ಬೆಂಗಳೂರು: ನಮ್ಮ ದೇಶ ಅನೇಕ ಭಾಷೆಗಳಿಂದ ಕೂಡಿದ್ದು, ಪ್ರತಿಯೊಬ್ಬರಿಗೂ ಅವರವರ ಭಾಷೆ ಸ್ವಾಭಿಮಾನದ ವಿಷಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹಿಂದಿ ರಾಷ್ಟ್ರಭಾಷೆ ವಿವಾದ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಯಾರ ಟ್ವೀಟ್ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಸಿದ್ದನಿಲ್ಲ. ದೇಶದಲ್ಲಿ ಯಾವ, ಯಾವ ಭಾಷೆಗೆ ಯಾವ ಮಾನ್ಯತೆ ನೀಡಬೇಕು ಎಂದು ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ. ನಮ್ಮ ದೇಶ ಅನೇಕ ಭಾಷೆಗಳಿಂದ ಕೂಡಿದ್ದು, ಪ್ರತಿಯೊಬ್ಬರಿಗೂ ಅವರವರ ಭಾಷೆ ಸ್ವಾಭಿಮಾನದ ವಿಷಯವಾಗಿದೆ. ನಮ್ಮ ರಾಜ್ಯದ ಕೊಡಗು, ಮಂಗಳೂರು ಭಾಗಗಳಲ್ಲಿ ಬೇರೆ ಭಾಷೆಗಳನ್ನು ಮಾತನಾಡಿದರೂ, ನಾವು ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ಧ್ವನಿಗೂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ
ನಾವೆಲ್ಲ ಕನ್ನಡಿಗರು. ನಮಗೆ ನಮ್ಮದೇ ಆದ ಭಾಷೆ, ಧ್ವಜ, ಸ್ವಾಭಿಮಾನವಿದೆ. ನಮ್ಮ ನೋಟಿನಲ್ಲಿ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಿ ಮುದ್ರಣ ಮಾಡಲಾಗಿದೆ. ಈ ನೋಟು ರಾಜ್ಯ ಸೇರಿದಂತೆ ರಾಷ್ಟ್ರದಲ್ಲಿ ಚಲಾವಣೆಯಾಗುತ್ತದೆ. ಹೀಗಾಗಿ ಭಾಷೆ ವಿಚಾರದಲ್ಲಿ ಚರ್ಚೆಯ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.
ದೇಶದ ಉತ್ತರ ಭಾಗದಲ್ಲಿ ಹಿಂದಿ ಭಾಷೆ ಮಾತನಾಡುತ್ತಿದ್ದು, ಆ ಭಾಷೆಗೆ ಯಾವ ರೀತಿ ಗೌರವ ನೀಡಬೇಕೋ ಅದನ್ನು ನೀಡಲಾಗುತ್ತಿದೆ. ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಕೇಂದ್ರ ಸಚಿವರು ಯಾರಾದರೂ ಈ ಬಗ್ಗೆ ಚರ್ಚೆ ಮಾಡಿದರೆ ಅದಕ್ಕೆ ಉತ್ತರ ನೀಡೋಣ. ನಮ್ಮ ನೆಲ, ಜಲ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ನಮ್ಮ ಮೊದಲ ಪ್ರಾತಿನಿಧ್ಯ ಕನ್ನಡ ಭಾಷೆಯಾಗಿರುತ್ತದೆ. ನಂತರ ನಾವು ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕಿನ ಪ್ರಕಾರ ಬೇರೆ ಭಾಷೆಗಳನ್ನು ಬಳಸಬಹುದು. ಇದನ್ನೂ ಓದಿ: ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ
There are 19,500 mother tongues spoken in India.
Our love for India feels the same in every language.
As a proud Kannadiga and a proud Congressman let me remind everyone that Congress created linguistic states so that no one language dominates another.#UnityInDiversity
ನಮ್ಮ ಕೆಲವು ಸಂಸದರು ಹಿಂದಿ ಹಾಗೂ ಇಂಗ್ಲಿಷ್ ಭಾಷೆ ತಿಳಿದಿದ್ದರೂ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುತ್ತಾರೆ. ಇದಕ್ಕೆ ಅವಕಾಶವಿದೆ. ನನ್ನ ಸಹೋದರ ಹಲವು ಬಾರಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ವಿರೋಧಪಕ್ಷದ ನಾಯಕರಾಗಿರುವ ಕಾರಣ ಹಿಂದಿಯಲ್ಲಿ ಮಾತನಾಡುತ್ತಾರೆ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಭಾಷೆಯ ಗೌರವ ಉಳಿಸಿಕೊಳ್ಳಲು ನಾವು ಏನು ಮಾಡಬೇಕು ಅದನ್ನು ಮಾಡೋಣ ಎಂದಿದ್ದಾರೆ.
-ಖರ್ಗೆ ಸಾಹೇಬರಿಗೆ 5 ಬಾರಿ, ನನಗೆ 3 ಬಾರಿ ಬೆದರಿಕೆ ಕರೆಗಳು ಬಂದಿವೆ -ಕೆಲವು ದಿನಗಳ ಹಿಂದೆ ಗೃಹ ಸಚಿವರೇ ದಿವ್ಯಾ ಅವರ ಮನೆಗೆ ಹೋಗಿದ್ರು
ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ವಿಚಾರವಾಗಿ ಸರ್ಕಾರ ಕತ್ತೆ ಕಾಯ್ತಿದೆಯಾ? ಕಡ್ಲೆಪುರಿ ತಿನ್ನುತ್ತಿದೆಯಾ? ಕೋಲಾಟ ಆಡುತ್ತಿದೆಯಾ? ನನ್ನ ಬಳಿ ಇನ್ಯಾವ ಸಾಕ್ಷಿ ಕೇಳುತ್ತಿದ್ದೀರಾ? ಆಡಿಯೋ ರಿಲೀಸ್ ಆಗಿ ಮೂರು ದಿನವಾದರೂ ಆರೋಪಿ ವಿರುದ್ಧ ಯಾಕೆ ಎಫ್‍ಐಆರ್ ದಾಖಲಿಸುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಂಜೆ ನನ್ನ ಮನೆಗೆ ಸಿಐಡಿಯವರು ಒಂದು ನೋಟಿಸ್ ಕೊಟ್ಟಿದ್ದಾರೆ. ಅದರಲ್ಲಿ ಸುದ್ದಿಗೋಷ್ಠಿ ನಡೆಸಿ ಪಿಎಸ್‍ಐ ಅಕ್ರಮದ ಸಾಕ್ಷ್ಯ ಇದೆ ಎಂದಿದ್ದೀರಾ. ಆದ್ದರಿಂದ ತಮ್ಮ ಬಳಿ ಇರುವ ಸಾಕ್ಷಿ ಹಾಗೂ ದಾಖಲೆಗಳನ್ನು ಒದಗಿಸುವಂತೆ 11-30ಕ್ಕೆ ಬರುವಂತೆ ನೋಟಿಸ್ ನೀಡಿದ್ದಾರೆ. ಆದರೆ ನಾನು ಇನ್ವೆಸ್ಟಿಗೇಷನ್ ಜರ್ನಲಿಸಮ್ ಮಾಡಿದ್ದೇನೆ, ನನ್ನ ಬಳಿ ದಾಖಲೆ ಇದೆ ಅಂತ ಎಲ್ಲೂ ಹೇಳಿಲ್ಲ. ನನ್ನ 2 ಪತ್ರಿಕಾಗೋಷ್ಠಿಯನ್ನು ಕಣ್ಣು ಹಾಗೂ ಕಿವಿ ತೆರದು ನೋಡಿ ಎಂದು ಕಿಡಿಕಾರಿದ್ದಾರೆ.
ನೇಮಕಾತಿ ಪಟ್ಟಿ ಫೈನಲ್ ಆದ ಅಭ್ಯರ್ಥಿ ಯುನಿಫಾರ್ಮ್ ಹಾಕಿಕೊಂಡು ಓಡಾಡುತ್ತಿರುವ ಬಗ್ಗೆ ನಿಮ್ಮ ಬಳಿಕ ಮಾಹಿತಿ ಇಲ್ವಾ? ದಿವ್ಯಾ ಹಾಗರಗಿ, ಮಹತೇಶ್ ಪಾಟೀಲ್ ಹೀಗೆ ಅನೇಕರ ಹೆಸರು ಬಂತು. ಆಡಿಯೋ ರಿಲೀಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇತ್ತು. ರಿಲೀಸ್ ಮಾಡುವುದಕ್ಕೂ ಮುನ್ನ ಪತ್ರಿಕೆಗಳಲ್ಲಿ ಬಂದಿದೆ. ನಾನು ಸ್ಟಿಂಗ್ ಮಾಡಿದ್ದಾ ಅದು? ಪತ್ರಿಕೆಗಳಲ್ಲಿ ಬಂದ ವಿಚಾರವನ್ನು ಸುದ್ದಿಗೋಷ್ಠಿ ಮಾಡಿ ಹೇಳಿದ್ದೇನೆ. ಪೇಪರ್ ಓದಿ ಇಂಟಲಿಜೆನ್ಸ್‍ನವರು ಹೇಳುತ್ತಿದ್ದಾರೆ. ಇಂಟಲಿಜೆನ್ಸ್ ಕಾಮನ್ ಸೆನ್ಸ್ ಇಲ್ಲದೇ ಇರುವವರು ಪೇಪರ್‌ನಲ್ಲಿ ಬರುವುದನ್ನು ಸಿಎಂ ಮುಂದೆ ಒಪ್ಪಿಸುತ್ತಾ ಇದ್ದಾರಾ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಹಗರಣಕ್ಕೆ ಮೃತಪಟ್ಟವರ ಮೊಬೈಲ್ ಬಳಕೆ
ಈ ನೋಟೀಸ್‍ನಿಂದ ಸರ್ಕಾರದ ಕಾರ್ಯವೈಖರಿ ಹೇಗಿದೆ ಎಂಬುವುದು ಗೊತ್ತಾಗುತ್ತಿದೆ. ನಾನು ನೀಡಿದ ಮಾಹಿತಿ ಅವರ ಬಳಿ ಇಲ್ಲ ಅಂತ ಹೇಳುತ್ತಿರುವುದು ಆಶ್ಚರ್ಯಕರವಾದ ಸಂಗತಿ. ಕೆಲವು ತಿಂಗಳ ಹಿಂದೆ ಅಭ್ಯರ್ಥಿಗಳು ಸಿಎಂ ಹಾಗೂ ಡಿಜಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಜನವರಿ 22 ರಂದು ಹೋಮ್ ಮಿನಿಸ್ಟರ್, ಸೆಲೆಕ್ಟ್ ಆಗದೇ ಇರುವವರು ಹೀಗೆ ಆರೋಪ ಮಾಡಿದ್ದಾರೆ ಅಂತ ಹೇಳಿದ್ದಾರೆ.
ನೇಮಕಾತಿ ತಡೆ ಹಿಡಿದ ಬಗ್ಗೆ ನಿಮಗೆ ತಿಳಿದಿಲ್ವಾ. ಪ್ರಭು ಚೌಹಾಣ್ ಅವರು ಅವ್ಯವಹಾರ ಆಗಿರುವ ಬಗ್ಗೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದಿದ್ದಾರೆ.
ಸರ್ಕಾರ ಕತ್ತೆ ಕಾಯ್ತಿದೆಯಾ? ಕಡ್ಲೆಪುರಿ ತಿನ್ನುತ್ತಿದೆಯಾ? ಕೋಲಾಟ ಆಡುತ್ತಿದೆಯಾ? ನನ್ನ ಬಳಿ ಇನ್ಯಾವ ಸಾಕ್ಷಿ ಕೇಳುತ್ತಿದ್ದೀರಾ? ಆಡಿಯೋ ರಿಲೀಸ್ ಆಗಿ ಮೂರು ದಿನವಾಯಿತು. ಯಾಕೆ ಎಫ್‍ಐಆರ್ ಮಾಡುತ್ತಿಲ್ಲ. ಈಗಿನ ಹೋಂ ಮಿನಿಸ್ಟರ್‌ಗೆ ಯಾಕೆ ವಿಚಾರಣೆಗೆ ನೋಟೀಸ್ ಕೊಟ್ಟಿಲ್ಲ. ಎಡಿಜಿಪಿ ನೇತೃತ್ವದಲ್ಲಿ ನೇಮಕಾತಿ ನಡೆದಿರುತ್ತದೆ. ಯಾರ ನೇತೃತ್ವದಲ್ಲಿ ನೇಮಕಾತಿಯಾಗಿರುತ್ತದೆಯೋ ಅವರನ್ನು ಯಾಕೆ ವಿಚಾರಣೆಗೆ ಕರೆಯುತ್ತಿಲ್ಲ. ಇದನ್ನು ಸಾರ್ವಜನಿಕರು ಮುಂದೆ ಇಟ್ಟರೆ ಅವರಿಗೂ ನೋಟೀಸ್ ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ದಿವ್ಯಾ ಅವರ ಮನೆಗೆ ಕೆಲವು ದಿನಗಳ ಹಿಂದೆ ಗೃಹ ಸಚಿವರು ಹೋಗಿದ್ದಾರೆ. ಸನ್ಮಾನ ಮಾಡಿಸಿಕೊಂಡು ಡ್ರೈ ಫ್ರೂಟ್ಸ್ ತಿಂದು ಬಂದಿದ್ದಾರೆ. ಅನೇಕ ಬಿಜೆಪಿ ನಾಯಕರ ಜೊತೆ ಅವರು ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಅವರು ನಮ್ಮ ಕಾರ್ಯಕರ್ತೆ ಅಲ್ಲ ಅಂತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?
ನಾನು ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೂಡಲೇ ನನ್ನನ್ನ ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗುತ್ತದೆ. ಅಂತರಾಷ್ಟ್ರೀಯ ಸಂಖ್ಯೆಗಳಿಂದ ಬೆದರಿಕೆ ಕರೆ ಬರುತ್ತಿದೆ. ಇಶ್ಯೂ ಡೈವರ್ಟ್ ಮಾಡುವುದಕ್ಕೆ ನನಗೆ ನೋಟಿಸ್ ಕೊಟ್ಟಿದ್ದಾರೆ ತನಿಖೆ ಉದ್ದೇಶದಿಂದ ಅಲ್ಲ. ನಾನು ಸಿಐಡಿ ಕಚೇರಿಗೆ ನೇರವಾಗಿ ಹೋಗಲ್ಲ. ಲಿಖಿತ ಮೂಲಕ ಅಧಿಕೃತವಾಗಿ ಉತ್ತರ ಕೊಡುತ್ತೇನೆ. ನನ್ನ ಪಾತ್ರ ಇದೆ ಅಂದ ಸಚಿವರಿಗೆ ಕಾಮನ್ ಸೆನ್ಸ್ ಇಲ್ವಾ? ಖರ್ಗೆ ಸಾಹೇಬರಿಗೆ 5 ಬಾರಿ, ನನಗೆ 3 ಬಾರಿ ಬೆದರಿಕೆ ಕರೆಗಳು ಬಂದಿವೆ. ಆಗ ಥ್ರೆಟ್ ಬೇರೆ ಇತ್ತು. ಈಗ ನನಗೆ ಇಂಟರ್ ನ್ಯಾಷನಲ್ ನಂಬರ್‌ನಿಂದ ಬೆದರಿಕೆ ಕರೆ ನಿನ್ನೆ ಬಂದಿದೆ. 18-20 ಸೆಕೆಂಡ್ ಕರೆ ಬಂದಿದ್ದು, ಹಿಂದಿಯಲ್ಲಿ ಮಾತನಾಡಿದರು ನಿನ್ನದು ಜಾಸ್ತಿ ಆಯ್ತು. ನಮ್ಮ ಸರ್ಕಾರ ಎರಡೂ ಕಡೆ ಇದೆ ಎಂದರು. ನೀನು ಯಾರಪ್ಪ ಎಂದು ಕೇಳಿದರೆ ಕಾಲ್ ಕಟ್ ಮಾಡಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾÐನಜ್ಯೋತಿ ತರಬೇತಿ ಸಂಸ್ಥೆ ಎಕ್ಸಾಂ ಸೆಂಟರ್ ಅಲ್ಲ ಅಂತ ಕಲಬುರಗಿಯಲ್ಲಿ ಲೆಟರ್ ಕೊಟ್ಟಿದ್ದಾರೆ. ಸುನೀಲ್ ಕುಮಾರ್ ಪ್ರಿಯಾಂಕ್ ತನಿಖೆ ಮಾಡಿ ಅಂತಾರೆ, ಸ್ವಾಮಿ ಸುನೀಲ್ ಮೊದಲು ಗೃಹ ಸಚಿವರನ್ನು ತನಿಖೆಗೊಳಪಡಿಸಿ. ಗೃಹ ಸಚಿವರೇ ಆರೋಪಿ ಮನೆಗೆ ಹೋಗಿ ಬರುತ್ತಾರೆ. ಸಿಎಂ, ಗೃಹ ಸಚಿವರಿಗಿಂತ ನಾನು ಪ್ರಭಾವಿಯೇ? ನಾನು ಪ್ರಭಾವಿಯಾಗಿದ್ದರೆ ಅರೆಸ್ಟ್ ಮಾಡಿಸಿ. ದಿವ್ಯಾ ಹಾರಗಿ ಚಿಕ್ಕ ಚಿಕ್ಕ ಮೀನುಗಳಷ್ಟೇ. ಇವರು ಹಣ ಕಲೆಕ್ಟ್ ಮಾಡುವವರು. ಅವರು ಕಲೆಕ್ಟ್ ಮಾಡಿದ್ದು ಎಲ್ಲಿಗೆ ಹೋಗುತ್ತದೆ. ಅದು ಬೆಂಗಳೂರಿಗೆ ಬರುತ್ತದೆ. ಅಧಿಕಾರಿಗಳಿಗೆ, ಇವರಿಗೆ ಹೋಗುತ್ತದೆ. ಹಣ, ಅಧಿಕಾರಿ, ಶಾಸಕರು, ಬಿಜೆಪಿ ಕಚೇರಿಗೂ ಹೋಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ 15 ಮಂದಿ ಅಸ್ವಸ್ಥ
ಇದೇ ವೇಳೆ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಗಂಡಸ್ತನ ತೋರಿಸಿ ಅಂತ ಉಗಿಯುತ್ತಿದ್ದಾರೆ. ಗೃಹ ಸಚಿವರು ಸರಿ ಇಲ್ಲ ಅಂತ ಉಗಿಯುತ್ತಿದ್ದಾರೆ. ಯುವಕರು ಹುದ್ದೆ ಬಿಟ್ಟುಹೋಗಿ ಅಂತಾರೆ. ಒಂದೊಂದೇ ಅಕ್ರಮಗಳು ಹೊರಬರುತ್ತಿವೆ. ಬಹಳಷ್ಟು ಯುವಕರ ಬದುಕು ಕಿತ್ತುಕೊಳ್ಳುತ್ತಿದ್ದಾರೆ. ಕೋಟಿ ಖರ್ಚು ಮಾಡಿ ಹುದ್ದೆ ಪಡೆದವರು ಏನು ಮಾಡುತ್ತಾರೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡ್ತಾರಾ? ಸಾರ್ವಜನಿಕರ ಜೇಬಿಗೆ ಕೈ ಹಾಕುತ್ತಾರೆ. ದಿವ್ಯಾ ಹಾಗರಗಿ ಎಲ್ಲಿ ಪತ್ತೆಯಿಲ್ಲ. ಇಲ್ಲಿಯವರೆಗೆ ಅವರನ್ನು ರಕ್ಷಣೆ ಮಾಡಿಕೊಳ್ಳುತ್ತಿರುವುದೇಕೆ? ಎಲ್ಲಿದ್ದಾರೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿ, ಹಾಗರಗಿ ಎಲ್ಲಿ ಅಂತ ಜನ ಕೇಳುತ್ತಿದ್ದಾರೆ. ಮೊದಲು ಅವರನ್ನ ಪತ್ತೆ ಹಚ್ಚುವ ಕೆಲಸ ಮಾಡಿ. ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಡಿ. ಸಾವಿರಾರು ಯುವಕರ ಭವಿಷ್ಯ ಹಾಳಾಗುತ್ತಿದೆ. ಪ್ರಕರಣದ ತನಿಖೆಯನ್ನ ಗಂಭೀರವಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು: ಈ ಸರ್ಕಾರದಲ್ಲಿ ಹೆಣ್ಮಕ್ಕಳಾಗಲೀ, ಗಂಡು ಮಕ್ಕಳಾಗಲೀ ಸೇಫ್ ಅಲ್ಲ. ಇದಕ್ಕೆ ಮೈಸೂರು ಪ್ರಕರಣವೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ಗ್ಯಾಂಗ್ ರೇಪ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿ ನೋಡಿ ಪಾಪ ಗೃಹ ಸಚಿವರು ಹೊಸದಾಗಿ ಮಂತ್ರಿಯಾಗಿದ್ದಾರೆ. ಅವರ ಮೇಲೇನೆ ಮಾತನಾಡುವಂಥದ್ದಲ್ಲ. ಒಂದು ಸರ್ಕಾರ ಕಾರಣವಾಗುತ್ತದೆ. ಓರ್ವ ಗೃಹ ಸಚಿವ ಮಾತ್ರ ಅಲ್ಲ ಎಂದಿದ್ದಾರೆ. ಇದನ್ನೂ ಓದಿ:ಹೊರಗಡೆ ನಾಯಿಗಳಿದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ: ಎಚ್.ಕೆ.ಕುಮಾರಸ್ವಾಮಿ
ನಾನು ಅವರ ಬಗ್ಗೆ ಕಾಮೆಂಟ್ ಮಾಡಲ್ಲ. ಆದ್ರೆ ಇದಕ್ಕೆ ಉತ್ತರ ಕೊಡಬೇಕಾಗಿರೋದು ಮುಖ್ಯಮಂತ್ರಿಗಳು. ಅವರ ಒಬ್ಬರದ್ದು ಏನಿದೆ, ಇಡೀ ಆಡಳಿತದ ಜವಾಬ್ದಾರಿ ಎಂದು ಗೃಹ ಸಚಿವರ ಮೇಲೆ ಸಾಫ್ಟ್ ಕಾರ್ನರ್ ತೋರಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ:ಸಿಟಿ ಮಾತ್ರವಲ್ಲ ಗ್ರಾಮೀಣ ಭಾಗದ ಹೆಣ್ಮಕ್ಕಳಿಗೂ ಆದ್ಯತೆ ಕೊಡಿ: ಗೌರಿ ಶಂಕರ್
ಬೆಂಗಳೂರು: ಇಡೀ ರಾಜ್ಯ ಉಪಚುನಾವಣೆ ಫಲಿತಾಂಶ ನೋಡುತ್ತಿದೆ. ಯಾರು ಪಕ್ಷಕ್ಕೆ ದುಡಿಯುತ್ತಾರೋ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದರೆ ಅವರನ್ನ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನೂರು ಜನ ಮುಖಂಡರು ಪಕ್ಷ ಸೇರ್ಪಡೆ ಆಗಿದ್ದಾರೆ. ಇವರ ಹಿಂದೆ ಸಾವಿರಾರು ಜನ ಪಕ್ಷ ಸೇರ್ಪಡೆ ಆಗುತ್ತಾರೆ. ಇವರ ಸೇರ್ಪಡೆ ಪಕ್ಷದ ಶಕ್ತಿ ಮತ್ತಷ್ಟು ಜಾಸ್ತಿ ಮಾಡಿದೆ. ಅಲ್ಲದೇ ನಮ್ಮಲ್ಲಿ ಹೊಸಬರು ಹಳಬರು ಅಂತ ನೋಡಲ್ಲ, ಕಾಂಗ್ರೆಸ್ ಅಷ್ಟೇ ಮುಖ್ಯ. ಎಲ್ಲರನ್ನೂ ಸಂಘಟನೆಗೆ ಬಳಸಿಕೊಳ್ಳುತ್ತೇವೆ. ಇಡೀ ರಾಜ್ಯ ಉಪಚುನಾವಣೆ ಫಲಿತಾಂಶ ನೋಡುತ್ತಿದೆ. ಯಾರು ಪಕ್ಷಕ್ಕೆ ದುಡಿಯುತ್ತಾರೋ ಅವರಿಗೆ ಸೂಕ್ತ ಸ್ಥಾನಮಾನ. ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ಅವಕಾಶ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದರೆ ಅವರನ್ನ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದರು.
ದೆಹಲಿಗೆ ಇಂದು ಅಭ್ಯರ್ಥಿ ಪಟ್ಟಿಯನ್ನು ಶಿಫಾರಸು ಮಾಡುತ್ತೇವೆ. ನಾವು ಟಿಕೆಟ್ ಕೊಡಲ್ಲ. ಹೈಕಮಾಂಡ್ ಟಿಕೆಟ್ ಪ್ರಕಟಿಸುತ್ತದೆ. ಶಿರಾ, ರಾಜರಾಜೇಶ್ವರಿ ನಗರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಟಿಕೆಟ್ ಅಂತಿಮ ಆಗುತ್ತದೆ. ಶಿರಾ ಕ್ಷೇತ್ರದಲ್ಲಿ ಈ ಹಿಂದೆ ಜಯಚಂದ್ರ 10 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಇಡೀ ಜಿಲ್ಲೆಯ ನಾಯಕರು ಒಂದಾಗಿದ್ದಾರೆ. ರಾಜ್ಯ ಸರ್ಕಾರದ ಕಾರ್ಯಕ್ರಮ ಮತ್ತು ಆಗುತ್ತಿರುವ ಬೆಳವಣಿಗೆ ನೋಡಿದ್ದೇವೆ. ಮುಂದೆ ಕಾಂಗ್ರೆಸ್ ಮಾತ್ರ ಅನಿವಾರ್ಯ ಅಂತ ಶಿರಾ ತಾಲೂಕಿನ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿಸಿದರು.
ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳ ವಿರುದ್ಧ 2 ಕೋಟಿ ಸಹಿ ಸಂಗ್ರಹ ಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಪ್ರತಿ ಪಂಚಾಯತ್ ಮಟ್ಟದಲ್ಲಿ ಸಹಿ ಸಂಗ್ರಹ ಮಾಡಬೇಕು. ಪ್ರತಿ ಪಂಚಾಯತಿಯಲ್ಲಿ 1 ಸಾವಿರ ಜನರ ಸಹಿ ಮಾಡಿಸಬೇಕು. ಅಕ್ಟೋಬರ್ 31ರೊಳಗೆ ಸಹಿ ಸಂಗ್ರಹ ಮಾಡಿಸಿ ಕೆಪಿಸಿಸಿಗೆ ಕಳುಹಿಸಿಕೊಡಬೇಕು.
ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದ ಜನರು ಪ್ರತಿಭಟನೆ ನಡೆಸಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ನಿರ್ಭಯಾ ಪ್ರಕರಣದಲ್ಲಿ ಪ್ರಧಾನಿಯೇ ಮುಂದೆ ನಿಂತು ಕರೆಯಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಅವರ ತಂದೆ ತಾಯಿಗೂ ನೋಡಲು ಅವಕಾಶ ನೀಡಿಲ್ಲ. ಇದರಿಂದ ನಮ್ಮ ದೇಶಕ್ಕೆ ಕಳಂಕ ಬಂದಿದೆ. ಇದರ ವಿರುದ್ಧ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
– 8 ಬಗೆಯ ಹೋಮ ನಡೆಸಲಿದ್ದಾರೆ ಕೆಪಿಸಿಸಿ ಅಧ್ಯಕ್ಷ
– ಎಲ್ಲರ ಒಳಿತಿಗಾಗಿ ಹೋಮ
ಬೆಂಗಳೂರು: ನೂತನ ಕೆಪಿಸಿಸಿ ಕಚೇರಿಯ ಆಡಿಟೋರಿಯಂನಲ್ಲಿ ಹೋಮ ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋಮದಲ್ಲಿ ಭಾಗಿಯಾಗಿದ್ದಾರೆ.
ಜ್ಯೋತಿಷಿ ಡಾ. ನಾಗರಾಜ್ ಆರಾಧ್ಯ ಹಾಗೂ ಅರ್ಚಕ ಮಹಂತೇಶ್ ಭಟ್ ನೇತೃತ್ವದಲ್ಲಿ ಮೂವರು ಅರ್ಚಕರಿಂದ ಹೋಮ ನಡೆಯುತ್ತಿದೆ. ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂ ವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ ನಡೆಯಲಿದೆ.
ನೂತನ ಆಡಿಟೋರಿಯಂ ಉದ್ಘಾಟನೆ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಹಿನ್ನೆಲೆಯಲ್ಲಿ ಹೋಮ ಮಾಡಲಾಗುತ್ತಿದೆ. ಅಲ್ಲದೇ ಮುಂದೆ ಯಾವುದೇ ವಿಘ್ನಗಳು ಎದುರಾಗಬಾರದೆಂದು ಹೋಮ ಮಾಡಲಾಗುತ್ತಿದೆ. 8 ಬಗೆಯ ಹೋಮಗಳನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆಸಲಿದ್ದಾರೆ. ಬೆಳಗ್ಗೆ 5 ಗಂಟೆಗೆ ಆರಂಭವಾಗಿರುವ ಹೋಮ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿಯಾಗಲಿದೆ.
ಹೋಮದ ನಂತರ ಡಿಕೆಶಿ ಅರುಣಾಚಲೇಶ್ವರನ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಇಂದು ಸಂಜೆ 5 ಗಂಟೆಗೆ ತಿರುವಣ್ಣಾಮಲೈಗೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಯಾವುದಾದರೂ ಶಾಪಗಳಿದ್ದರೆ ಭೂ ವರಹ ಹೋಮದಿಂದ ಅದು ನಿವಾರಣೆಯಾಗುತ್ತಂತೆ. ಹೀಗಾಗಿ ಡಿಕೆ ಶಿವಕುಮಾರ್ ಹೋಮ ಮಾಡಿಸುತ್ತಿದ್ದಾರೆ..
ಈ ವೇಳೆ ಮಾತನಾಡಿದ ಡಿಕೆಶಿ, ಎಲ್ಲಾ ವಿಘ್ನಗಳನ್ನ ನಿವಾರಣೆ ಮಾಡಲಿ ಅಂತ ಶುಭ ಮೂಹೂರ್ತದಲ್ಲಿ ಪೂಜೆ ಶುರು ಮಾಡಿದ್ದೇವೆ. ಎರಡು ವರ್ಷಗಳಿಂದ ಬಿಲ್ಡಿಂಗ್ ಕೆಲಸ ನಿಂತಿತ್ತು. ಎಲ್ಲರ ಒಳಿತಿಗಾಗಿ ಮಾಡುತ್ತಿರುವ ಹೋಮ ಇದು. ರಾಜ್ಯಕ್ಕೆ, ಪಕ್ಷದ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಹೋಮ ಮಾಡುತ್ತಿದ್ದೀವಿ. ರಾಜ್ಯ ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಲಿ ಎಂದರು.
ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಡಿಕೆಶಿ, ಸದ್ಯದಲ್ಲೇ ಪದಗ್ರಹಣದ ದಿನಾಂಕ ನಿಗದಿ ಮಾಡುತ್ತೇವೆ. ಇಂದು ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚೆ ಮಾಡಿ, ದಿನಾಂಕ ನಿಗದಿ ಮಾಡಲಾಗುತ್ತದೆ ಎಂದರು. ಇನ್ನೂ ಲಾಕ್‍ಡೌನ್ ಮುಂದುವರಿಕೆ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ನಾನೇನು ನಿರ್ಧಾರ ಮಾಡುವುದಕ್ಕೆ ಆಗಲ್ಲ. ಸರ್ಕಾರ ಏನು ತಿರ್ಮಾನ ಮಾಡುತ್ತೋ ಅದನ್ನ ಫಾಲೋ ಮಾಡುತ್ತೀವಿ. ಮಂತ್ರಿಗಳಲ್ಲಿ ಹಲವರು ವೈದ್ಯರಿದ್ದಾರೆ, ಅವರು ತಿರ್ಮಾನ ಮಾಡುತ್ತಾರೆ. ನಾವು ಕೇವಲ ಪ್ರಸಾದ ಸ್ವೀಕರಿಸುತ್ತೀವಿ ಎಂದು ಡಿಕೆಶಿ ಹೇಳಿದರು.
ಬೆಂಗಳೂರು: ರಿಜ್ವಾನ್‍ಗೆ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ರೌಡಿಶೀಟರ್ ಒಬ್ಬ ಮನವಿ ಮಾಡಿದ್ದು, ಕಾಂಗ್ರೆಸ್‍ನಲ್ಲಿ ರೌಡಿ ಶೀಟರ್ ಗಳ ಅಬ್ಬರ ಜಾಸ್ತಿಯಾಗುತ್ತಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಹೌದು. ಇಂದು ಶಿವಾಜಿನಗರದ ರೌಡಿಶೀಟರ್ ಇಶ್ತಿಯಾಕ್ ಅಹ್ಮದ್ ಕೆಪಿಸಿಸಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದು, ರಿಜ್ವಾನ್ ಅರ್ಷದ್ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್ ಅವರಿಗೆ ಮನವಿ ಮಾಡಿದ್ದಾನೆ. ಈಗ ಈ ಸುದ್ದಿ ಬಹಳಷ್ಟು ಚರ್ಚೆಯಾಗುತ್ತಿದ್ದು, ಶತಮಾನದ ಪಕ್ಷ ಕಾಂಗ್ರೆಸ್ ರೌಡಿ ಶೀಟರ್ ಗಳಿಗೆ ಮಣೆ ಹಾಕುತ್ತಿದ್ಯಾ ಎಂಬ ಅನುಮಾನಗಳು ಮೂಡುತ್ತೀವೆ.
ಇಶ್ತಿಯಾಕ್ ಕಾಂಗ್ರೆಸ್ ಕಚೇರಿಗೆ ಬರುವುದು ಇದು ಮೊದಲಲ್ಲ. ಎರಡು ವಾರದ ಹಿಂದೆಯೂ ಕೆಪಿಸಿಸಿ ಕಚೇರಿಗೆ ಇಶ್ತಿಯಾಕ್ ಅಹ್ಮದ್ ಬಂದಿದ್ದ. ಆಗ ಈ ವಿಚಾರದ ಬಗ್ಗೆ ಅಧ್ಯಕ್ಷರಾದ ದಿನೇಶ್ ಗೂಂಡುರಾವ್ ಅವರನ್ನು ಕೇಳಿದಾಗ, ರೌಡಿ ಶೀಟರ್ ಆಗಮನವನ್ನು ಸಮರ್ಥಿಸಿಕೊಂಡಿದ್ದು, ಯಾವ ಪಕ್ಷದಲ್ಲಿ ರೌಡಿ ಶೀಟರ್ ಇಲ್ಲ ಹೇಳಿ ಎಂದು ಮಾಧ್ಯಮಗಳ ಬಾಯಿ ಮುಚ್ಚಿಸಿದ್ದರು. ಪ್ರಮುಖ ನಾಯಕರೇ ರೌಡಿಗಳಿಗೆ ಮಣೆ ಹಾಕಿದರೆ ಮುಂದೇನು ಎಂದು ಕೈ ಕಾರ್ಯಕರ್ತರು ಈಗ ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಕಚೇರಿಗೆ ಬಂದಿದ್ದ ರೌಡಿ ಇಶ್ತಿಯಾಕ್ ಅಹ್ಮದ್ ನಾನು ಹೇಳಿದ ರೀತಿಯಲ್ಲಿ ರಿಜ್ವಾನ್ ಅರ್ಷದ್ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಇಲ್ಲ ಎಂದರೆ ನಾನು ನಿಮ್ಮ ಪರ ಕೆಲಸ ಮಾಡಲ್ಲ ಎಂದು ಹೇಳಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಪದೇ ಪದೇ ಕಾಂಗ್ರೆಸ್ ಪಾಳ್ಯದಲ್ಲಿ ರೌಡಿ ಶೀಟರ್ ಕಾಣಿಸಿಕೊಳ್ಳುತ್ತಿದ್ದು, ಈ ವಿಚಾರದ ಬಗ್ಗೆ ರಾಜಕೀಯ ವಲಯದಲ್ಲಿ ಬಹಳ ಚರ್ಚೆಯಾಗುತ್ತದೆ.
ಬೆಂಗಳೂರು: ಫೋನ್ ಟ್ಯಾಪಿಂಗ್ ಕುರಿತು ನನಗೆ ಮಾಹಿತಿ ಇಲ್ಲ. ಒಂದು ವೇಳೆ ಮಾಡಿದ್ದೇ ಆದಲ್ಲಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಧ್ವಜಾರೋಹಣದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ಫೋನ್ ಟ್ಯಾಪಿಂಗ್ ಮಾಡಿದ್ದರೆ ತನಿಖೆ ಆಗಲೇ ಬೇಕು. ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
73ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. 72 ವರ್ಷ ಮುಗಿಸಿ 73 ವರ್ಷಕ್ಕೆ ಕಾಲಿಡುತ್ತಿದ್ದೇವೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆಯಿಲ್ಲದಂತವರು ಅಧಿಕಾರಕ್ಕೆ ಬಂದಾಗ ಇಂತಹ ಪರಿಸ್ಥಿತಿ ಬರುತ್ತದೆ. ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು. ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಬೇಕು. ದೇಶದ ಐಕ್ಯತೆ, ಸಾಮಾಜಿಕತೆ ಉಳಿಸಬೇಕು ಎಂದು ಕರೆ ನೀಡಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹೋರಾಟದ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕರ್ತರು ಸರ್ವ ತ್ಯಾಗಕ್ಕೂ ಸಜ್ಜಾಗಬೇಕು. ದೇಶದಲ್ಲಿ ಸರ್ವಾಧಿಕಾರತ್ವ ಅಸ್ತಿತ್ವದಲ್ಲಿದೆ. ಸರ್ಕಾರದ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳನ್ನೂ ಕೇಂದ್ರದ ಬಿಜೆಪಿ ಸರ್ಕಾರ ನಿಯಂತ್ರಿಸುತ್ತಿದೆ. ಪಾಕಿಸ್ತಾನ ಒಂದೇ ಧರ್ಮೀಯ ದೇಶವಾಗಿ ಬೆಳೆಯುವ ನಿಟ್ಟಿನಲ್ಲಿ ವಿಫಲವಾಗಿದೆ. ಆದರೆ, ಭಾರತದಲ್ಲಿ ಹಾಗಿಲ್ಲ ಎಲ್ಲ ಧರ್ಮೀಯರು ಒಂದಾಗಿದ್ದಾರೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಬೆಂಗಳೂರು: ಕೆಪಿಸಿಸಿ ಕಚೇರಿ ಮುಂಭಾಗ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯುವ ವೇಳೆ ಮಾಜಿ ಡಿಸಿಎಂ ಅಶೋಕ್ ಅವರು ಗಾಯಗೊಂಡಿದ್ದಾರೆ.
ಬಿಜೆಪಿ ಕಚೇರಿ ಮುಂದೆ ಮಹದಾಯಿ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಕಿಸಾನ್ ಮೋರ್ಚಾದ ಸದಸ್ಯರು ಕೆಪಿಸಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಆಗಮಿಸಿದ್ದರು.
ಈ ವೇಳೆ ಅಲ್ಲಿ ನೆರೆದಿದ್ದ ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿಕೊಡಲಿಲ್ಲ. ಈ ಸಂದರ್ಭದಲ್ಲಿ ಬಿಜೆಪಿ ಕಚೇರಿ ಮುಂಭಾಗ ರೈತರಿಗೆ ಪ್ರತಿಭಟಿಸಲು ಅವಕಾಶ ನೀಡಿದ್ದೀರಿ. ನಾವು ಇಲ್ಲಿ ಬಂದು ಪ್ರತಿಭಟಿಸಲು ಅವಕಾಶ ನೀಡುವುದಿಲ್ಲ ಯಾಕೆ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದೇ ಇದ್ದಾಗ ಕಿಸನ್ ಮೋರ್ಚಾದ ಸದಸ್ಯರು ಬ್ಯಾರಿಕೇಡ್ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್ ನಲ್ಲಿ ಪೊಲೀಸರು ತುಂಬಿದ್ದಾರೆ. ಬಸ್ ಗೆ ತಳ್ಳುವಾಗ ಅಶೋಕ್ ಅವರಿಗೆ ಗಾಯವಾಗಿದ್ದು ಅವರನ್ನು ಮಲ್ಯ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬೆಂಗಳೂರು: ಮಹದಾಯಿ ವಿಚಾರವಾಗಿ ಬಿಜೆಪಿ ಕಚೇರಿ ಮುಂದೆ ರೈತರು ಹೋರಾಟ ನಡೆಸ್ತಿದ್ರೆ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಮಹದಾಯಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ ಅಂತಾ ಆರೋಪಿಸಿ ಬಿಜೆಪಿ ಇಂದು ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಮಾಜಿ ಡಿಸಿಎಂ ಆರ್.ಅಶೋಕ್, ಅರವಿಂದ್ ಲಿಂಬಾವಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಬೆಂಗಳೂರು ಬಿಜೆಪಿ ಶಾಸಕರು, ಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಗೋವಾದ ಸಿಎಂ ಮಹದಾಯಿ ಸಂಧಾನಕ್ಕೆ ಒಪ್ಪಿದ್ರು. ಗೋವಾದಲ್ಲಿನ ಕಾಂಗ್ರೆಸ್ ನಾಯಕರು ನೀರು ಬಿಡಲು ಒಪ್ಪುತ್ತಿಲ್ಲ ಅಂತಾ ಆರೋಪಿಸಿ ಕೆಪಿಸಿಸಿ ಕಚೇರಿ ಎದುರು ಬಿಜೆಪಿ ನಾಯಕರು ಧರಣಿ ನಡೆಸಲಿದ್ದಾರೆ.
ಬಿಜೆಪಿ ಕಚೇರಿ ಮುಂದೆ ಹೋರಾಟಗಾರರು ಐದನೇ ದಿನವೂ ಚಳಿ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಪಾದಯಾತ್ರೆ ಆರಂಭವಾಗಲಿದೆ, ರಾಜಭವನ, ಸಿಎಂ ನಿವಾಸ, ಜೆಡಿಎಸ್ ಕಚೇರಿ, ಚುನಾವಣಾ ಆಯೋಗದತ್ತ ಪಾದಯಾತ್ರೆ ತೆರಳಲಿದೆ.