Tag: ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್

  • ಕಾಂಗ್ರೆಸ್ಸಿನಿಂದ ಶಾಸಕ ಭೈರತಿ ಬಸವರಾಜ್ ಬಂಟ ನಾರಾಯಣ ಸ್ವಾಮಿ ಅಮಾನತು

    ಕಾಂಗ್ರೆಸ್ಸಿನಿಂದ ಶಾಸಕ ಭೈರತಿ ಬಸವರಾಜ್ ಬಂಟ ನಾರಾಯಣ ಸ್ವಾಮಿ ಅಮಾನತು

    ಬೆಂಗಳೂರು: ಕೆಆರ್ ಪುರಂ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಬಂಟ ಬೆಂಗಳೂರು ಜಲಮಂಡಳಿ ಸದಸ್ಯನಾಗಿರುವ ನಾರಾಯಣಸ್ವಾಮಿಯನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

    ಈ ಕುರಿತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ನಾರಾಯಣ ಸ್ವಾಮಿಯನ್ನು ಪಕ್ಷದಿಂದ ಅಮಾನತುಗೊಳಿಸಿದ್ದೇವೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಘಟನೆ ಕುರಿತು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿರುವ ನಾರಾಯಣಸ್ವಾಮಿ, ತಮ್ಮ ಕೃತ್ಯವನ್ನು ಸಮರ್ಥನೆ ಮಾಡಿಕೊಂಡಿದ್ದ. ಅಲ್ಲದೇ ಘಟನೆ ಕುರಿತ ವಿಡಿಯೋವನ್ನು ಮಾಧ್ಯಮಗಳು ಪ್ರಸಾರ ಮಾಡಿದರೆ ತನಗೆ ಯಾವುದೇ ನಷ್ಟವಿಲ್ಲ ಎಂದು ತಿಳಿಸಿದ್ದ.

    ರಾಜ್ಯ ವಿಧಾನಸಭಾ ಚುನಾವಣೆ ಕೇವಲ ಕೆಲ ತಿಂಗಳು ಇರುವ ಕಾರಣ ವೇಳೆ ನಾರಾಯಣಸ್ವಾಮಿ ಅವರ ಘಟನೆ ಪಕ್ಷ ಘನತೆಗೆ ದಕ್ಕೆ ತರುವ ಸಾಧ್ಯತೆ ಇರುವುದರಿಂದ ಪಕ್ಷದ ನಾಯಕರು ಈ ಕ್ರಮ ಕೈಗೊಂಡಿದ್ದಾರೆ.

    ಏನಿದು ಘಟನೆ?: ನಾರಾಯಣಸ್ವಾಮಿ ಎನ್‍ಆರ್‍ಐ ಬಡಾವಣೆಯ ಜಮೀನು ವಿಚಾರದಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಡುವಂತೆ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಚೆಂಗಲ್ ರಾಯಪ್ಪಗೆ ಒತ್ತಡ ಹಾಕಿದ್ದ. ಜಮೀನು ವ್ಯಾಜ್ಯ ಕೋರ್ಟ್‍ನಲ್ಲಿದೆ, ಅಕ್ರಮವಾಗಿ ಖಾತೆ ಮಾಡಿಕೊಡಲ್ಲ ಎಂದು ಚೆಂಗಲ್ ರಾಯಪ್ಪ ಹೇಳಿದ್ದರು. ಹೀಗಾಗಿ ಕಳೆದ ಫೆಬ್ರವರಿ 16ರಂದು ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಹೊರಮಾವು ನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿದ ನಾರಾಯಣಸ್ವಾಮಿ, ಎಆರ್‍ಒ ಚೆಂಗಲ್ ರಾಯಪ್ಪ ಮುಂದೆಯೇ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಖಾತೆ ಮಾಡಿಕೊಡದಿದ್ದರೆ ಕಚೇರಿಯಲ್ಲಿರುವ ದಾಖಲೆಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ – ಸುದ್ದಿ ಪ್ರಸಾರ ಮಾಡಿ: ತನ್ನ ಕೃತ್ಯವನ್ನು ಸಮರ್ಥಿಸಿಕೊಂಡ ನಾರಾಯಣ ಸ್ವಾಮಿ

    ಚೆಂಗಲ್ ರಾಯಪ್ಪ ಖಡಕ್ ಅಧಿಕಾರಿ ಅಂತ ಗುರುತಿಸಿಕೊಂಡಿದ್ದ ವ್ಯಕ್ತಿಯಾಗಿದ್ದು, ಪೆಟ್ರೋಲ್ ಹಾಕೋದಾಗಿ ಬೆದರಿಸಿದ್ರೂ ಅವರು ಹೆದರಲಿಲ್ಲ. ಎರಡು ದಿನಗಳ ಹಿಂದೆ ಚೆಂಗಲ್ ರಾಯಪ್ಪ ಅವರನ್ನ ವರ್ಗಾವಣೆ ಮಾಡಲಾಗಿದೆ. ಸಿಎಂ ಮತ್ತು ಭೈರತಿ ಬಸವರಾಜ್ ಪ್ರಭಾವ ಬಳಸಿ ಚೆಂಗಲ್ ರಾಯಪ್ಪರನ್ನ ನಾರಾಯಣಸ್ವಾಮಿ ವರ್ಗಾವಣೆ ಮಾಡಿಸಿದ್ದಾನೆ ಎನ್ನಲಾಗಿದೆ.  ಇದನ್ನೂ ಓದಿ: ಶಾಸಕ ಭೈರತಿ ಬಸವರಾಜ್ ಬಂಟನ ಗೂಂಡಾಗಿರಿ- ಸರ್ಕಾರಿ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ತೀನೆಂದು ಬೆದರಿಕೆ

  • ರಮ್ಯಾ ಚುನಾವಣೆಗೆ ಸ್ಪರ್ಧಿಸುತ್ತಾರಾ?: ಪರಮೇಶ್ವರ್ ಈ ಉತ್ತರ ನೀಡಿದ್ರು

    ರಮ್ಯಾ ಚುನಾವಣೆಗೆ ಸ್ಪರ್ಧಿಸುತ್ತಾರಾ?: ಪರಮೇಶ್ವರ್ ಈ ಉತ್ತರ ನೀಡಿದ್ರು

    ಬೆಂಗಳೂರು: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡುವ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ರಮ್ಯಾ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವನ್ನು ಎಲ್ಲೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

    ರಮ್ಯಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಎಲ್ಲೂ ಹೇಳಿಕೆ ನೀಡಿಲ್ಲ, ನಾವು ಹೇಳಿಲ್ಲ. ರಮ್ಯಾ ಯಾರ ಸಂಪರ್ಕದಲ್ಲಿ ಇದ್ದಾರೋ, ಇಲ್ವೋ ಎಂಬುವುದು ತಿಳಿದಿಲ್ಲ. ಅವರ ಹುಟ್ಟು ಹಬ್ಬದ ದಿನದಂದು ಅವರಿಗೆ ಕರೆ ಮಾಡಿ ಶುಭಾಶಯ ಹೇಳಿದ್ದೆ ಎಂದು ತಿಳಿಸಿದ್ದಾರೆ.

    ಇನ್ನು 2018 ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಯಾತ್ರೆ ಕೈಗೊಳ್ಳುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಪಕ್ಷದವರು ಯಾತ್ರೆ ಮಾಡಿದ ತಕ್ಷಣ ನಾವು ಏಕೆ ಯಾತ್ರೆ ಮಾಡಬೇಕು. ಯಾತ್ರೆ ಮಾಡಿದ ತಕ್ಷಣ ಚುನಾವಣೆಗೆ ತಯಾರಿ ಅಂತ ಏನಿಲ್ಲ. ನಾವು ನಮ್ಮದೇ ರಣತಂತ್ರ ಹೊಂದಿದ್ದೇವೆ. ಈಗಾಗಲೇ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

    ಈ ಬಾರಿಯ ಚುನಾವಣೆಯಲ್ಲಿ ನಾನು ಕೊರಟಗೆರೆಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ ಪರಮೇಶ್ವರ್ ಒಂದು ಕುಟುಂಬದಲ್ಲಿ ಹಲವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಕೋಪಗೊಂಡರು. ಚುನಾವಣೆಯಲ್ಲಿ ಮೂರು ಬಾರಿ ಪರಾಭವಗೊಂಡವರಿಗೆ ಹಾಗೂ ಒಂದು ಕುಟುಂಬದಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎನ್ನುವ ನಿಯಮ ಇದೆ. ಆದರೆ ಇದು ಜಾರಿಯಾಗಿಲ್ಲ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಹೈಕಮಾಂಡ್ ಹೇಗೆ ನಿಯಮ ರೂಪಿಸುತ್ತದೋ ಅದರ ಅನ್ವಯ ಟಿಕೆಟ್ ನೀಡಲಾಗುತ್ತದೆ ಎಂದರು. ಚನ್ನಪಟ್ಟಣದಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಒಳ ಒಪ್ಪಂದ ವಿಚಾರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಣಕ್ಕೆ ಇಳಿಸುತ್ತೇವೆ ಎಂದರು.

    ರಮ್ಯಾ ಅವರು ಸಂಸದರಾಗಿ ಆಯ್ಕೆಯಾದ ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಮಂಡ್ಯದ ಕಾಂಗ್ರೆಸ್ ಅಭಿಮಾನಿಗಳು ಮನವಿ ಮಾಡಿದ್ದರು.

  • ಕೋರ್ಟ್ ಆದೇಶವಿದ್ರೂ ಭೂಮಿ ವಾಪಾಸ್ ಕೊಡ್ತಿಲ್ಲ- ಪರಮೇಶ್ವರ್ ಸಹಭಾಗಿತ್ವದ ಶಿಕ್ಷಣ ಸಂಸ್ಥೆ ವಿರುದ್ಧ ಆರೋಪ

    ಕೋರ್ಟ್ ಆದೇಶವಿದ್ರೂ ಭೂಮಿ ವಾಪಾಸ್ ಕೊಡ್ತಿಲ್ಲ- ಪರಮೇಶ್ವರ್ ಸಹಭಾಗಿತ್ವದ ಶಿಕ್ಷಣ ಸಂಸ್ಥೆ ವಿರುದ್ಧ ಆರೋಪ

    ತುಮಕೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಸಹಭಾಗಿತ್ವದ ಸಿದ್ದಾರ್ಥ ಶಿಕ್ಷಣ ಸಂಸ್ಥೆ, ಬಡ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದೆ.

    ಮಧುಗಿರಿ ಪಟ್ಟಣದಲ್ಲಿರುವ ಸಿದ್ದಾರ್ಥ ಪ್ರೌಢ ಶಾಲೆಯವರು, ವೆಂಕಟಮ್ಮ ಎಂಬವರ ಸರ್ವೆ ನಂಬರ್ 122/5 ರಲ್ಲಿನ 17 ಕುಂಟೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದಾರೆ. 1998 ರಲ್ಲಿ ಜಿ.ಪರಮೇಶ್ವರ್ ಮಧುಗಿರಿ ಶಾಸಕರಾಗಿದ್ದಾಗ ಈ ಅಕ್ರಮ ಖಾತೆ ಮಾಡಿಸಿದ್ದಾರೆ ಎನ್ನಲಾಗಿದೆ.

    16 ವರ್ಷಗಳ ಬಳಿಕ ಅಕ್ರಮ ಖಾತೆ ವಿರುದ್ಧ ವೆಂಕಟಮ್ಮ ಪರ ಕೋರ್ಟ್ ತೀರ್ಪು ನೀಡಿದೆ. ಆದ್ರೂ ಅಧಿಕಾರಿಗಳು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಅಕ್ರಮ ಖಾತೆಯನ್ನು ರದ್ದುಗೊಳಿಸುತ್ತಿಲ್ಲ. ಈಗ ವೆಂಕಟಮ್ಮ ಕುಟುಂಬದ ಮೇಲೆ ಪರಮೇಶ್ವರ್ ಬೆಂಬಲಿಗರ ಕಣ್ಣು ಬಿದ್ದಿದೆ. ಇದರಿಂದ ಭಯಬಿದ್ದ ಕುಟುಂಬ ಮನೆ ಮಾರಿ, ಊರನ್ನೇ ಬಿಟ್ಟು ಮಾರಿ ದೇವನಳ್ಳಿಯ ಆಹುತಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿದ್ದಾರ್ಥ ಶೈಕ್ಷಣಿಕ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ, ವೆಂಕಟಮ್ಮರಿಂದ ಭೂಮಿ ಖರೀದಿಸಲಾಗಿದೆ. ಆದ್ರೆ ಈಗ ಅವರು ದಾಖಲೆಯಲ್ಲಿದ್ದ ಹೆಬ್ಬೆಟ್ಟಿನ ಗುರುತು ನಮ್ಮದಲ್ಲ ಎಂದು ವಾದ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ.

    ಕೆಳಹಂತದ ಎರಡು ಕೋರ್ಟ್‍ಗಳಲ್ಲಿ ವೆಂಕಟಮ್ಮರ ಪರ ಆದೇಶವಾದ್ರೂ ಸಿದ್ದಾರ್ಥ ಸಂಸ್ಥೆ ಆ ಜಮೀನು ಬಿಟ್ಟು ಕೊಡಲು ಸಿದ್ಧವಿಲ್ಲ. ಪದೇ ಪದೇ ಮೇಲ್ಮನವಿ ಸಲ್ಲಿಸಿ ಬಡ ವೆಂಕಟಮ್ಮ ಕುಟುಂಬದವರನ್ನು ಕೋರ್ಟ್‍ಗೆ ಎಳೆಯುತ್ತಿದೆ. ನ್ಯಾಯಾಲಯದಲ್ಲಿ ತಮಗೆ ಮುಖಭಂಗ ಆಗ್ತಿದ್ದಂತೆ ವೆಂಕಟಮ್ಮನವರ ಬಳಿ ಬಂದ ಆಡಳಿತ ಮಂಡಳಿ, ಜಮೀನಿಗೆ ದರ ನಿಗದಿ ಪಡಿಸಿ ಸೆಟಲ್‍ಮೆಂಟ್ ಮಾಡುವ ಭರವಸೆ ನೀಡಿತ್ತು. ಆದರೆ ಈಗ ಉಲ್ಟಾ ಹೊಡೆದಿದೆ ಅಂತ ಅವರು ಆರೋಪ ಮಾಡಿದ್ದಾರೆ.