Tag: ಕೆನರಾ ಬ್ಯಾಂಕ್

  • ಬ್ಯಾಂಕ್, ಎಟಿಎಂ ಕಳ್ಳತನಕ್ಕೆ ಯತ್ನ- ಫೋಟೋ ತೆಗೆದ ಸ್ಥಳೀಯನ ಮೇಲೆ ಹಲ್ಲೆ

    ಬ್ಯಾಂಕ್, ಎಟಿಎಂ ಕಳ್ಳತನಕ್ಕೆ ಯತ್ನ- ಫೋಟೋ ತೆಗೆದ ಸ್ಥಳೀಯನ ಮೇಲೆ ಹಲ್ಲೆ

    ರಾಯಚೂರು: ಜಿಲ್ಲೆಯ ಮಾನ್ವಿಯಲ್ಲಿ ಬ್ಯಾಂಕ್ ಹಾಗೂ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ರಾತ್ರಿ ವೇಳೆ ಸ್ಥಳೀಯರೊಬ್ಬರು ಎಚ್ಚರಗೊಂಡು ಫೋಟೋ ತೆಗೆದ ಹಿನ್ನೆಲೆ ಕಳ್ಳರು ಸ್ಥಳದಿಂದ ಓಡಿ ಹೋಗಿದ್ದಾರೆ.

    ಮಾನ್ವಿಯ ಐಬಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‍ಗೆ ಕನ್ನ ಹಾಕಲು ಕಳ್ಳರು ಮುಂದಾಗಿದ್ದರು. ರಾತ್ರಿ ವೇಳೆ ಬ್ಯಾಂಕ್ ಬಾಗಿಲು ಬೀಗ ಮುರಿಯುವ ಯತ್ನ ವಿಫಲವಾದ ಹಿನ್ನೆಲೆ ಎಟಿಎಂ ಕಳ್ಳತನಕ್ಕೆ ಮುಂದಾಗಿದ್ದರು. ಪಕ್ಕದಲ್ಲೇ ವಾಸವಾಗಿರುವ ಸುಬ್ಬಾರಾವ್ ಎಂಬವರು ಎಚ್ಚರಗೊಂಡು ಫೋಟೋ ತೆಗೆದಿದ್ದಾರೆ.

    ಸುಬ್ಬಾರಾವ್ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಇಬ್ಬರು ಕಳ್ಳರಿಂದ ಈ ಕೃತ್ಯ ನಡೆದಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ಕೊರೊನಾ ಸಂಕಷ್ಟದ ನಡುವೆ ಬ್ಯಾಂಕಿನಲ್ಲಿ ದರೋಡೆಗೆ ಯತ್ನ

    ಕೊರೊನಾ ಸಂಕಷ್ಟದ ನಡುವೆ ಬ್ಯಾಂಕಿನಲ್ಲಿ ದರೋಡೆಗೆ ಯತ್ನ

    ಮಡಿಕೇರಿ: ಖದೀಮರ ತಂಡವೊಂದು ಬ್ಯಾಂಕ್ ಗೋಡೆಗೆ ಕನ್ನ ಹಾಕಿರುವ ಘಟನೆ ಮಡಿಕೇರಿ ಸಮೀಪದ ಮಕ್ಕಂದೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ತಡರಾತ್ರಿ ನಡೆದಿದೆ. ಬ್ಯಾಂಕ್ ಗೋಡೆಯನ್ನು ಮಾತ್ರ ಒಡೆದಿರುವ ದರೋಡೆಕೋರರು ಸ್ರ್ಟಾಂಗ್ ರೂಮ್‍ಗೆ ಪ್ರವೇಶಿಸಲು ವಿಫಲರಾಗಿದ್ದಾರೆ.

    ಪೂರ್ವ ಯೋಜಿತವಾಗಿ ಸಂಚು ರೂಪಿಸಿರುವ ಖದೀಮರು, ಮೊದಲು ಬ್ಯಾಂಕಿಗೆ ಕಲ್ಪಿಸುವ ವಿದ್ಯುತ್ ತಂತಿಯನ್ನು ಕತ್ತರಿಸಿ ಸಿಸಿಟಿವಿಯ ಕಣ್ತಪ್ಪಿಸಿದ್ದಾರೆ. ನಂತರ ಕಬ್ಬಿಣದ ಹಾರೆ ಮತ್ತು ಸಲಾಕೆಗಳಿಂದ ಬ್ಯಾಂಕ್‍ನ ನಿರ್ಜನ ಪ್ರದೇಶದ ಹಿಂಬದಿಯ ಗೋಡೆಯನ್ನು ಹೊಡೆದು ಸ್ರ್ಟಾಂಗ್ ರೂಮ್‍ಗೆ ನುಗ್ಗುಲು ಪ್ರಯತ್ನಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯನ್ನು ಸ್ಥಳೀಯರು ಬೆಳಗ್ಗೆ ಗಮನಿಸಿ ಅಚ್ಚರಿಗೆ ಒಳಗಾಗಿ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ್ದಾರೆ.

    ಬ್ಯಾಂಕಿನ ವ್ಯವಸ್ಥಾಪಕರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ, ಬೆರಳಚ್ಚು ತಜ್ಞರು ಹಾಗೂ ಶ್ವಾನಪತ್ತೆ ದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಹಾರೆ ಹಾಗೂ ಬ್ಯಾಂಕ್ ಹಿಂಬದಿ ಮದ್ಯ ಸೇವಿಸಿ ಬಿಸಾಡಿದ್ದ ಮದ್ಯದ ಬಾಟಲಿಗಳು ಸೇರಿದಂತೆ ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ.

    ದರೋಡೆಗೆ ವಿಫಲಯತ್ನ ಮಾಡಿದ್ದು, ಯಾವುದೇ ಹಣ ಮತ್ತು ಕಾಗದ ಪತ್ರಗಳಿಗೆ ತೊಂದರೆಯಾಗಿಲ್ಲ. ಹಣವನ್ನು ದೋಚಿಲ್ಲ ಎಲ್ಲವೂ ಸುರಕ್ಷಿತವಾಗಿದೆ. ಯಾರೂ ಅತಂಕ ಪಡುವ ಅಗತ್ಯ ಎಂದು ಬ್ಯಾಂಕ್ ಮ್ಯಾನೇಜರ್ ಲೀಲಾವತಿ ತಿಳಿಸಿದ್ದಾರೆ.

  • ಕೆಸಿಡಿ ಆವರಣದ ಕೆನರಾ ಬ್ಯಾಂಕ್‍ನ ಎಲ್ಲ ಸಿಬ್ಬಂದಿ ಹೋಮ್ ಕ್ವಾರಂಟೈನ್

    ಕೆಸಿಡಿ ಆವರಣದ ಕೆನರಾ ಬ್ಯಾಂಕ್‍ನ ಎಲ್ಲ ಸಿಬ್ಬಂದಿ ಹೋಮ್ ಕ್ವಾರಂಟೈನ್

    ಧಾರವಾಡ: ಧಾರವಾಡ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕಿ(ಹಿಂದಿನ ಸಿಂಡಿಕೇಟ್ ಬ್ಯಾಂಕ್)ನ ಎಲ್ಲ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ.

    ಕೊರೊನಾ ಪಾಸಿಟಿವ್ ಬಂದಿರುವ ಧಾರವಾಡ ಜಿಲ್ಲೆಯ ರೋಗಿ ನಂ.194 ಮಾ.19ರಂದು ಪ್ರಯಾಣಿಸಿದ ಮುಂಬೈ- ಹುಬ್ಬಳ್ಳಿ ವಿಆರ್‍ಎಲ್ ಬಸ್ ಮೂಲಕವೇ ಧಾರವಾಡ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕ್ (ಹಿಂದಿನ ಸಿಂಡಿಕೇಟ್ ಬ್ಯಾಂಕ್)ನ ಸಿಬ್ಬಂದಿಯೊಬ್ಬರ ಪುತ್ರನೂ ಆಗಮಿಸಿದ್ದರು. ಇವರು ರೋಗಿ ನಂ.194 ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ಪರಿಗಣಿಸಿ ಸರ್ಕಾರಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

    ಅವರ ತಂದೆಯು ದ್ವಿತೀಯ ದರ್ಜೆಯ ಸಂಪರ್ಕ ಹೊಂದಿದ ವ್ಯಕ್ತಿಯಾಗಿರುವುದರಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಬ್ಯಾಂಕಿನ ಎಲ್ಲ ಸಿಬ್ಬಂದಿಯನ್ನು ಅವರ ಮನೆಗಳಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ. ಬ್ಯಾಂಕನ್ನು ಸಂಪೂರ್ಣವಾಗಿ ಸ್ಯಾನಿಟೈಸೇಷನ್ ಮಾಡಲಾಗಿದೆ. ಸೋಮವಾರ ಏ.13 ಹಾಗೂ ಏ.15 ರಂದು ಬ್ಯಾಂಕಿನ ವಹಿವಾಟು ನಡೆದಿಲ್ಲ. ಸಂಪರ್ಕಿತ ವ್ಯಕ್ತಿಗಳ ಪ್ರಯೋಗಾಲಯ ವರದಿ ಬಂದ ಕೂಡಲೇ ಬ್ಯಾಂಕ್ ಪುನರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

  • ಆಕಸ್ಮಿಕ ಬೆಂಕಿ- ಕೆನರಾ ಬ್ಯಾಂಕ್ ಕಟ್ಟಡ ನಾಶ

    ಆಕಸ್ಮಿಕ ಬೆಂಕಿ- ಕೆನರಾ ಬ್ಯಾಂಕ್ ಕಟ್ಟಡ ನಾಶ

    ಮಂಡ್ಯ: ಆಕಸ್ಮಿಕ ಬೆಂಕಿ ತಗುಲಿ ಕೆನರಾ ಬ್ಯಾಂಕ್ ಕಟ್ಟಡ ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಅರಣಿ ಗ್ರಾಮದಲ್ಲಿ ಜರುಗಿದೆ.

    ಶನಿವಾರ ಮಧ್ಯ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಅರಣಿ ಶಾಖೆಯ ಕೆನರಾ ಬ್ಯಾಂಕ್ ಕಟ್ಟಡ ಬೆಂಕಿಯಿಂದ ಹೊತ್ತಿ ಉರಿದಿದೆ. ಕಟ್ಟಡಕ್ಕೆ ಬೆಂಕಿ ಬಿದ್ದ ಕಾರಣ ಬ್ಯಾಂಕ್‍ನಲ್ಲಿ ಇದ್ದ ಕಡತಗಳು ಹಾಗೂ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಅಲ್ಲದೇ ಹಣವೂ ಸುಟ್ಟು ಹೋಗಿದ್ಯಾ ಎಂದು ತಿಳಿದುಬಂದಿಲ್ಲ.

    ಈ ಬೆಂಕಿ ಅವಘಡ ಶಾರ್ಟ್ ಸರ್ಕ್ಯೂಟ್‍ನಿಂದ ಆಗಿರಬಹುದು ಎನ್ನಲಾಗುತ್ತಿದ್ದು, ಯಾವ ಕಾರಣಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ನಿಖರವಾಗಿ ತಿಳಿದುಬಂದಿಲ್ಲ. ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಬರಲು ಸಾಧ್ಯವಾಗಿಲ್ಲ. ನಂತರ ಬೆಂಕಿ ಹೊತ್ತಿಕೊಂಡ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

    ಈ ವೇಳೆಗೆ ಬ್ಯಾಂಕ್ ಕಟ್ಟಡ ಶೇ, 75 ರಷ್ಟು ಹೊತ್ತಿ ಉರಿದಿದೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ  ಘಟನೆ ನಡೆದಿದೆ.

  • ಕೆನರಾ ಜೊತೆ ಸಿಂಡಿಕೇಟ್ ಬ್ಯಾಂಕ್ ವಿಲೀನ

    ಕೆನರಾ ಜೊತೆ ಸಿಂಡಿಕೇಟ್ ಬ್ಯಾಂಕ್ ವಿಲೀನ

    ನವದೆಹಲಿ: ಕರ್ನಾಟಕದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳನ್ನು ವಿಲೀನ ಮಾಡಲು ಸರ್ಕಾರ ಮುಂದಾಗಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, 2017 ರಲ್ಲಿ 17 ಸಾರ್ವಜನಿಕ ವಲಯದ ಬ್ಯಾಂಕ್‍ಗಳಿದ್ದವು. ಇದನ್ನು 13ಕ್ಕೆ ಇಳಿಸುವ ನಿಟ್ಟಿನಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

    ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನವಾದರೆ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಲಿದೆ.

    ವಸೂಲಾಗದ ಸಾಲ(ಎನ್‍ಪಿಎ) ಪ್ರಮಾಣ 8.65 ಲಕ್ಷ ಕೋಟಿಯಿಂದ 7.90 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಆರ್ಥಿಕತೆಯನ್ನು 5 ಟ್ರಿಲಿಯನ್ ಗುರಿ ತಲುಪಲು ಕೇಂದ್ರ ಸರಕಾರ ಎಲ್ಲ ರೀತಿಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ 10 ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    1906ರಲ್ಲಿ ಮಂಗಳೂರಿನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಕೆನರಾ ಬ್ಯಾಂಕ್ ಆರಂಭಿಸಿದ್ದರೆ, ಸಿಂಡಿಕೇಟ್ ಬ್ಯಾಂಕ್ ಅನ್ನು ಉಪೇಂದ್ರ ಅನಂತ್ ಪೈ, ಟಿಎಂಎ ಪೈ, ವಾಮನ ಕುಡುವ 1924 ರಲ್ಲಿ ಮಣಿಪಾಲದಲ್ಲಿ ಆರಂಭಿಸಿದ್ದರು. ಕಾರ್ಪೋರೇಷನ್ ಬ್ಯಾಂಕ್ ಅನ್ನು 1906 ರಲ್ಲಿ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಮಂಗಳೂರಿನಲ್ಲಿ ಸ್ಥಾಪಿಸಿದ್ದರು. ಈ ಹಿಂದೆ ಮಂಗಳೂರು ಮೂಲದ ವಿಜಯ್ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಂಡಿತ್ತು.

  • ರೈತರು ಅಡವಿಟ್ಟ ಒಡವೆ ಹರಾಜು – ಕೆನರಾ ಬ್ಯಾಂಕ್‍ನಿಂದ ಬಹಿರಂಗ ನೋಟಿಸ್

    ರೈತರು ಅಡವಿಟ್ಟ ಒಡವೆ ಹರಾಜು – ಕೆನರಾ ಬ್ಯಾಂಕ್‍ನಿಂದ ಬಹಿರಂಗ ನೋಟಿಸ್

    ಮಂಡ್ಯ: ಜಿಲ್ಲೆಯ ತಳಗವಾದಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ನಿಂದ ರೈತರಿಗೆ ಅಡವಿಟ್ಟ ಒಡವೆಗಳನ್ನು ಹರಾಜು ಹಾಕಲಾಗುವುದು ಎಂದು ನೋಟಿಸ್ ಕಳುಹಿಸಲಾಗಿದೆ.

    2011 ರಿಂದ 2016 ರವರೆಗೆ ಒಡವೆ ಅಡವಿಟ್ಟ ಗ್ರಾಹಕರು ಅಸಲು, ಬಡ್ಡಿ ಪಾವತಿಸದೆ ಸುಸ್ತಿದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 28-08-18 ರಂದು ಒಡವೆಗಳನ್ನು ಹರಾಜು ಹಾಕಲಾಗುತ್ತದೆ ಎಂದು ಕೆನರಾ ಬ್ಯಾಂಕ್ ತನ್ನ ನೋಟಿಸ್ ನಲ್ಲಿ ತಿಳಿಸಿದೆ. ಈ ಸಂಬಂಧ ತಳಗವಾದಿ ಗ್ರಾಮದ ಹಲವೆಡೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ.

    ಸತತ ಬರಗಾಲದಿಂದ ಬಿತ್ತನೆ ಕಾರ್ಯಕ್ಕಾಗಿ ಒಡವೆಗಳನ್ನು ಅಡವಿಟ್ಟು ಸಾಲ ಪಡೆಯಲಾಗಿತ್ತು. ಈ ವರ್ಷ ಚೆನ್ನಾಗಿ ಮಳೆಯಾಗಿದ್ದು, ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳೋಣ ಎಂದು ಯೋಚಿಸಲಾಗಿತ್ತು. ಒಂದು ಬ್ಯಾಂಕ್ ನಮ್ಮ ಒಡವೆಗಳನ್ನು ಹರಾಜು ಹಾಕಿದ್ರೆ ವಿಷ ಕುಡಿಯದೇ ಬೇರೆ ಮಾರ್ಗ ನಮ್ಮ ಮುಂದಿಲ್ಲ ಎಂದು ನೋಟಿಸ್ ಪಡೆದಿರುವ ರೈತರು ಅಳಲು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರೈತನಿಗೆ ಕೈಗೆ ಸೇರಿತು ಬ್ಯಾಂಕ್ ಖಾತೆಯ ಹಣ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರೈತನಿಗೆ ಕೈಗೆ ಸೇರಿತು ಬ್ಯಾಂಕ್ ಖಾತೆಯ ಹಣ

    ಕೊಪ್ಪಳ: ಬ್ಯಾಂಕಿನಲ್ಲಿ ಜಮೆಯಾಗಿದ್ದ ಹಣ ನೀಡದೇ, ರೈತರೊಬ್ಬರನ್ನು ಸತಾಯಿಸುತ್ತಿದ್ದ ವರದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ರೈತರ ಹಣವನ್ನು ಮರಳಿಸಿದ್ದಾರೆ.

    ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ರೈತ ನಿಂಗಪ್ಪ ಪೂಜಾರ್ ಅವರು ಕೆನರಾ ಬ್ಯಾಂಕಿನಲ್ಲಿ ಕೃಷಿ ಸಾಲ ಪಡೆದಿದ್ದರು. ಈಗ ಅದರ ಮೊತ್ತ ಸುಮಾರು 1.80 ಲಕ್ಷ ರೂ. ಆಗಿದ್ದು, ನಿಂಗಪ್ಪ ಮರು ಪಾವತಿ ಮಾಡಿರಲಿಲ್ಲ. ಸಕ್ಕರೆ ಕಾರ್ಖಾನೆಯೊಂದು ರಸಗೊಬ್ಬರ ಖರೀದಿಗೆ ಅಂತಾ ನಿಂಗಪ್ಪ ಅವರ ಖಾತೆಗೆ 24 ಸಾವಿರ ರೂ. ಹಣವನ್ನು ಜಮೆ ಮಾಡಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ, ಬಜೆಟ್‍ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿರುವ ಸಾಲಮನ್ನಾ ಅಧಿಕೃತವಲ್ಲ ಎಂದು ನಿಂಗಪ್ಪ ಅವರ ಖಾತೆಗೆ ಜಮೆಯಾಗಿದ್ದ ಹಣವನ್ನು ಸಾಲ ಮರು ಪಾವತಿಗೆ ಸೇರಿಸಿಕೊಂಡಿದ್ದಾಗಿ ಹೇಳಿ ಸತಾಯಿಸುತ್ತಿದ್ದಾರೆ.

    ನಿಂಗಪ್ಪ ಅವರು ನ್ಯಾಯ ಕೊಡಿಸುವಂತೆ ಪಬ್ಲಿಕ್ ಟಿವಿಗೆ ಮನವಿ ಮಾಡಿಕೊಂಡಿದ್ದರು. ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಜೆಡಿಎಸ್ ನಾಯಕರು ಬ್ಯಾಂಕಿಗೆ ಬಂದು, ಸಿಬ್ಬಂದಿ ಹಾಗೂ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು. ಬಳಿಕ ರೈತ ನಿಂಗಪ್ಪ ಅವರಿಗೆ ಹಣವನ್ನು ಮರಳಿಸಿದ್ದಾರೆ.

    ನಾನು ಕೇಳಿದಾಗ ನಿನಗೆ ಸಾಲ ಇದೆ ಅಂತಾ ಹಣ ನೀಡಲು ನಿರಾಕರಿಸಿದ್ದರು. ಸದ್ಯ ಬ್ಯಾಂಕ್ ಹಣ ಮಾರುಪಾತಿ ಮಾಡಿದ್ದರಿಂದ ಕೃಷಿ ಚಟುವಟಿಕೆ ಹಾಗೂ ಗೊಬ್ಬರ ಖರೀದಿಗೆ ಸಹಾಯವಾಗಿದೆ. ನನ್ನ ಸಮಸ್ಯೆಗೆ ಸ್ಪಂದಿಸಿದ ಜೆಡಿಎಸ್ ಮುಖಂಡರಿಗೆ ಹಾಗೂ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನಿಂಗಪ್ಪ ಹೇಳಿದರು.

  • ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿಟಿವಿ ಕದ್ದರು!

    ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿಟಿವಿ ಕದ್ದರು!

    ಬೆಂಗಳೂರು: ಬ್ಯಾಂಕ್ ಕಳ್ಳತನಕ್ಕೆ ಬಂದಿದ್ದವರಿಗೆ ಏನು ಸಿಗಲಿಲ್ಲವೆಂದು ಸಿಸಿಟಿವಿ ಕ್ಯಾಮೆರಾವನ್ನು ಕದ್ದೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.

    ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಕಳ್ಳರು ನೆರಳೂರು ಗ್ರಾಮದ ಕೆನರಾ ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬ್ಯಾಂಕ್ ಲಾಕರ್ ರೂಮ್ ಒಡೆದು ಹುಡುಕಾಡಿದ್ದಾರೆ. ಅಲ್ಲಿಯೂ ಅವರಿಗೆ ಏನು ದೊರೆಯದೇ ಇದ್ದಾಗ ಸಿಸಿಟಿವಿ ಕ್ಯಾಮೆರಾವನ್ನು ತಗೆದುಕೊಂಡು ಹೋಗಿದ್ದಾರೆ.

    ಸಾರ್ವಜನಿಕರು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • 21 ಬ್ಯಾಂಕ್ ಗಳಿಗೆ 25,775 ಕೋಟಿ ರೂ. ವಂಚನೆ!- ಯಾವ ಬ್ಯಾಂಕಿಗೆ ಎಷ್ಟು ಕೋಟಿ ನಷ್ಟ?

    21 ಬ್ಯಾಂಕ್ ಗಳಿಗೆ 25,775 ಕೋಟಿ ರೂ. ವಂಚನೆ!- ಯಾವ ಬ್ಯಾಂಕಿಗೆ ಎಷ್ಟು ಕೋಟಿ ನಷ್ಟ?

    ಇಂದೋರ್: 2017-18 ನೇ ಸಾಲಿನ ಆರ್ಥಿಕ ವರ್ಷದಲ್ಲಿ 21 ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಒಟ್ಟು 25,775 ಕೋಟಿ ರೂ. ವಂಚನೆಯಾಗಿದೆ ಎಂದು ಮಾಹಿತಿ ಹಕ್ಕಿನ ಅಡಿ ಬಹಿರಂಗವಾಗಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಹೆಚ್ಚಿನ 6,461.13 ಕೋಟಿ ರೂ. ವಂಚನೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್‍ಟಿಐ ಕಾರ್ಯಕರ್ತ ರಾಜಶೇಖರ ಗಾವದ್ ಅವರಿಗೆ ಮಾಹಿತಿ ನೀಡಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,390.75 ಕೋಟಿ ರೂ., ಬ್ಯಾಂಕ್ ಆಫ್ ಇಂಡಿಯಾ ಗೆ 2,224.86 ಕೋಟಿ ರೂ., ಬ್ಯಾಂಕ್ ಆಫ್ ಬರೋಡಾಗೆ 1,928.25 ಕೋಟಿ ರೂ., ಅಲಹಾಬಾದ್ ಬ್ಯಾಂಕ್ ಗೆ 1,520.37 ಕೋಟಿ ರೂ., ಆಂಧ್ರ ಬ್ಯಾಂಕ್ ಗೆ 1,303.30 ಕೋಟಿ ರೂ. ಮತ್ತು ಯುಕೋ ಬ್ಯಾಂಕ್ ಗೆ 1,224.64 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.

    ಪಟ್ಟಿಯಲ್ಲಿ ಕೊಟ್ಟಿರುವ ಮಾಹಿತಿಯು 1 ಲಕ್ಷ ರೂ ಗಿಂತ ಮೇಲ್ಪಟ್ಟು ಆಗಿರುವ ವಂಚನೆಗಳಾಗಿವೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಯಾವ ರೀತಿಯ ವಂಚನೆಗಳು ಅಥವಾ ವಂಚನೆಗಳ ಸಂಖ್ಯೆಯನ್ನು ಆರ್ ಬಿಐ ಬಹಿರಂಗ ಮಾಡಿಲ್ಲ.

    ಇನ್ನುಳಿದಂತೆ ಕಾರ್ಪೊರೇಷನ್ ಬ್ಯಾಂಕ್ ಗೆ 970.89 ಕೋಟಿ ರೂ. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗೆ 880.53 ಕೋಟಿ ರೂ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 650.28 ಕೋಟಿ ರೂ. ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ 455.05 ಕೋಟಿ ರೂ. ನಷ್ಟವಾಗಿದೆ.

    ಕೆನರಾ ಬ್ಯಾಂಕ್ ಗೆ 190.77 ಕೋಟಿ ರೂ. ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ಗೆ 90.01 ಕೋಟಿ ರೂ. ದೇನಾ ಬ್ಯಾಂಕ್ ಗೆ 89.25 ಕೋಟಿ ರೂ. ವಿಜಯ ಬ್ಯಾಂಕ್ ಗೆ 28.58 ಕೋಟಿ ರೂ. ಮತ್ತು ಇಂಡಿಯನ್ ಬ್ಯಾಂಕ್ ಗೆ 24.23 ಕೋಟಿ ರೂ. ವಂಚನೆಯಾಗಿದೆ ಎಂದು ಆರ್ ಟಿ ಐ ಮಾಹಿತಿಯಲ್ಲಿ ಬಹಿರಂಗವಾಗಿದೆ.

    ಮಾಹಿತಿ ಹಕ್ಕಿನ ಅಡಿ ಬೆಳಕಿಗೆ ಬಂದ ಉತ್ತರಕ್ಕೆ ಆರ್ಥಿಕ ತಜ್ಞ ಜಯಂತಿಲಾಲ್ ಭಂಡಾರಿ ಪ್ರತಿಕ್ರಿಯಿಸಿ, ವಂಚನೆಗೊಳಗಾಗಿರುವ 21 ಸಾರ್ವಜನಿಕ ವಲಯದ ಬ್ಯಾಂಕ್ ಗಳು ತೀರ ಸಂಕಷ್ಟದಲ್ಲಿವೆ. ಬ್ಯಾಂಕ್ ಗಳಿಗೆ ಆಗಿರುವ ಅಪಾರ ಪ್ರಮಾಣದ ವಂಚನೆಯಿಂದ ಮುಂದೆ ಸಾಲಗಳನ್ನು ನೀಡಲು ತೊಂದರೆಯಾಗುತ್ತದೆ. ಇದು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಬ್ಯಾಂಕ್‍ನಲ್ಲಿ ಭತ್ತ ಅಡವಿಟ್ಟ ರೈತರಿಗೆ ಅಧಿಕಾರಿಗಳಿಂದ ಶಾಕ್- ಗೋದಾಮಿನಲ್ಲಿಟ್ಟಿದ್ದ ಮೂಟೆಗಳೇ ಮಾಯ!

    ಬ್ಯಾಂಕ್‍ನಲ್ಲಿ ಭತ್ತ ಅಡವಿಟ್ಟ ರೈತರಿಗೆ ಅಧಿಕಾರಿಗಳಿಂದ ಶಾಕ್- ಗೋದಾಮಿನಲ್ಲಿಟ್ಟಿದ್ದ ಮೂಟೆಗಳೇ ಮಾಯ!

    ಕೊಪ್ಪಳ: ಕೆನರಾ ಬ್ಯಾಂಕ್‍ನಲ್ಲಿ ಭತ್ತ ಅಡವಿಟ್ಟ ರೈತರಿಗೆ ಬ್ಯಾಂಕ್ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಕೊಟ್ಟ ಸಾಲ ವಾಪಾಸ್ ನೀಡುವಂತೆ ನೋಟೀಸ್ ಕಳುಹಿಸಿರುವ ಬ್ಯಾಂಕ್ ಅಧಿಕಾರಿಗಳು, ಅಡವಿಟ್ಟ ಭತ್ತ ಗೋದಾಮಿನಿಂದ ಮಾಯವಾಗಿವೆ ಅಂತಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಹೊಸಕೇರಾ ಕ್ಯಾಂಪ್ ನಲ್ಲಿನ ಗೋದಾಮಿನಲ್ಲಿಟ್ಟಿರೋ ಭತ್ತದ ಮೂಟೆಗಳು ನಾಪತ್ತೆಯಾಗಿವೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಗೋದಾಮು ಮಾಲೀಕರು ಶಾಮೀಲಾಗಿ ಭತ್ತದ ಚೀಲ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. 2015ರಲ್ಲಿ ಸಿ.ಎಚ್ ಸುಬ್ರಮಣ್ಯಂ ಸೇರಿ ಐವರು ರೈತರು ತಲಾ 2500ರಂತೆ ಸುಮಾರು 12 ಸಾವಿರ ಭತ್ತದ ಮೂಟೆಯನ್ನು ಕೆನರಾ ಬ್ಯಾಂಕ್ ನಲ್ಲಿ ಅಡವಿಟ್ಟು ತಲಾ 25 ಲಕ್ಷ ಸಾಲ ಪಡೆದಿದ್ರು. ಆಗ ಕೆನರಾ ಬ್ಯಾಂಕ್ ತನ್ನ ಆಧೀನದಲ್ಲಿದ್ದ ಆದಿನಾರಾಯಣ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಈ ಎಲ್ಲ ಭತ್ತದ ಮೂಟೆ ಸಂಗ್ರಹಿಸಿತ್ತು.

    ಹಿಂದಿನ ವರ್ಷ ರೈತರು ಸಾಲ ವಾಪಾಸ್ ಮಾಡಿಲ್ಲ. ಇದ್ರಿಂದ ಕೆನರಾ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್ ನೀಡಿದ್ದಾರೆ. ಆಗ ರೈತರು ತಾವು ಅಡವಿಟ್ಟ ಭತ್ತದ ಮೂಟೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ರೈತರು ಖರೀದಿದಾರರನ್ನು ಕರೆದುಕೊಂಡು ಹೋದಾಗ ಗೋದಾಮಿನಲ್ಲಿ ಭತ್ತದ ಮೂಟೆಗಳೇ ಮಾಯವಾಗಿರೋದು ಬೆಳಕಿಗೆ ಬಂದಿದೆ.

    ಗೋದಾಮಿನ ಕೀಲಿ ಬ್ಯಾಂಕ್ ಮ್ಯಾನೇಜರ್ ಬಳಿಯೇ ಇರುತ್ತದೆ. ಗೋದಾಮಿನಿಂದ ಬರೋಬ್ಬರಿ 30 ಸಾವಿರ ಭತ್ತದ ಮೂಟೆಗಳು ಮಾಯವಾಗಿವೆ ಅನ್ನೋ ಆರೋಪವಿದೆ. ಆದ್ರೆ ಬ್ಯಾಂಕ್ ಅಧಿಕಾರಿಗಳು ಗೋದಾಮಿನ ಮಾಲೀಕನೇ ಭತ್ತದ ಮೂಟೆಯನ್ನ ದರೋಡೆ ಮಾಡಿದ್ದಾರೆ ಅಂತಿದ್ದಾರೆ.