Tag: ಕೆಪಿಸಿಸಿ ಅಧ್ಯಕ್ಷ

  • ರಾಜಾಹುಲಿಯನ್ನ ಹೈಕಮಾಂಡ್ ಬೋನಿಂದ ಹೊರಗಡೆ ಬಿಡ್ತಿಲ್ಲ: ಎಸ್‍ಆರ್ ಪಾಟೀಲ್

    ರಾಜಾಹುಲಿಯನ್ನ ಹೈಕಮಾಂಡ್ ಬೋನಿಂದ ಹೊರಗಡೆ ಬಿಡ್ತಿಲ್ಲ: ಎಸ್‍ಆರ್ ಪಾಟೀಲ್

    ಬಾಗಲಕೋಟೆ: ಬಿಜೆಪಿ ಹೈಕಮಾಂಡ್ ರಾಜಾಹುಲಿನ ಬೋನಿಂದ ಹೊರಗೆ ಬಿಡುತ್ತಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಥಿತಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮಾರ್ಮಿಕವಾಗಿ ಮರುಕ ವ್ಯಕ್ತಪಡಿಸಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುತ್ತೆ ಅನ್ನುತ್ತಿದ್ದರು. ಆದರೆ ಅವರು ಯಾಕೆ ಇಷ್ಟು ಅನುಮತಿಗೆ ಕಾಯ್ತಿದ್ದಾರೆ ಗೊತ್ತಾಗುತ್ತಿಲ್ಲ. ಬಿಎಸ್‍ವೈ ಬಗ್ಗೆ ನನಗೆ ಗೌರವ ಇದೆ. ಬಿಎಸ್‍ವೈ ಅವರು ಮಾಜಿ ಸಿಎಂ ನಿಜಲಿಂಗಪ್ಪ ಅವರ ನಂತರ ನಾಲ್ಕನೇ ಭಾರಿ ಸಿಎಂ ಆದವರು. ಆದರೆ ಹೈಕಮಾಂಡ್ ಅವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ನಾನು ಬಿಎಸ್‍ವೈ ಸಲುವಾಗಿ ಮರುಕ ಪಡುತ್ತಿಲ್ಲ ಎನ್ನುತ್ತಾ ರಾಜ್ಯದ ಒಳತಿಗಾಗಿ ಮಂತ್ರಿ ಮಂಡಲ ಬೇಗ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

    ಕೆಪೆಸಿಸಿ ಅಧ್ಯಕ್ಷ ಆಯ್ಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ದಿನೇಶ್ ಗುಂಡೂರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಧ್ಯಕ್ಷರ ಆಯ್ಕೆ ಚೆಂಡು ಸದ್ಯ ಹೈಕಮಾಂಡ್ ಅಂಗಳದಲ್ಲಿದೆ. ಬಹಳಷ್ಟು ಆಕಾಂಕ್ಷಿಗಳಿದ್ದಾರೆ, ನಮ್ಮಲ್ಲಿ ಯಾವುದೇ ಬಣ ಎಂಬುದಿಲ್ಲ, ಕಾಂಗ್ರೆಸ್ ಒಂದೆ ಎಂದು ಸ್ಪಷ್ಟಪಡಿಸಿದರು.

    ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಸೋನಿಯಾ ಗಾಂಧಿ ಭೇಟಿಯಾಗದ ವಿಚಾರಕ್ಕೆ ಪ್ರತಿಕ್ರಯಿಸಲು ನಿರಾಕರಿಸಿ ಎಸ್. ಆರ್ ಪಾಟೀಲ್, ಅವರು ಯಾಕೆ ದೆಹಲಿಗೆ ಹೋಗಿದ್ದರು ಗೊತ್ತಿಲ್ಲ. ಅವರಿಗೆ ಭೇಟಿ ಆದರೋ ಇಲ್ಲೋ ಎನ್ನೋದು ಗೊತ್ತಿಲ್ಲ. ಅದು ಅವರಿಗೆ ಗೊತ್ತು ಎಂದು ಸಮಂಜಸ ಉತ್ತರ ಕೊಡದೆ ಜಾರಿಕೊಂಡರು.

    ಬಿಜೆಪಿ ಸರ್ಕಾರ ಮಂತ್ರಿಮಂಡಲ ವಿಸ್ತರಣೆ ವಿಚಾರವಾಗಿ ಮಾತನಾಡಿ, ತಿಂಗಳಾನುಗಟ್ಟಲೇ ಮಂತ್ರಿ ಮಂಡಲ ವಿಸ್ತರಣೆ ಮಾಡಲು ಆಗದ ಸರ್ಕಾರದ ಬಗ್ಗೆ ಜನ ಛೀ, ಥೂ ಎಂದು ಉಗುಳ್ತಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆ ವಿಚಾರದ ಬಗ್ಗೆ ಹೈಕಮಾಂಡ್‍ನವರು ಸಿಎಂಗೆ ಸಲಹೆ ಕೊಡಬೇಕು. ಆದರೆ ಮಂತ್ರಿ ಮಂಡಲಕ್ಕಾಗಿ ಹಗ್ಗಜಗ್ಗಾಟ ನಡೆದಿದ್ದು, ನನ್ನ 45 ವರ್ಷದ ಸಾರ್ವಜನಿಕ ಬದುಕಿನಲ್ಲಿ ಈ ರೀತಿ ನೋಡಿದ್ದು ಇದೇ ಮೊದಲು. ಬಿಜೆಪಿ ಹೈಕಮಾಂಡ್‍ಗೆ ದೇವರು ಸದ್ಬುದ್ಧಿ ಕೊಡಲಿ. ಬೇಗ ಮಂತ್ರಿ ಮಂಡಲ ವಿಸ್ತರಣೆ ಮಾಡಲಿ. ಬಹಳಷ್ಟು ಜನ ನಾ ಮಂತ್ರಿ ಆಗ್ತೀನಿ, ನಾ ಮಂತ್ರಿ ಆಗ್ತೀನಿ ಎಂದು ಜಪ ಮಾಡಿಕೊಳ್ಳತ್ತ ಕುಳಿತಿದ್ದಾರೆಂದು ಲೇವಡಿ ಮಾಡಿದರು.

  • ಕೆಪಿಸಿಸಿ ಅಧ್ಯಕ್ಷರ ವಿಚಾರ ಬಹಿರಂಗವಾಗಿ ಮಾತಾಡಬೇಡಿ: ದಿನೇಶ್ ಗುಂಡೂರಾವ್

    ಕೆಪಿಸಿಸಿ ಅಧ್ಯಕ್ಷರ ವಿಚಾರ ಬಹಿರಂಗವಾಗಿ ಮಾತಾಡಬೇಡಿ: ದಿನೇಶ್ ಗುಂಡೂರಾವ್

    – ಬಿಜೆಪಿ ತನ್ನ ಸಮಸ್ಯೆ ಬಗೆಹರಿಸಿ ಕೊಳ್ಳಲಿ

    ಮೈಸೂರು: ಕೆ.ಪಿ.ಸಿ.ಸಿ ಅಧ್ಯಕ್ಷ ಕಾರ್ಯಾಧ್ಯಕ್ಷರ ನೇಮಕಾತಿ ವಿಚಾರವಾಗಿ ಯಾರು ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್ ಮುಖಂಡರುಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಟ್ಟಪ್ಪಣೆ ಮಾಡಿದ್ದಾರೆ.

    ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ ಅವರು, ಇದು ಪಕ್ಷದ ಆಂತರಿಕ ವಿಚಾರ. ಈ ವಿಚಾರವಾಗಿ ಯಾರು ಕೂಡ ಬಹಿರಂಗವಾಗಿ ಮಾತನಾಡಬಾರದು. ನಾಲ್ಕು ಕಾರ್ಯಾಧ್ಯಕ್ಷರ ನೇಮಕವಾಗುತ್ತೆ ಅಂತ ಯಾರು ಕೂಡ ಹೇಳಿಲ್ಲ. ಅಧ್ಯಕ್ಷರ ನೇಮಕದ ಸಂದರ್ಭದಲ್ಲಿ ಕೆಲವರು ಕಾರ್ಯಾಧ್ಯಕ್ಷರ ನೇಮಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದರು.

    ಕಾರ್ಯಾಧ್ಯಕ್ಷರ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾರ್ಯಾಧ್ಯಕ್ಷರ ನೇಮಕದಿಂದ ಪಕ್ಷ ಸಂಘಟನೆಗೆ ಅನುಕೂಲವಾಗುತ್ತೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ. ಕಾರ್ಯಾಧ್ಯಕ್ಷರ ನೇಮಕವನ್ನು ಮಾಡಬೇಕಾ, ಬೇಡ್ವಾ? ಮಾಡುವುದಾದರೆ ಇಬ್ಬರ ಅಥವಾ ಮೂವರೋ, ನಾಲ್ವರೋ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮೈಸೂರಿನ ಸುತ್ತೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಆದಷ್ಟು ಬೇಗಾ ತಮ್ಮ ಗೊಂದಲ ನಿವಾರಣೆ ಮಾಡಿಕೊಳ್ಳಬೇಕು. ಸಿಎಂ ಬಿಎಸ್ ಯಡಿಯೂರಪ್ಪ ಎಲ್ಲರಿಗೂ ಸಚಿವ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅವರ ಹೈಕಮಾಂಡ್ ಇದಕ್ಕೆ ಒಪ್ಪುತ್ತಿಲ್ಲ. ಇದರಿಂದ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. ಸಚಿವರಿಲ್ಲದೆ ಇಲಾಖೆಯಲ್ಲಿ ಹಣ ಬಿಡುಗಡೆಯಾಗುತ್ತಿಲ್ಲ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

  • ಕೆಪಿಸಿಸಿಗೆ ಬೇಗ ಅಧ್ಯಕ್ಷರ ಆಯ್ಕೆಯಾಗಲಿ- ದಿನೇಶ್ ಗುಂಡೂರಾವ್ ಒತ್ತಾಯ

    ಕೆಪಿಸಿಸಿಗೆ ಬೇಗ ಅಧ್ಯಕ್ಷರ ಆಯ್ಕೆಯಾಗಲಿ- ದಿನೇಶ್ ಗುಂಡೂರಾವ್ ಒತ್ತಾಯ

    ಉಡುಪಿ: ಕಾಂಗ್ರೆಸ್ ಹೈಕಮಾಂಡ್ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಹೆಚ್ಚು ತಡ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಉಡುಪಿಯ ಕೃಷ್ಣ ಮಠದಲ್ಲಿ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಲ್ಲರ ವಿಶ್ವಾಸವನ್ನು ಪಡೆದು ಸಮಾಲೋಚನೆ ಮಾಡಿ ನೂತನ ಅಧ್ಯಕ್ಷರನ್ನು ಶೀಘ್ರ ತೀರ್ಮಾನ ಮಾಡಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ದೇಶದಲ್ಲಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಬೇಕಾಗಿದೆ. ಇದಕ್ಕೆ ಎಲ್ಲರ ಸಹಮತ, ಒಮ್ಮತ ಮುಖ್ಯವಾಗುತ್ತದೆ. ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆದು ಪಕ್ಷದ ಹೈಕಮಾಂಡ್ ಸರಿಯಾದ ತೀರ್ಮಾನ ಮಾಡುವುದು ಬಹಳ ಮುಖ್ಯ ಎಂದರು.

    ದಾರಿ ತಪ್ಪಿಸುತ್ತಿರು ಶಾ:
    ಪೌರತ್ವ ತಿದ್ದುಪಡೆ ಕಾಯ್ದೆ ಕುರಿತು ಮಾತನಾಡಿದ ಅವರು, ಇದು ಕೇಂದ್ರ ಸರ್ಕಾರದ ಕಾನೂನು. ಆದರೆ ಅನೇಕ ರಾಜ್ಯಗಳು ತಿರಸ್ಕಾರ ಮಾಡಿವೆ. ಸುಪ್ರೀಂಕೋರ್ಟ್ ಮುಂದೆಯೂ ಸಿಎಎ ವಿಚಾರ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಭಾಷಣದ ಮೂಲಕ ರಾಜ್ಯದ ಜನತೆಯ ದಾರಿ ತಪ್ಪಿಸಿದ್ದಾರೆ. ಯಾರಿಗೂ ಪೌರತ್ವ ಕೊಡುವುದು ಬೇಡ ಅಂತ ನಾವು ಹೇಳುತ್ತಿಲ್ಲ. ಧರ್ಮದ ಆಧಾರದಲ್ಲಿ ವಿಭಜನೆ ಮಾಡಬೇಡಿ. ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವುದು ಸಂವಿಧಾನ ವಿರೋಧಿ ಎಂದು ಹೇಳಿದರು.

    ಅಮಿತ್ ಶಾ ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸುತ್ತಿದ್ದಾರೆ. ಒಮ್ಮೆ ಎನ್‍ಆರ್‍ಸಿ ಮಾಡುತ್ತೇವೆ ಎನ್ನುತ್ತಾರೆ. ಇನ್ನೊಮ್ಮೆ ಇಲ್ಲ ಅಂತಾರೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಭಾಷಣ ಮಾಡಿದರೆ ಪ್ರಯೋಜನ ಇಲ್ಲ. ದೇಶದಲ್ಲಿ ಘರ್ಷಣೆ, ಗಲಭೆ ಆಗಬೇಕು ಅಂತ ಇದ್ದರೆ ಕಾನೂನು ಜಾರಿ ಮಾಡಿ ಎಂದು ಆಗ್ರಹಿಸಿದರು.

  • ‘ಎಲ್ಲಾ ಸುಳ್ಳು’, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಅಲ್ಲ: ಡಿಕೆಶಿ

    ‘ಎಲ್ಲಾ ಸುಳ್ಳು’, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಅಲ್ಲ: ಡಿಕೆಶಿ

    ದಾವಣಗೆರೆ: ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಎನ್ನುವುದು ಸುಳ್ಳು. ನನ್ನ ಹೆಸರು ಕೆಪಿಸಿಸಿ ಅಧ್ಯಕ್ಷರ ಪ್ರಸ್ತಾಪದಲಿಲ್ಲ, ಅಧ್ಯಕ್ಷನಾಗಲು ನಾನು ಯಾವುದೇ ರೀತಿಯಲ್ಲಿ ಪ್ರಯತ್ನ ಪಟ್ಟಿಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಪಂಚಮಸಾಲಿ ಪೀಠದಲ್ಲಿ ನಡೆಯುತ್ತಿರುವ ಹರ ಜಾತ್ರಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಾನು ಯಾವುದೇ ಸ್ಥಾನದ ಅಕಾಂಕ್ಷಿ ಅಲ್ಲ. ನನ್ನ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ. ಜನರ ನಡುವೆ ಇದ್ದು, ಕೆಲಸ ಮಾಡುತ್ತೇನೆ ಅಷ್ಟೇ ಎಂದರು.

    ರಾಜ್ಯ ಬಿಜೆಪಿ ನಾಯಕರು ಕನಕಪುರ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆಗೆ ವಿರೋಧಿಸುತ್ತಾರೆ. ಆದರೆ ಸಿಎಂ ಬಿಎಸ್‍ವೈ ಅವರು ಹರಿಹರದಲ್ಲಿ ಚರ್ಚ್‌ಗೆ ಭೇಟಿ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅವರವರ ನೀತಿ, ಧರ್ಮ, ಪಕ್ಷ ಹಾಗೂ ಮತಕ್ಕಾಗಿ ಏನು ಬೇಕಾದರೂ ಮಾಡಿಕೊಳ್ಳಲಿ. ನಾನು ಈ ಕುರಿತು ಏಕೆ ತಲೆ ಕೆಡಿಸಿಕೊಳ್ಳಬೇಕು. ನಮಗೆ ಎಲ್ಲಾ ಧರ್ಮದ ಜನ ಬೇಕು, ನಮ್ಮ ತಾಲೂಕಿನ ಜನರು ಪ್ರತಿಮೆ ಮಾಡುತ್ತಿದ್ದಾರೆ. ನಾನು ಕ್ಷೇತ್ರದ ಶಾಸಕನಾಗಿ ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ ಅಷ್ಟೇ ಎಂದರು.

  • ಅಧ್ಯಕ್ಷ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮನೆ ಬಾಗಿಲು ತಟ್ಟಿದ ಡಿಕೆಶಿ

    ಅಧ್ಯಕ್ಷ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮನೆ ಬಾಗಿಲು ತಟ್ಟಿದ ಡಿಕೆಶಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ ಜೊತೆ ಓಡಾಡಿ ಮಾಜಿ ಸಚಿವ ಡಿಕೆ ಶಿವಕುಮಾರ್ ಸಿದ್ದರಾಮಯ್ಯರ ಕೋಪಕ್ಕೆ ಕಾರಣರಾಗಿದ್ದರು. ಇವತ್ತು ಅದೇ ಸಿದ್ದರಾಮಯ್ಯ ಮನೆ ಬಾಗಿಲನ್ನು ಡಿಕೆ ಶಿವಕುಮಾರ್ ತಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ಟಿರೋ ಡಿಕೆ ಶಿವಕುಮಾರ್ ಸಿದ್ದರಾಮಯ್ಯರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋಕೆ ಮುಂದಾಗಿದ್ದಾರೆ. ಇಂದು ದಿಢೀರ್ ಅಂತ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಹೋಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

    ಸಿದ್ದರಾಮಯ್ಯ ಬಣ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಲಿಂಗಾಯತರಿಗೆ ಕೊಡಬೇಕು ಅಂತ ಪಟ್ಟು ಹಿಡಿದಿದೆ. ಅದ್ರಲ್ಲೂ ಸಿದ್ದರಾಮಯ್ಯ ತಮ್ಮ ಶಿಷ್ಯ ಎಂಬಿ ಪಾಟೀಲ್ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಇತ್ತ ಮೂಲ ಕಾಂಗ್ರೆಸ್ ನಾಯಕರು ಮುನಿಯಪ್ಪ, ಹರಿಪ್ರಸಾದ್ ಸೇರಿದಂತೆ ಮೂಲ ಕಾಂಗ್ರೆಸ್ ನಾಯಕರ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಇದೆಲ್ಲದರ ಮಧ್ಯೆ ಏಕಾಂಗಿಯಾಗಿ ಡಿಕೆ ಶಿವಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಶಿಷ್ಯ ಎಂಬಿ ಪಾಟೀಲ್ ಪರ ಬ್ಯಾಟಿಂಗ್ ಗೆ ಇಳಿದ ಕೂಡಲೇ ಡಿಕೆಶಿಗೆ ಢವ ಢವ ಪ್ರಾರಂಭ ಆಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ 3 ಕಾರ್ಯಾಧ್ಯಕ್ಷ ಸ್ಥಾನ ಸಿದ್ದರಾಮಯ್ಯ ಹೊಸ ಗೇಮ್

    ಎಂಬಿಪಾಟೀಲ್ ಪರ ಸಿದ್ದರಾಮಯ್ಯ ಮತ್ತು ಬಣ ಬ್ಯಾಟಿಂಗ್ ಮಾಡ್ತಿರೋದು ಡಿಕೆ ಶಿವಕುಮಾರ್ ಅಧ್ಯಕ್ಷ ಕನಸಿಗೆ ತಣ್ಣೀರು ಹಾಕೋ ಆಗಿದೆ. ಹೀಗಾಗಿ ಸಿದ್ದರಾಮಯ್ಯ ಜೊತೆ ಶತ್ರುತ್ವ ಬೆಳೆಸಿಕೊಂಡಿದ್ದ ಡಿಕೆಶಿ ಮನೆಗೆ ಬಂದು ಲಾಬಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

  • ನಾನೇನು ಪಾರ್ಟಿ ಪ್ರೆಸಿಡೆಂಟಾ, ಇಲ್ಲಾ ವಿಪಕ್ಷ ನಾಯಕನಾ: ಡಿಕೆಶಿ ಪ್ರಶ್ನೆ

    ನಾನೇನು ಪಾರ್ಟಿ ಪ್ರೆಸಿಡೆಂಟಾ, ಇಲ್ಲಾ ವಿಪಕ್ಷ ನಾಯಕನಾ: ಡಿಕೆಶಿ ಪ್ರಶ್ನೆ

    ಬೆಂಗಳೂರು: ಉಪಚುನಾವಣೆ ಸಿದ್ಧತೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಅದರ ಬಗ್ಗೆ ಮಾತಾಡುವುದಕ್ಕೆ ನಾನು ಯಾರು ಎಂದು ಮರು ಪ್ರಶ್ನೆ ಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು, ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಲು ನಾನೇನು ಪಾರ್ಟಿ ಪ್ರೆಸಿಡೆಂಟಾ? ಇಲ್ಲಾ ವಿರೋಧ ಪಕ್ಷದ ನಾಯಕನಾ? ಅಥವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾ? ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದರು.

    ವಿರೋಧ ಪಕ್ಷ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಕಾಂಗ್ರೆಸ್ ಹಿರಿಯ ನಾಯಕರ ಗುಲಾಂ ನಬಿ ಆಜಾದ್ ಅವರು ಸೋಮವಾರ ಚರ್ಚೆ ವಿಚಾರ ಮಾಡುತ್ತಾರೆ. ಆದರೆ ಅರ್ಜಿ ಹಿಡಿದುಕೊಂಡು ನನಗೆ ಅವಕಾಶ ಕೊಡಿ ಅಂತ ಕೇಳುವುದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ನಾನು ಹೇಗೆ ಇದ್ದರೂ ಜನರು ನನ್ನನ್ನು ಗುರುತಿಸಿ ಮಾತನಾಡಿಸುತ್ತಾರೆ. ನನಗೆ ಅಷ್ಟು ಸಾಕು ಎಂದು ಹೇಳಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್.ಡಿ.ದೇವೆಗೌಡ ಕುಟುಂಬ ನಡುವೆ ವಾಕ್ಸಮರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಅವರಿಬ್ಬರು ಒಂದೇ ಪಾರ್ಟಿಯಲ್ಲಿದ್ದವರು. ಅವರ ವೈಯಕ್ತಿಕ ವಿಚಾರಕ್ಕೆ ಏನೆನೂ ಮಾತನಾಡುತ್ತಾರೋ ನಮಗೆ ಮುಖ್ಯ ಅಲ್ಲ. ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದ ಕೆಲಸ ಮಾಡಿದೆ ಎಂದರು.

    ಸಿದ್ದರಾಮಯ್ಯ ಅವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೊದಲ ಶತ್ರು ಎಂಬ ಹೇಳಿಕೆ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಲ್ಲ. ಅದು ಅವರ ವೈಯಕ್ತಿಕ ವಿಚಾರಗಳು. ನಾನು ಯಾರ ಮೇಲೆಯೂ ದ್ವೇಷ ಸಾಧಿಸುವುದಿಲ್ಲ. ಯಾರ ಬಗ್ಗೆಯೂ ಕಾಮೆಂಟ್ ಮಾಡುವುದಿಲ್ಲ. ಈ ಇಬ್ಬರ ಸಂಪುಟದಲ್ಲಿಯೂ ನಾನು ಕೆಲಸ ಮಾಡಿದ್ದೇನೆ ಎಂದು ಹೇಳಿದರು.

  • ಸುಪ್ರೀಂ ಆದೇಶ ಕುದುರೆ ವ್ಯಾಪಾರಕ್ಕೆ ಅವಕಾಶ ಕೊಡುವಂತಿದೆ: ದಿನೇಶ್ ಗುಂಡೂರಾವ್

    ಸುಪ್ರೀಂ ಆದೇಶ ಕುದುರೆ ವ್ಯಾಪಾರಕ್ಕೆ ಅವಕಾಶ ಕೊಡುವಂತಿದೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸುಪ್ರೀಂಕೋರ್ಟ್ ಆದೇಶವೇ ತಪ್ಪು ಎನ್ನುವ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

    ಕುಮಾರ ಕೃಪಾ ಗೆಸ್ಟ್ ಹೌಸ್ ಬಳಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಅತೃಪ್ತ ಶಾಸಕರು ರಾಜೀನಾಮೆಗೂ ಮುನ್ನ ಬಿಜೆಪಿ ನಾಯಕರ ಜೊತೆಗೆ ಕಾಣಿಸಿಕೊಂಡಿದ್ದಾರೆ. ರೆಬಲ್ ಶಾಸಕರು ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ. ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಒಂದು ಕಡೆ ಸ್ಪೀಕರ್ ಅವರ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ. ಆದರೆ ಕೋರ್ಟ್ ಶಾಸಕಾಂಗದಲ್ಲಿ ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡಿದೆ ಎಂದು ಹೇಳಿದರು.

    ತಮ್ಮ ಪಕ್ಷದ ಶಾಸಕರಿಗೆ ವಿಪ್ ನೀಡುವ ಅಧಿಕಾರ ನಮಗಿದೆ. ಅಧಿವೇಶನಕ್ಕೆ ಬರಲೇಬೇಕು ಎಂದು ಶಾಸಕರಿಗೆ ಒತ್ತಾಯ ಮಾಡುವಂತಿಲ್ಲ ಅಂತ ಸುಪ್ರೀಂಕೋರ್ಟ್ ಹೇಳುತ್ತದೆ. ವಿಪ್ ನೀಡಬೇಕೋ? ನೀಡಬಾರದೋ ಎನ್ನುವುದರ ಬಗ್ಗೆ ಸುಪ್ರೀಂಕೋರ್ಟ್ ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ. ಇದರಿಂದಾಗಿ ಈ ಆದೇಶವು ತಪ್ಪು ಸಂದೇಶ ಕೊಡುತ್ತದೆ ಎಂದರು.

    ಶಾಸಕರು ಅನರ್ಹರಾಗುತ್ತರೆ ಎನ್ನುವ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಡಿಲ್ಲ. ಅವರಿಗೆ ಸರ್ಕಾರ ಬೀಳಬೇಕು ಅಷ್ಟೇ. ಪಕ್ಷದ ಶಾಸಕರಿಗೆ ವಿಪ್ ನೀಡುವುದು ತಪ್ಪೇ? ಸರ್ಕಾರರನ್ನು ಬೀಳಿಸುವವರಿಗೆ, ಕುದುರೆ ವ್ಯಾಪಾರ ನಡೆಸುವವರಿಗೆ ಸುಪ್ರೀಂಕೋರ್ಟ್ ಆದೇಶ ಅನುಕೂಲ ಮಾಡಿಕೊಡುವಂತಿದೆ ಎಂದು ಹೇಳಿದರು.

    ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಅವರು, ಸಿಎಂ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ. ಅಷ್ಟೇ ಅಲ್ಲದೆ ಈ ಕುರಿತು ಯಾವುದೇ ಚರ್ಚೆ ಆಗಿಲ್ಲ. ಅದೆಲ್ಲಾ ಊಹಾಪೋಹ ಎಂದು ಹೇಳಿದರು.

  • ಬಿಜೆಪಿಯವರು ಜೈ ಶ್ರೀರಾಮ ಎನ್ನುತ್ತ ಜನರನ್ನ ಕೊಲ್ಲುತ್ತಿದ್ದಾರೆ: ದಿನೇಶ್ ಗುಂಡೂರಾವ್

    ಬಿಜೆಪಿಯವರು ಜೈ ಶ್ರೀರಾಮ ಎನ್ನುತ್ತ ಜನರನ್ನ ಕೊಲ್ಲುತ್ತಿದ್ದಾರೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಬಿಜೆಪಿಯವರು ಜೈ ಶ್ರೀರಾಮ ಎನ್ನುತ್ತಲೇ ಜನರನ್ನ ಕೊಲ್ಲುತ್ತಿದ್ದಾರೆ. ಅವರು ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲವನ್ನೂ ಮುಗಿಸಿ ಹಾಕುತ್ತಾರೆ ಎನ್ನುವ ಭಯದ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಪಿಸಿಸಿ ಕಾನೂನು ಘಟಕ ಆಯೋಜಿಸಿದ್ದ ಚಿಂತನಾ ಸಭೆಯಲ್ಲಿ ಮಾತನಾಡಿ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವೇ ಗೆಲ್ಲಬೇಕು, ಅಧಿಕಾರಕ್ಕೆ ಬರಬೇಕು, ನಮ್ಮವರೇ ಪ್ರಧಾನಿಯಾಗಬೇಕು ಎನ್ನುವ ವಿಚಾರದಿಂದ ಈ ಮಾತು ಹೇಳುತ್ತಿಲ್ಲ. ಬಿಜೆಪಿ ನೇತೃತ್ವದ ಕೆಟ್ಟ ಸರ್ಕಾರ ಮತ್ತು ಕೆಟ್ಟ ಚಿಂತನೆಯನ್ನು ತೊಲಗಿಸಬೇಕಿದೆ. ಹೀಗಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ಜನರು ಎಚ್ಚರಿಕೆವಹಿಸಬೇಕು ಎಂದು ಹೇಳಿದರು.

    ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಳಿ ತಪ್ಪುತ್ತಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ದೇಶದ ಇತಿಹಾದಲ್ಲೇ ಮೊದಲ ಬಾರಿಗೆ ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿದರು. ಆದರೆ ಬಿಜೆಪಿಯು ಕಟ್ಟು ಕತೆ ಕಟ್ಟಿ ಜನರನ್ನ ನಂಬಿಸುವ ಹುನ್ನಾರ ನಡೆದಿದೆ ಎಂದು ಕಿಡಿಕಾರಿದರು.

    ದೇಶವು ಸರ್ವಾಧಿಕಾರದ ಅಡಿ ಮುನ್ನಡೆಯುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಬಲಪಂಥೀಯ ಚಿಂತನೆ ದೇಶದಲ್ಲಿ ಬಲಗೊಳ್ಳುತ್ತಿದೆ. ಹೀಗೆ ಮುಂದುವರಿದಲ್ಲಿ ದೇಶ ಸ್ಥಿತಿ ಏನಾಗುತ್ತೆ? ಎಂದ ಅವರು, ಈ ಬಗ್ಗೆ ಲೋಕಸಭೆ ಚುನಾವಣೆನಲ್ಲಿ ಜನರು ತೀರ್ಮಾನ ಮಾಡಬೇಕಿದೆ ಎಂದರು.

    ಪಾಕಿಸ್ತಾನ ಮಾದರಿಯಲ್ಲೇ ಭಾರತವನ್ನು ಮೂಲಭೂತವಾದಿ ರಾಷ್ಟ್ರವಾಗಿ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿ, ಪನ್ಸಾರೆ ಇವರನ್ನು ಕೊಲೆ ಮಾಡಿದ್ದು ಯಾರು? ಇಂತಹದ್ದನ್ನೇ ತಿನ್ನಬೇಕು. ಇದನ್ನೇ ಆಚರಿಸಬೇಕು ಎನ್ನುವ ಮನಸ್ಥಿತಿ ನಿರ್ಮಾಣವಾಗ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಚಿಂತನಾ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ಮಧು ಎಸ್ಕಿಗೌಡ, ಶಾಸಕಿ ಸೌಮ್ಯರೆಡ್ಡಿ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರ ದಾಳಿಯನ್ನ ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ: ಗುಂಡೂರಾವ್

    ಉಗ್ರರ ದಾಳಿಯನ್ನ ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ: ಗುಂಡೂರಾವ್

    – ದೇಶಪ್ರೇಮವನ್ನ ಕೆಲ ಸಂಘಟನೆಗಳು ಗುತ್ತಿಗೆಗೆ ಪಡೆದಿವೆ
    – ಪಾಕಿಸ್ತಾನಕ್ಕೆ ಹೋಗಿ ಚಹಾ ಕುಡಿದು ಬರುವ ಅಗತ್ಯ ಏನಿತ್ತು?
    – ಶರೀಫ್ ಭೇಟಿ ಮಾಡಿದ್ದ ಮೋದಿಗೆ ಖಾದರ್ ಪ್ರಶ್ನೆ

    ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಬಿಜೆಪಿಯವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಗಮನ ಲೋಕಸಭಾ ಚುನಾವಣೆ ಮೇಲಿದೆ. ಮತವನ್ನು ಹೇಗೆ ಪಡೆಯಬೇಕು ಎನ್ನುವ ಸವಾಲು ಅವರ ಮುಂದಿದೆ. ಹೀಗಾಗಿಯೇ ದಾಳಿಯನ್ನ ತಮಗೆ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ದೂರಿದರು.

    ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಾತನಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರಚಾರ ಪಡೆದುಕೊಂಡಿದ್ದಾರೆ ಅಷ್ಟೇ. ಅವರೇನು ಪಾಕಿಸ್ತಾನವನ್ನ ಮಟ್ಟ ಹಾಕಿದ್ದರಾ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ಅವರ ಸರ್ಕಾರದ ಅವಧಿಯಲ್ಲೇ ಆತಂಕಕಾರಿ ಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿವೆ ಎಂದು ಆರೋಪಿಸಿದರು.

    ದೇಶದಲ್ಲಿರುವ ಪ್ರತಿಯೊಬ್ಬರೂ ದೇಶ ಪ್ರೇಮಿಗಳೇ. ಆದರೆ, ಬಿಜೆಪಿಯವರು ಮಾತು ಆರಂಭಿಸಿದರೆ ನಾವೇ ದೇಶ ಪ್ರೇಮಿಗಳೆಂದು ಹೇಳಿಕೊಳ್ಳುತ್ತಾರೆ. ದೇಶಪ್ರೇಮದ ಬಗ್ಗೆ ಯಾರೇ ಮಾತನಾಡಿದರೂ ಅವರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಕೆಲ ಸಂಘಟನೆಗಳಂತೂ ದೇಶಪ್ರೇಮವನ್ನ ಗುತ್ತಿಗೆಗೆ ತೆಗೆದುಕೊಂಡತೆ ವರ್ತಿಸುತ್ತಿವೆ. ಈ ಮೂಲಕ ದೇಶದಲ್ಲಿ ದ್ವೇಷದ ವಾತಾವರಣ ಮೂಡಿಸುತ್ತಿದೆ ಎಂದು ಕಿಡಿಕಾರಿದರು.

    ಇದೇ ವೇಳೆ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಪಾಕಿಸ್ತಾನಕ್ಕೆ ಹೋಗಿ ಚಹಾ ಕುಡಿದು ಬರುವ ಅಗತ್ಯವಿತ್ತೇ? ವಿರೋಧಿಗಳ ಜೊತೆ ಸ್ನೇಹ ಬಯಸಬೇಕಿತ್ತಾ? ವಿರೋಧಿಗಳು ಎನ್ನುವುದು ಗೊತ್ತಿದ್ದರೂ ಅಲ್ಲಿಗೆ ಹೋಗಿದ್ದು ಸರಿಯಲ್ಲ. ಅಲ್ಲಿಂದ ಇಲ್ಲಿಗೆ ಬಂದು ಸೀರೆ ಕೊಡುವುದೂ ಬೇಕಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದರು.

    ಪುಲ್ವಾಮಾದಲ್ಲಿ ದಾಳಿ ಉಗ್ರರ ವಿರುದ್ಧ ಕ್ರಮಕೈಗೊಳ್ಳುವ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ದೇಶದ ಅಖಂಡತೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಕೇಂದ್ರ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕಿದೆ ಎಂದು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತೃಪ್ತ ಶಾಸಕರನ್ನ ಭೇಟಿಯಾಗಲ್ಲ, ಮಾತನಾಡಲ್ಲ: ದಿನೇಶ್ ಗುಂಡೂರಾವ್

    ಅತೃಪ್ತ ಶಾಸಕರನ್ನ ಭೇಟಿಯಾಗಲ್ಲ, ಮಾತನಾಡಲ್ಲ: ದಿನೇಶ್ ಗುಂಡೂರಾವ್

    ಬೆಂಗಳೂರು: ಅತೃಪ್ತ ಶಾಸಕರನ್ನು ಭೇಟಿ ಮಾಡುವುದಿಲ್ಲ ಹಾಗೂ ಅವರೊಂದಿಗೆ ಮಾತನಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕಮಟಳ್ಳಿ ಹಾಗೂ ಉಮೇಶ್ ಜಾದವ್ ಇಂದು ಕಲಾಪಕ್ಕೆ ಹಾಜರಾಗಿದ್ದಾರೆ. ಅವರು ರಾಜೀನಾಮೆ ಕೊಡುತ್ತಾರೋ, ಬಿಡುತ್ತಾರೋ ನನಗೆ ಗೊತ್ತಿಲ್ಲ. ಅದು ಅತೃಪ್ತ ಶಾಸಕರ ವೈಯಕ್ತಿಕ ವಿಚಾರ ಎಂದು ಚಾಟಿ ಬೀಸಿದ್ದಾರೆ.

    ಕಲಾಪದಲ್ಲಿ ನಾನು ಯಾವ ಅತೃಪ್ತರ ಜೊತೆಗೂ ಮಾತನಾಡಿಲ್ಲ. ಪಕ್ಷದ ಸಿದ್ಧಾಂತ ಹಾಗೂ ನಾಯಕರ ತೀರ್ಮಾನಕ್ಕೆ ಅತೃಪ್ತ ಶಾಸಕರು ಬದ್ಧವಾಗಿರಬೇಕು ಎಂದು ಬಿಸಿ ಮುಟ್ಟಿಸಿದ್ದಾರೆ.

    ಕೆಲ ಶಾಸಕರು ಕಾಂಗ್ರೆಸ್ ನಾಯಕರ ಕೈಗೆ ಸಿಗದೇ, ಸಿಎಲ್‍ಪಿ ಸಭೆಗೂ ಹಾಜರಾಗದೇ ಭಾರೀ ಚರ್ಚೆಗೆ ಕಾರಣರಾಗಿದ್ದರು. ನಮ್ಮ ಶಾಸಕರು ಕ್ಷೇತ್ರಕ್ಕೆ ಬರುತ್ತಿಲ್ಲ. ಅವರು ಮುಂಬೈ ನಗರದಲ್ಲಿ ದಿಗ್ಭಂದನಕ್ಕೆ ಒಳಗಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ಅಥಣಿ ಹಾಗೂ ಗೋಕಾಕ್ ಮತದಾರರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದರು. ಆದರೆ ಇಂದು ಎಲ್ಲ ಅತೃಪ್ತ ಶಾಸಕರು ಅಧಿವೇಶನಕ್ಕೆ ಹಾಜರಾಗಿ ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv