Tag: ಕೆಥೋಲಿಕ್

  • ದೇವಾಲಯಗಳ ನಗರಿಯಲ್ಲಿ ಮಾತೆ ಮೇರಿಯ ಜನ್ಮದಿನ ಸಂಭ್ರಮ

    ದೇವಾಲಯಗಳ ನಗರಿಯಲ್ಲಿ ಮಾತೆ ಮೇರಿಯ ಜನ್ಮದಿನ ಸಂಭ್ರಮ

    ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಇಂದು ಮಾತೆ ಮೇರಿಯಮ್ಮನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

    ಏಸುಕ್ರಿಸ್ತನ ತಾಯಿ ಮೇರಿಯನ್ನು ತೊಟ್ಟಿಲಿನಲ್ಲಿ ತೂಗಿ, ಬಣ್ಣ ಬಣ್ಣದ ಹೂವು ಎಸೆದು ಭೂಮಿಗೆ ಸ್ವಾಗತಿಸಲಾಯಿತು. ಮಾತೆ ಮೇರಿಯ ಜನ್ಮದಿನದ ಶುಭದಿನವನ್ನು ಕರಾವಳಿಯಲ್ಲಿ ತೆನೆ ಹಬ್ಬ ಅಂತಾನೂ ಕರೆಯುತ್ತಾರೆ.

    ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಅದ್ಧೂರಿಯಾಗಿ ಮೋತಿ ಫೆಸ್ಟ್ ನಡೆಯಿತು. ಉಡುಪಿ ಧರ್ಮಗುರುಗಳು ಮಾತೆ ಮೇರಿಯನ್ನು ತೊಟ್ಟಿಲಿನಲ್ಲಿ ಹೊತ್ತು ತರುವ ಮೆರವಣಿಗೆಯ ನೇತೃತ್ವವನ್ನ ವಹಿಸಿದ್ದರು. ಶಿಸ್ತುಬದ್ಧ ವಾದ್ಯಗೋಷ್ಠಿಯ ಹಿನ್ನೆಲೆಯಲ್ಲಿ ಪೂಜಾವಿಧಿ ನಡೆಯಿತು.

    ಚರ್ಚ್‍ಗೆ ಬರುವ ಭಕ್ತರು ಮನೆಯಲ್ಲೇ ಬೆಳೆದ ಹೂವನ್ನು ತರುತ್ತಾರೆ. ಪೂಜಾವಿಧಿ ಸಂದರ್ಭ ಭಕ್ತರು ಮಾತೆ ಮೇರಿಯನ್ನು ಮಲಗಿಸಿದ ತೊಟ್ಟಿಲಿನತ್ತ ಬಣ್ಣಬಣ್ಣದ ಹೂವು ಎಸೆಯುತ್ತಾರೆ. ವಿವಿಧ ಬಣ್ಣದ ಹೂವುಗಳು ತೊಟ್ಟಿಲಿನತ್ತ ತೂರಿಬರುವ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಚೆಂದ.

    ಮಾಂಸಪ್ರಿಯ ಕ್ರೈಸ್ತ ಸಮುದಾಯದವರು ಇಂದು ಶುದ್ಧ ಸಸ್ಯಾಹಾರಿಗಳು. ಮನೆಯಲ್ಲೇ ಬೆಳೆದ ಹೂವುಗಳನ್ನು, ತರಕಾರಿಗಳನ್ನು ಚರ್ಚ್‍ಗೆ ತಂದು ಪೂಜಿಸುತ್ತಾರೆ. ಧರ್ಮಗುರುಗಳು ಚರ್ಚ್‍ಗೆ ಬಂದ ಭಕ್ತರಿಗೆ ತೆನೆಗಳನ್ನು ವಿತರಿಸುತ್ತಾರೆ.