Tag: ಕೆಪಿಸಿಸಿ ಅಧ್ಯಕ್ಷ ಸ್ಥಾನ

  • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಫೈಟ್- ಡಿಕೆಶಿಗೆ ಹಿನ್ನಡೆ?

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಫೈಟ್- ಡಿಕೆಶಿಗೆ ಹಿನ್ನಡೆ?

    ನವದೆಹಲಿ: ಸೋನಿಯಗಾಂಧಿ, ಸಿದ್ದರಾಮಯ್ಯ ಭೇಟಿ ಬಳಿಕ ಭಾರಿ ಲೆಕ್ಕಚಾರದೊಂದಿಗೆ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ತೀವ್ರ ಹಿನ್ನಡೆಯಾಗಿದೆ.

    ಕಳೆದ ಐದು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿದ್ದ ಡಿ.ಕೆ.ಶಿವಕುಮಾರ್ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಹೈಕಮಾಂಡ್ ಭೇಟಿಯಾಗದೆ ಇಂದು ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಸೋನಿಯಗಾಂಧಿ ಆಪ್ತ ಅಹ್ಮದ್ ಪಟೇಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮೂಲಕ ಭೇಟಿಗೆ ಪ್ರಯತ್ನ ಮಾಡಿದರು. ಆದರೆ ಸೋನಿಯಗಾಂಧಿ ಮಾತ್ರ ಭೇಟಿ ಸಮಯ ನೀಡಿಲ್ಲ. ಇದರಿಂದ ಬೇಸರಗೊಂಡಿರುವ ಡಿಕೆಶಿ ಇಂದು ಬೆಂಗಳೂರಿಗೆ ವಾಪಸಾಗಿದ್ದಾರೆ.

    ಜನವರಿ 14 ರಂದು ಸೋನಿಯಗಾಂಧಿ ಭೇಟಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಂತೆ ಮನವಿ ಮಾಡಿದರು. ಬದಲಿಗೆ ಲಿಂಗಾಯತ ನಾಯಕ ಎಂ.ಬಿ ಪಾಟೀಲ್‍ಗೆ ಮಣೆ ಹಾಕುವಂತೆ ಕೇಳಿಕೊಂಡಿದ್ದರು. ಒಂದು ವೇಳೆ ಡಿ.ಕೆ ಶಿವಕುಮಾರ್ ಅಂತಿಮ ಅನ್ನೊದಾದರೆ ಪ್ರಾಂತ್ಯ ಮತ್ತು ಜಾತಿ ಆಧಾರದ ಮೇಲೆ ನಾಲ್ಕು ಕಾರ್ಯಾಧ್ಯಕ್ಷರನ್ನು ನೇಮಿಸುವಂತೆ ಸಲಹೆ ನೀಡಿದ್ದರು ಎನ್ನಲಾಗಿತ್ತು.

    ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಡಿ.ಕೆ ಶಿವಕುಮಾರ್ ನೇರವಾಗಿ ಸೋನಿಯಗಾಂಧಿ ಭೇಟಿಗೆ ಮುಂದಾಗಿದ್ದರು. ಭೇಟಿ ವೇಳೆ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವ ಲೆಕ್ಕಾಚಾರದಲ್ಲಿದ್ದರು. ಆದರೆ ಐದು ದಿನಗಳಿಂದ ಸಮಯ ಕೇಳಿದರೂ ದೆಹಲಿ ಚುನಾವಣೆ ಹಿನ್ನೆಲೆ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಮೂಲಗಳ ಸ್ಪಷ್ಟಪಡಿಸಿವೆ. ಹೀಗಾಗಿ ಸಾಕಷ್ಟು ನಿರೀಕ್ಷೆ ಹೊತ್ತು ಹೈಕಮಾಂಡ್ ಮನೆ ಬಾಗಿಲಿಗೆ ತೆರಳಿದ್ದ ಡಿ.ಕೆ ಶಿವಕುಮಾರ್ ಇದೊಂದು ರೀತಿಯಲ್ಲಿ ಹಿನ್ನಡೆಯಾದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

  • ಸಂಪುಟ ವಿಸ್ತರಣೆಯಾದರೆ ಸರ್ಕಾರದಲ್ಲಿ ಸ್ಫೋಟ ನಿಶ್ಚಿತ: ಸಿದ್ದರಾಮಯ್ಯ

    ಸಂಪುಟ ವಿಸ್ತರಣೆಯಾದರೆ ಸರ್ಕಾರದಲ್ಲಿ ಸ್ಫೋಟ ನಿಶ್ಚಿತ: ಸಿದ್ದರಾಮಯ್ಯ

    ಮೈಸೂರು: ಉಪಚುನಾವಣೆಯಲ್ಲಿ ಗೆದ್ದವರ ಸ್ಥಿತಿ ಅಂತರ್ ಪಿಶಾಚಿಗಳಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಗೆದ್ದವರನ್ನು ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಲಿಲ್ಲ. ಹೀಗಾಗಿ ಅವರ ಸ್ಥಿತಿ ಅಂತರ್ ಪಿಶಾಚಿಗಳಂತಾಗಿದೆ. ಅಲ್ಲದೆ ಒಂದು ವೇಳೆ ಸಂಪುಟ ವಿಸ್ತರಣೆಯಾದರೆ ನನಗಿರುವ ಮಾಹಿತಿ ಪ್ರಕಾರ ಸರ್ಕಾರದಲ್ಲಿ ಸ್ಫೋಟ ಸಂಭವಿಸಲಿದೆ ಎಂದು ತಿಳಿಸಿದರು.

    ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ ನೀಡುವುದಿಲ್ಲ. ಮಂತ್ರಿ ಸ್ಥಾನ ಕೊಡದಿದ್ದರೆ ಏನಾಗುತ್ತದೆ ನೋಡಿಕೊಳ್ಳಿ ಎಂದು ಈಗಾಗಲೇ ವಿಶ್ವನಾಥ್ ಹೇಳಿದ್ದಾರೆ. ಹೀಗಾಗಿ ಮುಂದೆ ಏನಾಗುತ್ತದೆ ಎಂದು ನೀವೆ ನೋಡಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

    ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಮೈತ್ರಿ ಸರ್ಕಾರ ನಂತರ ಈ ಸರ್ಕಾರ ಬಂದು 6 ತಿಂಗಳಾಗಿದೆ. ಅಂದಿನಿಂದ ಸರ್ಕಾರವೇ ಇಲ್ಲ. ಇವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇನ್ನೂ ಮಂತ್ರಿ ಮಂಡಲ ರಚನೆಯಾಗಿಲ್ಲ. ಇಲ್ಲದ ಸರ್ಕಾರಕ್ಕೆ ಸರ್ಕಾರ ಟೇಕಾಫ್ ಆಗ್ತಾ ಇದೆ ಅಂತ ಹೇಳಲು ಆಗುವುದಿಲ್ಲ ಎಂದು ಟೀಕಿಸಿದರು.

    ಶೀಘ್ರವೇ ನೇಮಕ:
    ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರು ಆಗಬೇಕು ಎಂಬ ಅಭಿಪ್ರಾಯವನ್ನು ಹೈಕಮಾಂಡಿಗೆ ತಿಳಿಸಿದ್ದೇನೆ. ಎಲ್ಲದನ್ನೂ ಹೈಕಮಾಂಡ್ ಚಿಂತಿಸಿ, ಆದಷ್ಟು ಬೇಗ ಅಧ್ಯಕ್ಷರ ನೇಮಕ ಮಾಡುತ್ತದೆ. ಆದಷ್ಟು ಬೇಗ ನೇಮಕವಾಗಲಿ ಎಂದು ನಾನೂ ಒತ್ತಾಯಿಸಿದ್ದೇನೆ. ಯಾರು ನೇಮಕವಾಗಬೇಕೆಂದು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷರ ನೇಮಕ ದೊಡ್ಡ ವಿಚಾರವಲ್ಲ, ಇದಕ್ಕಿಂತ ದೊಡ್ಡವಿಚಾರ ಸರ್ಕಾರದ ಮಂತ್ರಿ ಮಂಡಲ ರಚನೆ ಎಂದರು.

  • ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗಬಹುದು ಎಂಬ ಸುದ್ದಿ ನನಗೂ ಬಂದಿದೆ: ಪರಮೇಶ್ವರ್

    ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗಬಹುದು ಎಂಬ ಸುದ್ದಿ ನನಗೂ ಬಂದಿದೆ: ಪರಮೇಶ್ವರ್

    ತುಮಕೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ಸುದ್ದಿ ನನಗೂ ಬಂದಿದೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಸ್ಥಾನ ಸೇರಿದಂತೆ ವಿವಿಧ ಸ್ಥಾನಗಳಿಗೆ ನೇಮಕ ಶೀಘ್ರದಲ್ಲೇ ಆಗಲಿದೆ. ಹೈಕಮಾಂಡ್ ತೀರ್ಮಾನದಂತೆ ನಾವೆಲ್ಲಾ ನಡೆದುಕೊಳ್ಳುತ್ತೇವೆ ಎಂದರು.

    ಡಿಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗಬಹುದು ಎಂದು ನನಗೂ ಸುದ್ದಿ ಬಂದಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಶೀಘ್ರದಲ್ಲೇ ಹೆಸರು ಪ್ರಕಟ ಮಾಡುತ್ತಾರೆ ಎಂದು ಹೇಳಿದರು. ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಕೊಟ್ಟಿದ್ದು, ನೆರೆಯಲ್ಲಿ 30 ಸಾವಿರ ಕೋಟಿ ರೂ. ನಷ್ಟ ಆಗಿದೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ. ನಮ್ಮ ರಾಜ್ಯಕ್ಕೆ ಏನು ಬರಬೇಕು ಅಷ್ಟನ್ನು ಮಾತ್ರ ಕೇಂದ್ರದವರು ಕೊಟ್ಟಿದ್ದಾರೆ ಸ್ಪೆಷಲ್ ಗ್ರ್ಯಾಂಟ್ ಕೊಟ್ಟಿಲ್ಲ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

    ಎಸ್‍ಡಿಪಿಐ ಸಂಘಟನೆ ನಿಷೇಧ ವಿಚಾರದಲ್ಲಿ ಮಾತನಾಡಿದ ಪರಮೇಶ್ವರ್, ಯಾವ ಕಾರಣಕ್ಕೆ ನಿಷೇಧ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರ ಕಾರಣ ಕೊಡಬೇಕು. ಆ ಕಾರಣವನ್ನು ಗೃಹ ಸಚಿವರು ಹೇಳಬೇಕು ಎಂದು ಒತ್ತಾಯಿಸಿದರು.

  • ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಮುಂದುವರಿಯಲಿ: ಆರ್.ವಿ ದೇಶಪಾಂಡೆ

    ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಮುಂದುವರಿಯಲಿ: ಆರ್.ವಿ ದೇಶಪಾಂಡೆ

    – ಡಿಕೆ ಶಿವಕುಮಾರ್​ಗೆ ಅಧ್ಯಕ್ಷ ಸ್ಥಾನ ಕೇಳುವ ಹಕ್ಕಿದೆ

    ಕಾರವಾರ: ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರಾಗಿಯೇ ಮುಂದುವರಿಯಲಿ, ಡಿಕೆ ಶಿವಕುಮಾರ್​ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳುವ ಹಕ್ಕಿದೆ ಎಂದು ಮಾಜಿ ಸಚಿವ ಹಳಿಯಾಳದ ಶಾಸಕ ಆರ್.ವಿ ದೇಶಪಾಂಡೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಇಂದು ಸಿದ್ದಾಪುರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವಧಿ ಮುಗಿದಿಲ್ಲ. ಮುಗಿದ ನಂತರ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಹೈಕಮಾಂಡ್ ಎಲ್ಲರ ಅಭಿಪ್ರಾಯ ತೆಗೆದುಕೊಂಡಿದೆ. ನಾಲ್ಕು ದಿನದಲ್ಲಿ ಅಧ್ಯಕ್ಷ ಸ್ಥಾನದ ಕುರಿತು ಹೈಕಮಾಂಡ್ ಪ್ರಕಟಿಸುತ್ತದೆ. ನನಗೆ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳುವ ಕುರಿತು ಹೈಕಮಾಂಡ್ ಕೇಳಿತ್ತು. ನಾನು ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದರು.

    ರಾಜ್ಯ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಗೊಂದಲದಲ್ಲಿದೆ. ಸಂಪುಟ ವಿಸ್ತರಣೆ ಬಗ್ಗೆ ಗೊಂದಲವಿದೆ. ಹಣವೇ ಸರ್ಕಾರದಲ್ಲಿ ಇಲ್ಲದಿದ್ದಾಗ ಅಭಿವೃದ್ಧಿ ಪ್ರಶ್ನೆ ಎಲ್ಲಿಂದ ಬಂತು. ಅಭಿವೃದ್ಧಿ ಸ್ಥಗಿತವಾಗಿದೆ. ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಆಗಬೇಕು ಅದು ಆಗುತ್ತಿಲ್ಲ. ರಾಜಕೀಯವಾಗಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸಿಗಬೇಕಾದ ಬೆಂಬಲ ಸಿಗುತ್ತಿಲ್ಲ ಎಂದು ಕೇದ ವ್ಯಕ್ತಪಡಿಸಿದರು.

  • ಪಕ್ಷ ಕಟ್ಟಲು ಒಂದಾಗಿ ಕೆಲಸ ಮಾಡುತ್ತೇವೆ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ: ಮುನಿಯಪ್ಪ

    ಪಕ್ಷ ಕಟ್ಟಲು ಒಂದಾಗಿ ಕೆಲಸ ಮಾಡುತ್ತೇವೆ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ: ಮುನಿಯಪ್ಪ

    ಕೋಲಾರ: ಕೆಪಿಸಿಸಿ ಅಧ್ಯಕ್ಷ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ, ಯಾರೇ ಆಗಲಿ ಒಗ್ಗಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

    ಇಂದು ಕೋಲಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಗಾಂಧಿವನದ ಬಳಿ 134 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನ ಹಮ್ಮಿಕೊಂಡಿದ್ರು. ಇದಕ್ಕೂ ಮೊದಲು ಕಾಂಗ್ರೆಸ್ ಭವನದಿಂದ ಎಂ.ಜಿ ರಸ್ತೆಯ ಮೂಲಕ ಜಾಥಾ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಸಂಸದರು ಹಾಗೂ ನಾಯಕರು ನನ್ನ ಹೆಸರು ಸೂಚಿಸಿದ್ದಾರೆ. ನಾನು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದರು.

    ಮಂಗಳೂರಿನಲ್ಲಿ ಗಲಭೆ ವೇಳೆ ಮೃತಪಟ್ಟವರಿಗೆ ನೀಡಿದ್ದ ಪರಿಹಾರ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ವಾಪಸ್ ಪಡೆದಿರುವುದು ಇದೇ ಮೊದಲು. ಇದಕ್ಕಿಂತ ಕೆಟ್ಟ ಕೆಲಸ ಈ ದೇಶದಲ್ಲಿ ಯಾವುದೂ ಇಲ್ಲ ಎಂದರು.

    ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಹಿರಿಯ ನಾಯಕರಾಗಿ ದೇಶದ ಆಗುಹೋಗುಗಳು ಗೊತ್ತಿದ್ದರೂ ಯಾವ ಕಾರಣಕ್ಕಾಗಿ ಹಿಂತೆಗೆದುಕೊಂಡಿದ್ದಾರೆ ಗೊತ್ತಿಲ್ಲ. ಪರಿಹಾರ ವಾಪಸ್ ಪಡೆದಿರುವುದು ದುರಾದೃಷ್ಟಕರ. ಪ್ರಾಣ ಕಳೆದುಕೊಂಡವರಿಗೆ ಪರಿಹಾರ ಕೊಡಬೇಕಾಗಿರೋದು ನಮ್ಮ ಧರ್ಮ. ಕಮಲನಾಥ್ ಹಾಗೂ ಮಮತಾ ಬ್ಯಾನರ್ಜಿ ನಾವು ಪರಿಹಾರ ಕೊಡುತ್ತೇವೆ ಅಂತಿದ್ದಾರೆ. ಈ ಕೆಲಸದಿಂದ ನಮಗೆ ನಾಚಿಕೆ ಆಗುತ್ತಿದೆ. ಅಲ್ಲದೆ ವಚನ ಭ್ರಷ್ಟರಾಗದೆ ತಕ್ಷಣ ಪರಿಹಾರ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

  • ಕೆಪಿಸಿಸಿ ಅಧ್ಯಕ್ಷ ಹುದ್ದೆ – ಫೈನಲ್ ರೇಸ್‍ನಲ್ಲಿ ಮೂರು ಹೆಸರು

    ಕೆಪಿಸಿಸಿ ಅಧ್ಯಕ್ಷ ಹುದ್ದೆ – ಫೈನಲ್ ರೇಸ್‍ನಲ್ಲಿ ಮೂರು ಹೆಸರು

    ನವದೆಹಲಿ: ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಮೂವರು ರಾಜ್ಯ ನಾಯಕರ ಹೆಸರುಗಳನ್ನ ಮಧುಸೂಧನ್ ಮಿಸ್ತ್ರಿ ನೇತೃತ್ವದ ವೀಕ್ಷಕರ ತಂಡ ಎಐಸಿಸಿಗೆ ಶಿಫಾರಸು ಮಾಡಿದೆ. ಮಾಜಿ ಸಚಿವ ಡಿ.ಕೆ ಶಿವಕುಮಾರ್, ರಾಜ್ಯಸಭಾ ಸಂಸದ ಬಿ.ಕೆ ಹರಿಪ್ರಸಾದ್, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಹೆಸರು ಶಿಫಾರಸು ಮಾಡಲಾಗಿದೆ.

    ಕಳೆದ ವಾರ ರಾಜ್ಯದಲ್ಲಿ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದ ಮಧುಸೂಧನ್ ಮಿಸ್ತ್ರಿ, ಭಕ್ತ ಚರಣ್‍ದಾಸ್ ಇಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯ ಗಾಂಧಿಗೆ ವರದಿ ನೀಡಿದ್ದಾರೆ. ಅಲ್ಲದೇ ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆಯೂ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.

    ಜನವರಿ ಮೊದಲ ವಾರದಲ್ಲಿ ಸೋನಿಯಾ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜನವರಿ 1 ಅಥವಾ 2ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಅಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿ ಮಾಡಲಿದ್ದಾರೆ. ಈಗಾಗಲೇ ವಿಪಕ್ಷ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯುವ ಮನಸ್ಸು ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಅಂತಿಮ ನಿರ್ಧಾರವನ್ನು ಸೋನಿಯಗಾಂಧಿ ಮುಂದೆ ಸಿದ್ದರಾಮಯ್ಯ ಹೇಳಲಿದ್ದಾರೆ. ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕನ ಸ್ಥಾನ ಆಯ್ಕೆ ಮಾಡುವ ಸಂಬಂಧ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.

    ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುನಿಯಪ್ಪ ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದು, ದೆಹಲಿಯಲ್ಲಿ ಹೈಕಮಾಂಡ್ ನಾಯರನ್ನು ಭೇಟಿಯಾಗುತ್ತಿದ್ದಾರೆ. ಎ.ಕೆ ಆಂಟನಿ, ಗುಲಾಂ ನಬಿ ಅಜಾದ್, ಅಂಬಿಕಾ ಸೋನಿ ಭೇಟಿಯಾಗಿರುವ ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

  • ಡಿಕೆಶಿ ಹಾದಿಗೆ ನೂರೆಂಟು ವಿಘ್ನ

    ಡಿಕೆಶಿ ಹಾದಿಗೆ ನೂರೆಂಟು ವಿಘ್ನ

    ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಗಾದಿಗೆ ತಂದು ಕೂರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಆದರೆ ಈ ಯತ್ನಕ್ಕೆ ರಾಜ್ಯ ಕಾಂಗ್ರೆಸ್‍ನ ಎರಡು ಬಣಗಳು ಅಡ್ಡಗಾಲು ಹಾಕುತ್ತಿರುವ ಇಂಟರೆಸ್ಟಿಂಗ್ ಬೆಳವಣಿಗೆ ನಡೆಯುತ್ತಿದೆ.

    ಡಿಕೆ ಶಿವಕುಮಾರ್ ಪಟ್ಟಾಭಿಷೇಕ ತಪ್ಪಿಸಲು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಣ ಮುಂದಾಗಿದೆ. ದಿನೇಶ್ ಗುಂಡುರಾವ್ ಅರಿಂದ ತೆರವಾದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಕೃಷ್ಣಬೈರೇಗೌಡ ಅವರ ಹೆಸರನ್ನು ಮುನ್ನಲೆಗೆ ತಂದಿದೆ. ಒಕ್ಕಲಿಗರ ಕೋಟದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾದರೆ ಕೃಷ್ಣಬೈರೇಗೌಡ ಅವರು ಇರಲಿ. ಲಿಂಗಾಯತರ ಕೋಟದಲ್ಲಿ ನೀಡುವುದಾದರೆ ಎಂ.ಬಿ.ಪಾಟೀಲ್ ಇರಲಿ ಎನ್ನುವುದು ಸಿದ್ದರಾಮಯ್ಯ ಅವರ ಬಣ ಲಾಬಿ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಇತ್ತ ಮೂಲ ಕಾಂಗ್ರೆಸ್ಸಿಗರು ಲಿಂಗಾಯತರ ಕೋಟದಲ್ಲಿ ಈಶ್ವರ್ ಖಂಡ್ರೆ ಅಥವಾ ದಲಿತರ ಕೋಟವಾದರೆ ಕೆ.ಹೆಚ್.ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಲಾಬಿ ಆರಂಭಿಸಿದ್ದಾರೆ. ಎಲ್ಲರನ್ನೂ ಮೀರಿ ಡಿಕೆ ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುತ್ತಾ ಅಥವಾ ಪ್ರತಿಬಾರಿಯಂತೆ ಈ ಬಾರಿಯೂ ಬಣ ರಾಜಕಾರಣದಿಂದಾಗಿ ಕೊನೆ ಗಳಿಗೆಯಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪಟ್ಟದಿಂದ ವಂಚಿತರಾಗುತ್ತಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ.

  • ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಸಚಿವ ರಮೇಶ್ ಜಾರಕಿಹೊಳಿ

    ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಸಚಿವ ರಮೇಶ್ ಜಾರಕಿಹೊಳಿ

    ಬೆಳಗಾವಿ: ಹೊಸ ಬಜೆಟ್ ಬೇಡ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಜೆಟ್ ಮಂಡನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹಕ್ಕು. ಆದರೆ ಬಜೆಟ್ ಮಂಡನೆ ವಿಚಾರದಲ್ಲಿ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಕಾಂಗ್ರೆಸ್ ಸರ್ಕಾರದ ಹಳೇ ಯೋಜನೆಗಳನ್ನೇ ಮುಂದುವರಿಸಬೇಕು ಎನ್ನುವ ನಿರ್ಧಾರನ್ನು ಸಿಎಂ ಕುಮಾರಸ್ವಾಮಿ ಅವರಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

    ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಷಯದ ಕುರಿತು ಮಾತನಾಡಿದ ಸಚಿವರು, ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವರಾದ ದಿನೇಶ್ ಗುಡೂರಾವ್, ಸತೀಶ್ ಜಾರಕಿಹೊಳಿ ಹಾಗೂ ಎಚ್.ಕೆ.ಪಾಟೀಲ್ ಅವರು ಪೈಪೋಟಿ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇವೆ. ಅಲ್ಲದೇ ಉತ್ತರ ಕರ್ನಾಟಕಕ್ಕೆ ಇನ್ನೂ ಮೂರು ಸಚಿವ ಸ್ಥಾನ ನೀಡುವ ಸಾಧ್ಯತೆ ಇದ್ದು, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಶಾಸಕರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.

    ಕಾಂಗ್ರೆಸ್ಸಿನ ಮೂವರಿಂದ ಬೆಂಬಲ:
    ಬಜೆಟ್ ವಿಚಾರವಾಗಿ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಸಚಿವ ರಮೇಶ್ ಜಾರಕಿಹೊಳಿ ಬೆನ್ನಲ್ಲೆ ಸದ್ಯ ಸಂಸದ ವೀರಪ್ಪ ಮೋಯ್ಲಿ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    https://youtu.be/RBIURxo0YIg

  • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಪಾಟೀಲ್ ಪರ ಬ್ಯಾಟ್ ಬೀಸಿದ ಮಲ್ಲಿಕಾರ್ಜುನ ಖರ್ಗೆ

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಪಾಟೀಲ್ ಪರ ಬ್ಯಾಟ್ ಬೀಸಿದ ಮಲ್ಲಿಕಾರ್ಜುನ ಖರ್ಗೆ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಪರ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬ್ಯಾಟ್ ಬೀಸಿದ್ದಾರೆ.

    ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಹೈಕಮಾಂಡ್ ನಿರ್ಧಾರ ಗೊತ್ತಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಅವರು, ಅಧ್ಯಕ್ಷ ಸ್ಥಾನವನ್ನು ಎಚ್.ಕೆ.ಪಾಟೀಲ್ ಅವರಿಗೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಂತೆ ಹಿರಿಯ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎಚ್.ಕೆ.ಪಾಟೀಲ್ ಅವರು ಸೂಕ್ತ ವ್ಯಕ್ತಿ, ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಉತ್ತಮ ಎಂದು ಹೈಕಮಾಂಡ್ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಲಾಬಿ ನಡೆಸಿದ್ದಾರೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿರುವ ಅವರು, ಮುನಿಸಿಕೊಂಡಿರುವ ಲಿಂಗಾಯತರು ಕಾಂಗ್ರೆಸ್ ಪರವೇ ನಿಲ್ಲುತ್ತಾರೆ. ಬೇರೆ ಎಲ್ಲಿಯೂ ಹೋಗಲ್ಲ. ಎಲ್ಲ ಅರ್ಹತೆ ಹೊಂದಿರುವ ಎಚ್.ಕೆ.ಪಾಟೀಲ್ ಅವರು ಅಧ್ಯಕ್ಷರಾದರೆ ಪಕ್ಷಕ್ಕೆ ಒಳಿತಾಗುತ್ತದೆ ಎಂದು ಪಟ್ಟು ಹಿಡಿದಿದ್ದಾರೆ.

    ಮುಂದಿನ ರಾಜಕೀಯ ಪರಿಸ್ಥಿತಿಯ ಮೇಲೆ ನಿಯಂತ್ರಣ ಹೇರಲು ಮಲ್ಲಿಕಾರ್ಜುನ ಖರ್ಗೆ ಅವರು ಎಚ್.ಕೆ.ಪಾಟೀಲ್ ಅವರನ್ನು ಬೆಂಬಲಿಸುತ್ತಿದ್ದಾರೆ. ಇವರಿಬ್ಬರ ಮಧ್ಯೆ ಆತ್ಮೀಯ ಸಂಬಂಧವಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶವಿದ್ದರೆ ಎಚ್.ಕೆ.ಪಾಟೀಲರ ಮೂಲಕ ಪಡೆಯಬಹುದು ಎನ್ನುವ ಸೂತ್ರವನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಸಿದ್ಧ ಪಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಲೋಕಸಭಾ ಚುನಾವಣೆಗೆ `ಕೈ’ಯಿಂದ ಭಾರೀ ಸಿದ್ಧತೆ- ಮಾಜಿ ಸಚಿವ ಎಂ.ಬಿ ಪಾಟೀಲ್‍ಗೆ ಡಬಲ್ ಧಮಾಕಾ!

    ಲೋಕಸಭಾ ಚುನಾವಣೆಗೆ `ಕೈ’ಯಿಂದ ಭಾರೀ ಸಿದ್ಧತೆ- ಮಾಜಿ ಸಚಿವ ಎಂ.ಬಿ ಪಾಟೀಲ್‍ಗೆ ಡಬಲ್ ಧಮಾಕಾ!

    ಬೆಂಗಳೂರು: ಲೋಕಸಭಾ ಚುನಾವಣೆ ಉದ್ದೇಶದಿಂದ ಪ್ರಾದೇಶಿಕ ಅಸಮತೋಲನ ಸರಿಪಡಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಉತ್ತರ ಕರ್ನಾಟಕ ನಾಯಕರಿಗೆ ಕೆಪಿಸಿಸಿ ಪಟ್ಟ ಕಟ್ಟಲು ಸಿದ್ಧತೆ ನಡೆಸಿದೆ.

    ಸದ್ಯ ಸಂಪುಟದಲ್ಲಿ ಹೆಚ್ಚಾಗಿ ದಕ್ಷಿಣ ಕರ್ನಾಟಕದ ಸಚಿವರೇ ಇದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದ ಶಾಸಕರಿಗೆ ನೀಡುವ ಸುಳಿವನ್ನು ಹೈಕಮಾಂಡ್ ಬಿಟ್ಟುಕೊಟ್ಟಿದೆ. ಅಲ್ಲದೇ ಲೋಕಸಭೆ ಚುನಾವಣೆಗೆ ಭಾರೀ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಈ ಯೋಜನೆಗೆ ಮುಂದಾಗಿದೆ ಎನ್ನಲಾಗುತ್ತಿದೆ.

    ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ?
    ಉತ್ತರ ಕರ್ನಾಟಕಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬುದಾಗಿ ತಿಳಿದು ಬಂದಿದ್ದು, ಅಧ್ಯಕ್ಷ ಸ್ಥಾನದ ಪಟ್ಟಿಯಲ್ಲಿ ಶಾಸಕ ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ಅಪ್ಪಾಜ್ಜಿ ನಾಡಗೌಡ ಹೆಸರು ಕೇಳಿ ಬರುತ್ತಿದೆ. ರಾಮನಗರ ಉಪಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಭರ್ತಿ ಮಾಡಲು ಚಿಂತನೆ ನಡೆಸಲಾಗಿದ್ದು, ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರಂತೆ. ಆದರೆ ಇತ್ತ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಶಾಸಕ ದಿನೇಶ್ ಗುಂಡೂರಾವ್, ಮುನಿಯಪ್ಪ ಹಾಗೂ ಬಿ.ಕೆ ಹರಿಪ್ರಸಾದ್ ಅವರಿಗೆ ನಿರಾಶೆ ಕಾಡುತ್ತಿದೆ.

    ಕೆಲವು ಕಾಂಗ್ರೆಸ್ ಶಾಸಕರು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಿಂದ ಸಚಿವ ಸ್ಥಾನ ವಂಚಿತರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದನ್ನು ಶಮನ ಮಾಡಲು ಹೈಕಮಾಂಡ್ ಉಳಿದಿರುವ 6 ಸಚಿವ ಸ್ಥಾನದಲ್ಲಿ 2 ಸ್ಥಾನವನ್ನು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಗಾರರಿಗೆ ನೀಡಲು ಮುಂದಾಗಿದ್ದು, ಈ ಬೆನ್ನಲ್ಲೆ ಶಾಸಕ ಎಂ.ಬಿ.ಪಾಟೀಲ್ ಅವರಿಗೆ ಮಂತ್ರಿಗಿರಿ ಇಲ್ಲವೇ, ಕೆಪಿಸಿಸಿ ಅಧ್ಯಕ್ಷ ಪಟ್ಟ ದೊರೆಯಲಿದೆ ಎಂದು ಪಕ್ಷ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.