Tag: ಕೆಎಸ್‌ಡಿಎಲ್‌

  • KSDL | ಸರ್ಕಾರಕ್ಕೆ ದಾಖಲೆಯ 135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ

    KSDL | ಸರ್ಕಾರಕ್ಕೆ ದಾಖಲೆಯ 135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ

    – ಒಂದೇ ವರ್ಷದಲ್ಲಿ 1,700 ಕೋಟಿ ರೂ. ವಹಿವಾಟು

    ಬೆಂಗಳೂರು: ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (KSDL) 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳನ್ನು ಶುಕ್ರವಾರ ಸರ್ಕಾರಕ್ಕೆ ಹಸ್ತಾಂತರಿಸಿತು.

    ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ (MB Patil) ಮತ್ತು ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ (Appaji Nadagouda) ಅವರು ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಈ ಕಾರ್ಯಕ್ರಮವು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

    ಈ ವೇಳೆ ಸಚಿವ ಪಾಟೀಲ್‌ ಮಾತನಾಡಿ, ಕೆಎಸ್‌ಡಿಎಲ್ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂಪಾಯಿ ವಹಿವಾಟು ನಡೆಸಿ, 451 ಕೋಟಿ ರೂ. ಲಾಭ ಕಂಡಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರ್ಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ ಆಗಿದೆ ಎಂದಿದ್ದಾರೆ.

    2022-23ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಂಸ್ಥೆಯ ವತಿಯಿಂದ ಸರ್ಕಾರಕ್ಕೆ 54 ಕೋಟಿ ರೂಪಾಯಿ ಡಿವಿಡೆಂಡ್ (ಲಾಭಾಂಶ) ಕೊಡಲಾಗಿತ್ತು. 2023-24ರಲ್ಲಿ 108 ಕೋಟಿ ರೂ. ಲಾಭಾಂಶ ಹಸ್ತಾಂತರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭಾಂಶದಲ್ಲಿ ಈಗ 27 ಕೋಟಿ ರೂ. ಹೆಚ್ಚಳವಾಗಿದೆ. ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ಅವರು ನುಡಿದಿದ್ದಾರೆ.

    ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.ಎಂ.ಸಿ ಸುಧಾಕರ್‌, ಸಂತೋಷ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ ಪ್ರಶಾಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಜೂ. 4ರಂದು 10,000 ವನರಕ್ಷಕರಿಗೆ ಕೆಎಸ್‌ಡಿಎಲ್‌ನಿಂದ ಸುರಕ್ಷಾ ಕಿಟ್ ವಿತರಣೆ: ಎಂಬಿಪಿ

    ಜೂ. 4ರಂದು 10,000 ವನರಕ್ಷಕರಿಗೆ ಕೆಎಸ್‌ಡಿಎಲ್‌ನಿಂದ ಸುರಕ್ಷಾ ಕಿಟ್ ವಿತರಣೆ: ಎಂಬಿಪಿ

    ಬೆಂಗಳೂರು: ಅರಣ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ರಾಜ್ಯದ 10 ಸಾವಿರ ಅರಣ್ಯ ರಕ್ಷಕರು/ ವೀಕ್ಷಕರು, ಕಾವಾಡಿಗಳು, ಮಾವುತರು ಮತ್ತು ಚಾಲಕರಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (KSDL) ವತಿಯಿಂದ ಗುಣಮಟ್ಟದ ಬ್ಯಾಗ್, ಜರ್ಕಿನ್, ಶೂ ಮತ್ತು ನೀರಿನ ಬಾಟಲಿ ಇರುವ ಕಿಟ್ ವಿತರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ತಿಳಿಸಿದರು.

    ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಸಿಎಸ್‌ಆರ್ ಉಪಕ್ರಮದ ಮೊದಲ ಕಾರ್ಯಕ್ರಮ ಬುಧವಾರ(ಜೂನ್ 4) ಮಧ್ಯಾಹ್ನ 2ಗಂಟೆಗೆ ಮೈಸೂರಿನ (Mysuru) ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಕೆಎಸ್‌ಡಿಎಲ್ ಸಂಸ್ಥೆಯ 2024-25ನೇ ಸಾಲಿನ 2 ಕೋಟಿ ರೂ. ಸಿಎಸ್‌ಆರ್ ನಿಧಿಯನ್ನು ಈ ಕಿಟ್ ಖರೀದಿಗೆ ಬಳಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಚೋದನಾಕಾರಿ ಭಾಷಣ ಕೇಸ್‌ – ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಬಿಗ್ ರಿಲೀಫ್

    ಕೆಎಸ್‌ಡಿಎಲ್‌ನ ಹೆಮ್ಮೆಯ ಉತ್ಪನ್ನ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ಗಂಧದ ಎಣ್ಣೆ ಮುಖ್ಯವಾಗಿದೆ. ಈ ಸಂಪತ್ತನ್ನು ಕಾಪಾಡುವವರೇ ವನರಕ್ಷಕರು. ಅಂಥವರ ಕುರಿತ ಕಳಕಳಿ ಈ ಹೆಜ್ಜೆಯಾಗಿದೆ ಎಂದರು. ಇದನ್ನೂ ಓದಿ: ಉನ್ನತ ಶಿಕ್ಷಣ ಸಮಗ್ರ ಮಾಹಿತಿಗಾಗಿ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ

    ಬುಧವಾರದ ಕಾರ್ಯಕ್ರಮದಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಅರಣ್ಯ ವೃತ್ತಗಳ 2,168 ಸಿಬ್ಬಂದಿಗೆ ಈ ಕಿಟ್ ವಿತರಿಸಲಾಗುವುದು. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ, ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ದೈತ್ಯ ಬ್ಯಾಟರ್‌ ಕ್ಲಾಸೆನ್‌ ಗುಡ್‌ಬೈ

    ಮುಂದಿನ ದಿನಗಳಲ್ಲಿ ರಾಜ್ಯದ ಉಳಿದ ಅರಣ್ಯಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ಕಿಟ್ ವಿತರಣೆ ಮಾಡಲಾಗುವುದು. ಕಿಟ್ ಸ್ವೀಕರಿಸುವ ಪ್ರತಿಯೊಬ್ಬರಿಂದ ಮೊದಲೇ ಅಳತೆ ತೆಗೆದುಕೊಂಡು, ಜರ್ಕಿನ್, ಶೂ ಖರೀದಿಸಲಾಗಿದೆ. ಇದರಲ್ಲಿ 5 ಸಾವಿರ ಮಂದಿ ಖಾಯಂ ಸಿಬ್ಬಂದಿಯಾಗಿದ್ದು, ಉಳಿದವರು ತಾತ್ಕಾಲಿಕ ನೆಲೆಯಲ್ಲಿದ್ದಾರೆ. ಇವರೆಲ್ಲರ ಯೋಗಕ್ಷೇಮ ನಮ್ಮ ಹೊಣೆಯಾಗಿದೆ ಎಂದು ನುಡಿದರು. ಇದನ್ನೂ ಓದಿ: ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌

    ವನ್ಯಜೀವಿ ಮಂಡಳಿ ಸದಸ್ಯರೂ ಆದ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್(ಎಸ್‌ಪಿಪಿಎ) ಸಂಸ್ಥಾಪಕ ಧ್ರುವ ಪಾಟೀಲ್ ಅವರು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾಗಿದ್ದು, ಪ್ರತಿಕೂಲ ಸಂದರ್ಭಗಳಲ್ಲಿ ವನರಕ್ಷಕರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಕಿವಿಯಾಗಿ ಈ ಯೋಜನೆ ರೂಪಿಸಲು ನೆರವಾಗಿದ್ದಾರೆ ಎಂದರು.

  • ಮಾರುಕಟ್ಟೆಗೆ ಲಗ್ಗೆ ಇಡಲಿದೆ ದುಬಾರಿ ಸೋಪ್ – ಮೈಸೂರು ಸ್ಯಾಂಡಲ್‌ನಿಂದ ನೂತನ ಪ್ರಯೋಗ

    ಮಾರುಕಟ್ಟೆಗೆ ಲಗ್ಗೆ ಇಡಲಿದೆ ದುಬಾರಿ ಸೋಪ್ – ಮೈಸೂರು ಸ್ಯಾಂಡಲ್‌ನಿಂದ ನೂತನ ಪ್ರಯೋಗ

    – ಸ್ಯಾಂಡಲ್ ಸೋಪ್‌ಗಳಿಗೆ ಇನ್ಮುಂದೆ ಕ್ಯೂಆರ್ ಕೋಡ್

    ಬೆಂಗಳೂರು: ಶ್ರೀಗಂಧದ ಪರಿಮಳವನ್ನು ಸೂಸುವ ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ತಯಾರಿಕೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಕೆಎಸ್&ಡಿಎಲ್ ಈಗ ದೇಶದ ದುಬಾರಿ ಸೋಪ್ ತಯಾರಿಕೆ ಪ್ಲ್ಯಾನ್ ರೂಪಿಸಿದೆ. ಅಷ್ಟೇ ಅಲ್ಲ, ಮೈಸೂರು ಸ್ಯಾಂಡಲ್ ಸೋಪನ್ನು ನಕಲು ಮಾಡುವವರಿಗೆ ಚಾಟಿಯೇಟು ಬೀಸಲು ನಯಾ ಯೋಜನೆ ರೂಪಿಸಿದೆ.

    ಶ್ರೀಗಂಧದ ಪರಿಮಳದ ಸೋಪ್ ಹೊರರಾಜ್ಯದ ವಿದೇಶದಲ್ಲಿಯೂ ಕಮಾಲ್ ಮಾಡಿದೆ. ಈಗ ಕೆಎಸ್&ಡಿಎಲ್ ಭಾರತದಲ್ಲಿಯೇ ದುಬಾರಿ ಸೋಪ್ ತಯಾರಿಕೆಯ ಪ್ಲ್ಯಾನ್ ರೂಪಿಸಿದ್ದು, ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಶ್ರೀಗಂಧದ ಎಣ್ಣೆಯನ್ನು ಹೆಚ್ಚು ಬಳಸಿ ಉತ್ಕೃಷ್ಟ ಗುಣಮಟ್ಟದ ಮೈಸೂರು ಸ್ಯಾಂಡಲ್ ಸೋಪ್ ಮಾರುಕಟ್ಟೆಗೆ ಬರಲಿದೆ. ಸದ್ಯ ವಿದೇಶಕ್ಕೆ ಕಳಿಸುವ ಉದ್ದೇಶದಿಂದ ಈ ಪ್ಲ್ಯಾನ್ ರೂಪಿಸಿಸಲಾಗುತ್ತಿದೆ. ಇದನ್ನೂ ಓದಿ: ದೇಶ, ವಿದೇಶಿ ಕನ್ನಡಿಗರ ಮನ ಗೆದ್ದಿದೆ ಗದಗ ಕ್ಯಾಲೆಂಡರ್‌, ಪಂಚಾಂಗಗಳು!

    ಮೈಸೂರು ಸ್ಯಾಂಡಲ್ ಸೋಪ್ ನಕಲು ಮಾಡಿ ಮಾರಾಟ ಮಾಡುವ ವ್ಯವಸ್ಥಿತ ಜಾಲವೂ ಹೊರರಾಜ್ಯದಲ್ಲಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ನಿಗಮ ಮುಂದಾಗಿದೆ. ಹದಿನೈದು ದಿನದಲ್ಲಿ ಸೋಪ್‌ಗಳಿಗೆ ವಿಶೇಷವಾಗಿ ಕ್ಯೂಆರ್ ಕೋಡ್ ಜಾರಿಯಾಗಲಿದೆ. ನಕಲಿ, ಅಸಲಿ ಪ್ರಾಡೆಕ್ಟ್‌ಗಳ ವಿವರ ಇದರಿಂದ ಗೊತ್ತಾಗಲಿದೆ. ಅಲ್ಲದೇ ಈ ನಕಲಿ ಜಾಲದ ಮೇಲೆ ಕಣ್ಣಿಡಲು ಟೀಮ್ ಕೂಡ ರಚನೆಯಾಗಿದೆ.

    ಈ ರೀತಿಯ ಹೊಸ ಯೋಜನೆಗಳಿಗೆ ಕೆಎಸ್&ಡಿಎಲ್ ಹೆಚ್ಚು ವಹಿವಾಟು ಮಾಡಿ ಲಾಭದ ಹಾದಿಯಲ್ಲಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಟಾರ್ಗೆಟ್ ಮೀರಿ ಲಾಭದಲ್ಲಿದೆ. ಇದರ ಮಧ್ಯೆ ದೇಶದ ದುಬಾರಿ ಸೋಪ್ ತಯಾರಿಕೆಯಿಂದಲೂ ಭರ್ಜರಿ ಲಾಭದ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: ಮುಡಾ ಸೈಟ್‌ಗಾಗಿ ನಾನು ಕಟ್ಟಿರುವ 3,000 ರೂ. ಸಾಂಕೇತಿಕ ಮೊತ್ತ: ಬಿಲ್ಡರ್ ಮಂಜುನಾಥ್ ಸ್ಪಷ್ಟನೆ

  • 2030ರ ವೇಳೆಗೆ 5,000 ಕೋಟಿ ರೂ. ವಹಿವಾಟು ಗುರಿ – ಸಚಿವ ಎಂ.ಬಿ ಪಾಟೀಲ್‌

    2030ರ ವೇಳೆಗೆ 5,000 ಕೋಟಿ ರೂ. ವಹಿವಾಟು ಗುರಿ – ಸಚಿವ ಎಂ.ಬಿ ಪಾಟೀಲ್‌

    – ಸಾಬೂನು ಕಾರ್ಖಾನೆ ಸಿಬ್ಬಂದಿಗೆ 5 ಲಕ್ಷ ವಿಮೆ ಸೌಲಭ್ಯ
    – ಕೆಎಸ್‌ಡಿಎಲ್‌ ಆವರಣದಲ್ಲಿ ಸರ್ಕಾರಿ ಕಚೇರಿಗಳಿಗೆ ಸುಸಜ್ಜಿತ ಬೃಹತ್ ಸಂಕೀರ್ಣ ಎಂದ ಸಚಿವ

    ಬೆಂಗಳೂರು: ಯಶವಂತಪುರದಲ್ಲಿ ಇರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಆವರಣದಲ್ಲಿ ಸರ್ಕಾರಿ ಕಚೇರಿಗಳಿಗೆ ಜಾಗ ಒದಗಿಸಲು ಸುಸಜ್ಜಿತ ಸಂಕೀರ್ಣ ನಿರ್ಮಿಸಲಾಗುವುದು. ಮುಂದಿನ 100 ವರ್ಷಗಳ ಅವಧಿಗೆ ಕಾರ್ಖಾನೆಯ ವಿಸ್ತರಣೆಗೆ ಬೇಕಾದ ಜಾಗವನ್ನು ಮೀಸಲಿಟ್ಟುಕೊಂಡು ಈ ಕೆಲಸ ಕೈಗೊಳ್ಳಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷರೂ ಆಗಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ (MB Patil) ಹೇಳಿದರು.

    100 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (KSDL) ಸಿಬ್ಬಂದಿ ವರ್ಗಕ್ಕೆ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಮತ್ತು ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದ ಆವರಣದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಕಚೇರಿಗಳಿಗೆ ಸ್ಥಳಾವಕಾಶ ಕೊಡಲಾಗಿದೆ. ಅದೇ ಮಾದರಿಯನ್ನೂ ಕೆಎಸ್‌ಡಿಎಲ್‌ನಲ್ಲೂ ಅಳವಡಿಸಿಕೊಳ್ಳಲಾಗುವುದು. ಕೆಎಸ್‌ಡಿಎಲ್ ವತಿಯಿಂದಲೇ ಹಂತಹಂತವಾಗಿ ಇದನ್ನು ನಿರ್ಮಿಸಲಾಗುವುದು. ಇದರಿಂದ ಸಂಸ್ಥೆಯು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಸುಲಭವಾಗಲಿದೆ ಎಂದು ನುಡಿದರು.

    5,000 ಕೋಟಿ ರೂ. ವಹಿವಾಟಿನ ಗುರಿ:
    ಮೈಸೂರು ಮಹಾರಾಜರು ಮತ್ತು ಸರ್ ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಕೆಎಸ್‌ಡಿಎಲ್ ಸದ್ಯಕ್ಕೆ ವಾರ್ಷಿಕವಾಗಿ 1,200 ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದ್ದು, ಲಾಭದ ಹಾದಿಯಲ್ಲಿದೆ. ಇದು 2030ರ ಹೊತ್ತಿಗೆ 5,000 ಕೋಟಿ ರೂ. ಮುಟ್ಟಬೇಕು. ವಿದೇಶಗಳಲ್ಲೂ ಮಾರುಕಟ್ಟೆ ಸೃಷ್ಟಿಗೆ ಆದ್ಯತೆ ಬೀಡಲಾಗುತ್ತಿದ್ದು, ಯೂರೋಪ್ ಮತ್ತು ಅರಬ್ ರಾಷ್ಟ್ರಗಳಿಗೆ ಕೆಎಸ್‌ಡಿಎಲ್‌ ಉತ್ಪನ್ನಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ರಫ್ತು ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

    ಕೆಎಸ್‌ಡಿಎಲ್‌ ಆವರಣದಲ್ಲಿ ದಿನನಿತ್ಯದ ದಿನಸಿ ಪದಾರ್ಥಗಳು, ಡೆಟಾಲ್, ಹ್ಯಾಂಡ್ ಸೋಪ್ ಮುಂತಾದವೆಲ್ಲ ಲಭ್ಯವಾಗಬೇಕು. ಸದ್ಯಕ್ಕೆ ಸಾಬೂನು ಮತ್ತು ಮಾರ್ಜಕಗಳ ಮಾರುಕಟ್ಟೆ ವಿತರಣೆ ಚೆನ್ನಾಗಿ ನಡೆಯುತ್ತಿದೆ. ಸಂಸ್ಥೆಯು ಕಾರ್ಮಿಕರ ಯೋಗಕ್ಷೇಮಕ್ಕೂ ಆದ್ಯತೆ ನೀಡುವ ಉತ್ತರದಾಯಿತ್ವವನ್ನು ಪ್ರದರ್ಶಿಸಿದೆ ಎಂದು ಹೇಳಿದರು.

    ಎಂಎಸ್ಐಎಲ್‌ಗೆ ಮತ್ತಷ್ಟು ಬಲ: ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ನಡೆಸುವ ವಹಿವಾಟನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ಕೇರಳ ಮಾದರಿಯಲ್ಲಿ ಚಿಟ್ ಫಂಡ್ ನಡೆಸಲಾಗುವುದು. ಇದರ ಮೂಲಕ ವಾರ್ಷಿಕ 10,000 ಕೋಟಿ ರೂ. ವ್ಯವಹಾರ ಬೆಳೆಸಲಾಗುವುದು. ಇದರಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸಹಕಾರ ತೆಗೆದುಕೊಂಡು, ಖಾಸಗಿಯವರಿಗೆ ಆರೋಗ್ಯಕರ ಸ್ಪರ್ಧೆ ನೀಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

    ಎಂಎಸ್ಐಎಲ್‌ನ 200 ಮದ್ಯ ಮಾರಾಟ ಪ್ರೀಮಿಯಂ ಬೋಟಿಕ್‌ಗಳನ್ನು ಆರಂಭಿಸಲಾಗುತ್ತಿದೆ. ಇತ್ತೀಚೆಗೆ ಬಸವೇಶ್ವರ ನಗರದಲ್ಲಿ ಹೊಸವರ್ಷ ದಿನ ಆರಂಭಿಸಿದ್ದು ಅಲ್ಲಿ‌ 30-40ರಷ್ಟು ವಹಿವಾಟು ಹೆಚ್ಚಾಗಿದೆ. ಯಾವ ಖಾಸಗಿ ಬೋಟಿಕ್‌ಗಳಿಗೂ ಕಡಿಮೆ‌ ಇಲ್ಲದಂತೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದೇ ರೀತಿಯಲ್ಲಿ ಲೇಖಕ್ ನೋಟ್ ಪುಸ್ತಕಗಳ ಗುಣಮಟ್ಟವನ್ನೂ ಹೆಚ್ಚಿಸಲಾಗುವುದು. ಒಟ್ಟಿನಲ್ಲಿ ಸರ್ಕಾರಿ ಉದ್ದಿಮೆಗಳಿಗೆ ಕಾರ್ಪೊರೇಟ್ ಸ್ಪರ್ಶ ನೀಡಿ, ಲಾಭದ ಹಳಿಗೆ ತರಲಾಗುವುದು ಎಂದು ಸಚಿವರು ಪ್ರತಿಪಾದಿಸಿದರು.

    ಕಾರ್ಯಕ್ರಮದಲ್ಲಿ ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್, ಪ್ರಧಾನ ವ್ಯವಸ್ಥಾಪಕ (ಆಡಳಿತ) ಗಂಗಪ್ಪ, ಮಲ್ಲಿಗೆ ಆಸ್ಪತ್ರೆ ಸಿಇಒ ಡಾ.ಶ್ರೀನಿವಾಸ, ಕೈಗಾರಿಕಾ ಇಲಾಖೆಯ ಮಹಾಂತೇಶ ಬಿರಾದರ ಇದ್ದರು.

    ಆರೋಗ್ಯ ಶಿಬಿರ, ಹೆಲ್ತ್ ಕಾರ್ಡ್ ವಿತರಣೆ: ಕೆಎಸ್‌ಡಿಎಲ್‌ ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ಆರೋಗ್ಯ ತಪಾಸಣೆ ಶಿಬಿರ ಮತ್ತು 5 ಲಕ್ಷ ರೂಪಾಯಿ ಮೊತ್ತದ ಚಿಕ್ಸಿತೆ ಪಡೆಯಬಹುದಾದ ಹೆಲ್ತ್ ಕಾರ್ಡ್ ಅನ್ನು ಸಚಿವ ಎಂ.ಬಿ.ಪಾಟೀಲ ವಿತರಿಸಿದರು. 169 ಕಾಯಂ ಸಿಬ್ಬಂದಿ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ‌‌ ಮಾಡುತ್ತಿರುವ 464 ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಈ ವಿಮಾ ಸೌಲಭ್ಯ ಅನ್ವಯ ಆಗುತ್ತದೆ. ಮಲ್ಲಿಗೆ ಆಸ್ಪತ್ರೆ ಜೊತೆಗೂ ಕೆಎಸ್‌ಡಿಎಲ್‌ ಒಪ್ಪಂದ ಮಾಡಿಕೊಂಡಿದ್ದು, ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ವಿವರಿಸಿದರು.

    ಪ್ರತಿಷ್ಠಿತ ಕೆಎಸ್‌ಡಿಎಲ್‌ ಕಾರ್ಖಾನೆಗೆ ಶುಕ್ರವಾರ ಭೇಟಿ ನೀಡಿ ಅಲ್ಲಿ ಸಾಬೂನು ಉತ್ಪಾದನೆಯನ್ನು ಪರಿಶೀಲಿಸಿದ ಕಾರ್ಖಾನೆ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಸೇರಿದಂತೆ ಇತರ ಸಿಬ್ಬಂದಿ ವರ್ಗ ಇದ್ದರು.

  • ಸಾಬೂನು ಕಾರ್ಖಾನೆಗೆ ತ್ವರಿತ ಗತಿಯಲ್ಲಿ ಕಾರ್ಪೊರೇಟ್ ರೂಪ: ಎಂ.ಬಿ ಪಾಟೀಲ್

    ಸಾಬೂನು ಕಾರ್ಖಾನೆಗೆ ತ್ವರಿತ ಗತಿಯಲ್ಲಿ ಕಾರ್ಪೊರೇಟ್ ರೂಪ: ಎಂ.ಬಿ ಪಾಟೀಲ್

    ಬೆಂಗಳೂರು: ಲಾಭದಲ್ಲಿದ್ದರೂ ಸಮಕಾಲೀನ ಮಾರುಕಟ್ಟೆಗೆ ತಕ್ಕಂತೆ ಇಲ್ಲದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತಕ್ಕೆ (KSDL) ಸಂಪೂರ್ಣ ಹೊಸ ರೂಪ ಕೊಟ್ಟು, ಕಾರ್ಪೊರೇಟ್ ಶೈಲಿಯಲ್ಲಿ ಅದರ ಚಟುವಟಿಕೆಗಳು ಇರುವ ಹಾಗೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.

    ಕಾರ್ಖಾನೆಯ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಕೆಎಸ್‌ಡಿಎಲ್ ಅನ್ನು ಕೇವಲ ಸರ್ಕಾರಿ ಉದ್ದಿಮೆಯಾಗಿ ನೋಡುವ ದೃಷ್ಟಿಕೋನಕ್ಕೆ ವಿದಾಯ ಹೇಳಲಾಗುವುದು. ಈ ಸಂಸ್ಥೆ ತಯಾರಿಸುವ ಮೈ ಸೋಪು, ಊದುಕಡ್ಡಿ ಸೇರಿದಂತೆ ಪ್ರತಿಯೊಂದು ಉತ್ಪನ್ನವೂ ಸಾಮಾನ್ಯ ಕಿರಾಣಿ ಅಂಗಡಿಯಿಂದ ಹಿಡಿದ ಸೂಪರ್ ಸ್ಪೆಷಾಲಿಟಿ ಮಾಲ್‌ವರೆಗೆ ಎಲ್ಲೆಡೆಯೂ ಸಿಗುವಂತೆ ಮಾಡಲಾಗುವುದು. ಒಟ್ಟಿನಲ್ಲಿ ಇಡೀ ಭಾರತದಾದ್ಯಂತ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ಎನ್ನುವುದು ಈಗಿನ ಗುರಿಯಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಎನ್‌ಡಿಎ ಕೂಟ ಸೇರಿದ ಜೆಡಿಎಸ್‌ – ದೋಸ್ತಿ ಲೆಕ್ಕಾಚಾರ ಏನು? ಸೀಟ್ ಹಂಚಿಕೆ ಸೂತ್ರ ಏನು?

    ಕೆಎಸ್‌ಡಿಎಲ್ ಈಗ ಹಲವು ಬ್ರ್ಯಾಂಡ್‌ಗಳನ್ನು ಹೊಂದಿದೆ.ಇವುಗಳ ಜೊತೆಗೆ ಹೊಸಹೊಸ ಬ್ರ್ಯಾಂಡ್ ಉತ್ಪನ್ನಗಳನ್ನೂ ತಯಾರಿಸಲಾಗುವುದು. ಲ್ಯಾವೆಂಡರ್, ಬೇವು, ಗುಲಾಬಿ, ಅರಶಿಣ ಇತ್ಯಾದಿ ವಿಧದ ರೀತಿಯ ಸಾಬೂನುಗಳನ್ನು ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲಾಗುವುದು. ಗುಣಮಟ್ಟ, ದಕ್ಷ ಆಡಳಿತ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆ ಇವು ಈಗ ನಮ್ಮ ಮುಂದಿನ ಉಪಕ್ರಮಗಳಾಗಿವೆ ಎಂದರು. ಇದನ್ನೂ ಓದಿ: ಕಾವೇರಿ ಸಂಕಷ್ಟಕ್ಕೆ ಪರಿಹಾರವಾಗಿರುವ ಮೇಕೆದಾಟು ಯೋಜನೆಗೆ ಕೇಂದ್ರ ಅನುಮತಿ ನೀಡಲಿ: ಡಿಕೆಶಿ

    ಕೆಎಸ್‌ಡಿಎಲ್ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟದಿಂದ ಕೂಡಿವೆ. ಆದರೆ ಮಾರುಕಟ್ಟೆಯಲ್ಲಿ ಡಾಬರ್, ಹಿಂದೂಸ್ಥಾನ ಯೂನಿಲಿವರ್ ಲಿಮಿಟೆಡ್ ತರಹದ ಕಂಪನಿಗಳು ಸಿಂಹಪಾಲು ಹೊಂದಿವೆ. ಜತೆಗೆ ಕೆಎಸ್‌ಡಿಎಲ್ ಕರ್ನಾಟಕವನ್ನು ದಾಟಿ ಆಚೆಗೆ ಹೆಚ್ಚಾಗಿ ಹೋಗಿಲ್ಲ. ಸ್ಪರ್ಧಾತ್ಮಕ ಮಾರುಕಟ್ಟೆಯ ಈ ಯುಗದಲ್ಲಿ ಈ ರೀತಿಯ ಧೋರಣೆ ಸರಿ ಇಲ್ಲ. ಇನ್ನು ಮುಂದೆ ಕೆಎಸ್‌ಡಿಎಲ್ ರಾಜ್ಯದ ಜೊತೆಗೆ ಇಡೀ ದೇಶದ ಸಾಬೂನು ಮತ್ತು ಮಾರ್ಜಕಗಳ ಮಾರುಕಟ್ಟೆಯಲ್ಲಿ ಅತ್ಯಧಿಕ ಪಾಲು ಹೊಂದಬೇಕು. ರಾಜ್ಯದ ಉದ್ದಗಲಕ್ಕೂ ಇರುವ ಸರ್ಕಾರಿ ಕಚೇರಿಗಳು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಇನ್ನು ಮುಂದೆ ಕೆಎಸ್‌ಡಿಎಲ್ ತಯಾರಿಸುವ ಸಾಬೂನು, ಲಿಕ್ವಿಡ್ ಸೋಪ್, ಹ್ಯಾಂಡ್ ವಾಶ್, ಡಿಶ್ ವಾಶ್‌ಗಳನ್ನೇ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರ ಜೊತೆಗೆ ವ್ಯಾಪಕ ಸ್ವರೂಪದಲ್ಲಿ ಬ್ರ‍್ಯಾಂಡಿಂಗ್ ಚಟುವಟಿಕೆಗಳನ್ನು ಆಕರ್ಷಕವಾಗಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರ ನೀರಿನ ಗ್ಯಾರಂಟಿ ಕೊಡಲಿ, ಶನಿವಾರ ಬೃಹತ್ ಪ್ರತಿಭಟನೆ ಮಾಡ್ತೇವೆ: ಬೊಮ್ಮಾಯಿ

    ಈ ಉದ್ದಿಮೆಯು ಮೈಸೂರು ಮಹಾರಾಜರ ಕಾಲದ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇದಕ್ಕೆ ಸಮಕಾಲೀನ ಸ್ಪರ್ಶ ಕೊಡಬೇಕಾದ್ದು ಈಗಿನ ಜರೂರಾಗಿದೆ. ಲಾಭವನ್ನು ಹಿಗ್ಗಿಸಿಕೊಳ್ಳುವುದರೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವುದೊಂದೇ ಇದಕ್ಕಿರುವ ದಾರಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಎನ್‌ಡಿಎ ಒಕ್ಕೂಟಕ್ಕೆ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಡಾಳ್ ವಿರೂಪಾಕ್ಷಪ್ಪಗೆ ರಿಲೀಫ್ – ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರು

    ಮಾಡಾಳ್ ವಿರೂಪಾಕ್ಷಪ್ಪಗೆ ರಿಲೀಫ್ – ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರು

    ಬೆಂಗಳೂರು: ಕೆಎಸ್‌ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ರಿಲೀಫ್ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ವಿರೂಪಾಕ್ಷಪ್ಪಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ಪ್ರಕರಣದ ತುರ್ತು ವಿಚಾರಣೆ ನಡೆಸಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಸೋಮವಾರ ಹೈಕೋರ್ಟ್‌ಗೆ ವಿರೂಪಾಕ್ಷಪ್ಪ ಮನವಿ ಮಾಡಿಕೊಂಡಿದ್ದರು. ತಕ್ಷಣ ವಿಚಾರಣೆ ನಡೆಸಲು ಒಪ್ಪದ ಕೋರ್ಟ್ ಮಂಗಳವಾರಕ್ಕೆ ಮುಂದೂಡಿತ್ತು. ಅದರಂತೆ ಇಂದು ಹೈಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅರ್ಜಿ ವಿಚಾರಣೆ ನಡೆಸಿದರು. ವಿರೂಪಾಕ್ಷಪ್ಪ ಪರವಾಗಿ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದರು. ಮಧ್ಯಂತರ ನಿರೀಕ್ಷಣಾ ಜಾಮೀನಿಗಾಗಿ ಮನವಿ ಮಾಡಿದರು.

    5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಭದ್ರತೆಯ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತು. ಅಲ್ಲದೇ ಇದೇ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    48 ಗಂಟೆಗಳ ಒಳಗೆ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಸೂಚಿಸಿದೆ. ಹೀಗಾಗಿ ವಿರೂಪಾಕ್ಷಪ್ಪ ಗುರುವಾರ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

  • ಮಾಡಾಳ್‌ ವಿರೂಪಾಕ್ಷಪ್ಪ ಮಿಸ್ಸಿಂಗ್‌.. ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ – ಪೋಸ್ಟರ್‌ ಅಂಟಿಸಿ ಕಾಂಗ್ರೆಸ್‌ ಅಭಿಯಾನ

    ಮಾಡಾಳ್‌ ವಿರೂಪಾಕ್ಷಪ್ಪ ಮಿಸ್ಸಿಂಗ್‌.. ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ – ಪೋಸ್ಟರ್‌ ಅಂಟಿಸಿ ಕಾಂಗ್ರೆಸ್‌ ಅಭಿಯಾನ

    ಬೆಂಗಳೂರು: ಕೆಎಸ್‌ಡಿಎಲ್‌ (KSDL) ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪ್ರಕರಣದ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ (Madal Virupakshappa) ವಿರುದ್ಧ ಕಾಂಗ್ರೆಸ್‌ (Congress Poster Campaign) ಕಾರ್ಯಕರ್ತರು ಪೋಸ್ಟರ್‌ ಅಭಿಯಾನ ನಡೆಸಿದ್ದಾರೆ.

    ಯಶವಂತಪುರ ಬಸ್ ನಿಲ್ದಾಣದ ಗೋಡೆಗಳಿಗೆ ʼಮಾಡಾಳ್‌ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆʼ ಎಂಬ ಪೋಸ್ಟರ್‌ಗಳನ್ನು ಅಂಟಿಸಿ ವ್ಯಂಗ್ಯ ಮಾಡಿದ್ದಾರೆ. ಎ1 ಆರೋಪಿ ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ. ಬಿಜೆಪಿ 40% ಸರ್ಕಾರ ಎಂದು ಕುಟುಕಿದ್ದಾರೆ. ರಾಜ್ಯದ ಹಲವೆಡೆ ಕಾಂಗ್ರೆಸ್‌ ಕಾರ್ಯಕರ್ತರು ಪೋಸ್ಟರ್‌ ಅಂಟಿಸಿ ವಿರೂಪಾಕ್ಷಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ – ಅಂದು ಬಿಜೆಪಿ ಸರ್ಕಾರದಿಂದಲೇ ಪ್ರಶಾಂತ್‌ ಮಾಡಾಳ್‌ಗೆ ಕ್ಲೀನ್‌ಚಿಟ್‌?

    ಎ1 ಆರೋಪಿ ಮಿಸ್ಸಿಂಗ್. ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ. ಲೋಕಾಯುಕ್ತ ತನಿಖೆಗೆ ಸಹಾಯ ಮಾಡಿ. ವಯಸ್ಸು, ಎತ್ತರ, ಸ್ಥಳ ಬಗ್ಗೆ ಪೋಸ್ಟರ್‌ನಲ್ಲಿ ನಮೂದಿಸಿ ವ್ಯಂಗ್ಯ ಮಾಡಿದೆ. ಮಾಡಾಳ್‌ ವಿರೂಪಾಕ್ಷಪ್ಪ ಮೈಸೂರು ಸ್ಯಾಂಡಲ್ ಸೋಪ್ ಹಗರಣಲ್ಲಿ ಭಾಗಿಯಾಗಿದ್ದಾರೆಂದು ಕಾಂಗ್ರೆಸ್‌ ಆರೋಪಿಸಿದೆ.

    ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಮಾಡಾಳ್‌ 40 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಪ್ರಶಾಂತ್‌ ಮತ್ತು ಸಹಚರರನ್ನು ಬಂಧಿಸಲಾಗಿತ್ತು. ಪ್ರಶಾಂತ್‌ನನ್ನು ಬಂಧಿಸಿದ ಬೆನ್ನಲ್ಲೇ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಒಟ್ಟು 7.72 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: 40 ಲಕ್ಷ ಲಂಚ ಪ್ರಕರಣ – ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

    ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿರುವ ಪ್ರಶಾಂತ್‌, ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದಾರೆ. ತಂದೆ ಮಾಡಾಳ್‌ ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕೆಎಸ್‌ಡಿಎಲ್‌ ಟೆಂಡರ್‌ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ, ರಾಸಾಯನಿಕ ಸರಬರಾಜು ವೇಳಾಪಟ್ಟಿ ಮತ್ತು ಕಾರ್ಯಾದೇಶ ವಿತರಿಸಲು 81 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗುತ್ತಿಗೆದಾರ ಶ್ರೇಯಸ್‌ ಕಶ್ಯಪ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

    ಈ ಪ್ರಕರಣದಲ್ಲಿ ಶಾಸಕ ವಿರೂಪಾಕ್ಷಪ್ಪ ಎ1 ಆರೋಪಿಯಾಗಿದ್ದಾರೆ. ಮಗನ ಬಂಧನದ ಸುದ್ದಿ ಹೊರಬಂದಾಗಿನಿಂದ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಇದರ ನಡುವೆ ಸಿಎಂ ಸೂಚನೆ ಮೇರೆಗೆ ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ತನಗೆ ನಿರೀಕ್ಷಣಾ ಜಾಮೀನು ನೀಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆ ಸಂಬಂಧ ತಕ್ಷಣ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿತ್ತು.