Tag: ಕೆಜೆಪಿ

  • ಇದು ಕೆಜೆಪಿ ಪಾರ್ಟಿ 2 ಇದ್ದಂತೆ – ಕಳ್ಳರು, ಲಫಂಗರು ಹೆಚ್ಚು ಸೇರ್ತಿದ್ದಾರೆ: ಯತ್ನಾಳ್‌ ವ್ಯಂಗ್ಯ

    ಇದು ಕೆಜೆಪಿ ಪಾರ್ಟಿ 2 ಇದ್ದಂತೆ – ಕಳ್ಳರು, ಲಫಂಗರು ಹೆಚ್ಚು ಸೇರ್ತಿದ್ದಾರೆ: ಯತ್ನಾಳ್‌ ವ್ಯಂಗ್ಯ

    ವಿಜಯಪುರ: ಯಡಿಯೂರಪ್ಪನವರದ್ದು (BS Yediyurappa) ಕೆಜೆಪಿ 1, ಇದು ಕೆಜೆಪಿ 2, ಮೊಮ್ಮಗನದು ಕೆಜೆಪಿ 3 ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌(Basanagouda Patil Yatnal) ಬಿಜೆಪಿ ರಾಜ್ಯ ಘಟಕದ ನೂತನ ಪಟ್ಟಿಗೆ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಪಟ್ಟಿಯ ಆಯುಷ್ಯ 2024ರ ಲೋಕಸಭೆ ಚುನಾವಣೆ. 28 ಸೀಟ್ ತರುತ್ತೇನೆ ಅಂತಾ ಹೇಳಿದ್ದಾರೆ. 28 ರಲ್ಲಿ ಒಂದು ಕಡಿಮೆ ಬಿದ್ದರೂ ಚಿಕ್ಕಮಕ್ಕಳು ಹೇಗೆ ಸಿಗರೇಟ್ ಪ್ಯಾಕ್ ಮನೆ ಮಾಡಿರ್ತಾರೆ ಆ ರೀತಿಯಾಗಿ ಈ ಪಟ್ಟಿ ಹಾಗೆ ಬಿದ್ದು ಹೋಗುತ್ತದೆ ಎಂದರು.  ಇದನ್ನೂ ಓದಿ: ಬಿಜೆಪಿ ರಾಜ್ಯ ಘಟಕಕ್ಕೆ 10 ಉಪಾಧ್ಯಕ್ಷರು; ಪದಾಧಿಕಾರಿಗಳ ತಂಡ ಪುನಾರಚನೆ – ಯಾರಿಗೆ ಯಾವ ಸ್ಥಾನ?

    ಈಗ ರಾಜಕೀಯದಲ್ಲಿ ಏನಾಗಿದೆ ಎಂದರೆ ಲಂಪಟರು ಬಹಳ ಇದ್ದಾರೆ. ಅವರೆಲ್ಲ ಹಲ್ಕಾ ಕೆಲಸ ಮಾಡುತ್ತಾರೆ. ಇವತ್ತು ಮೌಲ್ಯಾಧಾರಿತ ರಾಜಕಾರಣ ಇಲ್ಲ. ಎಲ್ಲಾ ಕಳ್ಳರು, ಲಫಂಗರು ಹೆಚ್ಚು ಸೇರುತ್ತಿದ್ದಾರೆ. ಒಳ್ಳೆಯವರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. 2024 ರ ಚುನಾವಣೆಯ ನಂತರ ಮೇಜರ್ ಆಪರೇಷನ್ ಮಾಡದೇ ಇದ್ದರೆ ಮುಂದಿನ ನಿರ್ಣಯ ನಾನು ಮಾಡುತ್ತೇನೆ ಎಂದು ಹೇಳಿದರು.

    ಸಾರ್ವಜನಿಕ ಕೆಲಸ ಮಾಡಲು, ಕ್ರಾಂತಿ ಮಾಡಲು ಅಧಿಕಾರ ಬೇಕಾಗಿಲ್ಲ ಮತ್ತು ಇದು ಕೊನೆಯಲ್ಲ. 2028ಕ್ಕೆ ಮತ್ತೆ ಕ್ಷೇತ್ರ ಮರು ವಿಂಗಡನೆ ಆಗಲಿದೆ. ವಿಜಯಪುರದ ಲೋಕಸಭಾ ಸ್ಥಾನ ಮೂರು ಆಗಲಿದ್ದು, ಲೋಕಸಭೆಯ ಸ್ಥಾನ 900 ಆಗಲಿದೆ. ಕರ್ನಾಟಕ ವಿಧಾನಸಭೆ 290 ಸ್ಥಾನಕ್ಕೆ ಏರಿಕೆ ಆಗಲಿದೆ. ಆಗ ಏನೇನು ಆಗುತ್ತದೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.

     

    ನಾನು ಸಿಎಂ ಆಗುವುದಿದ್ದರೆ ಯಾರು ತಪ್ಪಿಸಲು ಸಾಧ್ಯವಿಲ್ಲ. ಆಗಲಿಲ್ಲ ಅಂದರೆ ನನಗೇನು ಹತಾಶೆ ಇಲ್ಲ. ಸಿಎಂ ಅದವರು ಎಲ್ಲಿದ್ದಾರೆ ಈಗ? ಮಾಜಿ ಮುಖ್ಯಮಂತ್ರಿಗಳನ್ನು ಯಾರಾದ್ರೂ ಕೇಳ್ತಾರಾ? ಅವರಿಗೆ 100 ಜನರ ಕೂಡಿಸಲು ಹೇಳಿ. ಹಣಕೊಟ್ಟು ಕೊಟ್ಟು ತಮ್ಮ ಜಿಲ್ಲೆಯಲ್ಲಿ ಜನರನ್ನು ಕೂಡಿಸುವ ಪರಿಸ್ಥಿತಿ ಬಂದಿದೆ ಎಂದರು.

    ನನ್ನ ಮಗನನ್ನು ಉದ್ಧಾರ ಮಾಡದೇ ಇದ್ದರೆ ನಾವು ಲೋಕಸಭೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಅವರು ಹಾಳಾಗಿ ಹೋಗಲಿ ಅಂತಾ ಕೊಟ್ಟು ಬಿಟ್ಟಿದ್ದಾರೆ. ಕಳ್ಳರ ಕೈಯಲ್ಲಿ ಬೀಗ ಕೊಟ್ಟಿದ್ದಾರೆ. ಆ ಬೀಗ 2024ರವರೆಗೆ ಮಾತ್ರ. 28 ಸೀಟ್ ಬರಲಿಲ್ಲ ಅಂದರೆ ಬೀಗ ಕಸಿದುಕೊಳ್ಳುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.

     

  • ಮಾತು ತಪ್ಪದ ಯಡಿಯೂರಪ್ಪ ಮಾತು ತಪ್ಪಿ ಬಿಟ್ರಾ?

    ಮಾತು ತಪ್ಪದ ಯಡಿಯೂರಪ್ಪ ಮಾತು ತಪ್ಪಿ ಬಿಟ್ರಾ?

    – ಸುಕೇಶ್ ಡಿಎಚ್
    ರಾಜ್ಯ ರಾಜಕಾರಣದಲ್ಲಿ ನುಡಿದಂತೆ ನಡೆಯುವ ನಾಯಕ ಅನ್ನೋ ಇಮೇಜ್ ಉಳಿಸಿಕೊಂಡ ಏಕೈಕ ನಾಯಕ ಅಂದರೆ ನೋ ಡೌಟ್ ಅದು ಒನ್ ಅಂಡ್ ಓನ್ಲಿ ಯಡಿಯೂರಪ್ಪ. ಆಡಳಿತದ ವಿಷಯದಲ್ಲಿ ಯಡಿಯೂರಪ್ಪ ನೂರಕ್ಕೆ ನೂರು ನುಡಿದಂತೆ ನಡೆದಿದ್ದಾರೆ ಎಂದರೆ ಅದು ಖಂಡಿತ ಸುಳ್ಳು. 2008ರಲ್ಲೇ ಇರಬಹುದು, ಈಗಲೇ ಇರಬಹುದು ಹೇಳಿದ್ದನ್ನೆಲ್ಲ ಮಾಡಿಲ್ಲ, ಮಾಡ್ತೀನಿ ಅಂದ ಎಲ್ಲ ಕೆಲಸವೂ ಮಾಡಿ ಮುಗಿಸಿಲ್ಲ. ಆದರೆ ತಮ್ಮನ್ನು ನಂಬಿ ಬಂದವರನ್ನ ಎಂದಿಗೂ ಕೈ ಬಿಡಲ್ಲ ಅನ್ನೋದರಲ್ಲಿ ಕೊನೆ ಪಕ್ಷ ನಂಬಿದವರನ್ನ ಕೈ ಹಿಡಿಯುವ ಪ್ರಯತ್ನವನ್ನಾದರೂ ಪ್ರಾಮಾಣಿಕವಾಗಿ ಮಾಡುವುದರಲ್ಲಿ ಯಡಿಯೂರಪ್ಪಗೆ ಯಡಿಯೂರಪ್ಪನವರೇ ಸಾಟಿ.

    ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಅನ್ನೋ ಕಾಲದಿಂದ ಈಗಿನವರೆಗೂ ಹಿಡಿದ ಹಟ ಸಾಧಿಸುವುದರಲ್ಲಿ ಯಡಿಯೂರಪ್ಪ ಛಲದಂಕ ಮಲ್ಲ ಅನ್ನೋದರಲ್ಲಿ ನೋ ಡೌಟ್. ತಮ್ಮ ರಾಜಕೀಯ ಜೀವನದ ಉದ್ದಕ್ಕೂ `ಕೊಟ್ಟ ಮಾತಿಗೆ ತಪ್ಪದ ಯಡಿಯೂರಪ್ಪ’ ಎಂದೇ ಹೆಸರು ಗಳಿಸಿದವರು. ಕೆಲವೊಮ್ಮೆ ಎಡವಿದರೂ ಅದನ್ನು ಇನ್ನೊಂದು ರೀತಿಯಲ್ಲಿ ಸರಿಪಡಿಸಿಕೊಂಡು ಮಾತು ಕೊಟ್ಟವರನ್ನು ಸಮಾಧಾನ ಪಡಿಸುವ ಛಾತಿಯೂ ಯಡಿಯೂರಪ್ಪನವರಿಗೆ ಹೊಸತಲ್ಲ. ಆದರೆ ಇತರೇ ನಾಯಕರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ ಎಂಬಂತ ವರ್ತನೆಗಿಂತ ಯಡಿಯೂರಪ್ಪ ನೂರು ಪಾಲು ಮೇಲು. ಅವರ ಆ ಗುಣ ಅವರಿಗೆ ಪಕ್ಷವನ್ನು ಮೀರಿದ ಇಮೇಜನ್ನ ತಂದುಕೊಟ್ಟಿದ್ದು ಸುಳ್ಳಲ್ಲ. ಆದರೆ ಈ ಬಾರಿ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಬಿಎಸ್ ವೈ ಎಡವಿದ್ರು ಅನ್ನೋದು ಸುಳ್ಳಲ್ಲ.

    ರಾಜೀನಾಮೆ ಕೊಟ್ಟು ಸಮ್ಮಿಶ್ರ ಸರಕಾರವನ್ನ ಕೆಡವಿದ 17 ಜನರಿಗೂ ಮಂತ್ರಿ ಭಾಗ್ಯ ಗ್ಯಾರಂಟಿ ಅನ್ನೋ ಭರವಸೆ ನೀಡಲಾಗಿತ್ತು. ಪ್ರತಾಪ ಗೌಡ ಪಾಟೀಲ್ ಹಾಗೂ ಮುನಿರತ್ನರನ್ನು ಹೊರತು ಪಡಿಸಿ ಉಳಿದ 15 ಜನ ಮಂತ್ರಿ ಸ್ಥಾನದ ಕನಸನ್ನ ಕಣ್ಣು ತುಂಬಿ ತುಂಬಿಕೊಂಡವರೆ. ಆದರೆ ಸೋಲು ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಕನಸಿಗೆ ತಣ್ಣೀರು ಎರಚಿದ್ರೆ ಚುನಾವಣೆಯಲ್ಲಿ ಸ್ಪರ್ಧೆಯೇ ಮಾಡದ ರೋಶನ್ ಬೇಗ್ ಹಾಗೂ ಆರ್.ಶಂಕರ್ ಮಂತ್ರಿಗಿರಿಯ ಕನವರಿಕೆಯಲ್ಲೇ ದಿನ ಕಳೆಯುವಂತಾಗಿದೆ. ಹಾಗೆ ನೋಡೋದಾದರೆ ಗೆದ್ದವರ ಪೈಕಿ 11 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಸಾಹುಕಾರನ ನೆರಳಿನಂತೆ ಕಾಣುವ ಮಹೇಶ್ ಕುಮಟಳ್ಳಿ ಸಚಿವ ಸ್ಥಾನದಿಂದ ವಂಚಿತರಾದರು. ಸಿಎಂ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿ ಕುಮಟಳ್ಳಿಯನ್ನ ಸೈಡಿಗೆ ತಳ್ಳಿದರು. ಪ್ರತಿಭಟನೆಯ ಧ್ವನಿ ಇಲ್ಲದೆ ಮಹೇಶ್ ಕುಮಟಳ್ಳಿ ಕಣ್ಣಂಚಿನಲ್ಲಿ ನೀರು ತಂದುಕೊಂಡು ಮೌನಕ್ಕೆ ಜಾರಿದ್ದಾರೆ.

    ಇನ್ನೊಂದೆಡೆ ಸೋಲಾಗಲಿ, ಗೆಲುವಾಗಲಿ ನಮ್ಮ ತ್ಯಾಗಕ್ಕೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆಯಲ್ಲೇ ವಿಶ್ವನಾಥ್, ಎಂಟಿಬಿ, ರೋಶನ್ ಬೇಗ್ ಹಾಗೂ ಆರ್.ಶಂಕರ್ ಆಶಾವಾದಿಗಳಾಗಿದ್ದರು. ಅವರಿಗಿದ್ದ ಧೈರ್ಯ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ ಅನ್ನೋದು. ಆದರೆ ಕೊಟ್ಟ ಮಾತಿಗೆ ತಪ್ಪಲೇಬೇಕಾದ ಅನಿವಾರ್ಯತೆ ಯಡಿಯೂರಪ್ಪಗೆ ಎದುರಾಗಿದೆ. ವೈಯಕ್ತಿಕ ನೆಲೆಗಟ್ಟಲ್ಲಿ ಯಡಿಯೂರಪ್ಪ ಎಷ್ಟೇ ಪ್ರಬಲರಿರಬಹುದು ಆದರೆ ಹೈಕಮಾಂಡ್ ನಿರ್ದೆಶನ ಹಾಗೂ ಪ್ರಸ್ತುತ ರಾಜಕೀಯ ಸನ್ನಿವೇಶ ಎರಡೂ ಯಡಿಯೂರಪ್ಪನವರ ಕೈ ಕಟ್ಟಿ ಹಾಕಿರುವುದಂತು ಸತ್ಯ.

    ಎಲ್ಲಕ್ಕಿಂತ ಮುಖ್ಯವಾಗಿ ಸ್ವತಃ ಯಡಿಯೂರಪ್ಪನವರೇ ಕೈ ಕೈ ಹಿಸುಕಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದ್ದು ಮೂಲ ಬಿಜೆಪಿಗರ ವಿಷಯದಲ್ಲೇ. ಉಮೇಶ್ ಕತ್ತಿಯಂತ ಅಸಮಾಧಾನಿತರನ್ನ ಸಮಾಧಾನ ಪಡಿಸುವ ಭರದಲ್ಲಿ ಸಚಿವ ಸ್ಥಾನದ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ಮಾತು ಉಳಿಸಿಕೊಳ್ಳಲಾರದೆ ಕೈ ಚೆಲ್ಲಿದ್ದಾರೆ. ಇನ್ನು ನೂತನ ಸಚಿವರಲ್ಲಿ ಯಾರ್ಯಾರಿಗೆ ಯಾವ್ಯಾವ ಖಾತೆಯ ಭರವಸೆ ನೀಡಿದ್ದಾರೋ ಗೊತ್ತಿಲ್ಲ. ಕೊಟ್ಟ ಮಾತಿನಂತೆ ಖಾತೆ ಹಂಚಲಾಗದಿದ್ದರೆ ಸಿಎಂ ಮತ್ತಷ್ಟು ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ.

    ಹಾಗೇ ನೋಡಿದರೆ ಇಂತಹುದೆ ಸಂದಿಗ್ಧ ಪರಿಸ್ಥಿತಿಯನ್ನ 2013 ರಲ್ಲೂ ಯಡಿಯೂರಪ್ಪ ಎದುರಿಸಿದ್ದರು. ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಕಟ್ಟಿದಾಗಲೂ ಇಂತಹುದೇ ಸ್ಥಿತಿ ನಿರ್ಮಾಣವಾಗಿತ್ತು. ಭರವಸೆ ನೀಡಿ ತಮ್ಮೊಂದಿಗೆ ಕರೆದೊಯ್ದ ನಾಯಕರಿಗೆ ಸೂಕ್ತ ಸ್ಥಾನಮಾನ ಕೊಡಿಸುವಲ್ಲಿಯೂ ವಿಫಲರಾಗಿದ್ದರು. ಯಡಿಯೂರಪ್ಪರನ್ನು ನಂಬಿಕೊಂಡು ದಿನ ಬೆಳಗಾದರೆ ಬಿಜೆಪಿ ನಾಯಕರಿಗೆ ಬೈಯ್ಯುತ್ತಿದ್ದ ಲಕ್ಷ್ಮಿನಾರಾಯಣ ಹಾಗೂ ಧನಂಜಯ ಕುಮಾರ್ ಆನಂತರ ಎಷ್ಟೇ ಬಾಗಿಲು ಬಡಿದರೂ ಬಿಜೆಪಿ ಬಾಗಿಲು ಅವರ ಪಾಲಿಗೆ ತೆರೆಯಲೇ ಇಲ್ಲ.

    ಬಿಜೆಪಿ ಭೀಷ್ಮ ಅಡ್ವಾಣಿಯವರಿಗೆ ಬೈದ ಧನಂಜಯ್ ಕುಮಾರ್ ಅವರ ರಾಜಕೀಯ ಭವಿಷ್ಯವೇ ಮುಗಿದು ಹೋಯ್ತು. ಯಡಿಯೂರಪ್ಪರನ್ನ ನಂಬಿದರೆ ಅತಂತ್ರವೇ ಖಾಯಂ ಅಂದುಕೊಂಡ ಲಕ್ಷ್ಮಿನಾರಾಯಣ್ ಕಾಂಗ್ರೆಸ್ ಸೇರಿಕೊಂಡರು. ವಾಪಸ್ ಬಿಜೆಪಿಗೆ ಬಂದು ಮತ್ತೆ ಹಳೆಯ ಹಿಡಿತವನ್ನೇ ಸಾಧಿಸಿದರು. ತಮ್ಮ ಬೆಂಬಲಿಗರ ಹಿತ ಕಾಯುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಲಿಲ್ಲ. ಈಗ ಅಂತಹುದೆ ಸಂಕಷ್ಟಕ್ಕೆ ಯಡಿಯೂರಪ್ಪ ಸಿಲುಕಿದ್ದಾರೆ. ಸ್ವತಃ ಅವರೇ ಅಧಿಕಾರ ನಡೆಸುತ್ತಿದ್ದಾರೆ, ಆದರೆ ಭರವಸೆ ನೀಡಿದವರಿಗೆಲ್ಲಾ ಅಧಿಕಾರ ಕೊಡಿಸಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ.

    ಯಡಿಯೂರಪ್ಪ ಮಾತು ಕೊಟ್ಟರೆ ಮುಗಿಯಿತು ಅನ್ನೋ ಮಾತು ನಿಧಾನಕ್ಕೆ ಸುಳ್ಳಾಗುತ್ತಿದೆಯೇ ಗೊತ್ತಿಲ್ಲ ಆದರೆ ಹೊಸದಾಗಿ ಯಾರಿಗೂ ಮಾತು ಕೊಡದಂತಹ ಸ್ಥಿತಿಯಲ್ಲಿ ಯಡಿಯೂರಪ್ಪ ಇದ್ದಾರೆ ಅನ್ನುವುದಂತೂ ನಿಜ.

  • ಪಬ್ಲಿಕ್ ಟಿವಿ ಸಂದರ್ಶನದಲ್ಲಿ ರಾಜಕೀಯ ರಹಸ್ಯ ಬಿಚ್ಚಿಟ್ಟ ಬಿಎಸ್‍ವೈ

    ಪಬ್ಲಿಕ್ ಟಿವಿ ಸಂದರ್ಶನದಲ್ಲಿ ರಾಜಕೀಯ ರಹಸ್ಯ ಬಿಚ್ಚಿಟ್ಟ ಬಿಎಸ್‍ವೈ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನ ನೀಡಿದ್ದು, ಹಲವು ರಾಜಕೀಯ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಕೇಳಿದ ನೇರಾ-ನೇರ ಪ್ರಶ್ನೆಗಳಿಗೆ ಯಡಿಯೂರಪ್ಪ ಉತ್ತರ ನೀಡಿದ್ದಾರೆ.

    ಪ್ರಶ್ನೆ: ಯಡಿಯೂರಪ್ಪ ಬದಲಾಗಿದ್ದಾರೆ?
    ಬಿಎಸ್‍ವೈ: ಇವತ್ತಿನ ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿದ್ದರಿಂದ ಕೋಪವನ್ನು ತೊರೆದು ಶಾಂತ ಸ್ವಭಾವ ಬೆಳಸಿಕೊಂಡಿದ್ದೇನೆ. ನನ್ನ ಸ್ವಭಾವ ಮುಂದಿನ ದಿನಗಳಲ್ಲಿ ಒಳಿತು ಮಾಡಲಿದೆ.

    ಪ್ರಶ್ನೆ: 2013ರ ಚುನಾವಣೆಯ ನೆನಪುಗಳನ್ನು ಮರೆತು ಮತ್ತೆ ಪಕ್ಷಕ್ಕೆ ಯಡಿಯೂರಪ್ಪ ಒಗ್ಗಿಕೊಂಡ್ರಾ?
    ಬಿಎಸ್‍ವೈ: 2013ರಲ್ಲಿ ಐದು ವರ್ಷದ ನಂತರ ಇಂದು ಯಡಿಯೂರಪ್ಪ ಹೀಗೆ ಇರ್ತಾರಾ ಅಂತಾ ಖುದ್ದು ನಾನೇ ಕಲ್ಪನೆ ಮಾಡಿಕೊಂಡಿರಲಿಲ್ಲ. ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನನ್ನ ಮೇಲೆ ಅದಮ್ಯವಾದ ವಿಶ್ವಾಸವನ್ನಿಟ್ಟು ಪಕ್ಷದ ಅಧ್ಯಕ್ಷ ಮತ್ತು ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಿದ್ರು. ಇಂದು ನಾನು ಅವರ ನಂಬಿಕೆಯನ್ನು ಸತ್ಯಮಾಡಲು ಹೊರಟಿದ್ದೇನೆ.

    ಪ್ರಶ್ನೆ: ಇಂದು ಟಿಕೆಟ್ ಸಿಗದೇ ಅಸಮಾಧಾನಗೊಂಡ ಅಭ್ಯರ್ಥಿಗಳಿಗೆ ನಿಮ್ಮ ಉತ್ತರವೇನು?
    ಬಿಎಸ್‍ವೈ: ಕೆಜೆಪಿ ಬಗ್ಗೆ ಪ್ರಶ್ನೆ ಇಂದು ಹುಟ್ಟಿಕೊಳ್ಳುವುದಿಲ್ಲ. ಕೆಜೆಪಿಯಲ್ಲಿ ಇದ್ದವನಿಗೆ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಾಡಿದ್ದರಿಂದ ಈ ಪ್ರಶ್ನೆ ಬರಲ್ಲ. ಈ ಬಾರಿ ವಿಶೇಷವಾಗಿ ಎರಡ್ಮೂರು ಸಮೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ನಾನು ಯೋಚನೆ ಮಾಡಿದ ಹಾಗೆ ಶೇ.90ರಷ್ಟು ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ.

    ಪ್ರಶ್ನೆ: ಇತ್ತೀಚೆಗೆ ಕೆಲವು ಸಮೀಕ್ಷೆಗಳ ಪ್ರಕಾರ ಬಿಜೆಪಿ ನೂರರ ಗಡಿ ದಾಟ್ತಿಲ್ಲ ಯಾಕೆ?
    ಬಿಎಸ್‍ವೈ: ಇಂದು ನಾನು ಹೇಳುತ್ತಿದ್ದೇನೆ ನಮ್ಮದು ಮಿಷನ್ 150. ಈವಾಗ್ಲೂ ನಾವು 150 ಸೀಟ್ ಗೆಲ್ಲುತ್ತೇವೆ. ಇನ್ನೂ ಅಭ್ಯರ್ಥಿಗಳ ಘೋಷಣೆಯಾಗದೇ ಇರುವ ಸ್ಥಿತಿಯಲ್ಲಿ ಸಮೀಕ್ಷೆಗಳು ನಡೆದಿವೆ. ಇದಕ್ಕೆ ಉತ್ತರ ಮೇ 15ರಂದು ಸಿಗಲಿದೆ.

    ಪ್ರಶ್ನೆ: ಈ ಬಾರಿ ಜನರು ಯಡಿಯೂರಪ್ಪ ಅವರಿಗೆ ಮತ ಏಕೆ ನೀಡ್ಬೇಕು?
    ಬಿಎಸ್‍ವೈ: ನಾವು ಅಧಿಕಾರ ಬಂದ ಮೇಲೆ ನಮ್ಮ ಮೊದಲ ಆದ್ಯತೆ ನಾಡಿನ ರೈತರು ಮತ್ತು ನೀರಾವರಿ ಅಭಿವೃದ್ಧಿ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು, ರೈತರ ಜಮೀನಿಗೆ ನೀರಿನ ಸೌಲಭ್ಯ ಒದಗಿಸುವುದು. ಕೈಗಾರಿಕೆಗಳಿಗೆ ವಿದ್ಯುತ್ ಕಡಿಮೆಯಾದ್ರೆ, ರೈತರಿಗೆ 12 ಗಂಟೆ ವಿದ್ಯುತ್ ನೀಡುವುದು ನನ್ನ ಸಂಕಲ್ಪ. ರಾಜ್ಯದ ಜನರು ಸಿದ್ದರಾಮಯ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಕಾಂಗ್ರೆಸ್ ನಾಯಕರಲ್ಲಿಯೇ ಹೊಂದಾಣಿಕೆ ಇಲ್ಲ. ಆದ್ರೆ ಸಿಎಂ ಸಿದ್ದರಾಮಯ್ಯ ಎಲ್ಲೆ ನಿಂತ್ರೂ ಸೋಲುವುದು ಗ್ಯಾರಂಟಿ ಅಂದ್ರು.

    ಪ್ರಶ್ನೆ: ವೀರಶೈವ ಲಿಂಗಾಯತ ವಿವಾದ ಬಿಜೆಪಿಗೆ ತಿರುಗು ಬಾಣವಾಗುವ ಸಾಧ್ಯತೆ ಇದೆನಾ?
    ಬಿಎಸ್‍ವೈ: ಇದೂವರೆಗೂ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಇದೂವರೆಗೂ ಯಾರು ಸಹ ಲಿಂಗಾಯತ ಧರ್ಮದ ಬಗ್ಗೆ ಪ್ರಶ್ನೆ ಕೇಳಿಲ್ಲ. ಆದ್ರೆ ಕಾಂಗ್ರೆಸ್ 55 ರಿಂದ 60 ಸೀಟ್ ಮಾತ್ರ ಗೆಲ್ಲಲಿದೆ.

    ಪ್ರಶ್ನೆ: ಜೆಡಿಎಸ್ ಬಗ್ಗೆ ಬಿಜೆಪಿಗೆ ಸಾಫ್ಟ್ ಕಾರ್ನರ್ ಇದೆನಾ?
    ಬಿಎಸ್‍ವೈ: ನಮಗೂ ಜೆಡಿಎಸ್ ಗೂ ಯಾವುದೇ ಸಂಬಂಧವಿಲ್ಲ. ಇತ್ತೀಚೆಗೆ ರಾಹುಲ್ ಗಾಂಧಿ ಜೆಡಿಎಸ್ ಬಗ್ಗೆ ಮಾತನಾಡಿ ಇರುವ ಅಲ್ಪ ಸ್ವಲ್ಪ ಗೌಡ ಸಮುದಾಯದ ಮತಗಳನ್ನು ಕಳೆದುಕೊಂಡಿದ್ದಾರೆ. ಈ ಎರಡು ತಿಂಗಳ ಹಿಂದೆ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ನನ್ನ ಬಗ್ಗೆ ಏನೇ ಮಾತನಾಡಿದ್ರು ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪ್ರಶ್ನೆ: ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದ್ರೆ ಏನಾಗುತ್ತದೆ?
    ಬಿಎಸ್‍ವೈ: ಇಂದಿನ ಯುವ ಜನತೆ ಪ್ರಧಾನಿಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಸಹಜವಾಗಿಯೇ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಷ್ಟು ನಮಗೆ ಲಾಭವಾಗಲಿದೆ. ಮೋದಿ ಪ್ರವಾಸದಿಂದ ಗೆಲ್ಲುವ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ.

    ಪ್ರಶ್ನೆ: ವಿಧಾನಸಭಾ ಚುನಾವಣೆಗೆ ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡ್ತಾರಾ?
    ಬಿಎಸ್‍ವೈ: ಶೋಭಾ ಕರಂದ್ಲಾಜೆ ಸಂಸದೆಯಾಗಿದ್ದು, ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಈ ಬಾರಿ ಕೇವಲ ಸಂಸದರಾಗಿರುವ ನನಗೆ ಮತ್ತು ಶ್ರೀರಾಮುಲು ಅವರಿಗೆ ಮಾತ್ರ ಹೈಕಮಾಂಡ್ ಟಿಕೆಟ್ ನೀಡಿದೆ ಅಂದ್ರು.

  • ‘ಭದ್ರತೆ ನೀಡಿದ್ರೆ ಬಿಎಸ್‍ವೈ-ಶೋಭಾ ಮದುವೆ ಸಿಡಿ ಬಿಡುಗಡೆ ಮಾಡ್ತೀನಿ’: ಪದ್ಮನಾಭ ಪ್ರಸನ್ನ

    ‘ಭದ್ರತೆ ನೀಡಿದ್ರೆ ಬಿಎಸ್‍ವೈ-ಶೋಭಾ ಮದುವೆ ಸಿಡಿ ಬಿಡುಗಡೆ ಮಾಡ್ತೀನಿ’: ಪದ್ಮನಾಭ ಪ್ರಸನ್ನ

    ರಾಯಚೂರು: ‘ಸೂಕ್ತ ಭದ್ರತೆ ನೀಡಿದರೆ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಮದುವೆ ಸಿಡಿ ಬಿಡುಗಡೆ ಮಾಡುತ್ತೇನೆ’ ಎಂದು ಕೆಜೆಪಿ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ಪುನರುಚ್ಚರಿಸಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಅವರು, ‘ಸಿಡಿ ಬಿಡುಗಡೆ ಮಾಡಲು ನಮಗೆ ಜೀವಭಯವಿದೆ. ಈಗಾಗಲೇ ಎರಡು ಮೂರು ಬಾರಿ ನನ್ನ ಮೇಲೆ ದಾಳಿ ನಡೆದಿದೆ. ಒಮ್ಮೆ ಅಪಹರಣ ಮಾಡಿದ್ರು, ಪಕ್ಷದ ಕಚೇರಿ ಮೇಲೂ ದಾಳಿ ಮಾಡಿದ್ದರಿಂದ ಜೀವ ಭಯವಿದೆ. ನನಗೆ ಭದ್ರತೆ ನೀಡಿದ್ರೆ ಸಿಡಿ ಬಿಡುಗಡೆ ಮಾಡುತ್ತೇನೆ, ಇಲ್ಲದಿದ್ದರೇ ನನ್ನ ಹೆಂಡತಿ ಮಕ್ಕಳಿಗೆ ಗತಿ ಯಾರು?’ ಎಂದು ತನ್ನ ಭಯ ವ್ಯಕ್ತಪಡಿಸಿದ್ದಾರೆ.

    ಇನ್ನೂ ಕೆಜೆಪಿ ಪಕ್ಷದ ಮುಖಂಡರೆಲ್ಲಾ ಪಕ್ಷದಲ್ಲೇ ಇದ್ದಾರೆ ಯಾರೂ ಯಡಿಯೂರಪ್ಪ ಅವರ ಹಿಂದೆ ಹೋಗಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕೆಜೆಪಿ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿಯುತ್ತಾರೆ ಅಂತ ಪದ್ಮನಾಭ ಪ್ರಸನ್ನ ಹೇಳಿದ್ದಾರೆ. ಈ ಹಿಂದೆಯೂ ಪದ್ಮನಾಭ ಪ್ರಸನ್ನ ನನ್ನ ಬಳಿ ಬಿಎಸ್‍ವೈ-ಶೋಭಾರ ಸಿ.ಡಿ.ಯಿದೆ ಎಂದು ಹೇಳುತ್ತಿದ್ದರೇ ಹೊರತು ಸಿ.ಡಿ.ಯಲ್ಲೇನಿದೆ ಎಂದು ಮಾತ್ರ ವಿವರ ನೀಡುತ್ತಿರಲಿಲ್ಲ. ಪ್ರಸನ್ನ ಮತ್ತೆ ಠುಸ್ ಪಟಾಕಿ ಹಚ್ಚಿದ್ದಾರೋ ಅಥವಾ ನಿಜವಾಗಿಯೂ ಅಂಥಾ ಸಿ.ಡಿ. ಇದೆಯೇ ಎಂಬ ಅನುಮಾನ ಈಗಲಾದರೂ ಕೊನೆಗೊಳ್ಳುತ್ತಾ ಕಾದು ನೋಡಬೇಕು.

    https://www.youtube.com/watch?v=VpnlD8gGDrA

  • ಶಾಸಕ ಬಿಆರ್ ಪಾಟೀಲ್ ಉದ್ಧಟತನ: ಎಂಎಲ್‍ಎ ಸಾಹೇಬ್ರೆ ಇದೇನಾ ನಿಮ್ಮ ಸಂಸ್ಕಾರ?

    ಶಾಸಕ ಬಿಆರ್ ಪಾಟೀಲ್ ಉದ್ಧಟತನ: ಎಂಎಲ್‍ಎ ಸಾಹೇಬ್ರೆ ಇದೇನಾ ನಿಮ್ಮ ಸಂಸ್ಕಾರ?

    ಕಲಬುರಗಿ: ಜನಪ್ರತಿನಿಧಿಗಳಾಗಿದ್ದವರು ನಾವೇನ್ ಮಾಡ್ತಿದ್ದೇವೆ ಅನ್ನೋದನ್ನೇ ಮರೆತು ಬಿಡ್ತಾರೆ. ಅಧಿಕಾರದ ಮದ ಅವರ ಬಾಯಿಂದ ಏನ್ ಬೇಕಾದ್ರೂ ಮಾತಾಡಿಸಿ ಬಿಡುತ್ತೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

    ತಮ್ಮ ಮಾಜಿ ಆಪ್ತ ಸಹಾಯಕ ದೇವೇಂದ್ರ ಬಿರಾದಾರ್ ಕಾಮದಾಟದ ವರದಿ ಪ್ರಸಾರ ಮಾಡಿದ್ದಕ್ಕೆ ಆಳಂದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಕೆಂಡದಂತಾ ಕೋಪ ಮಾಡಿಕೊಂಡು ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ರೆಡ್ಡಿಗೆ ಕರೆ ಮಾಡಿ ಸಿಕ್ಕಾಪಟ್ಟೆ ರೇಗಾಡಿದ್ದಾರೆ.

    ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ನಿಂದಿಸಿದ್ರು. ನಿಮ್ಮ ಟಿವಿಯಲ್ಲಿ ಏನ್ ಸುದ್ದಿ ಹಾಕಿದ್ದೀರಾ. ನಿಮ್ಮ ಆಫೀಸಿಗೆ ಬರ್ತೀನಿ ಇರಿ ಅಂತಾ ಬೆದರಿಸಿದ್ರು. ಶಾಸಕರ ಈ ಧಮ್ಕಿ ಬಗ್ಗೆ ಪಬ್ಲಿಕ್ ಟಿವಿ ಬೆಳಗ್ಗೆಯಿಂದ ಸುದ್ದಿ ಪ್ರಸಾರ ಮಾಡಿತ್ತು. ನಂತರ ಫೋನ್‍ಗೆ ಬಂದ ಸನ್ಮಾನ್ಯ ಪಾಟೀಲ್ರು ಸಂಜೆ 6 ಗಂಟೆಗೆ ನಾನೇ ಕಲಬುರಗಿಯ ನಿಮ್ಮ ಕಚೇರಿಗೆ ಬರ್ತೇನೆ ಅಂದ್ರು.

    ಕೊನೆಗೆ 1 ಗಂಟೆ ತಡವಾಗಿ ಕಚೇರಿಗೆ ಬಂದ ಶಾಸಕರು ಯಥಾ ಪ್ರಕಾರ ತಮ್ಮ ನಿಂದನಾತ್ಮಕ ಹೇಳಿಕೆಯನ್ನ ಸಮರ್ಥಿಸಿಕೊಂಡ್ರು. ನಾನು ಮನುಷ್ಯ ನಾನು ಉಪ್ಪು ತಿನ್ತೇನೆ. ನನ್ನ ಮಾನನಷ್ಟ ಮಾಡಿ ಟಿಆರ್‍ಪಿಗಾಗಿ ಹೀಗೆಲ್ಲಾ ಮಾಡ್ತೀರಾ ಅಂತ ಹೇಳಿ 10 ನಿಮಿಷವೂ ನಿಲ್ಲದೆ ಅಲ್ಲಿಂದ ನಡೆದೇ ಬಿಟ್ಟರು.

    ಆದ್ರೆ, ನಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಹಾಗಾಗಿ, ನಮ್ಮ ಪ್ರತಿನಿಧಿ ಅವರ ಬೆನ್ನತ್ತಿ ಹೋದರೂ ಸಹ ಪಾಟೀಲರು ಕ್ಷಮೆಯನ್ನೂ ಕೇಳಲಿಲ್ಲ. ಬದಲಿಗೆ ತಮ್ಮ ನಿಲುವಿಗೆ ಅಂಟಿಕೊಂಡ್ರು.

    ನಮ್ಮ ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ಜೊತೆ ಫೋನಿನಲ್ಲಿ ಮಾತನಾಡುವಾಗ,”ನಾನೇನು ನಿಮ್ಮ ಹೆಂಡ್ತಿ ಹಾಗೂ ಅವರ ಹೆಂಡ್ತಿಯನ್ನು ಗುತ್ತಿಗೆ ತೊಗೊಂಡಿದ್ದೀನಾ? ಬೆಳಗ್ಗೆ ಏನು ನ್ಯೂಸ್ ಮಾಡಿದಿಯಾ? ಒಂದು ಗಂಟೆಯಲ್ಲಿ ನಾನು ಆಫೀಸಿಗೆ ಬರ್ತಿನಿ. ನೀನಿರಬೇಕು ಬಂದು ನೋಡ್ತಿನಿ” ಎಂದು ಅವಾಜ್ ಹಾಕಿದ್ದರು.

    ಈ ವೇಳೆ ನಮ್ಮ ಪ್ರತಿನಿಧಿ ನನ್ನ ಹತ್ತಿರ ನೀವು ಶಿಫಾರಸ್ಸು ಮಾಡಿರುವ ಲೆಟರ್ ಇದೆ. ಬೇಕಾದರೆ ನಾನು ನಿಮಗೆ ಬೇಕಾದ್ರೆ ವಾಟ್ಸಪ್ ಮಾಡುತ್ತೇನೆ ಎಂದು ಹೇಳಿದ್ದಕೆ ಅವಾಚ್ಯ ಶಬ್ಧಗಳಿಂದ ಮಾತನಾಡುವ ಮೂಲಕ ತಮ್ಮ ನೈತಿಕ ಮಟ್ಟವನ್ನು ರಾಜ್ಯದ ಜನತೆಗೆ ತೋರಿಸಿದ್ದಾರೆ.

    ನಮ್ಮ ಕಚೇರಿಗೆ ಬಂದ ಶಾಸಕ ಬಿ.ಆರ್.ಪಾಟೀಲ್ ಏನು ಸಮರ್ಥನೆ ನೀಡಿದ್ರು? ಅದಕ್ಕೂ ಮೊದಲು ವರದಿಗಾರನಿಗೆ ಹೇಗೆ ಬೆದರಿಕೆ ಹಾಕಿದ್ರು ಎನ್ನುವುದಕ್ಕೆ ಇಲ್ಲಿ ವಿಡಿಯೋವನ್ನು ನೀಡಲಾಗಿದ್ದು, ನೀವು ವೀಕ್ಷಿಸಬಹುದು.

    ಇದನ್ನೂ ಓದಿ:  ಕಲಬುರಗಿ: ಕಾಮದಾಟಕ್ಕೆ ಪ್ರಿಯಕರನನ್ನ ಶಾಲೆಗೆ ಕರೆಸಿದ ಶಿಕ್ಷಕಿ!