Tag: ಕೆಂಡ ಸಿನಿಮಾ

  • ‘ಕೆಂಡ’ ಟ್ರೈಲರ್‌ನಲ್ಲಿ ಕಂಡು ಕೇಳರಿಯದ ಕಥೆಯ ಸುಳಿವು!

    ‘ಕೆಂಡ’ ಟ್ರೈಲರ್‌ನಲ್ಲಿ ಕಂಡು ಕೇಳರಿಯದ ಕಥೆಯ ಸುಳಿವು!

    ಹದೇವ್ ಕೆಲವಡಿ ನಿರ್ದೇಶನದ ‘ಕೆಂಡ’ (Kenda Film) ಚಿತ್ರ ಇದೇ ತಿಂಗಳ 26ರಂದು ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಚಿತ್ರ ಅಂತಾರಾಷ್ಟ್ರೀಯ ಸಿನಿಮಾ ಫೆಸ್ಟಿವಲ್‌ಗಳಲ್ಲಿ ಬಿಡುಗಡೆಗೊಂಡಿದೆ. ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಭಾರತದಲ್ಲಿ ಇಂಥಾ ಸಿನಿಮಾಗಳನ್ನೂ ರೂಪಿಸ್ತಾರಾ ಎಂಬಂಥಾ ಬೆರಗೊಂದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಂಡ ಪ್ರತಿಷ್ಠಾಪಿಸಿ ಬಿಟ್ಟಿದೆ. ಇಷ್ಟೆಲ್ಲ ಖುಷಿಯ ಪುಳಕಗಳೊಂದಿಗೆ ಚಿತ್ರತಂಡವೀಗ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಿದೆ. ಅಚ್ಚುಕಟ್ಟಾದ ಪತ್ರಿಕಾ ಗೋಷ್ಠಿಯ ಮೂಲಕ ಕೆಂಡದ ಟ್ರೈಲರ್ ಅನ್ನು ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್ ಲೋಕಾರ್ಪಣೆಗೊಳಿಸಿದ್ದಾರೆ. ಇದೇ ಹೊತ್ತಿನಲ್ಲಿ ಕೆಂಡದ ಬಗೆಗಿನ ಒಂದಷ್ಟು ಬೆರಗಿನ ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿದೆ.

    ಸೂಕ್ಷ್ಮ ಮನಃಸ್ಥಿತಿಯ ನಿರ್ದೇಶಕನ ಕೈಗೆ ಭೂಗತ ಜಗತ್ತಿನ ಕಥೆ ಸಿಕ್ಕರೆ, ಅಲ್ಲಿ ಬೇರೊಂದು ಆಯಾಮದ ದೃಷ್ಯಕಾವ್ಯ ರೂಪುಗೊಳ್ಳೋದು ಖಚಿತ. ಕೆಂಡದಲ್ಲಿರೋದೂ ಕೂಡಾ ಅಂಥಾದ್ದೇ ರೌಡಿಸಮ್ಮಿನ ಸುತ್ತ ಜರುಗುವ ಕಥನ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡೋ ಯುವಕನೋರ್ವ, ಪರಿಸ್ಥಿತಿಗಳ ಸೆಳವಿಗೆ ಸಿಕ್ಕು ಭೂಗತದ ತೆಕ್ಕೆಗೆ ಬೀಳುವ ಕಥೆ ಇಲ್ಲಿದೆ. ಹಾಗಂತ ಅದು ಸಿದ್ಧ ಸೂತ್ರಗಳ ಸುತ್ತ ಗಿರಕಿ ಹೊಡೆಯುವಂಥಾದ್ದಲ್ಲ. ಕೈಗೆ, ಮೈ ಮನಸಿಗೆ ಮೆತ್ತಿಕೊಂಡ ರಕ್ತದ ಕಲೆಗಳನ್ನ ಕಲಾತ್ಮಕವಾಗಿ ತೋರಿಸಲು ಸಾಧ್ಯವಾ? ಸುಡುವ ಕ್ರೌರ್ಯವನ್ನು ಸೂಕ್ಷ್ಮ ಸಂವೇದನೆಯ ಒಳಗಣ್ಣಿನಿಂದ ನೋಡಲು ಹೇಗೆ ಸಾಧ್ಯ? ಇದು ಸಿನಿಮಾಸಕ್ತರನ್ನು ಕಾಡುವ ಗೊಂದಲ ಬೆರೆತ ಅಚ್ಚರಿ. ಅಂಥಾ ಅಚ್ಚರಿಗಳೇ ಬೆರಗುಗೊಳ್ಳುವಂತೆ `ಕೆಂಡ’ ಚಿತ್ರ ಮೂಡಿ ಬಂದಿದೆ ಎಂಬ ಮುನ್ಸೂಚನೆ ಈ ಟ್ರೈಲರ್‌ನಲ್ಲಿ ಸ್ಪಷ್ಟವಾಗಿ ಸಿಕ್ಕಿಬಿಟ್ಟಿದೆ.

    ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ ಸಹದೇವ್ ಕೆಲವಡಿ, ನಿರ್ಮಾಪಕಿ ರೂಪಾ ರಾವ್ (Roopa Rao), ಸಂಗೀತ ನಿರ್ದೇಶಕ ರಿತ್ವಿಕ್ ಕಾಯ್ಕಿಣಿ, ರಂಗಭೂಮಿಯಿಂದ ಬಂದಿರುವ, ಈ ಚಿತ್ರದ ನಾಯಕ ಬಿ.ವಿ ಭರತ್, ಪ್ರಣವ್ ಶ್ರೀಧರ್, ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್, ಸತೀಶ್, ಫೃಥ್ವಿ, ದೀಪ್ತಿ ಮುಂತಾದವರು ಪಾಲ್ಗೊಂಡಿದ್ದರು. ಮೊದಲಿಗೆ ಮಾತಾಡಿದ ರೂಪಾ ರಾವ್ ಕೆಂಡ ಚಿತ್ರ ರೂಪುಗೊಂಡ ಬಗ್ಗೆ, ಅದರ ಕಥೆಯ ಬಗ್ಗೆ ಹಾಗೂ ಅಮೇಯುಕ್ತಿ ಸ್ಟುಡಿಯೋಸ್ ಹುಟ್ಟಿನ ವಿಚಾರವಾಗಿ ಒಂದಷ್ಟು ವಿಚಾರಗಳನ್ನ ಹಂಚಿಕೊಂಡರು. ನಿರ್ದೇಶಕ ಸಹದೇವ್ ಕೆಲವಡಿ ಕೆಂಡ ರೂಪುಗೊಂಡಿದ್ದರ ಹಿಂಚುಮುಂಚಿನ ರಸವತ್ತಾದ ವಿವರಗಳನ್ನು ಹಂಚಿಕೊಂಡರು.

    ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಕೆಂಡ’ ಶೀಘ್ರದಲ್ಲೇ ತೆರೆಗಾಣಲಿದೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಕೆಂಡವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ, ರೇಖಾ ಕೂಡ್ಲಿಗಿ, ಪ್ರಭಾಕರ್ ಜೋಶಿ ಮುಂತಾದವರ ತಾರಾಗಣವಿದೆ.

  • ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ ‘ಕೆಂಡ’ ಸಿನಿಮಾ

    ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ ‘ಕೆಂಡ’ ಸಿನಿಮಾ

    ಕಂಟೆಂಟು ಗಟ್ಟಿಯಾಗಿದ್ದರೆ ಯಾವುದೇ ಹೈಪು, ಪ್ರಚಾರದ ಪಟ್ಟುಗಳಿಲ್ಲದೆಯೇ ಚಿತ್ರವೊಂದು ಸದ್ದು ಮಾಡಬಲ್ಲದು. ಈ ಮಾತಿಗೆ ಉದಾಹರಣೆಯಂತೆ ಅನೇಕ ಚಿತ್ರಗಳು ಪ್ರೇಕ್ಷಕರನ್ನು ಸೆಳೆದಿವೆ. ದೊಡ್ಡ ಮಟ್ಟದಲ್ಲಿ ಗೆದ್ದಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಎಲ್ಲ ಲಕ್ಷಣಗಳಿರುವ ಚಿತ್ರ ‘ಕೆಂಡ’ (Kenda Film) ಸಿನಿಮಾ. ಸಹದೇವ್ ಕೆಲವಡಿ ನಿರ್ದೇಶನದ ಈ ಚಿತ್ರ ಹೆಜ್ಜೆ ಹೆಜ್ಜೆಗೂ ಸುದ್ದಿ ಕೇಂದ್ರದಲ್ಲಿದೆ. ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಇದೀಗ ಮಾರ್ಟಿನ್ ಸ್ಕಾರ್ಸೆಸೆ, ಆಂಗ್ ಲೀ, ಜಿಮ್ ಜರ್ಮುಷ್, ಸ್ಟೈಕ್‌ಲೀ ಕೋಯೆನ್ ಬ್ರದರ್ಸ್ ಮುಂತಾದ ಘಟಾನುಘಟಿ ನಿರ್ದೇಶಕರಿಗೆ ತರಬೇತಿ ಕೊಟ್ಟಿರುವ ನ್ಯೂಯಾರ್ಕ್‌ನ ಟಿಶ್ ಸ್ಕೂಲ್ ಆಫ್ ಆರ್ಟ್‌ನಲ್ಲಿ ಜೂನ್ 28ರಂದು ಪ್ರದರ್ಶನಗೊಳ್ಳಲಿದೆ. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ಸಲ್ಮಾನ್ ಖಾನ್, ರಶ್ಮಿಕಾ ನಟನೆಯ ಸಿನಿಮಾ ಮುಹೂರ್ತ

    ಕನ್ನಡದಲ್ಲಿ ತಯಾರುಗೊಂಡಿದ್ದ ಈ ಚಿತ್ರವೀಗ ತಾನೇತಾನಾಗಿ ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. ಕನ್ನಡದ `ತಿಥಿ’ ಸಿನಿಮಾದ ಹಾದಿಯಲ್ಲಿ ಮುಂದುವರೆದು, ಜೂನ್ 29ರಂದು ಸ್ವಿಜರ್‌ಲ್ಯಾಂಡಿನಲ್ಲಿಯೂ ಕೆಂಡ ಪ್ರದರ್ಶನಗೊಳ್ಳಲಿದೆ. ಇದೇನು ಸಲೀಸಾದ ಹಾದಿಯಲ್ಲ. ತನ್ನ ಕಂಟೆಂಟಿನ ಅಸಲೀ ಕಸುವಿನ ಕಾರಣದಿಂದಲೇ ಅದೆಲ್ಲ ಸಾಧ್ಯವಾಗಿದೆ. ನ್ಯೂಯಾರ್ಕ್‌ನ ಟಿಶ್ ಸ್ಕೂಲ್ ಆಫ್ ಆರ್ಟ್‌ನಲ್ಲಿ ಪ್ರದರ್ಶನ ಕಂಡ ಮೊಟ್ಟ ಮೊದಲ ಕನ್ನಡ ಚಿತ್ರವಾಗಿಯೂ ‘ಕೆಂಡ’ ದಾಖಲೆ ಬರೆದಿದೆ. ಈ ಹಿಂದೆ ದಾದಾ ಸಾಹೇಬ್ ಫಾಲ್ಕೆ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜ್ಯೂರಿ ಅವಾರ್ಡ್ ಅನ್ನು ಪಡೆದುಕೊಂಡಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಾಣುವ ಮೂಲಕ ಮತ್ತೊಂದು ದಾಖಲೆ ಕೆಂಡದ ಖಾತೆಗೆ ಜಮೆಯಾಗಿದೆ.

    ಈ ಹಿಂದೆ ‘ಗಂಟುಮೂಟೆ’ ಎಂಬ ಚಿತ್ರ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ರೂಪಾ ರಾವ್ ‘ಕೆಂಡ’ವನ್ನು ನಿರ್ಮಾಣ ಮಾಡಿದ್ದಾರೆ. ಬದುಕಿಗೆ ಹತ್ತಿರಾದ, ಬರಿಗಣ್ಣಿಗೆ ನಿಲುಕದ ಸೂಕ್ಷ್ಮ ಕಥಾನಕದೊಂದಿಗೆ ಸಹದೇವ್ ಕೆಲವಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ ಕನ್ನಡದ ಕೆಂಡದ ಹವಾ ವಿಶ್ವಾದ್ಯಂತ ಹಬ್ಬಿಕೊಂಡಿದೆ. ಈ ಎಲ್ಲ ಕಾರಣಗಳಿಂದಾಗಿ ಕೆಂಡ ವಿಶಿಷ್ಟ ಚಿತ್ರವಾಗಿ ಪ್ರೇಕ್ಷಕರನ್ನು ಬಹುವಾಗಿ ಸೆಳೆಯುತ್ತಿದೆ.

    ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ (Roopa Rao) ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಂಡ ಶೀಘ್ರದಲ್ಲೇ ತೆರೆಗಾಣಲಿದೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಕೆಂಡವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದವರ ತಾರಾಗಣವಿದೆ.

  • ‘ಗ್ಯಾಂಗ್‌ಸ್ಟರ್’ ಸಿನಿಮಾ ನಿರ್ಮಿಸಿದ ಮೊದಲ ಮಹಿಳಾ ನಿರ್ಮಾಪಕಿ ರೂಪಾ ರಾವ್!

    ‘ಗ್ಯಾಂಗ್‌ಸ್ಟರ್’ ಸಿನಿಮಾ ನಿರ್ಮಿಸಿದ ಮೊದಲ ಮಹಿಳಾ ನಿರ್ಮಾಪಕಿ ರೂಪಾ ರಾವ್!

    ರೂಪಾ ರಾವ್ ಈ ಹೆಸರು ನಿಮ್ಮೆಲ್ಲರಿಗೂ ಚಿರಪರಿಚಿತವೇ. ಮೂಲತಃ ಬೆಂಗಳೂರಿನವರಾದ ರೂಪಾ ರಾವ್ ಮಹಿಳಾ ನಿರ್ದೇಶಕಿಯಾಗಿ ಗುರ್ತಿಸಿಕೊಂಡಿದ್ದಾರೆ. ಇಂಗ್ಲೀಷ್, ಹಿಂದಿ, ಜರ್ಮನ್ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಶಾರ್ಟ್ಫಿಲ್ಮ್, ಡಾಕ್ಯೂಮೆಂಟರಿ, ವೆಬ್ ಸೀರೀಸ್ ಡೈರೆಕ್ಟ್ ಮಾಡಿ ಹೆಸರು ಮಾಡಿದ್ದಾರೆ. ಈ ಹಿಂದೆ ಕನ್ನಡದಲ್ಲಿ ‘ಗಂಟುಮೂಟೆ’ ಹೆಸರಲ್ಲೊಂದು ಸಿನಿಮಾ ಮಾಡಿದ್ದರು. ವಿಭಿನ್ನ ಕಥಾಹಂದರವುಳ್ಳ ಈ ಸಿನಿಮಾ ಕನ್ನಡಿಗರ ಮನಸೂರೆಗೊಂಡು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಲ್ಲಿ ಸ್ಪರ್ಧೆ ಮಾಡಿತ್ತು. ಒಂದಿಷ್ಟು ಅವಾರ್ಡ್‌ಗಳನ್ನು ಕೊಳ್ಳೆಹೊಡೆಯೋ ಮೂಲಕ ನಿರ್ದೇಶಕಿ ರೂಪಾ ರಾವ್‌ಗೆ ಜನಪ್ರಿಯತೆಯ ಕಿರೀಟ ತೊಡಿಸಿತ್ತು. ಇದೀಗ ರೂಪಾ ರಾವ್ (Roopa Rao) ಮತ್ತೆ ಕನ್ನಡ ಕಲಾಭಿಮಾನಿಗಳನ್ನು ಎದುರುಗೊಳ್ಳಲು ರೆಡಿಯಾಗಿದ್ದಾರೆ. ಆದರೆ, ನಿರ್ದೇಶಕಿಯಾಗಿ ಅಲ್ಲ ಬದಲಾಗಿ ನಿರ್ಮಾಪಕಿಯಾಗಿ ಎಂಬುದು ವಿಶೇಷ.

    ಸಿನಿಮಾ ನಿರ್ಮಾಣ ಸುಲಭದ ಕೆಲಸವಲ್ಲ. ಚಿತ್ರಕ್ಕಾಗಿ ತಮ್ಮ ಮನೆಯ ಖಜಾನೆಯನ್ನೆಲ್ಲಾ ಖಾಲಿ ಮಾಡಿಕೊಳ್ಳುವುದು ಇದೆಯಲ್ಲ ಅದಕ್ಕೆ ಬಂಢ ಧೈರ್ಯ ಬೇಕು. ಆ ಎದೆಗಾರಿಕೆ ಒನ್ ಟು ಡಬ್ಬಲ್ ಇರುವುದರಿಂದಲೇ ನಿರ್ದೇಶಕಿ ರೂಪಾ ರಾವ್ ಗ್ಯಾಂಗ್‌ಸ್ಟರ್ (Gangstar) ಸಿನಿಮಾಗೆ ಕೈ ಹಾಕಿದ್ದಾರೆ. ಒಬ್ಬ ಮಹಿಳಾ ನಿರ್ಮಾಪಕಿಯಾಗಿ ನಯಾ ಸವಾಲೊಂದನ್ನು ಸ್ವೀಕರಿಸಿರುವ ರೂಪಾ ರಾವ್, ಭಾರತೀಯ ಚಿತ್ರರಂಗದಲ್ಲೇ ಗ್ಯಾಂಗ್ ಸ್ಟರ್ ಸಿನಿಮಾ ನಿರ್ಮಿಸ್ತಿರುವ ಮೊದಲ ಮಹಿಳಾ ನಿರ್ಮಾಪಕಿ ಎನ್ನುವ ಖ್ಯಾತಿಗೆ ಪಾತ್ರರಾಗಲು ಹೊರಟಿದ್ದಾರೆ. ಸಹದೇವ್ ಕೆಲವಡಿ ನಿರ್ದೇಶನದ ಪಕ್ಕಾ ಗ್ಯಾಂಗ್ ಸ್ಟರ್ ಕಥೆಯುಳ್ಳ ‘ಕೆಂಡ’ ಸಿನಿಮಾಗೆ ಬಂಡವಾಳ ಸುರಿದಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಶೀರ್ಷಿಕೆಯಿಂದಲೇ ಸಿನಿದುನಿಯಾದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಮೋಷನ್ ಪೋಸ್ಟರ್‌ನಿಂದ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸುದ್ದಿಯಾದ ‘ಕೆಂಡ’ ಈಗ ಕ್ಯಾರೆಕ್ಟರ್ ಟೀಸರ್‌ನಿಂದ ಸಮಸ್ತ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ.

    ಹೌದು, ಇತ್ತೀಚೆಗಷ್ಟೇ ‘ಕೆಂಡ’ (Kenda Film) ಕ್ಯಾರೆಕ್ಟರ್ ಟೀಸರ್ ಹೊರಬಿದ್ದಿದೆ. ಸಚ್ಚಾ, ಶರತ್ ಗೌಡ, ಪ್ರಣವ್ ಶ್ರೀಧರ್, ಬಿ.ವಿ ಭರತ್ ಅವರ ಮೊದಲ ನೋಟಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಈ ಹುಡುಗರು ಹೊಸಬರಾದ್ರೂ ಕೂಡ ರಂಗಭೂಮಿಯಲ್ಲಿ ಪಳಗಿರುವುದರಿಂದ ಕನ್ನಡ ಕಲಾಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ದುಗದಲವಿಲ್ಲದೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿರುವ ‘ಕೆಂಡ’ ಚಿತ್ರವನ್ನ ಈ ಹುಡುಗರು ಅದ್ದೂರಿಯಾಗಿ ಪ್ರಮೋಟ್ ಮಾಡ್ತಿದ್ದಾರೆ. ಕೆಂಪೇಗೌಡ್ರ ಕಣದಲ್ಲಿ ಅಖಾಡಕ್ಕಿಳಿದು ಕರಪತ್ರ ಹಂಚುವ ಮೂಲಕ ‘ಕೆಂಡ’ ಸಿನಿಮಾವನ್ನ ಕರುನಾಡಿನ ಮೂಲೆಮೂಲೆಗೆ ತಲುಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

    ವಿಶೇಷ ಅಂದರೆ ‘ಕೆಂಡ’ ಅಖಾಡ ಹೊಸಬರಿಂದಲೇ ಕೂಡಿದೆ. ರಂಗಭೂಮಿ ಪ್ರತಿಭೆಗಳು ಪ್ರಧಾನ ಪಾತ್ರ ವಹಿಸಿರುವುದರಿಂದ ‘ಕೆಂಡ’ ಕಣ ರಣರಣ ರಂಗೇರಿದೆ. ಬೆಂಗಳೂರಿನಂತಹ ಮಹಾನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ ವ್ಯವಸ್ಥೆಯ ವಿಷವ್ಯೂಹಕ್ಕೆ ಸಿಲುಕಿ ಹೇಗೆ ನರಳುತ್ತಿದೆ ಎಂಬುದನ್ನು, ರಾಜಕೀಯ ಹಾಗೂ ಅಪರಾಧದ ತನಿಖೆ ಮೂಲಕ ಜಗತ್ತಿನ ಮುಂದೆ ಹರವಿಡಲು ಸಹದೇವ್ ಕೆಲವಡಿಯವರು ‘ಕೆಂಡ’ ಚಿತ್ರ ಆಯ್ಕೆ ಮಾಡಿಕೊಂಡಿದ್ದಾರೆ. ನಿರ್ದೇಶಕ ಸಹದೇವ್ ಕೆಲವಡಿಯವರು ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು . ಅದರ ಆರಂಭಿಕ ಹೆಜ್ಜೆಯಾಗಿ ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್ ಹುಟ್ಟುಹಾಕಿದರು. ರೂಪಾ ರಾವ್ ನಿರ್ದೇಶನದ ‘ಗಂಟುಮೂಟೆ’ ಚಿತ್ರಕ್ಕೆ ಬಂಡವಾಳ ಹೂಡೋದ್ರ ಜೊತೆಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ನಿರ್ವಹಿಸಿದರು. ಆ ಚಿತ್ರ ಇಬ್ಬರಿಗೂ ಹೆಸರು ತಂದುಕೊಟ್ಟಿತ್ತು. ಇದೀಗ ಮತ್ತೊಮ್ಮೆ ಇವರಿಬ್ಬರು ‘ಕೆಂಡ’ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಈ ಸಿನಿಮಾದ ಮೂಲಕ ಸಹದೇವ್ ಕೆಲವಡಿ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಅಮೇಯುಕ್ತಿ ಬ್ಯಾನರ್ ಅಡಿಯಲ್ಲಿ ‘ಕೆಂಡ’ ತಯಾರಾಗಿದ್ದು, ಈ ಭಾರಿ ನಿರ್ಮಾಪಕಿಯಾಗಿ ರೂಪಾ ರಾವ್ (Roopa Rao) ಸಾಥ್ ಕೊಟ್ಟಿದ್ದಾರೆ.

    ಈ ಸಿನಿಮಾ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ (Jayanth Kaikini) ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೇ ಹೊಸೆದುಕೊಂಡಂತಹ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಸದ್ದಿಲ್ಲದೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿರುವ ‘ಕೆಂಡ’ ರೂವಾರಿಗಳು, ಸದ್ಯದಲ್ಲಿಯೇ ಟೀಸರ್ ಲಾಂಚ್ ಮಾಡಲು ತಯಾರಾಗುತ್ತಿದ್ದಾರೆ.ಅಚ್ಚರಿ ಅಂದರೆ ‘ಕೆಂಡ’ ಹಲವಾರು ಅಂತಾರಾಷ್ಟ್ರೀಯ ಫಿಲ್ಮ್ಂ ಫೆಸ್ಟಿವಲ್‌ಗಳಲ್ಲಿ ಮಿಂಚಲು ಅಣಿಗೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ನಿರ್ದೇಶಕಿಯಾಗಿಯೂ ಕ್ರಿಯಾಶೀಲರಾಗಿರುವ ರೂಪಾ ರಾವ್, ಸಣ್ಣ ಗ್ಯಾಪಿನಲ್ಲಿ ‘ಆಸ್ಮಿನ್’ ಎಂಬ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಅದು ಇಷ್ಟರಲ್ಲಿಯೇ ಓಟಿಟಿಯಲ್ಲಿ ಬಿಡುಗಡೆಗೊಳ್ಳಲಿದೆ. ಕೆಂಡ ಬಿಡುಗಡೆಯಾದ ಬೆನ್ನಲ್ಲೇ ರೂಪಾ ರಾವ್ ನಿರ್ದೇಶನದ ಬಿಗ್ ಬಜೆಟ್ ಚಿತ್ರ ಶುರು ಆಗಲಿದೆ.