Tag: ಕೃಷಿ ಬಿಲ್

  • ಅಮಿತ್ ಶಾ ಪ್ರಸ್ತಾಪ ತಿರಸ್ಕರಿಸಿದ ಪ್ರತಿಭಟನಾ ನಿರತ ರೈತರು

    ಅಮಿತ್ ಶಾ ಪ್ರಸ್ತಾಪ ತಿರಸ್ಕರಿಸಿದ ಪ್ರತಿಭಟನಾ ನಿರತ ರೈತರು

    ನವದೆಹಲಿ: ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರಸ್ತಾಪವನ್ನ ತಿರಸ್ಕರಿಸಿದ್ದು ತಮ್ಮ ನಿಲುವಿಗೆಗೆ ಬದ್ಧರಾಗಿದ್ದಾರೆ.

    ಅಮಿತ್ ಶಾ ಪ್ರತಿಭಟನಾ ನಿರತ ರೈತರಿಗೆ ವೀಡಿಯೋ ಮೂಲಕ ಸಂದೇಶ ರವಾನಿಸಿದ್ದರು. ಡಿಸೆಂಬರ್ 3ರಂದು ನಿಮ್ಮ ಜೊತೆ ಮಾತುಕತೆ ನಡೆಸಲಾಗುವುದು. ಮಾತುಕತೆ ಇಚ್ಛಿಸಿದಲ್ಲಿ ಎಲ್ಲರೂ ದೆಹಲಿ-ಹರಿಯಾಣ ಗಡಿಯಿಂದ ಬುರಾಡಿತ ನಿರಂಕಾರಿ ಮೈದಾನಕ್ಕೆ ತೆರಳಬೇಕೆಂದು ಷರತ್ತು ವಿಧಿಸಿದ್ದರು. ಇದಕ್ಕೂ ಮೊದಲು ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಮಾತುಕತೆಗೆ ಆಹ್ವಾನಿಸಿದ್ದರು.

    ಅಮಿತ್ ಶಾ ಮತ್ತು ನರೇಂದ್ರ ತೋಮರ್ ಪ್ರಸ್ತಾಪ ತಿರಸ್ಕರಿಸಿದ ಬಳಿಕ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸಿದ್ದಾರೆ. ಅಮಿತ್ ಶಾ ತಮ್ಮ ಸಂದೇಶದಲ್ಲಿ ಬುರಾಡಿ ಮೈದಾನಕ್ಕೆ ತೆರಳಬೇಕೆಂಬ ಷರತ್ತು ವಿಧಿಸಿದ್ದಾರೆ. ಕೇಂದ್ರದ ವಿರುದ್ಧ ಪ್ರತಿಭಟನೆ ರಾಮಲೀಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಹಾಗಾಗಿ ಪ್ರತಿಭಟನಾ ಸ್ಥಳ ಬದಲಿಸಲು ಸಾಧ್ಯವಿಲ್ಲ. ಸರ್ಕಾರ ಮೂರು ಕೃಷಿ ಕಾನೂನುಗಳನ್ನ ಹಿಂಪಡೆದುಕೊಳ್ಳುವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಪಂಜಾಬ್ ಕಿಸಾನ ಯೂನಿಯನ್ ಅಧ್ಯಕ್ಷ್ಯ ರೂಲ್ದೂ ಸಿಂಗ್ ಹೇಳಿದ್ದಾರೆ.

    ಮೋದಿ ಸರ್ಕಾರ ಜಾರಿಗೆ ತಂದಿರೋ ವಿವಿಧ ಕೃಷಿ ಮಸೂದೆ ವಿರೋಧಿಸಿ ದೆಹಲಿ ಚಲೋ ಆಂದೋಲನ ನಡೆಸುತ್ತಿರುವ ರೈತರ ವಿರುದ್ಧ ಹರಿಯಾಣ ಪೊಲೀಸರು ಕೊಲೆ ಯತ್ನ, ಗಲಭೆ ಸೃಷ್ಟಿ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೇಸ್ ದಾಖಲಿಸಿದ್ದಾರೆ.

    ಇನ್ನು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಮಂದಿ ರೈತರು ಸಿಂಗು ಗಡಿಯಲ್ಲಿ ಜಮಾಯಿಸಿದ್ದು, ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇಲ್ಲಿಂದ ವಾಪಸ್ ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾರೆ. ದೆಹಲಿ-ಎನ್ ಸಿಆರ್ ನಗರಗಳ ಮಧ್ಯೆ ವಾಹನ ಸಂಚಾರ ತೀವ್ರ ಅಡಚಣೆಯುಂಟಾಗಿದೆ. ಹರ್ಯಾಣದ ಗಡಿಭಾಗದ ಸಿಂಗು, ಟಿಕ್ರಿ, ಧನ್ಸ, ಜಾರೊಡ ಕಲನ್‍ಗಳಲ್ಲಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ.

    ಈ ಮಧ್ಯೆ, ನಮ್ಮ ರೈತರು ಇಲ್ಲ. ಪಂಜಾಬ್ ಸರ್ಕಾರವೇ ಇದಕ್ಕೆ ಕಾರಣ ಅಂತ ಹರ್ಯಾಣ ಸಿಎಂ ಮನೋಹರ್‍ಲಾಲ್ ಖಟ್ಟರ್ ಟೀಕಿಸಿದ್ದಾರೆ. ಇದಕ್ಕೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಿರುಗೇಟು ಕೊಟ್ಟಿದ್ದು, ನಿಮ್ಮ ವರ್ತನೆಯಿಂದಾಗಿ ನಿಮ್ಮ ಫೋನ್ ಕಾಲ್ ಅನ್ನು ನಾನು ಸ್ವೀಕರಿಸಲ್ಲ ಅಂದಿದ್ದಾರೆ.

  • ರೈತ ವಿರೋಧಿ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ- ಶುಕ್ರವಾರ ಕರ್ನಾಟಕ ಬಂದ್ ಸಾಧ್ಯತೆ

    ರೈತ ವಿರೋಧಿ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ- ಶುಕ್ರವಾರ ಕರ್ನಾಟಕ ಬಂದ್ ಸಾಧ್ಯತೆ

    ಬೆಂಗಳೂರು: ಸೆಪ್ಟೆಂಬರ್ 25ರಂದು ಕರ್ನಾಟಕವೇ ಬಂದ್ ಆಗುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಬಂದ್ ಆಚರಿಸುವ ನಿರೀಕ್ಷೆ ಇದೆ.

    ಈ ಸಂಬಂಧ ಇವತ್ತು ಬೆಳಗ್ಗೆ 11 ಗಂಟೆಗೆ ಅಧಿಕೃತ ಘೋಷಣೆ ಆಗಲಿದೆ. ಬಂದ್‍ಗೆ 32ಕ್ಕೂ ಹೆಚ್ಚು ಸಂಘಟನೆಗಳು ಕೈಜೋಡಿಸಲಿವೆ. ರೈತ ಸಂಘಟನೆಗಳು ಮಾತ್ರವಲ್ಲದೇ ನಾರಾಯಣಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಓಲಾ-ಉಬರ್, ಆಟೋ, ಟ್ಯಾಕ್ಸಿ ಸಂಘಟನೆಗಳು ಬೆಂಬಲ ಘೋಷಿಸಲಿವೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನ ಬಂದ್ ಮಾಡಿ ಪ್ರತಿಭಟಿಸಲು ರೈತ ಸಂಘಟನೆಗಳು ತೀರ್ಮಾನಿಸಿವೆ.

    ಬೆಂಗಳೂರಲ್ಲಿ ನಡೆಯುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಮತ್ತು ಮೌರ್ಯ ಸರ್ಕಲ್ ಎದುರು ರೈತರು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ನಿನ್ನೆಯಿಂದ ವಿಧಾನಮಂಡಲದ ಅಧಿವೇಶನ ಆರಂಭ ಆಗಿದ್ದು, ಅಧಿವೇಶನದ ಮೊದಲ ದಿನವೇ ರಾಜಧಾನಿಯಲ್ಲಿ ರೈತರು ಹೋರಾಟಕ್ಕಿಳಿದಿದ್ದರು. ಈ ವೇಳೆ ಮಾತನಾಡಿದ್ದ ಕುರುಬೂರು ಶಾಂತಕುಮಾರ್, ಭೂಮಿ ತಾಯಿ ಮಾರಾಟಕ್ಕೆ ಮುಂದಾದ ಸರ್ಕಾರಕ್ಕೆ ತಕ್ಕ ಪಾಠ ಕಲಿಸ್ತೇವೆ. ದೇಶಾದ್ಯಂತ ರೈತರು ದಂಗೆ ಏಳುವ ಮುನ್ನ ಎಚ್ಚೆತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಇದು ರೈತ ವಿರೋಧಿ ಕೆಲಸ. ರೈತನ ಮಗನಾಗಿದ್ದರೇ ಈ ರೀತಿ ಮಾಡುತ್ತಿರಲಿಲ್ಲ. ಮೋದಿ ಮಾತನ್ನು ಯಾರು ನಂಬಬೇಡಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದರು.

    ಕೃಷಿ ಬಿಲ್ ವಿರೋಧಿಸಿ ಪಂಜಾಬ್‍ನಲ್ಲಿ ಸೆಪ್ಟೆಂಬರ್ 25ಕ್ಕೆ ಬಂದ್‍ಗೆ ಕರೆ ನೀಡಲಾಗಿದೆ. ಇದನ್ನು ಅಖಿಲ ಭಾರತ ಮಟ್ಟದಲ್ಲಿ ಮಾಡಲು ಕಿಸಾನ್ ಸಭಾ ಚಿಂತನೆ ನಡೆಸುತ್ತಿದೆ. ಇದರ ನಡುವೆಯೇ ಕೃಷಿ ಮಸೂದೆ ಸಂಬಂಧ ಪ್ರಧಾನಿ ಮೋದಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ರೈತರ ಶ್ರೇಯಸ್ಸಿಗಾಗಿಯೇ ಕೃಷಿ ಬಿಲ್ ತರಲಾಗುತ್ತಿದೆ. ಆದರೆ ಈ ಬಗ್ಗೆ ವಿಪಕ್ಷಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಆರೋಪಿಸಿದ್ದರು. ಕೃಷಿ ಮಸೂದೆಗಳು ಯಾವುದೇ ಕಾರಣಕ್ಕೂ ರೈತ ವಿರೋಧಿ ಅಲ್ಲ. ಇವುಗಳಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಲಿವೆ. ಈ ಮಸೂದೆಗಳಿಂದಾಗಿ ಬೆಳೆಗಳಿಗೆ ಬೆಂಬಲ ಬೆಲೆಯೂ ರದ್ದಾಗಲ್ಲ. ಬೆಂಬಲ ಬೆಲೆ ಮುಂದುವರೆಯಲಿದೆ ಎಂದು ಈ ಮೂಲಕ ರೈತರಿಗೆ ಭರವಸೆ ನೀಡುತ್ತಿದ್ದೇನೆ. ನೂತನ ಕೃಷಿ ಮಸೂದೆಯಿಂದಾಗಿ ರೈತರು ಎಲ್ಲಿ ಬೇಕಾದ್ರೂ ತಮ್ಮ ಉತ್ಪನ್ನಗಳನ್ನು ಮಾರಬಹುದು. ದೇಶದ ಯಾವುದೇ ಮಂಡಿಯನ್ನು ಮುಚ್ಚುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದರು.