Tag: ಕೆಆರ್‍ಐಡಿಎಲ್

  • PublicTV Impact; ಆಗ ಗುತ್ತಿಗೆ ನೌಕರ, ಈಗ ಕೋಟ್ಯಧಿಪತಿ – ಕೆಆರ್‌ಐಡಿಎಲ್ ಮಾಜಿ ಹೊರಗುತ್ತಿಗೆ ನೌಕರನ ಮೇಲೆ ‘ಲೋಕಾ’ ತನಿಖೆ

    PublicTV Impact; ಆಗ ಗುತ್ತಿಗೆ ನೌಕರ, ಈಗ ಕೋಟ್ಯಧಿಪತಿ – ಕೆಆರ್‌ಐಡಿಎಲ್ ಮಾಜಿ ಹೊರಗುತ್ತಿಗೆ ನೌಕರನ ಮೇಲೆ ‘ಲೋಕಾ’ ತನಿಖೆ

    – ಸುಮಾರು 24 ಮನೆ, 30 ನಿವೇಶನದ ದಾಖಲೆ ಪತ್ತೆ

    ಕೊಪ್ಪಳ: ಅಪಾರ್ಟ್‌ಮೆಂಟ್ ಒಳಗೊಂಡು ಸುಮಾರು 24 ಮನೆ, ಕೊಪ್ಪಳದ ಪ್ರತಿಷ್ಠಿತ ವಿವಿಧ ಕಾಲೊನಿಯಲ್ಲಿ 30ಕ್ಕೂ ಹೆಚ್ಚು ನಿವೇಶನ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣದ ಜೊತೆಗೆ ನಗದು ಸಿಕ್ಕಿದೆ. ಇದು ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್ ‌ಆಗಿದೆ.

    ಇಷ್ಟೊಂದು ಪ್ರಮಾಣ ಆಸ್ತಿ ಪತ್ತೆ ಆಗಿದ್ದು, ಕೊಪ್ಪಳದ ಪ್ರಗತಿ ನಗರದಲ್ಲಿನ ಕೆಆರ್ ಐಡಿಎಲ್ ಮಾಜಿ ನೌಕರನ ಮನೆಯಲ್ಲಿ. ಕೆಲಸದಿಂದ ಹೊರ ಬೀಳುವಾಗ ಕೇವಲ 15,000 ರೂ. ವೇತನ ಪಡೆಯುತ್ತಿದ್ದ ಹೊರ ಗುತ್ತಿಗೆ ನೌಕರನ ಮನೆಯಲ್ಲಿನ ಆಸ್ತಿ ಲೆಕ್ಕ ಹಾಕಿ ತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ. ಕೊಪ್ಪಳ ಕೆಆರ್‌ಐಡಿಎಲ್ ಇಇ ಕಚೇರಿಯಲ್ಲಿ ನಡೆದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ತನಿಖೆ ಆರಂಭಿಸಿರುವ ಲೋಕಾಯುಕ್ತ ಪೊಲೀಸರು ಇಂದು ಹಗರಣದ ಕಿಂಗ್‌ಪಿನ್ ಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಅವರ ಮನೆ ಮೇಲೆ ದಾಳಿ ಮಾಡಿ, ತನಿಖೆ ಆರಂಭಿಸಿದ್ದಾರೆ.

    ತನಿಖೆ ವೇಳೆ ಲೋಕಾಯುಕ್ತರಿಗೆ ಕಳಕಪ್ಪ ನಿಡಗುಂದಿ ಮನೆಯಲ್ಲಿ, ಕೊಪ್ಪಳ, ಭಾಗ್ಯನಗರ ಸೇರಿ ವಿವಿಧ ಕಡೆ 24 ಮನೆ, ಪ್ರತಿಷ್ಠಿತ ಬಡಾವಣೆಯಲ್ಲಿ ಸುಮಾರು 20 ನಿವೇಶನ, 350 ಗ್ರಾಂ ಚಿನ್ನ ಎರಡು ಕಾರು, ಎರಡು ಬೈಕ್, 30 ಎಕರೆ ಜಮೀನು ಹಾಗೂ 20 ಎಕರೆ ಜಮೀನಿನ ಖರೀದಿ ಕರಾರು ಪತ್ರದ ದಾಖಲೆ ಲಭ್ಯವಾಗಿವೆ. ಈ ಎಲ್ಲ ಆಸ್ತಿ ತಮ್ಮ ಸಹೋದರ, ಪತ್ನಿ ಹಾಗೂ ಪತ್ನಿಯ ತಮ್ಮನ ಹೆಸರಿನಲ್ಲಿವೆ. ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಂಡಿಹಾಳ ನಿವಾಸಿಯಾಗಿದ್ದ ಕಳಕಪ್ಪ, ಕಳೆದ 20 ವರ್ಷದಿಂದ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿದ್ದ. ಕೆಲ ದಿನಗಳ ಹಿಂದೆ ಸೇವೆಯಿಂದ ವಜಾ ಆಗಿದ್ದಾನೆ.‌ ಆರಂಭದಲ್ಲಿ ತೀರಾ ಕಡಿಮೆ ವೇತನಕ್ಕೆ ಕೆಲಸ‌ ಮಾಡಿರುವ ಕಳಕಪ್ಪ, ವಜಾ ಆಗುವ ವೇಳೆಗೆ ತಿಂಗಳಿಗೆ 15 ಸಾವಿರ ಸಂಬಳ ಪಡೆಯುತ್ತಿದ್ದರು. ಈತನ ಮನೆಯಲ್ಲಿ ಇಷ್ಟೊಂದು ಪ್ರಮಾಣದ ಆಸ್ತಿ ಪತ್ರ ಸಿಕ್ಕಿರುವುದು ಲೋಕಾ ಅಧಿಕಾರಿಗಳೇ ಅಚ್ಚರಿಗೊಂಡಿದ್ದಾರೆ.

    ಪ್ರಕರಣದ ಹಿನ್ನೆಲೆ: ಕೊಪ್ಪಳದ ಕೆಆರ್‌ಐಡಿಎಲ್‌ನಲ್ಲಿ ಝಡ್.ಎಂ.ಚಿಂಚೊಳ್ಳಿಕರ ಎಂಬವರು ಇಇ ಆಗಿದ್ದಾಗ, ಸುಮಾರು 100 ಕೋಟಿ ರೂ. ಬೋಗಸ್ ಬಿಲ್ ಎತ್ತುವಳಿ ಮಾಡಲಾಗಿದೆ ಎಂಬ ಆರೋಪ ಕೇಳಿ‌ ಬಂದಿತ್ತು. ‘ಪಬ್ಲಿಕ್ ಟಿವಿ’ ಸುದ್ದಿ ಪ್ರಸಾರ ಮಾಡಿದ ಮೇಲೆ ಅಕ್ರಮ‌ ಸಾಬೀತಾಗಿದೆ. ಈ ಹಿನ್ನೆಲೆ ಇಲಾಖೆ ತನಿಖೆ ನಡೆದು, ಸ್ವತಃ ಕೆಆರ್‌ಐಡಿಎಲ್ ಅಧಿಕಾರಿಗಳು ಆಗಿನ ಇಇ ಝಡ್.ಎಂ.ಚಿಂಚೊಳ್ಳಿಕರ್, ಹೊರ ಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಹಾಗೂ ಒಬ್ಬ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತರಿಗೆ ದೂರು‌ ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತರು ಭ್ರಷ್ಟಾಚಾರದ ಕಿಂಗ್‌ಪಿನ್ ಕಳಕಪ್ಪ ನಿಡಗುಂದಿ ಮನೆಯಿಂದಲೇ ತನಿಖೆ ಶುರು ಮಾಡಿದ್ದಾರೆ.

    ಕೆಆರ್‌ಐಡಿಎಲ್ ಕಚೇರಿಯಲ್ಲಿ ತನಿಖೆ
    ಲೋಕಾಯುಕ್ತ ಅಧಿಕಾರಿಗಳು ಒಂದೆಡೆ ಕಳಕಪ್ಪ ನಿಡಗುಂದಿ ಮನೆ ಮೇಲೆ ದಾಳಿ ಮಾಡಿದ್ದರೆ ಮತ್ತೊಂದೆಡೆ ಕೊಪ್ಪಳದ ಕೆಆರ್‌ಐಡಿಎಲ್ ಕಚೇರಿಯಲ್ಲೂ ತನಿಖೆ ಶುರು ಮಾಡಿದ್ದಾರೆ. ಬೆಳಗ್ಗೆಯೇ ಕೆಆರ್‌ಐಡಿಎಲ್ ಕಚೇರಿಗೆ ಆಗಮಿಸಿ ಕಾಯ್ದು ಕುಳಿತಿದ್ದ ಲೋಕಾಯುಕ್ತ ಪೊಲೀಸರು, ಎಇಇ ಆನಂದ ಅವರು ಕಚೇರಿಗೆ ಬಂದ ನಂತರ ಅವರ ಸಹಿ‌ ಪಡೆದು, ತನಿಖೆ ಶುರು ಮಾಡಿದರು. ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದಲ್ಲಿ ಪಿಐ ಸುನೀಲ್ ಮ್ಯಾಗಿನಮನಿ, ಚಂದ್ರಪ್ಪ, ವಿಜಯಕುಮಾರ, ನಾಗರತ್ನ, ಶೈಲಾ ಪಾಟೇಕರ್ ಮತ್ತು ಸಿಬ್ಬಂದಿ ತನಿಖೆ ಮಾಡುತ್ತಿದ್ದಾರೆ.

    ಜಿಪಂ ಸಿಇಒ ಸಹಿ ನಕಲು
    ಸುಮಾರು 72 ಕೋಟಿ ರೂಪಾಯಿ ಸರ್ಕಾರಿ ಹಣ ದುರ್ಬಳಕೆ ಆಗಿರುವ ಪ್ರಕರಣ ಇದಾಗಿದೆ. ಚರಂಡಿ, ಕುಡಿಯುವ ನೀರು, ಶಾಲೆ, ರಸ್ತೆ ಕಾಮಗಾರಿಯಲ್ಲಿ ಅಕ್ರಮ ಆಗಿದೆ ಎಂಬ ದೂರು ಕೇಳಿ ಬಂದಿದ್ದವು.‌ ‘ಲೋಕಾ’ ತನಿಖೆ ವೇಳೆ ಸುಮಾರು 96 ಕಾಮಗಾರಿಯಲ್ಲಿ ಸರ್ಕಾರ ಹಣ ದುರುಪಯೋಗ ಆಗಿರುವುದು ಕಂಡುಬಂದಿದೆ. ಇಲಾಖೆಯ ವ್ಯಾಟ್ ಅಕೌಂಟ್‌ನಿಂದ ಸರ್ಕಾರದ ಅನುಮತಿ ಇಲ್ಲದೇ ಹಣ ಡ್ರಾ ಮಾಡಲಾಗಿದೆ. ಕಾಮಗಾರಿ ನಿರ್ವಹಿಸದೇ, ಕಾಮಗಾರಿ ಅರ್ಧ ಮಾಡಿದ್ದರೂ ಪೂರ್ತಿ ಬಿಲ್ ಪಾವತಿ, ಬೇರೆ ಇಲಾಖೆ, ಏಜನ್ಸಿ ಮಾಡಿರುವ ಕಾಮಗಾರಿಗೆ ಬಿಲ್ ಎತ್ತುವಳಿ ಮಾಡಿದ್ದು, ತನಿಖೆ ವೇಳೆ ಕಂಡುಬಂದಿದೆ. ಈ ಅವ್ಯವಹಾರ ನಡೆದಾಗ ಆರೋಪಿ ಝಡ್.ಎಂ.ಚಿಂಚೊಳ್ಳಿಕರ ಜೆಇ, ಎಇ ಮತ್ತು ಎಇಇ, ಇಇ ಎಸ್ಇ ಎಲ್ಲ ಹುದ್ದೆಯಲ್ಲೂ ಇವರೇ ಚಾರ್ಜ್ ಇದ್ದರು ಎಂಬುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

  • KRIDLನಲ್ಲಿ ಬಹುಕೋಟಿ ಹಗರಣ – ಬಿಜೆಪಿ ಮಾಜಿ ಶಾಸಕನ ವಿರುದ್ಧ ಅಕ್ರಮ ಆರೋಪ

    KRIDLನಲ್ಲಿ ಬಹುಕೋಟಿ ಹಗರಣ – ಬಿಜೆಪಿ ಮಾಜಿ ಶಾಸಕನ ವಿರುದ್ಧ ಅಕ್ರಮ ಆರೋಪ

    – 96 ಕಾಮಗಾರಿಗಳ ಹೆಸರಿನಲ್ಲಿ ಗೋಲ್ಮಾಲ್

    ಕೊಪ್ಪಳ: ಜಿಲ್ಲೆಯ ಕೆಆರ್‌ಐಡಿಎಲ್‌ನಲ್ಲಿ (KRIDL) 96 ಕಾಮಗಾರಿಗಳ ಹೆಸರಿನಲ್ಲಿ ಬಹುಕೋಟಿ ಹಗರಣವಾಗಿರುವುದು ಬೆಳಕಿಗೆ ಬಂದಿದ್ದು, ಬಿಜೆಪಿ (BJP) ಮಾಜಿ ಶಾಸಕ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ರಾಜ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ವಾಲ್ಮೀಕಿ ಹಗರಣ (Valmiki Scam), ಆದರೆ ವಾಲ್ಮೀಕಿ ಹಗರಣವನ್ನೇ ಮೀರಿಸುವಂತಹ ದೊಡ್ಡ ಹಗರಣವನ್ನ `ಪಬ್ಲಿಕ್ ಟಿವಿ’ ಬಯಲಿಗೆ ಎಳೆದಿದೆ. ಕೊಪ್ಪಳದ (Koppal) ಕೆಆರ್‌ಐಡಿಎಲ್‌ನಲ್ಲಿ ಕಾಮಗಾರಿ ಮಾಡದೆ 96 ಕಾಮಗಾರಿಗಳ ಹೆಸರಲ್ಲಿ ನೂರಾರು ಕೋಟಿ ಹಗರಣ ನಡೆದಿದೆ. ಇದೀಗ ಈ ಹಗರಣದಲ್ಲಿ ನೂರಾರು ಕೋಟಿ ರೂ. ನುಂಗಿರುವ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಗುಂಡು ಹಾರಿಸಿ ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ರಿಯಲ್‌ ಎಸ್ಟೇಟ್‌ ಉದ್ಯಮಿ

    ಸದ್ಯ ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ತನಿಖೆ ನಡೆಸುವಂತೆ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸಿಎಂ ಹಾಗೂ ಕೆಆರ್‌ಐಡಿಎಲ್ ಎಂಡಿಗೆ ಮನವಿ ಮಾಡಿದ್ದಾರೆ. ಈ ಕಾಮಗಾರಿಗಳು ನಡೆದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಕನಕಗಿರಿ ಶಾಸಕ ಹಾಗೂ ಇಂದು ಬಿಜೆಪಿ ಜಿಲ್ಲಾದ್ಯಕ್ಷರಾಗಿರುವ ಬಸವರಾಜ ದಡೆಸೂಗುರ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.

    ಕೆಆರ್‌ಐಡಿಎಲ್ ವತಿಯಿಂದ ಒಟ್ಟು 96 ಕಾಮಗಾರಿಗಳನ್ನ ಮಾಡಿದ್ದು, ಕನಕಗಿರಿಯಲ್ಲಿ 19, ಗಂಗಾವತಿಯಲ್ಲಿ 05, ಯಲಬುರ್ಗಾದಲ್ಲಿ 04, ಹಾಗೂ ಕೊಪ್ಪಳದಲ್ಲಿ ಒಟ್ಟು 68 ಕಾಮಗಾರಿಗಳನ್ನ ಮಾಡಲಾಗಿದೆ. ಎಲ್ಲಾ ಕಾಮಗಾರಿಗಳ ಮೊತ್ತ ನೂರಾರು ಕೋಟಿಯಾಗಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ಝಡ್ ಚಿಂಚೋಳಿಕರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೂ ನ್ಯಾಯಾಲಯದ ಮೂಲಕ ಮತ್ತೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ.ಇದನ್ನೂ ಓದಿ: ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡು ನಾದಿನಿಯನ್ನು ಕೊಂದ

    ಇನ್ನೂ ಈ ಕುರಿತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಮಾತನಾಡಿ, ಈ ಅಕ್ರಮದಲ್ಲಿ ಹೊರಗುತ್ತಿಗೆ ದಾರ ಕಳಕಪ್ಪ ನಿಡಗುಂದಿ ಮತ್ತು ಸಿಮೆಂಟ್ ಪೂರೈಕೆದಾರ ಅಮರೇಶ ಯಂಬಲದಿನ್ನಿ ಕೂಡ ಸಾಥ್ ನೀಡಿದ್ದಾರೆ. ಸದ್ಯ ಎಲ್ಲಾ ಕಾಮಗಾರಿಗಳ ತನಿಖೆ ನಡೆಸಿ, ಲೋಪವೆಸಗಿದ ಅಧಿಕಾರಿ ಹಾಗೂ ಇದಕ್ಕೆ ಸಾಥ್ ನೀಡಿದ ಎಲ್ಲರ ವಿರುದ್ಧವೂ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದು, ಈ ದೊಡ್ಡ ಹಗರಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೂಡಲೇ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬರುತ್ತಿದೆ.

  • Anjanadri Betta | ಧಾರ್ಮಿಕ ಭಾವನೆಗಳಿಗೆ ಧಕ್ಕೆ – SDPI ದೂರಿನ ಬೆನ್ನಲ್ಲೇ ಗಂಗಾವತಿಯಲ್ಲಿ ಬಿಲ್ಲು, ಬಾಣಗಳಿರುವ ವಿದ್ಯುತ್ ಕಂಬ ತೆರವಿಗೆ ಆದೇಶ

    Anjanadri Betta | ಧಾರ್ಮಿಕ ಭಾವನೆಗಳಿಗೆ ಧಕ್ಕೆ – SDPI ದೂರಿನ ಬೆನ್ನಲ್ಲೇ ಗಂಗಾವತಿಯಲ್ಲಿ ಬಿಲ್ಲು, ಬಾಣಗಳಿರುವ ವಿದ್ಯುತ್ ಕಂಬ ತೆರವಿಗೆ ಆದೇಶ

    – ಅಂಜನಾದ್ರಿ ಭಾಗದ ಅಭಿವೃದ್ಧಿಗೆ ಹಾಕಲಾಗಿದ್ದ ವಿದ್ಯುತ್‌ ಕಂಬಗಳು
    – KRIDL ಎಂಜಿನಿಯರ್‌ ವಿರುದ್ಧ ಕೇಸ್ ದಾಖಲಿಸಲು ತಹಶೀಲ್ದಾರ್‌ ಸೂಚನೆ
    – ಗಂಗಾವತಿ ನಗರಸಭೆಗೆ ದೂರು ನೀಡಿದ್ದ ಎಸ್‌ಡಿಪಿಐ

    ಕೊಪ್ಪಳ: ಗಂಗಾವತಿ ನಗರದ ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಿಪಡಿಸಿದ ರಸ್ತೆ ಮಧ್ಯೆ ಹಾಕಿರುವ ವಿದ್ಯುತ್ ಕಂಬಗಳ ತೆರವಿಗೆ ತಹಶೀಲ್ದಾರ್‌ ಆದೇಶಿಸಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (KRIDL) ವಿರುದ್ಧವೇ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

    ಆಗಸ್ಟ್‌ 28 ರಂದು ಜಿಲ್ಲಾಧಿಕಾರಿಗಳ ಮೌಖಿಕ ಆದೇಶದಂತೆ ತಹಶೀಲ್ದಾರ್‌ ಅವರು ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷರಿಗೆ ನೀಡಿರುವ ಆದೇಶದ ಪ್ರತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಗುಜರಾತ್‌ನ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ – ಮಳೆಗೆ 15 ಸಾವು, 23 ಸಾವಿರ ಮಂದಿ ಸ್ಥಳಾಂತರ

    ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗಿನ ರಸ್ತೆ ನಗರ ಸಭೆ ವ್ಯಾಪ್ತಿಗೆ ಬರುತ್ತಿದೆ. ಇಲ್ಲಿ ಕೆಐಆರ್‌ಡಿಎಲ್‌ ಸಂಸ್ಥೆ ಸ್ಥಾಪಿಸಿದ ವಿದ್ಯುತ್‌ ಕಂಬಗಳು (Electric Pole) ಧಾರ್ಮಿಕ ಸೌಹಾರ್ದತೆ ಹಾಗೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ನಿರ್ಮಾಣವಾಗಿದೆ. ಇದು ನಗರದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆಗಳು ಇರುವುದರಿಂದ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಈ ಕಾಮಗಾರಿ ಕೈಗೊಂಡಿರುವ ಕೆಆರ್‌ಐಡಿಎಲ್‌ ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ತಹಶೀಲ್ದಾರ್‌ ನಾಗರಾಜ್‌ ಅವರು ಸೂಚಿಸಿದ್ದಾರೆ.

    ಹನುಮನ ಜನ್ಮಸ್ಥಳವಾಗಿರುವ ಅಂಜನಾದ್ರಿ ಭಾಗವನ್ನು ಅಯೋಧ್ಯೆ, ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಒತ್ತಾಯ ಹಲವು ಬಾರಿ ಕೇಳಿ ಬಂದಿತ್ತು. ಜನಾರ್ದನ ರೆಡ್ಡಿ ಅವರು ಚುನಾವಣಾ ಪ್ರಚಾರದಲ್ಲೂ ಭರವಸೆ ನೀಡಿದ್ದರು. ಅದರಂತೆ ಈಗ ವಿದ್ಯುತ್ ಕಂಬಗಳಲ್ಲಿ ಬಿಲ್ಲು, ಬಾಣಗಳು ಇರುವ ಚಿತ್ರಗಳನ್ನು ಅಳವಡಿಸಲಾಗಿತ್ತು.

    ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಚಿತ್ರಗಳು ಐತಿಹಾಸಿಕ ಅಂಜನಾದ್ರಿ ಪರ್ವತದ ಮಾರ್ಗಸೂಚಿಗೆ ಅನುಕೂಲವಾಗಿವೆ. ಅಂಜನಾದ್ರಿಗೆ ಬರುವ ಭಕ್ತರಲ್ಲಿ ಧಾರ್ಮಿಕ ಭಕ್ತಿ ಉಂಟಾಗುವುದರಿಂದ ಇವುಗಳನ್ನು ಅಳವಡಿಸಲಾಗಿದೆ. ಇದರಿಂದ ಯಾರ ಭಾವನೆಗೂ ಧಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಷ್ಟೇ ಅಲ್ಲದೇ ನಗರಸಭೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲೂ ಶಾಸಕ ಜನಾರ್ದನ ರೆಡ್ಡಿ ಅವರು ವಿಷಯ ಪ್ರಸ್ತಾಪಿಸಿ ಈ ವಿಷಯದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸದೇ ಎಲ್ಲರೂ ಸಹಕಾರ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದ್ದರು. ಇದನ್ನೂ ಓದಿ: ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ – ದಾಸನಿಗಾಗಿ ರೂಟ್‌ ಮ್ಯಾಪ್‌ ಚೇಂಜ್‌?

    ಏನಿದು ವಿವಾದ?
    ಅಯೋಧ್ಯೆ, ತಿರುಪತಿಯ ಮಾದರಿಯಲ್ಲಿ ಗಂಗಾವತಿ ಅಂಜನಾದ್ರಿ (Anjanadri Betta) ಅಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಮಹಾರಾಣಾ ಪ್ರತಾಪ್ ಸರ್ಕಲ್‌ನಿಂದ ಜುಲೈ ನಗರದವರೆಗೂ ತಿರುಪತಿ, ಅಯೋಧ್ಯೆಯಲ್ಲಿರುವಂತೆ (Ayodhya) ವಿದ್ಯುತ್ ಕಂಬಗಳನ್ನು ಹಾಕಿದ್ದಕ್ಕೆ ಎಸ್‌ಡಿಪಿಐ (SDPI) ಆಕ್ಷೇಪ ವ್ಯಕ್ತಪಡಿಸಿತ್ತು.

    ಇದು ಕೇವಲ ಒಂದು ಧರ್ಮದ (Religion) ಸಂಕೇತವಾಗಿದೆ. ಇದರಿಂದ ಗಂಗಾವತಿ ನಗರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆ ಎಂದು ಆರೋಪಿಸಿ ಇದನ್ನು ತೆರವುಗೊಳಿಸುವಂತೆ ಗಂಗಾವತಿ ನಗರಸಭೆ ಕಮಿಷನರ್‌ಗೆ SDPI ಮನವಿ ಮಾಡಿತ್ತು.

    ಗಂಗಾವತಿಯಿಂದ 12 ಕಿಲೋ ಮೀಟರ್ ದೂರದಲ್ಲಿ ಹನುಮ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟದವರೆಗೂ ಇದೆ ಮಾದರಿಯಲ್ಲಿ ಬೀದಿ ದೀಪಗಳು ಅಳವಡಿಕೆ ಮಾಡಲಾಗುತ್ತಿತ್ತು. ಇಲ್ಲಿಗೆ ಲಕ್ಷಾಂತರ ಹನುಮ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಇಂತಹ ಪ್ರವಾಸಿ ಸ್ಥಳದಲ್ಲಿ, ಬೀದಿ ದೀಪಗಳು ಸುಂದರವಾಗಿ ಕಾಣಲಿ ಎಂಬ ಉದ್ದೇಶಕ್ಕೆ ಹಾಕಲಾಗಿದೆ. ಇದರಲ್ಲಿ ಕೋಮು ಸೌಹಾರ್ದತೆ ಕದಡುವ ಅಂಶ ಏನಿದೆ ಎಂದು ಹಿಂದೂ ಮುಖಂಡರು ಪ್ರಶ್ನಿಸಿದ್ದರು.

     

  • ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ – ಅಂದು ಬಿಜೆಪಿ ಸರ್ಕಾರದಿಂದಲೇ ಪ್ರಶಾಂತ್‌ ಮಾಡಾಳ್‌ಗೆ ಕ್ಲೀನ್‌ಚಿಟ್‌?

    ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ – ಅಂದು ಬಿಜೆಪಿ ಸರ್ಕಾರದಿಂದಲೇ ಪ್ರಶಾಂತ್‌ ಮಾಡಾಳ್‌ಗೆ ಕ್ಲೀನ್‌ಚಿಟ್‌?

    ಬೆಂಗಳೂರು: ಲೋಕಾಯುಕ್ತ ಪೊಲೀಸರಿಂದ (Lokayukta Police) ಬಂಧನಕ್ಕೆ ಒಳಗಾದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ (Madal Virupakshappa) ಪುತ್ರ ಪ್ರಶಾಂತ್‌ ಮಾಡಾಳ್‌ಗೆ (Prashanth Madal) ಬಿಜೆಪಿ ಸರ್ಕಾರದಿಂದಲೇ ಶ್ರೀರಕ್ಷೆ ಇತ್ತಾ ಎಂಬ ಪ್ರಶ್ನೆ ಎದ್ದಿದೆ.

    ಈ ಹಿಂದೆ ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್‌ನಲ್ಲಿ (KRIDL) 55 ಕೋಟಿ ಹಣ ಅಕ್ರಮ ವರ್ಗಾವಣೆಯಾಗಿತ್ತು. ಈ ಪ್ರಕರಣದಲ್ಲಿ ಕೆಆರ್‌ಐಡಿಎಲ್‌ ಉಪ ಹಣಕಾಸು ಅಧಿಕಾರಿಯಾಗಿದ್ದ ಪ್ರಶಾಂತ್‌ ಮಾಡಾಳ್‌ ಹೆಸರು ಕೇಳಿಬಂದಿತ್ತು. ಆದರೆ ಅಂದು ಪ್ರಶಾಂತ್‌ ಮಾಡಾಳ್‌ ಹೆಸರನ್ನು ವಿಚಾರಣೆಯಿಂದ ಬಿಜೆಪಿ ಸರ್ಕಾರ ಕೈಬಿಟ್ಟಿತ್ತು.

    ಏನಿದು ಪ್ರಕರಣ?
    ಕೆಆರ್‌ಐಡಿಎಲ್‌ ಹಣವನ್ನು ಬೇರೆಯವರ ಖಾತೆಗ ವರ್ಗಾಯಿಸಿ 55 ಕೋಟಿ ಹಣವನ್ನು ಮಂಗಳೂರಿನ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರು ಅಧಿಕಾರಿಗಳನ್ನು 2017ರಲ್ಲಿ ಅಮಾನತು ಮಾಡಿದ್ದ ಸರ್ಕಾರ ಇಲಾಖಾ ವಿಚಾರಣೆ ಮತ್ತು ಸಿಐಡಿ ತನಿಖೆಗೆ ಒಪ್ಪಿಸುವಂತೆ ಶಿಫಾರಸ್ಸು ಮಾಡಿತ್ತು. ಇದನ್ನೂ ಓದಿ: ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ

     

    ಕ್ಲೀನ್‌ಚಿಟ್‌ ಸಿಕ್ಕಿದ್ದು ಹೇಗೆ?
    ಇಲಾಖಾ ವಿಚಾರಣೆ ವೇಳೆ 4 ಮಂದಿ ಪೈಕಿ ಪ್ರಶಾಂತ್ ಹೂಡಿಕೆ ಸಮಿತಿ ಸದಸ್ಯನಲ್ಲ, ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಅಭಿಪ್ರಾಯಪಟ್ಟು ಪ್ರಕರಣದಿಂದ ಖುಲಾಸೆ ಮಾಡಲಾಗಿತ್ತು. ಪಂಚಾಯತ್ ರಾಜ್ ಅಧೀನ ಕಾರ್ಯದರ್ಶಿ ಖುಲಾಸೆ ಆದೇಶ ನೀಡಿದ್ದರು. ಇಲಾಖಾ ತನಿಖೆಯಿಂದ ಪ್ರಭಾವ ಬಳಸಿ ಪ್ರಶಾಂತ್ ಮಾಡಾಳ್ ಬಚಾವ್ ಆಗಿದ್ದ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮತ್ತು ಅಂದಿನ ಸಿಎಂ ಯಡಿಯೂರಪ್ಪದಿಂದ ಪ್ರಶಾಂತ್‌ ಪಾರಾಗಿದ್ದ ಆರೋಪ ಈಗ ಕೇಳಿ ಬಂದಿದೆ.

    ಮೂವರು ಅಧಿಕಾರಿಗಳಾದ ವೀರನಗೌಡ ಪಾಟೀಲ್, ಎಂ ವಿ ಪ್ರಶಾಂತ್, ಶಂಕರಾಚಾರಿ ಮೇಲೆ ಇಲಾಖಾ ತನಿಖೆ ಮುಂದುವರೆಸಲಾಗಿದೆ. ಈ ಬಗ್ಗೆ ಪಂಚಾಯತ್ ರಾಜ್ ಅಧೀನ ಕಾರ್ಯದರ್ಶಿಯಿಂದ ಆದೇಶ ಹೊರಡಿಸಲಾಗಿದೆ.

    ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದ್ದು ಈಗ ಲೋಕಾಯುಕ್ತ ಬಲೆಗೆ ಪ್ರಶಾಂತ್ ಬೀಳುತ್ತಿದ್ದಂತೆ ಹಳೇ ಪ್ರಕರಣದ ಬಗ್ಗೆ ಸಿಐಡಿ ಮಾಹಿತಿ ಕೇಳಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.