ನವದೆಹಲಿ: ಗಣರಾಜ್ಯೋತ್ಸವ ದಿನವೇ ದೇಶದ ರಾಜಧಾನಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಪ್ರತಿಭಟನೆ ಹಿನ್ನೆಲೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ, ರೈತ ವಿರೋಧಿ ಕಾನೂನುಗಳನ್ನ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ.
ಹಿಂಸೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಏನೇ ಹಾನಿ ಸಂಭವಿಸಿದರೂ ಅದು ದೇಶಕ್ಕಾದ ನಷ್ಟ. ಹಾಗಾಗಿ ದೇಶದ ಹಿತಕ್ಕಾಗಿ ಕೃಷಿ ವಿರೋಧಿ ಕಾನೂನುಗಳನ್ನ ಹಿಂಪಡೆಯಿರಿ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
हिंसा किसी समस्या का हल नहीं है। चोट किसी को भी लगे, नुक़सान हमारे देश का ही होगा।
ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನ ಹಿಂಪಡೆಯುವಂತೆ ರೈತರು ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಗಡಿಯಲ್ಲಿದ್ದ ಧರಣಿ ನಿರತರು ಇಂದು ರಾಜಧಾನಿ ಪ್ರವೇಶಿಸಿದ್ದು, ಪ್ರತಿಭಟನೆ ಹಿಂಸೆ ರೂಪ ಪಡೆದುಕೊಂಡಿದೆ.
ಸೋಮವಾರ ತಮಿಳುನಾಡಿನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದ ಪ್ರಧಾನ ಮಂತ್ರಿಗಳು ಮೂರು ಕೃಷಿ ಕಾಯ್ದೆಗಳ ಮೂಲಕ ರೈತರ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ನೀತಿಗಳಿಂದ ದೇಶದ ಕೃಷಿ ವಲಯ ನಾಶವಾಗಲಿದೆ. ಇಡೀ ಕೃಷಿ ವಲಯ ಕೆಲ ಕೋಟ್ಯಧಿಪತಿಗಳಲ್ಲಿಯೇ ಕೇಂದ್ರಿಕೃತವಾಗಲಿದೆ. ರೈತರು ತಮ್ಮ ಸುರಕ್ಷೆಗಾಗಿ ನ್ಯಾಯಾಲಯಕ್ಕೆ ಹೋಗುವಂತಿಲ್ಲ ಎಂದು ಒಂದು ಕಾನೂನು ಹೇಳುತ್ತೆ ಎಂದಿದ್ದರು.
ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಟ್ರ್ಯಾಕ್ಟರ್ ಪ್ರತಿಭಟನೆ ಈಗ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ದೆಹಲಿಯ ಕೆಲ ಭಾಗದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಇಂದು ಮಧ್ಯಾಹ್ನ ದೆಹಲಿ ತಲುಪಿದ ರೈತರು ವಿಶ್ವ ಪಾರಂಪರಿಕ ತಾಣವಾದ ಕೆಂಪುಕೋಟೆಗೆ ನುಗ್ಗಿ ಕಿಸಾನ್ ಧ್ವಜವನ್ನು ಹಾರಿಸಿದ್ದಾರೆ. ಇಷ್ಟೇ ಅಲ್ಲದೇ ಕೆಂಪುಕೋಟೆಯ ಗುಮ್ಮಟದ ಮೇಲೆ ರೈತರು ಸಿಖ್ ಧ್ವಜವನ್ನು ಹಾರಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕೆಂಪುಕೋಟೆಗೆ ನುಗ್ಗಿದ ಪರಿಣಾಮ ಪೊಲೀಸರಿಗೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಪ್ರತಿಭಟನೆ ಜೋರಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿ ಚದುರಿಸುವ ಕೆಲಸ ಮಾಡಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ದೆಹಲಿ ಕೆಲ ಭಾಗ ಮತ್ತು ಸಿಂಘು, ಗಾಜಿಯಾಬಾದ್, ಟಿಕ್ರಿ ಗಡಿ ಭಾಗದಲ್ಲಿ ಇಂದು ಮಧ್ಯರಾತ್ರಿಯವರೆಗೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಕೊಪ್ಪಳ: ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತೆ ತಮ್ಮ ನಾಲಗೆ ಹರಿಬಿಟ್ಟಿದ್ದು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರು ಭಯೋತ್ಪಾದಕರು ಎಂಬ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವರಿಗೆ ಬೇರೆ ದೇಶಗಳ ಬೆಂಬಲದ ಜೊತೆ ಪಾಕಿಸ್ತಾನದ ಕುಮ್ಮಕ್ಕು ಇದೆ. ಕೆಂಪು ಕೋಟೆ ಬಳಿ ಗಲಾಟೆ ಮಾಡ್ತಾರೆ ಅಂದ್ರೆ ಇವರಿಗೆ ಭಯೋತ್ಪಾದಕರ ಬೆಂಬಲ ಎಷ್ಟಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಕೆಂಪುಕೋಟಿಗೆ ಮುತ್ತಿಗೆ ಹಾಕಿರೋದು ಭಯೋತ್ಪಾದನೆ ಕೃತ್ಯ ಎಂದು ಆಕ್ರೋಶ ಹೊರ ಹಾಕಿದರು.
ನಮ್ಮ ದೇಶದ ರೈತರು ಯಾವತ್ತೂ ಕಾನೂನುಗಳನ್ನು ಕೈಗೆ ತೆಗೆದುಕೊಳ್ಳುವದಿಲ್ಲ. ಪ್ರತಿಭಟನಾ ನಿರತರ ಹಿಂದೆ ಪಾಕಿಸ್ತಾನ ಮತ್ತು ಕಾಂಗ್ರೆಸ್ ಇದೆ. ಪ್ರಧಾನಿ ಮೋದಿಯವರ ಜನಪ್ರಿಯತೆ ಕಂಡು ಭಯೋತ್ಪಾದಕರನ್ನ ಕರೆ ತಂದು ಅವರಿಗೆ ರೈತರು ಹೆಸರಿಟ್ಟು ಭಯೋತ್ಪಾದನೆ ಮಾಡಿಸುತ್ತಿದ್ದಾರೆ. ಈ ಪ್ರತಿಭಟನೆಗೆ ಸಂಪೂರ್ಣ ಪಾಕಿಸ್ತಾನ ಮತ್ತು ಕಾಂಗ್ರೆಸ್ ನವರ ಕುಮ್ಮುಕ್ಕು ಇದ್ದು, ಯಾರೇ ಕಾನೂನು ಕೈಗೆ ತಗೆದುಕೊಂಡರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗವುದು ಎಂದು ಹೇಳಿದರು.
ಈ ಹಿಂದೆ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು. ಸರ್ಕಾರದ ಕಾನೂನುಗಳು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಲ್ಲ ಎಂದು ಮಡಿಕೇರಿಯಲ್ಲಿ ಹೇಳಿದ್ದರು. ಇನ್ನೂ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿಯೂ ತಮ್ಮ ವಿವಾದಾತ್ಮಕ ಹೇಳಿಕೆ ಪುನರುಚ್ಛಿರಿಸಿದ್ದರು.
ಮಡಿಕೇರಿ: ಸಿಎಂ ಯಡಿಯೂರಪ್ಪನವರು ತುಂಬಾ ಅನುಭವಿ ಇದ್ದಾರೆ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಖಾತೆಗಳ ಬದಲಾವಣೆ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.
ಮಡಿಕೇರಿಯಲ್ಲಿ ನಡೆದ 72 ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಖಾತೆ ಬದಲಾವಣೆಯಿಂದ ಕೆಲವು ಸಚಿವರು ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಭಿವೃದ್ಧಿ ದೃಷ್ಟಿಯಿಂದ ಖಾತೆಗಳ ಬದಲಾವಣೆ ಮಾಡಲಾಗಿದೆ. ಈ ಸಂದರ್ಭ ಸಚಿವರಿಗೆ ಸಣ್ಣಪುಟ್ಟ ಮುನಿಸುಗಳಿರುವುದು ಮತ್ತು ವ್ಯತ್ಯಾಸಗಳಾಗುವುದು ಸಹಜ. ಅದಲ್ಲೆವನ್ನೂ ಸಿಎಂ ಸರಿಮಾಡಲಿದ್ದಾರೆ. ಅವರು ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ಸರಿಯಾಗಿರುತ್ತವೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮತ್ತು ಬೆಂಗಳೂರಿನಲ್ಲಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಹಿಂದೆ ಇದ್ದಿದ್ದು ಯಾವುದೋ ಬ್ರಿಟೀಷರ ಕಾಲದ ಕಾಯ್ದೆ ಆಗಿತ್ತು. ಈ ಕಾಯ್ದೆಯಿಂದ ಜನರಿಗೆ ಅನುಕೂಲವಿರಲಿಲ್ಲ, ಆದರೆ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಈ ಹಿಂದೆ ಯುಪಿಎ ಸರ್ಕಾರವೇ ಕಾಯ್ದೆ ತಿದ್ದುಪಡಿಗೆ ಮುಂದಾಗಿತ್ತು. ಆದರೆ ಅದನ್ನು ಅವರು ಗೌಣವಾಗಿಟ್ಟರು, ನಮ್ಮ ಸರ್ಕಾರ ಅದನ್ನು ಜಾರಿಗೆ ತಂದಿದೆ. ರೈತರು ಅವರ ಹೋರಾಟವನ್ನು ದಾಖಲಿಸುವುದು ಅವರ ಹಕ್ಕು, ಅದನ್ನು ನಾವು ಬೇಡ ಎನ್ನಲಾಗುವುದಿಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎನ್ನೋದು ನಮ್ಮ ಇಚ್ಚೆ ಎಂದರು.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ. ಮುತ್ತಿಗೆ ಹಾಕಿದ್ದು ಮಾತ್ರವಲ್ಲದೇ ರಾಷ್ಟ್ರಧ್ವಜ ಮಾತ್ರ ಹಾರಿಸಬೇಕಿದ್ದ ಜಾಗದಲ್ಲಿ ಕಿಸಾನ್ ಯೂನಿಯನ್ ಧ್ವಜ ಮತ್ತು ಮೇಲ್ಭಾಗದಲ್ಲಿ ಸಿಖ್ ಧ್ವಜವನ್ನು ಹಾರಿಸಲಾಗಿದೆ. ಧ್ವಜಕಂಬವನ್ನು ಹತ್ತಿದ್ದ ವ್ಯಕ್ತಿಗೆ ಆರಂಭದಲ್ಲಿ ರಾಷ್ಟ್ರಧ್ವಜವನ್ನು ನೀಡಲಾಗಿತ್ತು. ಆದರೆ ಆತ ರಾಷ್ಟ್ರ ಧ್ವಜವನ್ನು ಎಸೆದಿದ್ದಾನೆ.
ಪ್ರತಿವರ್ಷ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನದಂದು ಪ್ರಧಾನಿ ರಾಷ್ಟ್ರಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಪ್ರಧಾನಿ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದ ಜಾಗದ ಪಕ್ಕದಲ್ಲೇ ಇದೇ ಮೊದಲ ಬಾರಿಗೆ ಪ್ರತಿಭಟನಾ ಧ್ವಜ ಹಾರಿದೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು ರಾಷ್ಟ್ರಧ್ವಜ ಹಾರಿಸುವ ಜಾಗದ ಸಮೀಪದಲ್ಲೇ ತಮ್ಮ ಬಾವುಟವನ್ನು ಹಾರಿಸಿದ್ದಾರೆ. ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜ ಬಿಟ್ಟು ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ಇದು ವಿಶ್ವ ಪಾರಂಪರಿಕ ತಾಣವು ಆಗಿರುವುದರಿಂದ ಪ್ರತಿಭಟನೆಯ ಹೆಸರಿನಲ್ಲಿ ರೈತರು ತಮ್ಮ ಸಂಘಟನೆಯ ಧ್ವಜವನ್ನು ಇಲ್ಲಿ ಹಾರಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.
ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದ ರೈತರು ಮತ್ತೊಮ್ಮೆ ಬೀದಿಗಿಳಿಯಲಿದ್ದಾರೆ. ಜನವರಿ 26ರಂದು ಅಂದ್ರೆ ಗಣರಾಜ್ಯೋತ್ಸವದಂದೇ ಟ್ರ್ಯಾಕ್ಟರ್ ಮಾರ್ಚ್ ಮೂಲಕ ಬಿಸಿ ಮುಟ್ಟಿಸಲು ರೈತ ಸಂಘಟನೆಗಳು ಮುಂದಾಗಿವೆ. ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ವಾಹನಗಳ ಮೂಲಕ ಅನ್ನದಾತರು ಬೃಹತ್ ರ‍್ಯಾಲಿ ಮಾಡಲಿದ್ದಾರೆ.
ಬೆಂಗಳೂರಿಗೆ ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಲಿದ್ದಾರೆ. ಐಕ್ಯ ಹೋರಾಟ ಸಮಿತಿ, ರೈತ ಸಂಘಟನೆ, ದಲಿತ ಸಂಘಟನೆಗಳು, ಕನ್ನಡ ಸಂಘಟನೆಗಳು ಹೋರಾಟ ನಡೆಸಲಿದ್ದು, ನೈಸ್ ರಸ್ತೆ ಜಂಕ್ಷನ್‍ನಿಂದ ಆರಂಭವಾಗುವ ರೈತರ ರ‍್ಯಾಲಿ, ಗೊರಗುಂಟೆಪಾಳ್ಯ, ಯಶವಂತಪುರ ಮಾರ್ಗವಾಗಿ ಫ್ರೀಡಂಪಾರ್ಕ್ ತಲುಪಲಿದೆ. ಕೇವಲ ನೈಸ್ ರೋಡ್ ಮಾತ್ರವಲ್ಲ.. ಬೆಂಗಳೂರಿನ ದಶ ದಿಕ್ಕುಗಳಿಂದಲೂ ರೈತ ಪ್ರವಾಹ ರಾಜಧಾನಿಗೆ ಹರಿದುಬರಲಿದೆ. ಸಿಎಂ ಯಡಿಯೂರಪ್ಪ ಭಾಷಣ ಮುಗಿಯುತ್ತಲೇ, ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಮಾರ್ಚ್‍ಗೆ ರೈತ ಸಂಘಟನೆಗಳು ಸಕಲ ಪ್ಲಾನ್ ಮಾಡಿಕೊಂಡಿವೆ.
ರಾಜಧಾನಿಗೆ ಟ್ರ್ಯಾಕ್ಟರ್ ಪ್ರವಾಹ: ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೈಸ್ ರೋಡ್ ಜಂಕ್ಷನ್‍ನಿಂದ ಪ್ರತಿಭಟನೆ ಶುರುವಾಗಲಿದೆ. ಗೊರಗುಂಟೆಪಾಳ್ಯ – ಮಲ್ಲೇಶ್ವರಂ – ಫ್ರೀಡಂಪಾರ್ಕ್‍ವರೆಗೂ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರಿನಿಂದಲೇ ರ‍್ಯಾಲಿ ಆರಂಭಗೊಂಡು ನಾಯಂಡಳ್ಳಿ ಮಾರ್ಗವಾಗಿ ಟ್ರ್ಯಾಕ್ಟರ್, ಎತ್ತಿನ ಗಾಡಿ ಮೂಲಕ ರೈತರು ಬೆಂಗಳೂರಿಗೆ ಎಂಟ್ರಿ ಕೊಡಲಿದ್ದಾರೆ. ಚಿಕ್ಕಬಳ್ಳಾಪುರ ರೈತರು ಹೆಬ್ಬಾಳ ಮಾರ್ಗವಾಗಿ ಮತ್ತು ಕೋಲಾರ ರೈತರು ಕೆ.ಆರ್ ಪುರಂ ಮಾರ್ಗವಾಗಿ ಪೆರೇಡ್ ನಡೆಸಲಿದ್ದಾರೆ. ಇನ್ನು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೈತರು ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಸೇರಿ ಬೃಹತ್ ರ್ಯಾಲಿ ನಡೆಸಲಿದ್ದಾರೆ.
ನಮ್ಮ ಪೆರೇಡ್ ಅನ್ನು ತಡೆದರೇ ಇಡೀ ಬೆಂಗಳೂರು ಲಾಕ್ ಆಗಲಿದೆ. ದೆಹಲಿ ಮಾದರಿಯಲ್ಲೇ ನಮ್ಮ ಹೋರಾಟ ಸಾಗಲಿದೆ ಎಂದು ಸರ್ಕಾರಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ. ನಮ್ಮ ಬೃಹತ್ ಹೋರಾಟ ಶಾಂತಿಯುತವಾಗಿರಲಿದೆ. ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದರೆ ಈ ಕೂಡಲೇ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ರೈತರ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
‘ಖಾಕಿ’ ಬ್ರೇಕ್?: ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಬೃಹತ್ ಟ್ರ್ಯಾಕರ್ ರ‍್ಯಾಲಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಪೊಲೀಸ್ ಆಯುಕ್ತರಿಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಸೋಮವಾರ ಆಯುಕ್ತ ಕಮಲ್ ಪಂಥ್ ಸಭೆ ನಡೆಸಿ ನಿರ್ಧಾರ ತಿಳಿಸಲಿದ್ದಾರೆ. ಪಬ್ಲಿಕ್ ಟಿವಿಗೆ ಸಿಕ್ಕ ಮಾಹಿತಿ ಪ್ರಕಾರ, ಅನ್ನದಾತರ ಟ್ರ್ಯಾಕ್ಟರ್ ರ‍್ಯಾಲಿಗೆ ಬ್ರೇಕ್ ಹಾಕಲು ಖಾಕಿ ಪಡೆ ಪ್ಲಾನ್ ಮಾಡಿಕೊಂಡಿದೆ.
ಬೆಂಗಳೂರು ಹೊರ ಭಾಗದಲ್ಲೇ ಟ್ರ್ಯಾಕ್ಟರ್ ತಡೆಗೆ ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್ ಬಿಟ್ಟು, ರೈತರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಸಾಧ್ಯತೆಗಳಿವೆ. ರೈತರು ಬೈಕ್‍ಗಳಲ್ಲಿ ಬಂದರೇ ತಡೆ ಉಂಟು ಮಾಡಬಾರದು. ಬೆಂಗಳೂರು ಸುತ್ತಲಿನ ಜಿಲ್ಲಾ ಎಸ್‍ಪಿಗಳಿಗೆ ಆದೇಶ ರವಾನಿಸಲಾಗಿದೆ ಎನ್ನಲಾಗಿದೆ. ಜಿಲ್ಲೆಗಳಿಂದ ಟ್ರ್ಯಾಕ್ಟರ್ ಹೊರಡದಂತೆ ತಡೆಯಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಯಾರ ಬೆಂಬಲ: ರೈತರ ಟ್ರ್ಯಾಕ್ಟರ್ ರಣಕಹಳೆಗೆ ಕಾಂಗ್ರೆಸ್ ಕಿಸಾನ್ ಘಟಕ ಬೆಂಬಲ ಸೂಚಿಸಿದೆ. ಇನ್ನುಳಿದಂತೆ ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆ, ದಲಿತ ಸಂಘಟನೆ, ಮಹಿಳಾ ಸಂಘಟನೆಗಳು ಮತ್ತು ಕನ್ನಡ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಬೃಹತ್ ರ‍್ಯಾಲಿಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗಲಿದೆ. ಸರ್ಕಾರಿ ರಜೆ ಅಂತ ಬೆಂಗಳೂರಿನಲ್ಲಿ ರಸ್ತೆಗಿಳಿದ್ರೆ ಮಂಗಳವಾರ ಟ್ರಾಫಿಕ್‍ನಲ್ಲಿ ಸಿಲುಕಿಕೊಳ್ಳುವುದು ಖಂಡಿತ.
ದೆಹಲಿಯಲ್ಲೂ ರೈತರ ಟ್ರ್ಯಾಕ್ಟರ್ ಪರೇಡ್‍ಗೆ ದೆಹಲಿ ಪೊಲೀಸರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 1 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ ಮೂಲಕ ರೈತರು ಕೇಂದ್ರದ ವಿರುದ್ಧ ಪ್ರತಿಭಟಿಸಲಿದ್ದಾರೆ. ಸಿಂಘು, ಠಿಕ್ರಿ, ಘಾಜಿಯಾಬಾದ್, ಬುರಾರಿ ಮೂಲಕ ಪೊಲೀಸರು ಸೂಚಿಸಿರುವ ನಿಗದಿತ ಮಾರ್ಗದಲ್ಲಿ ರೈತರು ಶಾಂತಿಯು ಹೋರಾಟ ನಡೆಸಲಿದ್ದಾರೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದ ಟ್ರ್ಯಾಕ್ಟರ್ ಮೂಲಕ ರೈತರು ಆಗಮಿಸಲಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ಅನ್ನದಾತನ ಕಿಚ್ಚು ಇನ್ನು ಆರಿಲ್ಲ. ದೆಹಲಿಯಲ್ಲಿ ದಾಖಲೆ ಪ್ರತಿಭಟನೆ ಮಾಡ್ತಿರುವ ರೈತರು ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಬೃಹತ್ ಹೋರಾಟಕ್ಕಿಳಿದಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವದಂದು ಕಿಸಾನ್‍ರ ಹೋರಾಟಕ್ಕೆ ಪ್ರತಿಫಲ ಸಿಗುತ್ತದೋ ನೋಡಬೇಕು.
ಮುಂಬೈ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಮಹಾರಾಷ್ಟ್ರದ ರೈತರು ಪಾದಯಾತ್ರೆ ಆರಂಭಿಸಿದ್ದು, ಸೋಮವಾರ ಮುಂಬೈನಲ್ಲಿ ಸೇರಲಿದ್ದಾರೆ. ದೆಹಲಿಯ ಗಡಿಯ ಚಳಿಯಲ್ಲಿ ಕುಳಿತಿರುವ ದಿಟ್ಟ ರೈತರು ಸರ್ಕಾರ ಕಾನೂನುಗಳನ್ನ ಹಿಂಪಡೆದುಕೊಳ್ಳುವರೆಗೂ ಸ್ಥಳದಿಂದ ಕದಲಲ್ಲ ಎಂದು ಸ್ಪಷ್ಟ ನಿಲುವಿನೊಂದಿಗೆ ಕುಳಿತಿದ್ದಾರೆ. ದೆಹಲಿಯಲ್ಲಿರುವ ರೈತರ ಪ್ರತಿಭಟನೆಗೆ ಮಹಾರಾಷ್ಟ್ರ ಅನ್ನದಾತರು ಸಾಥ್ ನೀಡಿದ್ದಾರೆ.
ಮಹಾರಾಷ್ಟ್ರದ 21 ಜಿಲ್ಲೆಗಳಿಂದ ಹೊರಟಿರುವ ರೈತರು ನಾಸಿಕ್ ಬಳಿ ಒಂದೆಡೆ ಸೇರಿದ್ದಾರೆ. ನಾಸಿಕ್ ನಿಂದ 180 ಕಿಲೋ ಮೀಟರ್ ಪಾದಯಾತ್ರೆ ನಡೆಸಿ ಇಂದು ಸಂಜೆ ವೇಳೆ ಮುಂಬೈನ ಆಝಾದ್ ಮೈದಾನದಲ್ಲಿ ಸೇರಲಿದ್ದಾರೆ. ಸೋಮವಾರ ನಡೆಯುವ ರೈತರ ಸಮಾವೇಶದಲ್ಲಿ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾಗಿಯಾಗಲಿದ್ದಾರೆ.
ಕೆಲ ದಿನಗಳ ಹಿಂದೆ ಸರ್ಕಾರದ ನೂತನ ಕಾಯ್ದೆ ಬಗ್ಗೆ ಮಾತನಾಡಿದ್ದ ಶರದ್ ಪವಾರ್, ಕೇಂದ್ರ ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ದೆಹಲಿ ಚಳಿಯನ್ನ ಲೆಕ್ಕಿಸದೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ತಾಳ್ಮೆಯನ್ನ ಪರೀಕ್ಷಿಸುವ ದುಸ್ಸಾಹಸಕ್ಕೆ ಸರ್ಕಾರ ಮುಂದಾಗಬಾರದು ಎಂದು ಎಚ್ಚರಿಕೆ ನೀಡಿದ್ದರು.
ಬೆಂಗಳೂರು: ಕಾಂಗ್ರೆಸ್‌ನವರು ಆಗೊಮ್ಮೆ ಈಗೊಮ್ಮೆ ನಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ಇಂದಿನ ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾಧ್ಯಮಗಳು ವಿಧಾನಸೌಧದಲ್ಲಿ ಕೇಳಿದ ಪ್ರಶ್ನೆಗೆ ಸಿಎಂ, ಯಾರನ್ನೋ ಕರೆದುಕೊಂಡು ಬಂದು ಪ್ರತಿಭಟಿಸಿದ್ದಾರೆ. ಕಾಂಗ್ರೆಸ್‌ನವರು ಭಾಷಣ ಶುರು ಮಾಡಿದ ತಕ್ಷಣ ಬಂದವರು ಎದ್ದು ಹೋಗಿದ್ದನ್ನು ನೀವೂ ನೋಡಿದ್ದೀರಿ. ಕಾಂಗ್ರೆಸ್‌ನವರು ಎಚ್ಚರವಾಗಿ ಎದ್ದು ನಿಂತು ಬದುಕಿದ್ದೇವೆ ಎಂದು ತೋರಿಸಲು ಈ ಪ್ರತಿಭಟನೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
Today, we are holding a massive protest along with Farmer groups against the anti-Farmer bills passed by the Union Government.
Congress workers & Farmers from across Karnataka have assembled to raise their voice & won't back down till these bills are repealed.#RajBhavanChalopic.twitter.com/fOPdtfhF7S
ಚಾಮರಾಜನಗರ: ದೆಹಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟಕ್ಕೆ ಕರ್ನಾಟಕದ ರೈತರು ಹೊರಟಿದ್ದಾರೆ. ರೈತರ ಪರ್ಯಾಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದಿಂದ ಭಾಗವಹಿಸಲು ಚಾಮರಾಜನಗರ ತಾಲೂಕು ಅಮೃತಭೂಮಿಯಲ್ಲಿ ರೈತ ನೇತಾರ ದಿ.ಪ್ರೊಫೆಸರ್ ನಂಜುಂಡಸ್ವಾಮಿ ಸಮಾಧಿ ಬಳಿ ರೈತ ಹೋರಾಟ ಯಾತ್ರೆಗೆ ಚಾಲನೆ ನೀಡಲಾಯಿತು.
ರಾಜ್ಯ ರೈತ ಮುಖಂಡ ಅರಳಾಪುರ ಮಂಜೇಗೌಡ ನೇತೃತ್ವದಲ್ಲಿ ರೈತ ಹೋರಾಟ ಯಾತ್ರೆ ಆರಂಭವಾಯಿತು. ರಾಜ್ಯದ ವಿವಿಧೆಡೆಯಿಂದ 200ಕ್ಕೂ ಹೆಚ್ಚು ರೈತರು ಲಾರಿಗಳಲ್ಲಿ ಪಯಣ ಮಾಡಲಿದ್ದು, ದಾರಿಯುದ್ದಕ್ಕೂ ದವಸ-ಧಾನ್ಯ ಸಂಗ್ರಹ ಮಾಡ್ತೀವಿ. ದೆಹಲಿಯಲ್ಲಿ ಹೋರಾಟ ನಿರತ ರೈತರಿಗೆ ದವಸ ಧಾನ್ಯ ನೀಡಲೂ ರಾಜ್ಯದ ರೈತರು ಮುಂದಾಗಿದ್ದಾರೆ. 53 ದಿನದಿಂದ ಹೋರಾಟ ನಡೆಯುತ್ತಿದ್ದರೂ ಕೂಡ ಪ್ರಧಾನಿ ಮೋದಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಯಾರದೋ ನಾಮಕರಣದಲ್ಲಿ ಭಾಗವಹಿಸುವ ಮೋದಿ ಅವರಿಗೆ ರೈತರ ಜೊತೆ ಮಾತನಾಡುವಷ್ಟು ವ್ಯವದಾನವಿಲ್ಲ ಅಂತಾ ಆಕ್ರೋಶ ಹೊರಹಾಕಿದ್ರು. ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಕೂಡ ರ‍್ಯಾಲಿ ನಡೆಯಲಿದ್ದು ನಾವು ದೆಹಲಿಗೆ ತೆರಳಿ ನಿಮ್ಮೊಂದಿಗೆ ನಾವಿದ್ದೀವೆ. ನಮ್ಮೊಂದಿಗೆ ನೀವಿರಿ ಅನ್ನೋ ಸಂದೇಶ ಕೊಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಇಂದು ರಸ್ತೆಗೆ ಇಳಿಯೋ ಮುನ್ನ ಬೀ ಅಲರ್ಟ್. ಇಲ್ಲ ಅಂದ್ರೆ ನಡುರಸ್ತೆಯಲ್ಲೇ ಗಂಟೆಗಟ್ಟಲೆ ಲಾಕ್ ಆಗೋದು ಗ್ಯಾರಂಟಿ.
ಹೌದು, ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು, ರೈತ ಸಂಘಟನೆಗಳು ಇಂದು ರಾಜಭವನ ಚಲೋ ನಡೆಸಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ಈ ರ‍್ಯಾಲಿ ಶುರುವಾಗಲಿದೆ. ಮೆಜೆಸ್ಟಿಕ್‍ನಿಂದ ಫ್ರೀಡಂ ಪಾರ್ಕ್ ಮಾರ್ಗವಾಗಿ ಸಾಗಿ ರಾಜಭವನ ತಲುಪಲಿದೆ. ಕಾಂಗ್ರೆಸ್ ಪಕ್ಷದ ನಾಯಕರು, ರೈತ ಸಂಘಟನೆಗಳು ಸೇರಿದಂತೆ ಹದಿನೈದು ಸಾವಿರಕ್ಕೂ ಹೆಚ್ಚು ಜನರು ಈ ರ‍್ಯಾಲಿಯಲ್ಲಿ ಭಾಗಿಯೋ ಸಾಧ್ಯತೆ ಇದೆ.
ಇಂದಿನ ರಾಜಭವನ ಚಲೋಗೆ ಪೊಲೀಸರು ಕೂಡ ಎಲ್ಲ ರೀತಿಯ ಬಂದೊಬಸ್ತ್ ಮಾಡಿಕೊಂಡಿದ್ದಾರೆ. ಆದರೆ ನಗರದ ಹೃದಯ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರೋದರಿಂದ ಮೆಜೆಸ್ಟಿಕ್ ಸುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಉಂಟಾಗುವ ಸಂಭವ ಇದೆ. ಕೆ.ಜಿ.ರೋಡ್, ಚಿಕ್ಕಪೇಟೆ ಮುಖ್ಯರಸ್ತೆ, ಫ್ರೀಡಂ ಪಾರ್ಕ್ ರಸ್ತೆ, ಚಾಲುಕ್ಯ ಸರ್ಕಲ್, ಮೌರ್ಯ ಸರ್ಕಲ್, ಕೆಆರ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆ ಗಳು ಫುಲ್ ಜಾಮ್ ಆಗುವ ಸಾಧ್ಯತೆಗಳಿವೆ. ಪರಿಸ್ಥಿತಿ ನೋಡಿಕೊಂಡು ಮಾರ್ಗ ಬದಲಾವಣೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಅಂತ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಕಾಂಗ್ರೆಸ್ಸಿನ ರಾಜಭವನ ಚಲೋಗೆ ನೋ ಪರ್ಮಿಷನ್ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ. ರಾಜಭವನ ಚಲೋ ಗೆ ಯಾವುದೇ ರೀತಿಯ ಅನುಮತಿ ಇಲ್ಲ. ಆದರೆ ರ‍್ಯಾಲಿ ಮಾಡುವ ಬಗ್ಗೆ ಅನುಮತಿ ಕೋರಿ ಪತ್ರ ಬಂದಿದ್ದು, ಅದಿನ್ನೂ ಪರಿಶೀಲನೆ ಹಂತದಲ್ಲಿದೆ. ಕೊರೊನಾ ನಿಯಮಗಳು ಇನ್ನೂ ಜಾರಿಯಲ್ಲಿರೋದರಿಂದ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಅಂದ್ರು. ಆದರೆ ವಿಪಕ್ಷಗಳು ರಸ್ತೆಗಿಳಿದಾಗ ಮಾತ್ರ ಕೊರೊನಾ ನಿಯಮಗಳು ಕಾಣುತ್ತವಾ ಎಂಬ ಪ್ರಶ್ನೆ ಎದ್ದಿದೆ.
ಮೊನ್ನೆಯಷ್ಟೇ ಚನ್ನಪಟ್ಟಣದಲ್ಲಿ ನೂತನ ಸಚಿವ ಸಿ.ಪಿ ಯೋಗೇಶ್ವರ್‍ಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಈ ಸಂದರ್ಭದಲ್ಲಿ ಇಲ್ಲದ ಕೊರೊನಾ ನಿಯಮಗಳು ಇಲ್ಯಾಕೆ ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ. ಇನ್ನು ಸಾವಿರಾರು ಜನರು ರ‍್ಯಾಲಿಯಲ್ಲಿ ಭಾಗವಹಿಸೋದ್ರಿಂದ ಮೆಜೆಸ್ಟಿಕ್, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳು ಸ್ತಬ್ಧ ಆಗೋ ಸಾಧ್ಯತೆಗಳು ಹೆಚ್ಚಾಗಿದೆ. 10 ಗಂಟೆಯ ನಂತರ ರಸ್ತೆಗಿಳಿದ್ರೆ ಟ್ರಾಫಿಕ್ ನಲ್ಲಿ ಲಾಕ್ ಅಗೋದು ಪಕ್ಕಾ.