Tag: ಕೆಂಪೇಗೌಡ ಜಯಂತಿ

  • ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟ ವಿಚಾರ ನಾನು ಗಂಭೀರವಾಗಿ ಪರಿಗಣಿಸಲ್ಲ: ಹೆಚ್‌ಡಿಕೆ

    ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟ ವಿಚಾರ ನಾನು ಗಂಭೀರವಾಗಿ ಪರಿಗಣಿಸಲ್ಲ: ಹೆಚ್‌ಡಿಕೆ

    ನವದೆಹಲಿ: ಕೆಂಪೇಗೌಡ ಜಯಂತಿ (Kempegowda Jayanti) ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟ ವಿಚಾರವನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಯಾವಾಗಲೂ ಸಹ ಯಾವುದೇ ಕಾರ್ಯಕ್ರದಲ್ಲೂ ನನ್ನ ಹೆಸರು ಹಾಕಿಲ್ಲ ಎಂದು ದೂರುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ದೆಹಲಿಯಲ್ಲಿ (New Delhi) ಈ ಬಗ್ಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಯಾರ ಸ್ವತ್ತು ಅಲ್ಲ. ಅವರು ಕನ್ನಡದ ಸ್ವತ್ತು. ನಾಳೆಯ ಸರ್ಕಾರದ ಕಾರ್ಯಕ್ರಮದಲ್ಲಿ ದೇವೇಗೌಡರು, ನನ್ನ ಹೆಸರು ಹಾಕಿಲ್ಲ ಎಂದು ಹೇಳಿದರು ನಾನು ಈ ವಿಚಾರಕ್ಕೆ ಬಹಳ ಮಹತ್ವ ಕೊಡುವುದಿಲ್ಲ. ನಾನು ಯಾವಾಗಲೂ ಸಹ ಯಾವುದೇ ಕಾರ್ಯಕ್ರಮದಲ್ಲೂ ನನ್ನ ಹೆಸರು ಹಾಕಿಲ್ಲ ಎಂದು ಹೇಳುವುದಿಲ್ಲ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ಧನ ಸಹಾಯ ಮಾಡಿದ ಧ್ರುವ ಸರ್ಜಾ ಫ್ಯಾನ್ಸ್

    ಕೆಂಪೇಗೌಡರ ಜಯಂತಿಯನ್ನು ಬೇರೆಬೇರೆ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಸರ್ಕಾರ ಒಂದು ರೀತಿಯಲ್ಲಿ ಆಚರಣೆ ಮಾಡಿದರೆ, ದೇವನಹಳ್ಳಿ ಭಾಗದಲ್ಲಿ ಮನೆ ಮನೇಲೂ ಫೋಟೋ ಇಟ್ಟು ಪೂಜೆ ಮಾಡಿ ಆಚರಣೆ ಮಾಡುತ್ತಾರೆ. ಬೆಂಗಳೂರು ನಗರದ ಬಗ್ಗೆ ಇವತ್ತು ವಿಶ್ವದಲ್ಲೇ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣರಾದವರು ಕೆಂಪೇಗೌಡರು ಎಂದು ಹೇಳಿದರು. ಇದನ್ನೂ ಓದಿ: ಮೊದಲ ಕೇಸ್‌ನಲ್ಲೇ ಪ್ರಜ್ವಲ್ ರೇವಣ್ಣಗೆ ಶಾಕ್ – ಹೊಳೆನರಸೀಪುರ ಪ್ರಕರಣದ ಜಾಮೀನು ಅರ್ಜಿ ವಜಾ

    ಕೆಂಪೇಗೌಡ ಕಟ್ಟಿರುವ ಕೆರೆಗಳನ್ನು ಈಗಿನ ದಿನಗಳಲ್ಲಿ ಸ್ವಾರ್ಥಕ್ಕೆ ಕೆಲವರು ನುಂಗಿದ್ದಾರೆ. ಈಗಲಾದರೂ ಇರುವ ಕೆರೆಗಳನ್ನು ಕಾಪಾಡುವ ಕೆಲಸ ಮಾಡಬೇಕಿದೆ. ಮೇಕೆದಾಟು ಕಟ್ಟಬೇಕು, ಕುಡಿಯೋ ನೀರು ಅಂತೆಲ್ಲ ಹೇಳುತ್ತಾರೆ. ಈಗಲೇ ಕುಡಿಯೋಕೆ ನೀರಿಲ್ಲದೆ ಕಷ್ಟದ ಪರಿಸ್ಥಿತಿ ಇದೆ. ಮುಂದಿನ 15 ವರ್ಷ ಆದಮೇಲೆ ಏನಾಗುತ್ತೋ ಗೊತ್ತಿಲ್ಲ. ಸರ್ಕಾರ ನ್ಯಾಯಯುತವಾಗಿ ಜಯಂತಿ ಆಚರಣೆ ಮಾಡೋದಾದರೆ ಆ ಕೆರೆಗಳನ್ನು ರಕ್ಷಣೆ ಮಾಡುವಂತಹ ಕೆಲಸ ಮಾಡಿ ಮಳೆ ನೀರನ್ನು ಸರಿಯಾಗಿ ಬಳಸಿಕೊಳ್ಳುವತ್ತ ಚಿಂತನೆ ಮಾಡಲಿ. ಇಷ್ಟು ಮಾಡಿದರೆ ನಾನು ಸರ್ಕಾರಕ್ಕೆ ಸಲ್ಯೂಟ್ ಮಾಡುತ್ತೇನೆ ಎಂದರು. ಇದನ್ನೂ ಓದಿ: ಮೋದಿಯವರ ಸುಳ್ಳಾಟ ಬಯಲಿಗೆ ಎಳೆಯಲು ಒಳ್ಳೆಯ ಅವಕಾಶವಿದೆ: ಸಂತೋಷ್ ಲಾಡ್

    ನಾನು ಎರಡು ಬಾರಿ ಮುಖ್ಯಮಂತ್ರಿ ಆದಾಗಲೂ ಸಹ ಆ ನಗರಕ್ಕೆ ಕೊಡುಗೆ ಕೊಟ್ಟಿದ್ದೇನೆ. ನಾನು ಕೆಂಪೇಗೌಡರಿಗೆ ಯಾವ ರೀತಿ ಗೌರವ ಸಲ್ಲಿಸಬೇಕು ಅದನ್ನು ಮಾಡುತ್ತೇನೆ. ಇವತ್ತು ನನ್ನ ಹೆಸರು ಹಾಕಿದರೂ ನಾಳೆ ನಾನು ಹೋಗಲು ಸಾಧ್ಯವಿಲ್ಲ. ನಾಳೆ ರಾಷ್ಟ್ರಪತಿಗಳು ಜಂಟಿ ಭಾಷಣ ಮಾಡುತ್ತಾರೆ. ನಾನು ಇಲ್ಲಿ ಇರಬೇಕು, ಅದಕ್ಕೆ ನಾನು ಇಲ್ಲೇ ಗೌರವ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಹನಿಟ್ರ್ಯಾಪ್ ನಡೆದಿಲ್ಲ: ಶಾಸಕ ಹರೀಶ್ ಗೌಡ ಸ್ಪಷ್ಟನೆ

  • ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ: ಡಿಕೆಶಿ

    ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ: ಡಿಕೆಶಿ

    ಬೆಂಗಳೂರು: ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ (Kempegowda Jayanti) ಆಚರಿಸಲು 1 ಲಕ್ಷ ರೂ. ನೀಡಲಾಗುವುದು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಬಗ್ಗೆ ವಿದ್ಯಾರ್ಥಿಗಳಿಗೆ ವಿಚಾರಸಂಕಿರಣ ಏರ್ಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 1 ಲಕ್ಷ ರೂ.ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಹಾಗೂ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಕೆಂಪೇಗೌಡರ ಕುರಿತು ಚರ್ಚಾಸ್ಪರ್ಧೆ ಏರ್ಪಡಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 20 ಸಾವಿರ ರೂ., ತಾಲೂಕು ಕೇಂದ್ರಗಳಿಗೆ 20 ಸಾವಿರದ ಜೊತೆಗೆ ಹೆಚ್ಚುವರಿಯಾಗಿ 1 ಲಕ್ಷ ರೂ. ನೀಡಲಾಗುವುದು. ಜಿಲ್ಲಾ ಕೇಂದ್ರಗಳಿಗೆ 50 ಸಾವಿರ ನೀಡಲಾಗುತ್ತಿದ್ದು, ಹೆಚ್ಚು ಮಾಡಲು ಚಿಂತನೆ ನಡೆಸಲಾಗುವುದು. ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಉತ್ಸವವನ್ನು ಅರಮನೆ ಮೈದಾನ ಅಥವಾ ಹೊರಾಂಗಣ ಮೈದಾನದಲ್ಲಿ ಜೂನ್ 27 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದರು. ಇದನ್ನೂ ಓದಿ: ಭ್ರಷ್ಟಾಚಾರ, ಕಮಿಷನ್ ದಂಧೆ ನಿಲ್ಲಿಸಿದ್ರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತೆ: ಎಎಪಿ

    ಹುಲಿಯೂರು ದುರ್ಗ, ಮಾಗಡಿ, ಆವತಿ ಸೇರಿದಂತೆ ಬೆಂಗಳೂರಿನ ಎಲ್ಲಾ ದಿಕ್ಕುಗಳಿಂದ ಪ್ರತಿವರ್ಷದಂತೆ ಗೋಪುರ ಮತ್ತು ಜ್ಯೋತಿಗಳ ಮೆರವಣಿಗೆ ಬರುತ್ತದೆ. ಕೆಂಪೇಗೌಡರು ನಿರ್ಮಾಣ ಮಾಡಿದ್ದ ಗೋಪುರಗಳನ್ನು ದಾಟಿ ಬೆಂಗಳೂರು ಮರ‍್ನಾಲ್ಕು ಪಟ್ಟು ಹೆಚ್ಚು ಬೆಳೆದಿದೆ. ಬೆಂಗಳೂರು ಇಷ್ಟು ಅಗಾಧವಾಗಿ ಬೆಳೆಯಬಹುದು ಎನ್ನುವ ಕಲ್ಪನೆ ಸ್ವತಃ ಕೆಂಪೇಗೌಡರಿಗೆ ಇರಲಿಲ್ಲ. ಈ ನಗರ ಸ್ಥಾಪಿಸಿದ ಮಹಾನ್ ವ್ಯಕ್ತಿಯ ಜಯಂತಿಯನ್ನು ಇತರೇ ಸಾಧಕರ ಜಯಂತಿಯಂತೆ ಆಚರಿಸಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: ಠಾಣೆಯಲ್ಲಿ ಪವಿತ್ರಾ ಗೌಡ ಕುಸಿದು ಬಿದ್ದಿದ್ದು ಲೋ ಬಿಪಿಯಿಂದ: ವೈದ್ಯೆ

    ಬಿ.ಎಲ್.ಶಂಕರ್ ಅವರ ನೇತೃತ್ವದಲ್ಲಿ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಡಿಎ, ಬಿಬಿಎಂಪಿಯಿಂದ ಕೆಂಪೇಗೌಡ ಪ್ರಶಸ್ತಿ ನೀಡಲು ಯೋಜಿಸಲಾಗಿದೆ. ಪ್ರಶಸ್ತಿಗೆ ನಾನು ಒಂದಷ್ಟು ಹೆಸರು ಸೂಚಿಸಿದ್ದೆ. ವಾರ್ಡ್ ಮಟ್ಟದಲ್ಲಿ ಅಥವಾ ಬೇರೆ ಸ್ವರೂಪದಲ್ಲಿ ಪ್ರಶಸ್ತಿ ನೀಡಬೇಕಾ ಎಂದು ಗೊಂದಲ ಇರುವ ಕಾರಣಕ್ಕೆ ಮುಂದುವರೆದಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಶಸ್ತಿ ನೀಡಲಾಗುವುದು. ಕೆಂಪೇಗೌಡರ ಮೂಲ ಸಮಾಧಿ ಸ್ಥಳ, ಕೋಟೆಯನ್ನು ಅಭಿವೃದ್ಧಿಪಡಿಸುವ ಕ್ರಿಯಾಯೋಜನೆ ಸಿದ್ದ ಪಡಿಸಲಾಗಿದೆ. ಅವರ ಬಗ್ಗೆ ಮಾಹಿತಿಯೂ ಸಿಗಬೇಕು ಹಾಗೂ ಪ್ರವಾಸಿ ಸ್ಥಳವಾಗಿಯೂ ಪರಿವರ್ತನೆಯಾಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಜನರ ದುಡ್ಡು ತಗೊಂಡು ಜನರಿಗೆ ಕೊಡೋಕೆ ನೀವೇ ಆಡಳಿತ ಮಾಡಬೇಕಾ?- ಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ

    ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರ ಕ್ಷೇತ್ರದಲ್ಲಿ ಕೆಂಪೇಗೌಡರ ಜನ್ಮಸ್ಥಳ ಅಭಿವೃದ್ಧಿಗೆ 10 ಎಕರೆ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಲಾಗುವುದು. ಸುಮನಹಳ್ಳಿಯಲ್ಲಿ ಕೆಂಪೇಗೌಡ ಪ್ರಾಧಿಕಾರದ ಕಚೇರಿಗಾಗಿ 5 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಜಯಂತಿಯಂದೇ ಗುದ್ದಲಿಪೂಜೆಗೆ ಯೋಚಿಸಲಾಗಿದೆ. ಕೆಂಪೇಗೌಡರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಬಾರದು. ಜಾತ್ಯಾತೀತ ತತ್ವದಲ್ಲಿ ಆಚರಣೆ ಮಾಡಬೇಕು. ಕೆಂಪೇಗೌಡರ ಜಯಂತಿ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ಈ ರೀತಿ ನಮ್ಮ ಸರ್ಕಾರ ಬಿಂಬಿಸುವುದಿಲ್ಲ. ಎಲ್ಲಾ ವರ್ಗದ ಜನರಿಗೂ ಕೆಂಪೇಗೌಡರು ಸಹಕಾರ ನೀಡಿದ್ದಾರೆ. ಬಸವಣ್ಣನವರ ಜಯಂತಿಯನ್ನು ಕೇವಲ ಲಿಂಗಾಯತರು ಹಾಗೂ ಅಂಬೇಡ್ಕರ್ ಅವರ ಜಯಂತಿಯನ್ನು ಪರಿಶಿಷ್ಟರು ಮಾಡುತ್ತಿದ್ದಾರೆ. ನಾವು ಎಲ್ಲಾ ಸಂಘ ಸಂಸ್ಥೆಗಳನ್ನು, ಸಮುದಾಯಗಳನ್ನು ಸೇರಿಸಿಕೊಂಡು ಆಚರಣೆ ಮಾಡಬೇಕು. ಸಭೆಯಲ್ಲಿ 100ಕ್ಕೂ ಉತ್ತಮವಾದ ಸಲಹೆಗಳು ಬಂದಿವೆ. ಇದರಲ್ಲಿ ಸೂಕ್ತವಾದವುಗಳನ್ನು ಅಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದರು. ಇದನ್ನೂ ಓದಿ: ಕಿಸಾನ್ ಸಮ್ಮಾನ್ ಯೋಜನೆಯಡಿ 20 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

    ಇತರೇ ರಾಜ್ಯಗಳ 60% ರಷ್ಟು ಜನರು ಬೆಂಗಳೂರಿನ ವಾತಾವರಣ, ಶಿಕ್ಷಣ ಸೇರಿದಂತೆ ಇತರೇ ಸೌಲಭ್ಯಗಳಿಗೆ ಮಾರುಹೋಗಿದ್ದಾರೆ. ದೆಹಲಿ ನಂತರ ಬೆಂಗಳೂರನ್ನು ದೇಶ- ವಿದೇಶಿಯರು ನೋಡುವಂತಾಗಿದೆ. ಸರ್ವಜನಾಂಗಕ್ಕೂ ಬೆಂಗಳೂರು ಆಪ್ತವಾಗಿದೆ. ಕೆಂಪೇಗೌಡರ ಅಭಿವೃದ್ಧಿಯ ಹೆಜ್ಜೆ ನಂತರ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ವಿಕಾಸಸೌಧ, ಉದ್ಯೋಗ ಸೌಧ ನಿರ್ಮಾಣವಾಯಿತು. ಇದಾದ ನಂತರ ಪ್ರವಾಸೋದ್ಯಮದಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಒಂದಷ್ಟು ಹಳೆಯ ದೇವಾಲಯಗಳು ಬಿಟ್ಟರೆ ಪ್ರೇಕ್ಷಣೀಯ ಸ್ಥಳಗಳು ಇಲ್ಲ. ಅಲ್ಲದೇ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಸಮಸ್ಯೆ ನಿವಾರಣೆಗೆ ಕಟ್ಟಡಗಳನ್ನು ಒಡೆಯಲು ಆಗುವುದಿಲ್ಲ. ಆದ ಕಾರಣ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ. ಮೂಲ ಸೌಕರ್ಯಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ ವಿಜಯ್ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

    ಈ ನಾಡು ಕಟ್ಟಿದಂತಹ ಕೆಂಪೇಗೌಡರನ್ನು ನಾವು ಸ್ಮರಿಸಿಕೊಳ್ಳಬೇಕು. ಹಿಂದಿನ ಸರ್ಕಾರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿತ್ತು. ಅದರ ಅಕ್ಕಪಕ್ಕ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ತರಾತುರಿಯಲ್ಲಿ ಪ್ರಧಾನಮಂತ್ರಿಗಳನ್ನು ಕರೆಸಿ ಕೆಂಪೇಗೌಡರ ಪ್ರತಿಮೆಯನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿದೆ. ಈ ಉಸ್ತುವಾರಿಯನ್ನು ಸಚಿವರಾದ ಮುನಿಯಪ್ಪ ಅವರು ಹಾಗೂ ಕೃಷ್ಣಭೈರೇಗೌಡರು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಆನ್‍ಲೈನ್ ಆಪ್‍ನಲ್ಲಿ ಹಣ ಹೂಡಿ ನಷ್ಟ – ಮಹಾರಾಣಿ ವಿವಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

  • ಸುಳ್‌ ಬಿಜೆಪಿ, ಸುಳ್‌ ಸಿಎಂ; ಕಮಲದ ಕಣ್ಣಿಗೆ ಕಾಮಾಲೆ ಎನ್ನುವುದು ಖರೆ – ಜೆಡಿಎಸ್‌ ಕಿಡಿ

    ಸುಳ್‌ ಬಿಜೆಪಿ, ಸುಳ್‌ ಸಿಎಂ; ಕಮಲದ ಕಣ್ಣಿಗೆ ಕಾಮಾಲೆ ಎನ್ನುವುದು ಖರೆ – ಜೆಡಿಎಸ್‌ ಕಿಡಿ

    ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ (Kempegowda Jayanti) ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರನ್ನು (H.D.Devegowda) ಆಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಸಮರ್ಥನೆಗೆ ಜೆಡಿಎಸ್‌ (JDS) ಕೆಂಡಾಮಂಡಲವಾಗಿದೆ. ʼಸುಳ್‌ ಬಿಜೆಪಿ, ಸುಳ್‌ ಸಿಎಂʼ ಎಂದು ಹ್ಯಾಷ್‌ ಟ್ಯಾಗ್‌ ಹಾಕಿ ಸರಣಿ ಟ್ವೀಟ್‌ ಮೂಲಕ ಜೆಡಿಎಸ್‌ ಕಿಡಿಕಾರಿದೆ.

    ಟ್ವೀಟ್‌ನಲ್ಲೇನಿದೆ?
    ನಾಡಪ್ರಭುಗಳ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರನ್ನು ಆಹ್ವಾನಿಸದೆ ರಾಜ್ಯ ಸರ್ಕಾರ ಶಿಷ್ಟಾಚಾರ ಲೋಪ ಎಸಗಿದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕೇ ಹೊರತು ಬಿಜೆಪಿ ಅಲ್ಲ. ಇಷ್ಟಕ್ಕೂ ಅದು ಕೇಶವಕೃಪದ ಕಾರ್ಯಕ್ರಮವಲ್ಲ. ಇದನ್ನೂ ಓದಿ: ಮೋದಿ ಹಾದಿಯಲ್ಲೆ ಸಿದ್ದರಾಮಯ್ಯ – ಜಾತಿ, ಧರ್ಮ ಸಮೀಕರಣಕ್ಕೆ ರಣತಂತ್ರ

    ʼಬೂಟಾಟಿಕೆ ದಾಸಯ್ಯನಿಗೆ ಮೈಯಲ್ಲಾ ಪಂಗನಾಮʼ ಎನ್ನುವಂತಿದೆ ಬಿಜೆಪಿ ಪರಿಸ್ಥಿತಿ. ಕೊಳಕು, ವಿಕೃತಿಗಳ ಮಹಾಸಂಗಮವೇ ಬಿಜೆಪಿ. ರಕ್ತಪೀಪಾಸುತನ, ನರಹಂತಕ ಮನಃಸ್ಥಿತಿಯೇ ಬಿಜೆಪಿಯ ನೈಜಮುಖ. ಆಪರೇಷನ್‌ ಕಮಲವೇ ಅದರ ಶಿಷ್ಟಾಚಾರ, ಸುಳ್ಳಿನ ಪ್ರಚಾರವೇ ಅದರ ಸಂಸ್ಕಾರ.

    ಹೆಚ್.ಡಿ.ದೇವೇಗೌಡರನ್ನು ಜೆಡಿಎಸ್ ಎಂದಿಗೂ ಜಾತಿ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಆದರೆ ಅವರ ಅರ್ಧದಿನದ ʼಕರ್ನಾಟಕದ ಕಾಟಾಚಾರದ ಭೇಟಿʼ ಏನನ್ನು ಗುರಿ ಮಾಡಿಕೊಂಡಿತ್ತು? ಎನ್ನುವುದನ್ನು ಮಾಧ್ಯಮಗಳೇ ನಿರಂತರವಾಗಿ ವರದಿ ಮಾಡುತ್ತಿರುವುದು ಕಾಣುತ್ತಿಲ್ಲವೇ? ಕಮಲದ ಕಣ್ಣಿಗೆ ಕಾಮಾಲೆ ಎನ್ನುವುದು ಖರೆ.

    ಮಾಜಿ ಪ್ರಧಾನಿಗಳನ್ನು ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಪ್ರಶ್ನೆ ಮಾಡಿದ್ದನ್ನೇ ʼಮಹಾ ಅಪರಾಧʼ ಎಂದು ಚಿತ್ರಿಸುತ್ತಿರುವ ಬಿಜೆಪಿಯ ವಿಕೃತಿ ಆದಿಯಿಂದಲೂ ಧರ್ಮ, ಜಾತಿ ಮತ್ತು ಸುಳ್ಳಿನ ಸುತ್ತಲೇ ಗಿರಕಿ ಹೊಡೆಯುತ್ತಿದೆ ಎನ್ನುವುದು ಸಾರ್ವಕಾಲಿಕ ಸತ್ಯ. ಸತ್ಯವನ್ನು ಮಿಥ್ಯೆ ಎನ್ನಲಾದಿತೆ? ಇದನ್ನೂ ಓದಿ: ಕೆಂಪೇಗೌಡ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು: ಮಂಜುನಾಥ್

    ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಸ್ತಿತ್ವದ ಭಯ ಎನ್ನುವುದು ಹಾಗಿರಲಿ, ಪ್ರಧಾನಿಯ ನಾಮಬಲ ಒಂದಿಲ್ಲದಿದ್ದರೆ ನಿಮಗೆ ಠೇವಣಿಗೂ ಖಾತರಿ ಇಲ್ಲ. ಇನ್ನು 6 ತಿಂಗಳಲ್ಲಿ ಮೋದಿ ಅವರು ಎಷ್ಟು ಸಲ ಕರ್ನಾಟಕಕ್ಕೆ ಓಡೋಡಿ ಬರುತ್ತಾರೋ ನೋಡೋಣ. ಅಲ್ಲಿ ನಿಮ್ಮ ಯೋಗ್ಯತೆಯ ಅಳತೆ ಎಷ್ಟು? ಎಂಬುದು ಗೊತ್ತಾಗುತ್ತದೆ.

    ಬಿಜೆಪಿಯ ಒಕ್ಕಲಿಗ ನಾಯಕರು ಮುನ್ನೆಲೆಗೆ ಬರುವುದನ್ನು ಕುಮಾರಸ್ವಾಮಿ ಅವರು ಸಹಿಸುತ್ತಿಲ್ಲ ಎನ್ನುತ್ತಿದೆ ಬಿಜೆಪಿ. ಭೂತದ ಬಾಯಲ್ಲಿ ಭಗದ್ಗೀತೆʼ ಎಂದರೆ ಇದೇ. ಧರ್ಮ, ಜಾತಿ, ಆಚಾರ, ವಿಚಾರ, ಆಹಾರದ ವಿಷಯದಲ್ಲೇ ವಿಷ-ವಿಕೃತಿಗಳನ್ನು ಬಿತ್ತಿದ ಬಿಜೆಪಿ, ಈಗ ಸಹಿಷ್ಣುತೆಯ ಬಗ್ಗೆ ಪಾಠ ಬಿಗಿಯುತ್ತಿದೆ.

    20 ದಿನಗಳ ಹಿಂದೆ ಸಚಿವ ಅವರು ಮಾಜಿ ಪ್ರಧಾನಿಗಳ ನಿವಾಸಕ್ಕೆ ಭೇಟಿ ನೀಡಿ ಮೃತ್ತಿಕೆ ಸಂಗ್ರಹದ ಬಗ್ಗೆ ತಿಳಿಸಿ ಆಹ್ವಾನಿಸಿದ್ದರಷ್ಟೇ. ಆದರೆ ಮುಖ್ಯಮಂತ್ರಿಗಳು ಪ್ರತಿಮೆ ಅನಾವರಣಕ್ಕೆ ಆಹ್ವಾನಿಸಿದ್ದರು. ಆಹ್ವಾನ ಪತ್ರಿಕೆಯಲ್ಲೂ ದೇವೇಗೌಡರ ಹೆಸರನ್ನು ನಮೂದಿಸಲಾಗಿತ್ತೆಂದು ಹಸಿಸುಳ್ಳನ್ನೇ ಬಿಜೆಪಿ ಟ್ವೀಟಿಸಿದೆ.

    ಬಿಜೆಪಿ ʼಗೊಬೆಲ್ ಸಂತತಿಯ ಶಿಶುʼ ಎನ್ನುವುದಕ್ಕೆ ಇದಕ್ಕಿಂತ ಸತ್ಯ ಸಾಕ್ಷ್ಯ ಬೇಕಾ? ʼಸುಳ್‌ ಬಿಜೆಪಿʼಗೆ ಸತ್ಯವೆಂದರೆ ಅಪಥ್ಯ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ʼಸುಳ್‌ ಸಿಎಂʼ ಎಂದೇ ಪ್ರಖ್ಯಾತಿ ಆಗುತ್ತಿದ್ದಾರೆ. ಇದಲ್ಲವೇ ವಿಪರ್ಯಾಸ?

    ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ, ಸ್ವತಃ ಫೋನ್‌ ಕರೆ ಮೂಲಕ ದೇವೇಗೌಡರನ್ನು ಆಹ್ವಾನಿಸಿದ್ದಾರೆ ಎಂದು ‘ಗೊಬೆಲ್ ಬಿಜೆಪಿ’ ಟ್ವೀಟಿಸಿ ಸುಳ್ಳು ಹೇಳಿದೆ. ಸತ್ಯ ಏನೆಂಬುದನ್ನು ನಾವೂ ಟ್ವೀಟಿನಲ್ಲೇ ರಾಜ್ಯದ ಜನತೆಗೆ ನಿವೇದಿಸಿದ್ದೇವೆ. ಅದನ್ನು ಓದಲು ʼಗೊಬೆಲ್‌ ಬಿಜೆಪಿʼಗೆ ಗರ ಬಡಿದಿದೆಯಾ?

    ನಾಡಪ್ರಭುಗಳ ವಿಚಾರದಲ್ಲೂ ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ಅರ್ಧದಿನದ ಅರೆಬರೆ ಭೇಟಿಯಲ್ಲಿ ಘನವೇತ್ತ ಪ್ರಧಾನಿಗಳು ಮಾಡಿದ್ದಾದರೂ ಏನು? ‘ಒಂದೇ ಕಲ್ಲಿನಲ್ಲಿ ನಾಲ್ಕು ಜಾತಿಗಳ ಮತಬುಟ್ಟಿಗೆ ಕೈ ಹಾಕಿದ ಪ್ರಧಾನಿ’ / ‘ಪ್ರತಿಮಾ ಪಥ, ಮೋದಿ ರಥ’ ಎನ್ನುವ ಸುದ್ದಿಗಳನ್ನು ನೋಡಲಿಲ್ಲವೆ? ಇದನ್ನೂ ಓದಿ: 224 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಎಲ್ಲೇ ನಿಂತರೂ ಗೆಲುವು ಖಚಿತ – ನಜೀರ್ ಅಹಮದ್

    ಕಮಲಕ್ಕೆ ಕಾಮಾಲೆ ಕಣ್ಣು ಎನ್ನುವುದು ನಾಟಕವೋ, ಬೂಟಕವೋ? ಜಾತಿವಾರು ಮತಗಳ ಧ್ರುವೀಕರಣಕ್ಕೆ ಹೊರಟವರು ಯಾರು? ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆದು ತಂದವರು ಯಾರು? ಸಂತ ಕನಕದಾಸರ ʼಕುಲ ಕುಲವೆಂದು ಹೊಡೆದಾಡದಿರಿ..ʼ ಪದವನ್ನು ಹೇಳುತ್ತಲೇ ʼಕುಲಕಿಚ್ಚಿನ ರಾಜಕೀಯʼ ಮಾಡಿದವರು ಯಾರು? ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?

    ಕೊನೆಯದಾಗಿ; ಸಂಸ್ಕಾರವೇ ಗೊತ್ತಿಲ್ಲದ ಪಕ್ಷಕ್ಕೆ ಶಿಷ್ಟಾಚಾರ ಮಾತೇಕೆ? ಅದು ತನಗಿಲ್ಲ ಎಂದು ಬಿಜೆಪಿ ಸಾಬೀತುಪಡಿಸಿದೆ. ಕನ್ನಡದ ಆಚಾರ-ವಿಚಾರಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವ ಆ ಪಕ್ಷ, ಕನ್ನಡನಾಡಿಗೆ ಬಹುದೊಡ್ಡ ಬೆದರಿಕೆ ಎಂದು ಬಿಜೆಪಿ ವಿರುದ್ಧ ಜೆಡಿಎಸ್‌ ಹರಿಹಾಯ್ದಿದೆ.

    Live Tv
    [brid partner=56869869 player=32851 video=960834 autoplay=true]

  • 2022ರಿಂದ 3 ದಿನ ‘ಬೆಂಗಳೂರು ಹಬ್ಬ’ವಾಗಿ ಕೆಂಪೇಗೌಡ ಜಯಂತಿ ಆಚರಣೆ: ಡಿಸಿಎಂ

    2022ರಿಂದ 3 ದಿನ ‘ಬೆಂಗಳೂರು ಹಬ್ಬ’ವಾಗಿ ಕೆಂಪೇಗೌಡ ಜಯಂತಿ ಆಚರಣೆ: ಡಿಸಿಎಂ

    ಬೆಂಗಳೂರು: ಮುಂದಿನ ವರ್ಷದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮೂರು ದಿನಗಳ ಕಾಲ ‘ಬೆಂಗಳೂರು ಹಬ್ಬ’ವನ್ನಾಗಿ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ನಿಮಿತ್ತ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಜಯಂತಿ ಆಚರಣೆಯಲ್ಲಿ ಅಂಚೆ ಲಕೋಟೆ ಲೋಕಾರ್ಪಣೆ ಹಾಗೂ ಅಧ್ಯಯನ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಜೂನ್ 27ರಂದು ನಾಡಪ್ರಭುಗಳ ಜಯಂತಿಯನ್ನು ಆಚರಿಸಲಾಗುತ್ತದೆ. ಜೂನ್ 26, 27 ಮತ್ತು 28ರಂದು, ಅಂದರೆ 3 ದಿನಗಳ ಕಾಲ ಅವರ ಜಯಂತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಬೆಂಗಳೂರು ಹಬ್ಬ’ದ ಹೆಸರಿನಲ್ಲಿ ಆಚರಿಸಲಾಗುವುದು. ಆ ಮೂರೂ ದಿನಗಳ ಕಾಲ ಬೆಂಗಳೂರು ನಗರದಲ್ಲಿನ ಎಲ್ಲ ಪಾರಂಪರಿಕ ತಾಣ, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶ್ವವಿಖ್ಯಾತ ಹಬ್ಬದ ಮಾದರಿಯಲ್ಲಿ ಆಚರಿಸಲಾಗುವುದು ಎಂದು ಡಿಸಿಎಂ ಹೇಳಿದರು.

    ಮುಂದಿನ ವರ್ಷ ಲೋಕಾರ್ಪಣೆ
    ಬೆಂಗಳೂರು ಆಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದಿನ 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಪಾರ್ಕ್ ನಡುವೆ ಸ್ಥಾಪನೆಯಾಗುತ್ತಿರುವ 108 ಎಡಿ ಎತ್ತರದ ಲೋಹ ಪ್ರತಿಮೆ ಲೋಕಾರ್ಪಣೆ ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಪ್ರಕಟಿಸಿದರು.

    ಈ ವರ್ಷದ ಜಯಂತಿ ದಿನವೇ ಪ್ರತಿಮೆ ಲೋಕಾರ್ಪಣೆ ಆಗಬೇಕಿತ್ತು. ಕೋವಿಡ್ ಕಾರಣದಿಂದ ತಡವಾಯಿತು. ಈಗಾಗಲೇ ನೋಯಿಡಾದಲ್ಲಿ ಪ್ರತಿಮೆ ಭರದಿಂದ ತಯಾರಾಗುತ್ತಿದೆ. ಏರ್‍ಪೋರ್ಟ್ ನಲ್ಲೂ ಕಾಮಗಾರಿ ಪುನಾ ಆರಂಭವಾಗಿದೆ. ಈ ಯೋಜನೆ ಕಾರ್ಯಗತವಾದ ಮೇಲೆ ಅದು ಬೆಂಗಳೂರಿನ ದೊಡ್ಡ ಹೆಗ್ಗುರುತಾಗಿ ಕಾಣಲಿದೆ ಎಂದು ಅವರು ವಿವರಿಸಿದರು.

    ಕೆಂಪೇಗೌಡ ಪ್ರವಾಸೋದ್ಯಮ ಸರ್ಕ್ಯೂಟ್
    ಬೃಹತ್ತಾಗಿ ಬೆಂಗಳೂರು ನಗರದ ಸುತ್ತಮುತ್ತ ಈಗಲೂ 15,000 ಹೆಕ್ಟೇರ್ ದಟ್ಟ ಅರಣ್ಯವಿದೆ. ಅದರ ಜತೆಗೆ ರಾಜಧಾನಿಯ ಸುತ್ತಮುತ್ತಲಿನಲ್ಲಿ ಕೆಂಪೇಗೌಡರಿಗೆ ಸಂಬಂಧಿಸಿದ 46 ಪಾರಂಪರಿಕ ತಾಣಗಳಿವೆ. ಇವೆಲ್ಲವನ್ನೂ ಅನುಸಂಧಾನಗೊಳಿಸಿ ಒಂದು ಬೃಹತ್ತಾದ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಮಾಡಲು ಉದ್ದೇಶಿಸಲಾಗಿದೆ. ಈ ಮೂಲಕ ಕೆಂಪೇಗೌಡರ ಬಗ್ಗೆ ಇಡೀ ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನೆರಡು ವರ್ಷದೊಳಗೆ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ಉಳಿದಂತೆ ಕೆಂಪೇಗೌಡರು ಐಕ್ಯರಾಗಿರುವ, ಅವರ ವೀರ ಸಮಾಧಿ ಇರುವ ಮಾಗಡಿ ತಾಲೂಕಿನ ಕೆಂಪಾಪುರವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು ಭೂಸ್ವಾಧೀನ ನಡೆಯುತ್ತಿದೆ. ಮುಂದಿನ ವರ್ಷದ ಜಯಂತಿ ಕಾರ್ಯಕ್ರಮವನ್ನು ನಾಡಪ್ರಭುಗಳ ವೀರ ಸಮಾಧಿ ಮುಂದೆ ಆಚರಿಸುವ ಸಂಕಲ್ಪ ಸರ್ಕಾರದ್ದಾಗಿದೆ ಎಂದು ಅವರು ನುಡಿದರು.

    ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜ್ಞಾನಭಾರತಿಯಲ್ಲಿ ನಿರ್ಮಾಣ ಆಗುತ್ತಿರುವ ಕೆಂಪೇಗೌಡ ಅಧ್ಯಯನ ಕೇಂದ್ರದ ನಿರ್ಮಾಣ ಕಾಮಗಾರಿಗೆ ವರ್ಚುಯಲ್ ಮೂಲಕ ಚಾಲನೆ ನೀಡಿ, ನಾಡಪ್ರಭುಗಳ ಅಂಚೆ ಲಕೋಟೆಯನ್ನು ಲೋಕಾರ್ಪಣೆ ಮಾಡಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡೆಯುತ್ತಿರುವ ಸೆಂಟ್ರಲ್ ಪಾರ್ಕ್-ಕೆಂಪೇಗೌಡ ಪ್ರತಿಮೆ ನಿರ್ಮಾಣ ಕಾಮಗಾರಿ ಪ್ರಗತಿಯ ವಿಡಿಯೋ ಹಾಗೂ ಅಧ್ಯಯನ ಕೇಂದ್ರದ ಪ್ರಾತ್ಯಕ್ಷಿಕೆಯನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಇದನ್ನೂ ಓದಿ: ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ: ಡಿಸಿಎಂ

    ಆದಿಚುಂನಗಿರಿ ಮಠದ ಶ್ರೀ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಬ್ರಹ್ಮಗುಂಡ ಸ್ಫಟಿಕಪುರಿ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಇದನ್ನೂ ಓದಿ: ಬಿಜೆಪಿಯವರು ಕಾಂಗ್ರೆಸ್‍ಗೆ ಸಪೋರ್ಟ್ ಮಾಡ್ತೀವಿ ಸಿಎಂ ಆಗಿ ಎಂದಿದ್ದಾರೆ: ಎಸ್.ಎಸ್ ಮಲ್ಲಿಕಾರ್ಜುನ್

    ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಸಿ.ನಾರಾಯಣ ಗೌಡ, ಗೋಪಾಲಯ್ಯ, ಶಾಸಕರಾದ ಎಸ್.ಆರ್.ವಿಶ್ವನಾಥ್, ಮಂಜುನಾಥ್, ರಿಜ್ವಾನ್ ಅರ್ಷದ್, ವೈ.ಎ.ನಾರಾಯಣ ಸ್ವಾಮಿ, ಸಂಸದ ಪಿ.ಸಿ.ಮೋಹನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾಗಡಿಯ ಕೃಷ್ಣಮೂರ್ತಿ ಅವರು ಇದೇ ಸಂದರ್ಭದಲ್ಲಿ ಕೆಂಪಾಪುರದಿಂದ ತಂದ ಆತ್ಮಜ್ಯೋತಿಯನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರ ಮಾಡಿದರು.

  • ಕೆಂಪೇಗೌಡ ಜಯಂತಿ – 60 ಟನ್ ತರಕಾರಿ ವಿತರಿಸಿದ ಸೋಮಶೇಖರ್

    ಕೆಂಪೇಗೌಡ ಜಯಂತಿ – 60 ಟನ್ ತರಕಾರಿ ವಿತರಿಸಿದ ಸೋಮಶೇಖರ್

    ಬೆಂಗಳೂರು: ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಗಾಗಿ ಸಚಿವ ಎಸ್.ಟಿ ಸೋಮಶೇಖರ್ ರೈತರಿಂದ 60 ಟನ್ ತರಕಾರಿ ಖರೀದಿಸಿ ಕ್ಷೇತ್ರದ ಜನತೆಗೆ ವಿತರಣೆ ಮಾಡಿದ್ದಾರೆ. ಯಶವಂತಪುರ ಕ್ಷೇತ್ರ ವ್ಯಾಪ್ತಿ 17 ಸಾವಿರ ತರಕಾರಿ ಕಿಟ್‍ಗಳನ್ನ ಸಿದ್ದಪಡಿಸಿ ಜನತೆಗೆ ವಿತರಿಸಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯ ವಾರ್ಡ್ 72ರ ಬ್ಯಾಡರಹಳ್ಳಿ ಪೊಲೀಸ್ ಸ್ಟೇಷನ್ ಪಕ್ಕದ ಬಿಡಿಎ ಸಂಪರ್ಕ ರಸ್ತೆಯಲ್ಲಿ ಸಚಿವರು ತರಕಾರಿ ಕಿಟ್ ವಿತರಣೆ ಮಾಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ರೈತರಿಗೂ ಸಹ ಅನುಕೂಲವಾಗಬೇಕು. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಜನತೆಗೆ, ಕಷ್ಟದಲ್ಲಿರುವವರಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ತರಕಾರಿಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ಉಚಿತವಾಗಿ ವಿತರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    ನನಗೆ ಕ್ಷೇತ್ರದ ಕೆಲಸ ಮಾಡುವ ಸಂಬಂಧ ಜನತೆ ಮತ ನೀಡಿ ಆಶೀರ್ವದಿಸಿ ಕಳಿಸಿದ್ದಾರೆ. ಈಗ ಜನತೆ ಕೃಪೆಯಿಂದ ಸಚಿವನೂ ಆಗಿದ್ದೇನೆ. ಹೀಗಾಗಿ ನನಗೆ ಮತ ನೀಡಿದವರ ಋಣ ತೀರಿಸುವ ಸಮಯ ಇದಾಗಿದ್ದರಿಂದ ಅವರಿಗೆ ಸಹಾಯವಾಗುವ ಒಂದಷ್ಟು ಕೆಲಸವನ್ನು ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದವರ ಕುಟುಂಬದಲ್ಲಿ ಕೊರೊನಾದಿಂದ ಮೃತಪಟ್ಟರೆ ಕುಟುಂಬದವರಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಸಹಾಯಧನ ವಿತರಣೆ ಮಾಡುವುದು, ಆಸ್ಪತ್ರೆಗೆ ದಾಖಲಾಗಿದ್ದರೆ ಪರಿಸ್ಥಿತಿ ನೋಡಿಕೊಂಡು ಧನ ಸಹಾಯ ಮಾಡುವುದು, ಪಡಿತರ ಕಿಟ್, ವೈದ್ಯಕೀಯ ಕಿಟ್ ಸೇರಿದಂತೆ ತರಕಾರಿ ಕಿಟ್ ಗಳನ್ನು ಸಹ ವಿತರಣೆ ಮಾಡುವ ಮೂಲಕ ಅವರಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:ಬಿಜೆಪಿಯವರು ಕಾಂಗ್ರೆಸ್‍ಗೆ ಸಪೋರ್ಟ್ ಮಾಡ್ತೀವಿ ಸಿಎಂ ಆಗಿ ಎಂದಿದ್ದಾರೆ: ಎಸ್.ಎಸ್ ಮಲ್ಲಿಕಾರ್ಜುನ್

  • ಪರಮೇಶ್ವರ್ ಭಾಷಣದ ವೇಳೆ ಜೈ ಶ್ರೀರಾಮ್ ಘೋಷಣೆ

    ಪರಮೇಶ್ವರ್ ಭಾಷಣದ ವೇಳೆ ಜೈ ಶ್ರೀರಾಮ್ ಘೋಷಣೆ

    ಬೆಂಗಳೂರು: ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಭಾಷಣದ ವೇಳೆಯೂ ವ್ಯಕ್ತಿಯೊಬ್ಬ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಜೈ ಶ್ರೀರಾಮ್ ಎಂದು ಕೂಗಿದ್ದಾನೆ. ಇವತ್ತು ಗಾಂಧಿ ಎಂದರೆ ಯಾರು? ಶ್ರೀರಾಮ ಅಂದರೆ ಯಾರು ಎಂದು ಕೇಳುವ ಸನ್ನಿವೇಶ ಇದೆ ಎಂದು ಪರಮೇಶ್ವರ್ ಹೇಳುತ್ತಿದ್ದಂತೆ ಸಭಿಕರ ಮಧ್ಯದಿಂದ ವ್ಯಕ್ತಿಯೋರ್ವ ಜೈ ಶ್ರೀರಾಮ್ ಎಂದು ಕೂಗಿದ್ದಾನೆ. ತಕ್ಷಣ ಪ್ರತಿಕ್ರಯಿಸಿದ ಡಿಸಿಎಂ,”ಇಷ್ಟೊತ್ತು ಚೆನ್ನಾಗಿದ್ದೆಯಲ್ಲಪ್ಪ, ಏನಾಯ್ತು ನಿನಗೆ” ಎಂದು ಪ್ರಶ್ನಿಸಿದ್ದಾರೆ. ಪರಮೇಶ್ವರ್ ಮಾತಿಗೆ ಜನ ನಗೆಗಡಲಲ್ಲಿ ತೇಲಿದರು.

    ಹೆಚ್ಚು ಜನರಿಗೆ ಪ್ರಶಸ್ತಿ: ಮುಂದಿನ ತಿಂಗಳು ನಮ್ಮ ಮೇಯರ್ ಜಯಂತಿ ಆಚರಿಸುತ್ತಾರೆ. ಬಹುದೊಡ್ಡ ಜಯಂತಿ ಆಚರಣೆ ಮಾಡುತ್ತಾರೆ. ಅದ್ಧೂರಿ ಜಯಂತಿ ಆಚರಿಸಿ 500 ಪ್ರಶಸ್ತಿ ನೀಡುತ್ತಾರೆ. ಸಾಧಕರಿರುತ್ತಾರೆ, ಆದರೆ ಅಷ್ಟು ಮಂದಿಗೆ ಕೆಂಪೇಗೌಡ ಪ್ರಶಸ್ತಿ ನೀಡುವುದು ಸರಿಯೇ. ಈ ಬಾರಿ ಕಡಿಮೆ ಮಾಡಲು ಸೂಚಿಸಿದ್ದೇನೆ. ಏನು ಮಾಡುತ್ತಾರೋ ನೋಡೋಣ ಎಂದು ಹೇಳಿದರು.

    ಕೆಂಪೇಗೌಡರ ಹೆಸರಿಡಿ: ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಮಾತನಾಡಿ, ನಾವು ಪ್ರತಿ ಬಾರಿಯ ಜಯಂತಿಯ ವೇಳೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಆದರೆ, ಆ ಬೇಡಿಕೆಗಳು ಹಾಗೇ ಉಳಿಯುತ್ತವೆ ಈ ಬಾರಿ ಹಾಗಾಗಬಾರದು, ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಬೇಕು ಎಂದು ಮನವಿ ಮಾಡಿದರು.

    ಕುಮಾರಸ್ವಾಮಿ ಮೆಟ್ರೋ ಯೋಜನೆ ತಂದವರು, ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಬೇಕು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಪಠ್ಯ ಪುಸ್ತಕದಲ್ಲಿ ಕೆಂಪೇಗೌಡರ ಪಠ್ಯ ಅಳವಡಿಸಬೇಕು. ನಗರದಲ್ಲಿ ವಿಶ್ವವೇ ತಿರುಗಿನೋಡುವಂತಹ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು. ಎಷ್ಟೇ ನೋವು ಬಂದರೂ ಮುಖ್ಯಮಂತ್ರಿಗಳು ಕಾಳಜಿವಹಿಸಬೇಕು. ಡಿಕೆ ಶಿವಕುಮಾರ್ ಅವರು ಸಿಎಂ ಆರೋಗ್ಯದ ಕಾಳಜಿವಹಿಸಬೇಕು. ಕುಮಾರಸ್ವಾಮಿ ಅವರು ಹೃದಯ ವೈಶಾಲ್ಯತೆ ಇರುವ ವ್ಯಕ್ತಿ ಎಂದರು.

    ಇದೇ ವೇಳೆ, ಆಡಳಿತ ನಡೆಸುವವರ ಭಾಷೆ ಹುಷಾರಾಗಿರಬೇಕು, ಮತ್ತೊಬ್ಬರನ್ನು ನೋಯಿಸುವ ಭಾಷೆಯಾಗಬಾರದು, ಯಾವುದನ್ನೂ ಬಯಸದೆ ಕೆಲಸ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿಗೂ ಶ್ರೀಗಳು ಸಲಹೆ ನೀಡಿದರು.

  • 10 ಕೋಟಿ ವೆಚ್ಚದಲ್ಲಿ ಚಾರ್ಟರ್ಡ್ ಫ್ಲೈಟ್ ಹತ್ತಲು 150 ರಾಜಕಾರಣಿಗಳು ರೆಡಿ..!

    10 ಕೋಟಿ ವೆಚ್ಚದಲ್ಲಿ ಚಾರ್ಟರ್ಡ್ ಫ್ಲೈಟ್ ಹತ್ತಲು 150 ರಾಜಕಾರಣಿಗಳು ರೆಡಿ..!

    ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡ ದುಃಖ ಇನ್ನೂ ಮಾಸಿಲ್ಲ. ದೇಶದ ಜನತೆ ಇನನೂ ಆ ನೋವಿನಿಂದ ಹೊರಬಂದಿಲ್ಲ. ಆದ್ರೆ ಈ ಮಧ್ಯೆ 10 ಕೋಟಿ ವೆಚ್ಚದಲ್ಲಿ ಚಾರ್ಟರ್ಡ್ ಫ್ಲೈಟ್ ಹತ್ತಲು 150 ರಾಜಕಾರಣಿಗಳು ರೆಡಿಯಾಗಿದ್ದಾರೆ.

    ಹೌದು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ರಾಜಕಾರಣಿಗಳು ಟ್ರಿಪ್ ಹೋಗಲಿದ್ದಾರೆ. ಕೆಂಪೇಗೌಡ ಜಯಂತಿ ಪ್ರಯುಕ್ತ ದೋಸ್ತಿ ಪಡೆ ವಿದೇಶಕ್ಕೆ ಹೊರಟಿದ್ದು, ಕಾರ್ಯಕ್ರಮದ ಹೆಸರಲ್ಲಿ 3 ದಿನ 10 ಕೋಟಿ ವಚ್ಚದಲ್ಲಿ ಮಜಾ ಮಾಡಲಿದ್ದಾರೆ. ಸಿಂಗಾಪುರದಲ್ಲಿ ಫೆಬ್ರವರಿ 23ರಂದು ಕೆಂಪೇಗೌಡ ಜಯಂತಿ ನಡೆಯಲಿದೆ.

    ಆದ್ರೆ ಇದೀಗ ಯೋಧರನ್ನು ಕಳೆದುಕೊಂಡ ನೋವು ಒಂದೆಡೆಯಾದ್ರೆ, ರೈತರ ಸಾಲ ಮನ್ನಾ ಕೂಡ ಸಂಪೂರ್ಣವಾಗಿ ಆಗಿಲ್ಲ. ಈ ಮಧ್ಯೆ ಇದ್ಯಾವುದರ ಟೆನ್ಶನ್ ಇಲ್ಲವೆಂಬಂತೆ ಇಷ್ಟೊಂದು ಮಂದಿ ಹೋಗೋದು ಸರೀನಾ ಎಂದು ಸಾರ್ವಜನಿಕರು ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಿದ್ದಾರೆ.

    ಎರಡೂ ಪಕ್ಷದ ಶಾಸಕರು ಹಾಗೂ ಸಂಸದರು ಹೋಗುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಹಾಗೂ ಬಿಬಿಎಂಪಿ ಕೂಡ ಇದಕ್ಕೆ ಸಹಯೋಗ ನೀಡುತ್ತಿದೆ. ಜನಪ್ರತಿನಿಧಿಗಳಿಗೆ ಉಳಿದುಕೊಳ್ಳಲು ಐಷಾರಾಮಿ ಹೊಟೇಲ್ ಗಳನ್ನು ಕೂಡ ಬುಕ್ ಮಾಡಿಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಟಿವಿ ನಿರೂಪಕಿ ದಿವ್ಯಜ್ಯೋತಿಗೆ ಕೆಂಪೇಗೌಡ ಪ್ರಶಸ್ತಿ

    ಪಬ್ಲಿಕ್ ಟಿವಿ ನಿರೂಪಕಿ ದಿವ್ಯಜ್ಯೋತಿಗೆ ಕೆಂಪೇಗೌಡ ಪ್ರಶಸ್ತಿ

    ಬೆಂಗಳೂರು: ಪಬ್ಲಿಕ್ ಟಿವಿ ನಿರೂಪಕಿ ದಿವ್ಯಜ್ಯೋತಿ ಅವರಿಗೆ ಈ ಬಾರಿಯ ಕೆಂಪೇಗೌಡ ಪ್ರಶಸ್ತಿ ಸಿಕ್ಕಿದೆ. ಮಾಧ್ಯಮ ಕ್ಷೇತ್ರ ವಿಭಾಗದಲ್ಲಿ ದಿವ್ಯಜ್ಯೋತಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರು:
    ನಾಗರಾಜು, ರವಿಶಂಕರ್ ಭಟ್, ರಾಮಕೃಷ್ಣ, ಸುದರ್ಶನ್, ಶಿವರಾಮ್, ರಾಘವೇಂದ್ರ ಗಣಪತಿ, ಧ್ಯಾನ ಪೂಣಚ್ಚ, ರಾಮಚಂದ್ರ ಎನ್.ಎಸ್. ಚೇತನ್, ದಿವ್ಯ ಜ್ಯೋತಿ, ರವಿ ಗಾಣಿಗ, ಉಲ್ಲಾಸ್, ಎಂಸಿ.ಶೋಭ, ಪ್ರಸನ್ನ, ಸತೀಶ್ ಆಚಿಜಿನಪ್ಪ, ಸಾಹುಕಾರ್ ಎಸ್ ಚಂದ್ರಶೇಖರ್ ರಾವ್, ಹರಿಕುಮಾರ್, ಗೋವಿಂದ ಮೂರ್ತಿ, ವೆಂಕಟೇಶ್ ದಿನಕರನ್, ತಿನಗರ ವೇಲು, ಸಿದ್ಧರಾಜು ಸೋಸಲೆ, ತಾರನಹಳ್ಳಿ ಚಂದ್ರಶೇಖರ್, ವಿ.ವಿ.ಸತ್ಯನಾರಾಯಣ, ಸೋಮಣ್ಣ ಮಾಚಿಮಾದ, ಪ್ರಸನ್ ಕುಮಾರ್, ಬಾಲಕೃಷ್ಣ.ಯು, ಮಂಗಳಾ ನಾಗರಾಜು, ಎಂ.ಎಸ್.ಮಣಿ, ಬಿ.ಜಿ.ಶೇಖರ್ ಗೌಡ, ಶ್ರೀವತ್ಸ. ಬಿ.ಆರ್, ಮು.ವೆಂಕಟೇಶಯ್ಯ, ಕೆ.ಎಂ.ಜೆಕ್ರಿಯಾ, ಪ್ರವೀಣ್ ಕುಮಾರ್.

    ಒಟ್ಟು ಈ ಬಾರಿ 244 ಮಂದಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ಬಿಬಿಎಂಪಿ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪ್ರಧಾನಿ ಮೋದಿಗೆ ಎಚ್ಚರಿಕೆ, ಮುಖ್ಯಮಂತ್ರಿ ಪರ ನಂಜಾವಧೂತ ಶ್ರೀ ಬ್ಯಾಟಿಂಗ್

    ಪ್ರಧಾನಿ ಮೋದಿಗೆ ಎಚ್ಚರಿಕೆ, ಮುಖ್ಯಮಂತ್ರಿ ಪರ ನಂಜಾವಧೂತ ಶ್ರೀ ಬ್ಯಾಟಿಂಗ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮಿಶ್ರ ಸರ್ಕಾರಕ್ಕೆ ಸಹಕಾರ ನೀಡಬೇಕು. ಇಲ್ಲದಿದ್ದರೇ ಒಕ್ಕಲಿಗ ಸಮುದಾಯ ಪ್ರಧಾನಿಗಳ ವಿರುದ್ಧ ನಿಲ್ಲುತ್ತದೆ ಎಂದು ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

    ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಮುಖ್ಯಮಂತ್ರಿ ಸ್ಥಾನದಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಳಿಸುವುದಕ್ಕೆ ಪ್ರಯತ್ನ ಸಲ್ಲದು. ಸಿಎಂ ಕುಮಾರಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ನೀಡಬೇಕು ಎಂದು ಸ್ವಾಮೀಜಿ ಹೇಳಿದರು.

    ಮಾಜಿ ಸಿಎಂ ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದಕ್ಕೆ ನಂತರದ ಚುನಾವಣೆಯಲ್ಲಿ ಬಿಜೆಪಿ ಸೋಲಬೇಕಾಯಿತು. ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದರು. ಕೊಟ್ಟ ಭರವಸೆಯಂತೆ ಡಿ.ಕೆ.ಶಿವಕುಮಾರ್ ಅವರು ನಡೆದುಕೊಂಡಿದ್ದಾರೆ ಎಂದು ಶ್ರೀಗಳು ಹೇಳಿದರು.

    ನಂಜಾವಧೂತ ಸ್ವಾಮೀಜಿ ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಚಂದ್ರಶೇಖರ ಸ್ವಾಮೀಜಿ ಕೂಡ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಪರ ಬ್ಯಾಟ್ ಬೀಸಿದರು.

    https://youtu.be/40QtfNpVLEY

  • ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಗೆಯಿಂದ ಆಂಬುಲೆನ್ಸ್ ಗೆ ದಾರಿ ಸಿಗದೆ ಪರದಾಟ

    ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಗೆಯಿಂದ ಆಂಬುಲೆನ್ಸ್ ಗೆ ದಾರಿ ಸಿಗದೆ ಪರದಾಟ

    – ಕೈ ಕೈ ಮಿಲಾಯಿಸಿದ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು

    ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯ ಬಳಿ ಕೆಂಪೇಗೌಡ ಜಯಂತಿಯ ಮೆರವಣಿಗೆಯಿಂದಾಗಿ ಆಸ್ಪತ್ರೆಗೆ ಹೋಗಬೇಕಾಗಿದ್ದ ಆಂಬುಲೆನ್ಸ್ ಕೆಲಕಾಲ ದಾರಿ ಸಿಗದೆ ಪರದಾಡುವಂತಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭಾಗವಹಿಸಿದ್ದ ಮೆರವಣಿಗೆಯಲ್ಲಿ ಸಾವಿರಾರು ಜನರು ಹಾಗೂ ಟ್ರ್ಯಾಕ್ಟರ್‍ಗಳು ಇದ್ದ ಕಾರಣ ಆಂಬುಲೆನ್ಸ್‍ಗೆ ದಾರಿ ಸುಲಭವಾಗಲಿಲ್ಲ. ಆಂಬುಲೆನ್ಸ್ ನಲ್ಲಿ ತಾಯಿ ಮಗು ಆಸ್ಪತ್ರೆಗೆ ಹೋಗಲು ರಸ್ತೆಯಲ್ಲಿ ಕೆಲಕಾಲ ಪರದಾಡುವಂತಾಯಿತು. ನಂತರ ಪೋಲಿಸರು ಆಂಬುಲೆನ್ಸ್ ಗೆ ದಾರಿ ಮಾಡಿಕೊಡಲು ಸಾಕಷ್ಟು ಹರಸಾಹಸಪಟ್ಟರು.

    ಜೆಡಿಎಸ್-ಕಾಂಗ್ರೆಸ್ ಗಲಾಟೆ: ಕೇಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆದಿದೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಜಯಂತಿ ವೇಳೆ ವೇದಿಕೆ ಮುಂಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ತಳ್ಳಾಟ ನೂಕಾಟ ನಡೆಸಿ ಗಲಾಟೆ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಡಾ.ಕೆ.ಸುಧಾಕರ್ ಗನ್‍ಮ್ಯಾನ್ ತಿಮ್ಮಯ್ಯ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿ, ಜೆಡಿಎಸ್ ಕಾರ್ಯಕರ್ತರು ಗನ್ ಮ್ಯಾನ್ ಜೊತೆ ವಾಗ್ವಾದಕ್ಕಿಳಿದಾಗ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ತಕ್ಷಣ ಪೊಲೀಸರ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು.