Tag: ಕೆಪಿಎಂಇ

  • ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

    ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

    ಬೆಳಗಾವಿ: ವೈದ್ಯರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆ(ಕೆಪಿಎಂಇ) ವಿಧಾನಸಭೆಯಲ್ಲಿ ಮಂಡನೆಯಾಗಿದೆ.

    ಖಾಸಗಿ ವೈದ್ಯರ ಮುಷ್ಕರದಿಂದ 60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹಠ ಸಾಧಿಸಿ ಕೊನೆಗೂ ಮಂಡಿಸಿದ್ದಾರೆ.

    ಮಸೂದೆಯಲ್ಲಿರುವ ಪ್ರಮುಖ ಅಂಶಗಳು:
    ಮೂಲ ಮಸೂದೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟರೆ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಅಂಶವಿದೆ ಎಂದು ಹೇಳಲಾಗಿತ್ತು. ಆದರೆ ಮಂಡನೆಯಾಗಿರುವ ಮಸೂದೆಯಲ್ಲಿ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವನ್ನು ಕೈಬಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕು, ಸರ್ಕಾರಿ ಯೋಜನೆಯಡಿ ನೀಡುವ ಚಿಕಿತ್ಸೆಗಳಿಗೆ ಸರ್ಕಾರವೇ ದರ ನಿಗದಿ ಪಡಿಸಬೇಕು ಎನ್ನುವ ಅಂಶವಿದೆ.

    ನಿಗದಿಯಾಗಿರುವ ದರ, ವೆಚ್ಚದ ಪಟ್ಟಿಯನ್ನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೆಬ್‍ಸೈಟ್‍ನಲ್ಲಿ ಪ್ರದರ್ಶಿಸಬೇಕು. ನಿಗದಿತ ಅವಧಿಯೊಳಗೆ ಹೆಚ್ಚಿಗೆ ಕಾಯಿಸದೇ ರೋಗಿಗಳೊಂದಿಗೆ ಸಮಾಲೋಚನೆ ಮಾಡಬೇಕು. ಸಮಾಲೋಚನಾ ಕೊಠಡಿಗೆ ರೋಗಿಯ ಸಂಬಂಧಿ ಅಥವಾ ಸ್ನೇಹಿತರಿಗೆ ಅವಕಾಶ ನೀಡಬೇಕು ಎನ್ನುವ ಅಂಶಗಳು ಮಸೂದೆಯಲ್ಲಿದೆ.

    ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕುಂದುಕೊರತೆ ದೂರು ಪ್ರಾಧಿಕಾರ ರಚನೆಯಾಗಲಿದ್ದು, ಈ ಸಮಿತಿಯಲ್ಲಿ ಡಿಎಚ್‍ಓ, ಜಿಲ್ಲಾ ಆಯುಷ್ ಅಧಿಕಾರಿ, ಐಎಂಎ ಓರ್ವ ಪ್ರತಿನಿಧಿ, ಜಿಲ್ಲಾಮಟ್ಟದ ಮಹಿಳಾ ಪ್ರತಿನಿಧಿ ಇರುತ್ತಾರೆ. ದೂರು ಪ್ರಾಧಿಕಾರದಲ್ಲಿ ವಾದಿಸಲು ಅವಕಾಶ ನೀಡಲಾಗಿದ್ದು, ಆರೋಪಿತ ವೈದ್ಯರು ಅಥವಾ ಸಂಸ್ಥೆ ವಕೀಲರನ್ನು ನೇಮಿಸಿಕೊಳ್ಳಬಹುದು. ತುರ್ತು ಚಿಕಿತ್ಸಾ ಸಮಯದಲ್ಲಿ ಮುಂಗಡ ಹಣಕ್ಕೆ ರೋಗಿಗಳ ಸಂಬಂಧಿಕರಿಗೆ ಒತ್ತಾಯಿಸುವಂತಿಲ್ಲ. ಅಷ್ಟೇ ಅಲ್ಲದೇ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರೆ ಶವ ನೀಡದೇ ಬಾಕಿ ಹಣಕ್ಕೆ ಒತ್ತಾಯಿಸಬಾರದು ಎನ್ನುವ ಅಂಶಗಳಿವೆ.

    ಮೂಲ ಮಸೂದೆಯಲ್ಲಿ ಆಸ್ಪತ್ರೆಯಲ್ಲಿ ನೀಡಲಾಗುವ ಎಲ್ಲ ಚಿಕಿತ್ಸೆಗಳಿಗೆ ಆಸ್ಪತ್ರೆಗಳು ಎಷ್ಟು ದರವನ್ನು ವಿಧಿಸಬೇಕು ಎನ್ನುವ ಅಂಶವನ್ನು ಸರ್ಕಾರವೇ ನಿಗದಿ ಪಡಿಸಲಿದೆ. ಸರ್ಕಾರ ನಿಗದಿಪಡಿಸಿದ ಪಟ್ಟಿಯನ್ನು ಆಸ್ಪತ್ರೆಗಳು ಪ್ರದರ್ಶಿಸಬೇಕು ಮತ್ತು ಅಷ್ಟೇ ದರವನ್ನು ಪಡೆಯಬೇಕು ಎನ್ನುವ ಅಂಶವಿತ್ತು. ಆದರೆ ವೈದ್ಯರ ಜೊತೆಗೆ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ನಡೆಸಿದ ಸಂಧಾನ ಸಭೆಯ ಬಳಿಕ ಈ ಅಂಶಗಳನ್ನು ಕೈಬಿಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  • ಬುದ್ಧಿವಂತರಾದ ನಿಮಗೆ ಸಾಮಾನ್ಯ ಜ್ಞಾನ ಇಲ್ಲವೇ? ಹೈಕೋರ್ಟ್ ಖಾಸಗಿ ವೈದ್ಯರಿಗೆ ಚಾಟಿ ಬೀಸಿದ್ದು ಹೀಗೆ

    ಬುದ್ಧಿವಂತರಾದ ನಿಮಗೆ ಸಾಮಾನ್ಯ ಜ್ಞಾನ ಇಲ್ಲವೇ? ಹೈಕೋರ್ಟ್ ಖಾಸಗಿ ವೈದ್ಯರಿಗೆ ಚಾಟಿ ಬೀಸಿದ್ದು ಹೀಗೆ

    ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರು ತಕ್ಷಣವೇ ಮುಷ್ಕರವನ್ನು ಕೈಬಿಟ್ಟು ಸೇವೆಗೆ ಹಾಜರಾಗುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ.

    ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಶುಕ್ರವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

    ಜನಸಾಮಾನ್ಯರು ಕೂಡ ಅನ್ಯಾಯ ಆದರೆ ಕೋರ್ಟ್‍ಗೆ ಬರುತ್ತಾರೆ. ಆದರೆ ಬುದ್ಧಿವಂತರಾದ ನಿಮಗೆ ಸಾಮಾನ್ಯ ಜ್ಞಾನ ಇಲ್ಲವೇ? ಒಂದು ವೇಳೆ ಅನ್ಯಾಯ ಆದರೆ ನ್ಯಾಯಾಲಯಕ್ಕೆ ಬನ್ನಿ. ಅದನ್ನು ಬಿಟ್ಟು ಆಸ್ಪತ್ರೆಗಳನ್ನು ಮುಚ್ಚಿ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ನ್ಯಾ. ಎಚ್.ಜಿ ರಮೇಶ್ ವೈದ್ಯರ ಪರ ವಕೀಲ ಬಸವರಾಜ್ ಅವರಿಗೆ ಪ್ರಶ್ನೆ ಮಾಡಿದರು.

    ಒಂದು ಬಾರಿ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ ಆದರೆ ಅದೇ ಅಂತಿಮ ಎಂದು ತಿಳಿದುಕೊಂಡಿದ್ದಾರಾ? ಎಲ್ಲರೂ ಅನ್ಯಾಯ ಆಗಿದೆ ಎಂದು ಖಂಡಿಸಿ ಬೀದಿಗಿಳಿದು ಪ್ರತಿಭಟನೆ ಮಾಡಲು ಶುರುಮಾಡಿದರೆ ಕೋರ್ಟ್ ಗಳು ಇರವುದು ಏನಕ್ಕೆ? ವಕೀಲರು ಯಾಕೆ ಬೇಕು ಎಂದು ಖಾರವಾಗಿಯೇ ಪ್ರಶ್ನಿಸಿದರು.

    ವೈದ್ಯರು ಸಮಾಜದ ಉನ್ನತ ವರ್ಗದಲ್ಲಿ ಇರುವವರು. ಇವರೇ ಈ ರೀತಿ ಮಾಡಿದರೆ ರಾಜ್ಯದಲ್ಲಿ ಆಗಿರುವ ಸಾವಿಗೆ ಹೊಣೆ ಯಾರು ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು ಗುರುವಾರ ನಮ್ಮ ಮನವಿಯನ್ನು ನೀವು ಪರಿಗಣಿಸಬಹುದು ಎಂದು ಭಾವಿದ್ದೆವು. ಆದರೆ ಈಗ ನಾವು ಆದೇಶ ಮಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿ ಚಾಟಿ ಬೀಸಿದರು.

    ಮಸೂದೆ ಮಂಡನೆಯಾಗುವ ಮುನ್ನವೇ ಬೀದಿಗಿಳಿಯುವುದು ಎಷ್ಟು ಸರಿ? ಜನರ ಜೀವಗಳ ಜೊತೆ ಚೆಲ್ಲಾಟ ಆಡುತ್ತಿರುವ ನೀವು ನಾಗರಿಕರೆ? ನಿಮ್ಮ ಬಗ್ಗೆ ನಮಗೆ ಗೌರವ ಇದೆ ಅದನ್ನು ಉಳಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

    ಈ ವೇಳೆ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಮುಷ್ಕರದ ಬಗ್ಗೆ ಅವರ ನಿಲುವೇನು? ನಿಮ್ಮ ಮುಖ್ಯಮಂತ್ರಿಗಳ ಬಳಿ ಈಗಲೇ ಫೋನ್ ಮಾಡಿ ಮಾತನಾಡಿ ಬನ್ನಿ ಎಂದು ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರಿಗೆ ಪೀಠ ಆದೇಶಿಸಿತು. ಫೋನ್ ಮಾಡಿದ ಬಳಿಕ ಕಲಾಪಕ್ಕೆ ಹಾಜರಾದ ಅಡ್ವೋಕೇಟ್ ಜನರಲ್ ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ. ಮುಖ್ಯಮಂತ್ರಿಗಳು ಈಗ ಸಭೆಯಲ್ಲಿದ್ದಾರೆ ಎಂದು ತಿಳಿಸಿದರು.

    ಕೊನೆಗೆ ನ್ಯಾಯಮೂರ್ತಿಗಳು, ಮುಷ್ಕರ ಕೈಬಿಟ್ಟು ಸೇವೆಗೆ ಕೂಡಲೇ ವೈದ್ಯರು ಹಾಜರಾಗಬೇಕು. ಯಾವುದೇ ಸಮಸ್ಯೆಗಳಿದ್ದರೂ ನ್ಯಾಯಾಲಯದ ಮುಂದೆ ಬನ್ನಿ. ಒಂದು ವೇಳೆ ನಮ್ಮ ಆದೇಶವನ್ನು ಉಲ್ಲಂಘಿಸಿದ್ದೆ ಆದಲ್ಲಿ ಮುಂದೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಾಸಗಿ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

    ಇದನ್ನೂ ಓದಿ: ಖಾಸಗಿ ವೈದ್ಯರ ಜೊತೆಗಿನ ಸಿಎಂ ಸಂಧಾನ ಸಭೆ ಯಶಸ್ವಿಯಾಗಿದ್ದು ಹೇಗೆ?

     

     

  • ಖಾಸಗಿ ವೈದ್ಯರ ಜೊತೆಗಿನ ಸಿಎಂ ಸಂಧಾನ ಸಭೆ ಯಶಸ್ವಿಯಾಗಿದ್ದು ಹೇಗೆ?

    ಖಾಸಗಿ ವೈದ್ಯರ ಜೊತೆಗಿನ ಸಿಎಂ ಸಂಧಾನ ಸಭೆ ಯಶಸ್ವಿಯಾಗಿದ್ದು ಹೇಗೆ?

    ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆಗೆ ಸಂಬಂಧಪಟ್ಟಂತೆ ಸಿಎಂ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ವೈದ್ಯರು ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ.

    ಕನ್ನಡ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕೆಪಿಎಂಇ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಷ್ಕರ ನಡೆಸುತ್ತಿರುವ ಖಾಸಗಿ ವೈದ್ಯರ ಮುಖಂಡರೊಂದಿಗೆ ಮಾತುಕತೆ ನಡೆಸಿ, ಕಾಯ್ದೆ ಕುರಿತಂತೆ ಅವರಲ್ಲಿದ್ದ ಆತಂಕ ಮತ್ತು ಭಯವನ್ನು ನಿವಾರಿಸಿದ್ದಾರೆ.

    ಸಂಧಾನ ಸಭೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಕೆಪಿಎಂಇ ತಿದ್ದುಪಡಿ ಮಸೂದೆಯಲ್ಲಿನ ಕೆಲವು ಅಂಶಗಳಿಗೆ ಮಾರ್ಪಾಡು ಮಾಡಿ ಮಂಡಿಸಲಾಗುವುದು. ರಾಜ್ಯದ ಎಲ್ಲ ಜನರಿಗೆ ಕೈಗೆಟಕುವ ದರಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ರಾಜ್ಯದ ಜನ ಮತ್ತು ವೈದ್ಯರ ಹಿತ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಯಾರಿಗೂ ತೊಂದರೆಯಾಗದಂತೆ, ರಾಜ್ಯದ ಜನರ ಹಿತಾಸಕ್ತಿಗೂ ಧಕ್ಕೆಯಾಗದಂತೆ ಮಸೂದೆಯನ್ನು ಅಂಗೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

    ಸಭೆ ಬಳಿಕ ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ, ಆಸ್ಪತ್ರೆ ವಿರುದ್ಧ ಸುಳ್ಳು ದೂರು ಕೊಟ್ಟರೆ ದೂರು ಕೊಟ್ಟವರ ವಿರುದ್ಧ ಕ್ರಮಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಿದ್ದೇವೆ. ಇದನ್ನ ನಿವಾರಿಸಿ ಈಗ ಕಾಯ್ದಿಯನ್ನ ಜಾರಿಗೆ ತರಲು ಮುಂದಾಗಿದ್ದೇವೆ. ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರೆ ಶವ ನೀಡಲು ಹಣಕ್ಕಾಗಿ ಬಲವಂತ ಮಾಡುವಂತಿಲ್ಲ ಎಂದು ತಿಳಿಸಿದರು.

    ಸಭೆಯಲ್ಲಿ ಏನು ಚರ್ಚೆ ಆಯ್ತು?
    ಜಿಲ್ಲಾ ಕುಂದುಕೊರತೆ ಸಮಿತಿಯಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದ್ದು, ವೈದ್ಯರು ವಕೀಲರನ್ನ ಇಟ್ಟುಕೊಳ್ಳಬಹುದು. ಬಿಪಿಎಲ್ ಕಾರ್ಡ್‍ದಾರರಿಗೆ ದರ ನಿಗದಿ ಮಾಡಬೇಕು ಎನ್ನುವ ನಿರ್ಧಾರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

    ಹೈಕೋರ್ಟ್ ಆದೇಶ:
    ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದ್ದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವೇಳೆ ಹೈಕೋರ್ಟ್ ಇಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಷ್ಟೇ ಅಲ್ಲದೇ ಗುರುವಾರ ನಾವು ಪರಿ ಪರಿಯಾಗಿ ಮನವಿ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಿದ್ದರೂ ಹಠ ಮುಂದುವರಿಸಿದ್ದಕ್ಕೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿತ್ತು. ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದೇ ಇದ್ದಲ್ಲಿ ಮುಂದೆ ಕಠಿಣ ಆದೇಶ ಹೊರಡಿಸಬೇಕಾದಿತು ಎಂದು ಖಡಕ್ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ವೈದ್ಯರು ಸಂಧಾನಕ್ಕೆ ಬಗ್ಗಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: 1 ತಿಂಗ್ಳ ಮಗುವಿನ ಜೀವ ಉಳಿಸಲು 7 ಗಂಟೆಯಲ್ಲಿ 516 ಕಿ.ಮೀ ಕ್ರಮಿಸಿದ್ರು ಈ ಆಂಬುಲೆನ್ಸ್ ಡ್ರೈವರ್

  • ಇದು ಜನರ ಜೀವನ್ಮರಣದ ಪ್ರಶ್ನೆ, ಮುಷ್ಕರವನ್ನು ಕೈಬಿಡಿ: ವೈದ್ಯರಲ್ಲಿ ಹೈಕೋರ್ಟ್ ಮನವಿ

    ಇದು ಜನರ ಜೀವನ್ಮರಣದ ಪ್ರಶ್ನೆ, ಮುಷ್ಕರವನ್ನು ಕೈಬಿಡಿ: ವೈದ್ಯರಲ್ಲಿ ಹೈಕೋರ್ಟ್ ಮನವಿ

    ಬೆಂಗಳೂರು: ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ಮೊದಲು ಮಾತುಕತೆ ನಡೆಸಿ ತೀರ್ಮಾನಕ್ಕೆ ಬನ್ನಿ. ಈ ಕೂಡಲೇ ಮುಷ್ಕರವನ್ನು ಕೈಬಿಡಿ ಎಂದು ಹೈಕೋರ್ಟ್ ಖಾಸಗಿ ಆಸ್ಪತ್ರೆಗಳ ವೈದ್ಯರಲ್ಲಿ ಮನವಿ ಮಾಡಿದೆ.

    ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಗುರುವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

    ಸರ್ಕಾರದ ಪರ ವಾದ ಮಂಡನೆ ಮಾಡಿದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್, ನಾವು ಇನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ಮಂಡನೆ ಮಾಡಿಲ್ಲ. ಅಷ್ಟೇ ಅಲ್ಲದೇ ವೈದ್ಯರ ಜೊತೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮಾತುಕತೆ ನಡೆಸಲು ಸಿದ್ಧರಿದ್ದಾರೆ. ಆದರೂ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ ಎಂದು ವಾದಿಸಿದರು.

    ಮಧ್ಯಪ್ರವೇಶ ಮಾಡಿದ ಖಾಸಗಿ ವೈದ್ಯರ ಪರ ವಕೀಲ ಬಸವರಾಜು, ಈ ಮಸೂದೆ ಮಂಡನೆಯಾದರೆ ವೈದ್ಯರು ತಮ್ಮ ವೃತ್ತಿಯನ್ನೇ ಬಿಡಬೇಕಾಗುತ್ತದೆ. ಅಷ್ಟೇ ಅಲ್ಲದೇ ವೈದ್ಯರು ಸ್ವಯಂ ಪ್ರೇರಿತರಾಗಿ ಮುಷ್ಕರ ಮಾಡುತ್ತಿದ್ದಾರೆ ಹೊರತು ಭಾರತೀಯ ವೈದ್ಯ ಸಂಘ(ಐಎಂಎ) ಮುಷ್ಕರಕ್ಕೆ ಕರೆ ನೀಡಿಲ್ಲ. ಆರೋಗ್ಯ ಸಚಿವರು ವೈದ್ಯರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ವಾದ ಮಂಡಿಸಿದರು.

    ಈ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್, ಈಗಾಗಲೇ ಮುಷ್ಕರದಿಂದ ಸಾಕಷ್ಟು ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನಿಮ್ಮ ವೈದ್ಯರಿಗೆ ಮುಷ್ಕರ ವಾಪಸ್ ಪಡೆಯಲು ಹೇಳಿ ಎಂದು ವಕೀಲರಲ್ಲಿ ಮನವಿ ಮಾಡಿದರು.

    ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದು ಈಗಾಗಲೇ ಹೇಳಿದೆ. ಅಷ್ಟೇ ಅಲ್ಲದೇ ಅಧಿವೇಶನದಲ್ಲಿ ಇನ್ನೂ ಮಸೂದೆ ಮಂಡನೆಯೇ ಆಗಿಲ್ಲ. ರೋಗಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ಇದು ಜನರ ಜೀವನ್ಮರಣದ ಪ್ರಶ್ನೆ. ಕೂಡಲೇ ಸೇವೆಗೆ ಮರಳಿ ಚಿಕಿತ್ಸೆ ನೀಡಿ ಎಂದು ನ್ಯಾಯಮೂರ್ತಿಗಳು ಪರಿಪರಿಯಾಗಿ ಮನವಿ ಮಾಡಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಒಂದು ವೇಳೆ ಮುಷ್ಕರ ಕೈ ಬಿಡದೇ ಇದ್ದಲ್ಲಿ ಶುಕ್ರವಾರ ಹೈಕೋರ್ಟ್ ಖಡಕ್ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

    img class=”alignnone size-full wp-image-194314″ src=”https://publictv.in/wp-content/uploads/2017/11/doctors-protest-19.png” alt=”” width=”786″ height=”576″ />

  • ಮುಷ್ಕರ ಕೈಬಿಟ್ಟ ಖಾಸಗಿ ವೈದ್ಯರು: ಶುಕ್ರವಾರದಿಂದ ಸೇವೆಗೆ ಹಾಜರ್

    ಮುಷ್ಕರ ಕೈಬಿಟ್ಟ ಖಾಸಗಿ ವೈದ್ಯರು: ಶುಕ್ರವಾರದಿಂದ ಸೇವೆಗೆ ಹಾಜರ್

    ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ವಿರೋಧಿಸಿ ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಮುಷ್ಕರವನ್ನು ಹೈಕೋರ್ಟ್ ಮನವಿಗೆ ಒಪ್ಪಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

    ನಾಳೆಯಿಂದ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಲಭ್ಯವಾಗಲಿದ್ದು, ಎಂದಿನಂತೆ ಖಾಸಗಿ ಆಸ್ಪತ್ರೆ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಫನಾ ಮುಖ್ಯಸ್ಥ ಜಯಣ್ಣ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿರುವ ಐಎಂಎನಲ್ಲಿ ನಡೆದ ಸಭೆಯಲ್ಲಿ ಹೈಕೋರ್ಟ್ ಮನವಿಗೆ ಒಪ್ಪಿ ಮುಷ್ಕರವನ್ನು ಕೈಬಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಖಾಸಗಿ ವೈದ್ಯರ ತುರ್ತು ಸಭೆ ಮುಕ್ತಾಯವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫನಾ ಮುಖ್ಯಸ್ಥ ಜಯಣ್ಣ, ಹೈಕೋರ್ಟ್ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರು ಸೇವೆಗೆ ತೆರಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಾಗಲೇ ತುರ್ತು ಸೇವೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ನಮ್ಮ ಕೆಲ ಪದಾಧಿಕಾರಿಗಳು ಬೆಳಗಾವಿಗೆ ಹೋಗಲಿದ್ದಾರೆ  ಎಂದು ತಿಳಿಸಿದರು.

    ಮುಂದುವರಿದ ಗೊಂದಲ: ಖಾಸಗಿ ಆಸ್ಪತ್ರೆಗಳ ಮುಷ್ಕರ ವಾಪಸ್ ಪಡೆಯುವ ವಿಚಾರದಲ್ಲಿ ವೈದ್ಯಕೀಯ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ. ಹೈಕೋರ್ಟ್ ಸೂಚನೆಯನ್ವಯ ಸಭೆ ನಡೆಸಿದ ಫನಾ ಸಂಘಟನೆ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗೋದಾಗಿ ಪ್ರಕಟಿಸಿದೆ. ಆದ್ರೆ ವಿರೋಧ ವ್ಯಕ್ತಪಡಿಸಿದ ಐಎಂಎ ಸಂಘಟನೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳೋದಾಗಿ ಹೇಳಿದೆ. ಹೀಗಾಗಿ ಮುಷ್ಕರ ವಾಪಸ್ ವಿಚಾರದಲ್ಲಿ ಗೊಂದಲ ಮುಂದುವರಿದಿದೆ.

    ಇನ್ನು ನಾಳೆ ಮಧ್ಯಾಹ್ನ 2 ಗಂಟೆ ಮುಷ್ಕರ ನಿರತ ವೈದ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಇದಕ್ಕೆ ಪೂರ್ವಬಾವಿಯಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ತಿದ್ದುಪಡಿ ವಿಧೇಯಕವನ್ನು ಮಂಡಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

     

    https://youtu.be/rAMDIHQ6ZjE

     

     

  • ಪ್ರತಿಭಟನೆಗೆ ಹೆದರಿ ಮಸೂದೆ ಹಿಂದಕ್ಕೆ ಪಡೆದ್ರೆ ಮುಂದೆ ಯಾವುದೇ ಕಾಯ್ದೆ ತರಲು ಸಾಧ್ಯವಿಲ್ಲ: ರಮೇಶ್ ಕುಮಾರ್

    ಪ್ರತಿಭಟನೆಗೆ ಹೆದರಿ ಮಸೂದೆ ಹಿಂದಕ್ಕೆ ಪಡೆದ್ರೆ ಮುಂದೆ ಯಾವುದೇ ಕಾಯ್ದೆ ತರಲು ಸಾಧ್ಯವಿಲ್ಲ: ರಮೇಶ್ ಕುಮಾರ್

    ಬೆಳಗಾವಿ: ಮಸೂದೆ ಇನ್ನೂ ಸದನಲ್ಲಿ ಮಂಡನೆಯಾಗಲಿಲ್ಲ. ಆದರೂ ಖಾಸಗಿ ವೈದ್ಯರು ಉಗ್ರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ಪ್ರತಿಷ್ಠೆಗೆ ಬಿದ್ದಿರೋದು ಯಾರು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.

    ಖಾಸಗಿ ವೈದ್ಯರ ಮುಷ್ಕರ ಕುರಿತು ಬಿಜೆಪಿಯ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ರಮೇಶ್ ಕುಮಾರ್ ಉತ್ತರಿಸಿ, ನನಗೆ ಪ್ರತಿಷ್ಠೆ ಏಕೆ ಬೇಕು? ನಾನು ರಾಜರ ವಂಶದವನು ಅಲ್ಲ. ನನ್ನ ಅಪ್ಪ ಎರಡನೇ ಕ್ಲಾಸ್ ಓದಿದವರು ಅಷ್ಟೇ. ಅಮ್ಮ ಅನಕ್ಷರಸ್ಥೆ. ಇಂತಹವನಿಗೆ ಪ್ರತಿಷ್ಠೆ ಏಕೆ ಬೇಕು. ನನಗೆ ಪ್ರತಿಷ್ಠೆ ಇಲ್ಲ ಎಂದು ಹೇಳಿದರು.

    ವೈದ್ಯರ ಪ್ರತಿಭಟನೆಗೆ ಹೆದರಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ಪಡೆದರೆ ಮುಂದೆ ಯಾವುದೇ ಕಾಯ್ದೆ ತರಲು ಸಾಧ್ಯವಿಲ್ಲ. ನಾವು ಜನರಿಗೆ ತಲೆ ಬಾಗಬೇಕು. ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

    ಮಸೂದೆ ಮಂಡನೆಯಾದ ಬಳಿಕ ಅದರಲ್ಲಿ ಏನಿದೆ ಎನ್ನುವುದು ಗೊತ್ತಾಗಲಿದೆ. ಇಂದು ಸಂಜೆ ಮಸೂದೆ ತಿದ್ದುಪಡಿ ಬಗ್ಗೆ ಏನು ಮಾಡಬೇಕು ಎನ್ನುವುದನ್ನು ಮುಖ್ಯಮಂತ್ರಿಗಳ ಜೊತೆ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

    ನಮ್ಮ ಮೇಲೆ ಕೋಪ ಇದ್ದರೆ ಅದನ್ನು ರೋಗಿಗಳ ಮೇಲೆ ತೋರಿಸಬೇಡಿ. ವೈದ್ಯರು ಕೂಡಲೇ ಮುಷ್ಕರವನ್ನು ಕೈಬಿಡಬೇಕು ಎಂದು ಮನವಿ ಮಾಡಿದ ಅವರು, ಬಡ ರೋಗಿಗಳ ಪರವಾಗಿ ನಾವು ಕಾನೂನು ತರಲು ಮುಂದಾಗಿದ್ದೇವೆ ಎಂದು ಹೇಳುವ ಮೂಲಕ ಮಸೂದೆಯನ್ನು ಸಮರ್ಥಿಸಿಕೊಂಡರು.

    ನನ್ನ ಮತ್ತು ಸಿಎಂ ಮಧ್ಯೆ ಹೊಂದಾಣಿಕೆ ಇಲ್ಲ ಎನ್ನುವುದು ಸರಿಯಲ್ಲ. 40 ವರ್ಷಗಳ ಒಡನಾಟ ನನ್ನ ಸಿಎಂ ನಡುವೆ ಇದೆ. ಸಿಎಂ ಆಡಳಿತ ನನಗೆ ತೃಪ್ತಿ ನೀಡಿದೆ. ಬಡವರ ಪರವಾದ ಯಾವುದೇ ಕೆಲಸ ನೀಡಿದ್ರು ಅದನ್ನು ಜಾರಿಗೆ ತಂದಿದ್ದಾರೆ. ಲಾಭ-ನಷ್ಟ-ವ್ಯಾಪಾರಕ್ಕೆ ನಮ್ಮ ಸಂಬಂಧ ಇಲ್ಲ. ಲೀಡರ್ ವಿರುದ್ಧ ಮಾತನಾಡುವ ಸಂಸ್ಕೃತಿ ನಮ್ಮದಲ್ಲ. ನನ್ನ ಕೊನೆ ಉಸಿರು ಇರುವವರೆಗೂ ಸಿಎಂ ಸಿದ್ದರಾಮಯ್ಯ ಜೊತೆ ನಾನು ಇರುತ್ತೇನೆ. ನಿಲುವಳಿ ಸೂಚನೆಗೆ ಇದು ಯೋಗ್ಯವಲ್ಲ. ನಿಲುವಳಿ ಸೂಚನೆ ಪ್ರಸ್ತಾಪವನ್ನು ತಿರಸ್ಕರಿಸಿ ಬೇರೆ ರೀತಿಯಲ್ಲಿ ಚರ್ಚೆ ಮಾಡಿ ಎಂದು ಅವರು ಸಭಾಪತಿಗಳಿಗೆ ಮನವಿ ಮಾಡಿದರು.

    https://youtu.be/tHaPuie6qLI

    https://youtu.be/V7VmWYhVdec

    .