Tag: ಕೆಂಪು ಕೋಟೆ

  • ದೆಹಲಿ ದಂಗೆಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದ ಪೊಲೀಸರು

    ದೆಹಲಿ ದಂಗೆಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದ ಪೊಲೀಸರು

    ನವದೆಹಲಿ: ಗಣರಾಜ್ಯೋತ್ಸವದ ದಿನ ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರದ ಕುರಿತು ದೆಹಲಿ ಪೊಲೀಸರು ದಂಗೆಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಕೆಂಪು ಕೋಟೆ ಮೇಲೆ ದಾಳಿ ನಡೆಸಿ, ಸಂಪೂರ್ಣವಾಗಿ ಧ್ವಂಸ ಮಾಡಲಾಗಿತ್ತು. ಈ ಹಿಂಸಾಚಾರದ ಕುರಿತು ಇದೀಗ ಪೊಲೀಸರು ದಂಗೆಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಈ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಮುಖದ ಚಹರೆಯ ಆಧಾರದ ಮೇಲೆ ಶಂಕಿತರನ್ನು ಗುರುತಿಸಿದ್ದಾರೆ. ಒಟ್ಟು 42 ಜನರನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‍ಎಫ್) ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, 20 ಜನರನ್ನು ವಾಟ್ಸಪ್ ವಿಡಿಯೋಗಳ ಮೂಲಕ ಪತ್ತೆ ಹಚ್ಚಲಾಗಿದೆ.

    ಶಂಕಿತರ ಪತ್ತೆಗೆ ಈಗಾಗಲೇ ತಂಡ ರಚಿಸಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲ ಶಂಕಿತರು ದೆಹಲಿ ಬಿಟ್ಟು ಪರಾರಿಯಾಗಿದ್ದು, ಇನ್ನೂ ಹಲವರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ದೆಹಲಿ ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಇನ್ನೂ ಹಲವರು ಮರಳಿ ತಮ್ಮ ಮೂಲ ಸ್ಥಳಗಳಿಗೆ ತೆರಳಿದ್ದಾರೆ, ಬಂಧಿತ ಇಬ್ಬರ ಪೈಕಿ ಒಬ್ಬನನ್ನು ಧರ್ಮೇಂದ್ರ ಸಿಂಗ್ ಹರ್ಮಾನ್ ಎಂದು ಗುರುತಿಸಲಾಗಿದೆ. ಹಿಂಸಾಚಾರದ ವಿಡಿಯೋ ಆಧರಿಸಿ ಈ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದರಲ್ಲಿ ಧರ್ಮೇಂದ್ರ ಸಿಂಗ್ ಹರ್ಮಾನ್ ಪಾತ್ರ ಸಹ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜನವರಿ 26ರ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ವೇಳೆ ಸಾವಿರಾರು ಜನ ದೆಹಲಿಯ ಕೆಂಪು ಕೋಟೆಯನ್ನು ಧ್ವಂಸ ಮಾಡಿದ್ದು, ಪೀಠೋಪಕರಣಗಳನ್ನು ಸಂಪೂರ್ಣ ನಾಶ ಮಾಡಿದ್ದಾರೆ. ಅಲ್ಲದೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿ ಉದ್ಧಟತನ ಮೆರೆದಿದ್ದಾರೆ. ಪೊಲೀಸರು ಈ ವರೆಗೆ 124 ಜನರನ್ನು ಬಂಧಿಸಿದ್ದು, 44 ಎಫ್‍ಐಆರ್‍ಗಳನ್ನು ದಾಖಲಿಸಿದ್ದಾರೆ. ಅಲ್ಲದೆ ವಿವಿಧ ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ದೆಹಲಿಯಲ್ಲಿ ಪೊಲೀಸರನ್ನು ಅಟ್ಟಾಡಿಸಿದ ಉದ್ರಿಕ್ತರು – 10 ಅಡಿ ಆಳದ ಕೋಟೆಯಿಂದ ಜಿಗಿದು ಬಚಾವ್

    ದೆಹಲಿಯಲ್ಲಿ ಪೊಲೀಸರನ್ನು ಅಟ್ಟಾಡಿಸಿದ ಉದ್ರಿಕ್ತರು – 10 ಅಡಿ ಆಳದ ಕೋಟೆಯಿಂದ ಜಿಗಿದು ಬಚಾವ್

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ಕಂಡು ಕೇಳರಿಯದ ಹಿಂಸಾಚಾರ ನಡೆಯಿತು.

    ಕೆಂಪುಕೊಟೆ ಮೇಲೆ ಕೇವಲ ರಾಷ್ಟ್ರೀಯ ಧ್ವಜವನ್ನು ಹಾರಿಸಬೇಕೆಂಬ ನಿಯಮವಿದೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗಿತ್ತು. ಆದರೆ ರೈತರ ವೇಷದಲ್ಲಿದ್ದ ಕೆಲ ಸಮಾಜಘಾತಕರು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪೊಲೀಸ್ ಭದ್ರತೆ ಬೇಧಿಸಿ ಕೆಂಪುಕೋಟೆಗೆ ಲಗ್ಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಪ್ರಧಾನಿ ಹಾರಿಸುವ ರಾಷ್ಟ್ರಧ್ವಜದ ಪಕ್ಕದಲ್ಲೇ ಇರುವ ಎಡಭಾಗದ ಖಾಲಿ ಸ್ಥಂಭದಲ್ಲಿ ರೈತ ಧ್ವಜದ ಜೊತೆಗೆ ಸಿಖ್(ನಿಶಾನ್ ಸಾಹೀಬ್) ಧ್ವಜವನ್ನು ಹಾರಿಸಲಾಗಿದೆ. ಅಲ್ಲದೇ ಭಾರತದ ತ್ರಿವರ್ಣ ಧ್ವಜವನ್ನು ನೀಡಿದ್ರೆ, ಅದನ್ನು ದೇಶದ್ರೋಹಿಯೊಬ್ಬ ಕೆಳೆಗೆಸೆದು ಅಪಮಾನ ಕೂಡ ಮಾಡಿದ್ದಾನೆ.

    ಇನ್ನು ಕೆಂಪುಕೋಟೆ ಬಳಿ ಪೊಲೀಸರ ಮೇಲೆ ರೈತರ ಅಟ್ಯಾಕ್ ಮಾಡಿದ್ದಾರೆ. ಈ ದಾಳಿ ಬೆಚ್ಚಿಬೀಳಿಸುವಂತಿದೆ. ಪೊಲೀಸರ ಮೇಲೆಯೇ ದೊಣ್ಣೆ, ಕೋಲುಗಳಿಂದ ಪ್ರತಿಭಟನಾಕಾರರು ಬೀಸಿದ್ದಾರೆ. ಒಟ್ಟಿನಲ್ಲಿ ಉದ್ರಿಕ್ತರು ಪೊಲೀಸರನ್ನೇ ಅಟ್ಟಾಡಿಸಿ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಪೊಲೀಸರು ಎಲ್ಲೂ ತಪ್ಪಿಸಿಕೊಳ್ಳದಂತೆ ಪ್ರತಿಭಟನಾಕಾರರು ಲಾಕ್ ಮಾಡಿದ್ದಾರೆ. ಹೀಗಾಗಿ ಉದ್ರಿಕ್ತರಿಂದ ತಪ್ಪಿಸಿಕೊಳ್ಳಲು ಪೊಲೀಸರು 8-10 ಅಡಿ ಎತ್ತರದ ಗೋಡೆಯಿಂದ ಜಿಗಿದಿದ್ದಾರೆ.

    ನಿಹಾಂಗ್ ಸಿಖ್ ಪಡೆಯ ಸದಸ್ಯರು ರಾಜಾರೋಷವಾಗಿ ಕೆಂಪುಕೋಟೆ ಮುಂದೆ ತಲ್ವಾರ್ ಝಳಪಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಕೆಂಪುಕೋಟೆ ಮೇಲೆ ಇಂತಹ ಸನ್ನಿವೇಶ ಕಂಡು ಬಂದಿರಲಿಲ್ಲ. ಇನ್ನು ಪ್ರತಿಭಟನಾಕಾರರ ಪೈಕಿ ಒಬ್ಬನ ಕೈಯಲ್ಲಿ ಖಲೀಸ್ತಾನ್ ಅಂತ ಬರೆದಿರೋ ಕಡಗ ಕೂಡ ಕಂಡು ಬಂದಿದೆ. ಹೀಗಾಗಿ ರೈತರ ಹೋರಾಟದ ಹಿಂದೆ ಖಲಿಸ್ತಾನ್ ಪ್ರತ್ಯೇಕತಾವಾದಿಗಳ ಪಾತ್ರವಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದನ್ನು ಗಮನಿಸಿದ್ರೆ ರೈತ ಹೋರಾಟದ ಮೇಲೆ ಕಿಸಾನ್ ಯೂನಿಯನ್ ಹಿಡಿತ ಕಳೆದುಕೊಂಡಿದ್ಯಾ ಎಂಬ ಪ್ರಶ್ನೆ ಕೂಡ ಎದ್ದಿದೆ. ಇನ್ನು ಕೇಂದ್ರ ಸರ್ಕಾರ ಘಟನಾವಳಿಗಳನ್ನು ಗಂಭೀರವಾಗಿ ಪರಿಗಣಿಸಿದೆ. ಅಮಿತ್ ಷಾ ನೇತೃತ್ವದಲ್ಲಿ ತುರ್ತು ಸಭೆ ಕೂಡ ನಡೆಸಲಾಗಿದೆ.

  • ಶಾಂತವಾಗಿ ನಡೆಯಬೇಕಿದ್ದ ರೈತರ ಪ್ರತಿಭಟನೆ ಘರ್ಷಣೆಗೆ ತಿರುಗಿದ್ದು ಹೇಗೆ?

    ಶಾಂತವಾಗಿ ನಡೆಯಬೇಕಿದ್ದ ರೈತರ ಪ್ರತಿಭಟನೆ ಘರ್ಷಣೆಗೆ ತಿರುಗಿದ್ದು ಹೇಗೆ?

    ನವದೆಹಲಿ: ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ದೆಹಲಿ ಹೊರ ವರ್ತುಲ ರಸ್ತೆಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದರು. ಹೀಗಾಗಿ ರಾಜಪಥದ ಪರೇಡ್‌ ಬಳಿಕ ರೈತರು ಟ್ರ್ಯಾಕ್ಟರ್‌ ಪರೇಡ್‌ ನಡೆಸುವುದಾಗಿ ಮೊದಲೇ ತಿಳಿಸಿದ್ದರು. ರೈತರ ಪ್ರತಿಭಟನೆ ಶಾಂತವಾಗಿ ನಡೆಯಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ ಶಾಂತವಾಗಿ ನಡೆಯಬೇಕಿದ್ದ ಪ್ರತಿಭಟನೆ ಇಂದು ದೆಹಲಿಯಲ್ಲಿ ದಾಂಧಲೆ ಎಬ್ಬಿಸಿ ಆಸ್ತಿ, ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ.

    ರಾಜಪಥ್ ಪರೇಡ್ ಅಂತ್ಯವಾಗದ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಲು ರೈತರು ಪ್ರಯತ್ನ ನಡೆಸಿದರು. ಆದರೆ ಪೊಲೀಸರು ಅನುಮತಿ ನೀಡಿರಲಿಲ್ಲ. ಬೆಳಗ್ಗೆ 11:30ರ ವೇಳೆ ಉದ್ವಿಗ್ನಗೊಂಡ ರೈತರ ಕ್ರೇನ್‌ ಗಾಜೀಪುರ್ ಬಳಿ ಹಾಕಿದ ಬ್ಯಾರಿಕೇಡ್ ಒಡೆಯಿತು. ಇದಾದ ಬಳಿಕ ಟ್ರ್ಯಾಕ್ಟರ್‌ ಪರೇಡ್‌ ನಡೆಸಲು ಪೊಲೀಸರು ಅನುಮತಿ ನೀಡಿದರು.

    ಸಿಂಘು, ಟಿಕ್ರಿ, ಘಾಜಿಪುರ, ಬುರಾರಿ ಗಡಿಗಳಿಂದ ಏಕಕಾಲದಲ್ಲಿ ರೈತರು ದೆಹಲಿಯತ್ತ ಮುಖ ಮಾಡಿದರು. ಆದರೆ ಹೆದ್ದಾರಿಯಲ್ಲಿ ಹಾಕಿದ್ದ ಬ್ಯಾರಿಕೇಡ್, ಕಂಟೈನರ್, ಬಸ್‍ಗಳನ್ನು ಪಕ್ಕಕ್ಕೇ ತಳ್ಳಿದ ರೈತರು ಮುನ್ನುಗ್ಗಿದರು.

    ಹಾಪುರ್ ಬಳಿಕ ಅಕ್ಷರಧಾಮನಿಂದ ಯೂಟರ್ನ್ ಪಡೆದು ಪ್ರತಿಭಟನೆ ಗಾಜೀಪುರಕ್ಕೆ ವಾಪಸ್ ತೆರಳಬೇಕಿತ್ತು. ಆದರೆ ಅಕ್ಷರಧಾಮ ಬಳಿ ಹಾಕಿ ಎಲ್ಲ ಅಡೆತಡೆಗಳನ್ನು ಕ್ರಾಸ್ ಮಾಡಿ ಹಳೆ ದೆಹಲಿಯತ್ತ ಟ್ರ್ಯಾಕ್ಟರ್‌ಗಳು ನುಗ್ಗಿತ್ತು. ರಾಷ್ಟ್ರೀಯ ಹೆದ್ದಾರಿ ಮೂಲಕ ದೆಹಲಿಯ ಐಟಿಓ ಪ್ರದೇಶವನ್ನು ಪ್ರತಿಭಟನಕಾರರು ಪ್ರವೇಶ ಮಾಡಿದರು. ಇದಾದ ಬಳಿಕ ನೇರ ಸುಮಾರು 3 ಕಿ.ಮೀ. ದೂರದಲ್ಲಿರುವ ಕೆಂಪು ಕೋಟೆಗೆ ಲಗ್ಗೆ ಇಟ್ಟರು. ಈ ವೇಳೆ ಪೊಲೀಸರ ಮೇಲೆ ಟ್ರ್ಯಾಕ್ಟರ್‌ ಗುದ್ದಿಸಲು ಮುಂದಾಗಿದ್ದಾರೆ. ಟ್ರ್ಯಾಕ್ಟರ್‌ ಮುಂದಕ್ಕೆ ಬರುತ್ತಿರುವುದನ್ನು ನೋಡಿ ಪೊಲೀಸರು ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

    ಕೆಂಪು ಕೋಟೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ರೈತ ಸಂಘಟನೆ ಧ್ವಜ ಹಾರಿಸಿದರು. ಬಳಿಕ ಗುಮ್ಮಟದ ಮೇಲೆ ನುಗ್ಗಿ ಸಿಖ್‌ ಧ್ವಜ ಹಾರಿಸಿ ವಿಕೃತಿ ಮೆರೆದರು. ಮಧ್ಯಾಹ್ನ 2.30 ರ ವೇಳೆಗೆ ಮತ್ತೆ ಐಟಿಓ ಬಳಿ ಪ್ರತಿಭಟನಾಕಾರರು ಪೊಲೀಸರ ನಡುವೆ ಘರ್ಷಣೆ ಜೋರಾಯ್ತು. ಈ ಘರ್ಷಣೆಯಿಂದ ಇಡೀ ದೆಹಲಿ ತತ್ತರಿಸಿ ಹೋಯ್ತು.

    ರೈತ ದಂಗೆಯಲ್ಲಿ ಪೊಲೀಸರು ಸೇರಿದಂತೆ ನೂರಾರು ಮಂದಿ ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದೆಹಲಿಯಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಕೇಂದ್ರ ಗೃಹ ಸಚಿವಾಲಯ ಬಂದ್ ಮಾಡಿದೆ.

    ದೆಹಲಿ ಪೊಲೀಸರು ಪ್ರತಿಕ್ರಿಯಿಸಿ, ನಿಗದಿತ ಅವಧಿಗಿಂತ ಮೊದಲೇ ಮೆರವಣಿಗೆ ಆರಂಭಿಸಿದ್ದೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.

    ಪೊಲೀಸರು ಹತ್ತಾರು ಕಡೆ, ಹತ್ತಾರು ಬಾರಿ ಲಾಠಿ ಬೀಸಿ, ಟಿಯರ್ ಗ್ಯಾಸ್ ಸಿಡಿಸಿ, ಜಲ ಫಿರಂಗಿ ಪ್ರಯೋಗಿಸಿದರೂ ರೈತರ ಕಿಚ್ಚನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ನಿಗದಿತ ಮಾರ್ಗ ಬಿಟ್ಟು ಸಿಕ್ಕ ಸಿಕ್ಕ ಕಡೆ ಮುನ್ನುಗ್ಗಿದ ರೈತರು ಪೊಲೀಸ್ ಷರತ್ತು ಉಲ್ಲಂಘಿಸಿದ್ದೂ ಮಾತ್ರವಲ್ಲ ಕೆಲವು ಕಡೆ ಪೊಲೀಸರನ್ನೇ ಅಟ್ಟಾಡಿಸಿ ಕಲ್ಲು ತೂರಿದ್ದಾರೆ.

    ಹೆಚ್ಚುವರಿ ಪಡೆಗಳನ್ನು ರಸ್ತೆಗಿಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಆದಾಯ ತೆರಿಗೆ ಕಚೇರಿ ಇರುವ ಪ್ರದೇಶ, ಅಕ್ಷರಧಾಮ್ ಪ್ರಾಂತ್ಯಗಳು ರಣರಂಗವನ್ನು ನೆನಪಿಸುವಂತಿದ್ದವು.

  • ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ – ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

    ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ – ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

    ನವದೆಹಲಿ: ಇಂದು 74 ಸ್ವಾತಂತ್ರ್ಯ ದಿನಾಚರಣೆ. ಕೊರೊನಾ ಭೀತಿ ನಡುವೆ ಮುನ್ನೆಚ್ಚರಿಕೆ ವಹಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರು ಧ್ವಜಾರೋಹಣ ಮಾಡಿದ್ದಾರೆ.

    ಈ ಬಾರಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಕೆಂಪುಕೋಟೆಯನ್ನು ಮದುವಣಗಿತ್ತಿಯಂತೆ ಶೃಂಗಾರ ಮಾಡಲಾಗಿದೆ. ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಮಹಾತ್ಮ ಗಾಂಧಿ ಸಮಾಧಿ ರಾಜ್‍ಘಾಟ್‍ಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ನಂತರ ಕೆಂಪು ಕೋಟೆಯ ಮುಖ್ಯ ದ್ವಾರಕ್ಕೆ ಆಗಮಿಸುತ್ತಿದ್ದಂತೆ ಮೂರು ಸೇನೆಯಿಂದ ಮೋದಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ನಂತರ ಮೋದಿ ಧ್ವಜಾರೋಹಣ ಮಾಡಿದರು.

    ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿ ಭದ್ರತೆ ವಹಿಸಲಾಗಿತ್ತು. ಎನ್‍ಎಸ್‍ಜಿ, ಎಸ್ಪಿಜಿ, ಸಿಆರ್‌ಪಿಎಫ್, ಬಿಎಸ್‍ಎಫ್, ದೆಹಲಿ ಪೊಲಿಸ್ ಸೇರಿದಂತೆ 4,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಅಲ್ಲದೇ 30ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಬಾರಿ ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಇಲ್ಲ. ಕೇವಲ ಮುಖ್ಯ ಅಥಿತಿಗಳಿಗೆ ಕುಟುಂಬಸ್ಥರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರದಡಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

  • ಪಾರ್ಕಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ – ವಿರೋಧಿಸಿದ್ದಕ್ಕೆ ಕಲ್ಲಿನಿಂದ ಹೊಡೆದ

    ಪಾರ್ಕಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ – ವಿರೋಧಿಸಿದ್ದಕ್ಕೆ ಕಲ್ಲಿನಿಂದ ಹೊಡೆದ

    – ಪರಿಚಯಸ್ಥನಿಂದ 23ರ ಸಂತ್ರಸ್ತೆ ಮೇಲೆ ರೇಪ್
    – ಕೆಂಪು ಕೋಟೆ ಬಳಿಯ ಪಾರ್ಕಿನಲ್ಲಿ ಕೃತ್ಯ

    ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿಯಲ್ಲಿರುವ ಉದ್ಯಾನವನದಲ್ಲಿ 23 ವರ್ಷದ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಶನಿವಾರ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರು ಪರಿಯಚಯಸ್ಥರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಶನಿವಾರ ರಾತ್ರಿ ಪಾರ್ಕಿನಲ್ಲಿ ತಲೆಯಿಂದ ರಕ್ತಸ್ರಾವವಾಗಿ ಬಿದ್ದಿದ್ದ ಮಹಿಳೆಯನ್ನು ವ್ಯಕ್ತಿಯೊಬ್ಬ ಗುರುತಿಸಿದ್ದಾರೆ. ನಂತರ ಆ ವ್ಯಕ್ತಿಯು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ನಡೆದ ಘಟನೆಯ ಬಗ್ಗೆ ಸಂತ್ರಸ್ತೆ ವೈದ್ಯರಿಗೆ ತಿಳಿಸಿದ್ದಾರೆ.

    ಉದ್ಯಾನವನದಲ್ಲಿ ಪರಿಚಯ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಕ್ಕೆ ನಾನು ವಿರೋಧಿಸಿದಾಗ ನನಗೆ ಕಲ್ಲಿನಿಂದ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಆ ವ್ಯಕ್ತಿ ತನ್ನ ಮಗಳನ್ನು ಅಪಹರಿಸಿದ್ದನು. ನಂತರ ಪೊಲೀಸರು ಹುಡುಕಾಟ ಮಾಡಿದಾಗ ಮಗಳು ಪತ್ತೆಯಾಗಿದ್ದಾಳೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

    ಈ ಘಟನೆ ಶನಿವಾರ ನಡೆದಿದೆ. ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿ ಮೋನಿಕಾ ಭರದ್ವಾಜ್ ತಿಳಿಸಿದ್ದಾರೆ.

  • ಆಗಸ್ಟ್ 15ರ ಸಂಭ್ರಮಕ್ಕೆ ದೆಹಲಿಯ ಕೆಂಪುಕೋಟೆ ಸಜ್ಜು- 2,500 ಲ್ಯಾಂಪ್ಸ್ ಗಳನ್ನು ಬಳಸಿ ದೀಪಾಲಂಕಾರ

    ಆಗಸ್ಟ್ 15ರ ಸಂಭ್ರಮಕ್ಕೆ ದೆಹಲಿಯ ಕೆಂಪುಕೋಟೆ ಸಜ್ಜು- 2,500 ಲ್ಯಾಂಪ್ಸ್ ಗಳನ್ನು ಬಳಸಿ ದೀಪಾಲಂಕಾರ

    ನವೆದೆಹಲಿ: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ದೆಹಲಿಯ ಕೆಂಪುಕೋಟೆ ಸಜ್ಜಾಗಿದ್ದು, ಶುಕ್ರವಾರ ರಾತ್ರಿ ಪ್ರಾಯೋಗಿಕವಾಗಿ ನಡೆದ ಬೆಳಕಿನ ಸಂಭ್ರಮಕ್ಕೆ ಸಾಂಸ್ಕೃತಿಕ ರಾಜ್ಯ ಸಚಿವ ಮಹೇಶ್ ಶರ್ಮಾ ಸಾಕ್ಷಿಯಾದರು.

    17ನೇ ಶತಮಾನದ ಮೊಗಲ್ ಸಾಮ್ರಾಜ್ಯದಲ್ಲಿ ನಿರ್ಮಾಣವಾದ ಕೆಂಪುಕೋಟೆಗೆ 2,500 ಲ್ಯಾಂಪ್ಸ್ ಗಳನ್ನು ಬಳಸಿ ದೀಪಾಲಂಕಾರ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಪುರಾತತ್ವ ಇಲಾಖೆ ನೀಡಿರುವ ಮಾಹಿತಿ ಮೇರೆಗೆ 100ಕ್ಕೂ ಹೆಚ್ಚು ಸ್ಮಾರಕಗಳಿಗೆ ದೀಪಾಲಂಕಾರ ಮಾಡಲು ಉದ್ದೇಶಿಸಲಾಗಿದೆ.

    ಇದೇ ವೇಳೆ ಮಹೇಶ್ ಶರ್ಮಾ ಮಾತನಾಡಿ, ಇದು ಸ್ಥಳೀಯರು ಹೆಮ್ಮೆ ಪಡುವುದಕ್ಕೆ ಮಾತ್ರವಲ್ಲ ರಾತ್ರಿ ಪ್ರವಾಸೋದ್ಯಮವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸಲು ಸಹಾಯ ಮಾಡುತ್ತೇವೆ. ಈ ಎಲ್‍ಇಡಿ ದೀಪಾಲಂಕಾರಕ್ಕೆ 3 ಕೋಟಿ ವೆಚ್ಚದಲ್ಲಿ 2 ತಿಂಗಳ ಸಮಯವಕಾಶ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

    https://www.youtube.com/watch?v=hB-9ylPG44g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ದಾಲ್ಮಿಯಾ ಗ್ರೂಪ್ ತೆಕ್ಕೆಗೆ ಐತಿಹಾಸಿಕ ಕೆಂಪು ಕೋಟೆ – ಏನಿದು ನೋ ಪ್ರಾಫಿಟ್ ಯೋಜನೆ

    ದಾಲ್ಮಿಯಾ ಗ್ರೂಪ್ ತೆಕ್ಕೆಗೆ ಐತಿಹಾಸಿಕ ಕೆಂಪು ಕೋಟೆ – ಏನಿದು ನೋ ಪ್ರಾಫಿಟ್ ಯೋಜನೆ

    ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆಯನ್ನು ದಾಲ್ಮಿಯಾ ಭಾರತ್ ಗ್ರೂಪ್ 5 ವರ್ಷಗಳ ಕಾಲ ನಿರ್ವಹಣೆಯ ದತ್ತು ಪಡೆದುಕೊಂಡಿದೆ.

    ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆಯ ಪ್ರಾಚೀನ ಸ್ಮಾರಕಗಳ ದತ್ತು ಯೋಜನೆಯಡಿ 25 ಕೋಟಿ ರೂ. ನೀಡಿ ದಾಲ್ಮಿಯಾ ಗ್ರೂಪ್ ತನ್ನದಾಗಿಸಿಕೊಂಡಿದೆ.

    ಕಾಂಗ್ರೆಸ್ ಟೀಕೆ: ಸದ್ಯ ಕೇಂದ್ರ ಸರ್ಕಾರದ ಈ ನಡೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಭಾರತ ಸಾಂಸ್ಕೃತಿಕ ಸ್ಮಾರಕಗಳ ನಿರ್ವಹಣೆಯನ್ನು ಖಾಸಗಿ ಕಂಪೆನಿಗೆ ವಹಿಸಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರಶ್ನೆಯೊಂದನ್ನು ಜನರ ಮುಂದಿಟ್ಟಿದ್ದು, ಬಿಜೆಪಿ ಎಲ್ಲವನ್ನೂ ಖಾಸಗೀಕರಣಕ್ಕೆ ಒಳಪಡಿಸಲಿದೆ ಎಂದು ಆರೋಪಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮಹೇಶ್ ಶರ್ಮಾ, 2017ರ ವಿಶ್ವ ಪ್ರವಾಸೋದ್ಯಮದ ಭಾಗವಾಗಿ ನೋ ಪ್ರಾಫಿಟ್ ಯೋಜನೆ ರೂಪಿಸಿದ್ದು, ಸ್ವಯಂ ಆಗಿ ಐತಿಹಾಸಿಕ ಸ್ಥಳಗನ್ನು ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ. ಈ ಯೋಜನೆಯ ಅಂಗವಾಗಿ ಕೆಂಪು ಕೋಟೆ ನಿರ್ವಹಣೆ ಮಾಡುವ ಹೊಣೆ ದಾಲ್ಮಿಯಾ ಸಂಸ್ಥೆ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

    ನಿರ್ವಹಣೆ ಹೇಗೆ? ಪ್ರಾಚೀನ ಸ್ಮಾರಕ ದತ್ತು ಯೋಜನೆ ಪ್ರಕಾರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರ ಅನ್ವಯ ದಾಲ್ಮಿಯಾ ಸಂಸ್ಥೆ ಕೆಂಪುಕೋಟೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಿದೆ. ಅಲ್ಲದೇ ಈ ಸೌಲಭ್ಯ ಕಲ್ಪಿಸಲು ಶುಲ್ಕ ಪಡೆಯುವ ಹಕ್ಕನ್ನು ಸಂಸ್ಥೆ ಹೊಂದಿರುತ್ತದೆ. ಅದ್ರೆ ಈ ರೀತಿ ಸಂಗ್ರಹಿಸಿದ ಹಣವನ್ನು ಸ್ಮಾರಕ ನಿರ್ವಹಣೆಗಾಗಿಯೇ ಬಳಸಬೇಕು ಎಂಬ ಷರತ್ತು ಈ ಒಪ್ಪಂದದಲ್ಲಿ ವಿಧಿಸಲಾಗಿದೆ. ಇದರಿಂದ ಸಂಸ್ಥೆಗೆ ಯಾವುದೇ ಆರ್ಥಿಕ ಲಾಭ ಉಂಟಾಗುವುದಿಲ್ಲ. ಇದನ್ನೇ ನೋ ಪ್ರಾಫಿಟ್ ಯೋಜನೆ ಎಂದು ಕರೆಯಲಾಗಿದೆ.

    ಸ್ಮಾರಕಗಳನ್ನು ನೋಡಲು ಭೇಟಿ ನೀಡುವ ಪ್ರವಾಸಿಗರಿಗೆ ಬೇಕಾದ ಕುಡಿಯುವ ನೀರಿನ ಸೌಲಭ್ಯ, ಆಸನ ವ್ಯವಸ್ಥೆ, ಸ್ಮಾರಕ ಜಿರ್ಣೋದ್ಧಾರ, ಶೌಚಾಲಯ ಹಾಗೂ ಅವುಗಳ ನಿರ್ವಹಣೆ, ರಾತ್ರಿ ವೇಳೆ ವೀಕ್ಷಣೆಗಾಗಿ ವರ್ಣ ರಂಜಿತ ವಿದ್ಯುತ್ ಸೌಲಭ್ಯ, ದಾರಿಗಳ ನಿರ್ಮಾಣ, ಹೋಟೆಲ್ ಇತ್ಯಾದಿ ಸೌಲಭ್ಯಗಳನ್ನು ಸಂಸ್ಥೆ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತದೆ.

  • ಕಿರೀಟ ಹೆಲ್ಮೆಟ್ ಆಗಲ್ಲ: ಕಿರೀಟ ಹಾಕ್ಕೊಂಡು ಹ್ಯಾರ್ಲಿ ಡೇವಿಡ್‍ಸನ್ ಓಡಿಸಿದ ನಟ ಮುಖೇಶ್ ರಿಶಿಗೆ ದಂಡ

    ಕಿರೀಟ ಹೆಲ್ಮೆಟ್ ಆಗಲ್ಲ: ಕಿರೀಟ ಹಾಕ್ಕೊಂಡು ಹ್ಯಾರ್ಲಿ ಡೇವಿಡ್‍ಸನ್ ಓಡಿಸಿದ ನಟ ಮುಖೇಶ್ ರಿಶಿಗೆ ದಂಡ

    ನವದೆಹಲಿ: ಹೆಲ್ಮೆಟ್ ಧರಿಸದೇ ರಾವಣನ ವೇಷಭೂಷಣದಲ್ಲಿ ಹ್ಯಾರ್ಲಿ ಡೇವಿಡ್‍ಸನ್ ಬೈಕ್ ಚಾಲನೆ ಮಾಡಿದ ನಟ ಮುಖೇಶ್ ರಿಶಿಗೆ ದೆಹಲಿ ಪೊಲೀಸರು ದಂಡ ವಿಧಿಸಿದ್ದಾರೆ.

    ದೆಹಲಿ ರಾಮ್‍ಲೀಲಾದಲ್ಲಿ ರಾವಣನ ಪಾತ್ರ ನಿರ್ವಹಿಸಿದ ನಟ ಮುಖೇಶ್ ರಿಶಿ ಹೆಲ್ಮೆಟ್ ಬದಲು ಕಿರೀಟ ಧರಿಸಿ ಬೈಕ್ ಚಾಲನೆ ಮಾಡಿದ್ದಕ್ಕೆ ದೆಹಲಿ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ. ರಾವಣನ ಅವತಾರದಲ್ಲಿ ನಟ ರಿಶಿ ರಾಷ್ಟ್ರಪತಿ ಭವನದ ಮುಂದೆ ಹ್ಯಾರ್ಲಿ ಡವಿಡ್‍ಸನ್ ಬೈಕ್ ಚಾಲನೆ ಮಾಡುವ ವಿಡಿಯೋ ವೈರಲ್ ಆಗಿತ್ತು. ಇದರಿಂದ ಪೊಲೀಸರು ನಟನಿಗೆ ನೋಟೀಸ್ ನೀಡುವಂತೆ ಮಾಡಿದೆ.

    ಅಲ್ಲದೆ ಟ್ರಾಫಿಕ್ ಪೊಲೀಸರು ವಿಡಿಯೋ ಮಾಡಿ ತೋಡಾಪುರ್‍ನ ರೋಡ್ ಅಂಡ್ ಸೇಫ್ಟಿ ಸೆಲ್ ಮುಖ್ಯ ಕಚೇರಿಗೆ ಕಳಿಸಿದ್ದರು. ವಾಹನ ಮಾಲೀಕರನ್ನು ಪತ್ತೆ ಮಾಡಿದ ನಂತರ ಅವರ ವಾಹನ ನೋಂದಣಿ ಸಂಖ್ಯೆಗೆ ನೋಟಿಸ್ ನೀಡಿದ್ದೇವೆ. ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡಿದ್ದು, ಇದಕ್ಕೆ ದಂಡ ಹಾಕಿರುವುದಾಗಿ ತಿಳಿಸಿದ್ದೇವೆ ಎಂದು ಡಿಸಿಪಿ ದಿನೇಶ್ ಗುಪ್ತಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ನಟ ರಿಶಿ ದೆಹಲಿ ಟ್ರಾಫಿಕ್ ಪೊಲೀಸ್ ಮುಖ್ಯಕಚೇರಿಗೆ ಭೇಟಿ ನೀಡಿ 100 ರೂ. ದಂಡವನ್ನ ಪಾವತಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ತೋರಿಸಲೆಂದೇ ಈ ರೀತಿ ಮಾಡಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪ್ರತಿ ವರ್ಷ ದಸರಾ ಹಬ್ಬಕ್ಕೆ ಲವ ಕುಶ ಸಮಿತಿ ಕೆಂಪು ಕೋಟೆ ಮೈದಾನದಲ್ಲಿ ದೆಹಲಿ ರಾಮ್‍ಲೀಲಾ ಕಾರ್ಯಕ್ರಮವನ್ನ ಆಯೋಜಿಸುತ್ತದೆ. 1924ರಿಂದ ನಡೆಸಿಕೊಂಡು ಬಂದಿರುವ ಈ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಪ್ರಧಾನ ಮಂತ್ರಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸುತ್ತಾರೆ.

    61 ವರ್ಷದ ನಟ ರಿಶಿ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ಖಳನಟನ ಪಾತ್ರ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಾವಣನ ಪಾತ್ರ ಮಾಡಿದ್ದರು. ರಿಶಿ ಕನ್ನಡದಲ್ಲಿ ದರ್ಶನ್ ಅಭಿನಯದ ಭೂಪತಿ ಚಿತ್ರ ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.