Tag: ಕೆಆರ್ ಎಸ್

  • ಭರ್ತಿಯಾಗುತ್ತಿರುವ ಕನ್ನಂಬಾಡಿ- ಸೋಮವಾರದಿಂದ ವಿಸಿ ನಾಲೆಗೆ ನೀರು ಹರಿಸಲು ಸಚಿವ ನಾರಾಯಣಗೌಡ ಸೂಚನೆ

    ಭರ್ತಿಯಾಗುತ್ತಿರುವ ಕನ್ನಂಬಾಡಿ- ಸೋಮವಾರದಿಂದ ವಿಸಿ ನಾಲೆಗೆ ನೀರು ಹರಿಸಲು ಸಚಿವ ನಾರಾಯಣಗೌಡ ಸೂಚನೆ

    ಮಂಡ್ಯ: ಕಾವೇರಿ ಕಣಿವೆ ಸುತ್ತ ಸಾಕಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಜಲಾಶಯ ಭರ್ತಿಯಾಗುತ್ತಿದೆ. ಈಗಾಗಲೇ 106 ಅಡಿಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದು ಬಂದಿದೆ. ಹೀಗಾಗಿ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸುವಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಕಾವೇರಿ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆ ನಡೆಸುವ ರೈತರಿಗೆ ಸಂತಸದ ಸುದ್ದಿ ಇದು. ಕೆಆರ್ ಸ್ ಅಣೆಕಟ್ಟಿನ 124 ಅಡಿಗಳ ಪೈಕಿ 106 ಅಡಿ ನೀರು ತುಂಬಿದೆ. 35 ಸಾವಿರ ಕ್ಯೂಸೆಕ್ಸ್ ಒಳ ಹರಿವಿನ ಪ್ರಮಾಣ ಇದೆ. ಕೇವಲ 24 ಗಂಟೆಯಲ್ಲಿ ಎರಡು ಅಡಿಯಷ್ಟು ನೀರು ಭರ್ತಿಯಾಗಿದೆ. 6 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಈಗಾಗಲೇ ಹೇಮಾವತಿ ನಾಲೆಗೆ ನೀರು ಬಿಡಲಾಗಿದ್ದು, ಸೋಮವಾರಿಂದ ವಿಸಿ ನಾಲೆಗೆ ನೀರು ಹರಿಸುವ ಮೂಲಕ ಮುಂಗಾರು ಕೃಷಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

    ಸಬ್ಸಿಡಿಯಲ್ಲಿ ಭತ್ತದ ಬೀಜ ವಿತರಣೆ ಪ್ರಾರಂಭ:
    ಸಕ್ಕರೆ ನಾಡು ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯಲ್ಲಿ ಕಬ್ಬಿಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. 40 ಸಾವಿರ ಹೆಕ್ಟೇರ್ ನಲ್ಲಿ ಕಬ್ಬು ಬೆಳೆದರೆ 65 ಸಾವಿರ ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲಾಗುತ್ತದೆ. ಮುಂಗಾರು ಕೃಷಿ ಆರಂಭಿಸಲು ನಾಲೆಗಳಿಗೆ ನೀರು ಬಿಡುವ ಸಮಯವನ್ನೇ ಎದುರು ನೋಡಲಾಗುತ್ತಿತ್ತು. ಕೆಆರ್ ಎಸ್ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈಗ ನೀರು ಹರಿಸಲಾಗುತ್ತಿದೆ. ಹೀಗಾಗಿ ಕೃಷಿ ಇಲಾಖೆ ಸಹ ಸಬ್ಸಿಡಿಯಲ್ಲಿ ಭತ್ತದ ಬೀಜವನ್ನು ವಿತರಿಸುವ ಕಾರ್ಯ ಆರಂಭಿಸಲಿದೆ. ಮುಂದಿನ ಬುಧವಾರದಿಂದ ರೈತರಿಗೆ ಭತ್ತದ ಬೀಜ ವಿತರಣೆ ಶುರುವಾಗಲಿದೆ. ಸುಮಾರು 4 ಸಾವಿರ ಹೆಕ್ಟೇರ್ನಲ್ಲಿ ನೀರಾವರಿ ರಾಗಿ ಹಾಗೂ 500 ಹೆಕ್ಟೇರ್ ನಲ್ಲಿ ಅಲಸಂದೆ ಕೂಡ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ಗೊಬ್ಬರ ಸಹ ದಾಸ್ತಾನು ಇದ್ದು, ಪ್ರತಿ ತಿಂಗಳು ನಿಗದಿತ ಪ್ರಮಾಣದಲ್ಲಿ ಸರಬರಾಜು ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಉಳಿಸಬೇಕಾದರೆ ಕಾಂಗ್ರೆಸ್ ಕಿತ್ತೊಗೆಯಬೇಕೆಂದ ಸಿದ್ದರಾಮಯ್ಯ- ಮತ್ತೆ ಎಡವಟ್ಟು

    ವರುಣನ ಕೃಪೆಯಿಂದ ರೈತರ ಬದುಕು ಹಸನಾಗಲಿ:
    ಮಂಡ್ಯ ಜಿಲ್ಲೆಯಲ್ಲಿ ವ್ಯವಸಾಯವೇ ಪ್ರಧಾನ ಕಸುಬು. ಸಂಪೂರ್ಣ ಜಿಲ್ಲೆ ಕೃಷಿಯಿಂದ ಆವೃತವಾಗಿದೆ. ರೈತನ ಬದುಕಿಗೆ ನೀರೇ ಪ್ರಧಾನ. ಕಳೆದ ಮೂರು ವರ್ಷಗಳಿಂದ ಸತತವಾಗಿ ಕೆ.ಆರ್.ಎಸ್. ಜಲಾಶಯ ಭರ್ತಿಯಾಗುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಕಾವೇರಿ ನದಿ ತುಂಬಿ ಹರಿದರೆ ರೈತರ ಜೀವನ ಕೂಡ ಸಂತಸದಿಂದ ತುಂಬಿರುತ್ತದೆ. ಸಾಕಷ್ಟು ಮಳೆಯಾಗಿ, ಜಲಾಶಯ ತುಂಬುತ್ತಿರುವ ಕಾರಣ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ರೈತರು ನೀರನ್ನು ಪೋಲು ಮಾಡದೆ ಸದುಪಯೋಗಪಡಿಸಿಕೊಳ್ಳಬೇಕು. ರೈತರು ಅಂದುಕೊಂಡಂತೆ ಉತ್ತಮ ಬೆಳೆಯಾಗಲಿ. ವರುಣ ಕೃಪೆಯಿಂದ ನೀರಿನ ಕೊರತೆಯಾಗದೆ ಯಥೇಚ್ಚ ಫಸಲು ಬರಲಿ. ಆ ಮೂಲಕ ರೈತರ ಬದುಕು ಹಸನಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹಾರೈಸಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೋವಿಡ್ ಲಸಿಕೆ – ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ

  • ಕೆಆರ್‌ಎಸ್‌ ಒಳಹರಿವು ಹೆಚ್ಚಳ, ಕಬಿನಿ ಭರ್ತಿಗೆ 4 ಅಡಿ ಬಾಕಿ

    ಕೆಆರ್‌ಎಸ್‌ ಒಳಹರಿವು ಹೆಚ್ಚಳ, ಕಬಿನಿ ಭರ್ತಿಗೆ 4 ಅಡಿ ಬಾಕಿ

    ಬೆಂಗಳೂರು: ಪ್ರಾರಂಭದಲ್ಲಿ ಅಷ್ಟೇನು ಮಳೆಯಾಗಿಲ್ಲದ ಕಾರಣ ಈ ಬಾರಿ ಜಲಾಶಯಗಳು ಭರ್ತಿಯಾಗುವುದಿಲ್ಲ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು. ಆದರೆ, ಇತ್ತೀಚೆಗೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಕೆಆರ್‌ಎಸ್‌ ಸೇರಿದಂತೆ ಎಲ್ಲ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

    ಕೊಡಗು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಿರುಸುಗೊಂಡ ಹಿನ್ನೆಲೆ ಕೆಆರ್‌ಎಸ್‌ ಡ್ಯಾಂನ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಂನ ಒಳ ಹರಿವು 26,522 ಕ್ಯೂಸೆಕ್ ಏರಿಕೆಯಾಗಿದೆ. ಬೆಳಗ್ಗೆ 22,719 ಕ್ಯೂಸೆಕ್ ಇದ್ದ ಒಳ ಹರಿವು ಸಂಜೆ ಹೊತ್ತಿಗೆ 26,522 ಕ್ಯೂಸೆಕ್‍ಗೆ ತಲುಪಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದು 88.60 ಅಡಿ ನೀರು ಸಂಗ್ರವಾಗಿದೆ. ಒಳ ಹರಿವು 26,522 ಕ್ಯೂಸೆಕ್ ಇದ್ದು, ಪ್ರಸ್ತುತ 15.121 ಟಿಎಂಸಿ ನೀರು ಸಂಗ್ರಹವಾಗಿದೆ.

    ಕೇರಳದ ವಯನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ಭರ್ತಿಯಾಗಲು ಕೆಲವೇ ಅಡಿಗಳಷ್ಟು ಬಾಕಿ ಇದೆ. ಹೀಗಾಗಿ ಹೊರಹರಿವು ಕೂಡ ಹೆಚ್ಚಳವಾಗಿದೆ.

    ಕಬಿನಿ ಜಲಾಶಯದ ನೀರಿನ ಮಟ್ಟ 80 ಅಡಿ ತಲುಪಿದ್ದು, ಗರಿಷ್ಠ ಮಟ್ಟ 84 ಅಡಿ ಆಗಿದೆ. ಜಲಾಶಯದ ಸದ್ಯದ ಒಳಹರಿವು 23,000 ಕ್ಯೂಸೆಕ್ ಆಗಿದ್ದು, ಹೊರಹರಿವು 10,000 ಕ್ಯೂಸೆಕ್ ಇದೆ. ಜಲಾಶಯದ ಸಂಪೂರ್ಣ ಭರ್ತಿಗೆ 4 ಅಡಿಗಳು ಮಾತ್ರ ಬಾಕಿ ಇದ್ದು, ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಜಲಾಶಯದಿಂದ ಹೊರಹರಿವು ಹೆಚ್ಚಳ ಮಾಡಲಾಗಿದೆ.

    ಕಪಿಲಾ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಪಿಲಾ ನದಿಯ ಇಕ್ಕೆಲಗಳ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

    ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ ಸಹ ಭರ್ತಿಯಾಗುತ್ತಿದ್ದು, ನೀರಿನ ಮಟ್ಟದಲ್ಲಿಯೂ ಸಹ ಹೆಚ್ಚಳವಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,922 ಅಡಿ ಆಗಿದ್ದು, 2,899.77 ಅಡಿಯಷ್ಟು ಭರ್ತಿಯಾಗಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿಯಾಗಿದ್ದು, ಒಳಹರಿವು 28,317 ಕ್ಯೂಸೆಕ್ ಆಗಿದೆ.

  • ಮುಂದಿನ 24 ಗಂಟೆಗಳಲ್ಲಿ ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ: ಕೆಆರ್‌ಎಸ್‌ನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    ಮುಂದಿನ 24 ಗಂಟೆಗಳಲ್ಲಿ ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ: ಕೆಆರ್‌ಎಸ್‌ನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    ಬೆಂಗಳೂರು: ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

    124 ಮಿ.ಮಿ.ಗಿಂತಲೂ ಹೆಚ್ಚು ಪ್ರಮಾಣದಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಿ ಇನ್ನು 4 ದಿನ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಕಡೆ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ:
    ಕಾವೇರಿ ಕಣಿವೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಒಂದು ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ. ಮಧ್ಯಾಹ್ನ ವೇಳೆಗೆ 1,20,000 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡುವ ಸಾಧ್ಯತೆ ಇದ್ದು, ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರಾದ ಬಸವರಾಜೇಗೌಡ ತಿಳಿಸಿದ್ದಾರೆ.

    ಕಳೆದ ನಾಲ್ಕು ವರ್ಷಗಳಿಂದ ಸತತ ಬರಗಾಲದಿಂದ ಕೆಆರ್‌ಎಸ್‌ ಅಣೆಕಟ್ಟೆ ಭರ್ತಿಯಾಗದೆ ಮಂಡ್ಯ ರೈತರು ಬೆಳೆ ಬೆಳೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಹೊರಹರಿವಿನ ಪ್ರಮಾಣದಲ್ಲೂ ಹೆಚ್ಚಾಗಿದೆ. 1994ರ ಜುಲೈ ತಿಂಗಳಲ್ಲಿ ಕೆಆರ್‌ಎಸ್‌ ಅಣೆಕಟ್ಟೆಯಿಂದ 1,64,603 ಕ್ಯೂಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗಿತ್ತು. ಆದರೆ ಆ ನಂತರ ಕೆಆರ್‌ಎಸ್‌ ಹೊರಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್ ಗಡಿ ದಾಟಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕಾಡಿದ ಭೀಕರ ಬರಗಾಲದಿಂದ ಕೆಆರ್‍ಎಸ್ ಅಣೆಕಟ್ಟೆಯ ಹೊರಹರಿವಿನ ಪ್ರಮಾಣ ಇಳಿಮುಖವಾಗುತ್ತಾ ಹೋಗಿತ್ತು.

    ಇದೀಗ ಮತ್ತೆ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೊರಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್‍ಗೆ ಹೆಚ್ಚಳವಾಗಿದೆ. ಇದರಿಂದಾಗಿ ನದಿ ಪಾತ್ರದ ಜಮೀನಿಗೆ ನೀರು ನುಗ್ಗಿದೆ. ನದಿ ಬಳಿಯಿರುವ ಮಂಟಪಗಳು ನೀರಿನಿಂದ ಆವೃತ್ತವಾಗಿದೆ. ಶ್ರೀರಂಗಪಟ್ಟಣ ನಿಮಿಷಾಂಭ ದೇವಾಲಯದ ಬಳಿಯಿರುವ ಬಟ್ಟೆ ಬದಲಿಸುವ ಸ್ಥಳ ನೀರಿನಿಂದ ಆವೃತ್ತವಾಗಿದೆ. ರಂಗನತಿಟ್ಟು ಪಕ್ಷಿಧಾಮ ಮುಳುಗಡೆ ಆಗಿದೆ. ಅದೇ ರೀತಿ ಸಾಯಿ ಮಂದಿರ ಒಳಗೂ ಕೂಡ ನೀರು ನುಗ್ಗಿದೆ.

    ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಜಲಾಶಯಕ್ಕೆ 29,363 ಕ್ಯೂಸೆಕ್ ಒಳ ಹರಿವು ಇದೆ. ಈಗ ನದಿ, ನಾಲೆಗೆ ಸೇರಿ ಒಟ್ಟು 33,325 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

    ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

    ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಎಚ್‍ಡಿಕೋಟೆ ಯಲ್ಲಿರುವ ಕಬಿನಿ ಡ್ಯಾಂ ನಿಂದ ದಾಖಲೆ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗಿದೆ.

    1992 ರ ನಂತರ ಇದೇ ಮೊದಲ ಬಾರಿಗೆ 70 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ. ಹಾಗೆಯೇ ಕೆಆರ್ ಎಸ್  ಅಣೆಕಟ್ಟಿನಿಂದಲೂ 40 ಸಾವಿರ ಕ್ಯೂಸೆಕ್ ನೀರನ್ನು ಕ್ರಸ್ಟ್ ಗೇಟ್ ಮೂಲಕ ಹೊರಕ್ಕೆ ಬಿಡಲಾಗಿದ್ದು, ಈ ಮೂಲಕ ಕಾವೇರಿ ಕೊಳ್ಳದ ಕೇವಲ 2 ಜಲಾಶಯಗಳಿಂದಲೇ 1 ಲಕ್ಷ ಕ್ಯೂಸೆಕ್ ನೀರು ನದಿಗೆ ಸೇರುತ್ತಿದೆ.

    ಮಲೆನಾಡು, ಕರಾವಳಿಯಲ್ಲಿ ಕಳೆದ ಎರಡು ವಾರಗಳಿಂದ ಬಿಡುವು ನೀಡಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸ್ತಿದ್ದಾನೆ. ಮಂಗಳೂರಿನಲ್ಲೂ ಭಾರೀ ವರ್ಷಧಾರೆಯಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಇನ್ನು ಜಿಲ್ಲೆಯ ಪುಂಜಾಲಕಟ್ಟೆ ಸಮೀಪದ ಮೂರ್ಜೆ ಎಂಬಲ್ಲಿ ಭಾರೀ ಮಳೆಗೆ ಅಂಗನವಾಡಿ ಒಂದರ ಬಳಿ ಮಣ್ಣು ಕುಸಿದು ಆತಂಕ ಎದುರಾಗಿದೆ. ಚಿಕ್ಕಮಗಳೂರಿನಲ್ಲೂ ಧಾರಾಕಾರ ಮಳೆ ಸುರಿಯುತ್ತಿರೋದ್ರಿಂದ ತುಂಗಾ, ಭದ್ರಾ ಹಾಗೂ ಹೇಮಾವತಿ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಕಳಸಾ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಮತ್ತೊಮ್ಮೆ ಮುಳುಗಡೆಯಾಗಿದ್ದು ಪ್ರವಾಸಿಗರು ಪರದಾಡೋ ಸ್ಥಿತಿ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೆಆರ್ ಎಸ್ ಜಲಾಶಯದಲ್ಲಿ 100 ಅಡಿ ನೀರು ಸಂಗ್ರಹ- ರೈತರು ಫುಲ್ ಖುಷ್

    ಕೆಆರ್ ಎಸ್ ಜಲಾಶಯದಲ್ಲಿ 100 ಅಡಿ ನೀರು ಸಂಗ್ರಹ- ರೈತರು ಫುಲ್ ಖುಷ್

    ಮಂಡ್ಯ: ಕೆಆರ್ ಎಸ್ ಜಲಾಶಯದಲ್ಲಿ  ನೂರು ಅಡಿ ನೀರು ಸಂಗ್ರವಾಗಿದೆ. ಇದರಿಂದ ಇನ್ಮುಂದೆ ಕೃಷಿಗೆ ನೀರು ಲಭ್ಯವಾಗುತ್ತದೆ ಎನ್ನುವುದನ್ನು ಅರಿತ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

    ಕಾವೇರಿ ನದಿ ಸಮೀಪದಲ್ಲಿ ಭಾರೀ ಮಳೆಯಾಗಿದೆ. ಹೀಗಾಗಿ ಕೆಆರ್ ಎಸ್ ಅಣೆಕಟ್ಟು 124.80 ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಹೊಂದಿದ್ದು, ಅದರಲ್ಲಿ ಈಗಾಗಲೇ 100 ಅಡಿ ಸಂಗ್ರಹವಾಗಿದೆ. ಅಣೆಕಟ್ಟಿನಲ್ಲಿ ನೀರು ತುಂಬಿರುವುದರಿಂದ ಸದ್ಯ ಜಿಲ್ಲೆ ಹಾಗೂ ನೆರೆ ಜಿಲ್ಲೆಯ ರೈತರ ಸಂತಸಕ್ಕೆ ಕಾರಣವಾಗಿದೆ.

    2017ರಲ್ಲಿ ಇದೇ ಸಮಯದಲ್ಲಿ ಅಣೆಕಟ್ಟೆಯಲ್ಲಿ ಕೇವಲ 68 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ ನೀರಿನ ಸಂಗ್ರಹದಲ್ಲಿ ಒಂದಷ್ಟು ಏರಿಕೆಯಾಗಿದೆ. ಕಳೆದ ವರ್ಷ ಕೇವಲ 114 ಅಡಿಗಳಷ್ಟು ಮಾತ್ರ ಗರಿಷ್ಠವಾಗಿ ನೀರು ಸಂಗ್ರಹವಾಗಿತ್ತು. ಅಷ್ಟೇ ಅಲ್ಲದೆ ಸತತ ಮೂರು ವರ್ಷಗಳಿಂದ ಅಣೆಕಟ್ಟು ಭರ್ತಿಯಾಗದೇ ರೈತರು ಸಂಕಷ್ಟ ಅನುಭವಿಸಿದ್ದರು.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಪ್ರವಾಸಿಗರಿಗೆ ಎರಡು ದಿನ ಕೆಆರ್ ಎಸ್, ಬೃಂದಾವನ ಪ್ರವೇಶ ನಿಷೇಧ

    ಪ್ರವಾಸಿಗರಿಗೆ ಎರಡು ದಿನ ಕೆಆರ್ ಎಸ್, ಬೃಂದಾವನ ಪ್ರವೇಶ ನಿಷೇಧ

    ಮಂಡ್ಯ: ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಪ್ರಾಣ ಹಾನಿಯಾಗಿದ್ದ ಪರಿಣಾಮ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಕೆಆರ್‍ಎಸ್, ಬೃಂದಾವನ ಪ್ರವೇಶ ನಿಷೇಧಿಸಲಾಗಿದೆ.

    ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೆಆರ್ ಎಸ್‍ನ ಬೃಂದಾವನದ ಎರಡು ಮರಗಳು ಉರುಳಿಬಿದ್ದಿವೆ. 30 ಕ್ಕೂ ಹೆಚ್ಚು ಮರದ ರೆಂಬೆಕೊಂಬೆಗಳು ಮುರಿದು ಬಿದ್ದಿರುವುದರಿಂದ ಮರದಲ್ಲಿದ್ದ ನೂರಾರು ಪಕ್ಷಿಗಳು ಧರೆಗುರುಳಿ ನರಳಾಡುತ್ತಿವೆ. ತಮಿಳುನಾಡು ಮೂಲದ ಓರ್ವ, ಕೇರಳ ಮೂಲದ ಇಬ್ಬರು ಸೇರಿ ಮೂವರು ಮೃತಪಟ್ಟು, ಹನ್ನೊಂದು ಪ್ರವಾಸಿಗರು ಗಾಯಗೊಂಡಿದ್ದರು. ಈ ಹಿನ್ನೆಲೆ ಬೃಂದಾವನ ಪ್ರವೇಶ ನಿಷೇಧ ಮಾಡಲಾಗಿದೆ. ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರವೇಶ ನಿಷೇಧಿಸಲಾಗಿದೆ ಅಂತ ನಿಗಮದ ಇಇ ಬಸವರಾಜೇಗೌಡ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್​ಎಸ್ ಬಳಿ ವರುಣನ ಅವಾಂತರ – ಮರ ಬಿದ್ದು ಮೂವರು ಪ್ರವಾಸಿಗರ ಸಾವು

    ಕೆಲವು ಪಕ್ಷಿಗಳು ಮರದಿಂದ ಬಿದ್ದು ಗಾಯಗೊಂಡು ನರಳಾಡುತ್ತಿವೆ. ಪಕ್ಷಿಗಳ ಸ್ಥಿತಿ ನೋಡಿ ಸಂಕಟಪಡುತ್ತಿರುವ ಸಾರ್ವಜನಿಕರು ಗಾಯಗೊಂಡಿರುವ ಪಕ್ಷಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ.

    ವಿಶ್ವವಿಖ್ಯಾತ ಕೆಆರ್ ಎಸ್ ಬೃಂದಾವನದಲ್ಲಿ ಮೊದಲ ಬಾರಿಗೆ ಈ ರೀತಿಯ ಅವಘಡ ನಡೆದಿದ್ದು, ಮುರಿದು ಬಿದ್ದ ಮರಗಳು, ರೆಂಬೆಕೊಂಬೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರವಾಸಿಗರಿಗೆ ಎರಡು ದಿನ ಕೆಆರ್‍ಎಸ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

  • ಕೆಆರ್‍ಎಸ್ ಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗಾಗಿ ಉತ್ಕೃಷ್ಟ ಪ್ರಶಸ್ತಿ

    ಕೆಆರ್‍ಎಸ್ ಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗಾಗಿ ಉತ್ಕೃಷ್ಟ ಪ್ರಶಸ್ತಿ

    ಮಂಡ್ಯ: ವಿಶ್ವಪ್ರಸಿದ್ಧ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ನಡೆದಿದ್ದ ಪುನಶ್ಚೇತನ ಕಾಮಗಾರಿಗೆ ಇದೀಗ ಉತ್ಕೃಷ್ಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    84 ವರ್ಷ ಹಳೆಯ 2.6 ಕಿ.ಮೀ ಉದ್ದದ ಕಟ್ಟೆಯಲ್ಲಿ ನೀರಿನ ಸೆಳೆತದಿಂದಾಗಿ ಗಾರೆಗೆ ಬಳಸಿದ್ದ ಮಣ್ಣು ಕಸಿದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದ ತಜ್ಞರ ಸಲಹೆ ಮೇರೆಗೆ ಪುನಶ್ಚೇತನ ಕಾಮಗಾರಿ ಮಾಡಲಾಯಿತು.

    ವಿಶ್ವಬ್ಯಾಂಕ್ ನಿಂದ 36.6 ಕೋಟಿ ರೂಪಾಯಿ ಸಾಲ ಪಡೆದು 2016ರ ಜುಲೈನಲ್ಲಿ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಯಿತು. 2017ರ ಮಾರ್ಚ್ ನಲ್ಲಿ ಕಾಮಗಾರಿ ಪೂರ್ಣಗೊಳಿಸಲಾಯಿತು. ಮಧ್ಯಪ್ರದೇಶ ಮೂಲದ ಕಂಪನಿಯೊಂದು ಈ ಕಾಮಗಾರಿಗೆ ಪುನಶ್ಚೇತನದ ಗುತ್ತಿಗೆ ಪಡೆದಿತ್ತು. ಕಾಮಗಾರಿ ನಡೆಯುವ ವೇಳೆ ಮತ್ತು ನಂತರ ವಿಶ್ವಬ್ಯಾಂಕ್, ಡಿಆರ್‍ಐಪಿ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದ್ರು. ಕಾಮಗಾರಿಯ ಗುಣಮಟ್ಟ ಉತ್ತಮವಾಗಿ ನಡೆದಿರೋ ಹಿನ್ನೆಲೆಯಲ್ಲಿ “ಉತ್ಕೃಷ್ಟ ಪುನಶ್ಚೇತನ” ಪ್ರಶಸ್ತಿ ನೀಡಲಾಗಿದೆ.

    ಮೇ 30ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರಭಾಕರ್, ರಾಜ್ಯ ಅಣೆಕಟ್ಟೆ ಪುನಶ್ಚೇತನ ಕಾಮಗಾರಿ ನಿದೇರ್ಶಕ ಮಾಧವ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.