Tag: ಕೆಇಎ

  • ವೈದ್ಯಕೀಯ 3ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಕೆಇಎ

    ವೈದ್ಯಕೀಯ 3ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಕೆಇಎ

    ಬೆಂಗಳೂರು: ಪ್ರಸಕ್ತ 2025ನೇ ಸಾಲಿನ ವೈದ್ಯಕೀಯ (Medical) ಮತ್ತು ದಂತವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಶುಕ್ರವಾರ (ಅ.24) ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಯಾವುದೇ ಆಕ್ಷೇಪಣೆಯಿದ್ದಲ್ಲಿ ಅ.25ರ ಬೆಳಿಗ್ಗೆ 10ರೊಳಗೆ ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಖುದ್ದು ಬಂದು ಬರೆದು ತಿಳಿಸಬಹುದು ಅಥವಾ keauthority-ka@nic.inಗೆ ಇ-ಮೇಲ್ ಕಳಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೂಚಿಸಿದೆ.

    ಅಖಿಲ ಭಾರತ ಕೋಟಾ ಅಡಿಯ ಮೂರನೇ ಸುತ್ತಿನಲ್ಲಿ ಪಾಲ್ಗೊಂಡು ಸೀಟು ಪಡೆಯುವ ಜೊತೆಗೆ ಕೆಇಎ ಮೂರನೇ ಸುತ್ತಿನಲ್ಲಿಯೂ ಸೀಟು ಪಡೆದಿರುವ ಅಭ್ಯರ್ಥಿಗಳು ಕೆಇಎ ಸೀಟು ಉಳಿಸಿಕೊಳ್ಳಲು ಇಚ್ಛಿಸಿದಲ್ಲಿ ಅ.25ರ ಮಧ್ಯಾಹ್ನ 12:30ರೊಳಗೆ ಕೆಇಎ ಕಚೇರಿಗೆ ಬಂದು ಖುದ್ದು ಮನವಿ ನೀಡಬೇಕು ಅಥವಾ ತಾವು ಅರ್ಜಿಯಲ್ಲಿ ನಮೂದಿಸಿದ್ದ ಇ-ಮೇಲ್ ಐ.ಡಿ.ಯಿಂದ keauthority-ka@nic.iಗೆ ಇ-ಮೇಲ್ ಕಳಿಸಬೇಕು. ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳನ್ನು 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ ಹಾಗೂ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ಹಿಂದಿರುಗಿಸುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾದ ಉತ್ತರಾಧಿಕಾರಿ ಕದನ – ಯತೀಂದ್ರ ವಿರುದ್ಧ ಶಿಸ್ತುಕ್ರಮವೋ? ಸಿಎಂ ಪುತ್ರ ಅಂತ ಎಚ್ಚರಿಕೆಯೋ?

    ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಅ.27ರ ಮಧ್ಯಾಹ್ನ 12ರ ನಂತರ ಪ್ರಕಟಿಸಲಾಗುತ್ತದೆ. ಸೀಟು ಪಡೆದವರು ಅ.30ರೊಳಗೆ ಉಳಿದ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಿ, ಸೀಟು ಖಾತರಿ ಚೀಟಿಯನ್ನು ಡೌನ್ ಲೋಡ್ ಮಾಡಿಕೊಂಡು ಆಯಾ ಕಾಲೇಜಿಗೆ ಎಲ್ಲ ಮೂಲದಾಖಲೆಗಳೊಂದಿಗೆ ತೆರಳಿ ಪ್ರವೇಶ ಪಡೆಯಬೇಕು ಎಂದು ತಿಳಿಸಲಾಗಿದೆ.

    ಈ ಸುತ್ತಿನಲ್ಲಿ ಅಂತಿಮ ಸೀಟು ಹಂಚಿಕೆಯಾದ ನಂತರ ಅದರ ರದ್ದತಿಗಾಗಿ ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಥವಾ ಸೀಟು ರದ್ದುಪಡಿಸಲು ಇಚ್ಛೆಪಟ್ಟರೆ ಅಥವಾ ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಭ್ಯರ್ಥಿ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ನಿಯಮದ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ಆಳಂದದಲ್ಲಿ 80 ರೂ.ಗೆ ವೋಟ್ ಡಿಲೀಟ್ ಸಾಕ್ಷಿ ಸಿಕ್ಕಿದೆ, ಚುನಾವಣಾ ಆಯೋಗ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಆಗ್ರಹ

     

  • ವೆಬ್ ಕಾಸ್ಟಿಂಗ್ ಮೂಲಕ ನಿಗಾ – ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ 83.5% ಹಾಜರಿ: ಕೆಇಎ

    ವೆಬ್ ಕಾಸ್ಟಿಂಗ್ ಮೂಲಕ ನಿಗಾ – ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ 83.5% ಹಾಜರಿ: ಕೆಇಎ

    ಬೆಂಗಳೂರು: ರಾಜ್ಯದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಕುರಿತ ಲಿಖಿತ ಪರೀಕ್ಷೆಯನ್ನು (Civil Judge Recruitment Examination) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ಯಶಸ್ವಿಯಾಗಿ ಶನಿವಾರ ನಡೆಸಿತು.

    ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ನಗರಗಳ ಒಟ್ಟು 21 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಅರ್ಜಿ ಸಲ್ಲಿಸಿದ್ದ 10,069 ಮಂದಿ ಪೈಕಿ 8,408 (ಶೇ.83.5%) ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು. ಬ್ಲೂಟೂತ್ ಇತ್ಯಾದಿ ಡಿಜಿಟಲ್ ಸಾಧನಗಳು ಕಾರ್ಯನಿರ್ವಹಿಸದಂತೆ ಪರೀಕ್ಷಾ ಕೇಂದ್ರಗಳ ಸುತ್ತ ಜಾಮರ್ ಅಳವಡಿಸಲಾಗಿತ್ತು. ಇಡೀ ಪ್ರಕ್ರಿಯೆಯನ್ನು ಕೆಇಎ ಕಚೇರಿಯಲ್ಲಿನ ಕಮಾಂಡ್ ಸೆಂಟರ್ ಮೂಲಕ ನಿರ್ವಹಿಸಲಾಯಿತು. ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ಮೂಲಕ ಕಟ್ಟುನಿಟ್ಟಿನ ನಿಗಾ ವಹಿಸಿದ್ದನ್ನು ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಂ, ಹೈಕೋರ್ಟ್ ರಿಜಿಸ್ಟ್ರಾರ್ ಚಂದ್ರಕಲಾ ಖುದ್ದು ವೀಕ್ಷಿಸಿದರು ಎಂದು ತಿಳಿಸಿದ್ದಾರೆ. ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರೂ ಖುದ್ದು ಮೇಲ್ವಿಚಾರಣೆ ನಡೆಸಿದರು.

  • ಬಿ.ಎಸ್ಸಿ. ನರ್ಸಿಂಗ್, ಬಿ.ಫಾರ್ಮ, ಫಾರ್ಮ-ಡಿ ಅಂತಿಮ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ ಎಂಟ್ರಿಗೆ ಅವಕಾಶ- ಕೆಇಎ

    ಬಿ.ಎಸ್ಸಿ. ನರ್ಸಿಂಗ್, ಬಿ.ಫಾರ್ಮ, ಫಾರ್ಮ-ಡಿ ಅಂತಿಮ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ ಎಂಟ್ರಿಗೆ ಅವಕಾಶ- ಕೆಇಎ

    ಬೆಂಗಳೂರು: ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮ, ಫಾರ್ಮ-ಡಿ ಕೋರ್ಸುಗಳಿಗೆ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅ.6ರ ಬೆಳಿಗ್ಗೆ 11ರೊಳಗೆ ಹೊಸದಾಗಿ ತಮ್ಮ ಇಚ್ಛೆ/ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೂಚಿಸಿದೆ.

    ಬಿ.ಎಸ್ಸಿ. ನರ್ಸಿಂಗ್ ಕೋರ್ಸಿಗೆ ಸರ್ಕಾರ ಹೆಚ್ಚಿಸಿರುವ ಸೀಟುಗಳು, ಹಿಂದಿನ ಸೀಟುಗಳ ಹಂಚಿಕೆಯ ನಂತರ ಭರ್ತಿಯಾಗದೇ ಉಳಿದಿರುವ/ರದ್ದುಗೊಂಡಿರುವ/ಹೊಸದಾಗಿ ಸೇರಿಸಲಾದ ಬಿ.ಫಾರ್ಮ ಮತ್ತು ಫಾರ್ಮ-ಡಿ ಸೀಟುಗಳನ್ನು ಈ ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಶುಕ್ರವಾರ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಸರ್ಕಾರಿ ಕಾಲೇಜುಗಳಲ್ಲಿರುವ ಸೀಟುಗಳು ಹಾಗೂ ಖಾಸಗಿ ಕಾಲೇಜುಗಳ ‘ಜಿ’ ಸೀಟುಗಳು ಈ ಹಂಚಿಕೆ ವ್ಯಾಪ್ತಿಗೆ ಒಳಪಡುತ್ತವೆ. ಅಭ್ಯರ್ಥಿಗಳು ಈ ಹಿಂದಿನ ಸುತ್ತುಗಳಲ್ಲಿ ದಾಖಲಿಸಿದ ಇಚ್ಛೆ/ಆಯ್ಕೆಗಳನ್ನು ಈ ಹಂತದ ಹಂಚಿಕೆಗೆ ಪರಿಗಣಿಸುವುದಿಲ್ಲ. ಕಾಲೇಜುವಾರು, ವರ್ಗವಾರು ಮತ್ತು ಕೋರ್ಸುವಾರು ವಿವರವಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ:  ಕರ್ನಾಟಕದಲ್ಲಿ ಕೇಂದ್ರಕ್ಕೂ ಮೊದಲೇ ರಾಜ್ಯ ಚುನಾವಣಾ ಆಯೋಗದಿಂದ SIR

     

    10,000 ರೂ. ಕಾಷನ್ ಡಿಪಾಸಿಟ್ ಪಾವತಿಸಿ ಇದುವರೆಗೂ ಯಾವುದೇ ಸೀಟು ಹಂಚಿಕೆ ಮಾಡಿಕೊಳ್ಳದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಬಹುದು. ಇದಕ್ಕಾಗಿ 10,000 ರೂ. ಕಾಷನ್ ಡೆಪಾಸಿಟ್ ಪಾವತಿಸಬೇಕು. 10,000 ರೂ. ದಂಡ ಪಾವತಿಸಿ ಸೀಟು ರದ್ದುಪಡಿಸಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಕಾಷನ್ ಡಿಪಾಸಿಟ್ ಪಾವತಿಸಬೇಕಾಗುತ್ತದೆ ಎಂದು ವಿವರಿಸಲಾಗಿದೆ. ಇದನ್ನೂ ಓದಿ:  ಹದಗೆಟ್ಟ ರಸ್ತೆ| ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಬೈಕಿನಿಂದ ಬಿದ್ದು ಸಾವು

    ಇದು ಅಂತಿಮ ಸುತ್ತಿನ ಸೀಟು
    ಹಂಚಿಕೆಯಾಗಿರುವುದರಿಂದ ಆಪ್ಷನ್ ಎಂಟ್ರಿ ಮಾಡಿದ ಕಾಲೇಜಿನಲ್ಲಿ ಸೀಟು ಹಂಚಿಕೆಯಾದರೆ ಕಡ್ಡಾಯವಾಗಿ ಪ್ರವೇಶ ಪಡೆಯಬೇಕು. ಹೀಗಾಗಿ, ಅಭ್ಯರ್ಥಿಗಳು ಸೇರಬಹುದಾದ ಕಾಲೇಜನ್ನು ಖಚಿತಪಡಿಸಿಕೊಂಡು ಆಪ್ಷನ್ ಎಂಟ್ರಿ ನಮೂದಿಸಬೇಕು. ಸೀಟ್ ಮ್ಯಾಟ್ರಿಕ್ಸ್ ನ ಪರಿಷ್ಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಕೆಇಎ ವೆಬ್ ಸೈಟ್ ಅನ್ನು ಆಗಾಗ ಗಮನಿಸುತ್ತಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.

  • UG ಆಯುಷ್: ಪ್ರವೇಶಕ್ಕೆ ಎರಡು ದಿನ ಅವಕಾಶ – ಕೆಇಎ

    UG ಆಯುಷ್: ಪ್ರವೇಶಕ್ಕೆ ಎರಡು ದಿನ ಅವಕಾಶ – ಕೆಇಎ

    ಬೆಂಗಳೂರು: ಯುಜಿ ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆ.16ರೊಳಗೆ ತಮಗೆ ಸೂಕ್ತ ಅನಿಸುವ ಛಾಯ್ಸ್ ಆಯ್ಕೆ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ (KEA) ಪ್ರಾಧಿಕಾರ ಅವಕಾಶ ನೀಡಿದೆ.

    ಸೀಟು ಹಂಚಿಕೆಯಾಗಿರುವವರಿಗೆ ಛಾಯ್ಸ್-1, 2 ಮತ್ತು ಛಾಯ್ಸ್ -4 ಆಯ್ಕೆಗೆ ಅವಕಾಶ ನೀಡಲಾಗಿದೆ. ಸೆ.15ರಂದು ಮಧ್ಯಾಹ್ನ 2ರಿಂದ ಸೆ.16ರಂದು ಮಧ್ಯಾಹ್ನ 1ರವರೆಗೆ ಛಾಯ್ಸ್ ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್ ಆಯ್ಕೆಗೂ ಮುನ್ನ ಪೋಷಕರ ಜೊತೆ ಚರ್ಚಿಸಿ ತೀರ್ಮಾನಿಸಲು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ (H Prasanna) ಅವರು ಸಲಹೆ ನೀಡಿದ್ದಾರೆ.

    ಛಾಯ್ಸ್- 1 ಮತ್ತು ಛಾಯ್ಸ್-2 ಆಯ್ಕೆ ಮಾಡಿದವರು ಸೆ.16ರೊಳಗೆ ಶುಲ್ಕ ಪಾವತಿಸಬೇಕು. ಛಾಯ್ಸ್-1 ಆಯ್ಕೆ ಮಾಡಿದವರು ಸೆ.16ರೊಳಗೆ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

  • ಎಂಸಿಸಿ ಫಲಿತಾಂಶ ಬಳಿಕ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅವಕಾಶ: ಕೆಇಎ

    ಎಂಸಿಸಿ ಫಲಿತಾಂಶ ಬಳಿಕ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅವಕಾಶ: ಕೆಇಎ

    – ಸಿಇಟಿ 3ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ

    ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳ ಎರಡನೇ ಹಾಗೂ ಎಂಜಿನಿಯರಿಂಗ್ ಸೇರಿದಂತೆ ಇತರ ಯುಜಿಸಿಇಟಿ ಕೋರ್ಸ್‌ಗಳ 3ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬುಧವಾರ ಪ್ರಕಟಿಸಿದೆ.

    ಫಲಿತಾಂಶಕ್ಕೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಸೆ.11ರಂದು ಬೆಳಗ್ಗೆ 11 ಗಂಟೆ ಒಳಗೆ ಇ-ಮೇಲ್ (keauthority-ka@nic.in) ಮೂಲಕ ತಿಳಿಸಬಹುದು. ಪರಿಶೀಲನೆ ಬಳಿಕ ನಾಳೆಯೇ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಅಂಗ & ಅಂಗಾಂಶ ದಾನ ಮಾಡಿದ ಕಿಚ್ಚ ಸುದೀಪ್‌ ಪತ್ನಿ

    ಅಂತಿಮ ಫಲಿತಾಂಶ ಪ್ರಕಟಣೆ ನಂತರ ಎಂಜಿನಿಯರಿಂಗ್ ಸೇರಿದಂತೆ ಇತರ ಯುಜಿಸಿಇಟಿ ಕೋರ್ಸ್‌ಗಳ ಅಭ್ಯರ್ಥಿಗಳು ಸೆ.13ರೊಳಗೆ ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ವಿವರಿಸಿದ್ದಾರೆ.

    ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶದ ದಿನಾಂಕವನ್ನು ಎಂಸಿಸಿ ಮುಂದೂಡಿರುವ ಕಾರಣ ರಾಜ್ಯದಲ್ಲಿ ಕೂಡ ಈ ಕೋರ್ಸ್‌ಗಳ ಪ್ರವೇಶಕ್ಕೆ ಅಭ್ಯರ್ಥಿಗಳು ಮುಂದಿನ ಸೂಚನೆಗಾಗಿ ಕಾಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    ಎಂಜಿನಿಯರಿಂಗ್ ಸೇರಿದಂತೆ ಯುಜಿಸಿಇಟಿ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಹಿಂದಿನ ಸುತ್ತಿನಲ್ಲಿ ಶುಲ್ಕ ಅಥವಾ ಕಾಷನ್ ಡೆಪಾಸಿಟ್ ಪಾವತಿಸಿದ್ದರೆ ಅದನ್ನು ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಲಾಗುವುದು ಎಂದಿದ್ದಾರೆ.

  • 2ನೇ ಸುತ್ತಿನ ವೈದ್ಯಕೀಯ ಕೋರ್ಸ್ ಕೌನ್ಸೆಲಿಂಗ್, ಸಿಇಟಿ 3ನೇ ಸುತ್ತಿಗೆ ಆಪ್ಷನ್ ದಾಖಲು ಆರಂಭ: ಕೆಇಎ

    2ನೇ ಸುತ್ತಿನ ವೈದ್ಯಕೀಯ ಕೋರ್ಸ್ ಕೌನ್ಸೆಲಿಂಗ್, ಸಿಇಟಿ 3ನೇ ಸುತ್ತಿಗೆ ಆಪ್ಷನ್ ದಾಖಲು ಆರಂಭ: ಕೆಇಎ

    ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ (Medical Course) ಎರಡನೇ ಮುಂದುವರಿದ ಸುತ್ತು ಹಾಗೂ ಎಂಜಿನಿಯರಿಂಗ್ ಇತ್ಯಾದಿ ಯುಜಿಸಿಇಟಿ ಕೋರ್ಸ್‌ಗಳ 3ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಶನಿವಾರದಿಂದ ಆರಂಭವಾಗಿದ್ದು, ಕಾಷನ್ ಡೆಪಾಸಿಟ್ ಪಾವತಿಸಿ, ಇಚ್ಛೆ/ಆಯ್ಕೆಗಳನ್ನು ಅದಲು/ಬದಲು ಮಾಡಿಕೊಳ್ಳಲು ಹಾಗೂ ಹೊಸದಾಗಿ ಸೇರಿಸುವುದಕ್ಕೆ ಸೆ.8ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

    ಸಮಯದ ಅಭಾವ ಇರುವ ಕಾರಣ, ನಿಗದಿತ ಕಾಲ ಮಿತಿಯಲ್ಲೇ ಎಲ್ಲ ಪೋಷಕರು/ವಿದ್ಯಾರ್ಥಿಗಳು ಮುಂಗಡ ಹಣ ಪಾವತಿಸಿ, ಇಚ್ಛೆ/ಆಯ್ಕೆಗಳನ್ನು ದಾಖಲಿಸುವ/ಅದಲು-ಬದಲು ಮಾಡುವ ಕೆಲಸವನ್ನು ಮಾಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಸಲಹೆ ನೀಡಿದ್ದಾರೆ.

    ಸೀಟ್ ಮ್ಯಾಟ್ರಿಕ್ಸ್‌ಗೆ ಹೊಸದಾಗಿ ಸೇರ್ಪಡೆಯಾದ ಬೆಳಗಾವಿಯ ಜೆಎನ್‌ಎಂಸಿ ಕಾಲೇಜಿನ 12 ವೈದ್ಯಕೀಯ ಸೀಟು ಹಾಗೂ ಮೈಸೂರಿನ ಫರೂಕಿಯ ದಂತ ವೈದ್ಯಕೀಯ ಕಾಲೇಜಿನ 40 ಸೀಟು ಹಾಗೂ ಬಿಜಿಎಸ್ ಗ್ಲೋಬಲ್ ದಂತ ವೈದ್ಯಕೀಯ ಕಾಲೇಜಿನ 50 ಸೀಟುಗಳನ್ನು ಆಸಕ್ತರು ತಮ್ಮ ಇಚ್ಛೆ/ಆಯ್ಕೆಗಳ ಪಟ್ಟಿಗೆ ಹೊಸದಾಗಿ ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದಲ್ಲದೆ, ಹಾಲಿ ಇರುವ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ವಿವರಿಸಿದ್ದಾರೆ.

    ಎಂಟು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ 400 ವೈದ್ಯಕೀಯ ಸೀಟುಗಳು ಸೇರ್ಪಡೆಯಾಗಿದ್ದು, ಅವುಗಳನ್ನು ಕೂಡ ಈ ಸುತ್ತಿಗೆ ಪರಿಗಣಿಸಲಾಗುತ್ತದೆ. ಅಲ್ಲದೆ, ಈ ಸರ್ಕಾರಿ ಕಾಲೇಜುಗಳಲ್ಲಿ 25 ಲಕ್ಷ ರೂಪಾಯಿಗೆ ಎನ್‌ಆರ್‌ಐ ಸೀಟುಗಳನ್ನು ಸರ್ಕಾರ ಕೊಟ್ಟಿದ್ದು, ಅರ್ಹ ಎನ್‌ಆರ್‌ಐ ಅಭ್ಯರ್ಥಿಗಳು ಹೊಸದಾಗಿ ಸದರಿ ಕಾಲೇಜುಗಳ ಸೀಟುಗಳಿಗೆ ಇಚ್ಛೆ/ಆಯ್ಕೆಗಳನ್ನು ನಮೂದಿಸಬಹುದು. ಎನ್‌ಆರ್‌ಐ ಅಲ್ಲದ ಅಭ್ಯರ್ಥಿಗಳು ಕೂಡ ಈ ಕಾಲೇಜುಗಳಲ್ಲಿ ‘ಕ್ಯೂ’ ಸೀಟುಗಳಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು. ಭರ್ತಿಯಾಗದೆ ಉಳಿಯುವ ಎನ್‌ಆರ್‌ಐ ಸೀಟುಗಳನ್ನು ‘ಕ್ಯೂ’ ಸೀಟುಗಳನ್ನಾಗಿ ಪರಿವರ್ತಿಸಿ, ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಯುಜಿಸಿಇಟಿ – ಕಾಷನ್ ಡೆಪಾಸಿಟ್:
    ಯುಜಿಸಿಇಟಿ (UGCET) ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 3ನೇ ಸುತ್ತಿನಲ್ಲಿ ಭಾಗವಹಿಸಲು ಆಸಕ್ತಿ ಇರುವ ಎಲ್ಲ ವರ್ಗದ ಅರ್ಹ ಅಭ್ಯರ್ಥಿಗಳು 10 ಸಾವಿರ ರೂಪಾಯಿ ಕಾಷನ್ ಡೆಪಾಸಿಟ್ ಪಾವತಿಸಬೇಕು. ಬಳಿಕ ಇಚ್ಛೆ/ಆಯ್ಕೆಗಳನ್ನು ಅದಲು/ಬದಲು ಮಾಡಿಕೊಳ್ಳುವುದಲ್ಲದೆ, ಹೊಸದಾಗಿಯೂ ಕೋರ್ಸ್‌ಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.

    ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಹಂಚಿಕೆಯಾಗದವರು, 2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಯಾವುದೇ ಛಾಯ್ಸ್ ನೀಡದಿರುವ, 2ನೇ ಸುತ್ತಿನಲ್ಲಿ ಛಾಯ್ಸ್-1 ಅಥವಾ ಛಾಯ್ಸ್-2 ಆಯ್ಕೆ ಮಾಡಿ ಶುಲ್ಕ ಪಾವತಿ ಮಾಡದಿರುವ ಹಾಗೂ ಛಾಯ್ಸ್-3 ದಾಖಲಿಸಿ, ಕಾಷನ್ ಡೆಪಾಸಿಟ್ ಪಾವತಿಸದೇ ಇರುವ ಅಭ್ಯರ್ಥಿಗಳಿಗೆ 3ನೇ ಸುತ್ತಿನಲ್ಲಿ ಕಾಷನ್ ಡೆಪಾಸಿಟ್ ಪಾವತಿಸಿ, ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದ್ದಾರೆ.

    ಸೀಟು ರದ್ದಿಗೂ ಸೆ.8 ಕೊನೆ ದಿನ:
    ಅಭ್ಯರ್ಥಿಗಳು ತಮಗೆ ಹಂಚಿಕೆಯಾಗಿರುವ ಕಾಲೇಜುಗಳಿಗೆ ಸೇರಿಕೊಂಡಿದ್ದು, ಆ ನಂತರ ಬೇಡ ಎನ್ನುವವರೂ ಸೆ.8ರೊಳಗೆ ಕೆಇಎಗೆ ಖುದ್ದು ಬಂದು ಸೀಟು ರದ್ದುಪಡಿಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ಸದರಿ ಸೀಟುಗಳನ್ನು ನಂತರದ ಸುತ್ತಿನಲ್ಲಿ ಇತರರಿಗೆ ಹಂಚಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

    ಮೂರನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ನಂತರ ಕಾಲೇಜಿಗೆ ಸೇರುವುದು ಕಡ್ಡಾಯವಾಗಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರವಹಿಸಿ, ಕೋರ್ಸ್/ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಈ ಸುತ್ತಿನಲ್ಲಿ ಹಂಚಿಕೆಯಾದ ಕಾಲೇಜಿಗೆ ಪ್ರವೇಶ ಪಡೆಯದೇ ಇದ್ದಲ್ಲಿ ಪೂರ್ಣ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಲ್ಲದೇ ಕಾನೂನು ಕ್ರಮ ಕೂಡ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಸರ್ಕಾರಿ ಕಾಲೇಜುಗಳಲ್ಲಿನ ಕೆಲವು ಕೋರ್ಸ್‌ಗಳಿಗೆ ಶುಲ್ಕ ರಿಯಾಯಿತಿ ಕೂಡ ಇದ್ದು, ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು ದಾಖಲಿಸುವ ಸಂದರ್ಭದಲ್ಲಿ ಈ ಕುರಿತು ಯೋಚಿಸಬೇಕು ಎಂದು ಅವರು ವಿವರಿಸಿದ್ದಾರೆ.

  • ಸಿಇಟಿ ಛಾಯ್ಸ್ ಆಯ್ಕೆ, ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: ಕೆಇಎ

    ಸಿಇಟಿ ಛಾಯ್ಸ್ ಆಯ್ಕೆ, ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: ಕೆಇಎ

    ಬೆಂಗಳೂರು: ಎಂಜಿನಿಯರಿಂಗ್, ಆಯುಷ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಸೂಕ್ತ ಛಾಯ್ಸ್ ಆಯ್ಕೆ ಮಾಡುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಸೆ.3ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

    ಶುಲ್ಕ ಪಾವತಿ ನಂತರ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.4ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನ ಭೂಕಂಪ – ಸಾವಿನ ಸಂಖ್ಯೆ 800ಕ್ಕೆ ಏರಿಕೆ: 2000ಕ್ಕೂ ಹೆಚ್ಚು ಜನರಿಗೆ ಗಾಯ

    ಛಾಯ್ಸ್-1 ಮತ್ತು ಛಾಯ್ಸ್-2 ಆಯ್ಕೆ ಮಾಡಿದವರು ಶುಲ್ಕ ಹಾಗೂ ಛಾಯ್ಸ್-3 ಆಯ್ಕೆ ಮಾಡಿದವರು ಕಾಷನ್ ಡೆಪಾಸಿಟ್ ಪಾವತಿಗೆ ಸೆ.3 ಕೊನೆ ದಿನ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: Vote Chori | ಮೋದಿ ವಿರುದ್ಧ ರಾಹುಲ್ ಹೈಡ್ರೋಜನ್ ಬಾಂಬ್

    ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಮತ್ತು ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿ ಕುರಿತು ಸದ್ಯದಲ್ಲೇ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Bengaluru Rains | ಕೆಲವೇ ನಿಮಿಷದ ಮಳೆಗೆ ಬೆಂಗಳೂರಲ್ಲಿ ಭಾರಿ ಅವಾಂತರ – ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

  • ಎಂಸಿಸಿ ಫಲಿತಾಂಶದ ಬಳಿಕ ವೈದ್ಯಕೀಯ, ದಂತ ವೈದ್ಯಕೀಯ ಕೌನ್ಸೆಲಿಂಗ್ – ಕೆಇಎ

    ಎಂಸಿಸಿ ಫಲಿತಾಂಶದ ಬಳಿಕ ವೈದ್ಯಕೀಯ, ದಂತ ವೈದ್ಯಕೀಯ ಕೌನ್ಸೆಲಿಂಗ್ – ಕೆಇಎ

    – ಯುಜಿಸಿಇಟಿ ಅಂತಿಮ ಫಲಿತಾಂಶ ಪ್ರಕಟ

    ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಪ್ರಕಟಿಸಿದ್ದು, ಸೀಟು ಹಂಚಿಕೆಯಾದವರು ಸೆ.3ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚನೆ ನೀಡಿದೆ.

    ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಎರಡನೇ ಸುತ್ತಿನ ಅಂತಿಮ ಫಲಿತಾಂಶವನ್ನು ಎಂಸಿಸಿ ಫಲಿತಾಂಶ ಹೊರಬಿದ್ದ ನಂತರ ಪ್ರಕಟಿಸಲಾಗುವುದು. ಅಲ್ಲಿಯವರೆಗೂ ಈ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾದವರಿಗೆ ಯಾವುದೇ ಛಾಯ್ಸ್ ಆಯ್ಕೆಗೆ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ಮಟ್ಟದ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಯುಜಿಸಿಇಟಿ ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಹಾಗೂ ಅವರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ನಾಲ್ಕು ಛಾಯ್ಸ್‌ಗಳ ಆಯ್ಕೆಗೂ ಅವಕಾಶ ನೀಡಲಾಗಿದೆ ಎಂದು ವಿವರಿಸಿದ್ದಾರೆ.

    ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳನ್ನು ಹೊರತುಪಡಿಸಿ, ಇತರ ಎಲ್ಲ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಇಂದಿನಿಂದಲೇ ಆರಂಭವಾಗಿದ್ದು, ಛಾಯ್ಸ್ ಆಯ್ಕೆಗೂ ಚಾಲನೆ ನೀಡಲಾಗಿದೆ. ಛಾಯ್ಸ್-1 ಮತ್ತು ಛಾಯ್ಸ್-2 ಅನ್ನು ಆಯ್ಕೆ ಮಾಡಿದವರಿಗೆ ಶುಲ್ಕ ಪಾವತಿಸಲು ಸೆ.2ರವರೆಗೆ ಅವಕಾಶ ನೀಡಲಾಗಿದೆ. ಸೆ.3ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ಪ್ರವೇಶ ಪ್ರಕ್ರಿಯೆಗೆ ಹೆಚ್ಚಿನ ಸಮಯ ಇಲ್ಲದ ಕಾರಣ ವೃತ್ತಿಪರ ಕಾಲೇಜುಗಳು ಭಾನುವಾರ ಸೇರಿದಂತೆ ಎಲ್ಲ ಸಾರ್ವತ್ರಿಕ ರಜಾ ದಿನಗಳಂದು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದ್ದಾರೆ.

    ನಾಲ್ಕು ಛಾಯ್ಸ್‌ಗೂ ಅವಕಾಶ:
    ಛಾಯ್ಸ್-1 ಆಯ್ಕೆ ಮಾಡಿದವರು ಶುಲ್ಕ ಪಾವತಿಸಿ ಕಾಲೇಜಿಗೆ ಹೋಗಬೇಕು. ಛಾಯ್ಸ್-2 ಆಯ್ಕೆ ಮಾಡಿಕೊಂಡವರು ಶುಲ್ಕ ಪಾವತಿಸಿ, ಅಪ್ ಗ್ರೇಡೇಷನ್‌ಗೆ ಕಾಯಬಹುದು. ಛಾಯ್ಸ್-3 ಆಯ್ಕೆ ಮಾಡಿದವರು 10 ಸಾವಿರ ರೂಪಾಯಿ ಕಾಷನ್ ಡೆಪಾಸಿಟ್ (ಬಿಎಸ್‌ಸಿ ನರ್ಸಿಂಗ್, ಬಿಪಿಒ, ಬಿಪಿಟಿ ಮತ್ತು ಎಹೆಚ್‌ಎಸ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರಿಗೆ ಇದು ಅನ್ವಯಿಸುವುದಿಲ್ಲ) ಕಟ್ಟಬೇಕು. ಛಾಯ್ಸ್-4 ಆಯ್ಕೆ ಮಾಡಿದವರು ಸಿಇಟಿ ಪ್ರಕ್ರಿಯೆಯಿಂದ ಹೊರಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಸೀಟು ಹಂಚಿಕೆ ನಂತರ ಯಾವುದೇ ಛಾಯ್ಸ್ ಆಯ್ಕೆ ಮಾಡದವರನ್ನು ಈ ಸುತ್ತಿನಲ್ಲಿ ಇಡೀ ಪ್ರಕ್ರಿಯೆಯಿಂದ ಹೊರ ಹಾಕಲಾಗುತ್ತದೆ. ಅಂತಹವರನ್ನು ಪುನಃ ಒಳ ಬರುವುದಕ್ಕೂ ಬಿಡುವುದಿಲ್ಲ. ಸೀಟು ಬೇಕೊ-ಬೇಡವೋ ಎನ್ನುವುದನ್ನು ತಮ್ಮ ಛಾಯ್ಸ್ ಆಯ್ಕೆ ಮೂಲಕ ಖಾತರಿಪಡಿಸಬೇಕು ಎಂದು ಅವರು ಎಚ್ಚರಿಸಿದ್ದಾರೆ.

    ವೈದ್ಯಕೀಯ ಕೌನ್ಸೆಲಿಂಗ್:
    ಎಂಸಿಸಿ ಫಲಿತಾಂಶ ಪ್ರಕಟಿಸಿದ ನಂತರ ರಾಜ್ಯದಲ್ಲಿ ಸೀಟು ಸಿಕ್ಕಿರುವ ಕೆಲವರಿಗೆ ಅಲ್ಲಿಯೂ ಸೀಟು ಹಂಚಿಕೆಯಾಗಿರುವ ಮಾಹಿತಿ ಲಭ್ಯವಾಗಲಿದೆ. ಅಂತಹ ಕೆಲವರು ಹೊರ ಹೋಗುವುದಕ್ಕೂ ಅವಕಾಶ ನೀಡಲಾಗುತ್ತದೆ. ಅಲ್ಲದೇ ಹೊಸ ಸೀಟು ಕೂಡ ಸೇರ್ಪಡೆಯಾಗುವ ಸಾಧ್ಯತೆ ಬಗ್ಗೆ ಎಂಸಿಸಿ ಹೇಳುತ್ತಿದೆ. ಒಂದು ವೇಳೆ ಈ ರೀತಿ ಆದರೆ, ಹೆಚ್ಚುವರಿ ಸೀಟುಗಳನ್ನೂ ಇದೇ ಸುತ್ತಿಗೆ ಗಣನೆಗೆ ತೆಗೆದುಕೊಂಡು, ಪುನಃ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಇದರಿಂದ ಹಾಲಿ ಸಿಕ್ಕಿರುವ ಸೀಟಿಗಿಂತ ಮತ್ತಷ್ಟು ಉತ್ತಮದ್ದೇ ಸೀಟು ಸಿಗುವ ಸಾಧ್ಯತೆ ಇರುತ್ತದೆ ಎಂದು ಪ್ರಸನ್ನ ವಿವರಿಸಿದ್ದಾರೆ.

  • UGCET/NEET: 2ನೇ ಸುತ್ತಿನ ಕೌನ್ಸೆಲಿಂಗ್ ಆರಂಭ – ಕೆಇಎ

    UGCET/NEET: 2ನೇ ಸುತ್ತಿನ ಕೌನ್ಸೆಲಿಂಗ್ ಆರಂಭ – ಕೆಇಎ

    – ಆ.29ಕ್ಕೆ ತಾತ್ಕಾಲಿಕ ಫಲಿತಾಂಶ ಪ್ರಕಟ

    ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ಎಲ್ಲ ವೃತ್ತಿಪರ ಕೋರ್ಸ್‌ಗಳ ಎರಡನೇ ಸುತ್ತಿನ ಪ್ರವೇಶ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ. ಲಭ್ಯ ಸೀಟುಗಳ ವಿವರಗಳನ್ನು ಕೂಡ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಗುರುವಾರದಿಂದ (ಆ.21) ಇಚ್ಛೆ/ಆಯ್ಕೆಗಳನ್ನು ಬದಲಿಸುವ/ತೆಗೆಯುವ ಕೆಲಸವನ್ನೂ ಮಾಡಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

    ಆ.25ರವರೆಗೆ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆ.29ರಂದು ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಒಳಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ – ವಿಧಾನಸಭೆಯಲ್ಲಿ ಚರ್ಚೆಗೆ ಸಿಗದ ಅವಕಾಶ

    ಆರ್ಯುವೇದ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಕೂಡ ಪ್ರಕಟಿಸಿದ್ದು, ಈ ಕೋರ್ಸ್‌ಗೆ ಮಾತ್ರ ಇಚ್ಚೆ/ಆಯ್ಕೆಗಳನ್ನು ದಾಖಲು ಮಾಡಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ – 22 ದಿನಗಳಲ್ಲೇ 3.35 ಕೋಟಿ ಒಡೆಯರಾದ ರಾಯರು

    ಮೊದಲ ಸುತ್ತಿನಲ್ಲಿ ಚಾಯ್ಸ್-1 ಆಯ್ಕೆ ಮಾಡಿಕೊಂಡು ಪ್ರವೇಶ ಪಡೆದಿರುವವರನ್ನು ಹೊರತುಪಡಿಸಿ, ಚಾಯ್ಸ್- 2 ಹಾಗೂ 3 ಆಯ್ಕೆ ಮಾಡಿದವರಿಗೂ ಆಯುರ್ವೇದ ಕೋರ್ಸ್‌ಗಳ ಪ್ರವೇಶಕ್ಕೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ

    ಇದುವರೆಗೂ ಸೀಟು ಹಂಚಿಕೆಯಾಗದಿರುವವರು ಈ ಸುತ್ತಿನಲ್ಲಿ ಭಾಗವಹಿಸಬೇಕಿದ್ದರೆ ಕಡ್ಡಾಯವಾಗಿ ಲಾಗಿನ್ ಆಗಿ ತಮಗೆ ಸೀಟಿನ ಅಗತ್ಯ ಇದೆ ಎನ್ನುವುದನ್ನು ಖಾತರಿಪಡಿಸಲು ಒಪ್ಪಿಗೆಯ (ಐ ಅಗ್ರಿ) ಬಟನ್ ಒತ್ತಬೇಕು. ಹಾಗೆಯೇ ತಮ್ಮ ಇಚ್ಛೆ/ಆಯ್ಕೆಗಳನ್ನು ಕೂಡ ಮೇಲೆ/ಕೆಳಗೆ ಮಾಡುವ ಹಾಗೂ ತೆಗೆದು ಹಾಕುವುದಕ್ಕೂ ಅವಕಾಶ ನೀಡಲಾಗಿದೆ. ಏನೂ ಮಾಡದೆ ಸುಮ್ಮನಿದ್ದರೂ ಅಂತಹವರನ್ನು ಮುಂದಿನ ಸುತ್ತಿಗೆ ಪರಿಗಣಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್

    ಎರಡನೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಕಾಲೇಜಿಗೆ ಹೋಗಿ ಸೇರಲೇಬೇಕು. ಇವರಿಗೆ ಚಾಯ್ಸ್- 2 ಮತ್ತು ಚಾಯ್ಸ್-3ಕ್ಕೆ ಅವಕಾಶವೇ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Video: ‘ಪಬ್ಲಿಕ್‌ ಟಿವಿ’ ಜೊತೆ ಅನನ್ಯಾ ಭಟ್‌ ಬಗ್ಗೆ ಸುಜಾತಾ ಭಟ್‌ ರಿಯಾಕ್ಷನ್‌

    ಅಣಕು ಫಲಿತಾಂಶ
    ಅಭ್ಯರ್ಥಿಗಳು, ಈಗಾಗಲೇ ನಮೂದಿಸಿರುವ ತಮ್ಮ ಇಚ್ಛೆ/ಆಯ್ಕೆಗಳನ್ನು ಅದಲುಬದಲು ಮಾಡಿಕೊಂಡ ನಂತರ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟಿಸಲಾಗುತ್ತದೆ. ಇದು ಬಹುತೇಕ ಅಂತಿಮ ಫಲಿತಾಂಶವೇ ಆಗಿರುತ್ತದೆ. ಎಂಸಿಸಿ ವತಿಯಿಂದ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಆಲ್ ಇಂಡಿಯಾ ಕೋಟಾ ಅಥವಾ ಬೇರೆ ರಾಜ್ಯದಲ್ಲಿ ಸೀಟು ಸಿಕ್ಕಿ, ಅಲ್ಲಿಗೆ ಹೋಗಲು ಆಸಕ್ತಿ ಇರುವವರಿಗೆ ಯಾವುದೇ ದಂಡ ಇಲ್ಲದೆ ಹೊರಗೆ ಹೋಗಲು ಈ ಹಂತದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಎಂಸಿಸಿ ಫಲಿತಾಂಶ ಪ್ರಕಟಣೆಯಾದ ಒಂದು ದಿನ ಅವಕಾಶ ಕೊಟ್ಟು ಹೊರ ಹೋಗುವವರನ್ನು ನೋಡಿಕೊಂಡು, ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಅಖಿಲ ಭಾರತ ಕೋಟಾದಲ್ಲಿ ಸೀಟು ಸಿಕ್ಕಿ ಅಲ್ಲೇ ಪ್ರವೇಶ ಪಡೆಯುವವರು ಹೊರ ಹೋದರೆ ನಮ್ಮದೇ ರಾಜ್ಯದ ಮತ್ತಷ್ಟು ಮಕ್ಕಳಿಗೆ ಅನುಕೂಲ ಮಾಡಿಕೊಡಲು ಎರಡನೇ ಸುತ್ತಿನ ಫಲಿತಾಂಶವನ್ನು ಒಂದು ದಿನ ತಡ ಮಾಡಿ ಪ್ರಕಟಿಸಲಾಗುವುದು. ಇದು ಈ ಬಾರಿಯ ವಿಶೇಷ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್‌ಗಳಿಗೆ ಫಾರಿನ್ ಫಂಡ್ – ಪರಿಶೀಲನೆಗೆ ಮುಂದಾದ ಇ.ಡಿ

  • UGCET/NEET: ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ: ಕೆಇಎ

    UGCET/NEET: ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ: ಕೆಇಎ

    ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ (ಜು.25) ಪ್ರಕಟಿಸಿದೆ.

    ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಬಿಟ್ಟಿರುವ ಲಿಂಕ್ ಮೂಲಕ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ. ಅರ್ಹ ಅಭ್ಯರ್ಥಿಗಳು ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸಾರ ಮೊದಲನೇ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.ಇದನ್ನೂ ಓದಿ: ಕಾಶ್ಮೀರದಲ್ಲಿ ನೆಲಬಾಂಬ್ ಸ್ಫೋಟ – ಅಗ್ನಿವೀರ್ ಹುತಾತ್ಮ, ಇಬ್ಬರು ಸೈನಿಕರಿಗೆ ಗಾಯ

    ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿಎಸ್‌ಸಿ (ನರ್ಸಿಂಗ್), ಬಿ-ಫಾರ್ಮಾ, ಫಾರ್ಮಾ-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ಗಳ ಪ್ರವೇಶಕ್ಕಾಗಿ ಜು.22ರ ಸಂಜೆ 6ಗಂಟೆವರೆಗೆ ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು (ಆಪ್ಷನ್) ಅಣಕು ಸೀಟು ಹಂಚಿಕೆ ಫಲಿತಾಂಶಕ್ಕೆ ಪರಿಗಣಿಸಲಾಗಿದೆ ಎಂದಿದ್ದಾರೆ.

    ಆಯುರ್ವೇದ, ಯುನಾನಿ, ನ್ಯಾಚುರೋಪತಿ, ಯೋಗಾ ಮತ್ತು ಹೋಮಿಯೋಪತಿ ಕೋರ್ಸ್ಗಳಿಗೆ ಸೀಟು ಮ್ಯಾಟ್ರಿಕ್ಸ್ ಇನ್ನೂ ಬಂದಿರದ ಕಾರಣ ಅಣಕು ಸೀಟು ಹಂಚಿಕೆಗೆ ಈ ಕೋರ್ಸ್ಗಳನ್ನು ಪರಿಗಣಿಸಿಲ್ಲ. ಸೀಟು ಮ್ಯಾಟ್ರಿಕ್ಸ್ ಬಂದ ನಂತರ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಎಂದು ವಿವರಿಸಿದ್ದಾರೆ.

    ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ಹೊಸದಾಗಿ ಸೇರಿಸಲು, ಬೇಡದಿದ್ದಲ್ಲಿ ಅಳಿಸಲು, ಕ್ರಮಾಂಕ ಬದಲಿಸಲು, ಮಾರ್ಪಡಿಸಲು ಜು.26ರಿಂದ-29ರ ಸಂಜೆ 5ಗಂಟೆವರೆಗೆ ಅವಕಾಶ ನೀಡಲಾಗಿದೆ. ಆ.1ರಂದು ಬೆಳಿಗ್ಗೆ 11ಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು. ಆ.2ರಂದು ಮಧ್ಯಾಹ್ನ 2ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಬಳಿಕ ಛಾಯ್ಸ್ ಆಯ್ಕೆಗೆ ಆ.4ರಿಂದ 7ರವರೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

    ಇದುವರೆಗೂ ಇಚ್ಛೆ/ಆಯ್ಕೆಗಳನ್ನು ದಾಖಲಿಸದೇ ಇರುವ ಅಭ್ಯರ್ಥಿಗಳು ಕೂಡ ಇಷ್ಟವಿದ್ದಲ್ಲಿ 750 ರೂ. ಪಾವತಿಸಿ, ಆಪ್ಷನ್ಸ್ ದಾಖಲಿಸಬಹುದು. ಮೊದಲ ಸುತ್ತಿಗೆ ನಿಗದಿಪಡಿಸಿರುವ ಕೊನೆ ದಿನಾಂಕದ ನಂತರ ಮುಂದಿನ ಯಾವುದೇ ಸುತ್ತಿಗೆ ಇಚ್ಛೆ-ಆಯ್ಕೆಗಳನ್ನು ದಾಖಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಕೋರ್ಸ್, ಶುಲ್ಕ ಇತ್ಯಾದಿ ನೋಡಿಕೊಂಡು, ಈಗಲೇ ತಮಗೆ ಇಷ್ಟವಾದ ಕಾಲೇಜು/ಕೋರ್ಸ್‌ಗಳಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು ಎಂದಿದ್ದಾರೆ.ಇದನ್ನೂ ಓದಿ:ಕಾಂಗ್ರೆಸ್‌ನಲ್ಲೇ ಒಳ ರಾಜಕಾರಣ| ತಗ್ಗಿದ ಭೀಮಾನಾಯ್ಕ್ ಬಲ- ರಾಘವೇಂದ್ರಗೆ ರಾಬಕೊವಿ ಫಲ