Tag: ಕೃಷಿ ಕಾಯ್ದೆ

  • ಭಾರತ್ ಬಂದ್‌ಗೆ ಸೈನಿಕನ ಬೆಂಬಲ – ಹುಬ್ಬಳ್ಳಿಯಲ್ಲಿ ಬಸ್ ಸಂಚಾರ ಸ್ಥಗಿತ

    ಭಾರತ್ ಬಂದ್‌ಗೆ ಸೈನಿಕನ ಬೆಂಬಲ – ಹುಬ್ಬಳ್ಳಿಯಲ್ಲಿ ಬಸ್ ಸಂಚಾರ ಸ್ಥಗಿತ

    ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್‌ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್ ಬಹುತೇಕ ಯಶ್ವಸಿಯಾಗಿದೆ.

    ಭಾರತ ಬಂದ್ ಹಿನ್ನೆಲೆಯಲ್ಲಿ ನಸುಕಿನ ಜಾವದಿಂದಲೇ ರೈತ ಮುಖಂಡರು, ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಚೆನ್ನಮ್ಮ ಸರ್ಕಲ, ಹೊಸೂರ ಸರ್ಕಲ್, ಹೊಸೂರು ಡಿಪೋ ಮುಂದೆ ಪ್ರತಿಭಟನೆ ನಡೆಸಿದರು.

     

    ಚೆನ್ನಮ್ಮ ಸರ್ಕಲ್ ಬಳಿ ಮುಂಜಾನೆ ಹೋರಾಟಗಾರರು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ರೈತ ಮುಖಂಡರು ಹೊಸೂರು ಡಿಪೋ ಮುಂದೆ ಸಾರಿಗೆ ಬಸ್ ಗಳು ಹೊರಹೋಗದಂತೆ ತಡೆದು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಲವಂತವಾಗಿ ಬಂದ್ ಮಾಡಿದಂತೆ ಪೊಲೀಸರು ಎಚ್ಚರಿಕೆ ನೀಡಿದ ಪರಿಣಾಮ ಹೋರಾಟಗಾರರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ‌ ಮಾತಿನ ಚಕಮಕಿ‌ ನಡೆಯಿತು.

    ಸೈನಿಕನ ಬೆಂಬಲ
    ಚೆನ್ನಮ್ಮ‌ ಸರ್ಕಲ್ ಬಳಿ ಕಾಂಗ್ರೆಸ್‌ನ ಕಿಸಾನ್‌ ಮೋರ್ಚಾ ಕಾರ್ಯಕರ್ತರು ಹಾಗೂ ರೈತ ಮುಖಂಡರು ನಡೆಸುತ್ತಿದ್ದ ಪ್ರತಿಭಟನೆಗೆ ರಜೆ ಮೇಲೆ ಊರಿಗೆ ಆಗಮಿಸಿದ್ದ ಸೈನಿಕರೊಬ್ಬರು ಸಮವಸ್ತ್ರದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

     

    ಸದ್ಯ ಅಸ್ಸಾಂ ಸಿಗ್ನಲ್‌ ರೆಜಿಮೆಂಟ್ ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಕುಂದಗೋಳ ತಾಲೂಕಿನ ಬರದ್ವಾಡ್ ಗ್ರಾಮದ ರಮೇಶ್‌ ಮಾಡಳ್ಳಿ 25 ದಿನಗಳ ಕಾಲ ರಜೆಯಲ್ಲಿ ಊರಿಗೆ ಬಂದಿದ್ದು ಪ್ರತಿಭಟನೆಯನ್ನು ಭಾಗವಹಿಸಿದ್ದಾರೆ.

    ಈ ವೇಳೆ ಮಾತನಾಡಿದ ಸೈನಿಕ ರಮೇಶ್ ನಾನು ರೈತನ ಮಗ. ಹೀಗಾಗಿ ರೈತರ ಹೋರಾಟಕ್ಕೆ ಬೆಂಬಲ‌ ನೀಡುತ್ತಿದ್ದೇನೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳು ರೈತರಿಗೆ ಮಾರಕವಾಗಿ ಎಂದರು.

    ಇನ್ನೂ ರಜೆ ಆಗಮಿಸಿದ ಸೈನಿಕ ರೈತರ ಪ್ರತಿಭಟನೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಪೊಲೀಸರು ರಮೇಶ್‌ ಅವರಿಂದ ಮಾಹಿತಿ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಸೇವಾ ಅವಧಿ ಜನವರಿಯಲ್ಲಿ ಕೊನೆಯಾಗಲಿದ್ದು, ಸೇವೆ ವಿಸ್ತರಿಸಲು ನಾನು ಅರ್ಜಿ ಹಾಕಿದ್ದೇನೆ ಎಂದು ರಮೇಶ್‌ ತಿಳಿಸಿದ್ದಾರೆ.

     

  • ನಾಳೆ ಕರ್ನಾಟಕ ಬಂದ್‌ – ಏನು ಇರುತ್ತೆ? ಏನು ಇರಲ್ಲ?

    ನಾಳೆ ಕರ್ನಾಟಕ ಬಂದ್‌ – ಏನು ಇರುತ್ತೆ? ಏನು ಇರಲ್ಲ?

    ಬೆಂಗಳೂರು: ಕೃಷಿ ಸಂಬಂಧಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್‍ಗೆ ಕರೆ ನೀಡಿದೆ. ಸಹಜವಾಗಿಯೇ ಕರ್ನಾಟಕದಲ್ಲಿಯೂ ಕೂಡ ಭಾರತ್ ಬಂದ್‍ಗೆ ರೈತ ನಾಯಕರು ಕರೆ ನೀಡಿದ್ದಾರೆ. ರೈತರ ಈ ಉದ್ದೇಶಿತ ಬಂದ್‍ಗೆ ಬೆಂಬಲ ಸೂಚಿಸುವ ವಿಚಾರದಲ್ಲಿ ಹಲವು ಸಂಘ ಸಂಸ್ಥೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

    ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ನಾಳೆ ಭಾರತ್ ಬಂದ್‍ಗೆ ಬೆಂಬಲ ಘೋಷಿಸಿವೆ. ಆದರೆ ಕನ್ನಡ ಪರ ಸಂಘಟನೆಗಳಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕೆಲ ಸಂಘಟನೆಗಳು ಬಂದ್‍ನಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ರೆ, ಇನ್ನೂ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಘೋಷಿಸಿ ಸುಮ್ಮನಾಗಿವೆ.

    ದಿನ ಬೆಳಗಾದರೆ ಕೆಲಸ ಮಾಡ್ಬೇಕು, ಹೊಟ್ಟೆ ತುಂಬಿಸಿಕೊಳ್ಳಬೇಕು ಎನ್ನುವ ಅನಿವಾರ್ಯತೆಯಲ್ಲಿ ಇರುವವರಿಗೆ ಬಂದ್‍ನಲ್ಲಿ ಪಾಲ್ಗೊಳ್ಳುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿ ಹಲವು ಸಂಘ ಸಂಸ್ಥೆಗಳು ಕೈ ತೊಳೆದುಕೊಂಡಿವೆ.

    ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನನಗೆ ಬಂದ್‍ಗೆ ಸಂಬಂಧ ಇಲ್ಲ ಅಂತಾ ಆಟೋ ಓಡಿಸಬೇಡಿ, ಹೋಟೆಲ್ ತೆಗೆಯೋಕೆ ಹೋಗಬೇಡಿ. ಕೃಷಿ ಆಧಾರಿತ ಬದುಕು ನಮ್ಮದು. ರೈತರಿಗಾಗಿ ಹೋರಾಟ ಮಾಡಿ. ಬೆಂಬಲ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಮಧ್ಯೆ, ರೈತ, ದಲಿತ,ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಅನಿರ್ದಿಷ್ಟವಧಿ ಪ್ರತಿಭಟನೆ ಶುರು ಮಾಡಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಸ್ವಾತಂತ್ರ್ಯ ಹೋರಾಟಗಾರ ಹೆಚ್‍ಎಸ್ ದೊರೆಸ್ವಾಮಿ ಸೇರಿ ಹಲವರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರ ರಾಜ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.

    ಬಂದ್‌ಗೆ ಬೆಂಬಲ ನೀಡಿದವರು ಯಾರು?
    ಲಾರಿ ಮಾಲೀಕರ ಸಂಘ, ಎಪಿಎಂಪಿಸಿ ವ್ಯಾಪಾರಿಗಳು, ಕಾರ್ಮಿಕರ ಸಂಘ, ಎಐಟಿಯುಸಿ, ಸಿಐಟಿಯು ಬೆಂಬಲ, ಓಲಾ-ಊಬರ್ ಚಾಲಕರ ಸಂಘ, ಆಟೋ ಸಂಘಟನೆಗಳು, ಖಾಸಗಿ ಶಾಲೆಗಳು ಬೆಂಬಲ ನೀಡಿದ್ದು ನಾಳೆ ಇಡೀ ದಿನ ಆನ್‍ಲೈನ್ ಕ್ಲಾಸ್ ಇರುವುದಿಲ್ಲ. ಅಂಗನವಾಡಿ ನೌಕರರ ಸಂಘ, ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ, ಬ್ಯಾಂಕ್ ಯೂನಿಯನ್ ಬೆಂಬಲ ನೀಡಿವೆ.

    ವಾಹನ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿದ್ದರೂ ವಾಹನ ರಸ್ತೆಗೆ ಇಳಿಸಬೇಕೋ ಬೇಡವೋ ಎಂಬುದನ್ನು ಚಾಲಕರ ವಿವೇಚನೆಗೆ ಬಿಡಲಾಗಿದೆ.

    ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟ, ಕರವೇ ನಾರಾಯಣಗೌಡರ ಬಣದಿಂದ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಕರವೇ ಪ್ರವೀಣ್ ಶೆಟ್ಟಿ ಬಣ ನೈತಿಕ ಬೆಂಬಲ ನೀಡಿವೆ.