Tag: ಕೆನಡಾ ಪ್ರಜೆ

  • ಟೂಲ್‍ಕಿಟ್ ತನಿಖೆ- ಪ್ರತಿಭಟನೆಗೆ ಕೆನಡಾ ಲಿಂಕ್, ರೈತ ನಾಯಕರ ಮೇಲೆ ಕಣ್ಣು

    ಟೂಲ್‍ಕಿಟ್ ತನಿಖೆ- ಪ್ರತಿಭಟನೆಗೆ ಕೆನಡಾ ಲಿಂಕ್, ರೈತ ನಾಯಕರ ಮೇಲೆ ಕಣ್ಣು

    – ಝೂಮ್ ಸಭೆಯಲ್ಲಿ ಪಾಲ್ಗೊಂಡಿದ್ದವರ ವಿವರ ಕೇಳಿದ ಪೊಲೀಸರು
    – ವಾಟ್ಸಪ್ ಗ್ರೂಪ್‍ಗೆ ಅಂತರಾಷ್ಟ್ರೀಯ ರೈತ ಪ್ರತಿಭಟನೆಯ ಹೆಸರು

    ನವದೆಹಲಿ: ದೆಹಲಿಯ ರೈತರ ದಂಗೆ ಹಾಗೂ ಕೆಂಪು ಕೋಟೆಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ರೈತರ ಪ್ರತಿಭಟನೆಗೆ ಕೆನಡಾ ಪ್ರಜೆಯ ಕುಮ್ಮಕ್ಕು ಇರುವುದು ತನಿಖೆ ವೇಳೆ ಪತ್ತೆಯಾಗಿದೆ.

    ದೆಹಲಿ ಪೊಲೀಸರು ಟೂಲ್‍ಕಿಟ್ ಕುರಿತು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಆಘಾತಕಾರಿ ಮಾಹಿತಿ ಲಭ್ಯವಾಗುತ್ತಿದೆ. ಖಲಿಸ್ಥಾನಿ ಪರ ಸಂಘಟನೆ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್(ಪಿಜೆಎಫ್) ಸಹ ಸಂಸ್ಥಾಪಕ ಮೋ ಧಲಿವಾಲ್  ಶಂತನು ಮುಲಿಕ್‌ ನನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ದೆಹಲಿ ಹೊರವಲಯದಲ್ಲಿ ರೈತರ ಪ್ರತಿಭಟನೆ ಹಾಗೂ ಆಂದೋಲನ ಪ್ರಾರಂಭವಾಗುತ್ತಿದ್ದಂತೆ ರೈತ ನಾಯಕರನ್ನು ಸಂಪರ್ಕಿಸಬೇಕು ಎಂದು ಕೇಳಿಕೊಂಡಿದ್ದ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿದೆ ಮಾಡಿದೆ.

     ಮುಂಬೈ ಮೂಲದ ವಕೀಲೆ ಹಾಗೂ ಹೋರಾಟಗಾರ್ತಿ ನಿಕಿತಾ ಜಾಕೋಬ್ ಜೊತೆ ಶಂತನು ನಿರಂತರ ಸಂಪರ್ಕ ಹೊಂದಿದ್ದ. ಟೆಲಿಗ್ರಾಮ್, ಇನ್‍ಸ್ಟಾಗ್ರಾಮ್, ಪ್ರೊಟೋಮೇಲ್ ಬಳಸಿ ಇಬ್ಬರೂ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ರೈತರ ಪ್ರತಿಭಟನೆ ಕುರಿತು ಸ್ವೀಡಿಷ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್ ಹಂಚಿಕೊಂಡಿರುವ ಟೂಲ್‍ಕಿಟ್‍ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಜಾಕೋಬ್ ಸೋಮವಾರ ಬಾಂಬೆ ಹೈ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾಳೆ.

    ಮುಂಬೈ ಮೂಲದ ನಿಕಿತಾ ಜಾಕೋಬ್ ಶನಿವಾರ ಬಂಧಿಸಲ್ಪಟ್ಟಿದ್ದ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಹಾಗೂ ಈ ಪ್ರಕರಣದ ಶಂಕಿತ ಶಾಂತನುನನ್ನು ಸಂಪರ್ಕಿಸಿರುವುದು ಇದೇ ವೇಳೆ ಬಹಿರಂಗವಾಗಿದೆ.

    ಮೂಲಗಳ ಪ್ರಕಾರ, ಧಲಿವಾಲ್ ಕೇವಲ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳನ್ನು ಮಾತ್ರ ಸಂಪರ್ಕಿಸಿಲ್ಲ. ಬದಲಿಗೆ ನವೆಂಬರ್‍ನಲ್ಲಿ ದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದ ಕೆನಡಾದ ಸಂಸದರ ಜೊತೆ ಸಹ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    ಟೂಲ್‍ಕಿಟ್ ದಾಖಲೆ ತಯಾರಿಕೆಯಲ್ಲಿ ಕೆಲ ರೈತ ಮುಖಂಡರ ಪಾತ್ರ ಇರುವ ಬಗ್ಗೆ ಸಹ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೇಕ್ ಐಡಿ ಬಳಸಿ ಗಣರಾಜ್ಯೋತ್ಸ ದಿನದಂದು ಹಿಂಸಾಚಾರ ಬಡೆಸುವ ಬಗ್ಗೆ ಜನವರಿ 11ರಂದು ಜಾಕೋಬ್, ದಿಶಾ ಹಾಗೂ ಶಾಂತನು ಝೂಮ್ ಆ್ಯಪ್ ಮೂಲಕ ಮೀಟಿಂಗ್ ನಡೆಸಿದ್ದರು. ಹೀಗಾಗಿ ಈ ಮೀಟಿಂಗ್‍ನಲ್ಲಿ ಭಾಗವಹಿಸಿದವರ ಯುಆರ್‍ಎಲ್ ಹಾಗೂ ಐಪಿ ಅಡ್ರೆಸ್ ನೀಡುವಂತೆ ದೆಹಲಿ ಪೊಲೀಸರು ಝೂಮ್ ಸಂಸ್ಥೆಗೆ ಪತ್ರ ಬರೆದಿದ್ದಾರೆ.

    ಟೂಲ್‍ಕಿಟ್‍ನ್ನು ಕಳುಹಿಸಲು ಡಿಸೆಂಬರ್‍ನಲ್ಲಿ ದಿಶಾ ರಚಿಸಿದ ವಾಟ್ಸಪ್ ಗ್ರೂಪ್‍ಗೆ ಅಂತರಾಷ್ಟ್ರೀಯ ರೈತರ ಮುಷ್ಕರ ಎಂದು ಹೆಸರಿಡಲಾಗಿತ್ತು. ಈಗ ಡಿಲೀಟ್ ಮಾಡಲಾದ ಈ ಗುಂಪಿನಲ್ಲಿ 10ಕ್ಕೂ ಹೆಚ್ಚು ಸದಸ್ಯರನ್ನು ಸೇರಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಗ್ರೂಪ್‍ನ ವಿವರಗಳು ಹಾಗೂ ಸದಸ್ಯರ ಚಾಟ್‍ಗಳನ್ನು ನೀಡುವಂತೆ ಪೊಲೀಸರು ವಾಟ್ಸಪ್‍ಗೆ ಸಹ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.