Tag: ಕೆಆರ್ ಪೇಟೆ

  • ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

    ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

    ಮಂಡ್ಯ: ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಜಯಗಳಿಸಿದ್ದು ಜೆಡಿಎಸ್ ಕೋಟೆಯನ್ನು ಧೂಳೀಪಟ ಮಾಡಿದೆ. ತಮ್ಮ ಅವಧಿಯಲ್ಲಿ ಸಿಎಂ ಯಡಿಯೂರಪ್ಪ ಹುಟ್ಟಿದ ಜಿಲ್ಲೆಯಲ್ಲಿ ಕಮಲವನ್ನು ಅರಳಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ 9,509 ಮತಗಳಿಂದ ಗೆಲ್ಲುವ ಮೂಲಕ ಮಂಡ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಎಲ್ಲ 7 ಕ್ಷೇತ್ರಗಳನ್ನು ಜೆಡಿಎಸ್ ಗೆದ್ದ ಹಿನ್ನೆಲೆಯಲ್ಲಿ ಈ ಬಾರಿ ಇಲ್ಲಿ ಗೆಲ್ಲುವುದು ಕಷ್ಟ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಎಲ್ಲ ವಿಶ್ಲೇಷಣೆಗಳು ತಲೆಕೆಳಗಾಗಿದ್ದು ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ.

    ಚುನಾವಣಾ ಪ್ರಚಾರ ಭಾಷಣದಲ್ಲಿ ಯಡಿಯೂರಪ್ಪ ನನ್ನ ಹುಟ್ಟೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಕೇಳಿಕೊಂಡಿದ್ದರೆ, ಕುಮಾರಸ್ವಾಮಿ ನಾರಾಯಣ ನನಗೆ ಮೋಸ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದರು. ಆದರೆ ಮತದಾರ ಬಿಎಸ್‍ವೈ ಮನವಿಯನ್ನು ಪುರಸ್ಕರಿಸಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ.

    ಮತ ಎಣಿಕೆ ಆರಂಭವಾದ ಮೊದಲ 1 ಗಂಟೆ ಜೆಡಿಎಸ್ ಮುನ್ನಡೆ ಸಾಧಿಸಿತ್ತು. 9 ಗಂಟೆಯ ನಂತರ ಒಂದು ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ ಮತ್ತೊಂದು ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ ಸಾಧಿಸುತಿತ್ತು. ಆದರೆ ಅಂತಿಮವಾಗಿ ನಾರಾಯಣ ಗೌಡ ಮುನ್ನಡೆ ಸಾಧಿಸುತ್ತಾ ಹೋಗಿ ಜಯಗಳಿಸಿದರು.

    ಫಲಿತಾಂಶಕ್ಕೂ ಮುನ್ನ ಯಡಿಯೂರಪ್ಪ ಹುಟ್ಟೂರು ಬೂಕನಕೆರೆಯ ಗೋಗಾಲಮ್ಮ ದೇವಸ್ಥಾನದಲ್ಲಿ ಬೆಂಬಲಿಗರೊಂದಿಗೆ ನಾರಾಯಣಗೌಡ ಪೂಜೆ ಸಲ್ಲಿಸಿದರು. ಇದನ್ನು ಓದಿ: ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ

    ಮತ ಎಣಿಕೆಯ ಮೊದಲ ಮೂರು ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿತ್ತು. 4ನೇ ಸುತ್ತಿನಲ್ಲಿ ನಾರಾಯಣ ಗೌಡರಿಗೆ ಮನ್ನಡೆ ಸಿಗಲು ಆರಂಭವಾಯಿತು. ಕೊನೆಗೆ 17ನೇ ಸುತ್ತು ಮುಕ್ತಾಯದ ವೇಳೆ ನಾರಾಯಣ ಗೌಡ 9,509 ಮತಗಳ ಅಂತರದಿಂದ ಜಯಗಳಿಸಿದರು. ಬಿಜೆಪಿ 62,265 ಮತಗಳನ್ನು ಪಡೆದರೆ ಜೆಡಿಎಸ್ 52,756 ಮತಗಳನ್ನು ಪಡೆದಿದೆ. ಕಾಂಗ್ರೆಸ್ 37,938 ಮತಗಳನ್ನು ಪಡೆದಿದೆ.

  • ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    – ಹಿರಿಯ ಮಗಳು ಅಕೌಂಟಿಗೆ 2 ಲಕ್ಷ ಹಾಕ್ತಿದ್ದಾಳೆ

    ಮಂಡ್ಯ: ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಬಿಎಸ್‌ವೈ ಮಾತನಾಡಿದ್ದ ಆಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ 17 ಮಂದಿ ಶಾಸಕರು ರಾಜೀನಾಮೆ ಕೊಟ್ಟಿರುವ ಅಸಲಿ ಕಾರಣವನ್ನು ಅನರ್ಹ ಶಾಸಕ ನಾರಾಯಣಗೌಡ ಬಿಚ್ಚಿಟ್ಟಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನನ್ನನ್ನು ಯಡಿಯೂರಪ್ಪ ಮನೆಗೆ ಕರೆದೊಯ್ದಿದ್ದರು. ಆಗ ಬಿಎಸ್‌ವೈ ಅವರು ಏನಪ್ಪ ಸಿಎಂ ಆಗೋ ಚಾನ್ಸ್ ಇದೆ ಬೆಂಬಲಿಸ್ತೀಯಾ ಅಂತ ಕೇಳಿದರು. ಅಲ್ಲದೆ ನನ್ನ ತಂದೆ ವೀರಭದ್ರ ಸ್ವಾಮಿ ಪೂಜೆ ಮಾಡಿಕೊಂಡು ಬೆಳೆಸಿದ್ದಾರೆ. ಆದರೆ ಕೆಆರ್‌ಪೇಟೆ ಅಭಿವೃದ್ಧಿಯಾಗಿಲ್ಲ. ಈಗಲೂ ಕನಸಲ್ಲಿ ಬಂದು ಕಾಡ್ತಿದ್ದಾರೆ. ನೀನು ಕೈ ಜೋಡಿಸಿದರೆ ಕೆಆರ್‌ಪೇಟೆ ಅಭಿವೃದ್ಧಿ ಮಾಡೋಣ. ಏನಂತೀಯಾ ಎಂದು ಯಡಿಯೂರಪ್ಪ ನನ್ನನ್ನು ಕೇಳಿದ್ದರು. ಅದಕ್ಕೆ ನಾನು ತಾಲೂಕಿನ ಅಭಿವೃದ್ಧಿಗೆ 700 ಕೋಟಿ ಕೇಳಿದ್ದೆ. ಆದರೆ ಯಡಿಯೂರಪ್ಪನವರು ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು ಎಂದು ಸ್ಫೋಟಕ ಸತ್ಯವನ್ನು ಬಯಲು ಮಾಡಿದರು.

    ರೇವಣ್ಣಗೆ ಟಾಂಗ್:
    ಇದೇ ವೇಳೆ, ರೇವಣ್ಣ ಸಾಹೇಬರು ಹೇಳ್ತಾರೆ ಎಂಜಲು ಲೋಟ ತೊಳೆಯೋನು ಅಂತ. ನನಗೆ ಅದೇ ಆಶೀರ್ವಾದ ಮಾಡಿರೋದು. ಎಂಜಲು ತೊಳಿಯೋದಕ್ಕಿಂತ ಪುಣ್ಯ ಕೆಲಸ ಇನ್ನೊಂದಿಲ್ಲ. ಎಂಜಲು ಎತ್ತೋಕೆ ಸುಲಭವಾಗಿ ಸಿಗಲ್ಲ. ನನಗೆ ಇದೇ ಶಕ್ತಿ ಕೊಡಲಿ. ಸದಾ ನಾನು ಸೇವಕನಾಗಿ, ಲಕ್ಷಾಂತರ ಜನರಿಗೆ ಅನ್ನದಾನ ಮಾಡಿ ಎಂಜಲು ಎತ್ತುತ್ತೇನೆ ಎಂದು ಹೇಳುವ ಮೂಲಕ ರೇವಣ್ಣಗೆ ಟಾಂಗ್ ನೀಡಿದರು.

    ದಳಪತಿಗಳಿಗೆ ಸವಾಲು:
    ಕೆಆರ್‌ಪೇಟೆಗೆ ರಾಜಕೀಯ ಮಾಡಲು ನೀವು ಬರುತ್ತಿದ್ದೀರಾ. ನಾನು ನನ್ನ ಅರ್ಧ ಆಸ್ತಿಯನ್ನು ನನ್ನ ಕ್ಷೇತ್ರಕ್ಕೆ ಬರೆದು ಕೊಡುತ್ತೇನೆ. ನೀವು ನಿಮ್ಮ ಅರ್ಧ ಆಸ್ತಿಯನ್ನು ಬರೆದುಕೊಡಿ ಎಂದು ನಾರಾಯಣಗೌಡರು ದಳಪತಿಗಳಿಗೆ ಸವಾಲು ಹಾಕಿದರು.

    ಸುಮ್ಮನೆ ನಾರಾಯಣಗೌಡ ಗೆದ್ದರು, ಸೋತರೂ ಮುಂಬೈಗೆ ಹೋಗುತ್ತಾನೆ ಅಂತಾರೆ. ನಾನು ಹೋದರೂ ನನ್ನ ಹೊಟ್ಟೆ ಪಾಡಿಗೆ ಹೋಗೋದು. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬಳು ಮದುವೆಯಾಗಿದ್ದಾಳೆ. ಇನ್ನೊಬ್ಬಳು ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ನನ್ನ ಹಿರಿಯ ಮಗಳು ನನ್ನ ಅಕೌಂಟ್‌ಗೆ 2 ಲಕ್ಷ ಹಾಕುತ್ತಿದ್ದಾಳೆ. ನನಗೆ ಇನ್ನೇನು ಬೇಕು ಹೇಳಿ ಎಂದರು.

  • ಮುಸ್ಲಿಂ ಯುವಕರ ಬಿಡುಗಡೆ ಖಂಡಿಸಿ ನಾಳೆ ಕೆಆರ್ ಪೇಟೆ ಬಂದ್

    ಮುಸ್ಲಿಂ ಯುವಕರ ಬಿಡುಗಡೆ ಖಂಡಿಸಿ ನಾಳೆ ಕೆಆರ್ ಪೇಟೆ ಬಂದ್

    ಮಂಡ್ಯ: ಮುಸ್ಲಿಂ ಯುವಕರನ್ನು ಬಂಧನ ಮಾಡಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ ನಾಳೆ ಹಿಂದೂಪರ ಮತ್ತು ಕನ್ನಡ ಪರ ಸಂಘಟನೆಗಳು ಕೆಆರ್ ಪೇಟೆ ಬಂದ್‍ಗೆ ಕರೆ ನೀಡಿವೆ.

    ಅಕ್ಟೋಬರ್ 27 ರಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಆಲಂಬಾಡಿಕಾವಲು ಬಳಿ ಮುಸ್ಲಿಂ ಯುವಕರು ಅನುಮಾನಾಸ್ಪದವಾಗಿ ಪೇರೆಡ್ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ 16 ಮುಸ್ಲಿಂ ಯುವಕರನ್ನು ಬಂಧಿಸಿದ್ದರು.

    ನಂತರ ಅವರು ಪಿಎಸ್‍ಎಫ್ ಸಂಘಟನೆಯ ಕಾರ್ಯಕರ್ತರು ಎಂದು ತಿಳಿದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ಇದನ್ನು ಖಂಡಿಸಿ ನಾಳೆ ಕೆಆರ್ ಪೇಟೆ ಬಂದ್‍ಗೆ ಸಂಘಟನೆಗಳು ಕರೆ ನೀಡಿವೆ. ಕೆಆರ್ ಪೇಟೆ ಭಾಗದಲ್ಲಿ ದೇಶ ವಿರೋಧಿ ಚಟುವಟಿಗಳು ನಡೆಯುತ್ತಿವೆ. ಆದರೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮೂರು ದಿನಗಳ ಹಿಂದೆ ಬಂಧನ ಮಾಡಿ ಬಿಡುಗಡೆ ಮಾಡಿರುವ ಯುವಕರು ಸಹ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದರು ಎಂದು ಆರೋಪಿಸಿದ್ದಾರೆ.

    ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ಯುವಕರ ಮೇಲೆ ಸಣ್ಣಪುಟ್ಟ ಪ್ರಕರಣಗಳನ್ನು ದಾಖಲಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆ ಮಾಡಿರುವ ಯುವಕರನ್ನು ಮತ್ತೆ ಬಂಧಿಸಿ, ಕೆಆರ್ ಪೇಟೆ ಭಾಗದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎಂದು ಹಿಂದೂ ಪರ ಮತ್ತು ಕನ್ನಡ ಪರ ಸಂಘಟನೆಗಳು ಬಂದ್‍ಗೆ ಕರೆ ನೀಡಿವೆ.

    ಕೆಆರ್ ಪೇಟೆಯನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲು ಈಗಾಗಲೇ ಸಂಘಟನೆಗಳು ನಿರ್ಧರಿಸಿವೆ. ಈ ಪ್ರತಿಭಟನೆಯಲ್ಲಿ ಹಲವು ಮಠಗಳ ಮಠಾಧೀಶರುಗಳು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಪೊಲೀಸರು ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಿದ್ದಾರೆ.

  • ಕೆಆರ್ ಪೇಟೆ ಟಿಕೆಟ್ ಆಕಾಂಕ್ಷಿ ಅಲ್ಲ – ನಿಖಿಲ್ ಸ್ಪಷ್ಟನೆ

    ಕೆಆರ್ ಪೇಟೆ ಟಿಕೆಟ್ ಆಕಾಂಕ್ಷಿ ಅಲ್ಲ – ನಿಖಿಲ್ ಸ್ಪಷ್ಟನೆ

    – ಜಿಟಿಡಿ ನನ್ನ ತಂದೆ ಸಮಾನ
    – ಎಲ್ಲಾ 17 ಕ್ಷೇತ್ರಗಳಲ್ಲಿ ಸ್ಪರ್ಧೆ

    ಬೆಂಗಳೂರು: ನಾನು ಕೆ.ಅರ್.ಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಜೆಡಿಎಸ್ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಜೆಪಿ ಭವನದಲ್ಲಿ ಮಾತಾನಾಡಿದ ಅವರು, ಎರಡು ಮೂರು ದಿನಗಳಿಂದ ಮಾಧ್ಯಮದಲ್ಲಿ ನನ್ನ ಹೆಸರು ಕೇಳಿ ಬರುತ್ತಿದೆ. ಏಕೆ ನನ್ನ ಹೆಸರು ಕೇಳಿ ಬರುತ್ತಿದೆ ಎಂಬುವುದು ಗೊತ್ತಿಲ್ಲ. ಕೆ.ಆರ್.ಪೇಟೆಯಲ್ಲಿ ತುಂಬಾ ಜನ ಆಕಾಂಕ್ಷಿಗಳು ಇದ್ದಾರೆ. ನಾನು ಕೆ.ಆರ್.ಪೇಟೆ ಕ್ಷೇತ್ರದ ಕಾರ್ಯಕರ್ತರ ಸಭೆ ಮಾಡುತ್ತೇನೆ. ಸಭೆ ಮಾಡಿ ಆಕಾಂಕ್ಷಿಗಳ ಪಟ್ಟಿ ಮಾಡಿ ನಾನೇ ವರಿಷ್ಠರಿಗೆ ಕೊಡುತ್ತೇನೆ ಎಂದರು.

    ಕ್ಷೇತ್ರ ಅಭ್ಯರ್ಥಿ ಆಯ್ಕೆ ವರಿಷ್ಠರು ಏನು ನಿರ್ಧಾರ ಮಾಡುತ್ತಾರೆ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಆದರೆ ನಾನು ಕೆ.ಆರ್.ಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಶಾಸಕನಾಗಬೇಕೆಂಬ ಆಸೆ ಇದ್ದಿದ್ದರೆ ರಾಮನಗರದಲ್ಲೇ ಚುನಾವಣೆ ಎದುರಿಸುತ್ತಿದೆ. ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಬೇಕಾದ್ರು ನಾನು ಸ್ಪರ್ಧೆ ನಡೆಸಬಹುದಿತ್ತು. ಆದರೆ ಜನರ ಜೊತೆಗಿರಲು ಇಷ್ಟ ಪಡುತ್ತೇನೆ. ವರಿಷ್ಠರು ಕೊಟ್ಟ ಪಕ್ಷದ ಕೆಲಸ ಮಾಡುತ್ತೇನೆ ಅಷ್ಟೇ ಎಂದರು. ಅಲ್ಲದೇ ಕೆ.ಆರ್.ಪೇಟೆ ಜೆಡಿಎಸ್ ಭದ್ರ ಕೋಟೆ. ಈ ಬಾರಿ ಅಲ್ಲಿ ಜೆಡಿಎಸ್ ಗೆಲುವು ಸಾಧಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜಿಡಿಡಿ ನನ್ನ ತಂದೆ ಸಮಾನ: ಇದೇ ಸಂದರ್ಭದಲ್ಲಿ ಜಿಡಿ ದೇವೇಗೌಡರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿ ದೇವೇಗೌಡರು ನನ್ನ ತಂದೆ ಸಮಾನ. ಜಿಟಿ ಹರೀಶ್ ನನ್ನ ಸಹೋದರ ಇದ್ದಂತೆ. ಅಪ್ಪ-ಮಕ್ಕಳ ಕೊಡುಗೆ ಮೈಸೂರಿಗೆ ಅಪಾರ ಇದೆ. ನಾನು ಹರೀಶ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಅವರಲ್ಲಿ ಸಾಕಷ್ಟು ನೋವಿದೆ. ನೋವಿನಲ್ಲಿ ಸ್ವಲ್ಪ ಹಾಗೆ ಮಾತನಾಡಿರಬಹುದು ಅಷ್ಟೇ. ಅವರ ಮನವೊಲಿಸುವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದರು.

    17 ಕ್ಷೇತ್ರದಲ್ಲಿ ಸ್ಪರ್ಧೆ: ಮುಂದೇ ನಡೆಯುವ 17 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ನಮ್ಮ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಎಲ್ಲಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ನಾನು ಭಾಗವಹಿಸುತ್ತೇನೆ. ಪ್ರತಿ ಕ್ಷೇತ್ರದಲ್ಲಿ ಸಭೆ ಮಾಡಿ, ಆಕಾಂಕ್ಷಿ ಗಳ ಪಟ್ಟಿಯನ್ನ ತಯಾರಿಸಿ ವರಿಷ್ಠರಿಗೆ ನೀಡುವ ಕಾರ್ಯ ಮಾಡುತ್ತೇನೆ. ಈ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎಂದರು.

    ಅಂದಹಾಗೇ ಇದೇ ಮೊದಲ ಬಾರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನ ಪಡೆದ ಬಳಿಕ ನಿಖಿಲ್ ಕುಮಾರಸ್ವಾಮಿ ಮೊದಲ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಕ್ಷದ 30 ಜಿಲ್ಲೆಗಳ ಯುವ ಘಟಕ ಅಧ್ಯಕ್ಷರ ಭಾಗವಹಿಸಿದ್ದರು. ಈ ಸಭೆಯಲ್ಲಿ ಸರ್ಕಾರ ಹೋಗಿದೆ ಎಂದು ಯಾರು ಚಿಂತೆ ಮಾಡಬೇಕಿಲ್ಲ. ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ ಅವರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸಿ. ರೈತರ ಸಾಲಮನ್ನಾ, ಋಣಮುಕ್ತ ಕಾಯ್ದೆ, ಬಡವರ ಬಂಧು ಸೇರಿದಂತೆ ಹಲವು ಯೋಜನೆ ಕುಮಾರಸ್ವಾಮಿ ತಂದಿದ್ದಾರೆ. ಇದೆಲ್ಲವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿ ಎಂದು ಪಕ್ಷದ ಯುವ ಕಾರ್ಯಕರ್ತರಿಗೆ ನಿಖಿಲ್ ಸೂಚನೆ ನೀಡಿದ್ದಾರೆ.

  • ನಾರಾಯಣಗೌಡ ರಾಜೀನಾಮೆಗೆ ಕಾರ್ಯಕರ್ತರ ಆಕ್ರೋಶ – ಕಚೇರಿ ಮುಂದಿದ್ದ ಬೋರ್ಡ್ ಧ್ವಂಸ

    ನಾರಾಯಣಗೌಡ ರಾಜೀನಾಮೆಗೆ ಕಾರ್ಯಕರ್ತರ ಆಕ್ರೋಶ – ಕಚೇರಿ ಮುಂದಿದ್ದ ಬೋರ್ಡ್ ಧ್ವಂಸ

    ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಕಾರ್ಯಕರ್ತರು ಅಣಕು ಶವಯಾತ್ರೆ ನಡೆಸಿದ್ದಾರೆ.

    ಇಂದು ಶಾಸಕರ ರಾಜೀನಾಮೆ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಯಾತ್ರೆಯನ್ನ ನಡೆಸಿದ್ದರು. ಈ ಸಂದರ್ಭದಲ್ಲಿ ಶಾಸಕ ನಿವಾಸದ ಬಳಿ ಆಗಮಿಸಿದ ಕಾರ್ಯಕರ್ತರು ಕಚೇರಿ ಮುಂದೆ ಹಾಕಿದ್ದ ಬೋರ್ಡ್ ಧ್ವಂಸಗೊಳಿಸಿದರು. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

    ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಟಿ.ಮಂಜು, ದೇವರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಾರಾಯಣಗೌಡ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಕಚೇರಿಗೆ ನುಗ್ಗಲು ಯತ್ನಿಸಿದರು. ಕೂಡಲೇ ಎಚ್ಚೆತ್ತ ಪೊಲೀಸರು ಕಾರ್ಯಕರ್ತರನ್ನು ತಡೆದರು. ಇದಕ್ಕೂ ನಗರದ ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರು ನಾರಾಯಣಗೌಡ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕರ ಕಚೇರಿ ಎದುರು ದಾಂಧಲೆ ನಡೆಸಿದ ಕಾರಣ ಕೆಆರ್ ಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಡ್ಯ: ಹಳ್ಳಕ್ಕೆ ಉರುಳಿ ಬಿದ್ದ ಆಟೋ- 20 ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಾಯ

    ಮಂಡ್ಯ: ಹಳ್ಳಕ್ಕೆ ಉರುಳಿ ಬಿದ್ದ ಆಟೋ- 20 ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಾಯ

    ಮಂಡ್ಯ: ಶಾಲಾ ಮಕ್ಕಳನ್ನ ಕರೆದುಕೊಂಡು ಹೋಗುತ್ತಿದ್ದ ಆಟೋ ಪಲ್ಟಿಯಾಗಿ 20 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.

    ತಾಲೂಕಿನ ಚೌಡೇನಹಳ್ಳಿ ಗ್ರಾಮದ ಬಳಿ ಆಟೋ ಉರುಳಿ ಬಿದ್ದಿದೆ. ಇಂದು ಪಟ್ಟಣದ ಸರ್ಕಾರಿ ಶತಮಾನದ ಶಾಲೆಗೆ ಮಕ್ಕಳನ್ನ ಆಟೋದಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಹಾಕಿದ್ದ ಹುಲ್ಲು ಆಟೋದ ಹಿಂಭಾಗದ ಚಕ್ರಕ್ಕೆ ಸಿಲುಕಿಕೊಂಡಿದೆ. ಪರಿಣಾಮ ನಿಯಂತ್ರಣ ತಪ್ಪಿದ ಆಟೋ ಹಳ್ಳಕ್ಕೆ ಉರಳಿ ಬಿದ್ದಿದೆ. ಇದ್ರಿಂದ ಆಟೋದಲ್ಲಿದ್ದ 20 ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿದೆ.

    ಆಟೋ ಉರುಳಿಬಿದ್ದ ತಕ್ಷಣ ಭಯದಿಂದ ಮಕ್ಕಳು ಕಿರುಚಿಕೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಗಾಯಗೊಂಡ ಮಕ್ಕಳನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಮಕ್ಕಳಿಗೆ ಕೆಆರ್ ಪೇಟೆ ಪಟ್ಟಣ್ಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.