Tag: ಕೃಷ್ಣಮೂರ್ತಿ

  • ಬೈ ಎಲೆಕ್ಷನ್ ರಿಸಲ್ಟ್- ಆರ್.ಆರ್. ನಗರದಲ್ಲಿ ನಾಳೆ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ

    ಬೈ ಎಲೆಕ್ಷನ್ ರಿಸಲ್ಟ್- ಆರ್.ಆರ್. ನಗರದಲ್ಲಿ ನಾಳೆ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ

    – ವಿಜಯೋತ್ಸವ, ಮೆರವಣಿಗೆ ನಡೆಸುವಂತಿಲ್ಲ

    ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆ ಮತ ಎಣಿಕೆಗೆ ಸಿದ್ಧತೆ ಮುಕ್ತಾಯವಾಗಿದೆ. ಬಿಬಿಎಂಪಿ, ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರತಿಷ್ಠೆಯ ಕಣವಾಗಿರೋ ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಬಿಜೆಪಿಯ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ ಹಾಗೂ ಜೆಡಿಎಸ್‍ನ ಕೃಷ್ಣಮೂರ್ತಿ ಭವಿಷ್ಯ ನಾಳೆ ಪ್ರಕಟವಾಗಲಿದೆ.

    ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಮತ ಎಣಿಕೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ಇಡೀ ಕ್ಷೇತ್ರ ವ್ಯಾಪಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯ ಮಾರಾಟಕ್ಕೂ ನಿರ್ಬಂಧ ಹಾಕಲಾಗಿದೆ. ಪೊಲೀಸರ ಹದ್ದಿನ ಕಣ್ಣಿನಲ್ಲಿ ಮತ ಎಣಿಕೆ ನಡೆಯಲಿದೆ.

    ಆರ್.ಆರ್.ನಗರದಲ್ಲಿ 25 ಸುತ್ತು ಮತ ಎಣಿಕೆ: ಆರ್.ಆರ್.ನಗರ ಮಿನಿ ಕದನದಲ್ಲಿ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ಸೇರಿ ಕಣದಲ್ಲಿ ಒಟ್ಟು 16 ಅಭ್ಯರ್ಥಿಗಳು ಇದ್ದಾರೆ. ಕ್ಷೇತ್ರದಲ್ಲಿ 412 ಅಂಚೆ ಹಾಗೂ 04 ಇಟಿಪಿಬಿಎಸ್ ಸೇರಿದಂತೆ 2,09,828 ಮತ ಚಲಾವಣೆ ಆಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಮೊದಲು ಅಂಚೆ ಹಾಗೂ ಇಟಿಪಿಬಿಎಸ್ ಮತಗಳನ್ನ ಎಣಿಕೆ ಹಾಕಲಾಗುವುದು. ಇವಿಎಂ ಮತ ಎಣಿಕೆ ಬೆಳಗ್ಗೆ 8.30 ಕ್ಕೆ ಪ್ರಾರಂಭವಾಗಲಿದೆ. ಒಟ್ಟು 25 ಸುತ್ತು ಮತ ಎಣಿಕೆ ಇರಲಿದೆ.

    ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, ಪ್ರತಿ ಸುತ್ತಿನಲ್ಲಿ 28 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಂದು ಕೊಠಡಿಯಲ್ಲಿ 7 ಎಣಿಕಾ ಟೇಬಲ್ ಗಳಂತೆ ಒಟ್ಟು 4 ಕೊಠಡಿಯಲ್ಲಿ 28 ಎಣಿಕಾ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ 3 ಸಹಾಯಕ ಚುನಾವಣೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕೆ 250 ಸಿಬ್ಬಂದಿ ನೇಮಕ ಮಾಡಲಾಗಿದ್ದು, 2 ಹಂತದ ತರಬೇತಿ ನೀಡಲಾಗಿದೆ. ಚುನಾವಣೆ ಸಿಬ್ಬಂದಿಗೆ ನಾಳೆ ಮೊಬೈಲ್ ನಿಷೇಧ ಮಾಡಲಾಗಿದೆ. ಮಾಧ್ಯಮಗಳಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ಸಿಬ್ಬಂದಿ ಸೇರಿದಂತೆ ಎಣಿಕೆ ಕೇಂದ್ರದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ.

    ಪೊಲೀಸ್ ಸರ್ಪಗಾವಲು: ಮತ ಎಣಿಕೆ ಕಾರ್ಯ ಪೊಲೀಸ್ ಭದ್ರತೆಯಲ್ಲಿ ನಡೆಯಲಿದೆ. ಮತ ಎಣಿಕೆ ಕೇಂದ್ರ ಮತ್ತು ಆರ್.ಆರ್.ನಗರ ಕ್ಷೇತ್ರದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಸುಮಾರು 1,800 ಪೊಲೀಸರ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಒಟ್ಟು 4 ಹಂತದ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಎರಡೂ ಕಡೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧವಿದ್ದು, ಚುನಾವಣಾ ಆಯೋಗದಿಂದ ಪಾಸ್ ಪಡೆದವರಿಗೆ ಮಾತ್ರ ಒಳಗೆ ಅವಕಾಶ ನೀಡಲಾಗುತ್ತದೆ.

    ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 3 ಜನ ಡಿಸಿಪಿ, ಎಸಿಪಿ ಸೇರಿ 900 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. 36 ಕೆ.ಎಸ್.ಆರ್.ಪಿ/ಸಿ.ಎ.ಆರ್ ಫೋರ್ಸ್, ಒಂದು ಅಗ್ನಿಶಾಮಕ ದಳ, ಒಂದು ಆಂಬ್ಯುಲೆನ್ಸ್ ನಿಯೋಜನೆ ಮಾಡಲಾಗಿದೆ. ಕೋವಿಡ್ ಇರುವ ಕಾರಣ ಮತ ಎಣಿಕೆ ಕೇಂದ್ರದ ಬಳಿ ಹೆಚ್ಚು ಜನ ಸೇರುವಂತಿಲ್ಲ. ಮತ ಕೇಂದ್ರದ ಬಳಿ ಸಂಭ್ರಮಾಚರಣೆ, ಪಟಾಕಿ ಹಚ್ಚುವ ಹಾಗಿಲ್ಲ. ಮತ ಎಣಿಕೆ ಕೇಂದ್ರದ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಇರುವುದಿಲ್ಲ. ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

    ಹೈವೋಲ್ಟೇಜ್ ಮತ ಎಣಿಕೆ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ ಮಧ್ಯಾಹ್ನ 1 ಗಂಟೆ ಒಳಗೆ ವಿಜಯಲಕ್ಷ್ಮಿ ಯಾರಿಗೆ ಅನ್ನೋದು ತಿಳಿಯಲಿದ್ದು, ಶಾಂತಿಯುತ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

  • ರಂಗೇರಿದ ಆರ್.ಆರ್.ನಗರ- ಮೂರು ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ರಂಗೇರಿದ ಆರ್.ಆರ್.ನಗರ- ಮೂರು ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    – ಯಾರಿಗೆ ಒಲಿಯುತ್ತಾಳೆ ರಾಜ ರಾಜೇಶ್ವರಿ?

    ಬೆಂಗಳೂರು: ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರುತ್ತಿದೆ. ಇಂದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಿಂದ ಕುಸುಮಾ ಹನುಮಂತರಾಯಪ್ಪ, ಬಿಜೆಪಿಯಿಂದ ಮುನಿರತ್ನ ಮತ್ತು ಜೆಡಿಎಸ್ ನಿಂದ ಕೃಷ್ಣಮೂರ್ತಿ ಬೈ ಎಲೆಕ್ಷನ್ ಅಖಾಡದಲ್ಲಿದ್ದು, ಆರ್.ಆರ್.ನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.

    ನಾಮಪತ್ರ ಸಲ್ಲಿಕೆ ಹಿನ್ನೆಲೆ ರಾಜರಾಜೇಶ್ವರಿ ನಗರ ಜಂಟಿ ಆಯುಕ್ತರ ಕಚೇರಿಯ ಸುತ್ತಮುತ್ತ ಭದ್ರತೆ ಕೈಗೊಳ್ಳಲಾಗಿತ್ತು. ಮಂಗಳವಾರ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದ ಬೆನ್ನಲ್ಲೇ ಪಕ್ಷ ಟಿಕೆಟ್ ಘೋಷಣೆ ಮಾಡಿತ್ತು. ಇಂದು ಅಪಾರ ಬೆಂಬಲಿಗರು ಮತ್ತು ಸಚಿವರ ಜೊತೆ ಆಗಮಿಸಿದ ಮುನಿರತ್ನ ಅವರು ನಾಮಪತ್ರ ಸಲ್ಲಿಸಿ, ಎಲ್ಲ ಒಳ್ಳೇ ರೀತಿಯಲ್ಲಿ ನಡೆದಿದೆ. ನನ್ನ ಮೇಲಿರುವ ಕ್ಷೇತ್ರದ ಜನತೆಯ ಋಣವನ್ನ ತೀರಿಸುತ್ತೇನೆ ಎಂದರು. ಮುನಿರತ್ನ ಅವರಿಗೆ ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಆರ್.ಅಶೋಕ್ ಮತ್ತು ಸುಧಾಕರ್ ಸೇರಿದಂತೆ ಹಲವರು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.

    ಇತ್ತ ಕಾಂಗ್ರೆಸ್ ಅಭ್ಯರ್ಥಿ ಹನುಮಂತರಾಯಪ್ಪ ಸಹ 11.45ಕ್ಕೆ ನಾಮಪತ್ರ ಸಲ್ಲಿಸಿ, ಇಂದು ನನ್ನ ಪಾಲಿಗೆ ಅತ್ಯಂತ ಮಹತ್ವದ ದಿನ. ನನ್ನ ಇಷ್ಟದ ದೇವರು ಆಂಜನೇಯನ ದರ್ಶನ ಮಾಡಿದ್ದೇನೆ. ದೇವರ ಪೂಜೆ ಬಳಿಕ ಹೊಸ ಶಕ್ತಿ ಬಂದಿದೆ. ಇಂತಹ ಅವಕಾಶ ಸಿಕ್ಕಿದ್ದಕ್ಕೆ ನಾನು ಯಾವಾಗಲೂ ಚಿರಋಣಿ. ತುಂಬಾ ಭಾವನಾತ್ಮಕ ದಿನ ಎಂದು ಹೇಳಿದರು. ಕುಸುಮಾ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸಾಥ್ ನೀಡಿದರು.

    ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಮೊದಲಿಗೆ ರಾಜ ರಾಜರಾಜೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಗರ ಜಂಟಿ ಆಯುಕ್ತರ ಕಚೇರಿಗೆ ಆಗಮಿಸಿದರು. ನಾಮಪತ್ರ ಸಲ್ಲಿಸಿದ ಕೃಷ್ಣಮೂರ್ತಿ, ಬಿಜೆಪಿ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾನು ಆರ್.ಆರ್.ನಗರದ ಮನೆ ಮಗ. ಅಭಿವೃದ್ಧಿಗೆ ಜನರು ಮತ ಕೊಡಬೇಕು. ಇಲ್ಲಿ ನಾನು ಅಭ್ಯರ್ಥಿ ಅಲ್ಲ ಕುಮಾರಸ್ವಾಮಿ ಅಭ್ಯರ್ಥಿ. ಚುನಾವಣೆಯಲ್ಲಿ ಗೆದ್ದರೆ ನೀವು ಕಾಲಲ್ಲಿ ತೋರಿಸಿದ್ದನ್ನ ಮನಸ್ಸಿನಲ್ಲಿ ಇಟ್ಟು ಮಾಡ್ತೀನಿ. ನಾನು ಒಕ್ಕಲಿಗನೇ ಕಾಂಗ್ರೆಸ್ ಅವರು ಒಕ್ಕಲಿಗ ಅಂತ ಓಡಾಡಿದರೂ ಜನ ಜಾತಿ ಹೆಸರಲ್ಲಿ ಮತ ಕೊಡೊಲ್ಲ. ನೂರಕ್ಕೆ ನೂರು ನಾನು ಈ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೃಷ್ಣಮೂರ್ತಿ ಅವರ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.

  • ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ತಂದೆ ನಿಧನ

    ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ತಂದೆ ನಿಧನ

    ಬೆಂಗಳೂರು: ಸ್ಯಾಂಡಲ್‍ವುಡ್ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರ ತಂದೆ ಕೃಷ್ಣಮೂರ್ತಿ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಈ ಬಗ್ಗೆ ಗಾಯಕಿ ಶಮಿತಾ ಮಲ್ನಾಡ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

    ಮಿತ್ರರೇ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರ ತಂದೆ ನಮ್ಮ ಪ್ರೀತಿಯ ಕೃಷ್ಣಮೂರ್ತಿ ಅಂಕಲ್ ನಿಧನರಾಗಿದ್ದಾರೆ. ಶನಿವಾರ ಬೆಳಗ್ಗೆ ದೈವಾಧೀನರಾದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಆಂಟಿ, ರಾಜೇಶ್ ಹಾಗೂ ಸುಜಾತ ನಿಮಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಅಂಕಲ್ ನಾವು ಎಂದಿಗೂ ನಿಮ್ಮನ್ನು ಹಾಗೂ ನಿಮ್ಮ ನಗುಮುಖವನ್ನು ಮರೆಯುವುದಿಲ್ಲ ಎಂದು ಶಮಿತಾ ಮಲ್ನಾಡ್ ತಮ್ಮ ಫೇಸ್‍ಬುಕ್ ಫೇಜ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೃಷ್ಣಮೂರ್ತಿ ಅವರು ಪತ್ನಿ ಮೀರಾ ಹಾಗೂ ಇಬ್ಬರು ಮಕ್ಕಳಾದ ಗಾಯಕ ರಾಜೇಶ್ ಕೃಷ್ಣನ್, ಸುಜಾತರನ್ನು ಅಗಲಿದ್ದಾರೆ. ರಾಜೇಶ್ ಕೃಷ್ಣನ್ ಸಂಗೀತ ಕ್ಷೇತ್ರಕ್ಕೆ 1991ರಲ್ಲಿ ಎಂಟ್ರಿ ಕೊಟ್ಟಿದ್ದರು. 2016ರಲ್ಲಿ 25 ವರ್ಷ ಪೂರೈಸಿ ಸಿಲ್ವರ್ ಜ್ಯುಬಿಲಿ ಆಚರಿಸಿಕೊಂಡಿದ್ದರು. ಇದೇ ವೇಳೆ ಮಾತನಾಡಿದ ತಂದೆ ಕೃಷ್ಣಮೂರ್ತಿ, ರಾಜೇಶ್ 5 ವರ್ಷ ಇದ್ದಾಗಲೇ ಹಾಡು ಹಾಡುವುದನ್ನು ಪ್ರಾರಂಭಿಸಿದ್ದರು ಎಂದು ಹೇಳಿದ್ದರು.

    ಸಾವಿರಾರು ಅಭಿಮಾನಿಗಳು ರಾಜೇಶ್ ಕೃಷ್ನನ್ ಅವರ ಫೇಸ್‍ಬುಕ್ ನಲ್ಲಿ ಸಂತಾಪ ಸೂಚಿಸಿದ್ದಾರೆ.


  • ಲಂಚ ಸ್ವೀಕರಿಸೋವಾಗ ಬಹಿರಂಗವಾಗಿ ಎಸಿಬಿಗೆ ಸಿಕ್ಕಿ ಬಿದ್ದ ಕೈ ಪಾಲಿಕೆ ಸದಸ್ಯ

    ಲಂಚ ಸ್ವೀಕರಿಸೋವಾಗ ಬಹಿರಂಗವಾಗಿ ಎಸಿಬಿಗೆ ಸಿಕ್ಕಿ ಬಿದ್ದ ಕೈ ಪಾಲಿಕೆ ಸದಸ್ಯ

    ಬೆಂಗಳೂರು: ಬಿಬಿಎಂಪಿ ಪಾಲಿಕೆ ಸದಸ್ಯ, ಸಿಎಂ ಸಿದ್ದರಾಮಯ್ಯ ಆಪ್ತ ಜಿ.ಕೃಷ್ಣಮೂರ್ತಿ ಬಹಿರಂಗವಾಗಿಯೇ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

    10 ಲಕ್ಷ ಲಂಚವನ್ನು ತನ್ನ ನಿವಾಸದಲ್ಲಿ ಸ್ವೀಕರಿಸುವ ವೇಳೆ ಜಿ. ಕೃಷ್ಣಮೂರ್ತಿ ಮತ್ತು ಸಹಾಯಕ ಎಂಜಿನಿಯರ್ ಇಬ್ಬರೂ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

    ಹೇಗಾಯ್ತು?
    ರಾಜಾಜಿನಗರ ವಾರ್ಡ್‍ನಲ್ಲಿ ಅಭಿವೃದ್ಧಿಯ ಕಾಮಗಾರಿ ನಡೆಸಿದ್ದಕ್ಕೆ ಗುತ್ತಿಗೆದಾರ ಧನಂಜಯ ನಾಯ್ಡು ಅವರಿಗೆ 3 ಕೋಟಿ ರೂ. ಬಿಲ್ ಬಾಕಿ ಇತ್ತು. ಬಿಲ್ ಪಾವತಿಗೆ ಅನುಮೋದನೆ ಕೊಡಲು ಕೃಷ್ಣಮೂರ್ತಿ 23 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಲಂಚಕ್ಕೆ ಬೇಡಿಕೆ ಇಟ್ಟ ವಿಚಾರವನ್ನು ಧನಂಜಯ್ ಎಸಿಬಿಗೆ ತಿಳಿಸಿದ್ದರು. ಅದರಂತೆ ಇಂದು ಎಸಿಬಿ ಎಸ್‍ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ 10 ಲಕ್ಷ ರೂ. ಲಂಚ ಸ್ವೀಕರಿಸುವಾಗ ಪಾಲಿಕೆ ಸದಸ್ಯ ಕೃಷ್ಣ ಮೂರ್ತಿ  ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

    ವಾರ್ಡ್ 99 ರಲ್ಲಿ ನಡೆದಿದ್ದ ಕಾಮಗಾರಿಯ ಬಿಲ್ ಕ್ಲಿಯರ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ದಾಳಿ ವೇಳೆ 15 ಲಕ್ಷ ಹಣ ಪತ್ತೆಯಾಗಿದೆ.  ಕೃಷ್ಣ ಮೂರ್ತಿ ಹಾಗೂ ಬಿಬಿಎಂಪಿ ಎಇ ಕೆಎಂ ಕೃಷ್ಣ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಧನಂಜಯ್ ಎಸಿಬಿಗೆ ದೂರು ನೀಡಿದ್ದರು. ಮೊದಲ ಕಂತಿನ  ಹಣ ನೀಡುವಾಗ ಇವರು ಸಿಕ್ಕಿ ಬಿದ್ದಿದ್ದಾರೆ ಎಂದು ಎಸಿಬಿ ಐಜಿಪಿ ಶರತ್ ಚಂದ್ರ ತಿಳಿಸಿದ್ದಾರೆ.

    https://www.youtube.com/watch?v=_iqMI8qzFHg