Tag: ಕೆಪಿಎಲ್

  • ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಮುಂಬೈ: ಇಂಗ್ಲೆಂಡ್ ತಂಡದ ಕ್ರಿಕೆಟಿಗ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬ್ಯಾಟ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    2022ರ 15ನೇ ಆವೃತ್ತಿ ಐಪಿಎಲ್‌ನಲ್ಲಿ ತಾವು ಆಡಿದ್ದ ಬ್ಯಾಟ್ ಮೇಲೆ ಸಹಿ ಮಾಡಿ ಅದನ್ನು ಕಿಚ್ಚ ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಸುದೀಪ್ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಟವಾಡಿದ ಫೋಟೋವೊಂದನ್ನು ರಾಜಾಸ್ಥಾನ್ ರಾಯಲ್ಸ್ ತಂಡವು ಟ್ವೀಟ್‌ನಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಮುಂಬೈಗೆ 725 ರನ್‍ಗಳ ದಾಖಲೆಯ ಜಯ – ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 129 ವರ್ಷಗಳ ಬಳಿಕ ರೆಕಾರ್ಡ್ ಬ್ರೇಕ್

    ಇದಕ್ಕೆ ಉತ್ಸಾಹದಿಂದಲೇ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ವಿಶೇಷ ವೀಡಿಯೋವೊಂದನ್ನು ಮಾಡಿದ್ದು, ಜೋಸ್ ಬಟ್ಲರ್‌ಗೆ ಧನ್ಯವಾದ ಹೇಳಿದ್ದಾರೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ಅದರೊಂದಿಗೆ ಬ್ಯಾಟ್ ಸಿಗಲು ಸಹಾಯ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಕನ್ನಡಿಗ ಕೆ.ಸಿ.ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಧನ್ಯವಾದ ಸಲ್ಲಿಸಿದ್ದಾರೆ.

    `ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು. ನಾನು ಇದನ್ನು ನಿರೀಕ್ಷೆ ಸಹ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ ಈ ವೀಡಿಯೋ ಮಾಡಿದ್ದೇನೆ. ವೈಯಕ್ತಿಕವಾಗಿ ನೀವು ಸಹಿ ಮಾಡಿದಂಥ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಧನ್ಯವಾದ. ಇದನ್ನು ನಾನು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ಎಂದು ಕೃತಜ್ಞತಾ ವೀಡಿಯೋವನ್ನು ಸುದೀಪ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯ ದಾಖಲೆಯ ರನ್ ಶಿಖರವನ್ನು ಪುಡಿಗಟ್ಟಿದ ಬಾಬರ್ ಅಜಾಮ್‌

    ಈ ಬಾರಿ ಐಪಿಎಲ್ ಸೀಜನ್‌ನಲ್ಲೂ ಜೋಸ್ ಬಟ್ಲರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ ಎಂದಿರುವ ಸುದೀಪ್ ಖಂಡಿತವಾಗಿ ನಾನು ಇದನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

    15ನೇ ಆವೃತ್ತಿ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಏಕಾಂಗಿ ಹೋರಾಟದ ಮೂಲಕ ರಾಜಾಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ ಪಂದ್ಯದ ವೆರೆಗೆ ಮುನ್ನಡೆಸಿದ್ದರು. ಒಟ್ಟು 15 ಪಂದ್ಯಗಳಲ್ಲಿ 718 ರನ್‌ಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಳಿಸಿಕೊಂಡರು.

  • ಇದೇ ಮೊದಲಲ್ಲ, ಕೆಪಿಎಲ್‌ ಟು ಡ್ರಗ್ಸ್‌ ಲಿಂಕ್‌- ರಾಗಿಣಿ ಮೇಲೆ ಇರೋ ಆರೋಪಗಳೇನು?

    ಇದೇ ಮೊದಲಲ್ಲ, ಕೆಪಿಎಲ್‌ ಟು ಡ್ರಗ್ಸ್‌ ಲಿಂಕ್‌- ರಾಗಿಣಿ ಮೇಲೆ ಇರೋ ಆರೋಪಗಳೇನು?

    ಬೆಂಗಳೂರು: ನಟಿ ರಾಗಿಣಿ ವಿರುದ್ಧ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ. ಎರಡು ವರ್ಷದ ಹಿಂದೆ ಗಂಭೀರ ಆರೋಪ ಕೇಳಿ ಬಂದಿತ್ತು.

    2016ರಲ್ಲಿ ರಾಗಿಣಿ ಬಳ್ಳಾರಿ ಟಸ್ಕರ್ಸ್ ತಂಡವನ್ನು ಖರೀದಿಸಿದ್ದರು.  ಕೆಪಿಎಲ್  ಟೂರ್ನಿಯ ವೇಳೆ  ಫಿಕ್ಸಿಂಗ್ ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ಹೆಸರು ಬಂದಿತ್ತು. ಆದರೆ ಸೂಕ್ತ ದಾಖಲೆ, ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣಕ್ಕೆ ಸು ಮ್ಮನಾಗಿದ್ದರು.

    ಪ್ರಬಲವಾದ ಸಾಕ್ಷ್ಯಗಳು ಸಿಗದೇ ಇದ್ದರೂ ರಾಗಿಣಿಯ ಚಟುವಟಿಕೆ ಮೇಲೆ ಒಂದು ಕಣ್ಣು ಇಟ್ಟಿದ್ದರು. ರಾಗಿಣಿ ಮತ್ತು ರವಿಶಂಕರ್ ಚಲನವಲನದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಸದ್ದಿಲ್ಲದೇ ಸಂಗ್ರಹಿಸುತ್ತಿದ್ದರು. ಇದನ್ನೂ ಓದಿ: 8 ಗಾಂಜಾ ತುಂಬಿದ್ದ ಸಿಗರೇಟ್‌ ಪತ್ತೆ – ಪೊಲೀಸರ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಏನೇನು ಸಿಕ್ಕಿದೆ?

    ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ, ಇಬ್ಬರು ನೈಜಿರಿಯನ್ ಪ್ರಜೆಗಳ ಬಂಧನ ನಂತರ ರವಿಶಂಕರ್, ರಾಗಿಣಿ ಸೇರಿ ಹದಿನೈದು ಜನ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಆಗ್ತಿದ್ದ ಮಾಹಿತಿ ಬಯಲಾಗಿತ್ತು ಈ ಸಂಬಂಧ ಮತ್ತಷ್ಟು ಸಾಕ್ಷ್ಯಗಳು ಸಿಕ್ಕ ನಂತರ ಕಾರ್ಯಚರಣೆ ತೀವ್ರಗೊಳಿಸಿದ ಸಿಸಿಬಿ, ಮೊನ್ನೆ ರವಿಶಂಕರ್ ಬಂಧಿಸಿತು ಎಂಬ ಮಾಹಿತಿ ಸಿಸಿಬಿ ಮೂಲಗಳಿಂದ ಸಿಕ್ಕಿದೆ.

    ಎರಡು ವರ್ಷದ ಹಿಂದೆ ರಾಗಿಣಿ ವಿಚಾರವಾಗಿ ಸ್ಟಾರ್ ಹೋಟೆಲ್ ಒಂದರಲ್ಲಿ ರವಿಶಂಕರ್ ಮತ್ತು ಶಿವಪ್ರಕಾಶ್ ಎಂಬುವರ ಮಧ್ಯೆ ತೀವ್ರ ಗಲಾಟೆ ಆಗಿತ್ತು. ಈ ಬಗ್ಗೆಯೂ ಇಂದು ಸಿಸಿಬಿ ಅಧಿಕಾರಿಗಳು ರಾಗಿಣಿಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

  • ಕೋಟಿ ಕೋಟಿ ಹಣ ಸಂಪಾದನೆಗಾಗಿ ಆಟವನ್ನೇ ಪಣಕ್ಕಿಟ್ಟಿದ್ದವರ ವಿರುದ್ಧ ಚಾರ್ಚ್ ಶೀಟ್

    ಕೋಟಿ ಕೋಟಿ ಹಣ ಸಂಪಾದನೆಗಾಗಿ ಆಟವನ್ನೇ ಪಣಕ್ಕಿಟ್ಟಿದ್ದವರ ವಿರುದ್ಧ ಚಾರ್ಚ್ ಶೀಟ್

    – ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ದೋಷಾರೋಪ ಸಲ್ಲಿಕೆ

    ಬೆಂಗಳೂರು: ಕೋಟಿ ಕೋಟಿ ಹಣ ಸಂಪಾದನೆಗಾಗಿ ಕ್ರಿಕೆಟ್ ಆಟವನ್ನೇ ಪಣಕ್ಕಿಟ್ಟಿದವರು ಅಂದರ್ ಆಗಿದ್ದು ಆಯ್ತು, ಬೇಲ್‍ನ ಮೇಲೆ ಬಿಡುಗಡೆಯೂ ಆದರು. ಆದ್ರೀಗ ಆ ಎಲ್ಲಾ ಖತರ್ನಾಕ್ ಟೀಂ ಮೇಲೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳು ಯಾವ ರೀತಿಯಲ್ಲಿ ಪ್ರಕರಣಕ್ಕೆ ಕೈ ಜೋಡಿಸಿದ್ದರು ಎನ್ನುವುದನ್ನು ಸಾಕ್ಷ್ಯ ಸಮೇತ ಸಿಸಿಬಿ ಪೊಲೀಸರು ಬಿಚ್ಚಿಟ್ಟಿದ್ದಾರೆ.

    ಕೆಪಿಎಲ್‍ನ ಎರಡು ಟೀಂಗಳ ಮಾಲೀಕರಾದ ಆಲಿ, ಅರವಿಂದ ರೆಡ್ಡಿ, ಆಟಗಾರರಾದ ಗೌತಮ್, ಖಾಜಿ ವಿರುದ್ಧ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ಸಿಸಿಬಿ ಪೊಲೀಸರು ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್‍ನಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳ ಪ್ರಕಾರ, ಮೊದಲು ಅಂತರರಾಷ್ಟ್ರೀಯ ಮಟ್ಟದ ಬುಕ್ಕಿಗಳಿಂದ ಕೆಪಿಎಲ್ ತಂಡಗಳ ಮಾಲೀಕರ ಸಂಪರ್ಕವಾಗಿತ್ತು. ಬಳಿಕ ಮ್ಯಾಚ್ ಫಿಕ್ಸಿಂಗ್ ಬಗ್ಗೆ ದುರಾಲೋಚನೆಯುಳ್ಳ ಮಾಲೀಕರು ತಮ್ಮ ತಂಡದ ಕೆಲ ಆಟಗಾರರನ್ನು ಸಂಪರ್ಕಿಸಿದ್ದರು. ನಂತರ ಆಟಗಾರರು ಹಾಗೂ ಬುಕ್ಕಿಗಳು ಜೊತೆ ಅನ್ಯೋನ್ಯತೆ ಬೆಳೆಸಿ ಫಿಕ್ಸಿಂಗ್ ನಡೆದಿತ್ತು ಎಂದು ತಿಳಿಸಲಾಗಿದೆ.

    ಮ್ಯಾಚ್ ಫಿಕ್ಸಿಂಗ್ ಟ್ರಿಕ್ಸ್:
    * ಒಂದು ಓವರಿನಲ್ಲಿ 10ಕ್ಕೂ ಹೆಚ್ಚು ರನ್ ನೀಡುವಂತೆ ಡೀಲ್
    * ಅತಿ ಹೆಚ್ಚು ಬಾಲ್‍ಗಳಲ್ಲಿ ಕಡಿಮೆ ರನ್ ಗಳಿಸುವಂತೆ ಫಿಕ್ಸ್
    * ಫುಲ್ ಸ್ಲೀವ್ ಶರ್ಟ್ ಅನ್ನು ಅರ್ಧಕ್ಕೆ ಏರಿಸಿಕೊಂಡು ಸಿಗ್ನಲ್
    * ಪದೇ ಪದೇ ಬ್ಯಾಟ್‍ಗಳನ್ನು ಬದಲಿಸುವ ರೀತಿ ಸಿಗ್ನಲ್ ನೀಡುತ್ತಿದ್ದ ಫಿಕ್ಸರ್ಸ್

  • ಅಂತರಾಷ್ಟ್ರೀಯ ಬುಕ್ಕಿ ಜೀತಿನ್‍ಗೆ ಹೊಸ ಫೋನ್ ಕೊಡಿಸಿದ್ದ ಅಂಕಲ್ ವಿರುದ್ಧ ಕೇಸ್

    ಅಂತರಾಷ್ಟ್ರೀಯ ಬುಕ್ಕಿ ಜೀತಿನ್‍ಗೆ ಹೊಸ ಫೋನ್ ಕೊಡಿಸಿದ್ದ ಅಂಕಲ್ ವಿರುದ್ಧ ಕೇಸ್

    ಬೆಂಗಳೂರು: ಕೆಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಅಂತರಾಷ್ಟ್ರೀಯ ಬುಕ್ಕಿ ಜೀತಿನ್‍ನ ಅಂಕಲ್ ವಿರುದ್ಧ ಸಿಸಿಬಿಯಲ್ಲಿ ಕೇಸ್ ದಾಖಲಾಗಿದೆ.

    ತಮಿಳುನಾಡು ಮೂಲದ ಅಂಕಲ್ ತನಿಖೆಗೆ ಹಾಜರಾಗುವುದಕ್ಕೂ ಮುನ್ನ ದಿನ ಬುಕ್ಕಿ ಜೀತಿನ್ ಗೆ ಹೊಸದೊಂದು ಫೋನ್ ಕೊಡಿಸಿ ಕಳುಹಿಸಿದ್ದಾರೆ. ಆರೋಪಿ ಜೀತಿನ್‍ಗೆ ಆತನ ಅಂಕಲ್ ಹೊಸ ಫೋನ್ ಕೊಡಿಸಿ ಕಳುಹಿಸಿದ್ದರ ಹಿಂದೆ ಸಿಸಿಬಿ ಪೊಲೀಸರ ತನಿಖೆಯ ಜಾಡು ತಪ್ಪಿಸುವ ಉದ್ದೇಶ ಅಡಗಿತ್ತೆಂದು ತನಿಖಾಧಿರಿಗಳ ತನಿಖೆಯ ವೇಳೆ ಸತ್ಯ ಬಹಿರಂಗವಾಗಿದೆ.

    ಆರೋಪಿ ಜೀತಿನ್ ಹಳೆಯ ಫೋನಿನಲ್ಲಿ ಬುಕ್ಕಿ ಮಾಡಿದ್ದ ಫಿಕ್ಸಿಂಗ್ ಪ್ರಕರಣದ ಡೇಟಾಗಳಿದ್ದವು. ಆರೋಪಿ ಜೀತಿನ್ ಫೋನ್ ನಲ್ಲಿರುವ ಡೇಟಾ ಎಲ್ಲವೂ ತನಿಖಾಧಿಕಾರಿಗಳ ಕೈಗೆ ಸಿಕ್ಕರೆ ಜೀತಿನ್ ಮತ್ತಷ್ಟು ಸಂಕಷ್ಟ ಸಿಲುಕುತ್ತಾನೆಂದು ಹೊಸದೊಂದು ಫೋನ್ ಖರೀದಿಸಿ ಆರೋಪಿಗೆ ಕೊಟ್ಟು ಕಳುಹಿಸಿದ್ದಾನೆ. ಸೋಮವಾರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ನೇತೃತ್ವದಲ್ಲಿ ಕಮಿಷನರ್ ಕಚೇರಿಯಲ್ಲಿ ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಆರೋಪಿ ಜೀತಿನ್ ಮತ್ತೊಂದು ಮುಖವಾಡ ಬಯಲಾಗಿದೆ.

    ತನಿಖಾಧಿಕಾರಿಗಳ ತಂಡ ತನಿಖೆಯ ವೇಳೆ ಆರೋಪಿಯಿಂದ ಫೋನ್ ಪಡೆದು ನೋಡಿದಾಗ ಯಾವುದೇ ಡೇಟಾಗಳು ಇರದೇ ಇರೋದನ್ನು ಕಂಡ ತನಿಖಾಧಿಕಾರಿಗಳು ಕೇರಳಿ ಕೆಂಡವಾಗಿದ್ದಾರೆ. ಯಾವಾಗ ತನಿಖಾಧಿಕಾರಿಗಳು ಜೀತಿನ್ ಮೇಲೆ ಮುಗಿಬಿದ್ದರೋ ಆಗ ಹೊಸ ಫೋನ್ ಅಸಲಿ ಸತ್ಯ ಬಿಚ್ಚಿಟ್ಟಿದ್ದಾನೆ. ಇದನ್ನೂ ಓದಿ:ಕೆಪಿಎಲ್ ಬೆಟ್ಟಿಂಗ್ ಪ್ರಕರಣ – ಅಂತರಾಷ್ಟ್ರೀಯ ಬುಕ್ಕಿ ಸಿಸಿಬಿ ವಶಕ್ಕೆ

    ಆರೋಪಿ ಬಿಚ್ಚಿಟ್ಟ ಸತ್ಯದ ಆಧಾರದ ಮೇಲೆ ಆರೋಪಿ ಜೀತಿನ್‍ನ ಅಂಕಲ್ ವಿರುದ್ಧ ನಿನ್ನೆ ಮತ್ತೊಂದು ಕೇಸ್ ದಾಖಲಾಗಿದೆ. ಪೊಲೀಸರ ತನಿಖೆಯ ಜಾಡು ತಪ್ಪಿಸಲು ಪ್ರಯತ್ನಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಜೀತಿನ್ ಅಂಕಲ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.

  • ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಬೆಂಗಳೂರು: ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಎಲ್ ಹನಿಟ್ರ್ಯಾಪ್ ಪ್ರಕರಣದಲ್ಲಿ ನಿಮ್ಮ ಮತ್ತು ವಂದನಾ ಜೈನ್ ಹೆಸರು ಕೇಳಿ ಬರುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಕೆಪಿಎಲ್ ಅಂದ್ರೇನು ಗೊತ್ತಿಲ್ಲ. ಕೆಪಿಎಲ್ ಕರ್ನಾಟಕ ಪ್ರೀಮಿಯರ್ ಲೀಗ್ ಅಂತಾ ಗೊತ್ತಾಗಿದ್ದೇ ಇವತ್ತು ಎಂದು ಹೇಳಿದ್ದಾರೆ.

    ನನಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೊತ್ತು. ಕೆಪಿಎಲ್ ಮೂಲಕ ವಂದನಾ ನನಗೆ ಪರಿಚಯವಿಲ್ಲ. ಆಕೆಯ ಜೊತೆ ಯಾವ ಗೆಳೆತನವೂ ನನಗೆ ಇಲ್ಲ. ಆಕೆ ನಿನ್ನ ಬಿಡೋದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ನನಗೆ ಜೀವ ಭಯವಿದೆ ಎಂದು ಸಂಜನಾ ತಿಳಿಸಿದ್ದಾರೆ.

    ಇದೇ ವೇಳೆ ವಿಸ್ಕಿ ಬಾಟೆಲ್ ನಲ್ಲಿ ನಾನು ಹೊಡೆದ ಎಂದು ಹೇಳಿದವರು ಯಾರು? ಯಾವ ಆಧಾರ ಇದೆ ನಿಮ್ಮ ಬಳಿ? ನಾನು ಎಲ್ಲಿ ವಿಸ್ಕಿ ಬಾಟಲ್‍ನಿಂದ ಹೊಡೆದೆ. ನಿಮ್ಮ ಬಳಿ ಏನಾದರೂ ಸಿಸಿಟಿವಿ ಇದ್ಯಾ ಎಂದರು. ಇದಕ್ಕೆ ಸಂಜನಾ ಗಲ್ರಾಣಿ ವಿಸ್ಕಿ ಬಾಟೆಲ್ ನಲ್ಲಿ ಹೊಡೆದರು ಅಂತಾ ವಂದನಾರೇ ಹೇಳಿದ್ದು ಎಂದು ಮಾಧ್ಯಮದವರು ಹೇಳಿದಾಗ, ನಾನೇನು ಕುಡಿದು ತೂರಾಡುತ್ತಿದ್ನಾ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ. ಇದನ್ನು ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ನಾನು ಗಲಾಟೆಯಾದಾಗ ಕುಡಿದಿರಲಿಲ್ಲ. ಇನ್ನು ವಿಸ್ಕಿ ಬಾಟೆಲ್ ನಿಂದ ಹೊಡೆಯೋದು ಎಲ್ಲಿಂದ ಬಂತು? ನಾನು ನನ್ನ ಕಾರ್ ಬಳಿ ಹೋಗುವಾಗ ತೂರಾಡ್ಕೊಂಡು ಹೋಗುವ ವೀಡಿಯೊವನ್ನು ಅವರೇ ಬಿಟ್ಟಿದ್ದಾರಲ್ಲ. ಸ್ಟಿಫ್ ಆಗಿ ನನ್ನ ಕಾರಿಗೆ ಹೋಗಿದ್ದೇನೆ. ಆಕೆಗೆ ಪ್ರಚಾರದ ಹುಚ್ಚಿಂದ ನನ್ನ ಮೇಲೆ ಇಲ್ಲಸಲ್ಲದ ದೂರು ಹೊರಿಸಿದ್ದಾಳೆ ಎಂದು ವಂದನಾ ಜೈನ್ ವಿರುದ್ಧ ಗಲ್ರಾನಿ ಗರಂ ಆಗಿದ್ದಾರೆ.

  • ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು – ಶೀಘ್ರವೇ ಮೂವರ ವಿಚಾರಣೆ

    ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು – ಶೀಘ್ರವೇ ಮೂವರ ವಿಚಾರಣೆ

    ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯೊಂದು ಬಯಲಾಗಿದೆ.

    ಸ್ಯಾಂಡಲ್‍ವುಡ್ ನಟಿಯರ ಪಾತ್ರದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಒಬ್ಬರು ಒಂದು ಕಾಲದ ಸ್ಟಾರ್ ನಟಿ, ಇನ್ನಿಬ್ಬರು ಎರಡು ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡವರಾಗಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಇವರು ಹೆಸರುವಾಸಿಯಾಗಿದ್ದಾರೆ. ಶೀಘ್ರವೇ ಈ ಮೂವರು ನಟಿಯರನ್ನು ವಿಚಾರಣೆ ಮಾಡಲಾಗುವುದು ಎಂಬ ಸ್ಫೋಟಕ ರಹಸ್ಯವನ್ನು ಪೊಲೀಸ್ ಕಮಿಷನರ್ ಬಯಲು ಮಾಡಿದ್ದಾರೆ.

    ಹನಿಟ್ರ್ಯಾಪ್‍ನಲ್ಲಿ ಸಿಲುಕಿರುವ ಓರ್ವಳು ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದಳು. ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದ ಈಕೆಗೆ ಇತ್ತೀಚೆಗೆ ಅವಕಾಶಗಳ ಕೊರತೆ ಕಂಡುಬಂತು. ಸ್ಟಾರ್ ಹೀರೋಗಳ ಜೊತೆಗೂ ಈಕೆ ನಟಿಸಿದ್ದಾಳೆ. ಅಲ್ಲದೆ ನಿರ್ಮಾಪಕರ ಜೊತೆಗೂ ಈಕೆ ನಂಟು ಹೊಂದಿದ್ದಾಳೆ. ಈಕೆ ಕನ್ನಡದ ನಟಿಯಲ್ಲ ಬದಲಾಗಿ ಪರರಾಜ್ಯ ನಟಿಯಾಗಿದ್ದಾಳೆ.

    ಎರಡನೇಯ ನಟಿ ಕೂಡ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. ಹೀರೋಯಿನ್ ಜೊತೆಗೆ ಸಹನಟಿಯಾಗಿ ಅಭಿನಯ ಮಾಡಿದ್ದಾಳೆ. ಈ ನಟಿ ಕರ್ನಾಟಕ ಮೂಲದವಳು ಎಂದು ಹೇಳಲಾಗುತ್ತಿದ್ದು, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಬಹುಬೇಡಿಕೆ ನಟಿ ಅಲ್ಲದಿದ್ದರೂ ಈಕೆಗೆ ಬೇಡಿಕೆ ಬಹಳ ಇತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಮೂರನೇಯವಳು ಒಂದು ರೀತಿ ಬಹುಭಾಷಾ ನಟಿಯಾಗಿದ್ದಾಳೆ. ಹಸಿಬಿಸಿ ದೃಶ್ಯಾವಳಿಗಳಿಗೆ ಈ ನಟಿ ಹೆಸರುವಾಸಿವಾಗಿದ್ದು, ಕನ್ನಡ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲೂ ನಟನೆ ಮಾಡಿದ್ದಾಳೆ. ಈಕೆಗೆ ಉದ್ಯಮಿಗಳು, ಅಧಿಕಾರಿಗಳ ಜೊತೆಗೂ ನಂಟಿದೆ. ಈ ಹಿಂದೆಯೂ ಈಕೆಯ `ವ್ಯವಹಾರ’ ಭಾರೀ ಸುದ್ದಿಯಾಗಿತ್ತು ಎಂಬುದಾಗಿ ತಿಳಿದುಬಂದಿದೆ.

  • ಸುಂದರಿಯರ ಸೆರಗಿನಲ್ಲಿ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್!

    ಸುಂದರಿಯರ ಸೆರಗಿನಲ್ಲಿ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್!

    – ಹನಿಟ್ರ್ಯಾಪ್ ಬೆನ್ನತ್ತಿದೆ ಸಿಸಿಬಿ

    ಬೆಂಗಳೂರು: ಇತ್ತೀಚೆಗಷ್ಟೇ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಬುಕ್ಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೊಂದು ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬೆಳಕಿಗೆ ಬಂದಿದೆ.

    ಇಷ್ಟು ದಿನ ಬ್ಯಾಟ್ಸ್ ಮನ್, ಬೌಲರ್ ಗಳು ಫಿಕ್ಸಿಂಗ್ ಆಗುತ್ತಾ ಇದ್ದರು. ಈ ಬ್ಯಾಟ್ಸ್ ಮನ್, ಬೌಲರ್ ಗಳನ್ನು ಫಿಕ್ಸ್ ಮಾಡೋದಕ್ಕೆ ರಾಣಿ ಜೇನು ಬರುತ್ತಿತ್ತು. ಫಿಕ್ಸಿಂಗ್ ಮಾಡೋದಕ್ಕೆ ಸುಂದರಿಯರ ಬಳಸಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸುಂದರಿಯರ ಸೆರಗಿನಲ್ಲಿ ಇರುತ್ತಿದ್ದವರು, ಫಿಕ್ಸಿಂಗ್ ಮಾಡೋದಕ್ಕೆ ನಿಂತಿದ್ರು. ಇದು ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ನಯಾ ಅವಾಂತರವಾಗಿದೆ. ಡ್ರಮರ್ ಜೊತೆ ಫಿಕ್ಸಿಂಗ್ ಮಾಡಿದ್ದವರು, ಬುಕ್ಕಿಗಳನ್ನೂ ಒನ್ ಟೂ ಒನ್ ಭೇಟಿಯಾಗಿದ್ರು. ಆದರೆ ಇದೀಗ ಕೆಪಿಎಲ್ ಅಲ್ಲಿ ಸುಂದರಿಯರ ಸಹವಾಸ ಮಾಡುತ್ತಿದ್ದಾರೆ.ಇದನ್ನೂ ಓದಿ: ಕೆಪಿಎಲ್ ಫಿಕ್ಸಿಂಗ್: ಅಂತಾರಾಷ್ಟ್ರೀಯ ಬುಕ್ಕಿ ಸಿಸಿಬಿ ಬಲೆಗೆ

    ಕೆಪಿಎಲ್ ಫಿಕ್ಸ್ ಮಾಡೋದಕ್ಕೆ ಚಿಯರ್ ಗರ್ಲ್ಸ್ ಅನ್ನು ಬಳಸಿಕೊಳ್ತಾ ಇದ್ರಂತೆ. ಚಿಯರ್ ಗರ್ಲ್ಸ್ ಮೂಲಕ ಬ್ಯಾಟ್ಸ್ ಮನ್ ಮತ್ತು ಬೌಲರ್ ಫಿಕ್ಸ್ ಮಾಡುತ್ತಾ ಇದ್ದರು. ಒಟ್ಟಿನಲ್ಲಿ ಹನಿಟ್ರ್ಯಾಪ್ ಮಾಡೋ ಮೂಲಕ ಬುಕ್ಕಿಗಳು ಆಟಗಾರರನ್ನು ಸೆಳೆದ ಆರೋಪವೂ ಇದೆ. ಸದ್ಯಕ್ಕೆ ಆ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ತನಿಖೆಗೆ ಇಳಿದಿದ್ದಾರೆ.

    ಕಳೆದ ಸೋಮವಾರ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಹರ್ಯಾಣ ಮೂಲದ ಪಿ ಸಯ್ಯಮ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬವೇಶ್ ಬಪ್ನಾ ನೆರವಿನಿಂದ ಸಯ್ಯಮ್ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಹೀಗಾಗಿ ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ ವೆಸ್ಟ್ ಇಂಡೀಸ್‍ನಲ್ಲಿ ಬಂಧನ ಮಾಡಿದ್ದರು.

  • ಕೆಪಿಎಲ್ ಫಿಕ್ಸಿಂಗ್: ಅಂತಾರಾಷ್ಟ್ರೀಯ ಬುಕ್ಕಿ ಸಿಸಿಬಿ ಬಲೆಗೆ

    ಕೆಪಿಎಲ್ ಫಿಕ್ಸಿಂಗ್: ಅಂತಾರಾಷ್ಟ್ರೀಯ ಬುಕ್ಕಿ ಸಿಸಿಬಿ ಬಲೆಗೆ

    ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಕೆಲ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಅಂತಾರಾಷ್ಟ್ರೀಯ ಬುಕ್ಕಿಯನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

    ಹರ್ಯಾಣ ಮೂಲದ ಪಿ ಸಯ್ಯಮ್ ಬಂಧಿತ ಆರೋಪಿಯಾಗಿದ್ದು, ಬವೇಶ್ ಬಪ್ನಾ ನೆರವಿನಿಂದ ಸಯ್ಯಮ್ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ ವೆಸ್ಟ್ ಇಂಡೀಸ್‍ನಲ್ಲಿ ಬಂಧನ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಕೆಪಿಎಲ್ ಟೂರ್ನಿಯ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ನಾಯಕ ಸಿಎಂ ಗೌತಮ್ ಹಾಗೂ ಆಟಗಾರ ಅಬ್ರಾರ್ ಖಾಜಿರನ್ನು ಪೊಲೀಸರು ಬಂಧಿಸಿದ್ದರು. 2019ರ ಕೆಪಿಎಲ್ ಆವೃತ್ತಿಯ ಫೈನಲ್ ಪಂದ್ಯದ ಬ್ಯಾಟಿಂಗ್ ಸಂದರ್ಭದಲ್ಲಿ ಗೌತಮ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು. ಇದಕ್ಕೆ 20 ಲಕ್ಷ ರೂ. ಹಣ ಪಡೆದಿದ್ದರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದರು. ಸದ್ಯ ಇವರೊಂದಿಗೆ ಸಂಪರ್ಕದಲ್ಲಿದ್ದ ಬುಕ್ಕಿಯನ್ನು ಬಂಧನ ಮಾಡಿರುವ ಪೊಲೀಸರು ಪ್ರಕರಣದ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

    ಫಿಕ್ಸಿಂಗ್ ವಿಚಾರದಲ್ಲಿ ಸಿಸಿಬಿ ಪೊಲೀಸರಿಗೆ ಹಲವು ಆಟಗಾರರ ಮೇಲೆ ಅನುಮಾನ ಮೂಡಿದ್ದು, ಈ ಕುರಿತ ಆಧಾರಗಳನ್ನು ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆಟಗಾರರ ಈ ಕಳ್ಳಾಟ ಬಯಲಾದ ಪರಿಣಾಮ ಕೆಎಸ್‍ಸಿಎ ಹಾಗೂ ಬಿಸಿಸಿಐ ಕಳಂಕವನ್ನು ಎದುರಿಸಿದೆ. ಈಗಾಗಲೇ ಬಂಧನವಾಗಿರುವ ಆಟಗಾಟರರನ್ನು ಸಮಿತಿ ಎಲ್ಲಾ ಮಾದರಿ ಕ್ರಿಕೆಟಿನಿಂದ ಅಮಾನತು ಮಾಡಿದೆ.

    ಬಳ್ಳಾರಿ ತಂಡದ ನಾಯಕರಾಗಿದ್ದ ಸಿಎಂ ಗೌತಮ್ ಭಾರತ ಪರ ‘ಎ’ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೇ ಕರ್ನಾಟಕ ಹಾಗೂ ಗೋವಾ ತಂಡಗಳ ಪರ ಆಡಿದ್ದರು. ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ತಂಡಗಳ ಪರ ಆಡಿದ್ದರು. 2019ರ ಕೆಪಿಎಲ್ ಟೂರ್ನಿಯಲ್ಲಿ ಕ್ರಿಕೆಟಿಗ ನಿಶಾಂತ್ ಸಿಂಗ್ ಶೇಖಾವತ್‍ರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ದೊರೆತ ಮಾಹಿತಿ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿತ್ತು.

  • ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ- ಇಬ್ಬರು ಆಟಗಾರರು ಅರೆಸ್ಟ್

    ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ- ಇಬ್ಬರು ಆಟಗಾರರು ಅರೆಸ್ಟ್

    ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಪಂದ್ಯಾವಳಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಕರ್ನಾಟಕ ತಂಡದ 2 ಆಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆ ತನಿಖೆ ತೀವ್ರಗೊಳಿಸಿದ ಸಿಸಿಬಿ ಪೊಲೀಸರ ಬಲೆಗೆ ಬಳ್ಳಾರಿ ಟಸ್ಕರ್ಸ್ ತಂಡದ ಇಬ್ಬರು ಆಟಗಾರರು ಸಿಕ್ಕಿಬಿದ್ದಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಹಾಗೂ ಅಬ್ರರ್ ಖಾಜಿ ಬಂಧನಕ್ಕೊಳಗಾದ ಆಟಗಾರರು. ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುವುದಾಗಿ ಆಟಗಾರರು 20 ಲಕ್ಷ ರೂ. ಹಣ ಪಡೆದಿದ್ದರು. ಬುಕ್ಕಿಗಳ ಬಳಿ ಹಣ ಪಡೆದು ಇಬ್ಬರು ಆಟಗಾರರು ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

    ಸಿಎಂ ಗೌತಮ್ ಅವರು ಕರ್ನಾಟಕದ ಪರವಾಗಿ ರಣಜಿ ಪಂದ್ಯಗಳಲ್ಲಿ, ಐಪಿಎಲ್‌ನಲ್ಲಿ ಮುಂಬೈ, ಆರ್‌ಸಿಬಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಟವಾಡಿದ್ದರು. ಇತ್ತ ಅಬ್ರರ್ ಖಾಜಿ ಕೂಡ ಕರ್ನಾಟಕ ತಂಡದ ರಣಜಿ ಆಟಗಾರರಾಗಿದ್ದಾರೆ. ಸದ್ಯ ಇಬ್ಬರು ಆಟಗಾರರನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಆಗಸ್ಟ್ 31ರಂದು ಮೈಸೂರಿನಲ್ಲಿ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಕೆಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಇದೇ ವೇಳೆ ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವಿದೆ. ಈಗಾಗಲೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ ಹಾಗೂ ಬ್ಯಾಟ್ಸ್‌ಮನ್ ವಿಶ್ವನಾಥನ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ದೆಹಲಿಯ ಇಬ್ಬರು ಬುಕ್ಕಿಗಳ ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಈ ಹಿನ್ನೆಲೆ ಬುಕ್ಕಿಗಳಾದ ಜತ್ತಿನ್, ಸಯ್ಯಾಂ ವಿದೇಶದಲ್ಲಿ ತಲೆ ಮರಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

  • ಒಂದೇ ಪಂದ್ಯದಲ್ಲಿ ಶತಕದೊಂದಿಗೆ 8 ವಿಕೆಟ್ ಪಡೆದು ದಾಖಲೆ ಬರೆದ ಕನ್ನಡಿಗ

    ಒಂದೇ ಪಂದ್ಯದಲ್ಲಿ ಶತಕದೊಂದಿಗೆ 8 ವಿಕೆಟ್ ಪಡೆದು ದಾಖಲೆ ಬರೆದ ಕನ್ನಡಿಗ

    ಬೆಂಗಳೂರು: ಕರ್ನಾಟಕದ ಆಟಗಾರ ಕೆ ಗೌತಮ್ ಒಂದೇ ಪಂದ್ಯದಲ್ಲಿ ಶತಕದೊಂದಿಗೆ 8 ವಿಕೆಟ್ ಪಡೆದು ಟಿ-20 ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

    30 ವರ್ಷದ ಕೃಷ್ಣಪ್ಪ ಗೌತಮ್ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ 15 ಪಂದ್ಯದಲ್ಲಿ ಉತ್ತಮ ಆಲ್‍ರೌಂಡರ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದಾರೆ.

    ಪ್ರಸಕ್ತ ಸಾಲಿನ ಕೆಪಿಎಲ್‍ನಲ್ಲಿ ಬಳ್ಳಾರಿ ಟಸ್ಕರ್ಸ್ ಪರವಾಗಿ ಆಡುತ್ತಿರುವ ಗೌತಮ್ ಶುಕ್ರವಾರ ನಡೆದ ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 29 ಎಸೆತದಲ್ಲಿ ಶತಕ ಬಾರಿಸುವುದರ ಮೂಲಕ ಕೆಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದರು. ಒಟ್ಟು 56 ಎಸೆತೆಗಳಲ್ಲಿ 7 ಬೌಂಡರಿ ಮತ್ತು 13 ಭರ್ಜರಿ ಸಿಕ್ಸರ್ ಸಮೇತ 134 ರನ್ ಹೊಡೆದು ಅಜೇಯರಾಗಿ ಉಳಿದು, ಕೆಪಿಎಲ್‍ನಲ್ಲಿ ವೈಯಕ್ತಿಕ ಅತೀ ಹೆಚ್ಚು ರನ್ ಸ್ಕೋರ್ ಮಾಡಿದವರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

    ಇನ್ನೊಂದು ದಾಖಲೆ ಬರೆದಿರುವ ಗೌತಮ್ ಅವರು ಟಿ-20 ಪಂದ್ಯವೊಂದರಲ್ಲಿ ಒಟ್ಟು ನಾಲ್ಕು ಓವರ್ ಬೌಲ್ ಮಾಡಿ ಅದರಲ್ಲಿ ಭರ್ಜರಿ 8 ವಿಕೆಟ್ ಕಿತ್ತು ಕೇವಲ 15 ರನ್ ನೀಡಿ ಟಿ-20 ಇತಿಹಾಸದಲ್ಲಿ ಯಾವ ಬೌಲರ್ ಮಾಡದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಬಳ್ಳಾರಿಗೆ 70 ರನ್‍ಗಳ ಭರ್ಜರಿ ಜಯವನ್ನು ತಂದು ಕೊಟ್ಟಿದ್ದಾರೆ.

    ಕೆಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್ ಬಾರಿಸಿದ ಗೌತಮ್ ಬೌಂಡರಿ ಮತ್ತು ಒಟ್ಟು 106 ರನ್ ಹೊಡೆದು ದಾಖಲೆ ನಿರ್ಮಿಸಿದ್ದಾರೆ. ಗೌತಮ್ ಅವರ ಈ ಪ್ರದರ್ಶನ ಅಧಿಕೃತವಾಗಿ ಉಳಿಯದೇ ಇದ್ದರು. ಭಾರತ ಎ ತಂಡದಲ್ಲಿ ಕಳೆದ ಕೆಲವು ವರ್ಷಗಳಿಂದ ಆಡುತ್ತಿರುವ ಗೌತಮ್ ಈ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಕನ್ನಡಿಗನ ಈ ಸಾಧನೆಯನ್ನು ಕೆಲ ಅಂತಾರಾಷ್ಟೀಯ ಕ್ರಿಕೆಟಿಗರು ಕೂಡ ಮೆಚ್ಚಿಕೊಂಡಿದ್ದು, ಆಸ್ಟ್ರೇಲಿಯಾದ ಮಾಜಿ ಆಟಗಾರ ಡೀನ್ ಜೋನ್ಸ್, ಗೌತಮ್ ಅವರ ಆಟದ ಕುರಿತು ಟ್ವೀಟ್ ಮಾಡಿದ್ದು, ಕೆ ಗೌತಮ್ ಅವರ 134 ರನ್ ಮತ್ತು 8 ವಿಕೆಟ್ ಪಡೆದಿರುವುದು ಟಿ-20 ಇತಿಹಾಸದಲ್ಲೇ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎಂದಿದ್ದಾರೆ.

    ಇದರ ಜೊತೆಗೆ ಮಾಜಿ ಭಾರತದ ಆಟಗಾರ ಆಕಾಶ್ ಚೋಪ್ರಾ ಅವರು ಟ್ವೀಟ್ ಮಾಡಿದ್ದು, ಟಿ-20 ಯಲ್ಲಿ 134 ರನ್ ಹೊಡೆಯುವುದು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮತ್ತು ಅದೇ ಪಂದ್ಯದಲ್ಲಿ 8 ವಿಕೆಟ್ ಪಡೆಯುವುದು ಅಸಾಧಾರಣ. ಆದರೆ ಕೆ. ಗೌತಮ್ ಅವರು ಎರಡು ದಾಖಲೆಗಳನ್ನು ಒಂದೇ ಪಂದ್ಯದಲ್ಲಿ ಮಾಡಿದ್ದಾರೆ. ಇದೂ ಅವಾಸ್ತವ ಎಂದು ಬರೆದುಕೊಂಡಿದ್ದಾರೆ.

    ಕೆ. ಗೌತಮ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುತ್ತಾರೆ. ಗೌತಮ್ ಅವರ ಈ ಅಮೋಘವಾದ ಆಟವನ್ನು ಮೆಚ್ಚಿ ರಾಜಸ್ಥಾನ್ ರಾಯಲ್ಸ್ ತಂಡವು ಟ್ವೀಟ್ ಮಾಡಿದ್ದು, 56 ಎಸೆತದಲ್ಲಿ 134 ರನ್ ಜೊತೆಗೆ 8 ವಿಕೆಟ್ ಇದು ವಿಶ್ವ ದಾಖಲೆ. ಇದು ಕೃಷ್ಣಪ್ಪ ಪ್ರೀಮಿಯರ್ ಲೀಗ್ ಎಂದು ಬರೆದುಕೊಂಡಿದೆ.