Tag: ಕೃಷ್ಣ ಮೃಗ

  • ಮಾಜಿ‌ ಸಚಿವರ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದ 30 ವನ್ಯಜೀವಿಗಳ ಪೈಕಿ 2 ಪ್ರಾಣಿ ಸಾವು

    ಮಾಜಿ‌ ಸಚಿವರ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದ 30 ವನ್ಯಜೀವಿಗಳ ಪೈಕಿ 2 ಪ್ರಾಣಿ ಸಾವು

    ದಾವಣಗೆರೆ: ಇತ್ತೀಚೆಗಷ್ಟೇ ಮಾಜಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ (SS Mallikarjun) ಒಡೆತನದ ಕಲ್ಲೇಶ್ವರ ಮಿಲ್‌ ಹಿಂಭಾಗದ ಫಾರ್ಮಹೌಸ್‌ನಲ್ಲಿ ಪತ್ತೆ ಆಗಿದ್ದ ವನ್ಯ ಜೀವಿಗಳ ಪೈಕಿ ಕೃಷ್ಣಮೃಗ (Blackbuck) ಹಾಗೂ ಕಾಡುಹಂದಿ (Wild Boar) ಮೃತಪಟ್ಟಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ.

    ಡಿ.21ಕ್ಕೆ ಕಲ್ಲೇಶ್ವರ ಮಿಲ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ವೇಳೆ ಒಟ್ಟು 30 ಜೀವಿಗಳನ್ನು ವಶಕ್ಕೆ ಪಡೆದು, ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿತ್ತು. ಜೊತೆಗೆ ಘಟನೆಯ ಕುರಿತು ಸಂಪಣ್ಣ, ಕರಿಬಸವಯ್ಯ, ಸೆಂಥಿಲ್‌ ಹಾಗೂ ಮಿಲ್‌ನ ಮಾಲೀಕರಾದ ಮಾಜಿ ಸಚಿವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

    ಇದಾದ ಬಳಿಕ ಒಟ್ಟು 30 ವನ್ಯಜೀವಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶದಂತೆ ಅರಣ್ಯ ಇಲಾಖೆ ಕಲ್ಲೇಶರ ಮಿಲ್ ಹಿಂಭಾಗದ ಫಾರ್ಮ್‌ಹೌಸ್‌ನಿಂದ ವಶಕ್ಕೆ ಪಡೆದು, ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಮಿಲ್‌ನಲ್ಲಿ ಪತ್ತೆಯಾದ 6 ಕಾಡು ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದ್ದು, ಇನ್ನುಳಿದ 22 ಕಾಡು ಪ್ರಾಣಿಗಳನ್ನು ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಬಿಡಲಾಗಿತ್ತು. ಆ ವನ್ಯ ಜೀವಿಗಳಲ್ಲಿ 11 ಕೃಷ್ಣಮೃಗ, 7 ಜಿಂಕೆ, 2 ನರಿ, 3 ಮುಂಗುಸಿ, 7 ಕಾಡು ಹಂದಿಗಳಿತ್ತು.

    ಈ ಪೈಕಿ ಈಗಾಗಲೇ ಮೃತಪಟ್ಟಿದ್ದ ಕಾಡು ಹಂದಿಯನ್ನು ಕೋರ್ಟ್ ಆದೇಶದಂತೆ ವಿಲೇವಾರಿ ಮಾಡಲಾಗಿದೆ. ಅಲ್ಲದೆ, ಸೋಮವಾರ ಒಂದು ಕೃಷ್ಣಮೃಗ ಸಾವನ್ನಪ್ಪಿದ್ದು, ಅದರ ದೇಹ ವಿಲೇವಾರಿಗಾಗಿ ನ್ಯಾಯಾಲಯಕ್ಕೆ ಅರಣ್ಯ ಇಲಾಖೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಇನ್ನುಳಿದಂತೆ ಇದೀಗ ಮೃತಪಟ್ಟಿರುವ ಒಂದು ಕೃಷ್ಣಮೃಗ ಹೊರತುಪಡಿಸಿ, 10 ಕೃಷ್ಣಮೃಗ ಹಾಗೂ 7 ಜಿಂಕೆಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್ ಅನುಮತಿ ದೊರೆತರೆ, ಅವುಗಳನ್ನು ಸಹ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ: ಡಿಕೆಶಿ

    ನ್ಯಾಯಾಲಯದ ಆದೇಶದಂತೆ ಕಿರು ಮೃಗಾಲಯದಲ್ಲಿ ಇರಿಸಲಾಗಿದೆ. ಕೋರ್ಟ್ ಅನುಮತಿ ನೀಡಿದ ಪ್ರಾಣಿಗಳನ್ನು ಕಾಡಿಗೆ ಬಿಡಲಾಗಿದೆ. ಇನ್ನುಳಿದ ಪ್ರಾಣಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ದೇಶನ ನೀಡಿದರೆ, ಅವುಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುತ್ತೇವೆ. ಡಿಎಫ್ಓ ಜಗನ್ನಾಥ್ ಅವರು ಪ್ರಾಣಿಗಳನ್ನು ಸಾವ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು. ಇದನ್ನೂ ಓದಿ: ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ ಕೊಡುತ್ತೇನೆ – ಧೀರೇಂದ್ರ ಶಾಸ್ತ್ರಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಕಸ್ಮಿಕವಾಗಿ 40 ಅಡಿಯ ಪಾಳು ಬಾವಿಗೆ ಬಿದ್ದ ಕೃಷ್ಣ ಮೃಗ ರಕ್ಷಣೆ

    ಆಕಸ್ಮಿಕವಾಗಿ 40 ಅಡಿಯ ಪಾಳು ಬಾವಿಗೆ ಬಿದ್ದ ಕೃಷ್ಣ ಮೃಗ ರಕ್ಷಣೆ

    – ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ

    ಬೀದರ್: ಮೇಯಲು ಹೋದಾಗ ಆಕಸ್ಮಿಕವಾಗಿ 40 ಅಡಿಯ ಪಾಳು ಬಾವಿಗೆ ಎರಡು ಕೃಷ್ಣ ಮೃಗಗಳು ಬಿದ್ದಿದ್ದು, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಬೀದರ್ ತಾಲೂಕಿನ ಔರಾದ್ ಸಿರ್ಸಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಎರಡು ಕೃಷ್ಣ ಮೃಗಗಳು ಬಾವಿಗೆ ಬಿದ್ದಿದ್ದನ್ನು ನೋಡುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಜಂಟಿ ಕಾರ್ಯಾರಚಣೆ ನಡೆಸಿ ಎರಡೂ ಕೃಷ್ಣ ಮೃಗಗಳನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಜಂಟಿಯಾಗಿ ಹರಸಾಹಸಪಟ್ಟು ಎರಡು ಕೃಷ್ಣ ಮೃಗಗಳ ರಕ್ಷಣೆ ಮಾಡಿದ್ದಾರೆ. ಸತತ ಒಂದು ಗಂಟೆಗಳ ಕಾಲ ರಕ್ಷಣೆ ಕಾರ್ಯಚರಣೆ ನಡೆಸಿದ್ದು, ಕೊನೆಗೂ ಎರಡೂ ಕೃಷ್ಣ ಮೃಗಗಳನ್ನು ರಕ್ಷಣೆ ಮಾಡಿ, ಅರಣ್ಯ ಅಧಿಕಾರಿಗಳು ಅವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.

  • ಅಣ್ಣ ಸಲ್ಮಾನ್ ಗೆ ಭಾವನಾತ್ಮಕ ಸಂದೇಶ ಬರೆದ ಅರ್ಪಿತಾ ಖಾನ್

    ಅಣ್ಣ ಸಲ್ಮಾನ್ ಗೆ ಭಾವನಾತ್ಮಕ ಸಂದೇಶ ಬರೆದ ಅರ್ಪಿತಾ ಖಾನ್

    ಮುಂಬೈ: ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನ ಜೈಲುವಾಸ ಮಾಡಿ ಬಿಡುಗಡೆಗೊಂಡ ಬಳಿಕ ಸಹೋದರಿ ಅರ್ಪಿತಾ ಖಾನ್ ಅವರು ಸಲ್ಮಾನ್ ಖಾನ್ ಅವರಿಗೆ ಭಾವನಾತ್ಮಕ ಸಂದೇಶವನ್ನು ನೀಡಿದ್ದಾರೆ.

    ಸಲ್ಮಾನ್ ಖಾನ್ ಅವರ ಫೋಟೋದೊಂದಿಗೆ ಈ ಸಂದೇಶವನ್ನು ಹಾಕಿದ್ದ ಸ್ಕ್ರೀನ್ ಶಾಟ್ ತೆಗೆದು ಬಳಿಕ ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅರ್ಪಿತಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ಗೆ ಬಿಗ್ ರಿಲೀಫ್

    ಸಂದೇಶದಲ್ಲೇನಿದೆ?: ನನ್ನ ಶಕ್ತಿ, ನನ್ನ ದೌರ್ಬಲ್ಯ, ನನ್ನ ಹೆಮ್ಮೆ, ನನ್ನ ಖುಷಿ, ನನ್ನ ಜೀವನ ಹಾಗೂ ನನ್ನ ವಿಶ್ವ. ದೇವರ ಮಗ. ನಿನ್ನ ಗೆಲುವನ್ನು ಕಾಣಲು ಸಾಧ್ಯವಾಗದವರಿಗೆ ದೇವರು ಒಳ್ಳೆಯದನ್ನೇ ಮಾಡಲಿ. ನಿನ್ನ ಧನಾತ್ಮಕ ಚಿಂತನೆ ಹಾಗೂ ತಂತಸದಲ್ಲಿ ಅಸೂಯೆ ಹಾಗೂ ಋಣಾತ್ಮಕ ಚಿಂತನೆಗಳು ಮಾಯವಾಗಲಿ. ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಹಾಗೆಯೇ ನಿನ್ನ ಗೆಲುವು ಹಾಗೂ ಒಳ್ಳೆತನ ಎಲ್ಲರನ್ನೂ ಕುರುಡರನ್ನಾಗಿ ಮಾಡಲಿ. ಲವ್ ಯೂ ಭಾಯ್ ಅಂತ ಬರೆದುಕೊಂಡಿದ್ದಾರೆ.

    ಅರ್ಪಿತಾ ಅವರು ಖಾನ್ ಕುಟುಂಬದ ದತ್ತು ಪುತ್ರಿಯಾಗಿದ್ದು, ಸಲ್ಮಾನ್ ಖಾನ್ ಅವರ ಮುದ್ದಿನ ತಂಗಿ. ಈಕೆಗೆ ಆಯುಶ್ ಶರ್ಮಾ ಎಂಬವರ ಜೊತೆ ಮದುವೆ ಮಾಡಿಕೊಡಲಾಗಿದ್ದು, ಇದೀಗ ದಂಪತಿಗೆ ಆಹಿಲ್ ಅನ್ನೋ ಮಗನಿದ್ದಾನೆ. ಇದನ್ನೂ ಓದಿ: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಗೆ ನಟಿಯರು ವೆಲ್‍ಕಮ್!

    20 ವರ್ಷಗಳ ಹಿಂದೆ ಅಂದರೆ 1998ರಲ್ಲಿ `ಹಮ್ ಸಾಥ್ ಸಾಥ್ ಹೈ’ ಅನ್ನೋ ಚಿತ್ರದ ಶೂಟಿಂಗ್ ವೇಳೆ ಅವಸಾನದ ಅಂಚಿನಲ್ಲಿರುವ ಅಪರೂಪದ ಪ್ರಭೇದ ಕೃಷ್ಣಮೃಗವನ್ನ ಬೇಟೆಯಾಡಿದ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅವರಿಗೆ ಮೊದಲು 5 ವರ್ಷ ಜೈಲು ಹಾಗೂ 50,000 ದಂಡ ವಿಧಿಸಲಾಗಿತ್ತು. ಹೀಗಾಗಿ ಎರಡು ದಿನ ಜೈಲುವಾಸ ಕೂಡ ಅನುಭವಿಸಿದ್ದರು. ಈ ಮಧ್ಯೆ ಖಾನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂಧರ್ ಜೋಶಿ ಅವರು ಸಲ್ಮಾನ್ ಖಾನ್ ಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದರು. ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಆಲಿ ಖಾನ್, ಟಬು, ನೀಲಂ, ಸೋನಾಲಿ ಬೇಂದ್ರೆ ಸೇರಿದಂತೆ 6 ಜನರನ್ನು ಕೋರ್ಟ್ ಖುಲಾಸೆಗೊಳಿಸಿ ಜೋಧ್‍ಪುರ್ ಕೋರ್ಟ್ ಆದೇಶವನ್ನು ಹೊರಡಿಸಿತ್ತು.

  • ಜೈಲಿನ ಊಟವೂ ಬೇಡ, ಹೊರಗಡೆಯ ಊಟವೂ ಬೇಡ ಎಂದ ಸಲ್ಮಾನ್

    ಜೈಲಿನ ಊಟವೂ ಬೇಡ, ಹೊರಗಡೆಯ ಊಟವೂ ಬೇಡ ಎಂದ ಸಲ್ಮಾನ್

    ಜೋಧಪುರ: ಕೃಷ್ಣಮೃಗ ಭೇಟೆಯಾಡಿದ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್ ಮೊದಲ ದಿನ ಯಾವುದೇ ಆಹಾರ ಸೇವಿಸಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

    ಜೈಲಿನ ಮೊದಲ ರಾತ್ರಿ ಊಟ ದಾಲ್ ರೋಟಿಯನ್ನು 52 ವರ್ಷದ ಸಲ್ಮಾನ್ ಖಾನ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ಹೊರಗಿನಿಂದಲೂ ಊಟವನ್ನು ತರಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

    ಜೈಲಿಗೆ ಬಂದಾಗ ಸಲ್ಮಾನ್‍ಗೆ ರಕ್ತದ ಒತ್ತಡ ಹೆಚ್ಚಾಗಿತ್ತು. ಸ್ವಲ್ಪ ಸಮಯದ ನಂತರ ದೇಹ ಸಹಜ ಸ್ಥಿತಿಗೆ ಮರಳಿತು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜೈಲಿನ ಅಧೀಕ್ಷಕ ವಿಕ್ರಮ್ ಸಿಂಗ್ ತಿಳಿಸಿದರು. ಇದನ್ನೂ ಓದಿ: ಕೋಟಿ ಕೋಟಿ ಲಾಸ್ – ಸಲ್ಮಾನ್ ಗೆ ಶಿಕ್ಷೆ ಪ್ರಕಟವಾಗ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಲ್ಲಿ ಢವ ಢವ!

    ಸಲ್ಮಾನ್ ಖಾನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳು ಸಿಗುವುದಿಲ್ಲ. ಅವರ ಕೋಣೆಯಲ್ಲಿ ಒಂದು ಮರದ ಮಂಚ, ಒಂದು ಕಂಬಳಿ, ಒಂದು ಕೂಲರ್ ಇರುತ್ತದೆ. ಜೈಲಿನ ಆಹಾರ ಪದ್ಧತಿಯಂತೆ ದಾಲ್, ಚಪಾತಿ ಇರಲಿದೆ. ಬೆಳಗಿನ ಊಟದಲ್ಲಿ ಕಿಚಡಿ ಇರಲಿದೆ ಎಂದು ಸಿಂಗ್ ತಿಳಿಸಿದ್ದಾರೆ.

    ಇವತ್ತಿನಿಂದ ಕೆಲವು ಕೈದಿಗಳು ಜೊತೆ ಸಲ್ಮಾನ್‍ರನ್ನು ಇರಿಸಲಾಗುತ್ತದೆ. ಬೆದರಿಕೆ ಇರುವ ಹಿನ್ನೆಲೆಯಲ್ಲಿ ಒಂಟಿ ಎಂದು ಭಾವಿಸುವ ಅಗತ್ಯ ಇಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

    ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡವನ್ನು ವಿಧಿಸಿ ಜೋಧಪುರ ಸಿಜೆಎಂ ಕೋರ್ಟ್ ಶಿಕ್ಷೆಯನ್ನುನಿನ್ನೆ ಪ್ರಕಟಮಾಡಿತ್ತು.

  • ಅಸಾರಾಂ ಬಾಪು ಪಕ್ಕದಲ್ಲಿರುವ ಕೋಣೆಯಲ್ಲಿ ಮಲಗಲಿದ್ದಾರೆ ಸಲ್ಮಾನ್-ಕೋರ್ಟ್ ನಲ್ಲಿ ಕಣ್ಣೀರಿಟ್ಟ ಅಲ್ವಿರಾ

    ಅಸಾರಾಂ ಬಾಪು ಪಕ್ಕದಲ್ಲಿರುವ ಕೋಣೆಯಲ್ಲಿ ಮಲಗಲಿದ್ದಾರೆ ಸಲ್ಮಾನ್-ಕೋರ್ಟ್ ನಲ್ಲಿ ಕಣ್ಣೀರಿಟ್ಟ ಅಲ್ವಿರಾ

    ಜೋಧಪುರ: ರೀಲ್ ಲೈಫ್‍ನಲ್ಲಿ ಸೂಪರ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡರೂ, ರಿಯಲ್ ಲೈಫ್‍ನಲ್ಲಿ ಬ್ಯಾಡ್‍ಬಾಯ್ ಅಂತಲೇ ಕುಖ್ಯಾತಿ ಪಡೆದ ಸಲ್ಮಾನ್ ಖಾನ್ ಈಗ ಜೈಲುಪಾಲಾಗಿದ್ದಾರೆ.

    20 ವರ್ಷಗಳ ಹಿಂದೆ ಅಂದರೆ 1998ರಲ್ಲಿ `ಹಮ್ ಸಾಥ್ ಸಾಥ್ ಹೈ’ ಅನ್ನೋ ಚಿತ್ರದ ಶೂಟಿಂಗ್ ವೇಳೆ ಅವಸಾನದ ಅಂಚಿನಲ್ಲಿರುವ ಅಪರೂಪದ ಪ್ರಭೇದ ಕೃಷ್ಣಮೃಗವನ್ನ ಬೇಟೆಯಾಡಿದ ಪ್ರಕರಣದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 5 ವರ್ಷ ಶಿಕ್ಷೆ, 10 ಸಾವಿರ ದಂಡಕ್ಕೀಡಾಗಿದ್ದಾರೆ. 10 ಸಾವಿರ ಅವರಿಗೆ ಜುಜುಬಿ ಅನಿಸಿದರೂ 5 ವರ್ಷದ ಸೆರೆಮನೆ ವಾಸ ಮಾತ್ರ ಸಲ್ಮಾನ್ ಸಿನಿ ಜೀವನಕ್ಕೆ ಘಾಸಿಗೊಳಿಸಿದೆ.

    ಜೋಧಪುರ ಸಿಜೆಎಂ ಕೋರ್ಟ್‍ನಲ್ಲಿ ಬೆಳಗ್ಗೆ 11.15ಕ್ಕೆ ಅಂತಿಮ ತೀರ್ಪು ಪ್ರಕಟಿಸುವ ಪ್ರಕ್ರಿಯೆ ಆರಂಭವಾಯ್ತು. 11.30ರ ವೇಳೆಗೆ ಸಲ್ಮಾನ್ ಖಾನ್ ದೋಷಿ ಅಂತಲೂ ಉಳಿದ ಆರೋಪಿಗಳಾದ ಸೈಫ್ ಅಲಿಖಾನ್, ಟಬು, ನೀಲಂ, ಸೋನಾಲಿ ಅವರನ್ನು ನಿರ್ದೋಷಿಗಳೆಂದು ಜಡ್ಜ್ ದೇವ್ ಕುಮಾರ್ ಖತ್ರಿ ತೀರ್ಪು ಪ್ರಕಟಿಸಿದರು.

    ಶಿಕ್ಷೆ ಪ್ರಮಾಣ ಎಷ್ಟು ಅನ್ನೋದರ ಬಗ್ಗೆ ಗೊಂದಲ-ಜಿಜ್ಞಾಸೆ ಮೂಡಿತ್ತು. 12 ಗಂಟೆ ಸುಮಾರಿಗೆ ಎಲ್ಲಾ ಮಾಧ್ಯಮಗಳಲ್ಲೂ 2 ವರ್ಷ ಶಿಕ್ಷೆ, ಸಲ್ಮಾನ್‍ಗೆ ಬೇಲ್ ಸಿಗತ್ತೆ ಅಂತಲೇ ಸುದ್ದಿ ಪ್ರಸಾರವಾಯ್ತು. ಆದ್ರೆ, ಇದೆಲ್ಲಾ ಸುಳ್ಳಾಯ್ತು. ನಂತರ 2.15ರ ಸುಮಾರಿಗೆ 5 ವರ್ಷಗಳ ಶಿಕ್ಷೆ ಪ್ರಕಟಿಸಿದ ಜಡ್ಜ್, ಎಲ್ಲ ಗೊಂದಲಗಳಿಗೂ ಕೊನೆ ಹಾಡಿದರು.

    ಕೋರ್ಟ್ ಹಾಲ್‍ನಲ್ಲಿ ಸಹೋದರಿ ಅಲ್ವಿರಾ ಹಾಗು ಕುಟುಂಬಸ್ಥರು ಸಲ್ಮಾನ್‍ಗೆ ಮೊದಲಿನಿಂದಲೂ ಧೈರ್ಯ ತುಂಬುತ್ತಿದ್ದರು. ಆದ್ರೆ, ದೋಷಿ ಅಂತ ಆದೇಶ ಬರುತ್ತಿದ್ದಂತೆಯೇ ಸಲ್ಮಾನ್ ಕಳಾಹೀನರಾದರು. ಆದರೂ, ಶಿಕ್ಷೆ ಕಡಿಮೆ ಇರಲಿದೆ ಧೃತಿಗೆಡಬೇಡ ಅಂತ ಮಾನಸಿಕಸ್ಥೈರ್ಯ ತುಂಬುವ ಕಾರ್ಯ ಮಾಡಿದರು.

    ಸಲ್ಮಾನ್ ಪರ ವಕೀಲರು ಸಹ, ನ್ಯಾಯಾಧೀಶರಿಗೆ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಮನವಿ ಮಾಡಿದರು. ಆದ್ರೆ, ಪ್ರಾಸಿಕ್ಯೂಷನ್ ಮಾತ್ರ 6 ವರ್ಷ ಶಿಕ್ಷೆ ವಿಧಿಸಲು ಮನವಿ ಮಾಡಿತ್ತು. ಎರಡು ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್, 5 ವರ್ಷ ಶಿಕ್ಷೆ ಪ್ರಕಟಿಸಿತು.

    ಸಲ್ಮಾನ್ ನಿಂತಲ್ಲೇ ಅರೆಕ್ಷಣ ನಿಂತರೆ ಸಹೋದರಿ ಅಲ್ವಿರಾ ಕಣ್ಣೀರು ಸುರಿಸಿದರು. ಕೆಲಕ್ಷಣಗಳ ನಂತರ ಕೋರ್ಟ್‍ನಲ್ಲೇ ಅರೆಸ್ಟ್ ಮಾಡಿದ ಪೊಲೀಸರು, ಸಲ್ಮಾನ್‍ಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಸೆಂಟ್ರಲ್ ಜೈಲ್‍ಗೆ ಕರೆದೊಯ್ದರು. ಕೋರ್ಟ್‍ಹಾಲ್‍ನಲ್ಲಿ ಸಲ್ಮಾನ್ ಅಭಿಮಾನಿಗಳು ತುಂಬಿ ಹೋಗಿದ್ದರು.

    ಅಪ್ರಾಪ್ತೆಯರ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಅಸಾರಾಂ ಬಾಪು ಪಕ್ಕದಲ್ಲೇ ಸಲ್ಮಾನ್ ಕೋಣೆ ಇದೆ. ಸದಾ ಎಸಿ ಕಾರ್, ಎಸಿ ರೂಮ್‍ಗಳಲ್ಲೇ ತಿರುಗಾಡುತ್ತಿದ್ದ ಸಲ್ಮಾನ್ ಇವತ್ತು ಜೋಧಪುರದ ಸೆಂಟ್ರಲ್ ಜೈಲಿನಲ್ಲಿ ಸೆಕೆಯಲ್ಲಿ ರಾತ್ರಿ ಕಳೆಯಬೇಕಾಗಿದೆ.

    ಜೋಧಪುರದಲ್ಲಿ ಸದ್ಯಕ್ಕೆ ಇವತ್ತು 39ರಿಂದ 40 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. ಜಾಮೀನಿಗಾಗಿ ಮನವಿ ಸಲ್ಲಿಸಿದ್ದು ನಾಳೆ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಬರಲಿದೆ. ಹಿಟ್ ಅಂಡ್ ರನ್ ಕೇಸ್‍ನಲ್ಲಿ ಬಚಾವ್ ಆಗಿದ್ದ ಸಲ್ಮಾನ್ ಬೇಟೆ ಕೇಸಲ್ಲಿ ಅಂದರ್ ಆಗಿದ್ದಾರೆ. ಈಗ ಸೇವ್ ಸಲ್ಮಾನ್ ಎಂದು ಬಾಲಿವುಡ್ ವಲಯದಿಂದ ಅಭಿಯಾನ ಆರಂಭವಾಗಿದೆ.

     

     

  • ದಾರಿ ತಪ್ಪಿ ನಾಡಿಗೆ ಬಂದಿದ್ದ ಕೃಷ್ಣಮೃಗದ ರಕ್ಷಣೆ

    ದಾರಿ ತಪ್ಪಿ ನಾಡಿಗೆ ಬಂದಿದ್ದ ಕೃಷ್ಣಮೃಗದ ರಕ್ಷಣೆ

    ಚಿತ್ರದುರ್ಗ: ದಾರಿ ತಪ್ಪಿ ನಾಡಿಗೆ ಬಂದಿದ್ದ ಕೃಷ್ಣಮೃಗವನ್ನ ಚಿತ್ರದುರ್ಗದಲ್ಲಿ ರಕ್ಷಣೆ ಮಾಡಲಾಗಿದೆ.

    ನಗರದ ಚಂದ್ರವಳ್ಳಿ ಬಳಿ ಒಂಟಿಯಾಗಿ ಜನರ ಹಿಂದೆ ಹಿಂದೆ ಹೋಗುತ್ತಿದ್ದ ಕೃಷ್ಣ ಮೃಗವನ್ನ ಚಿತ್ರದುರ್ಗದ ಯುವಕ ನವೀನ್ ಮತ್ತು ಸ್ನೇಹಿತರು ರಕ್ಷಣೆ ಮಾಡಿದ್ದಾರೆ. ನಂತರ ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಕೃಷ್ಣಮೃಗವನ್ನ ಅರಣ್ಯ ಇಲಾಖೆ ವಶಕ್ಕೆ ಕೊಟ್ಟಿದ್ದಾರೆ.

    ಸದ್ಯಕ್ಕೆ ಚಿತ್ರದುರ್ಗ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಕೃಷ್ಣಮೃಗಕ್ಕೆ ಚಿಕಿತ್ಸೆ ನೀಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.