Tag: ಕೃಷಿ ಕಾಯ್ದೆ

  • ಕೃಷಿ ಕಾಯಿದೆ ಖಂಡಿಸಿ ರಾಜಭವನ ಚಲೋ – ಬುಧವಾರ ರಸ್ತೆಗೆ ಇಳಿಯುವ ಮುನ್ನ ಬಿ ಅಲರ್ಟ್

    ಕೃಷಿ ಕಾಯಿದೆ ಖಂಡಿಸಿ ರಾಜಭವನ ಚಲೋ – ಬುಧವಾರ ರಸ್ತೆಗೆ ಇಳಿಯುವ ಮುನ್ನ ಬಿ ಅಲರ್ಟ್

    ಬೆಂಗಳೂರು: ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಬುಧವಾರ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು, ರೈತ ಸಂಘಟನೆಗಳು ರಾಜಭವನ ಚಲೋ ನಡೆಸಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ರ‍್ಯಾಲಿ ಶುರುವಾಗಲಿದೆ. ಮೆಜೆಸ್ಟಿಕ್‍ನಿಂದ ಫ್ರೀಡಂ ಪಾರ್ಕ್ ಮಾರ್ಗವಾಗಿ ಸಾಗಿ ರಾಜಭವನ ತಲುಪಲಿದೆ.

    ಕಾಂಗ್ರೆಸ್ ಪಕ್ಷದ ನಾಯಕರು, ರೈತ ಸಂಘಟನೆಗಳು ಸೇರಿದಂತೆ ಹದಿನೈದು ಸಾವಿರಕ್ಕೂ ಹೆಚ್ಚು ಜನರು ಈ ರ‍್ಯಾಲಿಯಲ್ಲಿ ಭಾಗಿಯೋ ಸಾಧ್ಯತೆ ಇದೆ. ರಾಜಭವನ ಚಲೋಗೆ ಪೊಲೀಸರು ಕೂಡ ಎಲ್ಲ ರೀತಿಯ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಆದ್ರೆ ನಗರದ ಹೃದಯ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರೋದರಿಂದ ಮೆಜೆಸ್ಟಿಕ್ ಸುತ್ತಲಿನ ಕೆ.ಜಿ.ರೋಡ್, ಚಿಕ್ಕಪೇಟೆ ಮುಖ್ಯರಸ್ತೆ, ಫ್ರೀಡಂ ಪಾರ್ಕ್ ರಸ್ತೆ, ಚಾಲುಕ್ಯ ಸರ್ಕಲ್, ಮೌರ್ಯ ಸರ್ಕಲ್, ಕೆಆರ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆ ಗಳು ಫುಲ್ ಜಾಮ್ ಆಗುವ ಸಾಧ್ಯತೆಗಳಿವೆ ಪರಿಸ್ಥಿತಿ ನೋಡಿಕೊಂಡು ಮಾರ್ಗಬದಲಾಣೆ ಬಗ್ಗೆ ಸೂಕ್ತ ತಿರ್ಮಾನ ಕೈಗೊಳ್ಳಲಾಗುವುದು ಅಂತಾ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ರಾಜಭವನ ಚಲೋಗೆ ಯಾವುದೇ ರೀತಿಯ ಅನುಮತಿ ಇಲ್ಲ. ಆದರೆ ರ‍್ಯಾಲಿ ಮಾಡುವ ಬಗ್ಗೆ ಅನುಮತಿ ಕೋರಿ ಪತ್ರ ಬಂದಿದ್ದು, ಇನ್ನೂ ಪರಿಶೀಲನೆ ಹಂತದಲ್ಲಿದೆ. ಕೊರೋನಾ ನಿಯಮಗಳು ಇನ್ನೂ ಜಾರಿಯಲ್ಲಿರೋದರಿಂದ ಮಾರ್ಗಸೂಚಿಗಳನ್ನು ಎಲ್ಲರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಬಂದೊಬಸ್ತ್, ಮಾರ್ಗ ಬದಲಾವಣೆ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

    ಸಾವಿರಾರು ಜನರು ಭಾಗವಹಿಸೋದರಿಂದ ಮೆಜೆಸ್ಟಿಕ್, ವಿಧಾನಸೌಧಸುತ್ತಮುತ್ತಲಿನ ರಸ್ತೆಗಳು ಸ್ತಬ್ಧ ಆಗೋ ಸಾಧ್ಯತೆಗಳು ಹೆಚ್ಚಾಗಿದೆ. 10 ಗಂಟೆಯ ನಂತರ ರಸ್ತೆಗಿಳಿದ್ರೆ ಟ್ರಾಫಿಕ್ ನಲ್ಲಿ ಲಾಕ್ ಅಗೋದು ಪಕ್ಕಾ.

  • ಕೇಂದ್ರದ ವಿವಾದಿತ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂ ತಡೆ

    ಕೇಂದ್ರದ ವಿವಾದಿತ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂ ತಡೆ

    – ಮಾತುಕತೆಗೆ ನಾಲ್ವರು ಸದಸ್ಯರ ಸಮಿತಿ
    – ಮುಂದಿನ ಆದೇಶದವರೆಗೂ ತಡೆಯಾಜ್ಞೆ

    ನವದೆಹಲಿ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಸಮಸ್ಯೆ ಇತ್ಯರ್ಥಕ್ಕಾಗಿ ನಾಲ್ವರು ಸದಸ್ಯರ ಸಮಿತಿ ರಚನೆಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಸುಪ್ರೀಂಕೋರ್ಟ್ ಸಮಿತಿಯಲ್ಲಿ ಧನವಂತ್ ಶೇಖಾವತ್, ಜೀತೇಂದ್ರ ಸಿಂಗ್ ಮಾನ್, ಅಶೋಕ್ ಗುಲಾಟಿ ಮತ್ತು ಡಾ.ಪ್ರಮೋದ್ ಕುಮಾರ್ ಇರಲಿದ್ದಾರೆ.

    ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನ್ಯಾ. ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತ್ತು. ರೈತ ಮುಖಂಡರ ಜೊತೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಸಂಧಾನ ಸಭೆ ನಿರಾಶದಾಯಕವಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ತೆರಳಿ ರಕ್ತಪಾತಗಳಾದರೆ ಯಾರು ಹೊಣೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು.

    ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ಪಡೆಯುವ ಕೇಂದ್ರ ಸರ್ಕಾರದ ನಡೆ ಸಮಾಧಾನ ತಂದಿಲ್ಲ. ಇಲ್ಲಿ ಪರಿಸ್ಥಿತಿ ಹದಗೆಟ್ಟಿರುವುದನ್ನು ಕೋರ್ಟ್ ಗಮನಿಸುತ್ತಿದೆ. ಗಣರಾಜ್ಯೋತ್ಸವ ದಿನದಂದು ದೊಡ್ಡ ರ್ಯಾಲಿ ನಡೆಯಲಿದ್ದು ಪರಿಸ್ಥಿತಿ ಕೈ ಮೀರಿ ಹೋದರೆ ಯಾರು ಹೊಣೆ ಎಂದು ಸುಪ್ರೀಂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡಿತ್ತು.

  • ರೈತರೊಂದಿಗೆ ರಿಲಯನ್ಸ್ ಒಪ್ಪಂದ- ಎಂಎಸ್‌ಪಿಗಿಂತ ಹೆಚ್ಚಿನ ದರ

    ರೈತರೊಂದಿಗೆ ರಿಲಯನ್ಸ್ ಒಪ್ಪಂದ- ಎಂಎಸ್‌ಪಿಗಿಂತ ಹೆಚ್ಚಿನ ದರ

    – 1 ಸಾವಿರ ಟನ್ ಭತ್ತ ಖರೀದಿ
    – ಕ್ವಿಂಟಾಲ್‌ಗೆ 100 ರೂ.ಹೆಚ್ಚಳ, ನಾಲ್ಕೇ ದಿನದಲ್ಲಿ ಹಣಪಾವತಿ

    ರಾಯಚೂರು: ಒಂದೆಡೆ ದೇಶದ ರಾಜಧಾನಿಯಲ್ಲಿ ರೈತರು ಹೊಸ ಕೃಷಿ ನೀತಿಗಳನ್ನ ವಿರೋಧಿಸಿ ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಕಡೆ  ದೇಶದ ಒಳಗಡೆ ಖಾಸಗಿ ಕಂಪನಿಗಳು ಆಗಲೇ ಕೃಷಿ ಉತ್ಪನ್ನ ಖರೀದಿಗೆ ಲಗ್ಗೆ ಇಟ್ಟಿವೆ. ರಾಯಚೂರು ಜಿಲ್ಲೆಯಲ್ಲಿ ರೈತರೊಂದಿಗೆ ರಿಲಯನ್ಸ್‌ ಕಂಪನಿ ಒಪ್ಪಂದ ಮಾಡಿಕೊಂಡು ಭತ್ತ ಖರೀದಿ ನಡೆಸಿದೆ.

    ರಿಲಯನ್ಸ್ ರೀಟೇಲ್ ಲಿಮಿಟೆಡ್ ಸಿಂಧನೂರಿನಲ್ಲಿ ಸ್ವಾಸ್ಥ ರೈತ ಉತ್ಪಾದಕರ ಕಂಪನಿ ಜೊತೆ 1,000 ಟನ್ ಸೋನಾಮಸೂರಿ ಭತ್ತ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದ ಬಳಿಕ ಬಹುಶಃ ರಾಜ್ಯದಲ್ಲಿ ಇದೇ ಮೊದಲ ಒಪ್ಪಂದ ಇರಬಹುದು ಎನ್ನಲಾಗುತ್ತಿದೆ.

    ಸರ್ಕಾರ ನೀಡುವ ಬೆಂಬಲ ಬೆಲೆಗಿಂತಲೂ ಕ್ವಿಂಟಾಲ್‌ಗೆ 100 ರೂ ಹೆಚ್ಚು ಕೊಟ್ಟು ಖರೀದಿಸಲು ರಿಲಯನ್ಸ್ ಒಪ್ಪಂದ ಮಾಡಿಕೊಂಡಿದೆ. ಭತ್ತಕ್ಕೆ ಸರ್ಕಾರದ ಬೆಂಬಲ ಬೆಲೆ ಕ್ವಿಂಟಾಲ್‌ಗೆ 1850 ರೂ.ಇದೆ.‌ ಹೊರಗಡೆ ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆಯಿದೆ. ಆದ್ರೆ ರಿಲಯನ್ಸ್ ಕ್ವಿಂಟಾಲ್ ಗೆ 1950 ರೂ ಕೊಟ್ಟು ಖರೀದಿ ನಡೆಸಿದೆ. ಮೊದಲ ಹಂತವಾಗಿ ಈಗ 100 ಟನ್ ಖರೀದಿಗೆ ಬೇಡಿಕೆ ಕೊಟ್ಟಿದೆ. ರೈತರ ಕಂಪನಿ 72 ಟನ್ ಸೋನಾಮಸೂರಿ ಭತ್ತವನ್ನ ಈಗಾಗಲೇ ನೀಡಿದೆ. ಈ ಹಿಂದೆ ಬಿಗ್ ಬಾಸ್ಕೆಟ್ ಕಂಪನಿ ಸಹ ಭತ್ತ ಖರೀದಿಗೆ ಬಂದಿತ್ತು. ಆದರೆ ತಾಂತ್ರಿಕ ಕಾರಣದಿಂದ ಒಪ್ಪಂದ ನಡೆದಿರಲಿಲ್ಲ. ಈಗ ರಿಲಯನ್ಸ್ ರೀಟೇಲ್ ಲಿಮಿಟೆಡ್ ಖರೀದಿ ಪ್ರಕ್ರಿಯೆ ನಡೆಸಿದೆ.

    ನಬಾರ್ಡ್ ಯೋಜನೆಯ ಸಹಾಯದಲ್ಲಿ ನಡೆಯುತ್ತಿರುವ ಸಿಂಧನೂರಿನ ಸ್ವಾಸ್ಥ ರೈತ ಉತ್ಪಾದಕರ ಕಂಪನಿ 1100 ಕ್ಕೂ ಹೆಚ್ಚು ರೈತರನ್ನ ಹೊಂದಿದೆ. ಭತ್ತಕ್ಕೆ ಉತ್ತಮ ಬೆಲೆ ಹಾಗೂ ಕೂಡಲೇ ಹಣ ಸಿಗುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಅಂತ ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪನಿ ಆಡಳಿತ ಮಂಡಳಿ ಹೇಳಿದೆ.

    ಖರೀದಿಯಾಗಿ ನಾಲ್ಕು ದಿನದಲ್ಲಿ ಹಣ ಸಿಗುತ್ತದೆ ತಿಂಗಳುಗಟ್ಟಲೆ ಕಾಯುವ ಅವಶ್ಯಕತೆಯಿಲ್ಲ. ಸೂಟ್ ತೆಗೆಯುವ ನೆಪದಲ್ಲಿ ಕೆ.ಜಿ.ಗಟ್ಟಲೇ ಭತ್ತ ತೆಗೆದುಕೊಳ್ಳುವುದಿಲ್ಲ. ಭತ್ತ ಉತ್ತಮ ಗುಣಮಟ್ಟದ್ದಾಗಿದ್ದರೆ ಸಾಕು ನಿಗದಿತ ಬೆಲೆ ಸಿಗುತ್ತದೆ. ಹೀಗಾಗಿ ಈ ಒಪ್ಪಂದ ರೈತರಿಗೆ ಅನುಕೂಲಕರವಾಗಿದೆ ಅಂತ ಸ್ವಾಸ್ಥ ರೈತ ಉತ್ಪಾದಕರ ಕಂಪನಿ ನಿರ್ದೇಶಕ ಚಂದ್ರಶೇಖರ್ ಹುಡೆದ್ ಹೇಳಿದ್ದಾರೆ.

    ಹಿಂದಿನಿಂದಲೂ ರೈಸ್ ಮಿಲ್ ಮಾಲೀಕರು, ವ್ಯಾಪಾರಿಗಳು ಸಹ ನೇರವಾಗಿ ರೈತರಲ್ಲಿಗೆ ಬಂದು ಖರೀದಿ ಮಾಡುತ್ತಿದ್ದರು. ಆದರೆ ಎಪಿಎಂಸಿ ಕಾಯಿದೆ ತಿದ್ದುಪಡಿ ಬಳಿಕ ಕಂಪನಿಗಳೇ ನೇರವಾಗಿ ಖರೀದಿಗೆ ಇಳಿಯುತ್ತಿವೆ. ಇದರಿಂದ ರೈಸ್ ಮಿಲ್‌ಗಳ ಮೇಲೂ ಪರಿಣಾಮ ಬೀರಲಿದೆ.

  • ಕೃಷಿ ಕಾನೂನುಗಳಿಗೆ ತಡೆ ನೀಡಿ, ಇಲ್ಲ ನಾವೇ ತಡೆ ನೀಡಲಿದ್ದೇವೆ – ಕೇಂದ್ರಕ್ಕೆ ಸುಪ್ರೀಂ

    ಕೃಷಿ ಕಾನೂನುಗಳಿಗೆ ತಡೆ ನೀಡಿ, ಇಲ್ಲ ನಾವೇ ತಡೆ ನೀಡಲಿದ್ದೇವೆ – ಕೇಂದ್ರಕ್ಕೆ ಸುಪ್ರೀಂ

    ನವದೆಹಲಿ : ರೈತ ಮುಖಂಡರ ಜೊತೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಸಂಧಾನ ಸಭೆ ನಿರಾಶದಾಯಕವಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ತೆರಳಿ ರಕ್ತಪಾತಗಳಾದರೆ ಯಾರು ಹೊಣೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

    ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಕೇಂದ್ರ ಸರ್ಕಾರದ ವಿರುದ್ಧ ಇಂದು ಹರಿಹಾಯ್ದಿದೆ.

    ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ‌ನಡೆಯುತ್ತಿದೆ ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ಪಡೆಯುವ ಕೇಂದ್ರ ಸರ್ಕಾರದ ನಡೆ ಸಮಾಧಾನ ತಂದಿಲ್ಲ. ಇಲ್ಲಿ ಪರಿಸ್ಥಿತಿ ಹದಗೆಟ್ಟಿರುವುದನ್ನು ಕೋರ್ಟ್ ಗಮನಿಸುತ್ತಿದೆ. ಗಣರಾಜ್ಯೋತ್ಸವ ದಿನದಂದು ದೊಡ್ಡ ರ‍್ಯಾಲಿ ನಡೆಯಲಿದ್ದು ಪರಿಸ್ಥಿತಿ ಕೈ ಮೀರಿ ಹೋದರೆ ಯಾರು ಹೊಣೆ ಎಂದು ಸುಪ್ರೀಂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡಿದೆ.

    ಕೊರೊನಾ ವೈರಸ್ ಭೀತಿ ನಡುವೆ ತೀವ್ರ ಚಳಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಆಹಾರ ಮತ್ತು ನೀರಿನ ಬಗ್ಗೆ ಯಾರು ಕಾಳಜಿ ವಹಿಸುತ್ತಿದ್ದಾರೆ? ಅಲ್ಲಿ ಸಾಮಾಜಿಕ ಅಂತರ ಕಾಪಾಡಲಾಗುತ್ತದೆಯೇ? ಭವಿಷ್ಯದಲ್ಲಿ ತಪ್ಪುಗಳಾದರೆ ಅದಕ್ಕೆ ಪ್ರತಿಯೊಬ್ಬರು ಜವಾಬ್ದಾರಾಗುತ್ತೇವೆ. ಯಾರೊಬ್ಬರ ರಕ್ತವೂ ನಮ್ಮ ಕೈಯಲ್ಲಿ ಬೇಡ ಎಂದು ನ್ಯಾ.ಎಸ್.ಎ ಬೊಬ್ಡೆ ಅಭಿಪ್ರಾಯಪಟ್ಟರು.

    ನಾವು ಮಧ್ಯಸ್ಥಿಕೆವಹಿಸಬೇಕು ಎಂದರೆ ಸದ್ಯ ಮೂರು ಕಾನೂನುಗಳನ್ನು ತಾತ್ಕಾಲಿಕವಾಗಿ ತಡೆಹಿಡಿಬೇಕು ಇಲ್ಲದಿದ್ದರೆ ನಾವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ನೀವೂ ಕಾನೂನುಗಳನ್ನು ತಡೆ ಹಿಡಿಯದಿದ್ದರೆ ನಾವು ಕಾನೂನುಗಳಿಗೆ ತಡೆ ನೀಡಬೇಕು ಎಂದು ನ್ಯಾ. ಬೊಬ್ಡೆ ಹೇಳಿದರು.

    ರೈತರು ಹೋಗಿ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಾಧ್ಯವಾದರೆ ಸಮಿತಿ ರಚಿಸುವುದನ್ನು ವಿರೋಧಿಸಲು ಯಾವುದೇ ಕಾರಣಗಳಿಲ್ಲ. ಸಮಸ್ಯೆಯನ್ನು ಸಮಿತಿ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದಿರುವ ನ್ಯಾ. ಬೊಬ್ಡೆ ನಿವೃತ್ತಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

    ನಮ್ಮಿಂದ ನೇಮಕಗೊಳ್ಳುವ ಸಮಿತಿಯ ಮೂಲಕ ಕೃಷಿ ಕಾನೂನು ಸಮಸ್ಯೆಗೆ ಪರಿಹಾರವನ್ನು ನೀಡುವ ಆದೇಶವನ್ನು ರವಾನಿಸಲು ನಾವು ಪ್ರಸ್ತಾಪಿಸುತ್ತಿದ್ದೇವೆ ಮತ್ತು ತಜ್ಞರ ಸಮಿತಿಯ ಮುಖ್ಯಸ್ಥರಾಗಬಲ್ಲ ಮಾಜಿ ಸಿಜೆಐಗಳ ಹೆಸರನ್ನು ಸೂಚಿಸುವಂತೆ ಕೇಂದ್ರ ಮತ್ತು ರೈತ ಸಂಘಗಳಿಗೆ ಸೂಚಿಸಿದೆ. ಸಮತಿ ರಚನೆ ಬಗ್ಗೆ ನಾಳೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ‌ ನೀಡಲಿದೆ.

  • ಮಾತುಕತೆಗೂ ಮುನ್ನ ಸರ್ಕಾರದ ಮುಂದೆ ರೈತರ 3 ಷರತ್ತು

    ಮಾತುಕತೆಗೂ ಮುನ್ನ ಸರ್ಕಾರದ ಮುಂದೆ ರೈತರ 3 ಷರತ್ತು

    ನವದೆಹಲಿ: ಇಂದು ಸರ್ಕಾರದ ಜತೆ ಪ್ರತಿಭಟನಾ ನಿರತ ರೈತರ ಎಂಟನೇ ಸುತ್ತಿನ ಮಾತುಕತೆ ನಡೆಯಲಿದ್ದು, ಅನ್ನದಾತರು ಸಭೆಗೂ ಮುನ್ನ ಮೂರು ಷರತ್ತುಗಳನ್ನಿರಿಸಿದ್ದಾರೆ. ಇಂದು ಮಧ್ಯಾಹ್ನ ಎರಡು ಗಂಟೆಗೆ ದೆಹಲಿ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದೆ.

    ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈತ್, ಸಭೆಯಲ್ಲಿ ಸ್ವಾಮಿನಾಥನ್ ಸಮಿತಿ ವರದಿ, ಮೂರು ಕೃಷಿ ಕಾನೂನು ಹಿಂಪಡೆಯುವುದು ಮತ್ತು ಎಂಎಸ್‍ಪಿ (ಬೆಂಬಲ ಬೆಲೆ) ಬಗ್ಗೆ ಚರ್ಚೆಗಳು ನಡೆಯಬೇಕೆಂದು ಮೂರು ಷರತ್ತುಗಳನ್ನ ಇರಿಸಿದ್ದಾರೆ. ಧರಣಿ ವೇಳೆ 60 ರೈತರು ಸಾವನ್ನಪ್ಪಿದ್ದು, ನಾವು ಹಿಂದೆ ಸರಿಯಲ್ಲ ಎಂದು ಹೇಳಿದ್ದಾರೆ.

    ಇಂದು ಮೂರು ಕಾಯ್ದೆಗಳನ್ನ ಹಿಂಪಡೆದುಕೊಂಡು, ಬೆಂಬಲ ಬೆಲೆ ಬಗ್ಗೆ ಹೊಸ ಕಾನೂನು ತರಬೇಕು. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದಿದ್ರೆ ಜನವರಿ 6ರಂದು ಟ್ರ್ಯಾಕ್ಟರ್ ತಂದು ಪ್ರತಿಭಟನೆ ನಡೆಸುತ್ತೇವೆ. ಜನವರಿ 7 ರಿಂದ ರೈತ ವಿರೋಧಿ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆರಂಭವಾಗಲಿದೆ ಎಂದು ಕಿಸಾನ್ ಮಜ್ದೂರ್ ಕಮೀಟಿ ನಾಯಕ ಸುಖ್‍ವಿಂದರ್ ಸಿಂಗ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಇಂದಿನ ಸಭೆಯಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನ ಪೂರ್ಣ ಮಾಡದಿದ್ರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದಿದ್ದಾರೆ. ಏಳನೇ ಬಾರಿ ನಡೆದ ಸಭೆಯಲ್ಲಿ ಎರಡು ಬೇಡಿಕೆಗಳನ್ನ ಪೂರೈಸಲು ಸರ್ಕಾರ ಒಪ್ಪಿಕೊಂಡಿತ್ತು. ಇವತ್ತು ಇನ್ನುಳಿದ ಎರಡು ಬೇಡಿಕೆಗಳ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಲಿದೆ.

  • ಪ್ರತಿಭಟನಾ ನಿರತ ರೈತರಿಗೆ ದೆಹಲಿ ಸರ್ಕಾರದಿಂದ ಉಚಿತ ವೈಫೈ

    ಪ್ರತಿಭಟನಾ ನಿರತ ರೈತರಿಗೆ ದೆಹಲಿ ಸರ್ಕಾರದಿಂದ ಉಚಿತ ವೈಫೈ

    ನವದೆಹಲಿ: ಕಳೆದ ಒಂದು ತಿಂಗಳಿನಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಮತ್ತು ಹರಿಯಾಣದ ಸಾವಿರಾರು ರೈತರಿಗೆ ದೆಹಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಉಚಿತ ವೈಫೈ ಕೊಡುವುದಾಗಿ ಭರವಸೆ ನೀಡಿದೆ.

    ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಶುರುವಾಗಿರುವುದರಿಂದ ಹಿಡಿದು ಇಲ್ಲಿಯವರೆಗೂ ಸಹಕಾರ ನೀಡುತ್ತಾ ಬಂದಿರುವ ದೆಹಲಿ ಸರ್ಕಾರ ಮತ್ತೆ ರೈತರ ಪರ ಎಂಬಂತೆ ಬಿಂಬಿತವಾಗಿದೆ. ದೆಹಲಿ ಸರ್ಕಾರದೊಂದಿಗೆ ಪ್ರತಿಭಟನಾ ನಿರತ ರೈತರು ಉಚಿತ ವೈಫೈ ಕಲ್ಪಿಸಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಸ್ಪಂದಿಸಿದ ದೆಹಲಿ ಸರ್ಕಾರ ಸಿಂಘು ಗಡಿಯ ವಿವಿಧ ಸ್ಥಳಗಳಲ್ಲಿ ಹಾಟ್‍ಸ್ಪಾಟ್‍ಗಳನ್ನು ಸ್ಥಾಪಿಸಲು ಮುಂದಾಗಿದೆ. ಇನ್ನೂ ಇದಕ್ಕೂ ಮುನ್ನ ರೈತರಿಗೆ ಅನುಕೂಲವಾಗುವಂತೆ ಮೊಬೈಲ್ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿತ್ತು.

    ರೈತರ ಸೇವದಾರ್ ಅರವಿಂದ್ ಕೇಜ್ರಿವಾಲ್ ಉಚಿತ ವೈಫೈ ನೀಡಲು ಮುಂದಾಗಿದ್ದಾರೆ. ರೈತರು ತಮ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ಬಯಸುತ್ತೇವೆ, ಈಗಾಗಲೇ ಕೆಲವು ವೈಫೈ ಹಾಟ್‍ಸ್ಪಾಟ್‍ಗಳನ್ನು ಸ್ಥಾಪಿಸಲು ಕೆಲವು ಪ್ರದೇಶಗಳನ್ನು ಗುರುತಿಸಿದ್ದೇವೆ. ಇದು ಅರವಿಂದ್ ಕೇಜ್ರಿವಾಲ್ ಮತ್ತು ನಮ್ಮ ಸರ್ಕಾರದ ಬೆಂಬಲವಾಗಿದೆ ಎಂದು ಎಎಪಿ ಮುಖಂಡ ರಾಘವ್ ಚಡ್ಡಾ ಹೇಳಿದ್ದಾರೆ.

    ವಿರೋಧ ಪಕ್ಷದ ತೀವ್ರ ಪ್ರತಿಭಟನೆಯ ಮಧ್ಯೆ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಸಿಂಘು ಗಡಿಯಲ್ಲಿ ನಿರಂತರವಾಗಿ ಹಲವು ರಾಜ್ಯಗಳ ರೈತರ ಸೇರುವಿಕೆಯೊಂದಿಗೆ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಹಲವು ಸುತ್ತಿನ ಮಾತುಕತೆಯೂ ಮುರಿದು ಬಿದ್ದಿದೆ.

    ಈ ಎಲ್ಲಾ ಆಗುಹೋಗುಗಳ ಮಧ್ಯೆ ರೈತರಿಗೆ ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಬೆಂಬಲ ಸೂಚಿಸುತ್ತಾ ಬಂದಿದ್ದು, ಕೆಲದಿನಗಳ ಹಿಂದೆ ಪ್ರತಿಭಟನಾ ಸ್ಥಳಕ್ಕೆ ಆಪ್ ಪಾಲಿಕೆ‌ ಸದಸ್ಯರ ತಂಡ ಆಗಮಿಸಿ ರೈತರಿಗೆ ಮಾಡಿದ ಸಹಕಾರವನ್ನು ಪರಿಶೀಲಿಸಿ ದೆಹಲಿ ಸರ್ಕಾರಕ್ಕೆ ಮಾಹಿತಿ ರವಾನಿತ್ತು.

  • ಬಿಕ್ಕಟ್ಟು ಶಮನಕ್ಕೆ ಪ್ರತಿಭಟನೆ ಬದಲು ಮಾತುಕತೆ ನಡೆಸಿ – ಧರಣಿನಿರತ ರೈತರಿಗೆ ಸುಪ್ರೀಂಕೋರ್ಟ್ ಸಲಹೆ

    ಬಿಕ್ಕಟ್ಟು ಶಮನಕ್ಕೆ ಪ್ರತಿಭಟನೆ ಬದಲು ಮಾತುಕತೆ ನಡೆಸಿ – ಧರಣಿನಿರತ ರೈತರಿಗೆ ಸುಪ್ರೀಂಕೋರ್ಟ್ ಸಲಹೆ

    – ಪ್ರತಿಭಟನೆ ನಡೆಸುವ ಹಕ್ಕು ರೈತರಿಗಿದೆ
    – ಕೃಷಿ ಕಾಯ್ದೆಯ ಪ್ರತಿ ಹರಿದು ಹಾಕಿದ ಸಿಎಂ ಕೇಜ್ರಿವಾಲ್

    ನವದೆಹಲಿ: ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕು. ಅದರಂತೆ, ಕೃಷಿ ಕಾಯ್ದೆಗಳ ವಿಚಾರದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ರೈತರಿಗಿದೆ. ಆದ್ರೆ ಆಸ್ತಿ, ಪ್ರಾಣ ನಷ್ಟಗಳಿಗೆ ಇದು ದಾರಿ ಮಾಡಿಕೊಡಬಾರದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ರೈತರು ತಮ್ಮ ಹೋರಾಟ ಮುಂದುವರೆಸಬಹುದು. ಸಮಸ್ಯೆ ಇತ್ಯರ್ಥಕ್ಕೆ ಇದು ಸರಿಯಾದ ಮಾರ್ಗ ಅಲ್ಲ. ಮಾತುಕತೆ ಮೂಲಕವೇ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

    ದೆಹಲಿಯನ್ನು ನಿರ್ಬಂಧಿಸಿದರೆ ಜನ ಹಸಿವಿನಿಂದ ತತ್ತರಿಸಿ ಹೋಗಬೇಕಾಗುತ್ತದೆ. ನಿಮ್ಮ ಉದ್ದೇಶ ಈಡೇರಬೇಕು ಎಂದರೆ ಮಾತುಕತೆ ನಡೆಸಿ. ಕೇವಲ ಹೋರಾಟ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಎಸ್‍ಎ ಬೊಬ್ಡೆ ನೇತೃತ್ವದ ಪೀಠ ರೈತರಿಗೆ ಸಲಹೆ ನೀಡಿದೆ.

    ಕೃಷಿ ಕಾಯ್ದೆಗಳ ಜಾರಿಯನ್ನು ತಡೆಹಿಡಿದರೆ ರೈತರು, ಕೇಂದ್ರದ ಜೊತೆ ಮಾತುಕತೆಗೆ ಮುಂದಾಗಬಹುದೇನೋ? ಈ ವಿಚಾರವನ್ನು ಒಮ್ಮೆ ಪರಿಶೀಲಿಸಿ ಎಂದು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಸ್ಪಂದಿಸಿದ ಅಟಾರ್ನಿ ಜನೆರಲ್, ಕೇಂದ್ರದ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದಾಗಿ ತಿಳಿಸಿದರು. ಮುಂದಿನ ವಿಚಾರಣೆಯನ್ನು ರಜೆಕಾಲ ಪೀಠ ನಡೆಸಲಿದೆ ಎಂದ ಬೊಬ್ಡೆ ಪೀಠ ವಿಚಾರಣೆಯನ್ನು ಮುಂದೂಡಿತು.

    ಈ ಮಧ್ಯೆ ದೆಹಲಿಯಲ್ಲಿ ಉಷ್ಣಾಂಶ ದಿನೇ ದಿನೇ ಇಳಿಕೆಯಾಗುತ್ತಿದೆ. ತಾಪಮಾನ 3 ಡಿಗ್ರಿ ಸೆಲ್ಸಿಯಸ್‍ಗೆ ಇಳಿದಿದೆ. ಕೊರೆವ ಚಳಿಯಲ್ಲೇ ಅನ್ನದಾತರು ಹೋರಾಟ ಮುಂದುವರಿಸಿದ್ದಾರೆ. ತೀವ್ರ ಚಳಿಗೆ ಇಂದು ಧರಣಿನಿರತ ರೈತರೊಬ್ಬರು ಬಲಿ ಆಗಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ದೆಹಲಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದ್ದು, ದೆಹಲಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ-ಎಎಪಿ ಮಧ್ಯೆ ವಾಕ್ಸಮರವೂ ನಡೆದಿದೆ.

  • ಕೃಷಿ ಸುಧಾರಣೆಯಿಂದ ಹೊಸ ಮಾರುಕಟ್ಟೆ, ಅವಕಾಶ ಸೃಷ್ಟಿ – ಮೋದಿ ಸಮರ್ಥನೆ

    ಕೃಷಿ ಸುಧಾರಣೆಯಿಂದ ಹೊಸ ಮಾರುಕಟ್ಟೆ, ಅವಕಾಶ ಸೃಷ್ಟಿ – ಮೋದಿ ಸಮರ್ಥನೆ

    ನವದೆಹಲಿ: ಕೃಷಿ ಸುಧಾರಣೆಯಿಂದ ರೈತರಿಗೆ ಹೊಸ ಮಾರುಕಟ್ಟೆ ಮತ್ತು ಅವಕಾಶಗಳನ್ನು ತೆರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಒಕ್ಕೂಟದ (ಫಿಕ್ಕಿ) 93ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ಹೊಸ ಸುಧಾರಣೆಯಿಂದ ರೈತರು ತಂತ್ರಜ್ಞಾನದ ಲಾಭ ಪಡೆಯಬಹುದು. ಇದರಿಂದಾಗಿ ಕೃಷಿಯಲ್ಲಿ ಹೆಚ್ಚಿನ ಹೂಡಿಕೆಯಾಗುತ್ತದೆ. ವಿಶೇಷವಾಗಿ ಸಣ್ಣ ರೈತರು ಇದರಿಂದ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂದರು.

    ಭಾರತದ ರೈತರು ಈಗ ತಮ್ಮ ಉತ್ಪನ್ನವನ್ನು ನೇರವಾಗಿ ಸ್ಥಳೀಯ ಮಾರುಕಟ್ಟೆ ಮತ್ತು ಹೊರಗಡೆ ಮಾರಾಟ ಮಾಡಲು ಅವಕಾಶ ಸಿಕ್ಕಿದೆ ಎಂದರು.

    ಇಂದು ರೈತರು ಮಂಡಿಯಲ್ಲಿ ಉತ್ಪನ್ನವನ್ನು ಮಾರಾಟಬಹುದು. ಅಷ್ಟೇ ಅಲ್ಲದೇ ಡಿಜಿಟಲ್‌ ವೇದಿಕೆಯ ಮೂಲಕ ಮಾರಾಟ ಮಾಡಬಹುದು. ರೈತರ ಆದಾಯವನ್ನು ಹೆಚ್ಚಿಸಲು ನಾವು ಈ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಮತ್ತೊಮ್ಮೆ ಕಾಯ್ದೆಯನ್ನು ಸಮರ್ಥಿಸಿಕೊಂಡರು.

    ಈಗ ಕೃಷಿ ಕ್ಷೇತ್ರ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ಕ್ಷೇತ್ರಗಳ ನಡುವೆ ಗೋಡೆಗಳನ್ನು ನಾವು ನೋಡಿದ್ದೇವೆ. ಅದು ಕೃಷಿ ಮೂಲಸೌಕರ್ಯ, ಆಹಾರ ಸಂಸ್ಕರಣೆ, ಸಂಗ್ರಹಣೆ ಅಥವಾ ಕೋಲ್ಡ್‌ ಚೈನ್‌ ಇರಬಹುದು. ಈ ಎಲ್ಲಾ ಗೋಡೆಗಳು ಮತ್ತು ಅಡೆತಡೆಗಳನ್ನು ಈಗ ತೆಗೆದುಹಾಕಲಾಗಿದೆ. ಸುಧಾರಣೆಗಳ ನಂತರ ರೈತರು ಹೊಸ ಮಾರುಕಟ್ಟೆಗಳು, ಆಯ್ಕೆಗಳು ಮತ್ತು ತಂತ್ರಜ್ಞಾನದ ಬಳಕೆಯಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಕೋಲ್ಡ್ ಸ್ಟೋರೇಜ್ ಮೂಲಸೌಕರ್ಯವನ್ನು ಆಧುನೀಕರಿಸಲಾಗುವುದು. ಇದರಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆಗಲಿದ್ದು ರೈತರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.

  • ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ ಭರವಸೆ- ಹಠ ಬಿಡದ ಅನ್ನದಾತರಿಂದ ಹೋರಾಟ ತೀವ್ರ

    ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ ಭರವಸೆ- ಹಠ ಬಿಡದ ಅನ್ನದಾತರಿಂದ ಹೋರಾಟ ತೀವ್ರ

    ನವದೆಹಲಿ: ಕೇಂದ್ರ ಒಪ್ತಿಲ್ಲ – ರೈತರು ಪಟ್ಟು ಸಡಿಲಿಸ್ತಿಲ್ಲ. ಕೇಂದ್ರ ಕಳಿಸಿದ ಲಿಖಿತ ಭರವಸೆಯನ್ನು ಕೂಡ ರೈತರು ಒಪ್ಪಿಲ್ಲ. ಪರಿಣಾಮ, ಸತತ 14ನೇ ದಿನವೂ ದೆಹಲಿ ಹೊರ ವಲಯದಲ್ಲಿ ಅನ್ನದಾತರ ಪ್ರತಿಭಟನೆ ಮುಂದುವರಿದಿದೆ.

    ಮಂಗಳವಾರ ರಾತ್ರಿ ಅಮಿತ್ ಶಾ ಜೊತೆಗಿನ ಸಂಧಾನ ಸಭೆ ವಿಫಲವಾದ ಬಳಿಕ ಇವತ್ತಿನ ಸಭೆ ರದ್ದು ಮಾಡಿದ ಕೇಂದ್ರ ಸರ್ಕಾರ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇರುತ್ತೆ ಎಂಬ ಭರವಸೆ ಸೇರಿ ಹಲವು ತಿದ್ದುಪಡಿಗಳಿಗೆ ಸಮ್ಮತಿ ಸೂಚಿಸಿ ಲಿಖಿತ ಪ್ರಸ್ತಾವನೆಯನ್ನು ಧರಣ ನಿರತ ಅನ್ನದಾತರ ಬಳಿಗೆ ಕಳಿಸಿತ್ತು. ಆದರೆ ಅನ್ನದಾತರು ಮಾತ್ರ ಇದನ್ನು ಒಪ್ಪೋಕೆ ರೆಡಿ ಇಲ್ಲ. ಸಿಂಘು ಗಡಿಯಲ್ಲಿ ಇಂದು ಸಭೆ ಸೇರಿದ್ದ ರೈತರು, ತಮ್ಮ ಹಳೆಯ ನಿಲುವಿಗೆ ಅಂಟಿಕೊಂಡಿರಲು ತೀರ್ಮಾನಿಸಿದ್ದಾರೆ.

    ಸಭೆಯ ಬಳಿಕ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡೋವರೆಗೂ ಹೋರಾಟದಿಂದ ವಿರಮಿಸಲ್ಲ ಎಂದು ಘೋಷಿಸಿದ್ದಾರೆ. ಸೋಮವಾರ ದೆಹಲಿಯಲ್ಲಿ ದೊಡ್ಡಮಟ್ಟದ ಸಮಾವೇಶ, ಡಿಸೆಂಬರ್ 12ರವರೆಗೂ ಜೈಪುರ-ದೆಹಲಿ, ಆಗ್ರಾ-ದೆಹಲಿ ಹೈವೇ ತಡೆ ನಡೆಸೋದಾಗಿ ಎಚ್ಚರಿಸಿದ್ದಾರೆ. ದೇಶಾದ್ಯಂತ ಎಲ್ಲಾ ಟೋಲ್‍ಗಳ ಬಳಿ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿದ್ದಾರೆ.

    ಡಿಸೆಂಬರ್ 13ರಿಂದ ಬಿಜೆಪಿ ನಾಯಕರಿಗೆ ಕಂಡಕಂಡಲ್ಲಿ ಘೇರಾವ್ ಹಾಕೋದಾಗಿ ರೈತರು ಪ್ರಕಟಿಸಿದ್ದು, ಡಿಸೆಂಬರ್ 14ರಂದು ದೇಶಾದ್ಯಂತ ಚಳವಳಿ ನಡೆಡುವ ಸಂದೇಶವನ್ನ ಕೇಂದ್ರಕ್ಕೆ ರವಾನಿಸಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಬೇಡಿಕೆಗೆ ಒಪ್ಪಿದ್ರೇ ನಾಳೆಯೇ ಕೇಂದ್ರದ ಜೊತೆ ಮಾತುಕತೆ ಸಿದ್ಧ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

    ಈ ಮಧ್ಯೆ, ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ವಿಪಕ್ಷ ನಿಯೋಗ, ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಮನವಿ ಪತ್ರ ಸಲ್ಲಿಸಿದ್ರು. ರಾಹುಲ್ ಗಾಂಧಿ, ಶರದ್ ಪವಾರ್ ಸೇರಿ ಹಲವರು ಈ ವೇಳೆ ಉಪಸ್ಥಿತರಿದ್ದರು.

  • ಕೃಷಿ ಕಾಯ್ದೆ ವಿರೋಧಿಸಿ ವಿಪಕ್ಷ ನಾಯಕರಿಂದ ರಾಷ್ಟ್ರಪತಿಗಳ ಭೇಟಿ

    ಕೃಷಿ ಕಾಯ್ದೆ ವಿರೋಧಿಸಿ ವಿಪಕ್ಷ ನಾಯಕರಿಂದ ರಾಷ್ಟ್ರಪತಿಗಳ ಭೇಟಿ

    – ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯ

    ನವದೆಹಲಿ: ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾಯ್ದೆಗಳನ್ನ ಹಿಂಪಡೆಯುವಂತೆ ಆಗ್ರಹಿಸಲು ವಿಪಕ್ಷ ನಾಯಕರ ನಿಯೋಗ ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನ ಭೇಟಿಯಾಗಲಿದೆ.

    ಕೊರೊನಾ ಹಿನ್ನೆಲೆ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ, ಸಿಪಿಐ(ಎಂ) ಮಹಾ ಸಚಿವ ಸೀತಾರಾಮ್ ಯೆಚೂರಿ ನೇತೃತ್ವದ ಐವರು ನಾಯಕ ನಿಯೋಗ ಬುಧವಾರ ಸಂಜೆ 5 ಗಂಟೆಗೆ ರಾಷ್ಟ್ರಪತಿಗಳ ಭೇಟಿಗೆ ತೆರಳಲಿದೆ. ಈ ವೇಳೆ ಮೂರು ಕೃಷಿ ಕಾಯ್ದೆಗಳನ್ನ ಹಿಂಪಡೆಯುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

     

    ಕಳೆದ 13 ದಿನಗಳಿಂದ ಸಿಂಘು ಬಾರ್ಡರ್ ನಲ್ಲಿ ರೈತರು ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಧರಣಿಗೆ ಕುಳಿತಿದ್ದಾರೆ. ದೆಹಲಿ ಪ್ರವೇಶಕ್ಕೆ ಪೊಲೀಸರು ನಿರಾಕರಿಸಿದ ಹಿನ್ನೆಲೆ ರೈತರು ಹೆದ್ದಾರಿಯ ಪಕ್ಕದಲ್ಲಿಯೇ ಬಿಡಾರ ಹೂಡಿಕೊಂಡು ವಾಸ್ತವ್ಯ ಹೂಡಿದ್ದಾರೆ. ಈಗಾಗಲೇ ಸರ್ಕಾರ ಪ್ರತಿಭಟನಾ ನಿರತ ರೈತರ ಮುಖಂಡರ ಜೊತೆ ಐದು ಸುತ್ತಿನ ಮಾತುಕತೆ ನಡೆಸಿದ್ದು ವಿಫಲವಾಗಿದೆ. ನಾಳೆ ಆರನೇ ಸುತ್ತಿನ ಮಾತುಕತೆ ನಡೆಯಲಿದೆ.