Tag: ಕೆಫೆ ಕಾಫಿ ಡೇ

  • ಸಿದ್ಧಾರ್ಥ್ ಆತ್ಮಹತ್ಯೆ ಮಾಡ್ಕೊಂಡಿದ್ದ ನೇತ್ರಾವತಿ ಸೇತುವೆಗೆ ಕೊನೆಗೂ ತಡೆಬೇಲಿ

    ಸಿದ್ಧಾರ್ಥ್ ಆತ್ಮಹತ್ಯೆ ಮಾಡ್ಕೊಂಡಿದ್ದ ನೇತ್ರಾವತಿ ಸೇತುವೆಗೆ ಕೊನೆಗೂ ತಡೆಬೇಲಿ

    – ಕಾಫಿ ಡೇ ಸಂಸ್ಥಾಪಕನ ಬಳಿಕ 14 ಮಂದಿ ಸೂಸೈಡ್
    – 55 ಲಕ್ಷ ರೂ. ವೆಚ್ಚದಲ್ಲಿ ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ

    ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ, ಕೋಟಿ ಒಡೆಯ ವಿ.ಜಿ. ಸಿದ್ಧಾರ್ಥ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂದ್ದ ನೇತ್ರಾವತಿ ಸೇತುವೆಗೆ ಕೊನೆಗೂ ತಡೆಬೇಲಿ ಭಾಗ್ಯ ಕರುಣಿಸಲಾಗಿದೆ.

    ಹೌದು. ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ವರ್ಷವೇ ಕಳೆದು ಹೋಗಿದೆ. ಮಂಗಳೂರಿನ ಜಪ್ಪಿನಮೊಗರು ಬಳಿಯ ನೇತ್ರಾವತಿ ಸೇತುವೆಯಿಂದ ಹಾರಿ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ದಿನದಿಂದಲೇ ಈ ಸೇತುವೆಗೆ ತಡೆಬೇಲಿ ನಿರ್ಮಿಸಬೇಕೆಂದು ಸಾಕಷ್ಟು ಒತ್ತಾಯ ಕೇಳಿ ಬಂದಿದ್ದು, ರಾಜಕಾರಣಿಗಳು ಕೂಡ ಒಪ್ಪಿಕೊಂಡಿದ್ರು. ಇದನ್ನೂ ಓದಿ: ನೇತ್ರಾವತಿ ನದಿಗೆ ಮತ್ತೊಂದು ಜೀವ ಆಹುತಿ

    ಅಂದಿನಿಂದ ಇಂದಿನವರೆಗೆ ಈ ಸೇತುವೆಯಿಂದ ನದಿಗೆ ಹಾರಿ ಬರೋಬ್ಬರಿ 14 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಜಾಗವೊಂದು ಸೂಸೈಡ್ ಪಾಯಿಂಟ್ ಆಗಿತ್ತು. ಇದೀಗ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಸೇತುವೆಗೆ ಕೊನೆಗೂ ತಡೆಬೇಲಿ ಭಾಗ್ಯ ಒದಗಿ ಬಂದಿದೆ. ಇದನ್ನೂ ಓದಿ: ಸಿದ್ಧಾರ್ಥ್ ಕಾಣೆಯಾಗಿದ್ದ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ

    ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾರ್ಯ ಆರಂಭಗೊಂಡಿದೆ. ಸಿದ್ದಾರ್ಥ್ ಆತ್ಮಹತ್ಯೆಯ ಬಳಿಕ ಈ ಸೇತುವೆ ಬಳಿ ಬಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 55 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಸೇತುವೆಯ 8ನೇ ಕಂಬದಿಂದ ವ್ಯಕ್ತಿ ನೀರಿಗೆ ಹಾರಿದ್ದನ್ನು ಕಣ್ಣಾರೆ ಕಂಡ ಮೀನುಗಾರ

    ಸೇತುವೆ 800 ಮೀ.ಉದ್ದವಿದೆ. ಸೇತುವೆಯ ತಡೆಗೋಡೆಯ ಮೇಲೆ ರಕ್ಷಣಾ ಬೇಲಿಯು 5 ಅಡಿ ಎತ್ತರವಿದ್ದು, ಬೇಲಿಯ ಮೇಲ್ಗಡೆಯೂ ಹತ್ತಲು ಸಾಧ್ಯವಾಗದಂತೆ ಮೇಲ್ಭಾಗಕ್ಕೂ ನಾಲ್ಕು ಸಾಲು ಮುಳ್ಳು ತಂತಿಯನ್ನು ರಸ್ತೆಯ ಭಾಗಕ್ಕೆ ಬಗ್ಗಿಸಿ ಜೋಡಣೆ ಮಾಡಲಾಗುತ್ತಿದೆ.

  • ಕೆಫೆ ಕಾಫಿ ಡೇ ಶೇರು ಖರೀದಿಗೆ ಮುಂದಾದ ಐಟಿಸಿ ಕಂಪನಿ

    ಕೆಫೆ ಕಾಫಿ ಡೇ ಶೇರು ಖರೀದಿಗೆ ಮುಂದಾದ ಐಟಿಸಿ ಕಂಪನಿ

    ನವದೆಹಲಿ: ಸಿಗರೇಟ್ ತಯಾರಿಕಾ ಕ್ಷೇತ್ರದಲ್ಲಿ ತನ್ನದೇ ಆದಂತಃ ಹೆಸರು ಗಳಿಸಿರುವ ದೇಶದ ಅತಿ ದೊಡ್ಡ ಸಿಗರೆಟ್ ತಯಾರಕ ಕಂಪನಿ ಐಟಿಸಿ ಲಿಮಿಟೆಡ್, ಈಗ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‍ನಲ್ಲಿ(ಸಿಡಿಇಎಲ್) ಭಾಗವಾಗಿರುವ ಕೆಫೆ ಕಾಫಿ ಡೇ ಶೇರು ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.

    ಆದರೆ ಕೆಫೆ ಕಾಫಿ ಡೇ ಐಟಿಸಿಯ ನಿರ್ಧರನ್ನು ನಿರಾಕರಿಸಿದೆ ಎನ್ನಲಾಗುತ್ತಿದೆ. ಐಟಿಸಿ ಕಂಪನಿ ತನ್ನ ಉದ್ಯಮವನ್ನು ಮತ್ತಷ್ಟು ಬೆಳೆಸುವ ಪ್ರಯತ್ನ ಮಾಡುತ್ತಿದ್ದು, ಅದರ ಭಾಗವಾಗಿ ಈಗ ಕಾಫಿ ಡೇಯಲ್ಲಿನ ಶೇರುಗಳನ್ನು ಖರೀದಿಸಲು ಮುಂದಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

    ಕೆಫೆ ಕಾಫಿ ಡೇ(ಸಿಸಿಡಿ) ಕಾಫಿ ಹೌಸ್‍ನ ಭಾಗವಾಗಿದ್ದು, ಇದನ್ನು ಸಿಡಿಇಎಲ್ ನೋಡಿಕೊಳ್ಳುತ್ತದೆ. ಭಾರತದಲ್ಲಿ ಕಾಫಿ ಡೇ ಸುಮಾರು 1,700 ಮಳಿಗೆಗಳನ್ನು ಹೊಂದಿದೆ. ಆದರೆ ಸಿಸಿಡಿ ಸ್ಥಾಪಕ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಕಂಪನಿ ಸಂಕಷ್ಟದಲ್ಲಿ ಸಿಲುಕಿದೆ.

    ಸಿದ್ಧಾರ್ಥ್ ಅವರ ಸಾವಿನ ಬಳಿಕ ಕಾಫಿ ಡೇ ಎಂಟರ್‌ಪ್ರೈಸಸ್ ಸಿಸಿಡಿಯ ಶೇರ್ ಅನ್ನು ಮಾರುವ ಮೂಲಕ ಅದರ ಸಾಲವನ್ನು ತೀರಿಸಲು ಯೋಚಿಸುತ್ತಿದೆ. ಜೂನ್ ವರದಿಯ ಪ್ರಕಾರ, ಕೊಕೊ ಕೋಲಾ ಕಂಪನಿಯು ಸಿಡಿಇಎಲ್ ಜೊತೆ ಮಾತನಾಡಿ ಸಿಸಿಡಿಯಲ್ಲಿ ಗಣನೀಯ ಪಾಲನ್ನು ನೀಡುವಂತೆ ಹೇಳಿತ್ತು.

    ಇತ್ತೀಚಿಗಷ್ಟೇ, ಸಿಡಿಇಎಲ್ ಮಂಡಳಿಯು ತನ್ನ ಸಾಲಗಳನ್ನು ತಗ್ಗಿಸಲು ಸಹಾಯ ಮಾಡಲು ಬೆಂಗಳೂರಿನ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಅನ್ನು ಬ್ಲ್ಯಾಕ್ಸ್ಟೋನ್‍ಗೆ ಮಾರಾಟ ಮಾಡಲು ಅನುಮೋದಿಸಿತು. ಈ ಒಪ್ಪಂದದಿಂದ ಸಿಡಿಇಎಲ್ 3,000 ಕೋಟಿ ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಆದಾಗ್ಯೂ, ಈ ಒಪ್ಪಂದವು ಬ್ಲಾಕ್‍ಸ್ಟೋನ್‍ನ ಸರಿಯಾದ ಪರಿಶ್ರಮ ಮತ್ತು ಇತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿದೆ.

    ಭಾರತವು ತಂಬಾಕಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ನಿಷೇಧಿಸಲಾಗಿದೆ. ಹೀಗಾಗಿ ಈಗ ಐಟಿಸಿ ಕಂಪನಿ ಸಿಗರೇಟ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ ತನ್ನ ವ್ಯವಹಾರವನ್ನು ಇತರೆ ಕ್ಷೇತ್ರದಲ್ಲಿ ವಿಸ್ತರಿಸಲು ಮುಂದಾಗಿದೆ ಎನ್ನಲಾಗಿದೆ. ಮೂಲಗಳು ಹೇಳುವಂತೆ, ಸಿಡಿಇಎಲ್ ಶೇರ್ ಖರೀದಿಗೆ ಐಟಿಸಿ ಮುಂದಾಗಿದ್ದು, ಈ ವಿಚಾರದ ಚರ್ಚೆಯು ಸದ್ಯ ಪ್ರಾಥಮಿಕ ಹಂತದಲ್ಲಿದೆ.

    ಈ ವಿಚಾರದ ಬಗ್ಗೆ ಐಟಿಸಿ ಪ್ರತಿಕ್ರಿಯಿಸಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದೆ.

  • ಟ್ಯಾಕ್ಸ್ ಟೆರರಿಸಂ ದೇಶದ ಸಾಧನೆಯನ್ನು ಕುಗ್ಗಿಸುತ್ತಿದೆ: ಇನ್ಫೋಸಿಸ್ ಮಾಜಿ ನಿರ್ದೇಶಕ

    ಟ್ಯಾಕ್ಸ್ ಟೆರರಿಸಂ ದೇಶದ ಸಾಧನೆಯನ್ನು ಕುಗ್ಗಿಸುತ್ತಿದೆ: ಇನ್ಫೋಸಿಸ್ ಮಾಜಿ ನಿರ್ದೇಶಕ

    ನವದೆಹಲಿ: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಸಾವಿನ ಬೆನ್ನಲ್ಲೇ ಉದ್ಯಮಿಗಳು ಟ್ಯಾಕ್ಸ್ ಟೆರರಿಸಂ ಕುರಿತು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

    ಇದೀಗ ಉದ್ಯಮಿ ಹಾಗೂ ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದು, ಉದ್ಯಮಿಗಳು ಟ್ಯಾಕ್ಸ್ ಟೆರರಿಸಂನಿಂದ ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

    ಟ್ಯಾಕ್ಸ್ ಟೆರರಿಸಂ ಉದ್ಯಮಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ ಎಂಬ ಮಾತುಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ್ ಅವರ ಸಾವಿನ ನಂತರ ಕೇಳಿ ಬಂದಿತ್ತು. ಇದೀಗ ಮೋಹನ್ ದಾಸ್ ಪೈ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಸಹ ಈ ಕುರಿತು ಅಸಮಾಧಾನ ಹೊರ ಹಾಕಿದ್ದು, ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂರ್ದಶದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

    ತೆರಿಗೆ ಭಯೋತ್ಪಾದನೆಯು ದೇಶದಲ್ಲಿನ ವ್ಯಾಪಾರದ ಸರಳತೆಗೆ ಅಪಾಯವನ್ನು ತಂದೊಡ್ಡಿದೆ. ಇದನ್ನು ಕೊನೆಗೊಳಿಸಲು ಸರ್ಕಾರ ಭರವಸೆ ನೀಡಿದರೂ ಅನಗತ್ಯ ತೆರಿಗೆ ಕುರಿತು ದೂರುಗಳು ಇನ್ನೂ ವ್ಯಾಪಕವಾಗಿವೆ. ಇದು ದೇಶದ ಸಾಧನೆಯನ್ನು ಕುಗ್ಗಿಸುತ್ತದೆ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಪೈ ಅವರು ತಮ್ಮ ಜೀವನದಲ್ಲಾದ ಘಟನೆ ಮೂಲಕ ವಿವರಿಸಿದ್ದು, ಕಿರಣ್ ಎಂಬ ಸರ್ಕಾರಿ ಅಧಿಕಾರಿ ಸಂದೇಶ ಕಳುಹಿಸಿದ್ದರು. ಇದಕ್ಕೆ ನಾನು ಉತ್ತರಿಸಿ, ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದೆ. ಇದು ಅಧಿಕಾರಿಗಳಲ್ಲಿ ಯಾವ ರೀತಿಯ ಸಂಸ್ಕøತಿ ಬೆಳೆದಿದೆ ಎಂಬುದನ್ನು ತೋರಿಸುತ್ತದೆ. ಇದನ್ನು ಯಾರು ಯೋಚಿಸುತ್ತಾರೆ, ಅವರು ಹುಟ್ಟಿರುವುದೇ ನಮ್ಮನ್ನು ಆಳುವುದಕ್ಕಾಗಿ ಎಂಬ ಅಹಂನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಘಟನೆ ಕುರಿತು ಅಧಿಕಾರಿ ಮತ್ತೆ ಪ್ರತ್ಯುತ್ತರ ನೀಡಿದ್ದು, ಇನ್ಫೋಸಿಸ್‍ನ ಸಹೋದ್ಯೋಗಿಯನ್ನು ಕರೆದು ನನ್ನನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಬೆದರಿಕೆ ಹಾಕಿದ್ದರು ಎಂದು ಘಟನೆಯನ್ನು ವಿವರಿಸಿದ್ದಾರೆ. ಇಂತಹ ವರ್ತನೆಗಳನ್ನು ಖಂಡಿಸಬೇಕಿದೆ. ಈ ಮೂಲಕ ತೆರಿಗೆ ಭಯೋತ್ಪಾದನೆಯನ್ನು ತೊಲಗಿಸಬೇಕಿದೆ. ಆದರೆ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಕುರಿತು ಭರವಸೆ ನೀಡಿದ್ದರು. ಅಲ್ಲದೆ, ಇದು 2014ರ ಎನ್‍ಡಿಎ ಪ್ರಣಾಳಿಕೆಯಲ್ಲಿಯೂ ಇದೆ. ಕಳೆದ 5 ವರ್ಷಗಳಿಂದ ಇದು ದ್ವಿಗುಣಗೊಂಡಿದ್ದು, 6 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದೆ. ಹೀಗಾಗಿ ಟ್ಯಾಕ್ಸ್ ಟೆರರಿಸಂ ಕಡಿಮೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ವರ್ಷದ ಬಜೆಟ್‍ನಲ್ಲಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಹಣಕಾಸು ಸಚಿವರನ್ನು ದೋಷಿಸಿದ್ದರು ಎಂದು ಪೈ ವಿವರಿಸಿದ್ದಾರೆ.

    ಈ ಟ್ಯಾಕ್ಸ್ ಟೆರರಿಸಂ ತೊಲಗಿಸಬೇಕಾದಲ್ಲಿ ಸರ್ಕಾರ ಹಾಗೂ ಕಂಪನಿಗಳ ಸಿಇಓಗಳ ನಡುವೆ ಆಗಾಗ ಸಭೆ ಅಥವಾ ಮಾತುಕತೆ ನಡೆಸಬೇಕು. ಆಗ ಉದ್ಯಮಿಗಳ ಸಮಸ್ಯೆಗಳನ್ನು ತಿಳಿಯಬಹುದು ಎಂದು ಹೇಳಿದ್ದಾರೆ.

    ಕೆಫೆ ಕಾಫಿ ಡೇ ಸಿದ್ಧಾರ್ಥ್ ಅವರು ಸಾವನ್ನಪ್ಪುವುದಕ್ಕೂ ಮುನ್ನ ತಮ್ಮ ಪತ್ರದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ನಮ್ಮ ಶೇರನ್ನು ಎರಡು ವಿವಿಧ ಹಂತಗಳಲ್ಲಿ ಸಲ್ಲಿಸಿ, ನಮ್ಮ ಕಾಫಿಯ ದಿನದ ಶೇರುಗಳ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಪರಿಷ್ಕೃತ ಆದಾಯ ತೆರಿಗೆಯನ್ನೂ ನಮ್ಮಿಂದ ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. ಆದಾಯ ತೆರಿಗೆ ಇಲಾಖೆಯು ಈ ಆರೋಪಗಳನ್ನು ತಳ್ಳಿ ಹಾಕಿತ್ತು, ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ ಇಲಾಖೆ ಕಾರ್ಯನಿರ್ವಹಿಸಿದೆ ಎಂದು ಪ್ರತಿಕ್ರಿಯಿಸಿತ್ತು.

  • ಸಿದ್ಧಾರ್ಥ್ ಕಾಣೆಯಾಗಿದ್ದ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ

    ಸಿದ್ಧಾರ್ಥ್ ಕಾಣೆಯಾಗಿದ್ದ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ

    – ಕೊನೆಯ ಕ್ಷಣದಲ್ಲಿ ಪತ್ನಿ, ಮಗುವನ್ನ ನೆನೆದು ಈಜಿ ದಡ ಸೇರಿದ

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಕಾಣೆಯಾಗಿದ್ದ ಮಂಗಳೂರು ಹೊರವಲಯದ ನೇತ್ರಾವತಿ ಸೇತುವೆ ಮೇಲಿಂದ ವ್ಯಕ್ತಿಯೊಬ್ಬ ನದಿಗೆ ಹಾರಿ, ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ.

    ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಗಿರೀಶ್ (32) ಆತ್ಮಹತ್ಯೆಗೆ ಯತ್ನಿಸಿದವರು. ಕೊನೆ ಕ್ಷಣದಲ್ಲಿ ಗಿರೀಶ್ ಪತ್ನಿ, ಮಗುವನ್ನು ನೆನೆದು ನಿರ್ಧಾರವನ್ನು ಬದಲಿಸಿ, ದಡದತ್ತ ಈಜಿಕೊಂಡು ಬಂದಿದ್ದಾರೆ. ಬಳಿಕ ಅವರನ್ನು ಮೀನುಗಾರರು ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.

    ಗಿರೀಶ್ ಅವರು ನಗರದ ಉರ್ವ ಸ್ಟೋರ್ ನಲ್ಲಿ ಸೀಯಾಳ ವ್ಯಾಪಾರ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಗಿರೀಶ್ ಅವರ ಪತ್ನಿ ನಗರದ ಕೋರ್ಟ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಗಿರೀಶ್ ಅವರು ಪತ್ನಿ, ಮಗುವಿನೊಂದಿಗೆ ಉರ್ವ ಪಿಡಬ್ಲ್ಯುಡಿ ಕ್ವಾಟರ್ಸ್ ನಲ್ಲಿ ವಾಸಿಸುತ್ತಿದ್ದಾರೆ.

    ಗಿರೀಶ್  ಭಾನುವಾರ ಸಂಜೆ ಮಂಗಳೂರಿನಿಂದ ಉಳ್ಳಾಲ ಕಡೆಗೆ ತೆರಳಿದ್ದಾರೆ. ಈ ವೇಳೆ ನೇತ್ರಾವತಿ ಸೇತುವೆಗೆ ಬಂದ ಅವರು ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಪತ್ನಿ ಹಾಗೂ ಮಗು ನೆನಪಾಗಿ ಬದುಕಬೇಕು ಎಂದು ನಿರ್ಧರಿಸಿ, ಈಜಿ ದಡ ಸೇರಲು ಯತ್ನಿಸಿದ್ದರು. ಗಿರೀಶ್ ನದಿಗೆ ಹಾರಿದ್ದನ್ನು ಮೀನುಗಾರರು ನೋಡಿದ್ದರು. ಹೀಗಾಗಿ ಗಿರೀಶ್ ಈಜಿ ದಡದ ಕಡೆಗೆ ಬರುವುದನ್ನು ಕಂಡು ರಕ್ಷಣೆಗೆ ಮುಂದಾದರು. ಗಿರೀಶ್ ಅವರನ್ನು ರಕ್ಷಿಸಿ ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಜುಲೈ 29ರಂದು ಮಂಗಳೂರು-ಉಳ್ಳಾಲ ಸಂಪರ್ಕ ಕಲ್ಪಿಸುವ ಸೇತುವೆಯಿಂದ ಕಾಣೆಯಾಗಿದ್ದರು. ಎರಡು ದಿನಗಳ ಬಳಿಕ ಅಂದರೆ ಜುಲೈ 31ರಂದು ಸಿದ್ಧಾರ್ಥ್ ಅವರ ಮೃತ ದೇಹವು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು. ಈಗ ಗಿರೀಶ್ ಅವರು ಆತ್ಮಹತ್ಯೆಗೆ ಯತ್ನಿಸಿ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಈ ಸೇತುವೆ ಸುಸೈಡ್ ಪಾಯಿಂಟ್ ಆಯಿತೆ ಎಂಬ ಚರ್ಚೆ ಎದ್ದಿದೆ.

  • ಕಾಫಿ ಕಿಂಗ್ ಸಿದ್ಧಾರ್ಥ್‌ಗೆ ಬೈಕ್ ರ‍್ಯಾಲಿ ಮೂಲಕ ನಮನ

    ಕಾಫಿ ಕಿಂಗ್ ಸಿದ್ಧಾರ್ಥ್‌ಗೆ ಬೈಕ್ ರ‍್ಯಾಲಿ ಮೂಲಕ ನಮನ

    ಬೆಂಗಳೂರು: ಇತ್ತೀಚೆಗೆ ನಿಧನರಾದ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ್ ಅವರಿಗೆ ಬೈಕ್ ರ‍್ಯಾಲಿ ನಡೆಸುವ ಮೂಲಕ ಯುವಕರು ಗೌರವ ನಮನ ಸಲ್ಲಿಸುತ್ತಿದ್ದಾರೆ.

    ರೈಡರ್ಸ್ ರಿಪಬ್ಲಿಕ್ ಮೋಟರ್ ಸೈಕಲ್ ಕ್ಲಬ್‍ನ 50ಕ್ಕೂ ಹೆಚ್ಚು ಬೈಕ್ ಸವಾರರಿಂದ ಈ ರ‍್ಯಾಲಿ ಹಮ್ಮಿಕೊಂಡಿದ್ದು, ಸುಮಾರು 400 ಕಿ.ಮೀ. ಮೋಟರ್ ಸೈಕಲ್ ರೈಡ್ ನಡೆಸುವ ಮೂಲಕ ಸಿದ್ಧಾರ್ಥ್ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.

    ರಾಜ್ಯದಿಂದ ಆಂಧ್ರ ಪ್ರದೇಶದ ಪೆನುಗೊಂಡವರೆಗೆ ಈ ವಿಶೇಷ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ಮೋಟರ್ ಸೈಕಲ್ ರೈಡ್‍ನಲ್ಲಿ ದಾರಿಯುದ್ದಕ್ಕೂ ಕಾಣಸಿಗುವ ಪ್ರಮುಖ ಕೆಫೆ ಕಾಫಿ ಡೇ ಔಟ್‍ಲೆಟ್‍ಗಳಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿ, ಹೀಗೆ ಪೆನುಗೊಂಡದವರೆಗೆ ತೆರಳಲಿದ್ದಾರೆ.

    ಸೋಮವಾರ ಸಿದ್ಧಾರ್ಥ್ ಕಾಣೆಯಾಗಿರುವ ಕುರಿತು ಸುದ್ದಿ ಬಿತ್ತರವಾಗಿತ್ತು. ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರು ಕಾಣೆಯಾಗಿ 36 ಗಂಟೆಗಳ ನಂತರ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

    1993ರಲ್ಲಿ ಕಾಫಿ ಉದ್ದಿಮೆಗೆ ಕಾಲಿಟ್ಟ ಸಿದ್ದಾರ್ಥ್, ತಮ್ಮ ಜೀವಮಾನದಲ್ಲಿ ಮತ್ತೆಂದು ತಿರುಗಿಯೂ ನೋಡಲಿಲ್ಲ. 24ನೇ ವಯಸ್ಸಿಗೆ ಸ್ಟಾಕ್ ಮಾರ್ಕೆಟ್‍ನಲ್ಲಿ ಷೇರು ಖರೀದಿಸಿದ್ದರು. ಚಿಕ್ಕಮಗಳೂರು-ಹಾಸನ-ಮಡಿಕೇರಿಯಲ್ಲಿ ನಷ್ಟದಲ್ಲಿದ್ದ ಕಾಫಿ ತೋಟಗಳನ್ನು ಖರೀದಿಸಿ, ಹಂತ ಹಂತವಾಗಿ ಬೆಳೆಯುತ್ತಾ 13 ಸಾವಿರಕ್ಕೂ ಅಧಿಕ ಹೆಕ್ಟೇರ್ ಕಾಫಿ ತೋಟದ ಮಾಲೀಕರಾದರು.

    1996ರಲ್ಲಿ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ದರು. ಒಂದು ನೂರಾಗಿ, ನೂರು ಐನೂರಾಗಿ ವಿಶ್ವಾದ್ಯಂತ 10ಕ್ಕೂ ಹೆಚ್ಚು ದೇಶ ಸೇರಿದಂತೆ 1772 ಕಾಫಿ ಡೇ ಔಟ್‍ಲೇಟ್‍ನ ಒಡೆಯರಾದರು. ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು ಮಾಡುವ ಮೂಲಕ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು. ಕಾಫಿ ಡೇಗಳಿಗೆ ಬೇಕಾದ ಬೀಜವನ್ನು ಸ್ವಂತ ತೋಟದಿಂದಲೇ ಬೆಳೆಯುತ್ತಿದ್ದರು. ಕಾಫಿಯ ಜೊತೆ 10ಕ್ಕೂ ಹೆಚ್ಚು ವಿವಿಧ ಕಂಪನಿಗಳನ್ನು ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು.

    ಸಿದ್ಧಾರ್ಥ್ ಅವರು ಸಭೆ ಆರಂಭಕ್ಕೂ ಮೊದಲೇ ನಮ್ಮನ್ನು ಉಳಿಸೋದೆ ಹಸಿರು, ಹಸಿರನ್ನು ಬೆಳೆಸಿ ಎಂದು ಸಾರಿ-ಸಾರಿ ಹೇಳುತ್ತಿದ್ದರು. ಕಾರ್ಮಿಕರ ಮಕ್ಕಳ ಮದುವೆ, ಮನೆಗಾಗಿ ಬಂದವರಿಗೆಲ್ಲ ಸಹಾಯ ಮಾಡುತ್ತಿದ್ದ ಇವರನ್ನು ಜನ ಪೂಜ್ಯ ಭಾವನೆಯಿಂದಲೇ ನೋಡುತ್ತಿದ್ದರು. ಇಂತಹ ಗುಣದ ಸಿದ್ಧಾರ್ಥ್ ಅವರಿಗೆ ಇದೀಗ ಬೈಕ್ ರ‍್ಯಾಲಿ ಮೂಲಕ ಯುವಕರು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

  • ಸಿದ್ಧಾರ್ಥ್ ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    ಸಿದ್ಧಾರ್ಥ್ ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    – ಸಿದ್ಧಾರ್ಥ್ ಅಭಿಮಾನಿಗಳಿಂದ ಅಭಿಯಾನ

    ಚಿಕ್ಕಮಗಳೂರು: ನಿಗೂಢವಾಗಿ ಸಾವನ್ನಪ್ಪಿರುವ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಮನೆಗೆ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಇಂದು ಭೇಟಿ ನೀಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್ ನಲ್ಲಿರುವ ಸಿದ್ದಾರ್ಥ್ ಮನೆಗೆ ಭೇಟಿ ನೀಡಿದ ಸ್ವಾಮೀಜಿಗಳು, ಸಿದ್ದಾರ್ಥ್ ತಾಯಿ ವಸಂತಿ ಹೆಗ್ಡೆ ಹಾಗೂ ಪತ್ನಿ ಮಾಳವಿಕಾ ಸೇರಿದಂತೆ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ.

    ಯುವಕರಿಂದ ಅಭಿಯಾನ:
    ಸಿದ್ಧಾರ್ಥ್ ಅವರು ಮೃತಪಟ್ಟ ಬಳಿಕ ಕಾಫಿ ಡೇ ಷೇರು ದಿನೇ, ದಿನೇ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಯುವಕರು ಅಭಿಯಾನಯೊಂದಕ್ಕೆ ಚಾಲನೆ ನೀಡಿದ್ದಾರೆ.

    ಸಿದ್ದಾರ್ಥ್ ಅವರ ಅಭಿಮಾನಿ ಯುವಕರು `ಟೀಮ್ ನಮ್ಮುಡುಗ್ರು’ ತಂಡದಿಂದ ಷೇರು ಖರೀದಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗುತ್ತಿದೆ. ಸಿದ್ಧಾರ್ಥ್ ಅವರು ಕೆಫೆ ಕಾಫಿ ಡೇ ಸೇರಿದಂತೆ ಅವರ ಸಂಸ್ಥೆಗಳಲ್ಲಿ ಯುವಕರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಯುವಕರಿಗೆ ತರಬೇತಿ ನೀಡಲೆಂದೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

  • ಸಿದ್ಧಾರ್ಥ್ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್- ಆತ್ಮಹತ್ಯೆಯಲ್ಲ ಕೊಲೆಯೆಂದು ವ್ಯಾಪಕ ಚರ್ಚೆ

    ಸಿದ್ಧಾರ್ಥ್ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್- ಆತ್ಮಹತ್ಯೆಯಲ್ಲ ಕೊಲೆಯೆಂದು ವ್ಯಾಪಕ ಚರ್ಚೆ

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಅವರದ್ದು ಆತ್ಮಹತ್ಯೆ ಅಲ್ಲ ಕೊಲೆಯೆಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

    ಸಿದ್ಧಾಥ್ ಅವರು ತಮ್ಮ ಕಾರಿನಲ್ಲಿ ಜಪ್ಪಿನಮೊಗರಿನಲ್ಲಿರುವ ನೇತ್ರಾವತಿ ಸೇತುವೆ ಬಳಿ ಬರುತ್ತಿದ್ದಂತೆಯೇ ಹಲವು ಬೆಳವಣಿಗೆಗಳು ನಡೆದಿದೆ. ಈ ಎಲ್ಲಾ ಘಟನೆಗಳು ಅನುಮಾನ ಹುಟ್ಟುವಂತೆ ಮಾಡಿವೆ. ಈ ಅನುಮಾನಗಳು ಇದೀಗ ಸಿದ್ಧಾರ್ಥ್ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಮೂಡುವಂತೆ ಮಾಡಿದೆ.

    ಸಿದ್ಧಾರ್ಥ್ ಅವರ ಕಾರು ಸಂಜೆ 5.28ರ ಸುಮಾರಿಗೆ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲುವಿನಲ್ಲಿ ಪಾಸಾಗಿದೆ. ಆ ಬಳಿಕ ನೇತ್ರಾವತಿ ಸೇತುವೆ ಬಳಿ ಬಂದಾಗ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಸಿದ್ಧಾರ್ಥ್ ಯಾಕೆ ಹೇಳಿದರು. ಅಲ್ಲದೆ ಸೇತುವೆ ಪಕ್ಕ ಕಾರಿನಿಂದ ಇಳಿದ ಸಿದ್ಧಾರ್ಥ್, 7 ಗಂಟೆಗೆ ಬರುತ್ತೇನೆ. ಕೊಟ್ಟಾಯಂ ಏರ್ ಪೋರ್ಟಿಗೆ ಬಿಡಬೇಕು ಎಂದು ಚಾಲಕನಿಗೆ ಹೇಳಿದ್ದರಂತೆ. ಹೀಗಾಗಿ ನೇತ್ರಾವತಿ ಸೇತುವೆಯಿಂದ 1 ಕಿ.ಮೀ ದೂರದಲ್ಲಿರುವ ಜಪ್ಪಿನ ಮೊಗರಿನಲ್ಲಿ ಸಿದ್ಧಾರ್ಥ್ ಯಾಕೆ ಇಳಿದರು, ಒಂದು ವೇಳೆ ಅಲ್ಲಿ ಅವರನ್ನು ಯಾರಾದರೂ ಭೇಟಿಯಾಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ:ಕಾಣೆಯಾಗುವ ಕೊನೆ ಕ್ಷಣದ ಮಾಹಿತಿ ಬಿಚ್ಚಿಟ್ಟ ಸಿದ್ಧಾರ್ಥ್ ಡ್ರೈವರ್

    ಸಾವಿಗೂ ಮುನ್ನ ಸಿದ್ಧಾರ್ಥ್ ಅವರು ಸಾಲ ಪಡೆದಿದ್ದ ವ್ಯಕ್ತಿಗಳನ್ನ ಭೇಟಿಯಾಗಿದ್ದಾರೆಯೇ, ನೇತ್ರಾವತಿ ಸೇತುವೆ ಬಳಿ ಸಿದ್ಧಾರ್ಥ್ ಜೊತೆ ಕಾರಿನಲ್ಲಿ ರಹಸ್ಯ ಮಾತುಕತೆ ನಡೆದಿತ್ತೇ, ಹಣ ಪಡೆದಿದ್ದ ರಾಜಕಾರಣಿ ಮತ್ತು ಮುಂಬೈ ಫೈನಾನ್ಸ್ ದಲ್ಲಾಳಿಗಳಿಂದ ರಹಸ್ಯ ಭೇಟಿಯಾಗಿದೆಯೇ, ತನ್ನ ಕಾರಿನಿಂದ ಮಂಗಳೂರಿನ ಜಪ್ಪಿನಮೊಗರಿನಲ್ಲಿ ಇಳಿದಿದ್ದ ಸಿದ್ದಾರ್ಥ್ ಯಾರನ್ನಾದರೂ ಭೆಟಿಯಾಗಿದ್ದಾರೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಸಂಜೆ ಏಳು ಗಂಟೆಗೆ ನೇತ್ರಾವತಿ ಸೇತುವೆ ಪಕ್ಕ ತೆರಳಿದ್ದೆ ಎಂದು ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಚಾಲಕ ಹೇಳಿಕೆಯಿಂದಲೇ ಅನುಮಾನ ಹುಟ್ಟಿಕೊಂಡಿದ್ದು, ಹಾಗಾದರೆ ಸಿದ್ಧಾರ್ಥ್ ಅವರು ಸುದೀರ್ಘ ಒಂದೂವರೆ ಗಂಟೆ ಆಗಂತುಕರ ಜೊತೆ ಮಾತುಕತೆ ನಡೆಸಿದ್ದಾರೆಯೇ ಅನ್ನೋ ಸಂಸಯ ಮೂಡಿದೆ. ಈ ವೇಳೆ, ಸಿದ್ಧಾರ್ಥ್ ತಮ್ಮ ವಿರೋಧಿಗಳ ಕಾರಿನಲ್ಲಿ ತೆರಳಿರುವ ಬಗ್ಗೆ ಶಂಕೆಯೂ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸಿದ್ಧಾರ್ಥ್ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿ ಮಾತುಕತೆ ನಡೆಸಿದವರು ಯಾರು ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆಯಾಗಿದ್ದು ಹೇಗೆ?

    ಮಂಗಳೂರು ತಲುಪುತ್ತಿದ್ದಂತೆಯೇ ಸಿದ್ಧಾರ್ಥ್ ಅವರು ತಮ್ಮ ಚಾಲಕನಲ್ಲಿ ಉಳ್ಳಾಲದ ಸೈಟ್ ನೋಡಲು ಹೋಗಬೇಕು ಎಂದು ಹೇಳಿದ್ದರು. ಕಾಫಿ ಸಾಮ್ರಾಟ, ಉಳ್ಳಾಲ ಮತ್ತು ನೇತ್ರಾವತಿ ಪಕ್ಕದಲ್ಲಿ ರೆಸಾರ್ಟ್ ನಿರ್ಮಿಸಲು ಮುಂದಾಗಿದ್ದರು. ಎರಡು ವರ್ಷಗಳಿಂದ ರೆಸಾರ್ಟ್ ಕನಸು ಈಡೇರದೇ ಉಳಿದಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಕೈಹಾಕಲು ಮುಂದಾಗಿದ್ದ ವಿ.ಜಿ ಸಿದ್ಧಾರ್ಥ್, ಕೋಸ್ಟಲ್ ಟೂರಿಸಂ ಅವರ ಪಾಲಿಗೆ ಮುಳ್ಳಾಗಿ ಹೋಯಿತೇ ಅನ್ನೋ ವ್ಯಾಪಕ ಚರ್ಚೆಯಾಗುತ್ತಿದೆ.

    https://www.youtube.com/watch?v=wZvAI8ub-RY

  • ಎಸ್‍ಎಂಕೆ ಅಳಿಯ ಸಿದ್ಧಾರ್ಥ್ ಸಾವಿನ ರಹಸ್ಯ ಇಂದು ಬಹಿರಂಗ?

    ಎಸ್‍ಎಂಕೆ ಅಳಿಯ ಸಿದ್ಧಾರ್ಥ್ ಸಾವಿನ ರಹಸ್ಯ ಇಂದು ಬಹಿರಂಗ?

    ಬೆಂಗಳೂರು/ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್ ಸಾವಿನ ಕುರಿತು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಇಂದು ಸಲ್ಲಿಕೆಯಾಗುವ ಸಾಧ್ಯತೆಗಳಿವೆ.

    ಪೋಸ್ಟ್ ಮಾರ್ಟಂ ವರದಿ ಆಧರಿಸಿ ತನಿಖೆ ಮುಂದುವರಿಸಲಾಗುತ್ತಿದ್ದು, ಸಿದ್ಧಾರ್ಥ್ ಅವರ ಮೃತದೇಹದ ಕತ್ತು, ಮುಖದ ಭಾಗದಲ್ಲಿ ಗಾಯಗಳಾಗಿವೆಯಾ ಇಲ್ಲವೋ, ದೇಹದ ಮೇಲೆ ಯಾವುದೇ ಗಾಯದ ಗುರುತು ಇದೆಯಾ ಇಲ್ವಾ ಹಾಗೂ ಸಿದ್ದಾರ್ಥ್ ಧರಿಸಿದ್ದ ಟೀಶರ್ಟ್ ಏನಾಯ್ತು ಅಲ್ಲದೆ ಸಿದ್ದಾರ್ಥ್ ಸಾವು ಸಹಜವೋ? ಅಸಹಜವೋ? ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಸಿಗುವ ನಿರೀಕ್ಷೆಯಿದೆ.

    ಸಿದ್ಧಾರ್ಥ್ ತಮ್ಮ ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರಿಗೆ ಬರೆದಿರುವ ಪತ್ರದ ಖಚಿತತೆಯನ್ನು ದೃಢಪಡಿಸಿಕೊಳ್ಳುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ತನಿಖೆಗಾಗಿ ಬೆಂಗಳೂರಿಗೆ ತೆರಳಿರುವ ಒಂದು ತಂಡ, ಈಗಾಗಲೇ ಕೆಫೆ ಕಾಫಿ ಡೇ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಸಂಸ್ಥೆಯ ಕೆಲವು ಅಧಿಕಾರಿಗಳು ವಿದೇಶಕ್ಕೆ ತೆರಳಿದ್ದು, ಅವರ ಹೇಳಿಕೆಗಳನ್ನು ಪಡೆದ ಬಳಿಕವೇ ಪತ್ರದ ಖಚಿತತೆಯ ಕುರಿತು ಸ್ಪಷ್ಟತೆ ಸಿಗುವ ಸಾಧ್ಯತೆಗಳಿವೆ.

    ನಗರ ಪೊಲೀಸರು, ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಅಸಹಜ ಸಾವಿನ ಪ್ರಕರಣಗಳನ್ನು ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಈ ಪ್ರಕರಣದಲ್ಲಿ ಎಸಿಪಿ ದರ್ಜೆಯ ಅಧಿಕಾರಿಗೆ ತನಿಖೆಯ ಹೊಣೆ ವಹಿಸಲಾಗಿದೆ. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಟಿ. ಕೋದಂಡರಾಮ್ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದ್ದು, ವಿಶೇಷ ತಂಡಗಳು ಅವರಿಗೆ ವರದಿ ಸಲ್ಲಿಸಲಿವೆ.

    https://www.youtube.com/watch?v=numNLY1ATRs