಂದಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮೀನು ಹಿಡಿಯುವ ಕಾರ್ಯದಲ್ಲಿದ್ದೆವು. ಹೀಗೆ ಹೋಗುವಾಗ ನದಿ ಮಧ್ಯದಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂತು ಎಂದರು.

    ಮೀನು ಹಿಡಿಯಲು ಮೂವರು ದೋಣಿಯಲ್ಲಿ ಹೋಗುತ್ತಿದ್ದೆವು. ಮೃತದೇಹ ತೇಲುತ್ತಿರುವುದನ್ನು ಕಂಡು ಇದು ಸಿದ್ಧಾರ್ಥ್ ಅವರದ್ದೇ ಆಗಿರಬಹುದೆಂದು ಅನುಮಾನದಲ್ಲಿ ದೋಣಿಯ ಬದಿಯಲ್ಲಿ ಶವವನ್ನು ಹಿಡಿದುಕೊಂಡು ದಡಕ್ಕೆ ತಂದಿದ್ದೇವೆ. ಆ ನಂತರ ಪೊಲೀಸರಿಗೆ ತಿಳಿಸಿದ್ದೇವೆ. ತಕ್ಷಣವೇ ರೌಂಡ್ಸ್ ನಲ್ಲಿರುವ ಪೊಲೀಸರಿಬ್ಬರು ಬಂದರು. ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಅವರೆಲ್ಲ ಬಂದಿದ್ದಾರೆ ಎಂದು ರಿತೇಶ್ ತಿಳಿಸಿದ್ದಾರೆ.

    ನದಿಗೆ ಹಾರಿದ್ದಾರೆ ಎಂಬ ಸ್ಥಳದಿಂದ ಮೃತದೇಹ ಸಿಕ್ಕಿದ ಜಾಗಕ್ಕೆ ಸುಮಾರು 4-5 ಕಿ.ಮೀ ದೂರವಿದೆ. ಅಲ್ಲಿ ಮೃತದೇಹ ಸಿಕ್ಕಿದೆ. ನಿನ್ನೆ ಮೀನುಗಾರಿಕಾ ಸಂಸ್ಥೆಯಿಂದ ಕರೆ ಬಂದಿತ್ತು. ಸ್ಥಳೀಯರಾಗಿರುವ ನಮಗೆ ಶೋಧ ಕಾರ್ಯ ಮಾಡಬೇಕೆಂಬ ಸೂಚನೆ ನೀಡಲಾಗಿತ್ತು. ಹೀಗಾಗಿ 4 ದೋಣಿಗಳ ಮೂಲಕ ತೆರಳಿ ನಿನ್ನೆ ಹುಡುಕಾಡಿದ್ದೇವೆ ಅಂದರು.

    ಅವರು ಹಾರಿದ ಭಾಗದಲ್ಲಿ 20-25 ಅಡಿ ಆಳವಿದ್ದು, ಮೃತದೇಹ ಸಿಕ್ಕಿದ ಭಾಗದಲ್ಲಿ 5-6 ಅಡಿ ಆಳವಿರಬಹುದು. ನೀರಿನೊಳಗೆ ಬಿದ್ದ ದೇಹ 18-24 ಗಂಟೆ ಮೇಲೆ ಬರಲು ಬೇಕಾಗುತ್ತದೆ ಎಂಬುದು ನಮ್ಮ ಅಂದಾಜು. ಇಷ್ಟು ಗಂಟೆಯ ಬಳಿಕ ಮೃತದೇಹ ಊದಿಕೊಳ್ಳುತ್ತದೆ. ಹೀಗಾಗಿ ಅದು ನೀರಿನಿಂದ ಮೇಲೆ ಬರುತ್ತವೆ. ಸಿದ್ದಾರ್ಥ್ ಅವರನ್ನು ಪತ್ತೆ ಹಚ್ಚಿದ್ದಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಶಾಸಕ ಯು.ಟಿ ಖಾದರ್ ಅವರು ನಮಗೆ ಧನ್ಯವಾದ ತಿಳಿಸಿದ್ದಾರೆ ಎಂದರು.

    ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ. ಮೃತದೇಹವನ್ನು ನಗರದ ವೆನ್ ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

     

  • ಸಿದ್ಧಾರ್ಥ್ ಮೃತ ದೇಹ ಪತ್ತೆ

    ಸಿದ್ಧಾರ್ಥ್ ಮೃತ ದೇಹ ಪತ್ತೆ

    ಮಂಗಳೂರು: ಕೆಫೆ ಕಾಫಿ ಡೇ ಓನರ್ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿದೆ.

    ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

    ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ.

    ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಆ ರಸ್ತೆಯಲ್ಲಿ ಹೊಯಿಗೆ ಬಜಾರ್ ಎಂಬ ಪ್ರದೇಶವಿದೆ. ಇಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.

  • ತಂದೆಗೆ ಏನೋ ಸಮಸ್ಯೆಯಿದೆ, ಗಮನಹರಿಸು – ಸಿದ್ಧಾರ್ಥ್ ಪುತ್ರನಿಗೆ ವಿನಯ್ ಗುರೂಜಿ ಸೂಚನೆ

    ತಂದೆಗೆ ಏನೋ ಸಮಸ್ಯೆಯಿದೆ, ಗಮನಹರಿಸು – ಸಿದ್ಧಾರ್ಥ್ ಪುತ್ರನಿಗೆ ವಿನಯ್ ಗುರೂಜಿ ಸೂಚನೆ

    ಬೆಂಗಳೂರು: ಹಲವಾರು ಮಂದಿಗೆ ಉದ್ಯೋಗ ನೀಡಿರುವ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ನಾಪತ್ತೆ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ತಂದೆ ಏನೋ ಸಮಸ್ಯೆ ಇದೆ. ಹೀಗಾಗಿ ಗಮನಹರಿಸು ಎಂದು ವಿನಯ್ ಗುರೂಜಿ ಹಿರಿಯ ಪುತ್ರ ಅಮರ್ತ್ಯಗೆ ಸೂಚನೆ ಕೊಟ್ಟಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಭಾನುವಾರ ಸಿದ್ಧಾರ್ಥ್ ಅವರ ಹಿರಿಯ ಪುತ್ರ ಅಮರ್ತ್ಯ ಗುರೂಜಿಯನ್ನು ಭೇಟಿ ಮಾಡಿದ್ದರು. ಡಾಲರ್ಸ್ ಕಾಲೋನಿಯ ಭಕ್ತರೊಬ್ಬರ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ತಮ್ಮ ತಂದೆ ಒತ್ತಡ ಹಾಗೂ ವ್ಯವಹಾರಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಆಗ ಯಾವುದೇ ಕಾರಣಕ್ಕೂ ತಂದೆಯನ್ನು ಬಿಟ್ಟಿರಬೇಡ, ಅವರ ಜೊತೆಯಲ್ಲೇ ಇರು. ಈ ಸಮಯದಲ್ಲಿ ನೀನು ಅವರಿಗೆ ಸಾಥ್ ಕೊಡಬೇಕಾಗುತ್ತದೆ. ಅವರ ಬಗ್ಗೆ ಎಚ್ಚರಿಕೆ ಇರಲಿ ಎಂದು ಸೂಕ್ಷ್ಮವಾಗಿ ಹೇಳಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬರೀ ನೀರು ಕಾಣಿಸ್ತಿದೆ:
    ಸಿದ್ಧಾರ್ಥ್ ನಾಪತ್ತೆಯಾಗುತ್ತಿದ್ದಂತೆಯೇ ಸೋಮವಾರ ತಡರಾತ್ರಿ ಎಸ್ ಎಂ ಕೃಷ್ಣ ಪತ್ನಿ ಪ್ರೇಮ ಕೃಷ್ಣ ಅವರು ವಿನಯ್ ಗುರೂಜಿಗೆ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಗುರೂಜಿಯವರು, ನನಗೆ ಬರೀ ನೀರು ಮಾತ್ರ ಕಾಣಿಸುತ್ತಿದೆ. ಬೇರೇನೂ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ದಿಢೀರ್ ಆಗಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ಸೋಮವಾರ ಸಂಜೆ 7 ಗಂಟೆ ಸುಮಾರಿಂದ ನಾಪತ್ತೆಯಾಗಿರುವ ಸಿದ್ಧಾರ್ಥ್ ಪ್ರಕರಣ ಇದೀಗ ಭಾರೀ ಅನುಮಾನಕ್ಕೀಡಾಗಿದೆ. ಸಿದ್ಧಾರ್ಥ್ ಕುಟುಂಬಸ್ಥರು ಆತಂಕ್ಕೀಡಾದರೆ ಇತ್ತ ನದಿ ತಟದಲ್ಲಿ ಸಿದ್ಧಾರ್ಥ್ ಗಾಗಿ ಹುಡುಕಾಟ ಭರದಿಂದ ಸಾಗುತ್ತಿದೆ.

  • ಸೇತುವೆಯ 8ನೇ ಕಂಬದಿಂದ ವ್ಯಕ್ತಿ ನೀರಿಗೆ ಹಾರಿದ್ದನ್ನು ಕಣ್ಣಾರೆ ಕಂಡ ಮೀನುಗಾರ

    ಸೇತುವೆಯ 8ನೇ ಕಂಬದಿಂದ ವ್ಯಕ್ತಿ ನೀರಿಗೆ ಹಾರಿದ್ದನ್ನು ಕಣ್ಣಾರೆ ಕಂಡ ಮೀನುಗಾರ

    ಮಂಗಳೂರು: ಸೇತುವೆಯ 8ನೇ ಕಂಬದಿಂದ ವ್ಯಕ್ತಿಯೊಬ್ಬರು ನೀರಿಗೆ ಹಾರಿದ್ದನ್ನು ಮೀನುಗಾರರೊಬ್ಬರು ಕಣ್ಣಾರೆ ಕಂಡಿದ್ದಾರೆ.

    ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿದೆ. ರಾತ್ರಿ 8 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬರು ಜಪ್ಪಿನಮೊಗರು ಸೇತುವೆಯಿಂದ ಹಾರಿದ್ದನ್ನು ನಾನು ನೋಡಿದೆ ಎಂದು ಮೀನುಗಾರರೊಬ್ಬರು ನನಗೆ ತಿಳಿಸಿದ್ದಾರೆ ಎಂದು ಉಳ್ಳಾಲ ಶಾಸಕ ಯುಟಿ ಖಾದರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸೇತುವೆಯ ಎಂಟನೇ ಕಂಬದ ಮುಂಭಾಗದಿಂದ ವ್ಯಕ್ತಿಯೊಬ್ಬರು ನೀರಿಗೆ ಬಿದ್ದಿದ್ದರು. ನದಿಯಲ್ಲಿ ಸುಮಾರು 50 ಮೀಟರ್ ಅವರು ಸಾಗಿದ್ದಾರೆ. ವ್ಯಕ್ತಿ ನೀರಿಗೆ ಬೀಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ಅವರು ನೀರಿಗೆ ಬೀಳುವಾಗ ನಾನು ಒಬ್ಬನೇ ಇದ್ದೆ. ಹಾಗಾಗಿ ಅವರನ್ನು ರಕ್ಷಿಸಲು ಆಗಲಿಲ್ಲ ಎಂದು ಮೀನುಗಾರನೊಬ್ಬ ಹೇಳಿದ್ದಾರೆ. ಅವರ ಮಾಹಿತಿ ಆಧಾರಿಸಿ ಸೇತುವೆಯ ಎಂಟನೇ ಕಂಬದ ನೇರಕ್ಕೆ ಕಾರ್ಯಾಚರಣೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.

    ಸೋಮವಾರ ರಾತ್ರಿಯಿಂದ ನಮ್ಮ ಜಿಲ್ಲಾಡಳಿತ, ಪೊಲೀಸರು ಬೇರೆ ಬೇರೆ ತಂಡದವರು ಸಕ್ರಿಯವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಲ್ಲದೆ ಸೋಮವಾರ ಇಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರಿಂದ ಸಲಹೆ ಹಾಗೂ ಮಾಹಿತಿ ಪಡೆಯುತ್ತಿದ್ದೇವೆ. ಸಿದ್ಧಾರ್ಥ್ ಅವರು ಇಲ್ಲಿಯವರೆಗೆ ಬಂದಿರುವುದು ಎಲ್ಲರಿಗೂ ಗೊತ್ತು. ಬಳಿಕ ಏನಾಗಿದೆ ಎಂದು ಸ್ಪಷ್ಟ ಮಾಹಿತಿ ಇಲ್ಲ ಎಂದು ತಿಳಿಸಿದರು.

    ನೀರಿನಲ್ಲಿ ಏನಾದರೂ ಆಗಿರಬಹುದು ಎಂದು ಎಲ್ಲರಿಗೂ ಸಂಶಯ ಇದೆ. ಹಾಗಾಗಿ ನೀರಿನಲ್ಲಿ ಜಾಸ್ತಿ ಪಾಮುಖ್ಯತೆ ಕೊಡಲಾಗುತ್ತಿದೆ. ಬೇರೆ ಕಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೇತ್ರಾವತಿ ಸೇತುವೆಯಿಂದ ಸಮುದ್ರಕ್ಕೆ ಒಂದೂವರೆ ಕಿ.ಮೀ ದೂರವಿದೆ. ಮೃತದೇಹ ಸಮುದ್ರಕ್ಕೆ ಮುಟ್ಟಿದ್ದರೆ, ಆಗ ಬಹಳ ಕಷ್ಟವಾಗುತ್ತದೆ. ಈಗಾಗಲೇ ಸಮುದ್ರದ ಬಳಿ ತಂಡ ಸಜ್ಜಾಗಿದೆ. ನದಿ ಸಮುದ್ರ ತಲುಪುವಂತಹ ಜಾಗದಲ್ಲೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಮಳೆ ಆಗುತ್ತಿರುವುದಿಂದ ಕಾರ್ಯಚರಣೆ ಅಡ್ಡಿಯಾಗುತ್ತಿದೆ. ಆದರೆ ಪ್ರತಿ ತಂಡ ಮಳೆ, ಗಾಳಿ ಎಂದು ಲೆಕ್ಕಿಸದೇ ಕಾರ್ಯಚರಣೆ ನಡೆಸುತ್ತಿದ್ದಾರೆ. ಹೆಲಿಕಾಪ್ಟರ್ ಕೂಡ ತಂದು ಇಟ್ಟಿದ್ದಾರೆ. ಹವಾಮಾನ ನೋಡಿ ಅಗತ್ಯ ಬಂದರೆ ಅದನ್ನು ಉಪಯೋಗಿಸಲಾಗುವುದು. ಹೆಲಿಕಾಪ್ಟರ್ ಬಳಸಲು ಸಲಹೆ ಸೂಚನೆ ಪಡೆಯುತ್ತಿದ್ದೇವೆ ಎಂದರು.

  • ಅನ್ನ ಕೊಟ್ಟ ದೇವರಿಗೆ ಏನೂ ಆಗಲ್ಲ: ನೌಕರರ ಕಣ್ಣೀರು

    ಅನ್ನ ಕೊಟ್ಟ ದೇವರಿಗೆ ಏನೂ ಆಗಲ್ಲ: ನೌಕರರ ಕಣ್ಣೀರು

    ಚಿಕ್ಕಮಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ನೌಕರರು ಕಣ್ಣೀರು ಹಾಕುತ್ತಿದ್ದಾರೆ.

    ಚಿಕ್ಕಮಗಳೂರಿನಲ್ಲಿರುವ ಕಾಫಿ ಡೇಗೆ ಸೇರಿದ ಕಾಫಿ ಕ್ಯೂರಿಂಗ್ ಘಟಕದ ನೌಕರರು ಕಣ್ಣೀರು ಹಾಕುತ್ತಿದ್ದಾರೆ. ನಮಗೆ ಕೆಲಸ ಕೊಟ್ಟ ಧಣಿಗೆ ಏನೂ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ ಕಣ್ಣೀರು ಹಾಕುತ್ತಿದ್ದಾರೆ.

    ನಮಗೆಲ್ಲಾ ಅನ್ನ ಕೊಟ್ಟಂತಹ ಧಣಿಗೆ ಯಾವುದೇ ರೀತಿಯ ತೊಂದರೆ ಆಗದೇ ದೇವರು ಅವರನ್ನು ವಾಪಸ್ ಕಳುಹಿಸಲಿ. ನಾವು ಕಾಫಿ ಡೇ ಎಲ್ಲ ಸಿಬ್ಬಂದಿ ಸಂಬಳ ಬಿಟ್ಟು ಅವರಿಗೆ ತೊಂದರೆಯಾಗಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ನನಗೆ ಹಾಗೂ ನನ್ನ ಪತ್ನಿಗೆ ಅವರು ಅನ್ನ ಕೊಟ್ಟ ದೇವರು. ಅವರು ಕ್ಷೇಮವಾಗಿ ಬರಲಿ ಎಂದು ಸಿಬ್ಬಂದಿಯೊಬ್ಬರು ಸಿದ್ಧಾರ್ಥ್ ಅವರನ್ನು ನೆನೆಸಿಕೊಂಡು ಭಾವುಕರಾದರು.

    ಸಿದ್ಧಾರ್ಥ್ ಅವರು ನನಗೆ 10 ವರ್ಷದಿಂದ ಅನ್ನ ಕೊಡುತ್ತಿದ್ದಾರೆ. ಅವರಿಗೆ ಏನೂ ಆಗಲ್ಲ. ಕಾರ್ಮಿಕರಿಗೆ ಯಾವುದೇ ತೊಂದರೆ ಆಗಲ್ಲ. ಸಿದ್ಧಾರ್ಥ್ ಅವರು 50 ಸಾವಿರ ಜನರಿಗೆ ಅನ್ನ ನೀಡಿದ್ದು, ಎಲ್ಲವೂ ಒಳ್ಳೆಯದು ಆಗುತ್ತದೆ ಎಂದು ನೌಕರ ಕಣ್ಣೀರು ಹಾಕಿದ್ದಾರೆ.

    ಇತ್ತ ಸಿದ್ಧಾರ್ಥ್ ಅವರು ನಿಗೂಢವಾಗಿ ನಾಪತ್ತೆಯಾಗಿದ್ದಕ್ಕೆ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ. ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ. ಸಿದ್ಧಾರ್ಥ್ ಅವರು ಎಬಿಸಿ ಸೇರಿದಂತೆ ಹಲವು ಕಂಪನಿಯ ಮಾಲೀಕರಾಗಿದ್ದು, ಆ ಕಂಪನಿಯಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಸಿದ್ಧಾರ್ಥ್ ನಾಪತ್ತೆಯಾಗಿದ್ದ ಕಾರಣ ಕಾರ್ಮಿಕರು, ಸಿಬ್ಬಂದಿ ಆತಂಕಗೊಂಡಿದ್ದಾರೆ.

    https://www.youtube.com/watch?v=9H9GW25r8zA

  • ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗುವ ಮೊದಲು ತನ್ನ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.

    ಏಕಾಏಕಿ ಸಿದ್ದಾರ್ಥ್ ನಾಪತ್ತೆಯಾಗಿದ್ದರಿಂದ ಕಂಕನಾಡಿ ಪೊಲೀಸರು ಕಾರಿನ ಡ್ರೈವರ್ ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಸಾಹೇಬ್ರು ದಾರಿಯುದ್ಧಕ್ಕೂ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದರು. ಮಂಗಳೂರು ಸರ್ಕಲ್‍ಗೆ ಹೋಗುವವರೆಗೂ ಸ್ನೇಹಿತರ ಬಳಿ ಕ್ಷಮೆ ಕೇಳಿದ್ದಾರೆ ಎಂದು ವಿವರಿಸಿದ್ದಾರೆ.

    ಸೇತುವೆಗೆ ಬಂದ ಬಳಿಕ ಕಾರು ನಿಲ್ಲಿಸಿ ನೀನು ಹೋಗು, ನಾನು ವಾಕಿಂಗ್‍ಗೆ ಹೋಗಬೇಕು ಎಂದು ಹೇಳಿದ್ದರು. ಹೀಗಾಗಿ ನಾನು ಕಾರು ನಿಲ್ಲಿಸಿದ್ದೇನೆ. ಹೀಗೆ ಕಾರಿನಿಂದ ಇಳಿದ ಅವರು ವಾಕ್ ಮಾಡಿದವರು ಮತ್ತೆ ವಾಪಸ್ ಕಾರು ಬಳಿ ಬಂದಿಲ್ಲ ಎಂದು ಬಸವರಾಜ್ ಹೇಳಿದ್ದಾರೆ.

    ಅಲ್ಲದೆ ವಿಚಾರಣೆಯ ವೇಳೆ ಬಸವರಾಜ್, `ಸಾಹೇಬ್ರು ಇಂಗ್ಲೀಷ್ ನಲ್ಲಿ ನಾತನಾಡುತ್ತಿದ್ದರು. ಹೀಗಾಗಿ ನನಗೆ ಅದು ಅರ್ಥವಾಗಲಿಲ್ಲ’ ಎಂದು ಹೇಳಿದ್ದಾರೆ.

    ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸೇತುವೆಯ ಮೇಲೆ ಏಕಾಂಗಿಯಾಗಿ ಹೋಗಿದ್ದಾರೆ. ಹೀಗೆ ಹೋದವರು ಕೆಲ ಹೊತ್ತು ಬರದಿದ್ದರಿಂದ ಅವರನ್ನು ಬಸವರಾಜ್ ಅವರು ಕಾರಿನಲ್ಲೇ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಿದ್ದಾರ್ಥ್ ಅವರು `ನೀನು ಬರಬೇಡ ಇಲ್ಲೇ ಇರು’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮ ಡ್ರೈವರ್ ಗೆ ಬರಬೇಡ ಎಂದು ತಿಳಿಸಿ ಹೋದ ಸಿದ್ದಾರ್ಥ್ ಮತ್ತೆ ಬರದೇ ಇದ್ದಾಗ ಆತಂಕಗೊಂಡ ಬಸವರಾಜ್, ಸಿದ್ದಾರ್ಥ್ ಅವರ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • ಎಸ್.ಎಂ ಕೃಷ್ಣ ಮನೆಗೆ ಪುನೀತ್ ರಾಜ್‍ಕುಮಾರ್ ಭೇಟಿ

    ಎಸ್.ಎಂ ಕೃಷ್ಣ ಮನೆಗೆ ಪುನೀತ್ ರಾಜ್‍ಕುಮಾರ್ ಭೇಟಿ

    ಬೆಂಗಳೂರು: ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರು ಸೋಮವಾರ ರಾತ್ರಿಯಿಂದ ದಿಢೀರ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಎಸ್.ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ.

    ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ಎಸ್. ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿ ಅವರಿಗೂ ಹಾಗೂ ಅವರ ಕುಟುಂಬಸ್ಥರಿಗೆ ಸಮಾಧಾನ ಮಾಡಿ ಧೈರ್ಯ ಹೇಳಿದ್ದಾರೆ.

    ಸೋಮವಾರ ರಾತ್ರಿಯಿಂದಲೇ ಅನೇಕ ಗಣ್ಯರು ಎಸ್.ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಹಾಗೆಯೇ ಇಂದು ಮುಖ್ಯಮಂತ್ರಿಗಳು ಭೇಟಿ ನೀಡಿ ಕೃಷ್ಣ ಹಾಗೂ ಅವರ ಕುಟುಂಬಸ್ಥರಿಗೆ ಸಮಾಧಾನ ಮಾಡಿದ್ದಾರೆ. ಆತಂಕಕ್ಕೊಳಗಾಗಬೇಡಿ, ಸಿದ್ಧಾರ್ಥ್ ಅವರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ ಎಂಬುದಾಗಿ ಹೇಳುತ್ತಾ ಬಿಎಸ್‍ವೈ ಅವರು ಕೃಷ್ಣ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

    ಎಸ್.ಎಂ ಕೃಷ್ಣ ಅವರ ಮನೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು, ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಮಾಧಾನ ಮಾಡುತ್ತಿದ್ದಾರೆ.

  • ಉದ್ಯಮಿ ಸಿದ್ಧಾರ್ಥ್ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿ ಬಂದ್

    ಉದ್ಯಮಿ ಸಿದ್ಧಾರ್ಥ್ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿ ಬಂದ್

    ಚಿಕ್ಕಮಗಳೂರು: ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ್ ಅವರು ನಿಗೂಢವಾಗಿ ಕಾಣೆಯಾದ ಬೆನ್ನಲ್ಲೇ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ.

    ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ. ಸಿದ್ಧಾರ್ಥ್ ಅವರು ಎಬಿಸಿ ಸೇರಿದಂತೆ ಹಲವು ಕಂಪನಿಯ ಮಾಲೀಕರಾಗಿದ್ದು, ಆ ಕಂಪನಿಯಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಸಿದ್ಧಾರ್ಥ್ ನಾಪತ್ತೆಯಾಗಿದ್ದ ಕಾರಣ ಕಾರ್ಮಿಕರು, ಸಿಬ್ಬಂದಿ ಆತಂಕಗೊಂಡಿದ್ದಾರೆ.

    ಸಿದ್ದಾರ್ಥ್ ನಾಪತ್ತೆ: ವ್ಯವಹಾರ ನಿಮಿತ್ತ ಸಿದ್ಧಾರ್ಥ್ ಅವರು ತಮ್ಮ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ಬಳಿಕ ಕಾರಿನಿಂದ ಇಳಿದು ಅವರು ಫೋನ್‍ನಲ್ಲಿ ಮಾತನಾಡುತ್ತಾ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೇ ಇದ್ದುದನ್ನು ಕಂಡು ಗಾಬರಿಯಾದ ಚಾಲಕ ಅವರಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.

    ಕಾರು ಚಾಲಕ ತಕ್ಷಣ ಈ ವಿಚಾರವನ್ನು ಸಿದ್ಧಾರ್ಥ್ ಮನೆಯವರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ಕಾರಿನಿಂದ ಇಳಿದ ಜಪ್ಪಿನ ಮೊಗರು ಪ್ರದೇಶ ನೇತ್ರಾವತಿ ನದಿ ತಟದಲ್ಲೇ ಇರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

  • ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

    ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

    ಮಂಗಳೂರು/ಬೆಂಗಳೂರು: ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ನಿನ್ನೆ ರಾತ್ರಿಯಿಂದ ದಿಢೀರ್ ಆಗಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದಾರೆ. ನೇತ್ರಾವತಿ ನದಿಗೆ ಹಾರಿರಬಹುದು ಎಂಬ ಶಂಕೆಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಘಟನೆಯ ವಿವರ: ವ್ಯವಹಾರ ನಿಮಿತ್ತ ಸಿದ್ಧಾರ್ಥ್ ಅವರು ತಮ್ಮ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ಬಳಿಕ ಕಾರಿನಿಂದ ಇಳಿದು ಅವರು ಫೋನ್‍ನಲ್ಲಿ ಮಾತನಾಡುತ್ತಾ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೇ ಇದ್ದುದನ್ನು ಕಂಡು ಗಾಬರಿಯಾದ ಚಾಲಕ ಅವರಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.

    ಕಾರು ಚಾಲಕ ತಕ್ಷಣ ಈ ವಿಚಾರವನ್ನು ಸಿದ್ಧಾರ್ಥ್ ಮನೆಯವರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ಕಾರಿನಿಂದ ಇಳಿದ ಜಪ್ಪಿನ ಮೊಗರು ಪ್ರದೇಶ ನೇತ್ರಾವತಿ ನದಿ ತಟದಲ್ಲೇ ಇರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

    ಇತ್ತ ಬೆಂಗಳೂರಿನಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಆತಂಕ ಮನೆ ಮಾಡಿದೆ. ಈ ಘಟನೆಯ ಬಗ್ಗೆ ಎಸ್.ಎಂ.ಕೃಷ್ಣ ಅವರ ನಿವಾಸದ ಬಳಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿಎಲ್ ಶಂಕರ್, ಕಾಫಿ ಡೇ ಉದ್ಯಮದ ಮಾಲೀಕರಾಗಿರುವ ಸಿದ್ಧಾರ್ಥ್ ಪ್ರಯಾಣ ಮಾಡುವ ವೇಳೆ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಉಳ್ಳಾಲ ಸಮೀಪದಿಂದ ನಿನ್ನೆ ಸಂಜೆ 6 ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಶಾಸಕ ಯು.ಟಿ.ಖಾದರ್ ಅವರೂ ಹುಡುಕಾಟದಲ್ಲಿ ತೊಡಗಿದ್ದಾರೆ. ನಾಪತ್ತೆಗೂ ಮೊದಲು ಅವರು ಯಾರ ಜೊತೆ ಮಾತನಾಡಿದರು ಎಂಬುದು ತಿಳಿದಿಲ್ಲ. ಅವರ ಕಚೇರಿ ತೆರೆದ ಬಳಿಕ ಏನಾದರೂ ಮಾಹಿತಿ ಸಿಗಬಹುದು. ಯಾವುದೇ ತೊಂದರೆ ಆಗದೇ ವಾಪಸ್ ಸಿಗಲಿ ಎಂಬ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದರು.

    ಸಿದ್ಧಾರ್ಥ್ ನಮ್ಮ ಊರಿನವರು ಹಾಗೂ ದೊಡ್ಡ ಉದ್ಯಮಿ. ಅವರ ಕುಟುಂಬ ಆತಂಕದಲ್ಲಿದೆ. ಹಾಗಾಗಿ ನಾವು ನೋಡಲು ಬಂದಿದ್ದೇವೆ. ಯಾವುದೇ ಸಮಸ್ಯೆ ಬಂದರೂ ಅವರು ಎದುರಿಸುತ್ತಿದ್ದರು. ಪ್ರಕರಣ ತನಿಖಾ ಹಂತದಲ್ಲಿದ್ದು ತನಿಖೆ ಬಳಿಕ ಎಲ್ಲವೂ ವಿವರವಾಗಿ ತಿಳಿಯಲಿದೆ ಎಂದರು.

    ಸಿದ್ಧಾರ್ಥ್ ಯಾರು?: ದೇಶ ವಿದೇಶಗಳಲ್ಲಿ ಕೆಫೆ ಕಾಫಿ ಡೇ ಸ್ಥಾಪಿಸಿ ಪ್ರಖ್ಯಾತರಾದವರು. ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಪುತ್ರಿಯನ್ನು ವಿವಾಹವಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ 12 ಸಾವಿರ ಎಕರೆ ಕಾಫಿ ಎಸ್ಟೇಟ್ ಹೊಂದಿದ್ದಾರೆ. ಮಂಗಳೂರಿನ ಸಾಫ್ಟ್‌ವೇರ್ ಕಂಪೆನಿಗಳಿಗೆ ಹೂಡಿಕೆ ಮಾಡಿದ್ದಾರೆ. ಷೇರು ಮಾರುಕಟ್ಟೆ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ.