Tag: ಕೃಷಿ ಮಸೂದೆ

  • ತಿದ್ದುಪಡಿಯೊಂದಿಗೆ ಕೃಷಿ ಮಸೂದೆ ಮತ್ತೆ ಮಂಡನೆ ಆಗುತ್ತೆ: ಪ್ರಭಾಕರ ಭಟ್

    ತಿದ್ದುಪಡಿಯೊಂದಿಗೆ ಕೃಷಿ ಮಸೂದೆ ಮತ್ತೆ ಮಂಡನೆ ಆಗುತ್ತೆ: ಪ್ರಭಾಕರ ಭಟ್

    ಉಡುಪಿ: ಒಂದು ಒಳ್ಳೆಯ ಮಸೂದೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಮತ್ತೆ ಕೃಷಿ ಮಸೂದೆ ಮಂಡನೆ ಮಾಡಿಯೇ ಮಾಡುತ್ತಾರೆ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

    PM MODI

    ಉಡುಪಿಯ ಪ್ರಸಾದ್ ನೇತ್ರಾಲಯದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಕೇಂದ್ರ ಕೃಷಿ ಕಾಯ್ದೆ ವಾಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಯ್ದೆಯನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಗೊಂದಲ ನಿರ್ಮಾಣವಾಗಿತ್ತು. ಒಂದು ಒಳ್ಳೆಯ ಮಸೂದೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಮತ್ತೆ ಮಂಡನೆ ಮಾಡಿಯೇ ಮಾಡುತ್ತಾರೆ. ಕೂತು ಚರ್ಚಿಸಲು ಹೋರಾಟಗಾರರು ತಯಾರಿರಲಿಲ್ಲ. ನಮ್ಮ ದೇಶದಲ್ಲಿ ವಿಪಕ್ಷಗಳು ವಿರೋಧ ಪಕ್ಷಗಳಾಗಿವೆ. ಕೇಂದ್ರ ಸರ್ಕಾರ ಮತ್ತೆ ರೈತರ ಜೊತೆ ಚರ್ಚಿಸಲಿದೆ. ಸರ್ಕಾರದ ಜೊತೆ ಚರ್ಚಿಸದೆ ವಿರೋಧಿಸುವುದು ಪ್ರಜಾಪ್ರಭುತ್ವವೇ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರೈತ ಹೋರಾಟಕ್ಕೆ ಬಿಜೆಪಿ ಸಂಸದ ಬೆಂಬಲ – ಮೋದಿಗೆ ಸೆಡ್ಡು ಹೊಡೆದ ವರುಣ್ ಗಾಂಧಿ

    ಕರ್ನಾಟಕದಲ್ಲೂ ಸರ್ಕಾರದ ಜೊತೆ ವಿಪಕ್ಷಗಳು ಚರ್ಚಿಸಲು ಸಿದ್ಧವಿರಲಿಲ್ಲ. ವಿರೋಧಿಗಳು ರಾಜಕೀಯ ಲಾಭ ಪಡೆಯುವ ಉದ್ದೇಶ ಹೊಂದಿದ್ದಾರೆ. ರಾಜಕೀಯ ಲಾಭದ ಉದ್ದೇಶದಿಂದ ಕಾಯಿದೆಯನ್ನು ವಾಪಸ್ ಪಡೆದಿದ್ದಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಾಪಾಸ್ ಪಡೆಯಲಾಗಿದೆ. ಎಲ್ಲಾ ಕಾಯ್ದೆಗಳನ್ನು ಬೀದಿಯಲ್ಲಿ ನಿಂತು ನಿರ್ಧರಿಸುವುದು ಸಾಧ್ಯವಿಲ್ಲ. ಒಂದು ವರ್ಷಗಳ ಕಾಲ ಕೇಂದ್ರ ಸರ್ಕಾರ ಮನವೊಲಿಸಲು ಪ್ರಯತ್ನಿಸಿದೆ. ಮೋದಿ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ ಎಂದರೆ ಎರಡು ಹೆಜ್ಜೆ ಮುಂದಕ್ಕೆ ಇಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು. ಇದನ್ನೂ ಓದಿ: ಉಪಚುನಾವಣೆಯಲ್ಲಿ ಹಿನ್ನಡೆ, ಪಂಚರಾಜ್ಯಗಳ ಚುನಾವಣೆಯ ಮೇಲೆ ಕಣ್ಣು – ಕೃಷಿ ಕಾಯ್ದೆ ವಾಪಸ್‌!

  • ರೈತ ಹೋರಾಟಕ್ಕೆ ಬಿಜೆಪಿ ಸಂಸದ ಬೆಂಬಲ – ಮೋದಿಗೆ ಸೆಡ್ಡು ಹೊಡೆದ ವರುಣ್ ಗಾಂಧಿ

    ರೈತ ಹೋರಾಟಕ್ಕೆ ಬಿಜೆಪಿ ಸಂಸದ ಬೆಂಬಲ – ಮೋದಿಗೆ ಸೆಡ್ಡು ಹೊಡೆದ ವರುಣ್ ಗಾಂಧಿ

    ನವದೆಹಲಿ: ರೈತ ಹೋರಾಟಕ್ಕೆ ಬಿಜೆಪಿ ಸಂಸದ ವರುಣ್ ಗಾಂಧಿ ಬೆಂಬಲ ಘೋಷಿಸಿ ಪ್ರಧಾನಿ ನರೇಂದ್ರ ಮೋದಿಗೆ ಸೆಡ್ಡು ಹೊಡೆದಿದ್ದಾರೆ. ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ 1 ಕೋಟಿ ಪರಿಹಾರ ನೀಡಿ, ಸಾಂತ್ವನ ಹೇಳಬೇಕು ಎಂದು ಆಗ್ರಹಿಸಿ ವರುಣ್ ಗಾಂಧಿ, ಮೋದಿಗೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ನರೇಂದ್ರ ಮೋದಿ ಅವರ ನಡೆಯನ್ನು ಸ್ವಾಗತಿಸಿದ ವರುಣ್ ಗಾಂಧಿ ಅವರು, 700ಕ್ಕೂ ಹೆಚ್ಚು ರೈತರು ಚಳವಳಿಯಲ್ಲಿ ಹುತಾತ್ಮರಾಗಿದ್ದಾರೆ. ಅವರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಶಾಂತ ರೀತಿಯಲ್ಲೇ ಪ್ರತಿಭಟನೆ ನಡೆಸಿದ್ದರು. ಈ ನಿರ್ಧಾರವನ್ನು ಮೊದಲೇ ಕೈಗೊಂಡಿದ್ದರೆ ಸಾವಿರಾರು ಅಮಾಯಕ ರೈತರ ಜೀವಗಳಿಗೆ ಹಾನಿಯಾಗುತ್ತಿರಲಿಲ್ಲ ಎಂದು ನಾನು ನಂಬಿದ್ದೇನೆ. ಈ ಆಂದೋಲನದ ಸಮಯದಲ್ಲಿ ರೈತರ ವಿರುದ್ಧವಾಗಿ ದಾಖಲಾದ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಎಫ್‌ಐಆರ್‌ಗಳನ್ನು ವಜಾಗೊಳಿಸಬೇಕು. ಕೇಂದ್ರ ಸರ್ಕಾರ ಇದಕ್ಕೆ ಒಪ್ಪದೇ ಇದ್ದಲ್ಲಿ ಅನ್ನದಾತರ ಹೋರಾಟ ಮುಂದುವರೆಯಲಿದೆ. ರೈತರು ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸಲ್ಲ ಇದರೊಂದಿಗೆ ಲಖಿಂಪುರ ಹತ್ಯಾಕಾಂಡದ ರೂವಾರಿಗಳನ್ನು ಸುಮ್ಮನೆ ಬಿಡಬಾರದು ಅವರಿಗೆ ಶಿಕ್ಷೆ ಆಗಬೇಕು ಎಂದು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ದೊಡ್ಡಣ್ಣ – ಮತ್ತೆ ವಿವಾದ ಸೃಷ್ಟಿಸಿದ ನವಜೋತ್ ಸಿಂಗ್

    ವರುಣ್ ಗಾಂಧಿ ಅವರು, ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಟ್ವೀಟ್ ಮಾಡಿದ್ದರಿಂದ ಅವರನ್ನು ಬಿಜೆಪಿ ಕಾರ್ಯಕಾರಣಿಯಿಂದ ಕೈಬಿಡಲಾಗಿತ್ತು. ಅಕ್ಟೋಬರ್ ನಲ್ಲಿ ವರುಣ್ ಗಾಂಧಿ ಹಾಗೂ ಅವರ ತಾಯಿ ಮನೇಕಾ ಗಾಂಧಿ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಿಂದ ತೆಗೆದು ಹಾಕಲಾಗಿತ್ತು. ಇದನ್ನೂ ಓದಿ: ಉಪಚುನಾವಣೆಯಲ್ಲಿ ಹಿನ್ನಡೆ, ಪಂಚರಾಜ್ಯಗಳ ಚುನಾವಣೆಯ ಮೇಲೆ ಕಣ್ಣು – ಕೃಷಿ ಕಾಯ್ದೆ ವಾಪಸ್‌!

    ಇತ್ತ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದರೂ ಕೂಡ ರೈತರು ಹೋರಾಟದಿಂದ ಹಿಂದೆ ಸರಿದಿಲ್ಲ. ಚಳಿಗಾಲದ ಸಂಸತ್ ಅಧಿವೇಶನ ವೇಳೆ ನಡೆಸಲು ಉದ್ದೇಶಿಸಲಾಗಿರುವ ಟ್ರ್ಯಾಕ್ಟರ್ ಜಾಥಾದಿಂದಲೂ ಹಿಂದೆ ಸರಿಯಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸಿವೆ.

  • ಉಪಚುನಾವಣೆಯಲ್ಲಿ ಹಿನ್ನಡೆ, ಪಂಚರಾಜ್ಯಗಳ ಚುನಾವಣೆಯ ಮೇಲೆ ಕಣ್ಣು – ಕೃಷಿ ಕಾಯ್ದೆ ವಾಪಸ್‌!

    ಉಪಚುನಾವಣೆಯಲ್ಲಿ ಹಿನ್ನಡೆ, ಪಂಚರಾಜ್ಯಗಳ ಚುನಾವಣೆಯ ಮೇಲೆ ಕಣ್ಣು – ಕೃಷಿ ಕಾಯ್ದೆ ವಾಪಸ್‌!

    ನವದೆಹಲಿ: ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆದು ರೈತರಿಗೆ ಸಿಹಿ ಸುದ್ದಿ ನೀಡಿದೆ. ಈ ನಡುವೆ ಮೋದಿ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆದಿದ್ದೇಕೆ ಎಂಬ ಪ್ರಶ್ನೆ ಕೂಡ ಮನೆಮಾಡಿದ್ದು, ಇದಕ್ಕೆ ಈ ಕಾರಣಗಳು ಪ್ರಮುಖವಾಗಿ ಗೋಚರಿಸುತ್ತಿದೆ.

    ಕೇಂದ್ರ ಸರ್ಕಾರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು 2020ರ ಸಪ್ಟೆಂಬರ್ 17 ರಂದು ಜಾರಿಗೊಳಿಸಿತ್ತು. ಈ ಕಾಯ್ದೆಗಳು ಜಾರಿಗೊಳಿಸುತ್ತಿದ್ದಂತೆ ರೈತರು ಈ ಮಸೂದೆ ವಿರುದ್ಧ ಪ್ರತಿಭಟನೆಗೆ ಮುಂದಾದರು. 2020 ನವೆಂಬರ್ 26 ರಿಂದ ಸಂಘು ಗಡಿ, ಟೆಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆಗೆ ಮುಂದಾಗಿದ್ದರು. ಮಸೂದೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಸಮಜಾಯಿಷಿ ನೀಡಿದರು ಕೂಡ ತಮ್ಮ ಪಟ್ಟು ಸಡಿಲಗೊಳಿಸದೆ ಪ್ರತಿಭಟನೆ ಮುಂದುವರಿಸಿದ್ದರು. ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ಹಿಂಪಡೆದಿರೋ ವಿಚಾರ ಗೊತ್ತಿಲ್ಲ, ಆಗ ಹೊಲದಲ್ಲಿದ್ದೆ: ಸಚಿವ ಬಿ.ಸಿ.ಪಾಟೀಲ್

    ಪ್ರಮುಖ ಕಾರಣಗಳು:
    ಇದೀಗ ಕೇಂದ್ರ ಸರ್ಕಾರದ ಮುಂದಿರುವ ಪ್ರಮುಖ ಕಾರಣವನ್ನು ಮನವರಿಕೆ ಮಾಡಿಕೊಂಡು ಈ ಮಸೂದೆಯನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ, ಉತ್ತರಪ್ರದೇಶದಲ್ಲಿ ಬಿಜೆಪಿ ಜನಪ್ರಿಯತೆ ಕುಸಿದಿರುವ ಬಗ್ಗೆ ಸುಳಿವು. ಕಳೆದ ಚುನಾವಣೆಗಿಂತ ಈ ಬಾರಿ 100ಕ್ಕೂ ಅಧಿಕ ಸ್ಥಾನ ಕಳೆದುಕೊಳ್ಳುವ ಸುಳಿವು. ಮತಗಳಿಕೆ ಪ್ರಮಾಣದಲ್ಲೂ ಬಿಜೆಪಿಗೆ ಹಿನ್ನಡೆ ಆಗಬಹುದು ಎಂಬ ಲೆಕ್ಕಾಚಾರ ಮತ್ತು ಉತ್ತರಪ್ರದೇಶ ಹಲವು ಭಾಗಗಳಲ್ಲಿ ರೈತ ಹೋರಾಟದ ನೇರ ಪರಿಣಾಮ ಆತಂಕ ಮೂಡಿಸಿತ್ತು. ಈ ಪ್ರಮುಖ 5 ಕಾರಣಗಳು ಕೇಂದ್ರದ ಮುಂದೆ ಸವಾಲಾಗಿತ್ತು. ಹಾಗಾಗಿ ಈ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ ಸರ್ಕಾರ ಯಾಕಿರಬೇಕು: ಕಂಗನಾ ಅಸಮಾಧಾನ

    ಉತ್ತರ ಪ್ರದೇಶ, ಪಂಜಾಬ್ ಚುನಾವಣೆ:
    ಇತ್ತಿಚೇಗಷ್ಟೆ ದೇಶದಾದ್ಯಂತ ಮುಕ್ತಾಯವಾದ ಉಪಚುನಾವಣೆಯಲ್ಲಿ ಬಿಜೆಪಿ ಸಣ್ಣ ಮಟ್ಟಿನ ಹಿನ್ನೆಡೆಯನ್ನು ಅನುಭವಿಸಿತ್ತು. ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್ ಸೇರಿ ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ನಡೆದ ಉಪಚುನಾವಣೆಯಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತು ಮುಂದಿನ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ಲಾನ್:
    ಮುಂದಿನ ವಿಧಾನಸಭಾ ಚುನಾವಣೆಯ ಜೊತೆಗೆ ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತರ ಮನಗೆಲ್ಲುವುದು ಪ್ರಧಾನಿ ಮೋದಿ ಅವರಿಗೆ ಅನಿವಾರ್ಯ ಎನಿಸುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇಶದ ಮೂಲೆ ಮೂಲೆಯಿಂದ ರೈತರು ಮೋದಿ ಸರ್ಕಾರದ ಈ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರೈತರು ಹೋರಾಟದ ಹಾದಿಯನ್ನು ಕೈ ಬಿಡುವ ಲಕ್ಷಣಗಳು ಕಾಣಿಸದೇ ಇದ್ದಾಗ ರೈತರನ್ನು ಎದುರು ಹಾಕಿಕೊಂಡರೆ ಭವಿಷ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಹೊಡೆತ ಬೀಳಬಹುದು ಎನ್ನುವ ಮುನ್ನೆಚ್ಚರಿಕೆಯನ್ನು ಪಡೆದು ಎಚ್ಚರಿಕೆಯಿಂದ ಮುನ್ನುಗ್ಗುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಪಟ್ಟು ಬಿಡದ ರೈತರು:
    ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ಜಾರಿಗೆ ತಂದೊಡನೆ, ರೈತರೊಂದಿಗೆ ವಿಪಕ್ಷಗಳು ಕೂಡ ಈ ಮಹತ್ವಾಕಾಂಕ್ಷೆಯ ಮೂರು ಕೃಷಿ ಕಾಯ್ದೆಗಳ ವಿರುದ್ಧ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಬರ ಬರುತ್ತ ವಿಪಕ್ಷಗಳು ಸುಮ್ಮನಾದವು. ಆದರೆ ಇನ್ನೊಂದೆಡೆ ರೈತರು ಮಾತ್ರ ಈ ಮಸೂದೆ ವಿರುದ್ಧ ಹೋರಾಟ ನಿಲ್ಲಿಸಲಿಲ್ಲ. ಗಡಿಪ್ರದೇಶದಲ್ಲಿ ಮತ್ತು ರಸ್ತೆಗಿಳಿದು ಪ್ರತಿಭಟನೆ ಮುಂದುವರಿಸುತ್ತಿದ್ದರು. ರೈತರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ಮುಮದುವರಿಸಿರುವುದನ್ನು ಗಮನಿಸಿದ ಮೋದಿ ಪ್ರತಿಭಟನೆಗೆ ಮಣಿದು ಕಾಯ್ದೆ ಹಿಂಪಡೆಯಲು ತೀರ್ಮಾನಿಸಿದಂತಿದೆ.

  • ಪ್ರತಿಷ್ಠೆಗೆ ಮಣಿದು ಕೃಷಿ ಕಾಯ್ದೆ ಹಿಂಪಡೆದಿಲ್ಲ, ರೈತರ ಹಿತ ಮುಖ್ಯ: ಬಿಎಸ್‍ವೈ

    ಪ್ರತಿಷ್ಠೆಗೆ ಮಣಿದು ಕೃಷಿ ಕಾಯ್ದೆ ಹಿಂಪಡೆದಿಲ್ಲ, ರೈತರ ಹಿತ ಮುಖ್ಯ: ಬಿಎಸ್‍ವೈ

    ಹುಬ್ಬಳ್ಳಿ: ಯಾವುದೇ ಚುನಾವಣೆಯನ್ನು ಕಣ್ಮುಂದೆ ಇಟ್ಟುಕೊಂಡು ಈ ರೀತಿ ತೀರ್ಮಾನ ಮಾಡಿಲ್ಲ. ನಮ್ಮ ಕಾಯ್ದೆಯಲ್ಲಿ ಲೋಪದೋಷ ಇಲ್ಲ ಅಂತ ಹೇಳಿದ್ದು ನಿಜ. ಆದರೆ ರೈತರ ಹಿತಕ್ಕಾಗಿ ಕೃಷಿ ಕಾಯ್ದೆ ಹಿಂಪಡೆದಿದ್ದೇವೆ. ಇದರಲ್ಲಿ ಸೋಲು ಗೆಲುವು ಪ್ರಶ್ನೆ ಇಲ್ಲ, ಇದು ಉತ್ತಮ ನಿರ್ಧಾರ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಕೃಷಿ ಕಾಯಿದೆ ಹಿಂಪಡೆದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಐತಿಹಾಸಿಕ ತೀರ್ಮಾನವನ್ನು ಈಗ ತೆಗೆದುಕೊಂಡಿದ್ದಾರೆ. ರೈತ ಸಮೂಹಕ್ಕೆ ಒಂದು ಒಳ್ಳೆಯ ತೀರ್ಮಾನದ ಮೂಲಕ ಖುಷಿ ಕೊಟ್ಟಿದ್ದಾರೆ. ಕೃಷಿ ಕಾಯ್ದೆ ಹೋರಾಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಚುನಾವಣೆ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿಲ್ಲ. ಆ ಸಂದರ್ಭದಲ್ಲಿ ಏನೆಲ್ಲಾ ಆಯ್ತು ಎನ್ನುವುದು ಬೇರೆ. ಆದರೆ ಒಣ ಪ್ರತಿಷ್ಠೆಗೆ ಒಳಗಾಗದೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಪ್ರತಿಭಟನೆ ಕೈ ಬಿಡುವಂತೆ ರೈತರಲ್ಲಿ ಮೋದಿ ಮನವಿ

    ಬಿಟ್‍ಕಾಯಿನ್ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಪ್ರಧಾನಿ ಸಹ ಹೇಳಿದ್ದಾರೆ. ಇದೊಂದು ಆಕ್ಷಮ್ಯ ಅಪರಾಧ, ಯಾರೇ ತಪ್ಪು ಮಾಡಿದ್ದರೂ, ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ. ಬಿಎಸ್‍ವೈ ರಾಜಕೀಯಕ್ಕೆ ಕಡಿವಾಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಡಿವಾಣ ನನಗೆ ಹಾಕಿಲ್ಲ. ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಆದರೆ ನಾನು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ಬಂದಿದ್ದೇನೆ. ರಾಜ್ಯದ ಉದ್ದಗಲಕ್ಕೂ ಸಹ ಪ್ರವಾಸ ಮಾಡುತ್ತಿದ್ದೇನೆ. ಎಲ್ಲಿಯೇ ಹೋದರೂ ನಮ್ಮ ಯಡಿಯೂರಪ್ಪ ಅಂತ ಅಭಿಮಾನ ತೋರಿಸುತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಆ ಮೂರು ವಿವಾದಿತ ಕೃಷಿ ಕಾಯ್ದೆ ಯಾವುದು?- ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದೇಗೆ?

    ಇತ್ತೀಚೆಗೆ ಮಳೆಯಿಂದಾಗಿ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿದೆ. ಅವರ ಸಂಕಷ್ಟಕ್ಕೆ ನಾವು ಸಹ ಸಹಕರಿಸಲಿದ್ದೇವೆ. ಈ ಮಳೆಯ ಅಬ್ಬರದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗಿದೆ. ಬೆಂಗಳೂರು ಸೇರಿದಂತೆ ಎಲ್ಲ ಕಡೆ ಇದೆ ಪರಸ್ಥಿತಿ ಇದೆ ಎಂದು ಅಭಿಪ್ರಾಯಪಟ್ಟರು.

  • ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ: ರಾಕೇಶ್ ಟಿಕಾಯತ್

    ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ: ರಾಕೇಶ್ ಟಿಕಾಯತ್

    ನವದೆಹಲಿ: ಕೃಷಿ ಮಸೂದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದರೂ ಕೂಡ ನಾವು ಪ್ರತಿಭಟನೆಯನ್ನು ಹಿಂಪಡೆಯಲ್ಲ ಎಂದು ಭಾರತ್ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

    ಕೃಷಿ ಮಸೂದೆಯನ್ನು ಹಿಂಪಡೆಯುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರೊಂದಿಗೆ ಪ್ರತಿಭಟನೆಯನ್ನು ಕೈ ಬಿಟ್ಟು ಮನೆಗೆ ತೆರಳುವಂತೆ ಮನವಿ ಮಾಡಿದ್ದಾರೆ. ಈ ಮನವಿ ಬಳಿಕ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್, ಕೃಷಿ ಮಸೂದೆಯನ್ನು ಸಂಸತ್ತಿನಲ್ಲಿ ಪಾಸ್ ಮಾಡಲಾಗಿತ್ತು. ಇದೀಗ ಸಂಸತ್‍ನಲ್ಲಿ ಮತ್ತೆ ಕೃಷಿ ಮಸೂದೆ ಹಿಂಪಡೆಯುವ ಬಗ್ಗೆ ಬಿಲ್ ಪಾಸ್ ಆದ ಬಳಿಕ ನಾವು ಪ್ರತಿಭಟನಾ ಸ್ಥಳದಿಂದ ತೆರಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೃಷಿ ಕಾನೂನು ಹಿಂಪಡೆದಾಗ ರೈತರು ಹಿಂದಿರುಗುತ್ತಾರೆ: ರಾಕೇಶ್ ಟಿಕಾಯತ್

    ಇದಲ್ಲದೆ ರೈತರ ಹಲವು ಸಮಸ್ಯೆಗಳು ಬಾಕಿ ಇದೆ. ಕನಿಷ್ಠ ಬೆಂಬಲ ಬೆಲೆ ಬಗ್ಗೆ ನರೇಂದ್ರ ಮೋದಿ ಅವರು ಯಾವುದೇ ಮಾತನಾಡಿಲ್ಲ ಈ ಬಗ್ಗೆ ನಮಗೆ ಸ್ಪಷ್ಟಪಡಿಸಿದ ಬಳಿಕ ಮನೆಗೆ ತೆರಳುವ ಬಗ್ಗೆ ರೈತರೊಂದಿಗೆ ಮಾತುಕತೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಂಸತ್‍ನಲ್ಲಿ ಕೃಷಿ ಮಸೂದೆ ಹಿಂಪಡೆದ ಬಿಲ್ ಪಾಸ್ ಆಗುವವರೆಗೆ ನಾವು ಯಾವುದೇ ಹೇಳಿಕೆಗಳನ್ನು ನಂಬುವುದಿಲ್ಲ ಎಂದರು. ಇದನ್ನೂ ಓದಿ: ಆ ಮೂರು ವಿವಾದಿತ ಕೃಷಿ ಕಾಯ್ದೆ ಯಾವುದು?- ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದೇಗೆ?

    ಕೃಷಿ ಮಸೂದೆ ಹಿಂಪಡೆದ ಬಗ್ಗೆ ಮಾಹಿತಿ ಸಿಕ್ಕಂತೆ ನಾನು ನಮ್ಮ ರೈತ ಹೋರಾಟದಲ್ಲಿರುವ ರೈತರೊಂದಿಗೆ ಮಾತುಕತೆ ನಡೆಸುತ್ತೇನೆ ಆ ಬಳಿಕ ಅವರು ಕೊಡುವಂತಹ ಸೂಚನೆಯ ಮೇಲೆ ನಮ್ಮ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾನೂನು ಹಿಂಪಡೆದ ದಿನ ರೈತರು ಪ್ರತಿಭಟನಾ ಸ್ಥಳದಿಂದ ಹಿಂದಿರುಗುತ್ತಾರೆ ಎಂದು ನಾಯಕ ರಾಕೇಶ್ ಟಿಕಾಯತ್ ‌ ಈ ಹಿಂದೆ ಹೇಳಿದ್ದರು. ರೈತರು ದೆಹಲಿಯ ಗಡಿಯಿಂದ ಹಿಂದಿರುಗಲ್ಲ. ಆದ್ರೆ ಒಂದು ಷರತ್ತಿನ ಮೇಲೆ ರೈತರು ಹಿಂದಿರಗಬಹುದು. ಅದು ಮೂರು ಕಾನೂನುಗಳನ್ನ ರದ್ದುಗೊಳಿಸಿ, ಎಂಎಸ್‍ಪಿ ಗೆ ಕಾನೂನು ರೂಪಿಸಿದ ದಿನ ಮನೆಗೆ ತೆರಳುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಪ್ರತಿಭಟನೆ ಕೈ ಬಿಡುವಂತೆ ರೈತರಲ್ಲಿ ಮೋದಿ ಮನವಿ

  • ಆ ಮೂರು ವಿವಾದಿತ ಕೃಷಿ ಕಾಯ್ದೆ ಯಾವುದು?- ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದೇಗೆ?

    ಆ ಮೂರು ವಿವಾದಿತ ಕೃಷಿ ಕಾಯ್ದೆ ಯಾವುದು?- ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದೇಗೆ?

    ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ವಿವಾದಿತ ಕೃಷಿ ಕಾಯ್ದೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ವಾಪಸ್ ಪಡೆದುಕೊಂಡಿದೆ. ಈ ಮೂಲಕ ವರ್ಷದಿಂದ ಹೋರಾಟ ನಡೆಸುತ್ತಿದ್ದ ರೈತರಿಗೆ ಜಯ ಸಿಕ್ಕಿದಂತಾಗಿದೆ.

    modi

    ಮೂರು ಕೃಷಿಕಾಯ್ದೆ:
    1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, Farmers’ Produce Trade and Commerce (Promotion and Facilitation) Act, 2020.
    2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, (Farmers (Empowerment and Protection) Agreement on Price Assurance and Farm Services Act, 2020).
    3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ, 2020 Essential Commodities (Amendment) Act, 2020). ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ಈ ಮೂರು ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಬಳಿಕ ರೈತರು ಈ ಕಾಯ್ದೆಯ ವಿರುದ್ಧ ಪ್ರತಿಭಟನೆಗಿಳಿದರು. ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ವರ್ಷಾನುಗಟ್ಟಲೇ ಪ್ರತಿಭಟನೆ ನಿರತರಾಗಿದ್ದರು. ಈ ನಡುವೆ ನರೇಂದ್ರ ಮೋದಿ ಸಹಿತ ಕೇಂದ್ರ ಕೃಷಿ ಸಚಿವರು ಹಾಗೂ ಇತರ ಸಚಿವರು ರೈತರಿಗೆ ಕೃಷಿ ಮಸೂದೆ ಬಗ್ಗೆ ತಿಳಿ ಹೇಳಿದರು. ಆದರು ಕೂಡ ರೈತರು ಅದನ್ನು ಒಪ್ಪಿಕೊಳ್ಳದೆ ಪ್ರತಿಭಟನೆ ಮುಂದುವರಿಸಿದರು.

    ಸರ್ಕಾರ, ರೈತರ ನಡುವೆ ಮಾತುಕತೆ:
    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಭಾಗದಲ್ಲಿ ಒಂದೂವರೆ ವರ್ಷಕ್ಕೂ ಮೇಲ್ಪಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇದವರೆಗೂ ಸರ್ಕಾರ ಮತ್ತು ರೈತರ ನಡುವೆ 10ಕ್ಕೂ ಅಧಿಕ ಬಾರಿ ಸಭೆ ನಡೆದರು ಕೂಡ ಆ ಸಭೆಗಳು ವಿಫಲವಾಗಿತ್ತು. ಇದನ್ನೂ ಓದಿ: ಪ್ರತಿಭಟನೆ ಕೈ ಬಿಡುವಂತೆ ರೈತರಲ್ಲಿ ಮೋದಿ ಮನವಿ

    ಸುಪ್ರೀಂ ತಡೆ:
    ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಸಮಸ್ಯೆ ಇತ್ಯರ್ಥಕ್ಕಾಗಿ ನಾಲ್ವರು ಸದಸ್ಯರ ಸಮಿತಿ ರಚನೆ ಮಾಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಸುಪ್ರೀಂಕೋರ್ಟ್ ಸಮಿತಿಯಲ್ಲಿ ಧನವಂತ್ ಶೇಖಾವತ್, ಜೀತೇಂದ್ರ ಸಿಂಗ್ ಮಾನ್, ಅಶೋಕ್ ಗುಲಾಟಿ ಮತ್ತು ಡಾ.ಪ್ರಮೋದ್ ಕುಮಾರ್ ಅವರಿದ್ದರು.

    ಈ ನಡುವೆ ಪಂಚ ರಾಜ್ಯಗಳ ಚುನಾವಣೆಗೆ ಇನ್ನೂ 1 ವರ್ಷ ಬಾಕಿ ಇರುವಂತೆ ಬಿಜೆಪಿ ಸರ್ಕಾರ ಮಸೂದೆಯನ್ನು ಹಿಂಪಡೆದಿದೆ. ಕೃಷಿ ಮಸೂದೆಯಿಂದ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಹಿನ್ನಡೆಯಾಗಬಹುದೆಂಬ ಲೆಕ್ಕಾಚಾರಗಳೊಂದಿಗೆ ಸರ್ಕಾರ ಮಸೂದೆಯನ್ನು ವಾಪಸ್ ಪಡೆದಿದೆ. ಈ ಮೂಲಕ ದೇಶದಲ್ಲಿ ನಡೆಯುತ್ತಿದ್ದ ರೈತರ ಅತೀ ದೊಡ್ಡ ಪ್ರತಿಭಟನೆಗೆ ತೆರೆ ಬಿದ್ದಿದೆ.

  • ಭಾರತ್ ಬಂದ್- ಹಾವೇರಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಯತ್ನ

    ಭಾರತ್ ಬಂದ್- ಹಾವೇರಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಯತ್ನ

    ಹಾವೇರಿ: ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆ ಭಾರತ್ ಬಂದ್ ಕರೆ ನೀಡಿದೆ. ಹಾವೇರಿಯಲ್ಲಿ ಭಾರತ ಬಂದ್ ಬೆಂಬಲಿಸಿ ಪ್ರತಿಭಟನೆಗೆ ಬಂದಿದ್ದ ಇಬ್ಬರು ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ರೈತರನ್ನು ನೂರ್ ಅಹಮ್ಮದ್ ಮುಲ್ಲಾ ಮತ್ತು ರಾಕೇಶ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಹಗ್ಗ ಹಿಡಿದುಕೊಂಡು ಪ್ರತಿಭಟನೆಗೆ ಈ ಇಬ್ಬರು ರೈತರು ಬಂದಿದ್ದರು. ಟವೆಲ್‍ನಲ್ಲಿ ಹಗ್ಗವನ್ನು ಮುಚ್ಚಿಟ್ಟುಕೊಂಡು ಬಂದ ರೈತರ ಬಳಿಯಿದ್ದ ಹಗ್ಗವನ್ನು ಗಮನಿಸಿ ಹಗ್ಗವನ್ನು ಕಿತ್ತುಕೊಳ್ಳಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: 10 ವರ್ಷ ಕಾಲ ರೈತರು ಪ್ರತಿಭಟನೆಗೆ ಸಿದ್ದರಿದ್ದಾರೆ – ರಾಕೇಶ್ ಟಿಕಾಯತ್

    ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಹಗ್ಗ ಕೊಡಲು ರೈತರು ನಿರಾಕರಿಸಿದರು. ಕೊನೆಗೂ ಹಗ್ಗವನ್ನು ಕಸಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಪೊಲೀಸರು ತಪ್ಪಿಸಿದರು. ನಂತರ ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದು, ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಡಿಸಿಪಿ ಮೇಲೆ ಕಾರು ಹತ್ತಿಸಲು ಯತ್ನ

  • ರೈತಪರ ಕೆಲಸ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಅಶೋಕ್ ಕೊಡವೂರು

    ರೈತಪರ ಕೆಲಸ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಅಶೋಕ್ ಕೊಡವೂರು

    ಉಡುಪಿ: ಶೋಭಾ ಕರಂದ್ಲಾಜೆ ಕೃಷಿ ಮಂತ್ರಿಯಾಗಿ ನೇಮಕವಾಗಿದ್ದಾರೆ. ನೂತನ ಸಚಿವೆ, ನಮ್ಮ ಸಂಸದೆಗೆ ಶುಭಾಶಯಗಳು. ಮುಂದೆ ರೈತರ ಪರ ಕೆಲಸ ಮಾಡಲಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಎಚ್ಚರಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಶೋಕ್ ಕೊಡವೂರು ಅವರು, ಕೃಷಿ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರಿಂದ ಒಳ್ಳೆಯ ಕೆಲಸಗಳು ನಡೆಯಲಿ ಎಂದು ಹಾರೈಸುತ್ತೇನೆ. ಇಡೀ ದೇಶದ ರೈತರು ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೃಷಿ ಮಸೂದೆಯ ಸಮಸ್ಯೆಯನ್ನು ಶೋಭಾ ಅವರು ಶೀಘ್ರ ಬಗೆಹರಿಸಲಿ. ಕೊರೊನಾ ಸಾಂಕ್ರಾಮಿಕದಿಂದ ಬಳಲುತ್ತಿರುವ ರೈತರಿಗೆ ಸವಲತ್ತುಗಳನ್ನು ಒದಗಿಸಿ. ದೇಶದಲ್ಲಿ ನಶಿಸುತ್ತಿರುವ ಕೃಷಿಯನ್ನು ಉಳಿಸುವ ಜವಾಬ್ದಾರಿ ಕರಂದ್ಲಾಜೆ ಮೇಲಿದೆ ಎಂದರು. ಇದನ್ನೂ ಓದಿ: ಉಡುಪಿ-ಚಿಕ್ಕಮಗಳೂರು ಜನತೆಗೆ ಮೊದಲ ಧನ್ಯವಾದ: ಶೋಭಾ ಕರಂದ್ಲಾಜೆ

    ಶೋಭಾ ಕರಂದ್ಲಾಜೆ ಮಾಡುವ ಒಳ್ಳೆಯ ಕೆಲಸಗಳಿಗೆ ಬೆಂಬಲವಿದೆ. ಕರ್ತವ್ಯಲೋಪ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಲು ಮೀನಮೇಷ ಎಣಿಸೋದಿಲ್ಲ. ಡಿವಿ ಸದಾನಂದ ಗೌಡ ಅವರನ್ನು ಹುದ್ದೆಯಿಂದ ಇಳಿಸಲಾಗಿದೆ. ಕರಾವಳಿಗೆ ಪ್ರಾತಿನಿಧ್ಯತೆ ಕೊಡುವ ಉದ್ದೇಶದಿಂದ ಶೋಭಾ ಕರಂದ್ಲಾಜೆಯನ್ನು ನೇಮಿಸಲಾಗಿದೆ. ಒಕ್ಕಲಿಗ ಸಮುದಾಯವನ್ನು ಓಲೈಸುವ ಉದ್ದೇಶವೂ ಇದರ ಹಿಂದೆ ಇದೆ ಎಂದು ಅಭಿಪ್ರಾಯಪಟ್ಟರು.

  • ರೈತ ಹೋರಾಟಗಾರರಿಂದ ಇಂದು ಕರಾಳ ದಿನ ಆಚರಣೆ

    ರೈತ ಹೋರಾಟಗಾರರಿಂದ ಇಂದು ಕರಾಳ ದಿನ ಆಚರಣೆ

    ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಇಂದು 6 ತಿಂಗಳು ಪೂರ್ಣವಾಗುವ ಹಿನ್ನೆಲೆ ರೈತ ಹೋರಾಟಗಾರರು ಇಂದು ಕರಾಳ ದಿನ ಆಚರಣೆ ಮಾಡಿದ್ದಾರೆ.

    ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಇಂದು 6 ತಿಂಗಳು ಪೂರ್ಣಗೊಂಡ ಕಾರಣ ಇಂದು ರೈತರು ತಮ್ಮ ಮನೆಗಳಲ್ಲಿ, ವಾಹನಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ಕಪ್ಪು ಬಾವುಟ ಹಾರಿಸಲು ನಿರ್ಧಾರ ಮಾಡಿದ್ದಾರೆ. ಇದರೊಂದಿಗೆ ಪಂಜಾಬ್‍ನ ರೈತರು ಕಪ್ಪು ಬಣ್ಣದ ಟರ್ಬನ್‍ಗಳನ್ನು ಧರಿಸುವ ಮೂಲಕ ಕರಾಳ ದಿನ ಆಚರಣೆಗೆ ಬೆಂಬಲ ಸೂಚಿಸುತ್ತಿದ್ದಾರೆ. 2020ರ ನವೆಂಬರ್ 26ರಂದು ದೆಹಲಿ ಚಲೋ ಹೆಸರಿನಲ್ಲಿ ಹೋರಾಟ ಆರಂಭಿಸಿದ್ದ ರೈತರು, ದೆಹಲಿ ಪ್ರವೇಶಕ್ಕೆ ಅನುಮತಿ ಸಿಗದ ಹಿನ್ನಲೆಯಲ್ಲಿ ಗಡಿಗಳಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಸತತವಾಗಿ 6 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ಕೇಂದ್ರದ 3 ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಪಟ್ಟುಹಿಡಿದಿದ್ದಾರೆ.

    ಈ ನಡುವೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳು ಕೂಡ ವಿಫಲವಾಗಿದೆ. ಹಾಗಾಗಿ ಇಂದಿನಿಂದ ಕರಾಳ ದಿನ ಆಚರಿಸಲು ರೈತ ಸಂಘಟನೆಗಳು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಕೊರೊನಾ ನಡುವೆಯೂ ದೆಹಲಿ ಗಡಿಯಲ್ಲಿ ಕಪ್ಪು ಬಾವುಟ ಹಿಡಿದು ರೈತರು ಹೋರಾಟ ಮುಂದುವರಿಸಿದ್ದಾರೆ. ಇತ್ತ ಪೊಲೀಸರು ಕೂಡ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಭಾಗದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

  • ಮಂಗಳವಾರ ಬೆಂಗಳೂರು ರಸ್ತೆಗೆ ಇಳಿಯುವ ಮುನ್ನ ಯೋಚಿಸಿ

    ಮಂಗಳವಾರ ಬೆಂಗಳೂರು ರಸ್ತೆಗೆ ಇಳಿಯುವ ಮುನ್ನ ಯೋಚಿಸಿ

    – ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಪರೇಡ್
    – ಜನವರಿ 26ರಂದು ಬೆಂಗಳೂರು ಲಾಕ್
    – 25 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ ಪರೇಡ್

    ಬೆಂಗಳೂರು: ಗಣರಾಜ್ಯೋತ್ಸವ ರಜೆ ಅಂತಾ ಹೊರಹೋಗುವ ಮುನ್ನ ಜಾಗೃಕತರಾಗಿರಿ. ಕೇಂದ್ರದ ಕೃಷಿ ಮಸೂದೆಯ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ನೇತೃತ್ವದಲ್ಲಿ ಟ್ರ್ಯಾಕ್ಟರ್ ಪರೇಡ್ ಮೂಲಕ ಬೆಂಗಳೂರಿನಲ್ಲಿ ರೈತರ ಮಹಾ ರ‍್ಯಾಲಿ ನಡೆಯಲಿದೆ.

    ಜನವರಿ 26ರಂದು ಮಂಗಳವಾರ ಬೆಂಗಳೂರಲ್ಲಿ ಓಡಾಡೋರು ಎಚ್ಚರವಾಗಿದ್ದರೆ ಒಳಿತು. ಕೇಂದ್ರದ ಕೃಷಿ ಮಸೂದೆಯ ವಿರೋಧಿಸಿ ಅನ್ನದಾತರ ಅಷ್ಟದಿಗ್ಬಂಧನ ಮಾಡಲಿದ್ದಾರೆ. ರಾಜ್ಯದ ಸಾವಿರಾರು ರೈತರು ಟ್ರ್ಯಾಕ್ಟರ್ ಪರೇಡ್ ಮೂಲಕ ಬೆಂಗಳೂರಿನಲ್ಲಿ ರೈತರು ಮಹಾ ರ‍್ಯಾಲಿ ಮಾಡಲಿದ್ದಾರೆ.

    ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ನೇತೃತ್ವದಲ್ಲಿ ನಡೆಯುತ್ತಿರುವ ಪೆರೇಡ್‍ನಲ್ಲಿ 25 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್, ವಾಹನಗಳಲ್ಲಿ ರೈತರು ರ‍್ಯಾಲಿ ಮಾಡಲಿದ್ದಾರೆ. ನೈಸ್ ರೋಡ್ ಜಂಕ್ಷನ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ರ‍್ಯಾಲಿ ನಡೆಸಲು ಸಿದ್ಧತೆ ನಡೆದಿದೆ. ಪೊಲೀಸರು ತಡೆದರೆ ಹೋರಾಟ ಕ್ರಾಂತಿಯ ರೂಪ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಗಣರಾಜ್ಯೋತ್ಸವದ ದಿನ ಅನ್ನದಾತರು ನಡೆಸಲಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಪೊಲೀಸ್ ಪರ್ಮಿಷನ್ ಸಿಗುವುದು ಅನುಮಾನವಾಗಿದೆ. ಗಣರಾಜ್ಯೋತ್ಸವದ ದಿನ ಪೆರೇಡ್‍ನಲ್ಲಿ ಸಾವಿರಾರು ಪೊಲೀಸರು ಭಾಗಿಯಾಗಿರುತ್ತಾರೆ. ಈ ಹಿನ್ನೆಲೆ ಟ್ರ್ಯಾಕ್ಟರ್ ರ‍್ಯಾಲಿಗೆ ಅನುಮತಿ ನೀಡದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

    ದೆಹಲಿಯಲ್ಲೂ ಪ್ರತಿಭಟನೆ: ಜ.26ರಂದು ಗಣರಾಜ್ಯೋತ್ಸವ ಪರೇಡ್‍ಗೆ ಧಕ್ಕೆ ಮಾಡದಂತೆ ಷರತ್ತುಬದ್ಧ ನಿಯಮದ ಮೇಲೆ ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಪೊಲೀಸರ ಒಪ್ಪಿಗೆ ನೀಡಿದ್ದಾರೆ. ಪಂಜಾಬ್‍ನಿಂದ ಮನೆಗೊಂದರಂತೆ ಟ್ರ್ಯಾಕ್ಟರ್ ತರಲು ಕರೆ ನೀಡಲಾಗಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಿಂದ ಬರುತ್ತಿರುವ ಹೆಚ್ಚುವರಿ ಟ್ರ್ಯಾಕ್ಟರ್ ರ‍್ಯಾಲಿಗೆ ನಿಗಧಿತ ಮಾರ್ಗ ಸೂಚಿಸಲಿರುವ ಪೊಲೀಸರು ನಿಗಧಿತ ಮಾರ್ಗದಲ್ಲಿ ಶಾಂತಿಯುತ ಪ್ರತಿಭಟನಾ ನಡೆಸಲು ತೀರ್ಮಾನ ಮಾಡಲಾಗಿದೆ. ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಯಲಿದೆ.