Tag: ಕೃಷಿ ಕಾಯ್ದೆ

  • ಪ್ರಧಾನಿಗೆ ಬಡವರ ಮೇಲಿನ ಕಾಳಜಿಯೇ ನೂತನ ಕಾಯ್ದೆಗಳ ಜಾರಿಗೆ ಸಾಕ್ಷಿ: ನಳಿನ್

    ಪ್ರಧಾನಿಗೆ ಬಡವರ ಮೇಲಿನ ಕಾಳಜಿಯೇ ನೂತನ ಕಾಯ್ದೆಗಳ ಜಾರಿಗೆ ಸಾಕ್ಷಿ: ನಳಿನ್

    ಮಂಗಳೂರು: ರಾಜ್ಯಸಭೆಯಲ್ಲಿ ನಿನ್ನೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳ ಆಧುನೀಕರಣ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಮುಂದುವರಿಕೆ, 80 ಕೋಟಿ ಬಡವರಿಗೆ ಕಡಿಮೆ ದರದಲ್ಲಿ ಪಡಿತರ ವಿತರಣೆ ಮುಂದುವರಿಯುವುದು ಎಂದು ಹೇಳಿದ್ದಾರೆ. ಇದು ಅವರಿಗೆ ಬಡವರ ಮೇಲೆ ಇರುವ ಕಳಕಳಿಗೆ ಸ್ಪಷ್ಟ ಉದಾಹರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಕಾಯ್ದೆಗಳ ಅನುಷ್ಠಾನ ಅನಿವಾರ್ಯ ಎಂಬುದನ್ನು ಪ್ರತಿಭಟನಾಕಾರರಿಗೆ ಅರ್ಥ ಮಾಡಿಸಿ, ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳ ಸಹಕಾರ ಬೇಕಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಸಣ್ಣ ರೈತರ ಪರಿಸ್ಥಿತಿ ಸುಧಾರಣೆಗಾಗಿ ರಸಗೊಬ್ಬರ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳಲಾಗಿದೆ. ದಾಖಲೆಯ ಉತ್ಪಾದನೆಯೂ ನಮ್ಮದಾಗಿದೆ. ರೈತರಿಂದ ಉತ್ಪನ್ನಗಳ ದಾಖಲೆ ಪ್ರಮಾಣದ ಖರೀದಿಯೂ ನಡೆದಿದೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಮಾತುಗಳನ್ನು ಪುನರುಚ್ಚರಿಸಿದರು.

    ಫಸಲ್ ಬಿಮಾ ಯೋಜನೆಯಡಿ ರೈತರಿಗೆ 90,000 ಕೋಟಿ ರೂಪಾಯಿ ನೀಡಲಾಗಿದೆ. ಪ್ರತಿ ರೈತರಿಗೆ ಕ್ರೆಡಿಟ್ ಕಾರ್ಡ್ ನೀಡುತ್ತಿರುವುದು, ಮೀನುಗಾರರಿಗೂ ಇಂಥ ಸೌಲಭ್ಯಗಳ ವಿಸ್ತರಣೆ ಕುರಿತು ಪ್ರಧಾನಿ ಮೋದಿ ತಿಳಿಸಿದ್ದಾರೆ. ಕೃಷಿ ಮಾರುಕಟ್ಟೆಯ ನ್ಯೂನತೆಗಳನ್ನು ನಿವಾರಿಸುವ ದೃಷ್ಟಿಯಿಂದ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇದೇ ಮಾದರಿಯ ಕೃಷಿ ಸುಧಾರಣೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದುದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗೆಯೇ ನೇತಾಜಿಯವರ ತತ್ವ ಹಾಗೂ ಆದರ್ಶಗಳನ್ನು ನಾವು ಮರೆಯುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ ಪ್ರಧಾನಿಗಳು, ಜಲ, ಭೂಮಿ, ಆಕಾಶ, ಬಾಹ್ಯಾಕಾಶ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಭಾರತ ಹೊಂದಿದೆ ಎಂದು ಹೇಳುವ ಅವರನ್ನು ನೆನಪಿಸಿಕೊಂಡಿದ್ದಾಗಿಯೂ ಕಟೀಲ್ ತಿಳಿಸಿದ್ದಾರೆ.

    ಸರ್ಜಿಕಲ್ ದಾಳಿ ವೇಳೆ ದೇಶದ ಸಾಮಥ್ರ್ಯ ಸಾಬೀತಾಗಿದೆ. ಭಾರತದ ರಾಷ್ಟ್ರೀಯತೆಯು ಸಂಕುಚಿತತೆಯನ್ನು ಹೊಂದಿಲ್ಲ. ಸ್ವಾರ್ಥ ಅಥವಾ ಆಕ್ರಮಣಕಾರಿಯಾಗಿಲ್ಲ. ಆದ್ದರಿಂದ ನಮ್ಮ ರಾಷ್ಟ್ರೀಯತೆಯ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ಪ್ರತ್ಯುತ್ತರ ನೀಡುವುದು ಅವಶ್ಯಕ. ದೇಶದ ವಿದೇಶಿ ವಿನಿಮಯ ಸಂಗ್ರಹವು ಗರಿಷ್ಠ ಮಟ್ಟದಲ್ಲಿದೆ. ಮೊಬೈಲ್ ಉತ್ಪಾದನೆ ಹಾಗೂ ಇಂಟರ್‍ನೆಟ್ ಬಳಕೆ ವಿಚಾರದಲ್ಲೂ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿ ಇರುವುದನ್ನು ಪ್ರಧಾನಿಗಳು ಜನತೆಗೆ ವಿವರಿಸಿದ್ದಾರೆ ಎಂದು ಹೇಳಿದ್ದಾಗಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.

  • ಇದು ರಾಷ್ಟ್ರೀಯ ಭಯೋತ್ಪಾದನೆ – ಭಾರತದ ವಿರುದ್ಧ ಮುಂದುವರಿದ ವಿದೇಶಿ ಪಿತೂರಿ

    ಇದು ರಾಷ್ಟ್ರೀಯ ಭಯೋತ್ಪಾದನೆ – ಭಾರತದ ವಿರುದ್ಧ ಮುಂದುವರಿದ ವಿದೇಶಿ ಪಿತೂರಿ

    ನವದೆಹಲಿ: ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ಮುಂದುವರಿದಿದೆ. ರೈತರ ಹೋರಾಟ ದೇಶದ ಆಂತರಿಕ ವಿಚಾರ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಅದನ್ನು ಕೇಳಿಸಿಕೊಳ್ಳೋಕೆ ಪಿತೂರಿದಾರರು ತಯಾರಿಲ್ಲ.  ಬದಲಿಗೆ ನಾಲಗೆ ಹರಿಬಿಡುವುದನ್ನು ಮುಂದುವರಿಸಿದ್ದಾರೆ. ಅದರಲ್ಲೂ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ, ವಕೀಲೆ ಮೀನಾ ಹ್ಯಾರೀಸ್ ಮಾಡುತ್ತಿರುವ ಟ್ವೀಟ್‍ಗಳು ಭಾರತದ ಘನತೆಗೆ ಮಸಿ ಬಳಿಯುವಂತಿವೆ.

    https://twitter.com/meenaharris/status/1357772428982669312

    ಇದು ಕೇವಲ ಕೃಷಿ ನೀತಿ ವಿಚಾರವಲ್ಲ. ಇದು ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳ, ಪೊಲೀಸ್ ಹಿಂಸೆ, ರಾಷ್ಟ್ರೀಯ ಭಯೋತ್ಪಾದನೆ, ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಗಳಿಗೆ ಸಂಬಂಧಿಸಿದ್ದು. ನಿಮ್ಮ ಆಂತರಿಕ ವ್ಯವಹಾರಗಳಿಂದ ದೂರ ಇರಲು ಹೇಳಬೇಡಿ.. ಇವೆಲ್ಲವೂ ನಮ್ಮ ಸಮಸ್ಯೆಗಳೇ ಎಂದು ಮೀನಾ ಹ್ಯಾರೀಸ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

    https://twitter.com/meenaharris/status/1357784804750577665

    ಅಷ್ಟೇ ಅಲ್ಲದೇ ಸಿಂಘು ಗಡಿಯಲ್ಲಿ ಅರೆಸ್ಟ್ ಆಗಿದ್ದ ನೊದೀಪ್ ಕೌರ್ ಎಂಬ ದಲಿತ ಕಾರ್ಯಕರ್ತೆಗೆ ಪೊಲೀಸ್ ಕಸ್ಟಡಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗ್ತಿದೆ. 20 ದಿನಗಳಿಂದ ಕೋರ್ಟ್‍ಗೂ ಹಾಜರುಪಡಿಸದೇ ಹಿಂಸೆ ನೀಡಲಾಗುತ್ತಿದೆ. ಭಾರತದಲ್ಲಿ ದಮನಕಾರಿ ಪ್ರವೃತ್ತಿ ಹೆಚ್ಚುತ್ತಿದೆ ಎಂದೆಲ್ಲಾ ಆರೋಪ ಮಾಡಿದ್ದಾರೆ.

    ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ದೇಶದ್ರೋಹಿಗಳ ಒಂದು ಗುಂಪು ರೈತರ ಹಿಂದೆ ನಿಂತು ವ್ಯವಸ್ಥಿತ ಷಡ್ಯಂತ್ರ್ಯ ನಡೆಸಿದೆ ಎಂದು ಆರೋಪಿಸಿದ್ದಾರೆ. ಹಾಲಿವುಡ್, ಬಾಲಿವುಡ್ ನಟರೇನು ಉಳುಮೆ ಮಾಡಿದ್ದಾರಾ? ಸುಮ್ನೆ ಮೂಗು ತೂರಿಸ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೈತ ಹೋರಾಟದಲ್ಲಿ ವಿದೇಶಿ ಪಿತೂರಿ ಇಲ್ಲ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಸ್ಪಷ್ಟಪಡಿಸಿದ್ದಾರೆ.

  • ಇಂದು ದೇಶಾದ್ಯಂತ ಹಸಿರು ಸೇನೆ ಕಹಳೆ – ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ

    ಇಂದು ದೇಶಾದ್ಯಂತ ಹಸಿರು ಸೇನೆ ಕಹಳೆ – ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ

    ಬೆಂಗಳೂರು: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ದೆಹಲಿಯ ಗಡಿಗಳತ್ತ ದೊಡ್ಡ ಮಟ್ಟದಲ್ಲಿ ರೈತರು ಬಂದು ಸೇರುವುದು ಹೆಚ್ಚಾಗುತ್ತಲೇ ಇದೆ. ಇದರಿಂದ ಉತ್ತೇಜಿತರಾದಂತಿರುವ ರೈತ ಮುಖಂಡರು, ಮತ್ತೊಮ್ಮೆ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ದೆಹಲಿ ಪರೇಡ್ ಬಳಿಕ ಇದೀಗ ‘ಚಕ್ಕಾ ಜಾಮ್’ಗೆ ಕರೆ ನೀಡಿದ್ದಾರೆ.

    ಇಂದು ದೆಹಲಿ ಹೊರತುಪಡಿಸಿ ಇಡೀ ದೇಶಾದ್ಯಂತ ಮೂರು ಗಂಟೆ ಕಾಲ ರಾಷ್ಟ್ರೀಯ ಹೆದ್ದರಿ ಬಂದ್‍ಗೆ ಕರೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೂ ಹೈವೇ ಬಂದ್ ನಡೆಸಲು ಭಾರತ್ ಕಿಸಾನ್ ಯೂನಿಯನ್ ಮುಂದಾಳು ರಾಕೇಶ್ ಟಿಕಾಯತ್ ಮನವಿ ಮಾಡಿಕೊಂಡಿದ್ದಾರೆ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕರ್ನಾಟಕ ಅನ್ನದಾತರ ಬೆಂಬಲ ಸಿಕ್ಕಿದೆ. ದೆಹಲಿಯ ಗಡಿಗಳಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಆಗಮಿಸಿದ್ದು, ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಗಣರಾಜ್ಯೋತ್ಸವದ ಬಳಿಕ ಇಂದು ದೊಡ್ಡ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ಕಡೆ ಭದ್ರತೆ ಹೆಚ್ಚಿಸಿದೆ. ಹೈ ಅಲರ್ಟ್ ಘೋಷಿಸಿದೆ.

    ರಾಜ್ಯದಲ್ಲಿಯೂ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್‍ಗೆ ರೈತರು ಸಿದ್ಧತೆ ನಡೆಸಿದ್ದಾರೆ. ಪ್ರಮುಖ ರೈತ ಮುಖಂಡರು ಬೆಂಗಳೂರಿನಲ್ಲಿಯೇ ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಇದರಿಂದ ಬೆಂಗಳೂರಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳೋ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಊರಿಗೆ ಹೊರಡುವ ಜನರಿಗೆ ಇದರಿಂದ ಸಮಸ್ಯೆ ಎದುರಾಗಲಿದೆ. ಬೆಂಗಳೂರು ಸಂಪರ್ಕಿಸುವ ಎಲ್ಲಾ ಹೈವೇಗಳನ್ನು ಬಂದ್ ಮಾಡಲು ರೈತರು ಸಜ್ಜಾಗಿದ್ದಾರೆ. ಏರ್ ಪೋರ್ಟ್ ರೋಡ್ ಜಾಮ್ ಆಗೋ ಸಂಭವ ಇದೆ.

    ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಜಿಲ್ಲಾ ಮಟ್ಟಗಳಲ್ಲಿ ರಸ್ತೆ ತಡೆ ನಡೆಸುವಂತೆ ಕೋಡಿಹಳ್ಳಿ ಚಂದ್ರಶೇಖರ್ ಘಾಜೀಪುರ್ ಗಡಿಯಿಂದ ಕರೆ ಕೊಟ್ಟಿದ್ದಾರೆ. ಆದರೆ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಲು ಮತ್ತು ಹೈವೇ ಬಂದ್ ನಡೆಸೋದಕ್ಕೆ ರೈತರು ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಇದು ದೇಶವ್ಯಾಪಿ ನಡೆಯೋ ಪ್ರತಿಭಟನೆ. ಹೀಗಾಗಿ ಹೈವೇ ಬಂದ್‍ಗೆ ಅನುಮತಿ ಕೇಳಲ್ಲ. ಇದಕ್ಕೆ ಖಾಕಿ ಅಡ್ಡಿಪಡಿಸಿದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.

  • ಸಂಜೆ 5 ಗಂಟೆವರೆಗೆ 5 ಜಿಲ್ಲೆಗಳ ಮೊಬೈಲ್ ಇಂಟರ್ ನೆಟ್  ಕಡಿತ

    ಸಂಜೆ 5 ಗಂಟೆವರೆಗೆ 5 ಜಿಲ್ಲೆಗಳ ಮೊಬೈಲ್ ಇಂಟರ್ ನೆಟ್  ಕಡಿತ

    ಚಂಡೀಗಢ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ಕೆರಳಿರುವ ಹಿನ್ನೆಲೆ ಹರಿಯಾಣ ಸರ್ಕಾರ 5 ಜಿಲ್ಲೆಗಳ ಇಂಟರ್ ನೆಟ್ ಸೇವೆಗಳನ್ನು ಕಡಿತಗೊಳಿಸಿರುವ ಆದೇಶವನ್ನು ಇಂದು 5 ಗಂಟೆವರೆಗೆ ಮುಂದುಡಿದೆ.

    ಈ ಹಿಂದೆ ಫಬ್ರವರಿ 2 ರವರೆಗೆ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‍ ನೆಟ್‍ನ್ನು ಹರಿಯಾಣ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಮುಂದೂಡಿರುವ ಸರ್ಕಾರ ಹರಿಯಾಣದ ಕೈಥಲ್, ಜಿಂದ್, ರೋಹ್ಟಕ್, ಸೋನಿಪತ್ ಮತ್ತು ಝಜ್ಜರ್ ಜಿಲ್ಲೆಗಳಲ್ಲಿ ದೂರವಾಣಿ ಕರೆಯನ್ನು ಹೊರತುಪಡಿಸಿದಂತೆ ಇಂಟರ್‍ ನೆಟ್‍, ಒಂದೇ ಬಾರಿ ಅನೇಕ ಜನರಿಗೆ ಎಸ್‍ಎಂಎಸ್ ಮತ್ತು ಡೋಂಗಲ್ ಸೇವೆಗಳಿಗೆ ಇಂದು 5 ಗಂಟೆಯವರೆಗೆ ಸರ್ಕಾರ ನಿರ್ಬಂಧ ವಿಧಿಸಿದೆ.

    ಜನವರಿ 26ರಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ಜಾಥಾ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನಾಕಾರರು ಮತ್ತು ಸ್ಥಳೀಯರ ನಡುವೆ ಕಲ್ಲು ತೂರಾಟ ನಡೆದು ಘರ್ಷಣೆ ನಡೆದಿದ್ದು.

  • ಸರ್ಕಾರದ ವಿರುದ್ಧ ಗದಗನಲ್ಲಿ ಅನ್ನದಾತರ ಆಕ್ರೋಶ

    ಸರ್ಕಾರದ ವಿರುದ್ಧ ಗದಗನಲ್ಲಿ ಅನ್ನದಾತರ ಆಕ್ರೋಶ

    ಗದಗ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ, ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಕ್ಕಾಗಿ ಆಗ್ರಹಿಸಿ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ.

    ನೂರಾರು ರೈತರು ಟ್ರ್ಯಾಕ್ಟರ್  ರ‍್ಯಾಲಿ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೂ ಬೃಹತ್ ಪ್ರತಿಭಟನಾ  ರ‍್ಯಾಲಿ ನಡೆಸಿದರು.

    ಸರ್ಕಾರ ಕೃಷಿ ಕಾಯ್ದೆ ಹಿಂಪಡೆಯಬೇಕು, ರೈತರ ಬೇಡಿಕೆಗಳನ್ನು ಈಡೇರಿಸಬೇಕು. ರೈತರ ಬೆಳೆಗಳಿಗೆ ಖರೀದಿ ಕೇಂದ್ರ ಸ್ಥಾಪಿಸುವುದರ ಜೊತೆಗೆ ಎಲ್ಲಾ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸಿದರು. ಮುಂಡರಗಿಯ ಕೊಪ್ಪಳ ಸರ್ಕಲ್ ನಲ್ಲಿ ರಸ್ತೆತಡೆ ಮಾಡಿ ಮಾನವ ಸರಪಳಿ ನಿರ್ಮಿಸಿದರು.

    ತಹಶೀಲ್ದಾರ ಕಚೇರಿ ಎದುರು ಸಹ ಅರಭಾವಿ-ಚಳ್ಳಕೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ, ರಸ್ತೆ ಮಧ್ಯ ಕುಳಿತ ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟಕ್ಕೆ ಅನೇಕ ರೈತಪರ, ಕನ್ನಡಪರ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದರು. ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.

  • 10 ಲಕ್ಷ ರೈತರನ್ನು ದೇಶದ್ರೋಹಿಗಳು ಎಂದು ಯಾವ ನಾಲಗೆಯಲ್ಲಿ ಹೇಳ್ತೀರಿ?- ಜನತೆಗೆ ಸಿದ್ದರಾಮಯ್ಯ ಪತ್ರ

    10 ಲಕ್ಷ ರೈತರನ್ನು ದೇಶದ್ರೋಹಿಗಳು ಎಂದು ಯಾವ ನಾಲಗೆಯಲ್ಲಿ ಹೇಳ್ತೀರಿ?- ಜನತೆಗೆ ಸಿದ್ದರಾಮಯ್ಯ ಪತ್ರ

    ಬೆಂಗಳೂರು: ಪೊಲೀಸರು ವಿಧಿಸಿದ್ದ ನಿಯಮಗಳಂತೆ ನಡೆದುಕೊಂಡು ರ‍್ಯಾಲಿ ನಡೆಸಿದ 10 ಲಕ್ಷ ರೈತರನ್ನು ಯಾವ ನಾಲಿಗೆಯಲ್ಲಿ ದೇಶದ್ರೋಹಿಗಳು ಎನ್ನುವುದು? ಆತ್ಮ, ಹೃದಯಗಳನ್ನು ಮಾರಿಕೊಂಡ, ಒತ್ತೆ ಇಟ್ಟುಕೊಂಡ ಜನದ್ರೋಹಿಗಳು ಮಾತ್ರವೇ ಈ ಮಾತುಗಳನ್ನಾಡಲು ಸಾಧ್ಯ ಅಲ್ಲವೆ? ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು ದೇಶ ಪ್ರೇಮಿಗಳು ಹೇಗಾಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

    ಕೇಂದ್ರ ಬಜೆಟ್‌ ಮುನ್ನ ದಿನವಾದ ಇಂದು ಸಿದ್ದರಾಮಯ್ಯನವರು ನಾಡಿನ ಜನತೆಗೆ ಪತ್ರ ಬರೆದು ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಮಾಜಿ ಸಿಎಂ ಬರೆದ ಪತ್ರವನ್ನು ಇಲ್ಲಿ ನೀಡಲಾಗಿದೆ.

    ನಾಡಿನ ಪ್ರೀತಿಯ ಬಂಧುಗಳೇ,
    ದೇಶದ ರೈತರು ಇಂದು ಅತ್ಯಂತ ಹತಾಶರಾಗಿ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ಏಕೆ ನಡೆಯುತ್ತಿದೆಯೆಂದು ಅನೇಕರಿಗೆ ಗೊತ್ತಿವೆ. ಗೊತ್ತಿಲ್ಲದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ರಾಜ್ಯದ, ನಮ್ಮ ದೇಶದ ಅಸಂಖ್ಯಾತ ಜನರು ಅತ್ಯಂತ ಮೂಲಭೂತ ಅಗತ್ಯಗಳಾದ ಅನ್ನ, ಬಟ್ಟೆ, ಆರೋಗ್ಯ, ಶಿಕ್ಷಣ ಹೀಗೆ ದೈನಂದಿನ ವಿಚಾರಗಳಲ್ಲಿ ಮುಳುಗಿದ್ದಾರೆ. ದೇಶದ ಆಗು ಹೋಗುಗಳ ಕುರಿತು ಆಸಕ್ತಿ ಇರುವವರು ಮಾಹಿತಿಯನ್ನು ಹುಡುಕಿ ಅಥವಾ ಕೇಳಿ ಪಡೆದುಕೊಂಡು ಸತ್ಯ ಯಾವುದು ಸುಳ್ಳು ಯಾವುದು ಎಂದು ಪರಾಮರ್ಶಿಸಿ ವಿಚಾರವಂತರಾಗುತ್ತಿದ್ದಾರೆ.

    ದೇಶದ ರೈತರು ಕಣ್ಣಲ್ಲಿ ನೀರು ಹಾಕಿ ರೋಧಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರು ಯಾಕೆ ಕಣ್ಣೀರು ಹಾಕುತ್ತಿದ್ದಾರೆ? ದೆಹಲಿಯ ಮೈನಸ್ ಡಿಗ್ರಿ ಚಳಿಯಲ್ಲಿ ವಯಸ್ಸಾದವರು, ಅಸಹಾಯಕರು, ಯುವಕರು ಕೂತು ಯಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಸುಮಾರು 140 ಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಯಾಕೆ ಹುತಾತ್ಮರಾದರು? ಸಾವೆಂಬುದು ಅಷ್ಟೊಂದು ಸರಳವೇ ಅವರಿಗೆ? ರೈತರ ಸಾವಿಗೆ ಎಂಥೆಂಥ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಮಧ್ಯಮ ವರ್ಗದ ನಗರಗಳಲ್ಲಿನ ನಾವು ಅರ್ಥ ಮಾಡಿಕೊಂಡಿದ್ದೇವೆಯೇ?

    ಯಾರೋ ಕೆಲವು ಕಿಡಿಗೇಡಿಗಳು ಜನವರಿ 26 ನೇ ತಾರೀಖು ಕೆಂಪು ಕೋಟೆಯ ಬಳಿ ಬಾವುಟ ಹಾರಿಸಿದರು, ದಾಂಧಲೆ ಮಾಡಿದರು. ದಾಂಧಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ನಿಜ. ದೆಹಲಿಯ ಬೀದಿ ಬೀದಿಗಳಲ್ಲಿ ಸಿಸಿ ಕ್ಯಾಮೆರಾಗಳಿವೆ ಎಂದು ಕೇಳಿದ್ದೇನೆ. ಅವುಗಳ ಮೂಲಕ ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಲಿ. ಕೆಂಪು ಕೋಟೆಯ ಆವರಣಕ್ಕೆ ಹೋದವರೆಷ್ಟು ಜನ? ಹೆಚ್ಚೆಂದರೆ ಒಂದೆರಡು ಸಾವಿರ ಜನರಿರಬಹುದು. ಉಳಿದಂತೆ ಪೊಲೀಸರು ವಿಧಿಸಿದ್ದ ನಿಯಮಗಳಂತೆ ನಡೆದುಕೊಂಡು ರ‍್ಯಾಲಿ ನಡೆಸಿದ 10 ಲಕ್ಷ ರೈತರನ್ನು ಯಾವ ನಾಲಿಗೆಯಲ್ಲಿ ದೇಶದ್ರೋಹಿಗಳು ಎನ್ನುವುದು? ಆತ್ಮ, ಹೃದಯಗಳನ್ನು ಮಾರಿಕೊಂಡ, ಒತ್ತೆ ಇಟ್ಟುಕೊಂಡ ಜನದ್ರೋಹಿಗಳು ಮಾತ್ರವೇ ಈ ಮಾತುಗಳನ್ನಾಡಲು ಸಾಧ್ಯ ಅಲ್ಲವೆ? ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು ದೇಶ ಪ್ರೇಮಿಗಳು ಹೇಗಾಗುತ್ತಾರೆ?

    ಬಾಯಿ ಮಾತಲ್ಲಿ ಮಾತ್ರ ದೇಶ ಪ್ರೇಮದ ಬಗ್ಗೆ ಬರೀ ಭಾಷಣ ಮಾಡುವ ಬಿಜೆಪಿಯವರು ಮೊನ್ನೆ, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅತಿ ಹೆಚ್ಚು ಆತ್ಮಹತ್ಯೆಗಳಾದವು” ಎಂದು ಟ್ವೀಟು ಮಾಡಿದ್ದರು. ಇದನ್ನು ತಿಳುವಳಿಕೆಯುಳ್ಳ ನಾಡಿನ ಜನರು ಪರಿಶೀಲಿಸಿ ನೋಡಿದರೆ ಸತ್ಯ ತಿಳಿಯುತ್ತದೆ. ಅತಿ ಹೆಚ್ಚು ಆತ್ಮಹತ್ಯೆಗಳಾಗಿರುವುದು ಬಿಜೆಪಿ ಸರ್ಕಾರಗಳಿದ್ದ ಮಹಾರಾಷ್ಟ್ರ, ಮಧ್ಯ ಪ್ರದೇಶ ಮುಂತಾದ ರಾಜ್ಯಗಳಲ್ಲಿ. ಇಷ್ಟಕ್ಕೂ ಯಾಕೆ ಆತ್ಮಹತ್ಯೆಗಳಾದವು?

    ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ರೇಷ್ಮೆಯ ಮೇಲಿನ ಆಮದು ತೆರಿಗೆಯನ್ನು ಶೇ 5 ಕ್ಕೆ ಇಳಿಸಿದರು. ನಮ್ಮ ರೇಷ್ಮೆಗೆ ಬೆಲೆ ಕುಸಿಯಿತು. ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬಿತ್ತು. ಮಲೇಶಿಯಾ ಮುಂತಾದ ದೇಶಗಳಿಂದ ದೊಡ್ಡ ಮಟ್ಟದಲ್ಲಿ ಎಣ್ಣೆ, ಸೋಯಾ ಕಾಳುಗಳನ್ನು ಆಮದು ಮಾಡಿಕೊಂಡರು. ದೇಶದಲ್ಲಿ ಎಣ್ಣೆ ಕಾಳು ಬೆಳೆಯುವ ಮಧ್ಯ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳ ರೈತರ ಬದುಕಿಗೆ ಗಂಡಾಂತರ ಒದಗಿತು. ಇದರ ಜೊತೆಯಲ್ಲಿ ದೇಶದ ಅನೇಕ ಕಡೆ ಭೀಕರ ಬರಗಾಲ ಬಂತು. ರೈತರ ಸಾಲ ಮನ್ನಾ ಮಾಡಿ ಎಂದು ಕೈ ಮುಗಿದು ಕೇಂದ್ರವನ್ನು ರಾಜ್ಯಗಳು ಕೇಳಿಕೊಂಡವು. ಮೋದಿಯವರು ರೈತರ ಸಾಲ ಮನ್ನಾ ಮಾಡುವ ಬದಲಾಗಿ ದೊಡ್ಡ ಕೈಗಾರಿಕೋದ್ಯಮಿಗಳ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಿ ಅದನ್ನು ಎನ್‌ಪಿಎ ಎಂದು ಮಾಫಿ ಮಾಡಿಬಿಟ್ಟರು.

    ನೀವೆಲ್ಲರೂ ನೋಡುತ್ತಿದ್ದೀರಿ. ಇನ್ನಷ್ಟು ವಿಶಾಲ ಮನಸ್ಸಿನಿಂದ ನೋಡಿ ಕೇಂದ್ರದ ಪಾಲಿಸಿಗಳು ಯಾರ ಪರವಾಗಿವೆ ಎಂದು. ಬಡವರ ಪರವಾಗಿವೆ ಎಂದು ನನಗಂತೂ ಅನ್ನಿಸುತ್ತಿಲ್ಲ. ಗ್ಯಾಸಿನ ಬೆಲೆ ಗಗನಕ್ಕೇರಿದೆ. ಯುಪಿಎ ಸರ್ಕಾರದ ಅಂತ್ಯದ ವೇಳೆಗೆ ಪೆಟ್ರೋಲ್ ಮೇಲೆ ಕೇಂದ್ರ ಸರಕಾರ ವಿಧಿಸುತ್ತಿದ್ದ ತೆರಿಗೆ 9.21 ಮಾತ್ರ. ಇದನ್ನು ಈಗ 32.98 ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಡೀಸೆಲ್ ಮೇಲೆ ಮೊದಲಿದ್ದ ತೆರಿಗೆ 3.45 ಮಾತ್ರ. ಈಗ ಇದನ್ನು 31.83 ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಿಂದ ಸ್ಥೂಲವಾಗಿ ನೋಡಿದರೂ ಸುಮಾರು ಎರಡೂವರೆ ಲಕ್ಷಕೋಟಿ ಹಣ ಕೇಂದ್ರಕ್ಕೆ ಹೋಗುತ್ತಿದೆ. ಅದರಲ್ಲಿ 1 ಲಕ್ಷಕೋಟಿ ಆದಾಯ ತೆರಿಗೆ, 83 ಸಾವಿರ ಕೋಟಿ ಜಿ.ಎಸ್.ಟಿ, 36 ಸಾವಿರ ಕೋಟಿ ಪೆಟ್ರೋಲ್ ಡೀಸೆಲ್ ಮೇಲಿನ ಹೆಚ್ಚುವರಿ (ಅಡಿಷನಲ್) ತೆರಿಗೆ, ಯುಪಿಎ ಸರ್ಕಾರವಿದ್ದಾಗ ಕೇವಲ 3500 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿತ್ತಿತ್ತು. 17.5 ಸಾವಿರ ಕೋಟಿ ಕಸ್ಟಮ್ಸ್ ತೆರಿಗೆ ಮುಂತಾದವೆಲ್ಲ ಸೇರಿವೆ.  ನಮ್ಮ ಐ.ಟಿ ರಫ್ತಿನಿಂದ ಬರುವ ತೆರಿಗೆಯನ್ನು, ಸುಂಕವನ್ನು, ಸೆಸ್ಸುಗಳನ್ನು ಇದರಲ್ಲಿ ಸೇರಿಸಿಲ್ಲ. ದೇಶದಲ್ಲಿ ಶೇ.40 ಕ್ಕೂ ಹೆಚ್ಚಿನ ಪ್ರಮಾಣದ ರಫ್ತು ನಮ್ಮ ರಾಜ್ಯದಿಂದಲೇ ಆಗುತ್ತದೆ. ಆದರೆ ಕೇಂದ್ರ ನಮಗೆ ಶೇ. 42 ರಷ್ಟು ಕೊಡಬೇಕಲ್ಲವೆ? ಆದರೆ  ತೆರಿಗೆ, ಸಹಾಯಧನಗಳ ರೂಪದಲ್ಲಿ ಕೊಡುತ್ತಿರುವುದು ಕೇವಲ 45 ರಿಂದ 50 ಸಾವಿರ ಕೋಟಿ ಮಾತ್ರ. ದೇಶದ ಬೇರೆ ಬೇರೆ ರಾಜ್ಯಗಳೂ ಬೆಳವಣಿಗೆಯಾಗಬೇಕು ನಿಜ. ಅದಕ್ಕೆ ಕೇಂದ್ರ ಉಳಿಸಿಕೊಳ್ಳುವ ಶೇ 58 ರಷ್ಟು ನಮ್ಮ ಹಣದಲ್ಲಿ ಉದಾರವಾಗಿ ನೀಡಲಿ ಯಾರು ಬೇಡ ಅಂದವರು?

    ರೈತರ ವಿಚಾರಕ್ಕೆ ಬರೋಣ. ರೈತರು ಈಗ ಕೇಂದ್ರವು ಜಾರಿಗೆ ತಂದಿರುವ ಮೂರೂ ಕಾಯ್ದೆಗಳು ನಮ್ಮನ್ನು ನಾಶ ಮಾಡುತ್ತವೆ ಎಂದು ಹೇಳುತ್ತಿದ್ದಾರೆ. ಅವುಗಳನ್ನು ಹಿಂಪಡೆಯಿರಿ ಎಂದು ಪ್ರತಿಭಟಿಸುತ್ತಿದ್ದಾರೆ. ಈ ಕಾಯ್ದೆಗಳು ರೈತರನ್ನು ಉದ್ಧಾರ ಮಾಡುತ್ತವೆ ಎಂದು ಕೇಂದ್ರ ಹೇಳುತ್ತಿದೆ. ತಿಳಿದವರು ಯಾವುದು ಸರಿ ಎಂದು ಯೋಚಿಸಬೇಕಲ್ಲವೆ? ಸರಿ ತಪ್ಪುಗಳ ಕುರಿತು ಜನರಿಗೆ ಹೇಳಬೇಕಲ್ಲವೆ?

    ಚರ್ಚೆ, ಸಂವಾದ ನಡೆಸುವವರನ್ನೇ ದೇಶದ್ರೋಹಿಗಳು ಎಂದು ಬಿಂಬಿಸಿ ಅನೇಕ ಮಾಧ್ಯಮದವರ ಮೇಲೆ ಕೇಸು ಹಾಕಿಬಿಟ್ಟರೆ ಅದನ್ನು ಪ್ರಜಾಪ್ರಭುತ್ವ ಎನ್ನಲಾದೀತೆ?

    ರೈತರು ಕೇಳುತ್ತಿರುವುದು ಇಷ್ಟೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೀರಿ. ಯಾರು ಎಲ್ಲಿ ಬೇಕಾದರೂ ಕೊಳ್ಳಬಹುದು ಮಾರಬಹುದು ಎನ್ನುತ್ತೀರಿ. ಎಪಿಎಂಸಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ತೆರಿಗೆ ಕಟ್ಟಬೇಕು. ಹೊರಗೆ ಖರೀದಿಸುವವರು ತೆರಿಗೆ ಕಟ್ಟುವಂತಿಲ್ಲ. ಹಾಗಾದಾಗ ಯಾರು ಎಪಿಎಂಸಿಗೆ ಬಂದು ಖರೀದಿಸುತ್ತಾರೆ? ಕೊಳ್ಳುವವರು ಇಲ್ಲ ಎಂದ ಮೇಲೆ ಮಾರುವವರು ತಮ್ಮ ಉತ್ಪನ್ನ ಎಲ್ಲಿ ಮಾರುವುದು?  ರೈತರು ತಮ್ಮ ಹೊಲ ಗದ್ದೆಗಳಲ್ಲೇ ಮಾರಿದರೆ ಎಷ್ಟು ಬೆಲೆಗೆ ಮಾರಿದರು ಎಂದು ನೋಡುವುದು ಹೇಗೆ? ರೈತರನ್ನು ಒಬ್ಬಂಟಿಗಳಾಗಿಸಿ ಶೋಷಣೆ ಮಾಡಿದರೆ ಅದನ್ನು ಹೇಗೆ ನಿಲ್ಲಿಸುತ್ತೀರಿ? ಉತ್ಪನ್ನಗಳ ಬೆಲೆಯನ್ನು ಹೇಗೆ ನಿರ್ಣಯಿಸುತ್ತೀರಿ? ಎಪಿಎಂಸಿಗಳಿದ್ದರೆ ರೈತರು ತಮ್ಮ ಉತ್ಪನ್ನವನ್ನು ಮಳಿಗೆಗಳಲ್ಲಿಟ್ಟು ಸಾಲ ಪಡೆಯಬಹುದು. ಈಗ ಎಪಿಎಂಸಿಗಳೆಲ್ಲ ಖಾಸಗಿಯವರ ಪಾಲಾದರೆ ರೈತರು ಬದುಕುವುದು ಹೇಗೆ? ಎಪಿಎಂಸಿ ವ್ಯವಸ್ಥೆಯಲ್ಲಿ ಲೋಪಗಳಿಲ್ಲವೆಂತಲ್ಲ. ಅವುಗಳನ್ನು ಸರ್ಕಾರ-ರೈತರು ಒಟ್ಟಾಗಿ ಸೇರಿ ಸರಿ ಮಾಡಬೇಕಲ್ಲವೆ? ರೈತರೊಂದಿಗೆ ಚರ್ಚಿಸದೆ ಕೊರೋನಾ ಕರ್ಫ್ಯೂ ಇದ್ದಾಗ ಸುಗ್ರೀವಾಜ್ಞೆ ಮೂಲಕ ಯಾಕೆ ಹೊಸ ಕಾನೂನು ತಂದಿರಿ? ಸಂವಿಧಾನದಲ್ಲಿ ರಾಜ್ಯಗಳಿಗೆ ಇರುವ ಕೃಷಿ ಮಾರುಕಟ್ಟೆಗಳ ಮೇಲಿನ ಅಧಿಕಾರವನ್ನು ಯಾಕೆ ದಮನಿಸಿ ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದೀರಿ? ಎಂದು ರೈತರು ಕೇಳುತ್ತಿದ್ದಾರೆ.

    ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸುತ್ತಿಲ್ಲ. ಬದಲಿಗೆ, ‘ಬೆಂಬಲ ಬೆಲೆ ರದ್ದು ಮಾಡಲಾಗುತ್ತದೆ ಎಂದು  ಕೆಲವು ರೈತರು ಮತ್ತು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದು ಸುಳ್ಳು” ಎಂದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹಿರಾತು ನೀಡುತ್ತಾರೆ. ಇದಕ್ಕೆ ರೈತರು ಕೇಳುತ್ತಿದ್ದಾರೆ. ‘ಆಯಿತಪ್ಪ. ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನೀಡುವ ಕಾಯ್ದೆಯೊಂದನ್ನು ಜಾರಿಗೆ ತನ್ನಿ ಎಂದರೆ ಕೇಂದ್ರ ಸರ್ಕಾರ ಬಾಯಿಯನ್ನೇ ಬಿಡದೆ ಮೌನವಾಗುತ್ತದೆ. ಪಂಜಾಬ್‌ ಮತ್ತು ಕೇರಳ ಸರ್ಕಾರಗಳು ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಯಾರಾದರೂ ಕೊಂಡುಕೊಂಡರೆ ಅದು ಶಿಕ್ಷಾರ್ಹ ಅಪರಾಧ ಎಂದು ಕಾಯ್ದೆ ತಂದರೆ ರಾಷ್ಟ್ರಪತಿಗಳು ಆ ಕಾಯ್ದೆಗೆ ಸಹಿ ಮಾಡದೆ ತಿರಸ್ಕರಿಸುತ್ತಾರೆ. ಏನಿದರ ಅರ್ಥ?

    ಮತ್ತದೇ ಗೌರವಾನ್ವಿತ ರಾಷ್ಟ್ರಪತಿಗಳ ಬಾಯಲ್ಲಿ ಈ ಮೂರೂ ಕಾಯ್ದೆಗಳು ರೈತ ಪರವಾಗಿವೆ ಎಂದು ಕೇಂದ್ರ ಸರ್ಕಾರ ಭಾಷಣ ಮಾಡಿಸುತ್ತದೆ. ಹೇಗೆ ಸಹಾಯವಾಗ್ತದೆ ಹೇಳ್ರಪ್ಪಾ ಅಂದರೆ ಮತ್ತದೇ ಮಾತು ತಿರುಚುವ ಕೆಲಸ. ಪ್ರತಿಭಟನೆ ಮಾಡಿದರೆ ದೇಶದ್ರೋಹಿ ಎಂಬ ಕೇಸು. ಹಾಗಿದ್ದರೆ ರೈತರನ್ನು ಹೇಗೆ ರಕ್ಷಿಸಬೇಕು?

    ಗದುಗಿನ ಭಾರತ ಕೃತಿ ಬರೆದ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಹೇಳುತ್ತಾನೆ; “ಕೃಷಿಯೇ ಮೊದಲು ಸರ್ವಕ್ಕೆ…ಕೃಷಿ ವಿಹೀನನ ದೇಶವದು ದುರ್ದೇಶ” ಎನ್ನುತ್ತಾನೆ. ಇದು ಇವರಿಗೆ ಯಾಕೆ ಅರ್ಥವಾಗುವುದಿಲ್ಲ.

    ಪ್ರತಿಭಟಿಸುತ್ತಿರುವ ರೈತರು ತಮಗಾಗಿ  ಮಾತ್ರ ಪ್ರತಿಭಟಿಸುತ್ತಿಲ್ಲ. ದೇಶಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ನಗರಗಳ ನಿಮ್ಮೆಲ್ಲರ ರಕ್ಷಣೆಗಾಗಿ ಪ್ರತಿಭಟಿಸುತ್ತಿದ್ದಾರೆ ದಯಮಾಡಿ ಅರ್ಥಮಾಡಿಕೊಳ್ಳಿ. ಹೇಗೆ ಗೊತ್ತೆ? ಎಪಿಎಂಸಿ ಕಾಯ್ದೆಯ ನಂತರ ಮತ್ತೊಂದು ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದಾರೆ. ಅದು ಅಗತ್ಯ ವಸ್ತುಗಳ ಕಾಯ್ದೆ. ಅದರಲ್ಲಿ ಮನುಷ್ಯರು ಬದುಕಲಿಕ್ಕೆ  ತಿನ್ನಬಹುದಾದ ಆಹಾರ ಧಾನ್ಯಗಳು, ಎಣ್ಣೆ, ಕಾಳುಗಳು, ಬೇಳೆಗಳು ಮುಂತಾದವುಗಳನ್ನು ಗೋಡೌನುಗಳಲ್ಲಿ ಸಂಗ್ರಹಿಸುವುದಕ್ಕೆ ಈ ಮೊದಲು ಒಂದು ಮಿತಿ ಇತ್ತು. ಈಗ ಆ ಮಿತಿ ತೆಗೆದು ಹಾಕಿದ್ದಾರೆ. ಯಾರು ಎಷ್ಟು ಬೇಕಾದರೂ ಸಂಗ್ರಹಿಸಿಡಬಹುದು. ಇದರಿಂದ ರೈತರಿಗೂ ಗ್ರಾಹಕರಿಬ್ಬರಿಗೂ ಭೀಕರ ಹೊಡೆತ ಬೀಳುತ್ತದೆ.

    ಉದಾಹರಣೆಗೆ ಹಿಮಾಚಲದ ಸೇಬನ್ನು ವ್ಯಾಪಾರಿಗಳು ಹಿಂದೆ ತೋಟಗಳಲ್ಲೇ 20ರೂ ಕೊಟ್ಟು ಖರೀದಿಸುತ್ತಿದ್ದರಂತೆ.  ಈ ದೇಶದ ದೊಡ್ಡ ವ್ಯಾಪಾರಿಯೊಬ್ಬ [ಅವನು ಯಾರು ಎಂದು ಹೇಳಬೇಕಾಗಿಲ್ಲ] ಹೋಗಿ ನಾನು 30 ರೂ ಕೊಡುತ್ತೇನೆ ಎಂದು ಎರಡು ವರ್ಷ ಖರೀದಿಸಿದನಂತೆ.  ವ್ಯಾಪಾರಿಗಳು ನಷ್ಟ ಅನುಭವಿಸಿದರು. ಬೇರೆ ಕೆಲಸಗಳನ್ನು ಹುಡುಕಿ ಹೊರಟರು. ಈಗ ಆ ದೊಡ್ಡ  ವ್ಯಾಪಾರಿ ಕುಳ ರೈತರಿಂದ 8- 10 ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತಿದ್ದಾನಂತೆ. ಹಾಗೆ ಕೊಂಡುಕೊಂಡು ದಾಸ್ತಾನು ಮಾಡಿ ನಮಗೆ ನಿಮಗೆ 150-180 ರೂಗೆ ಮಾರತೊಡಗಿದ್ದಾನೆ. 2015–16 ರಲ್ಲಿ ತೊಗರಿ ಬೇಳೆ ಏನಾಯಿತು ಎಂದು ನಿಮಗೆ ಗೊತ್ತಿದೆ. ರೈತರಿಂದ 60-70 ರೂಗೆ ಖರೀದಿ ಮಾಡಿ  180-200 ರೂಗೆ ನಮಗೆ ಮಾರಾಟ ಮಾಡಿದರು. ಆಗ ಐಟಿ ಇಲಾಖೆ ಅದಾನಿ, ಜಿಂದಾಲ್ ಮತ್ತು ಇತರೆ ಬಹುರಾಷ್ಟ್ರೀಯ ಕಂಪೆನಿಗಳ ಗೋಡೌನುಗಳ ಮೇಲೆ ದಾಳಿ ಮಾಡಿ 75 ಸಾವಿರ ಟನ್ ತೊಗರಿ ಬೇಳೆ ವಶ ಪಡಿಸಿಕೊಂಡಿತು. ಇವರೆಲ್ಲರೂ ಅಕ್ರಮ ದಾಸ್ತಾನು ಮಾಡಿದ್ದರು. ಹೊಸ ಕಾಯ್ದೆ ಪ್ರಕಾರ ಮುಂದಿನ ದಿನಗಳಲ್ಲಿ ಯಾರೂ ದಾಳಿ ಮಾಡುವಂತಿಲ್ಲ. ಆ ರೀತಿ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ.

    ಗೋಡೌನ್‍ಗಳಲ್ಲಿನ ಗೋಲ್‍ಮಾಲ್‍ನಿಂದ ಅವರಿಗೆ ಸಿಗುವ ಲಾಭದ ಲೆಕ್ಕವೆಷ್ಟು ಗೊತ್ತಾ ? ಭಾರತದಲ್ಲಿ ನಾವು ವರ್ಷಕ್ಕೆ 48-50 ಮಿಲಿಯನ್ ಮೆಟ್ರಿಕ್ ಟನ್ ತೊಗರಿ ಬೇಳೆ ಬಳಸುತ್ತೇವೆ. ಒಂದು ಕೆ.ಜಿ ತೊಗರಿ ಬೇಳೆಗೆ ಕೇವಲ 30 ರೂ ಜಾಸ್ತಿಯಾದರೆ ದೇಶದ ಜನ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ ಹಣವನ್ನು ಹೆಚ್ಚಿಗೆ ತಮ್ಮ ಜೇಬಿನಿಂದ ಪಾವತಿಸುತ್ತಾರೆ. ಈ ಕಾಯ್ದೆ ಜಾರಿಗೆ ತಂದಾಗಿನಿಂದ ತೊಗರಿ ಬೇಳೆ ಸುಮಾರು 40 ರೂ ಜಾಸ್ತಿಯಾಗಿದೆ. ಅಡುಗೆ ಎಣ್ಣೆ ಸುಮಾರು 40 ರೂ ಜಾಸ್ತಿಯಾಗಿದೆ. ಅಕ್ಕಿ ಬೆಲೆ ಜಾಸ್ತಿಯಾಗಿದೆ. ಹೀಗೆ ಆಹಾರ ಧಾನ್ಯಗಳ ಬೆಲೆಗಳೆಲ್ಲ ಜಾಸ್ತಿಯಾಗಿವೆ. ನಿಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕೇಳಿ ನೋಡಿ. ಕಳೆದ 4 ತಿಂಗಳಿಂದೀಚೆಗೆ ಪ್ರತಿ ತಿಂಗಳ ಮನೆ ಖರ್ಚು ಎಷ್ಟು ಹೆಚ್ಚಾಗುತ್ತಲೇ ಹೋಗುತ್ತಿದೆ ಎಂದು. ಇದನ್ನೂ ಸರಿಪಡಿಸಬೇಕೆಂದು ರೈತರು ಹೋರಾಡುತ್ತಿದ್ದಾರೆ. ಅಂಥ ರೈತರನ್ನು ಕೆಲವರು ದೇಶದ್ರೋಹಿಗಳು ಎನ್ನುತ್ತಾರಲ್ಲ? ಅವರನ್ನು ಮನುಷ್ಯರು ಎನ್ನುವುದೋ ಇಲ್ಲ ಪಂಚೇಂದ್ರಿಯಗಳು ಸತ್ತು ಹೋದ ರಾಕ್ಷಸರೆನ್ನುವುದೋ?

    ಭತ್ತಕ್ಕೆ ಬೆಲೆ ಇಲ್ಲ ಆದರೆ ಅಕ್ಕಿ ಬೆಲೆ ಗಗನಕ್ಕೇರುತ್ತಿದೆ. ಹಾಗಾಗಿ ಇತ್ತ ರೈತರಿಗೂ ಬೆಲೆ ಸಿಗುತ್ತಿಲ್ಲ. ಗ್ರಾಹಕರಿಗೂ ಅನುಕೂಲ ಆಗುತ್ತಿಲ್ಲ. ಹಾಗಾದರೆ ದೇಶದ ಹಣ ಎಲ್ಲಿಗೆ ಹೋಗುತ್ತಿದೆ ? ತಿಳಿದವರು ಮರದ ಮೇಲೆ ಕುಳಿತ ಹಕ್ಕಿಗಳಂತೆ ಕೆಲಸ ಮಾಡಬೇಕೋ ಇಲ್ಲ ಕೊಳಲೂದಿ ಬೇಟೆಗಾರ ಬೇಟೆಯಾಡಲು ಸಹಾಯ ಮಾಡಬೇಕೋ? ಎಂದು ನನ್ನ  ಪ್ರೀತಿಯ ಜನರೇ ಹೇಳಬೇಕು.

     ಇಷ್ಟೆಲ್ಲಾ ಸಾಲದು ಎಂದು ಕೇಂದ್ರ ಸರಕಾರ, ‘ರೈತರೊಂದಿಗೆ   ಬಂಡವಾಳಿಗರು ಒಪ್ಪಂದ  ಮಾಡಿಕೊಳ್ಳುವ ಕಾಯ್ದೆಯನ್ನೂ ಜಾರಿಗೆ ತಂದಿದ್ದಾರೆ. ಒಪ್ಪಂದದಲ್ಲಿ ಏನಾದರೂ ಲೋಪಗಳಾದರೆ  ರೈತರು ಎಸಿ-ಡಿಸಿ ಬಳಿಗೆ ಹೋಗಬೇಕಂತೆ. ಕೋರ್ಟಿಗೆ ಹೋಗಬಾರದಂತೆ. ಈ ಸಮಸ್ಯೆ ಇತ್ಯರ್ಥ ಪಡಿಸುವ ಅಧಿಕಾರವನ್ನು ಆ ಕಾಯ್ದೆಯಲ್ಲಿ ಕೋರ್ಟ್‍ಗಳಿಗೆ ಕೊಟ್ಟೇ ಇಲ್ಲ ಎಂದು ಹೇಳಲಾಗಿದೆ. ಹೀಗಿದ್ದಾಗ ಈ ಅಧಿಕಾರಿಗಳು ಯಾರ ಪರವಾಗಿ ತೀರ್ಮಾನ ಮಾಡುತ್ತಾರೆಂದು ನಮಗೆಲ್ಲ ಗೊತ್ತಿದೆಯಲ್ಲ.

    ಈಗ ಹೇಳಿ ಈ ಕಾಯ್ದೆಗಳು ದೇಶದ ಜನರ ಪರವಾಗಿವೆಯೆ? ರೈತರ ಪರವಾಗಿವೆಯೇ? ಕಾರ್ಮಿಕರನ್ನು ಶೋಷಣೆ ಮಾಡುವುದಕ್ಕಂತೂ ಇನ್ನೂ ಭೀಕರ ಕಾಯಿದೆಗಳನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕರು ಬೀದಿಯಲ್ಲಿದ್ದರೂ ಯಾರೂ ಕೇಳುವವರಿಲ್ಲ. ಈಗಲೂ ನನ್ನ ದೇಶದ ಹೆಮ್ಮೆಯ ರೈತರನ್ನು ದೇಶದ್ರೋಹಿಗಳು ಎನ್ನಲು ನಿಮಗೆ ಮನಸ್ಸು ಬರುತ್ತದೆಯೇ?

    ಮತ್ತೊಮ್ಮೆ ನಾಡಿನ ಪ್ರೀತಿಯ ಜನರನ್ನು ವಿನಂತಿಸುತ್ತೇನೆ. ದಯಮಾಡಿ ರೈತರನ್ನು ದೇಶದ್ರೋಹಿಗಳು ಎನ್ನಬೇಡಿ. ಅವರ ಕಷ್ಟಕ್ಕೆ ಜೊತೆಯಾಗಿ. ಆಗದಿದ್ದರೆ ಅವರ ಬಗ್ಗೆ ಕೆಟ್ಟ ಮಾತು ಆಡುವುದನ್ನಾದರೂ ನಿಲ್ಲಿಸಿ. ಇಡೀ ದೇಶ ಪ್ರತಿಭಟನಾನಿರತ ರೈತರ ಋಣದಲ್ಲಿದೆ ಎನ್ನುವುದನ್ನು ಮರೆಯದಿರೋಣ.

    ಧನ್ಯವಾದಗಳೊಂದಿಗೆ

    ಇಂತಿ ತಮ್ಮವ
    ಸಿದ್ದರಾಮಯ್ಯ

  • ದೆಹಲಿ ಗಡಿಯಲ್ಲಿ ಇಂಟರ್‌ನೆಟ್‌ ಸೇವೆ ಬಂದ್‌

    ದೆಹಲಿ ಗಡಿಯಲ್ಲಿ ಇಂಟರ್‌ನೆಟ್‌ ಸೇವೆ ಬಂದ್‌

    ನವದೆಹಲಿ/ ಬೆಂಗಳೂರು: ದೆಹಲಿ ಗಡಿಗಳಲ್ಲಿ ಹೈಡ್ರಾಮಾ ಮುಂದುವರಿದಿದೆ. ಮೊನ್ನೆ ಘಾಜಿಪುರ ಗಡಿಯಲ್ಲಿ ಕರೆಂಟ್, ನೀರು ಕಡಿತಗೊಳಿಸಿದ್ದ ಸರ್ಕಾರ ಈಗ ರೈತರು ಪ್ರತಿಭಟನೆ ನಡೆಸುತ್ತಿರುವ ಎಲ್ಲ ಗಡಿಗಳಲ್ಲಿ ಇಂಟರ್‌ನೆಟ್‌ ಸೇವೆಯನ್ನು ಇದ್ದಕ್ಕಿದ್ದಂತೆ ಬಂದ್ ಮಾಡಿದೆ.

    ಸಿಂಘು, ಟಿಕ್ರಿ, ಗಾಜಿಪುರ್ ಗಡಿಯಲ್ಲಿ ಜ.31ರ ರಾತ್ರಿ 11 ಗಂಟೆಯವರೆಗೆ ತಾತ್ಕಾಲಿಕವಾಗಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ನಡೆಯುತ್ತಿರುವ ರೈತರ ಪ್ರತಿಭಟನೆಯ ಮಧ್ಯೆ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.

    ವಿಚಾರಣೆಗೆ ಹಾಜರಾಗುವಂತೆ ಟಿಕಾಯತ್ ಸೇರಿ 9 ರೈತ ಮುಖಂಡರಿಗೆ ಎಸ್‍ಐಟಿ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಈ ಮಧ್ಯೆ, ಇಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಫೋನ್‍ನಲ್ಲಿ ರೈತರ ಜೊತೆ ಮಾತುಕತೆಗೂ ಈಗಲೂ ಸಿದ್ಧ. ಕೂಡಲೇ ಹೋರಾಟ ಕೈಬಿಡಿ ಎಂದು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಬೆಂಗಳೂರಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರೈತ ಚಳವಳಿ ಹತ್ತಿಕ್ಕಲು ಬಿಜೆಪಿ ನೋಡುತ್ತಿದೆ. ಇದು ನಾಚಿಕೆಗೇಡಿನ ಕೆಲಸ. ಮೋದಿ ತಂದ ಮನೆಹಾಳು ಕಾನೂನುಗಳನ್ನು ಒಪ್ಪಿಕೊಳ್ಳಬೇಕೇ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ರೈತರ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕೃಷಿ ಮಾರುಕಟ್ಟೆಗೆ ಕಾಲಿಟ್ಟರೆ ಮೋದಿ ಸರ್ಕಾರದ ಕಾಲು ಮುರಿಯುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಗುಡುಗಿದ್ದಾರೆ.

  • ದಂಗೆಯ ನೆಪ, ರೈತ ಹೋರಾಟ ಹತ್ತಿಕ್ಕಲು ಯತ್ನ? – ಧರಣಿ ಸ್ಥಳದಲ್ಲಿ ಕರೆಂಟ್, ನೀರು ಕಟ್

    ದಂಗೆಯ ನೆಪ, ರೈತ ಹೋರಾಟ ಹತ್ತಿಕ್ಕಲು ಯತ್ನ? – ಧರಣಿ ಸ್ಥಳದಲ್ಲಿ ಕರೆಂಟ್, ನೀರು ಕಟ್

    ನವದೆಹಲಿ: ರೈತರ ಹೋರಾಟ ಸ್ಥಳಗಳಾದ ದೆಹಲಿ ಗಡಿಗಳಲ್ಲಿ ಇಂದು ಸಂಜೆಯಿಂದ ಭಾರೀ ಹೈಡ್ರಾಮಾಗಳು ನಡೆಯುತ್ತಿವೆ. ಉದ್ವಿಗ್ನತೆ ಮನೆ ಮಾಡಿದೆ. ಯಾವಾಗ ಏನು ನಡೆಯುತ್ತೋ ಎಂಬ ಭಯ, ಆತಂಕ ಮನೆ ಮಾಡಿದೆ. ದೆಹಲಿ ಗಲಭೆ ಪ್ರಕರಣವನ್ನೇ ನೆಪ ಮಾಡಿಕೊಂಡು ಉತ್ತರ ಪ್ರದೇಶ ಸರ್ಕಾರ ರೈತ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಸಿದೆ.

    ಘಾಜಿಪುರ ಗಡಿಯಲ್ಲಿ ಇದ್ದಕ್ಕಿದ್ದಂತೆ ಸಾವಿರಾರು ಶಸ್ತ್ರಸಜ್ಜಿತ ಪೊಲೀಸರು ಕಾಣಿಸಿಕೊಂಡಿದ್ದು, ಈ ಕೂಡಲೇ ಧರಣಿ ಅಂತ್ಯಗೊಳಿಸಿ ಜಾಗ ಖಾಲಿ ಮಾಡಿ ಒತ್ತಡ ಹಾಕಲಾಗ್ತಿದೆ. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅನುಮಾಡಿಕೊಡುವಂತೆ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ. ರೈತರು ಬೀಡುಬಿಟ್ಟಿರುವ ಘಾಜಿಪುರ ಗಡಿ ಪ್ರದೇಶದಲ್ಲಿ ವಿದ್ಯುತ್, ನೀರಿನ ಸಂಪರ್ಕವನ್ನು ಘಾಜಿಯಾಬಾದ್ ಜಿಲ್ಲಾಡಳಿತ ಕಡಿತ ಮಾಡಿದೆ.

    ರೈತ ಹೋರಾಟದ ಮುಂದಾಳು ರಾಕೇಶ್ ಟಿಕಾಯತ್ ಮಾತ್ರ, ಯಾವುದೇ ಕಾರಣಕ್ಕೂ ನಾವಿಲ್ಲಿಂದ ಕದಲಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಗುಂಡು ಹೊಡೀತೀರಾ ಹೊಡೀರಿ ಎಂದು ಎಂದು ನೇರ ಸವಾಲು ಹಾಕಿದ್ದಾರೆ. ನಮ್ಮನ್ನು ಏನಾದ್ರೂ ಮುಟ್ಟಿದ್ರೆ,. ಅರೆಸ್ಟ್ ಮಾಡಿದ್ರೆ, ನಮಗೆ ನಾವೇ ಪ್ರಾಣಗಳನ್ನು ಅರ್ಪಿಸಿಕೊಳ್ಳಲು ಸಿದ್ಧ ಎಂದು ಘೋಷಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಅಡ್ಡಿಯಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಘಾಜಿಪುರದಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿಲ್ಲ. ಹೀಗಾಗಿದ್ದು ನಮ್ಮನ್ನು ಒಕ್ಕಲೆಬ್ಬಿಸಲು ಹೊರಟಿರೋದು ಸರಿಯಲ್ಲ ಎಂದು ರಾಕೇಶ್ ಟಿಕಾಯತ್ ಗುಡುಗಿದ್ದಾರೆ.

    ಘಾಜಿಯಾಬಾದ್ ಜಿಲ್ಲಾಡಳಿತ ಮಾತ್ರ, ನೀವು ಸಾರ್ವಜನಿಕ ರಸ್ತೆಯಲ್ಲಿ ತೊಂದರೆ ಉಂಟು ಮಾಡುತ್ತಿರೋದನ್ನ ಸಹಿಸಲು ಸಾಧ್ಯವೇ ಇಲ್ಲ. ಈ ರಾತ್ರಿಯೊಳಗೆ ನೀವು ಖಾಲಿ ಮಾಡಲೇಬೇಕು. ಇಲ್ಲದಿದ್ರೆ ಬಲ ಪ್ರಯೋಗ ಮಾಡಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ.

    ಸ್ಥಳದಲ್ಲಿ ಸಿಐಎಸ್‍ಎಫ್, ಸಿಆರ್ ಪಿಎಫ್, ಆರ್‍ಎಎಫ್ ಪಡೆಗಳನ್ನು ದೊಡ್ಡಮಟ್ಟದಲ್ಲಿ ನಿಯೋಜಿಸಲಾಗಿದೆ. 144 ಸೆಕ್ಷನ್ ಜಾರಿ ಮಾಡಲಾಗಿದೆ. ಡಿಸಿ, ಎಸ್‍ಪಿ, ಡಿಸಿಪಿಗಳು ಬೀಡುಬಿಟ್ಟಿದ್ದಾರೆ. ಇಂದು ರಾತ್ರಿಯೊಳಗೆ ರೈತರನ್ನು ಖಾಲಿ ಮಾಡಿಸುವಂತೆ ಉತ್ತರ ಪ್ರದೇಶ ಸರ್ಕಾರ, ಘಾಜಿಯಾಬಾದ್ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ. ಇನ್ನು ಸಿಂಘು, ಟಿಕ್ರಿ ಗಡಿಯಲ್ಲಿಯೂ ಹೆಚ್ಚು ಕಡಿಮೆ ಇದೇ ರೀತಿಯ ಪರಿಸ್ಥಿತಿ ಕಂಡು ಬರುತ್ತಿದೆ. ಎಲ್ಲಾ ಕಡೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ದೆಹಲಿ ಗಡಿಗಳೆಲ್ಲಾ ಮೂರು ಸುತ್ತಿನ ಪೊಲೀಸ್ ಕೋಟೆಗಳಾಗಿ ಬದಲಾಗಿವೆ.

  • ರೈತರ ಪ್ರತಿಭಟನೆಯಲ್ಲಿ ದೇಶದ್ರೋಹಿ ಕೆಲಸ – ಗಣರಾಜ್ಯೋತ್ಸವ ದಿನ ದೇಶಕ್ಕೆ ಅಪಮಾನ

    ರೈತರ ಪ್ರತಿಭಟನೆಯಲ್ಲಿ ದೇಶದ್ರೋಹಿ ಕೆಲಸ – ಗಣರಾಜ್ಯೋತ್ಸವ ದಿನ ದೇಶಕ್ಕೆ ಅಪಮಾನ

    ನವದೆಹಲಿ: ಬಹುಶಃ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಇಂತಹ ಸನ್ನಿವೇಶ ಹಿಂದೆಂದೂ ಕಂಡು ಬಂದಿರಲಿಲ್ಲ. ಗಣರಾಜ್ಯೋತ್ಸವದ ದಿನವೇ ರಾಷ್ಟ್ರ ರಾಜಧಾನಿ ರಣಾಂಗಣವಾಗಿ ಮಾರ್ಪಟ್ಟಿದೆ. ಗಣ ರಾಜ್ಯೋತ್ಸವದ ದಿನವಾದ ಇಂದು ದೇಶಕ್ಕೆ ಅಪಮಾನವಾಗಿದೆ. ರೈತ ದಂಗೆಯ ನೆಪದಲ್ಲಿ ಕೆಲ ಸಮಾಜಘಾತಕ ಶಕ್ತಿಗಳು ಮಾಡಬಾರದ್ದನ್ನು ಮಾಡಿವೆ.

    ಕೆಂಪುಕೋಟೆಯಲ್ಲಿ ಕಂಡು ಬಂದ ದೃಶ್ಯಗಳು ಇತ್ತೀಚಿಗೆ ಅಮೆರಿಕಾದ ಸಂಸತ್ ಮೇಲೆ ನಡೆದ ದಾಳಿಯನ್ನು ನೆನಪಿಸುವಂತಿದ್ದವು. ಇಂದಿರಾ ಗಾಂಧಿ ಹತ್ಯೆ ಬಳಿಕ ದೆಹಲಿಯಲ್ಲಿ ಸಿಖ್ ದಂಗೆ ನಡೆದಿತ್ತು. ಆದರೆ ಕೆಂಪುಕೋಟೆಗೆ ಲಗ್ಗೆ ಹಾಕುವ ಮಟ್ಟಕ್ಕೆ ಹೋಗಿರಲಿಲ್ಲ. ದೆಹಲಿ ದಂಗೆಯ ಒಂದೊಂದು ದೃಶ್ಯವೂ ಭಯಾನಕವಾಗಿವೆ.

    ರೈತರ ಹೋರಾಟದ ಹಿಂದೆ ಖಲಿಸ್ತಾನ್ ಪ್ರತ್ಯೇಕತಾವಾದಿಗಳ ಪಾತ್ರವಿದೆ ಎಂಬ ಆರೋಪ ಮೊದಲಿಂದಲೂ ಕೇಳಿಬರುತ್ತಿತ್ತು. ಈಗ ಈ ಆರೋಪ ನಿಜ ಎನ್ನುವುದು ಇಂದಿನ ಘಟನೆಗಳಿಂದ ಸಾಬೀತು ಆದಂತಿವೆ. ಕೆಂಪುಕೋಟೆ ಮೇಲೆ ಕೇವಲ ರಾಷ್ಟ್ರೀಯ ಧ್ವಜವನ್ನು ಹಾರಿಸಬೇಕೆಂಬ ನಿಯಮವಿದೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗಿತ್ತು. ಆದರೆ ರೈತರ ವೇಷದಲ್ಲಿದ್ದ ಕೆಲ ಸಮಾಜಘಾತಕರು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪೊಲೀಸ್ ಭದ್ರತೆ ಬೇಧಿಸಿ ಕೆಂಪುಕೋಟೆಗೆ ಲಗ್ಗೆ ಹಾಕಿ ದಾಂಧಲೆ ನಡೆಸಿದ್ದಾರೆ.

    ಪ್ರಧಾನಿ ಹಾರಿಸುವ ರಾಷ್ಟ್ರಧ್ವಜದ ಪಕ್ಕದಲ್ಲೇ ಇರುವ ಎಡಭಾಗದ ಖಾಲಿ ಸ್ಥಂಭದಲ್ಲಿ ರೈತ ಧ್ವಜದ ಜೊತೆಗೆ ಸಿಖ್(ನಿಶಾನ್ ಸಾಹೀಬ್) ಧ್ವಜವನ್ನು ಹಾರಿಸಲಾಗಿದೆ. ಅಲ್ಲದೇ, ಭಾರತದ ತ್ರಿವರ್ಣ ಧ್ವಜವನ್ನು ನೀಡಿದರೆ ಅದನ್ನು ದೇಶದ್ರೋಹಿಯೊಬ್ಬ ಕೆಳೆಗೆಸೆದು ಅಪಮಾನ ಕೂಡ ಮಾಡಿದ್ದಾನೆ.

    ಕೆಂಪುಕೋಟೆಯ ಗುಮ್ಮಟವನ್ನೂ ಏರಿದ ದೇಶದ್ರೋಹಿಗಳು ಧ್ವಜ ಹಾರಿಸಿ ವಿಕೃತಿ ಮೆರೆದಿದ್ದಾರೆ. ನಿಹಾಂಗ್ ಸಿಖ್ ಪಡೆಯ ಸದಸ್ಯರು ರಾಜಾರೋಷವಾಗಿ ಕೆಂಪುಕೋಟೆ ಮುಂದೆ ಕತ್ತಿ ಝಳಪಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಇಂತಹ ಸನ್ನಿವೇಶ ಕಂಡು ಬಂದಿರಲಿಲ್ಲ.

    ಪ್ರತಿಭಟನಾಕಾರರ ಪೈಕಿ ಒಬ್ಬನ ಕೈಯಲ್ಲಿ ಖಲೀಸ್ತಾನ್ ಎಂದು ಬರೆದಿರುವ ಕಡಗ ಕೂಡ ಕಂಡು ಬಂದಿದೆ. ಈ ಕಾರಣಕ್ಕೆ ರೈತರ ಹೋರಾಟದ ಹಿಂದೆ ಖಲಿಸ್ತಾನ್ ಪ್ರತ್ಯೇಕತಾವಾದಿಗಳ ಪಾತ್ರವಿದೆ ಎನ್ನುವ ಅನುಮಾನ ನಿಜ ಎನ್ನುವವರ ಮಾತಿಗೆ ಮತ್ತಷ್ಟು ಬಲ ಬಂದಿದೆ.

    ಇಂದಿನ ಘಟನೆಯನ್ನು ಗಮನಿಸಿದ್ರೆ ರೈತ ಹೋರಾಟದ ಮೇಲೆ ಕಿಸಾನ್ ಯೂನಿಯನ್ ಹಿಡಿತ ಕಳೆದುಕೊಂಡಿದ್ಯಾ ಎಂಬ ಪ್ರಶ್ನೆ ಕೂಡ ಎದ್ದಿದೆ. ಕೇಂದ್ರ ಸರ್ಕಾರ ಇಂದಿನ ಘಟನಾವಳಿಗಳನ್ನು ಗಂಭೀರವಾಗಿ ಪರಿಗಣಿಸಿದೆ. ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ತುರ್ತು ಸಭೆ ಕೂಡ ನಡೆಸಲಾಗಿದೆ.

    ದೇಶಕ್ಕೆ ಅಪಮಾನ ಹೇಗೆ?
    – ಕೆಂಪು ಕೋಟೆ ಮೇಲೆ ಹಾರಿದ ಕಿಸಾನ್ ಧ್ವಜ, ಸಿಖ್ ಧ್ವಜ
    – ರಾಷ್ಟ್ರಧ್ವಜ ಎಸೆದು ಅಪಮಾನ ಮಾಡಿದ ದೇಶದ್ರೋಹಿ
    – ಪೊಲೀಸರಿಗೆ ಕತ್ತಿ ತೋರಿಸಿ ಬೆದರಿಸಿದ ನಿಹಾಂಗ್ ಸಿಖ್ ಪಡೆ
    – ರೈತ ಹೋರಾಟದಲ್ಲಿ ಖಲೀಸ್ತಾನಿಗಳ ಭಾಗಿ; ಕೈ ಕಡಗದಿಂದ ದೃಢ

  • ನಮ್ಮ ದೇಶದಲ್ಲಿ ಹೋರಾಟ ಇಲ್ಲದೇ ಬದಲಾವಣೆ ಸಾಧ್ಯವಿಲ್ಲ: ಕಾಗೋಡು ತಿಮ್ಮಪ್ಪ

    ನಮ್ಮ ದೇಶದಲ್ಲಿ ಹೋರಾಟ ಇಲ್ಲದೇ ಬದಲಾವಣೆ ಸಾಧ್ಯವಿಲ್ಲ: ಕಾಗೋಡು ತಿಮ್ಮಪ್ಪ

    – ರೈತರು ಹೋರಾಟ ನಿಲ್ಲಿಸಬಾರದು

    ಶಿವಮೊಗ್ಗ : ನಮ್ಮ ದೇಶದಲ್ಲಿ ಏನಾದರೂ ಹೊಸ ಬದಲಾವಣೆ ಆಗಬೇಕು ಅಂದರೆ ಅದು ಹೋರಾಟದಿಂದ ಮಾತ್ರ. ಹೋರಾಟವಿಲ್ಲದೇ ಬದಲಾವಣೆ ಸಾಧ್ಯವಿಲ್ಲ. ಹೀಗಾಗಿ ರೈತರು ಹೋರಾಟವನ್ನು ನಿಲ್ಲಿಸಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದ್ದಾರೆ.

    ದೆಹಲಿಯ ಟ್ರ್ಯಾಕ್ಟ ರ್ ಪೆರೇಡ್ ಬೆಂಬಲಿಸಿ, ಶಿವಮೊಗ್ಗದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ನಡೆದ ರೈತರ ರಾಜ್ಯೋತ್ಸವ ಪೆರೃಡ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಹೋರಾಟದ ನೆಲವಾಗಿದೆ. ದೆಹಲಿಯಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸಿ ನೀವೆಲ್ಲಾ ಒಂದು ವರ್ಷವಾದರೂ ಸಹ ಹೋರಾಟ ನಡೆಸಬೇಕಾಗುತ್ತದೆ ಎಂದರು.

    ಹೊಸ ಹೋರಾಟಕ್ಕೆ ನಾಂದಿ: ಹೋರಾಟವಿಲ್ಲದೆ ನಮ್ಮ ದೇಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ನಿಮ್ಮ ಹೋರಾಟ ಈಗ ಪ್ರಾರಂಭವಾಗಿದೆ. ಇದನ್ನು ಮುಂದುವರಿಸಬೇಕಿದೆ. ನಿಮ್ಮ ಹೋರಾಟದಿಂದ ಹೊಸ ಹೋರಾಟಕ್ಕೆ ನಾಂದಿಯಾಗಬೇಕು. ಸಮಾಜದಲ್ಲಿ ಏರುಪೇರು ಹೋಗಲಾಡಿಸಬೇಕು. ಹೋರಾಟದ ಕೀ ಅನ್ನು ಕೈಯಲ್ಲಿ ಹಿಡಿದು ಹೋಗಬೇಕಿದೆ. ಹಿಂದೆ ನಾವು ಉಳುವವನೆ ಭೂ ಒಡೆಯ ಎಂದು ಹೋರಾಟ ಮಾಡಿ ಗೆಲುವು ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಹೋರಾಟಕ್ಕೆ ಯಶಸ್ಸು ಲಭ್ಯವಾಗುತ್ತದೆ. ಹೋರಾಟದಿಂದ ಹಿಂದಕ್ಕೆ ಹೋಗಬಾರದು. ನಿಮ್ಮ ಹೋರಾಟದಿಂದ ಕೇವಲ ನಿಮಗೆ ಮಾತ್ರ ಅಲ್ಲ, ಎಲ್ಲರಿಗೂ ಅನುಕೂಲವಾಗುತ್ತದೆ. ಎಂದರು.

    ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾದ ಕೆ.ಟಿ.ಗಂಗಾಧರ್, ಹೋರಾಟಗಾರ ಶ್ರೀಪಾಲ್, ಬಂಡಾಯ ಸಾಹಿತಿ ಸಿದ್ದನಗೌಡ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಯೋಗೀಶ್, ನಾಗರಾಜ್, ದಲಿತ ಸಂಘಟನೆಯ ಗುರುಮೂರ್ತಿ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.