Tag: ಕೃಷ್ಣಾ

  • ರೈತರ ಕೈ ಸೇರದ ಬೆಳೆ ಹಾನಿ ಪರಿಹಾರ – ಸಾಲದ ಸುಳಿಯಲ್ಲಿ ರೈತರು

    ರೈತರ ಕೈ ಸೇರದ ಬೆಳೆ ಹಾನಿ ಪರಿಹಾರ – ಸಾಲದ ಸುಳಿಯಲ್ಲಿ ರೈತರು

    ರಾಯಚೂರು: ಜಿಲ್ಲೆಯ ರೈತರು ಅತಿವೃಷ್ಟಿ ಅನಾವೃಷ್ಟಿಯಿಂದ ಪ್ರತೀ ವರ್ಷ ತತ್ತರಿಸಿ ಹೋಗುತ್ತಿದ್ದಾರೆ. ಈ ವರ್ಷವೂ ಸಾಕಷ್ಟು ಮಳೆ ಹಾನಿ ಸಂಭವಿಸಿದೆ. ಆದರೆ 2019ರ ಭೀಕರ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಬೆಳೆ ಕಳೆದುಕೊಂಡಿದ್ದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ವರ್ಷದ ಬೆಳೆಹಾನಿಗೆ ಯಾವಾಗ ಪರಿಹಾರ ಸಿಗುತ್ತೋ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.

    2019 ಕೃಷ್ಣಾ ಹಾಗೂ ಭೀಮಾ ನದಿಯ ಭೀಕರ ಪ್ರವಾಹಕ್ಕೆ ಸಿಲುಕಿ ರಾಯಚೂರು ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ, ಭತ್ತ, ತೊಗರಿ ಸೇರಿದಂತೆ ನದಿ ಪಾತ್ರದ ಬಹುತೇಕ ಬೆಳೆಗಳು ಜಲಾವೃತವಾಗಿ ಬೆಳೆ ಹಾಳಾಗಿತ್ತು. ಆದರೆ ರೈತರು ಬೆಳೆ ಕಳೆದುಕೊಂಡು ಎರಡು ವರ್ಷಗಳು ಕಳೆದರೂ ಇದುವರೆಗೂ ರೈತರಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಬೆಳೆ ಚೆನ್ನಾಗಿ ಬಂದಾಗಲೇ ಪ್ರವಾಹ ಬಂದು ಬೆಳೆಗಳು ಸಂಪೂರ್ಣ ಹಾಳಾಗುತ್ತಿದೆ ಎಂದು ರೈತರು ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

    ರಾಯಚೂರು ತಾಲೂಕಿನ ಡೊಂಗರಾಂಪುರ ಗ್ರಾಮ ಒಂದರಲ್ಲೇ ನದಿ ಪಾತ್ರದ 500ಕ್ಕೂ ಅಧಿಕ ಹೆಕ್ಟೇರ್ ನಲ್ಲಿ ಬೆಳೆದ ಭತ್ತ ನೀರು ಪಾಲಾಗಿತ್ತು. ಪ್ರವಾಹಕ್ಕೆ ಸಿಲುಕಿ ಬೆಳೆ ಕಳೆದುಕೊಂಡಿದ್ದ ಅರ್ಧಕರ್ದ ರೈತರಿಗೆ ಇದುವರೆಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಪ್ರವಾಹ ಬಂದು ಎರಡು ವರ್ಷಗಳು ಕಳೆದ್ರೂ ಪರಿಹಾರ ಸಿಗದ ಕಾರಣ, ಇತ್ತ ಬೆಳೆಯೂ ಕಳೆದುಕೊಂಡು, ಪರಿಹಾರವೂ ಕೈ ಸೇರದ್ದಕ್ಕೆ ರೈತರು ಕಂಗಾಲಾಗಿದ್ದಾರೆ.

    ಪ್ರತೀ ಬಾರಿಯೂ ಕೃಷ್ಣಾ ನದಿ ಪ್ರವಾಹ ಬಂದಾಗಲೆಲ್ಲಾ ನದಿ ಪಾತ್ರದ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ತಡವಾಗಿ ಬರುವ ಅಧಿಕಾರಿಗಳು ಜಮೀನುಗಳನ್ನು ಸರ್ವೆ ಮಾಡಿ, ಜಿಪಿಎಸ್ ಮಾಡಿಕೊಂಡು ಹೋಗಿದ್ದರು. ಸರ್ಕಾರ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿದ್ರೂ ನಿಜವಾದ ಎಷ್ಟೋ ಫಲಾನುಭವಿಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ರೈತರ ಸಂಕಷ್ಟ ಕುರಿತು ಪ್ರಶ್ನಿಸಿದರೆ ಅಧಿಕಾರಿಗಳು ಪುನಃ ಸರ್ವೆ ಮಾಡುವುದಾಗಿ ಹೇಳುತ್ತಾರೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತ್ರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪದೇ ಪದೇ ಬದಲಾಗುತ್ತಿದ್ದರೆ ಸಮಸ್ಯೆ ಕೇಳುವವರು ಯಾರು ಎಂದು ಜಿಲ್ಲೆಯ ಜನ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

    ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿ ನದಿ ಪಾತ್ರದ ರೈತರು ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಸಮರ್ಪಕವಾಗಿ ಸರ್ವೆ ಮಾಡಿ, ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಮಾತ್ರ ತಾರತಮ್ಯ ಮಾಡುತ್ತಿದ್ದಾರೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿಯೂ ಕೊರೊನಾ ಭೀತಿ

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿಯೂ ಕೊರೊನಾ ಭೀತಿ

    – ಸಿಎಂ ಕಾರ್ಯಕ್ರಮ ವಿಧಾನಸೌಧಕ್ಕೆ ಶಿಫ್ಟ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾದಲ್ಲಿಯೂ ಮಹಾಮಾರಿ ಕೊರೊನಾ ಭೀತಿ ಆರಂಭವಾಗಿದೆ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೋಲಿಸ್ ಕಾನ್ ಸ್ಟೇಬಲ್ ಪತಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ಮುಖ್ಯಮಂತ್ರಿಗಳ ಎಲ್ಲ ಕಾರ್ಯಕ್ರಮಗಳು ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿದೆ.

    ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಕಳೆದ ಹಲವು ದಿನಗಳಿಂದ ಕೃಷ್ಣಾದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಸಿಬ್ಬಂದಿ ಕಚೇರಿಯನ್ನ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುತ್ತಿದ್ದಾರೆ. ಯಾರೊಬ್ಬರಿಗೂ ಇಂದು ಗೃಹ ಕಚೇರಿ ಕೃಷ್ಣಾಗೆ ಪ್ರವೇಶ ಇರುವುದಿಲ್ಲ. ಸಿಎಂ ಕಾರ್ಯಕ್ರಮಗಳು ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಸಿಎಂ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

    ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಪತಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಬೆನ್ನಲ್ಲೇ ಮಹಿಳಾ ಅಧಿಕಾರಿಗೂ ಗುರುವಾರ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರ ವರದಿ ಇಂದು ಸಂಜೆ ಬರಲಿದೆ.

  • ಜಲ ವಿವಾದದಲ್ಲಿ ಬಿಜೆಪಿ ರಾಜಕೀಯ: 8 ವಕೀಲರನ್ನು ಕೈಬಿಟ್ಟು ಬೆಂಗ್ಳೂರಿನಿಂದ ಇಬ್ಬರ ನೇಮಕ

    ಜಲ ವಿವಾದದಲ್ಲಿ ಬಿಜೆಪಿ ರಾಜಕೀಯ: 8 ವಕೀಲರನ್ನು ಕೈಬಿಟ್ಟು ಬೆಂಗ್ಳೂರಿನಿಂದ ಇಬ್ಬರ ನೇಮಕ

    – ಕೃಷ್ಣಾ ವ್ಯಾಜ್ಯದ ಅಂತಿಮ ವಿಚಾರಣೆಯಲ್ಲಿ ಬದಲಾವಣೆ
    – ಹಿರಿಯ ವಕೀಲರಿಂದ ಅಸಮಾಧಾನ

    ನವದೆಹಲಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ನದಿ ನೀರಿನ ವಿಚಾರದಲ್ಲೂ ರಾಜಕೀಯ ಬೇಕಿತ್ತಾ? ನೆಲ-ಜಲಕ್ಕಿಂತ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಮುಖ್ಯವಾಯಿತೇ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಹೌದು. ಜಲ ವಿವಾದ ಸಂಬಂಧ ಹಲವು ವರ್ಷಗಳಿಂದ ಕರ್ನಾಟಕ ಪರ ವಾದ ಮಂಡಿಸುತ್ತಿದ್ದ 8 ವಕೀಲರನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವ ನಡೆಯಿಂದಾಗಿ ಈ ಪ್ರಶ್ನೆ ಎದ್ದಿದೆ.

    ಕೃಷ್ಣಾ, ಮಹದಾಯಿ ಹಾಗೂ ಕಾವೇರಿ ವಿವಾದದಲ್ಲಿ ರಾಜ್ಯದ ಪರ ವರ್ಷಗಳಿಂದ ವಾದ ಮಂಡಿಸುತ್ತಿದ್ದ ವಕೀಲರನ್ನು ಎತ್ತಂಗಡಿ ಮಾಡಲಾಗಿದೆ. ಯಾವುದೇ ಚರ್ಚೆ ನಡೆಸದೇ 8 ಜನ ವಕೀಲರನ್ನು ಕೈಬಿಟ್ಟು ಬೆಂಗಳೂರಿಂದ ಇಬ್ಬರು ವಕೀಲರ ನೇಮಕ ಮಾಡಲಾಗಿದೆ. ರಾಜ್ಯದ ಸರ್ಕಾರದ ಈ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.

    ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ ಶಾಮ್ ದಿವಾನ್, ಮೋಹನ್ ಕಾತರಕಿ ಹಾಗೂ ಫಾಲಿ ನಾರಿಮನ್ ಅವರನ್ನು ಮಾತ್ರ ಮುಂದುವರಿಸಲಾಗಿದೆ. ಆದರೆ ಸರ್ಕಾರ ದೀಢಿರ್ ಎಂಬಂತೆ ವಕೀಲರನ್ನು ಬದಲಿಸಿ, ಬೆಂಗಳೂರಿನ ಅಶ್ವಿನ್ ಚಿಕ್ಕಮಠ, ರಾಜೇಶ್ವರ್ ಅವರಿಗೆ ಹೊಸ ಜವಾಬ್ದಾರಿ ನೀಡಿದೆ.

    ಈ ಹಂತದಲ್ಲಿ ವಕೀಲರ ಬದಲಾವಣೆ ಬೇಕಿತ್ತಾ? ಜಲ ವಿವಾದದಲ್ಲಿ ವಕೀಲರ ಬದಲಾವಣೆ ಪ್ರಯೋಗ ಬೇಕಿತ್ತಾ? ಹಾಗೂ ಯಾರೊಂದಿಗೂ ಚರ್ಚಿಸದೇ ಸರ್ಕಾರ ನಿರ್ಧಾರ ಸರೀನಾ ಎನ್ನುವ ಪ್ರಶ್ನೆ ಶುರುವಾಗಿದೆ.

    ಯಾರಿಗೆ ಕೊಕ್?:
    ಕೃಷ್ಣಾ ನದಿ ವ್ಯಾಜ್ಯದಲ್ಲಿ ವಾದ ಮಂಡಿಸುತ್ತಿದ್ದ ವಕೀಲರಾದ ಕನ್ನಡಿಗರಾದ ಶರತ್ ಜವಳಿ, ಉತ್ತರ ಭಾರತ ಮೂಲದ ಅಂಕೋಲೆಕರ್, ಅಜೀಂ ಕಾಳೆಬುದ್ದಿ ಹಾಗೂ ರಣವೀರ್ ಸಿಂಗ್ ಅವರಿಗೆ ಕೊಕ್ ನೀಡಲಾಗಿದೆ. ಮಹದಾಯಿ ವ್ಯಾಜ್ಯದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿದ್ದ ವಕೀಲರಾದ ಬೆಳಗಾವಿ ಮೂಲದ ಎಂ.ಬಿ ಜಿರಳಿ, ಮಂಗಳೂರು ಮೂಲದ ಅನಿತಾ ಶಣೈ ಮತ್ತು ಉತ್ತರ ಭಾರತ ಮೂಲದ ಥಾಸಿ ವಿಶ್ವೇಶ್ವರ್ ಅವರಿಗೆ ಗೇಟ್‍ಪಾಸ್ ನೀಡಲಾಗಿದೆ.

    ಕಾವೇರಿ ವ್ಯಾಜ್ಯದಲ್ಲಿ ವಾದ ಮಂಡಿಸುತ್ತಿದ್ದ ಕೊಡಗು ಮೂಲದ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ, ವಕೀಲರಾದ ಕನ್ನಡಿಗ ಶರತ್ ಜವಳಿ, ಉತ್ತರಭಾರತ ಮೂಲದ ಅಜೀಂ ಕಾಳೆಬುದ್ದಿ ಅವರನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.

    ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ವ್ಯಾಜ್ಯದ ಅಂತಿಮ ವಿಚಾರಣೆ ವೇಳೆ ರಾಜ್ಯ ಸರ್ಕಾರ ನಿರ್ಧಾರ ಸರಿಯಲ್ಲ. ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನವೆಂಬರ್ 15ಕ್ಕೆ ನಡೆಯಲಿದೆ. ಹಲವು ವರ್ಷಗಳಿಂದ ಕೆಲಸ ಮಾಡಿದರೂ ಏಕಾಏಕಿ ತೆಗೆದರೆ ಅಂತಿಮ ವಿಚಾರಣೆಗೆ ತೊಂದರೆ ಆಗಬಹುದು. ಮುಖ್ಯಮಂತ್ರಿ, ಜಲ ಸಂಪನ್ಮೂಲ ಇಲಾಖೆಯಿಂದ ಯಾವುದೇ ಸಭೆಗಳನ್ನು ಮಾಡುತ್ತಿಲ್ಲ. ಹೀಗಾಗಿ ಪೂರ್ಣ ಬೆಂಬಲ ಸಿಗುತ್ತಿಲ್ಲ ಎಂದು ಹಿರಿಯ ವಕೀಲರು ಅಸಮಾಧಾನ ಹೊರ ಹಾಕಿದ್ದಾರೆ.

    ಕಿರಿಯ ವಕೀಲರ ಕೈಬಿಟ್ಟ ವಿಚಾರವಾಗಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಪ್ರತಿಕ್ರಿಯಿಸಿ, ಜಲವಾದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಹಿರಿಯ ವಕೀಲರಾದ ಶಾಮ್ ದಿವಾನ್, ಮೋಹನ್ ಕಾತರಕಿ ಹಾಗೂ ಫಾಲಿ ನಾರಿಮನ್ ಮುಂದುವರಿಯಲಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ನದಿ ವಿಚಾರಕ್ಕೆ ಸಂಬಂಧಿಸಿದಂತೆ ಎಂದಿನಂತೆ ಕರ್ನಾಟಕದ ವಾದ ಮುಂದುವರಿಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಮಹಾರಾಷ್ಟ್ರದ ಮಹಾಮಳೆಗೆ ಉ.ಕ 6 ಜಿಲ್ಲೆಗಳು ತತ್ತರ- ಎಲ್ಲೆಲ್ಲಿ ಏನು ಅನಾಹುತವಾಗಿದೆ?

    ಮಹಾರಾಷ್ಟ್ರದ ಮಹಾಮಳೆಗೆ ಉ.ಕ 6 ಜಿಲ್ಲೆಗಳು ತತ್ತರ- ಎಲ್ಲೆಲ್ಲಿ ಏನು ಅನಾಹುತವಾಗಿದೆ?

    ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಸ್ವರೂಪಿ ಮಳೆ ಆಗದೇ ಇದ್ದರೂ ನೆರೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಪ್ರಕೃತಿ ವಿಕೋಪ ಉಂಟಾಗಿದೆ. ಬೋರ್ಗೆರೆದು ಹರಿಯುತ್ತಿರುವ ಕೃಷ್ಣಾ ನದಿ ಐದು ಜಿಲ್ಲೆಗಳನ್ನು ಅಕ್ಷರಶಃ ಹೈರಾಣಾಗಿಸಿದೆ.

    ಮಹಾರಾಷ್ಟ್ರದ ಕೊಯ್ನಾ, ರಾಯಚೂರಲ್ಲಿರುವ ನಾರಾಯಣಪುರ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡಲಾಗ್ತಿದ್ದು, ಪ್ರವಾಹ ಸ್ಥಿತಿ ಉಲ್ಬಣಿಸಿದೆ. ಬಾಗಲಕೋಟೆ, ಬೆಳಗಾವಿ, ಯಾದಗಿರಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಹರಿಯುವ ಕೃಷ್ಣಾ ನದಿ ಭಾರೀ ಪ್ರಮಾಣದ ನಷ್ಟ ಉಂಟು ಮಾಡಿದೆ.

    ಮಲಪ್ರಭೆಯಲ್ಲಿ ಈಜಿ ಬಂದ ವೃದ್ಧ:
    ಬೆಳಗಾವಿ ಜಿಲ್ಲೆಯಾದ್ಯಂತ ಭಾನುವಾರವೂ ವರುಣ ಅಬ್ಬರಿಸಿದ್ದಾನೆ. ಜೊತೆಗೆ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಮಲಪ್ರಭಾ, ವೇದ ಗಂಗಾ, ದೂಧಗಂಗಾ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿವೆ. ಖಾನಾಪುರ ತಾಲೂಕಿನ ಚಾಪಗಾವಿ ಗ್ರಾಮದಲ್ಲಿ 75 ವರ್ಷದ ವಸಂತ ಅಪ್ಪು ಪಾಟೀಲ ಅವರು ಗ್ರಾಮಸ್ಥರ ವಿರೋಧದ ನಡುವೆಯೂ ನದಿ ದಾಟಲು ಮುಂದಾಗಿದ್ದರು. ಆದರೆ ಸೇತುವೆ ಮೇಲಿಂದ ಕೊಚ್ಚಿ ಹೋಗಿದ್ದರು. ವಸಂತ ಅವರು ಬರೋಬ್ಬರಿ 4 ಕಿ.ಮೀ. ನದಿಯಲ್ಲಿ ಈಜಿ ಹೊರ ಬಂದಿದ್ದಾರೆ.

    ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಸೇತುವೆ ಮುಳುಗಡೆಯಾಗಿದೆ. ಶರಣ ಗಂಗಾಂಬಿಕಾ ಐಕ್ಯಮಂಟಪ ಜಲಾವೃತಗೊಂಡಿದೆ. ಖಾನಾಪುರ ತಾಲೂಕಿನ ಹಬ್ಬನಟ್ಟಿಯ ಮಾರುತಿ ಮಂದಿರದ ಕಲಶದವರೆಗೂ ಪ್ರವಾಹ ಬಂದಿದೆ. ಚಿಕ್ಕೋಡಿ ತಾಲೂಕಿನ ದೋಣಿತೋಟದಲ್ಲಿ ಮನೆ ಪರಿಕರಗಳ ಜೊತೆಗೆ ಎಮ್ಮೆಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.

    ಮಾರ್ಕಂಡೇಯ ನದಿಯು ಗೊಡಚಿನಮಲ್ಕಿ ಜಲಪಾತದಲ್ಲಿ ಬೋರ್ಗೆರೆಯುತ್ತಿದೆ. ಕಲ್ಲೋಳದಲ್ಲಿ ಸನದಿ ತೋಟದ ವಸತಿಯಲ್ಲಿ ಸಿಲುಕಿದ್ದ ನಾಯಿಗಳಿಗೆ ಅನ್ನಹಾಕಿ ಮಾನವೀಯತೆ ಮೆರೆದಿದ್ದಾರೆ. ಮುತ್ಯಾನಟ್ಟಿ ಕೆರೆ ಒಡೆದಿದ್ದು ಇನ್ನಷ್ಟು ಮಳೆಯಾದರೆ ಮತ್ತಷ್ಟು ನೀರು ಅಕ್ಕಪಕ್ಕದ ಹಳ್ಳಿಗಳಿಗೆ ನುಗ್ಗುವ ಭೀತಿ ಎದುರಾಗಿದೆ. ದಾನವಾಡ, ದತ್ತವಾಡ ಗ್ರಾಮಗಳು ಜಲಾವೃತಗೊಂಡು ಹೊರಭಾಗದ ಸಂಪರ್ಕ ಕಳೆದುಕೊಂಡಿವೆ. ಜಮೀನಲ್ಲಿ ರೈತರು ಹಾಕಿದ್ದ ಶೆಡ್‍ಗಳು, ವಿದ್ಯುತ್ ಕಂಬಗಳು, ವಿದ್ಯುತ್ ಟ್ರಾನ್ಸ್‍ಫಾರ್ಮರ್ ಗಳು ಮುಳುಗಿವೆ.

    ಕಲ್ಲೋಳ ಗ್ರಾಮದಲ್ಲಿರೋ ಬಸ್ ನಿಲ್ದಾಣ ಮುಳುಗಿ ಹೋಗಿದೆ. ದೋಣಿತೋಟದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 4 ತಿಂಗಳ ಮಗು ಮತ್ತು ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಖಾನಾಪುರ ತಾಲೂಕಿನ ಪಾರಿಶ್ವಾಡದಲ್ಲಿ ಮನೆ ಮತ್ತು ಮೇವಿನ ಬಣವೆಯೊಂದು ಮುಳುಗಡೆಯಾಗಿದೆ.

    ಕೊಯ್ನಾ ಜಲಾಶಯವು 105 ಟಿಎಂಸಿ ಸಾಮಥ್ರ್ಯ ಹೊಂದಿದ್ದು, ಈಗಾಗಲೇ 94.20 ಟಿಎಂಸಿ ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕೊಯ್ನಾ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಕೃಷ್ಣಾ ಹಾಗೂ ಉಪನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಸಾವಿರಾರು ಎಕರೆ ಜಮೀನುಗಳು ಮುಳುಗಡೆಯಾಗಿವೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದ ಹಳ್ಳೆಪ್ಪ ಹನುಮಂತ ಗಡ್ಡಿ ಅವರ ಕುಟುಂಬವು ಜಮೀನಿನಲ್ಲಿ ವಾಸವಾಗಿತ್ತು. ಕೃಷ್ಣಾ ನದಿ ಪ್ರವಾಹದಮಟ್ಟ ಮೀರಿ ಹರಿಯುತ್ತಿದ್ದರೂ ಜಮೀನಲ್ಲಿಯೇ ವಾಸವಾಗಿದ್ದರು. ಭಾನುವಾರ ಅವರನ್ನು ಹುಣಸಗಿ ತಹಶೀಲ್ದಾರ್ ಸುರೇಶ್ ಅವರ ನೇತೃತ್ವದ ತಂಡವು ಹಳ್ಳೆಪ್ಪ ಮತ್ತು ನಂದಮ್ಮ ದಂಪತಿಯ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.

    ಶಹಪುರ ತಾಲೂಕಲ್ಲಿರುವ ಕೊಳ್ಳೂರು ಸೇತುವೆ ಮುಳುಗಡೆ ಆಗಿದೆ. ಪ್ರವಾಹದ ರಭಸದಲ್ಲಿ ಕೊಚ್ಚಿಬಂದ ನಾಗರಹಾವೊಂದು ಸೇತುವೆಯ ಕಂಬಿಗೆ ತನ್ನ ಬಾಲವನ್ನು ಸುತ್ತಿಕೊಂಡು ಜೀವ ಉಳಿಸಿಕೊಳ್ಳಲು ಒದ್ದಾಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೊಂಕಲ್, ತುಮಕೂರು, ಬೆಂಡಬಂಳಿ, ಕೊಳ್ಳೂರು ಮಳೆಯಾಗುವ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಡಂಗುರ ಹೊರಡಿಸಿದೆ.

    ನಾರಾಯಣಪುರ ಜಲಾಶಯದಿಂದ ಈಗಾಗಲೇ 2.85 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಭಾನುವಾರ ರಾತ್ರಿ ಮತ್ತೆ ಹೆಚ್ಚುವರಿಯಾಗಿ ಮೂರು ಲಕ್ಷ ಕ್ಯೂಸೆಕ್ ನೀರನ್ನ ಹೊರಬಿಡುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಶ್ರಮಬಿಂದು ಸಾಗರ ಬ್ಯಾರೇಜ್ ಶೆಡ್ ಜಲಾವೃತಗೊಂಡಿದೆ. ಆಲಗೂರಗಡ್ಡೆ ಗ್ರಾಮಕ್ಕೂ ನೀರು ನುಗ್ಗಿದ್ದು ಪ್ರವಾಹ ಹೆಚ್ಚಾದರೆ ಚಿಕ್ಕಪಡಸಲಗಿ ಸೇತುವೆ ಮುಳುಗುವುದು ನಿಶ್ಚಿತ. ತುಬಚಿ, ಶೂರ್ಪಾಲಿ, ಮುತ್ತೂರು ಮತ್ತು ಕಂಕನವಾಡಿ ನೀರಿನಿಂದ ಆವೃತಗೊಂಡಿವೆ. ಕಡಕೋಳ ಗ್ರಾಮದ ಹೆಬ್ಬಿಬಸವೇಶ್ವರ ದೇಗುಲ ಜಲಾವೃತಗೊಂಡಿದ್ದು, ಅರ್ಚಕರು ನೀರಲ್ಲೇ ಪೂಜೆ ಮಂತ್ರ-ಪಠಣ ಮಾಡಿದ್ದಾರೆ.

    ಹಸು ಸಾವು:
    ಅಸ್ಕಿಗ್ರಾಮದಲ್ಲಿ ಬೋಟ್‍ಗಳ ಮೂಲಕ ಸ್ಥಳಾಂತರಗೊಂಡ ಗ್ರಾಮಸ್ಥರು ತಮ್ಮೊಂದಿಗೆ ಎಮ್ಮೆಗಳನ್ನ ಕರೆದೊಯ್ದರು. ಕಂಕಣವಾಡಿಯಲ್ಲಿ ಬೋಟ್ ಮೂಲಕ ಎಳೆದೊಯ್ಯುವಾಗ ಹಸುವೊಂದು ಭಯಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದೆ. ನಾರಾಯಣಪುರ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕುರ್ವಕುರ್ದ, ಕುರ್ವಕುಲ ನಡುಗಡ್ಡೆ ಮುಳುಗಿವೆ. ಅಗತ್ಯ ವಸ್ತುಗಳಿಗಾಗಿ ಜನ ಡೊಂಗಾರಾಂಪುರಕ್ಕೆ ಬರುತ್ತಿದ್ದಾರೆ. ಲಿಂಗಸುಗೂರಿನ ಶೀಲಹಳ್ಳಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಒಂದೇ ಕುಟುಂಬದ ಐವರನ್ನು ರಕ್ಷಣೆ ಮಾಡಲಾಯಿತು.

    ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲೋಂಡಾ-ಕ್ಯಾಸರಲಾಕ್ ಮಧ್ಯೆಯಿರುವ ರೈಲ್ವೆ ಟ್ರ್ಯಾಕ್ ನಲ್ಲಿ ಮಣ್ಣು ಕುಸಿದಿದ್ದು, ರೈಲು ಸಂಚಾರ ಸ್ಥಗಿತಗೊಂಡಿದೆ. ದತ್ತವಾಡ ಮತ್ತು ಸದಲಗಾ ರಸ್ತೆ ಬಿರುಕುಬಿಟ್ಟಿದೆ.

    ಪ್ರವಾಹ ಪೀಡಿತ ಐದೂ ಜಿಲ್ಲೆಗಳಲ್ಲೂ ರಾಜ್ಯ ವಿಪತ್ತು ಪರಿಹಾರ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರದ ಸಿಬ್ಬಂದಿ, ಸೈನಿಕರು, ಜಿಲ್ಲೆಯ ಅಧಿಕಾರಿಗಳು ಭರದಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಪ್ರವಾಹ ಉಲ್ಪಣಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

    ದೇಶದಲ್ಲಿ ವರುಣನ ಅಬ್ಬರ:
    ಕರ್ನಾಟಕ ಮಾತ್ರವಲ್ಲ ಪಕ್ಕದ ಮಹಾರಾಷ್ಟ್ರ ಕೆಲ ದಿನಗಳಿಂದ ಜಲಪ್ರಳಯಕ್ಕೆ ಸಾಕ್ಷಿ ಆಗಿದೆ. ರಾಜಧಾನಿ ಮುಂಬೈ ಅಕ್ಷರಶಃ ಮುಳಗಿ ಹೋಗಿದೆ. ದೊಡ್ಡ ದೊಡ್ಡ ಅಪಾರ್ಟ್‍ಮೆಂಟ್‍ಗಳು, ರಸ್ತೆಗಳು ಜಲಾವೃತಗೊಂಡಿವೆ. ಪುಣೆಯ ಕಾಶ್‍ಪೇಟ್‍ನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಜಾನುವಾರಗಳನ್ನು ರಕ್ಷಣೆ ಮಾಡಲಾಗಿದೆ. ನಾಸಿಕ್‍ನಲ್ಲಿರುವ ಪ್ರಸಿದ್ಧ ತ್ರಯಬಂಕೇಶ್ವರ ದೇವಸ್ಥಾನ ಮುಳುಗಡೆ ಆಗಿದೆ.

    ಮುಂಬೈನ ಖಂಡವಾಲಿಯಲ್ಲಿ ವಾಯುಸೇನೆ ಹೆಲಿಕಾಪ್ಟರ್ ಮೂಲಕ 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಮರೀನಾ ಬೀಚ್‍ನಲ್ಲಿ ಬೃಹತ್ ಎತ್ತರದ ಅಲೆಗಳು ಅಪ್ಪಳಿಸುತ್ತಿದ್ದು, ಕಡಲ ಕಿನಾರೆಗೆ ಇಳಿಯದಂತೆ ಕಟ್ಟೆಚ್ಚರ ಘೋಷಿಸಲಾಗಿದೆ.

    ಗುಜರಾತ್‍ನ ವಡೋದರಾ, ನವರಸಿ, ಆನಂದ್, ಭರೂಚ್ ಸೇರಿದಂತೆ ದಕ್ಷಿಣ ಮತ್ತು ಮಧ್ಯ ಗುಜರಾತ್‍ನಲ್ಲೂ ಪ್ರಳಯ ಸ್ವರೂಪಿ ಮಳೆ ಆಗುತ್ತಿದೆ. ಮಧ್ಯಪ್ರದೇಶ, ಅಸ್ಸಾಂನಲ್ಲೂ ಧಾರಾಕಾರ ವರುಣ ಅಬ್ಬರಿಸುತ್ತಿದ್ದು, ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

  • ಮಳೆರಾಯನ ಅಬ್ಬರಕ್ಕೆ ತುಂಬಿದ ನದಿಗಳು – ಪ್ರಾಣದ ಹಂಗು ತೊರೆದು ವಾಹನ ಸವಾರರ ದುಸ್ಸಾಹಸ

    ಮಳೆರಾಯನ ಅಬ್ಬರಕ್ಕೆ ತುಂಬಿದ ನದಿಗಳು – ಪ್ರಾಣದ ಹಂಗು ತೊರೆದು ವಾಹನ ಸವಾರರ ದುಸ್ಸಾಹಸ

    ಬೆಳಗಾವಿ/ರಾಯಚೂರು: ಬೆಳಗಾವಿ, ಚಿಕ್ಕೋಡಿ, ರಾಯಚೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಕೃಷ್ಣಾ ನದಿ ವ್ಯಾಪ್ತಿಯಲ್ಲಿರುವ ಬರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೂ ಕೂಡ ವಾಹನ ಸವಾರರು ಮಾತ್ರ ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ.

    ಬೆಳಗಾವಿಯ ದೆಸೂರು-ಖಾನಾಪೂರ ಮಧ್ಯೆ ಇರುವ ಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರು ತುಂಬಿ ಹರಿಯುತ್ತಿದ್ದರೂ ಕೂಡ ವಾಹನ ಸವಾರರು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ವೇಗದಿಂದ ಹರಿಯುತ್ತಿರುವ ನೀರನ್ನೇ ಲೆಕ್ಕಿಸದೇ ವಾಹನ ಸವಾರರು ಕೊಳ್ಳ ದಾಟುತ್ತಿದ್ದಾರೆ. ಸ್ಥಳದಲ್ಲಿ ಯಾವುದೇ ಪೋಲಿಸರು ಇಲ್ಲದೆ ವಾಹನಸಾವರರು ಈ ರೀತಿ ಮಾಡುತ್ತಿದ್ದಾರೆ. ಕೂಡಲೇ ಅಪಾಯದ ಮಟ್ಟ ಮೀರಿ ನೀರು ಹರಿಯುವ ಸ್ಥಳಗಳಲ್ಲಿ ಪೋಲಿಸರನ್ನು ನಿಯೋಜಿಸುವಂತೆ ಜನರು ಒತ್ತಾಯಿಸಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನಚ್ಚರಿಕೆ ಕ್ರಮ ವಹಿಸಬೇಕಾಗಿದೆ.

    ಇತ್ತ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಮುಂದುವರಿದಿದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ವೇದಗಂಗಾ, ಧೂಧಗಂಗಾ ಮತ್ತು ಕೃಷ್ಣಾ ನದಿ ನೀರಿನಲ್ಲಿ ಭಾರೀ ಏರಿಕೆಯಾಗಿದೆ. ಕೃಷ್ಣಾ ನದಿ ನೀರಿನ ಒಳಹರಿವು ಸುಮಾರು 1,09,211 ಲಕ್ಷ ಕ್ಯೂಸೆಕ್ ಆಗಿದ್ದು, ಹಿಪ್ಪರಗಿ ಜಲಾಶಯದಿಂದ 97,300 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಮಳೆಯಿಂದ 6 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.

    ಕೃಷ್ಣಾ ನದಿಯ ಕಲ್ಲೋಳ-ಯಡೂರು, ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ವೇದಗಂಗಾ ನದಿಯ ಭೋಜವಾಡಿ-ಕುನ್ನೂರು, ಜತ್ರಾಟ-ಭಿವಶಿ, ಅಕ್ಕೋಳ -ಸಿದ್ನಾಳ ಸೇತುವೆಗಳು ಮುಳುಗಡೆಯಾಗಿವೆ. ಅಪಾಯದ ಮಟ್ಟ ಮೀರಿ ನದಿ ನೀರು ಹರಿಯುತ್ತಿದ್ದರೂ ಸೇತುವೆಗಳ ಮೇಲೆ ಜನರು ಸಂಚರಿಸುತ್ತಿದ್ದಾರೆ. ಅಧಿಕಾರಿಗಳ ಎಚ್ಚರಿಕೆಯ ಸಂದೇಶಕ್ಕೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

    ಮಹಾರಾಷ್ಟ್ರ ದಲ್ಲಿ ಮಳೆಯಾದ ಹಿನ್ನೆಲೆ ನಾರಾಯಣಪುರ ಜಲಾಶಯ ಕೂಡ ಭರ್ತಿಯಾಗಿದೆ. ಜಲಾಶಯದ ಒಳಹರಿವು 1.16 ಲಕ್ಷ ಕ್ಯೂಸೆಕ್ ಆಗಿದ್ದರೆ, ಜಲಾಶಯದಿಂದ ಸುಮಾರು 1.23 ಕ್ಯೂಸೆಕ್ ನೀರನ್ನು 20 ಗೇಟುಗಳಿಂದ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಜಲಾಶಯದ ಕೆಳಭಾಗದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೆಲವು ಗ್ರಾಮಗಳ ಸೇತುವೆ ಸಂಪರ್ಕ ಕಡಿತವಾಗುವ ಸಾಧ್ಯತೆ ಹೆಚ್ಚಾಗಿದೆ.

    ಅಲ್ಲದೆ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಮುಳುಗಡೆ ಹಂತದಲ್ಲಿದ್ದು, ದೇವದುರ್ಗಾ ತಾಲೂಕಿನ ಹೂವಿನಹಡಗಲಿ ಸೇತುವೆ ಮುಳುಗುವ ಸಾಧ್ಯತೆಯಿದೆ. ಸೇತುವೆ ಮುಳುಗಿದರೆ ಕಲಬುರಗಿ-ದೇವದುರ್ಗ ಮಧ್ಯೆ ವಾಹನ ಸಂಚಾರ ಸ್ಥಗಿತವಾಗಲಿದೆ. ಕೃಷ್ಣಾ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸುವಂತೆ, ನದಿಯಲ್ಲಿ ತೆಪ್ಪ ಹಾಕದಂತೆ ಸ್ಥಳೀಯರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

  • ಶಿವರಾಜ್ ಕುಮಾರ್ ದಂಪತಿಯಿಂದ ಸಿಎಂ ಎಚ್‍ಡಿಕೆ ಭೇಟಿ

    ಶಿವರಾಜ್ ಕುಮಾರ್ ದಂಪತಿಯಿಂದ ಸಿಎಂ ಎಚ್‍ಡಿಕೆ ಭೇಟಿ

    ಬೆಂಗಳೂರು: ನಟ ಶಿವರಾಜ್ ಕುಮಾರ್ ಪತ್ನಿ ಸಮೇತ ಇಂದು ಕುಮಾರಸ್ವಾಮಿ ಅವರನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದಾರೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಸ್ಮಾರಕ ಸ್ಥಳ ಅಭಿವೃದ್ಧಿ ಕುರಿತಂತೆ ಸಿಎಂ ಜೊತೆ ಮಾತನಾಡಿದ್ದೇವೆ. ಶಕ್ತಿಧಾಮ ಕುರಿತು ಕೆಲವು ಮಾಹಿತಿಯನ್ನು ನೀಡಿದ್ದೇವೆ. ಈ ಕುರಿತು ಪರಿಶೀಲನೆ ನಡೆಸಿದ ಬಳಿಕ ಚರ್ಚೆ ನಡೆಸುವುದಾಗಿ ಸಿಎಂ ತಿಳಿಸಿದರು. ಆದರೆ ಈ ವೇಳೆ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿಲ್ಲ ಎಂದರು.

    ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಪತ್ನಿ ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆದರೆ ಅವರು ಸ್ಪರ್ಧಿಸಬೇಕು ಗೆಲ್ಲಬೇಕೆಂದು ದೇವರ ಇಚ್ಛೆ ಇದ್ದರೆ ಯಾರೂ ತಪ್ಪಿಸಲಾಗದು ಎಂದು ಹೇಳಿದರು.

    ಬಳಿಕ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಚುನಾವಣೆಯ ಕುರಿತು ಇದುವರೆಗೂ ಯಾವುದೇ ಯೋಚನೆ ಮಾಡಿಲ್ಲ. ಚುನಾವಣೆಗೆ ಇನ್ನು ಸಾಕಷ್ಟು ಸಮಯ ಇದೆ. ಈ ಕುರಿತು ನನ್ನ ಸಹೋದರನ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

    ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಮಧು ಬಂಗಾರಪ್ಪ ಅವರಿಗೆ ನೀಡುವ ಕುರಿತು ಪ್ರಶ್ನೆಗೆ ಉತ್ತರಿಸಿ, ಸಿಎಂ ಕುಮಾರಸ್ವಾಮಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಕುರಿತು ಇದುವರೆಗೂ ಯಾವುದೇ ಚರ್ಚೆ ನಡೆಸಿಲ್ಲ. ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವ ಆಶಾಭಾವನೆ ಇದೆ. ಅವರು ಯಾವುದೇ ತೀರ್ಮಾನ ತೆಗೆದುಕೊಂಡರು ಸ್ವಾಗತ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಡಿವೈಎಸ್‍ಪಿ ಪತ್ರ-ಯಾವುದೇ ತೊಂದರೆ ಇದ್ದರೂ ನೇರವಾಗಿ ನನ್ನನ್ನು ಭೇಟಿ ಮಾಡಿ: ಸಿಎಂ

    ಡಿವೈಎಸ್‍ಪಿ ಪತ್ರ-ಯಾವುದೇ ತೊಂದರೆ ಇದ್ದರೂ ನೇರವಾಗಿ ನನ್ನನ್ನು ಭೇಟಿ ಮಾಡಿ: ಸಿಎಂ

    ಬೆಂಗಳೂರು: ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನನ್ನು ಭೇಟಿ ಮಾಡಿ, ಆತುರ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಸಿಎಂ ಕುಮಾರಸ್ವಾಮಿಯವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ತಾರತಮ್ಯ ವಿಚಾರವಾಗಿ ಡಿವೈಎಸ್‍ಪಿಯವರು ಡಿಜಿಐಜಿಪಿಯವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಗೃಹಕಚೇರಿ ಕೃಷ್ಣಾದಲ್ಲಿ ಪ್ರತಿಕ್ರಿಯಿಸಿದ ಅವರು, ಡಿಜಿ ಅವರಿಗೆ ಪತ್ರ ಬರೆದಿರೋ ವಿಚಾರ ನನ್ನ ಗಮನಕ್ಕೂ ಬಂದಿದೆ. ಖುದ್ದು ಡಿಜಿ ನೀಲಮಣಿ ಎನ್ ರಾಜುರವನ್ನು ಕರೆಸಿ ಈ ಕುರಿತು ಚರ್ಚೆ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಒಂದು ದಿನ ರಜೆಗೆ ಡಿವೈಎಸ್‍ಪಿ ಪರದಾಟ – ರೊಚ್ಚಿಗೆದ್ದ ಡಿವೈಎಸ್‍ಪಿಯಿಂದ ಡಿಜಿಐಜಿಪಿಗೆ ಪತ್ರ

    ಈ ವೇಳೆ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ವಿಚಾರ ಪತ್ರದಲ್ಲಿ ಉಲ್ಲೇಖ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಅಧಿಕಾರಿಗಳು ಸಮಸ್ಯೆ ಇದ್ದರೆ, ನೇರವಾಗಿ ನನ್ನ ಬಳಿ ಹೇಳಿಕೊಳ್ಳಿ. ನಮ್ಮ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಿದ್ದೇನೆ. ವಿಧಾನಸೌಧದ ಲಿಫ್ಟ್ ಮ್ಯಾನ್ ಕೂಡಾ ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಬಹುದು. ಯಾರು ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

    ಅಲ್ಲದೇ ಸಿಎಜಿ ವರದಿ ವಿಚಾರ ಇದು ನನ್ನ ಕಾಲದಲ್ಲಿ ನಡೆದಿಲ್ಲ. ಹಿಂದಿನ ಸರ್ಕಾರದಲ್ಲಿ ನಡೆದಿರುವುದರಿಂದ ಈ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

  • ಕರ್ನಾಟಕಕ್ಕೆ ಮಹಾಮೋಸ – ನದಿ ಜೋಡಣೆ ನೆಪದಲ್ಲಿ ಆಂಧ್ರ-ತಮಿಳುನಾಡಿನಲ್ಲಿ ‘ಕಮಲ’ದ ಬೀಜ ಬಿತ್ತಲು ತಯಾರಿ..?!

    ಕರ್ನಾಟಕಕ್ಕೆ ಮಹಾಮೋಸ – ನದಿ ಜೋಡಣೆ ನೆಪದಲ್ಲಿ ಆಂಧ್ರ-ತಮಿಳುನಾಡಿನಲ್ಲಿ ‘ಕಮಲ’ದ ಬೀಜ ಬಿತ್ತಲು ತಯಾರಿ..?!

    ಬೆಂಗಳೂರು: ಪದೇ ಪದೇ ಕರ್ನಾಟಕ ರಾಜ್ಯಕ್ಕೆ ತಾರತಮ್ಯ ಮಾಡಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಗ ಮತ್ತೊಂದು ಮಹಾಮೋಸ ಮಾಡಲು ರೆಡಿಯಾಗ್ತಿದೆ. ರಾಜ್ಯಕ್ಕೆ ಅನ್ಯಾಯ ಆಗ್ತಿದ್ದರೂ ಮಹದಾಯಿ ವಿಚಾರದಲ್ಲಿ ಮೂಗು ತೂರಿಸದ ಕೇಂದ್ರ ಸರ್ಕಾರ ಇದೀಗ ಕಾವೇರಿ ವಿಚಾರವನ್ನು ಕೆದಕಿದೆ. ಕಾವೇರಿ ಕೊಳ್ಳದ ಜಲಾಶಯಗಳು ರಾಜ್ಯದ ಕೈತಪ್ಪುವ ಭೀತಿಯ ಬೆನ್ನಲ್ಲೇ ಮತ್ತೊಂದು ಹೊಡೆತಕ್ಕೂ ರಾಜ್ಯ ಸಿದ್ಧವಾಗಬೇಕಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ವಿವಾದ ಬಗೆಹರಿಸಲು ಕೃಷ್ಣಾ-ಪಿನಾಕಿನಿ-ಕಾವೇರಿ ನದಿಗಳ ಜೋಡಣೆ ಪ್ಲಾನ್ ಮಾಡಿದೆ.

    ಕೃಷ್ಣಾ-ಗೋದಾವರಿ ನದಿ ಜೋಡಣೆ ಮಾಡಿದ ಆಂಧ್ರ ಸರ್ಕಾರದಿಂದ ಉತ್ತೇಜಿತಗೊಂಡಿರುವ ಕೇಂದ್ರ ಸರ್ಕಾರ ಹೊಸ ನದಿ ಜೋಡಣೆ ಯೋಜನೆ ಕುರಿತು ಡಿಪಿಆರ್ ತಯಾರಿಸುವ ಹೊಣೆಯನ್ನು ಆಂಧ್ರ ಸರ್ಕಾರಕ್ಕೆ ವಹಿಸಿದೆ. ಈ ಯೋಜನೆಯಿಂದ ಕಾವೇರಿ ವಿವಾದ ಬಗೆಹರಿಯುವ ಆಶಾಕಿರಣ ಮೂಡಿದ್ರೂ ಕರ್ನಾಟಕಕ್ಕೆ ಮಾತ್ರ ಯಾವುದೇ ಉಪಯೋಗವಿಲ್ಲ. ಮಹಾನದಿ ಗೋದಾವರಿ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಕೊರತೆ ಎದುರಿಸುತ್ತಿರುವ ಕೃಷ್ಣಾ, ಪಿನಾಕಿನ ಕಾವೇರಿ, ವೈಗೈ ಹಾಗೂ ಗುಂಡಾರ್ ವಲಯಗಳಿಗೆ ಹರಿಸುವುದು ಕೇಂದ್ರದ ಉದ್ದೇಶ. ಈ ಮೂಲಕ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕಮಲ ಅರಳಿಸಲು ನರೇಂದ್ರ ಮೋದಿ ಸರ್ಕಾರ ಪ್ಲಾನ್ ಮಾಡಿದೆಯಾ ಅನ್ನೋ ಅನುಮಾನ ಕಾಡ್ತಿದೆ. ಇನ್ನು ವಿಜಯಪುರದ ಆಲಮಟ್ಟಿಯಿಂದ ಕೃಷ್ಣಾ ನದಿಯನ್ನು ತಿರುಗಿಸಿ ಆಂಧ್ರದ ಬರಪೀಡಿತ ಅನಂತಪುರ ಜಿಲ್ಲೆಗೆ ನೀರು ನೀಡುವ ಆಲೋಚನೆಯನ್ನು ಹೊಂದಲಾಗಿದೆ.

    ಕರ್ನಾಟಕದಲ್ಲೂ ಸಾಕಷ್ಟು ಬರಪೀಡಿತ ಪ್ರದೇಶಗಳು ಇವೆ. ಆದ್ರೆ ಕೃಷ್ಣಾ ನದಿ ಮೂಲಕ ಆ ಭಾಗಗಳಿಗೆ ನೀರು ಕೊಡಿಸುವ ಪ್ರಯತ್ನವನ್ನೇ ಮಾಡಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಮಾತ್ರ ಹನಿ ನೀರು ಸಿಗದಿದ್ದರೂ ಕೇಂದ್ರದ ಮಹಾ ಮೋಸ ರಾಜ್ಯ ಸರ್ಕಾರಕ್ಕೆ ಗೊತ್ತಿದೆಯಾ ಎಂಬ ಪ್ರಶ್ನೆಯೂ ಮೂಡುತ್ತಿದೆ. ಈ ಎಲ್ಲದರ ಮಧ್ಯೆ ರಾಜ್ಯದ ಬಿಜೆಪಿ ಸಂಸದರು ಹಾಗೂ ಜನಪ್ರತಿನಿಧಿಗಳು ಏನು ಮಾಡುತ್ತಾರೆ. ರಾಜ್ಯದ ಪರ ದನಿ ಎತ್ತುತ್ತಾರಾ ಅಥವಾ ಕೇಂದ್ರದ ಮೋದಿ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ಮೌನಕ್ಕೆ ಶರಣಾಗುತ್ತಾರಾ ಎನ್ನುವುದಷ್ಟೇ ಈಗ ಎಲ್ಲರಲ್ಲಿರುವ ಕುತೂಹಲ.

  • ಚುರುಕುಗೊಂಡ ಮುಂಗಾರು ಮಳೆ-ತುಂಬಿದ ಡ್ಯಾಂ ನೋಡಿ ರೈತರ ಮೊಗದಲ್ಲಿ ಮಂದಹಾಸ-ಕೆಲವೆಡೆ ಪ್ರವಾಹ ಭೀತಿ

    ಚುರುಕುಗೊಂಡ ಮುಂಗಾರು ಮಳೆ-ತುಂಬಿದ ಡ್ಯಾಂ ನೋಡಿ ರೈತರ ಮೊಗದಲ್ಲಿ ಮಂದಹಾಸ-ಕೆಲವೆಡೆ ಪ್ರವಾಹ ಭೀತಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದೆ. ಮಳೆರಾಯನ ಆರ್ಭಟ ಜೋರಾಗಿದೆ. ಒಂದೆರೆಡು ನದಿಗಳಲ್ಲಿ ನೀರು ತುಂಬಿ ಡ್ಯಾಂಗಳು ತುಂಬಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮತ್ತೆ ಕೆಲವಡೆ ಭಾರೀ ಮಳೆ ಪ್ರವಾಹದ ಭೀತಿ ಜೊತೆ ಅವಾಂತರವನ್ನೇ ಸೃಷ್ಟಿಸಿದೆ.

    ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕೃಷ್ಣಾ ನದಿಗೆ ಸುರಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ. ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ತಮಟೆ ಬಾರಿಸಿ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

    ಕಲಬುರಗಿಯ ಜೇವರ್ಗಿ ಮತ್ತು ಅಫಜಲಪುರದಲ್ಲಿ ಭೀಮಾ ನದಿ ಆರ್ಭಟಿಸುತ್ತಿದ್ದು, ತಗ್ಗು ಪ್ರದೇಶದಲ್ಲಿನ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಜೇವರ್ಗಿ ತಾಲೂಕಿನ ನೇಲೋಗಿ ರಸ್ತೆ ಕಡಿತಗೊಂಡಿದೆ. ಕಾವೇರಿಕೊಳ್ಳದಲ್ಲಿ ಬರುವ ಕಬಿನಿ ಜಲಾಶಯ ಭರ್ತಿಯಾಗೋದಕ್ಕೆ ಕೇವಲ ನಾಲ್ಕಡಿಯಷ್ಟೇ ಬಾಕಿ. ಸದ್ಯ ನೀರಿನ ಮಟ್ಟ 2280 ಅಡಿಯಷ್ಟಿದೆ. ಡ್ಯಾಂನಿಂದ ಕಪಿಲ ನದಿಗೆ ಹೆಚ್ಚು ನೀರು ಬಿಡುಗಡೆಯಾಗೋ ಸಾಧ್ಯತೆ ಇದೆ.

    ಬರಗಾಲದ ನಾಡೇ ಅಂತಾ ಕರೆಸಿಕೊಳ್ಳುವ ಚಾಮರಾಜನಗರದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಐದು ವರ್ಷಗಳ ಬಳಿಕ ಭರ್ತಿಯಾಗಿವೆ. ಇನ್ನೂ ಎರಡು ದಿನಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.