Tag: ಕೃಷಿ ಕಾಯ್ದೆ

  • ಕೃಷಿ ತಾಜ್ಯವನ್ನು ಸುಡುವುದು ಅಪರಾಧವಲ್ಲ: ನರೇಂದ್ರ ಸಿಂಗ್ ತೋಮರ್

    ಕೃಷಿ ತಾಜ್ಯವನ್ನು ಸುಡುವುದು ಅಪರಾಧವಲ್ಲ: ನರೇಂದ್ರ ಸಿಂಗ್ ತೋಮರ್

    ನವದೆಹಲಿ: ಕೃಷಿ ತ್ಯಾಜ್ಯಗಳನ್ನು ಸುಡುವುದನ್ನು ಅಪರಾಧವಲ್ಲ ಎಂದು ಪರಿಗಣಿಸಬೇಕು ಎಂಬ ರೈತ ಸಂಘಟನೆಗಳ ಬೇಡಿಕೆಯನ್ನು ಸರ್ಕಾರವು ಒಪ್ಪಿಗೊಂಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

    ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ್ಯ ಸುಡುವುದು ದೆಹಲಿ-ಎನ್‍ಸಿಆರ್ ಪ್ರದೇಶದ ವಾಯುಮಾಲಿನ್ಯಕ್ಕೆ ಕಾರಣ ಎನ್ನಲಾಗುತ್ತಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರೈತ ಸಂಘಟನೆಗಳು, ಕಾರ್ಖಾನೆಗಳು, ವಾಹನಗಳು, ಹೊಗೆ ಉಗುಳುತ್ತಿವೆ. ದೀಪಾವಳಿಯ ವೇಳೆ ಪಟಾಕಿ ಸುಡುವುದರಿಂದ ವಿಷಾನಿಲ ಹೊರಹೊಮ್ಮುತ್ತಿದೆ. ಆದರೂ ಮುಗ್ಧ ರೈತರನ್ನೇ ದೂಷಿಸುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದ್ದವು. ಇದನ್ನೂ ಓದಿ: ಹೊಸ ರೂಪಾಂತರಿ ವೈರಸ್ ಪೀಡಿತ ದೇಶಗಳಿಂದ ವಿಮಾನ ಹಾರಾಟ ನಿಲ್ಲಿಸಿ – ಮೋದಿಗೆ ಕೇಜ್ರಿವಾಲ್ ಮನವಿ

    ಮೂರು ಕೃಷಿ ಕಾಯ್ದೆ ರದ್ದತಿ ಮಸೂದೆಯನ್ನು ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದ ಮೊದಲ ದಿನ ಮಂಡಿಸಲಾಗುತ್ತದೆ ಎಂದು ಮಾಹಿತಿ ನೀಡಿರುವ ತೋಮರ್, ಬೆಳೆ ವೈವಿಧ್ಯೀಕರಣ, ಶೂನ್ಯ ಬಂಡವಾಳದಲ್ಲಿ ಕೃಷಿ ಮತ್ತು ಪಾರದರ್ಶಕ ಕನಿಷ್ಠ ಬೆಂಬಲ ಬೆಲೆ ನೀತಿಗೆ ಸಂಬಂಧಿಸಿದ ವಿಚಾರಗಳ ಚರ್ಚೆ ಸಲುವಾಗಿ ಸಾಂವಿಧಾನಿಕ ಸಮಿತಿಯನ್ನು ಪ್ರಧಾನಿ ನರೇಂದ್ರ ಮೊದಿ ಘೋಷಿಸಿದ್ದಾರೆ. ರೈತ ಸಂಘಟನೆಗಳ ಪ್ರತಿನಿಧಿಗಳೂ ಸಮಿತಿಯಲ್ಲಿರಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ

  • ರೈತರ ಹೋರಾಟಕ್ಕೆ ವರ್ಷ, ದುರಹಂಕಾರ, ದೌರ್ಜನ್ಯಕ್ಕೆ ಬಿಜೆಪಿ ಹೆಸರುವಾಸಿ: ಪ್ರಿಯಾಂಕಾ ವಾದ್ರಾ

    ರೈತರ ಹೋರಾಟಕ್ಕೆ ವರ್ಷ, ದುರಹಂಕಾರ, ದೌರ್ಜನ್ಯಕ್ಕೆ ಬಿಜೆಪಿ ಹೆಸರುವಾಸಿ: ಪ್ರಿಯಾಂಕಾ ವಾದ್ರಾ

    ನವದೆಹಲಿ: ರೈತರ ಸತ್ಯಾಗ್ರಹವು ಒಂದು ವರ್ಷದ ಪೂರ್ಣಗೊಳಿಸಿದ್ದು, ಬಿಜೆಪಿ ಸರ್ಕಾರದ ದುರಹಂಕಾರ ಮತ್ತು ಹುತಾತ್ಮರಾದ 700 ರೈತರ ತ್ಯಾಗವನ್ನು ನೆನಪಿಸಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ.

    ಒಂದು ವರ್ಷದ ರೈತ ಚಳವಳಿಯಾಗಿದೆ. ರೈತರ ಅಚಲ ಸತ್ಯಾಗ್ರಹ, 700 ರೈತರ ಹುತಾತ್ಮತೆ ಮತ್ತು ನಿರ್ದಯ ಬಿಜೆಪಿ ಸರ್ಕಾರದ ದುರಹಂಕಾರ ಮತ್ತು ಅನ್ನದಾತರ ಮೇಲಿನ ದೌರ್ಜನ್ಯಕ್ಕೆ ಹೆಸರುವಾಸಿಯಾಗಲಿದೆ. ಆದರೆ ರೈತನ ಮೆರಗು ಭಾರತದಲ್ಲಿ ಸದಾ ಇತ್ತು, ಇದ್ದೇ ಇರುತ್ತದೆ ಮತ್ತು ಇರುತ್ತದೆ. ರೈತರ ಹೋರಾಟಕ್ಕೆ ಸಿಕ್ಕ ಜಯವೇ ಇದಕ್ಕೆ ಸಾಕ್ಷಿ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿದ ರೈತರು ಕಳೆದ ವರ್ಷದ 26ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಇಂದಿಗೆ ಒಂದು ವರ್ಷಗಳು ಕಳೆಯುತ್ತಿದೆ. ಒಂದು ವರ್ಷದ ರೈತರ ಸತ್ಯಾಗ್ರಹವು ರೈತರ ದೃಢ ನಿಲುವು ಮತ್ತು ಅನ್ನದಾತರ ಮೇಲೆ ಸರ್ಕಾರ ನಡೆಸಿದ ದೌರ್ಜನ್ಯವನ್ನು ನೆನಪಿಸುತ್ತದೆ. ಆದರೆ ಭಾರತದಲ್ಲಿ ರೈತರನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ. ರೈತರ ಹೋರಾಟಕ್ಕೆ ಸಿಕ್ಕ ಗೆಲುವೇ ಇದಕ್ಕೆ ನಿದರ್ಶನ ಎಂದು ಹೇಳಿದ್ದಾರೆ. ಅಲ್ಲದೆ, ಜೈ ಕಿಸಾನ್ ಎಂದು ಘೋಷಣೆಯನ್ನೂ ಸೇರಿಸಿದ್ದಾರೆ. ಇದನ್ನೂ ಓದಿ:   ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ಕಳೆದ ವರ್ಷ ಅಂದರೆ 2020ರ ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಆದರೆ ಈ ಕೃಷಿ ಕಾಯ್ದೆಗಳ ವಿರುದ್ಧ ನವೆಂಬರ್ 26ರಂದು ರೈತರು ಬೃಹತ್ ಹೋರಾಟ ಆರಂಭಿಸಿದ್ದರು. ಸದ್ಯ ರೈತರು ಹೋರಾಟ ಆರಂಭಿಸಿ ಇಂದಿಗೆ 1 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿ ಸಂಪರ್ಕಿಸುವ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ರೈತರ ಮಹಾ ಪಂಚಾಯತ್ ನಡೆಯಲಿದೆ. ಹೀಗಾಗಿ ಪಂಜಾಬ್ ಮತ್ತು ಹರಿಯಾಣದಿಂದ ರೈತರು ದೆಹಲಿ ಗಡಿಗಳತ್ತ ರೈಲು, ರಸ್ತೆ ಮಾರ್ಗವಾಗಿ ಬರುತ್ತಿದ್ದಾರೆ.

  • ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ನವದೆಹಲಿ: ಕೇಂದ್ರ ಸರ್ಕಾರದ ರೈತ-ಜನ ವಿರೋಧಿ ಕಾಯ್ದೆಗಳು ಹಾಗೂ ನೀತಿಯನ್ನು ವಿರೋಧಿಸಿ ನವದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಇಂದಿಗೆ ಒಂದು ವರ್ಷ.

    ಕಳೆದ ವರ್ಷ ಅಂದರೆ 2020ರ ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಆದರೆ ಈ ಕೃಷಿ ಕಾಯ್ದೆಗಳ ವಿರುದ್ಧ ನವೆಂಬರ್ 26ರಂದು ರೈತರು ಬೃಹತ್ ಹೋರಾಟ ಆರಂಭಿಸಿದ್ದರು. ಸದ್ಯ ರೈತರು ಹೋರಾಟ ಆರಂಭಿಸಿ ಇಂದಿಗೆ 1 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿ ಸಂಪರ್ಕಿಸುವ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ರೈತರ ಮಹಾ ಪಂಚಾಯತ್ ನಡೆಯಲಿದೆ. ಹೀಗಾಗಿ ಪಂಜಾಬ್ ಮತ್ತು ಹರಿಯಾಣದಿಂದ ರೈತರು ದೆಹಲಿ ಗಡಿಗಳತ್ತ ರೈಲು, ರಸ್ತೆ ಮಾರ್ಗವಾಗಿ ಬರುತ್ತಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ನವೆಂಬರ್ 19ರಂದು ರಾಷ್ಟ್ರೀಯ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುತ್ತಿದ್ದು, 3 ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರ ಒಳಿತಿಗಾಗಿಯೇ ಕೃಷಿ ಕಾಯ್ದೆ ಜಾರಿಗೆ ತಂದಿದ್ದೆವು. ಈ 3 ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿದ್ದವು. ರೈತರ ಹಿತ ದೃಷ್ಟಿಯಲ್ಲಿಟ್ಟುಕೊಂಡೇ ಕಾಯ್ದೆ ಜಾರಿ ಮಾಡಲಾಗಿತ್ತು. ಯೋಜನೆ ಬಗ್ಗೆ ರೈತರಿಗೆ ತಿಳಿಸುವಲ್ಲಿ ಸಾಕಷ್ಟು ಯತ್ನಿಸಿದ್ದೇವೆ. ಆದರೆ ಕೆಲವು ರೈತರು ಕಾಯ್ದೆಯನ್ನು ಅವರ ಸಲಹೆ ಒಪ್ಪಿಕೊಂಡಿದ್ದರೂ ವಿರೋಧಿಸುತ್ತಿದ್ದಾರೆ. ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಿದೆ ಎಂದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದರು.

    ಆದರೆ ಸಂಸತ್ತಿನಲ್ಲಿ ಅಧಿಕೃತವಾಗಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಬೇಕು, ವಿದ್ಯುತ್ ಕ್ಷೇತ್ರ ಖಾಸಗೀಕರಣ ನಿರ್ಧಾರ ಕೈಬಿಡುವಂತೆ ಒಳಗೊಂಡಂತೆ ಆರು ಬೇಡಿಕೆಗಳ ಈಡೇರಿಕೆವರೆಗೆ ಹೋರಾಟ ಮುಂದುವೆರಿಯಲಿದೆ ಎಂದು ರೈತ ಒಕ್ಕೂಟಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಇದನ್ನೂ ಓದಿ: ಆಫ್ರಿಕಾದಲ್ಲಿ ರೂಪಾಂತರ ಕೋವಿಡ್ ತಳಿ ಪತ್ತೆ – ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

  • ಡಿ.6 ರಂದು ವಿಚಾರಣೆ ಹಾಜರಾಗಿ – ಕಂಗನಾಗೆ ದೆಹಲಿ ಸ್ಪೀಕರ್‌ ಸಮನ್ಸ್

    ಡಿ.6 ರಂದು ವಿಚಾರಣೆ ಹಾಜರಾಗಿ – ಕಂಗನಾಗೆ ದೆಹಲಿ ಸ್ಪೀಕರ್‌ ಸಮನ್ಸ್

    ನವದೆಹಲಿ: ವಿವಾದಾತ್ಮಕ ಪೋಸ್ಟ್‌ ಮಾಡಿದ ಕಂಗನಾ ರಣಾವತ್‌ಗೆ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿಯು ಸಮನ್ಸ್ ಜಾರಿ ಮಾಡಿದ್ದು ಡಿಸೆಂಬರ್ 6 ರಂದು ಮಧ್ಯಾಹ್ನ12 ಗಂಟೆಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದೆ.

    ಡಿಸೆಂಬರ್ 6 ರಂದು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಮೂಲಕ ಸಿಖ್ಖರ ವಿರುದ್ಧ ಮಾಡಿದ ಟೀಕೆಗಳ ಕುರಿತು ಸ್ಪಷ್ಟನೆ ನೀಡುವಂತೆ ಸಮನ್ಸ್ ಜಾರಿ ಮಾಡಿದ್ದು, ಆಮ್ ಅದ್ಮಿ ಶಾಸಕ ರಾಘವ ಚಡ್ಡಾ ನೇತೃತ್ವದ ಸಮಿತಿ ಮುಂದೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚನೆ ನೀಡಲಾಗಿದೆ. ಸಿಖ್ಖರ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ದಾಖಲಾಗಿರುವ ದೂರುಗಳ ಆಧಾರದ ಮೇಲೆ ಈ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಏಷ್ಯಾದ ದೊಡ್ಡ ವಿಮಾನ ನಿಲ್ದಾಣಕ್ಕೆ ಮೋದಿಯಿಂದ ಭೂಮಿ ಪೂಜೆ – ವಿಶೇಷತೆ ಏನು?

    ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ ಪೋಸ್ಟ್ ಬೃಹತ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ವಿಶ್ವದಾದ್ಯಂತ ಸುಮಾರು 80 ಲಕ್ಷ ಜನರು ಅವರನ್ನು ಅನುಸರಿಸುತ್ತಿದ್ದಾರೆ. ಕಂಗನಾ ಪೋಸ್ಟ್‌ ನಿರ್ದಿಷ್ಟವಾಗಿ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ನಿದರ್ಶನಗಳನ್ನು ವಿವರಿಸುತ್ತದೆ ಮತ್ತು ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಪ್ರಯತ್ನವಾಗಿದೆ ಎಂದು ಸಮಿತಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

    ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳ ನಂತರ ನಗರದಲ್ಲಿ ಶಾಂತಿಗೆ ಭಂಗ ತರುವ ಘಟನೆಗಳನ್ನು ಪರಿಶೀಲಿಸುವ ಆದೇಶದೊಂದಿಗೆ ಈ ಸಮಿತಿಯನ್ನು ರಚಿಸಲಾಯಿತು. ಕಳೆದ ವಾರ, ಸಮಿತಿಯು ದ್ವೇಷದ ಭಾಷಣ ಮತ್ತು ಅದನ್ನು ಎದುರಿಸುವ ವೇದಿಕೆಯ ಪ್ರಯತ್ನಗಳ ಬಗ್ಗೆ ಫೇಸ್‌ಬುಕ್ ಅಧಿಕಾರಿಗಳನ್ನು ಪ್ರಶ್ನಿಸಿತು. ಇದನ್ನೂ ಓದಿ: ಅಮೆರಿಕ, ಭಾರತದ ತಂತ್ರಕ್ಕೆ ಒಪೆಕ್‌ ಗರಂ – ಮತ್ತೆ ಏರಿಕೆ ಆಗುತ್ತಾ ತೈಲ ಬೆಲೆ?

    ಮೂರು ಕೃಷಿ ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಾಪಸ್ ಪಡೆದ ಬಳಿಕ ನಟಿ ಕಂಗನಾ ರಣಾವತ್, ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಖ್ ಪ್ರತಿಭಟನಾಕಾರರನ್ನು ಟಾರ್ಗೆಟ್ ಮಾಡಿ ಪೋಸ್ಟ್ ಮಾಡಿದ್ದರು.

    ಕಂಗನಾ ಪೋಸ್ಟ್‌ ಏನಿತ್ತು?
    ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕಂಗನಾ ಸ್ಟೋರಿ ಪಬ್ಲಿಶ್‌ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂದಿರಾಗಾಂಧಿಯ ಫೋಟೋ ಹಾಕಿ ರಾಷ್ಟ್ರದ ಆತ್ಮಸಾಕ್ಷಿಯು ಆಳವಾದ ನಿದ್ರೆಯಲ್ಲಿರುವಾಗ, ಲಾಠಿ ಒಂದೇ ಪರಿಹಾರ ಮತ್ತು ಸರ್ವಾಧಿಕಾರ ಒಂದೇ ಪರಿಹಾರ. ಜನ್ಮದಿನದ ಶುಭಾಶಯಗಳು ಮೇಡಂ ಪ್ರಧಾನ ಮಂತ್ರಿ ಎಂದು ಬರೆದಿದ್ದರು.

    ಖಲಿಸ್ತಾನಿ ಉಗ್ರರು ಇಂದು ಸರ್ಕಾರವನ್ನು ತಿರುಚಬಹುದು. ಆದರೆ ಒಬ್ಬ ಮಹಿಳೆಯನ್ನು ನಾವು ಮರೆಯಬಾರದು. ಏಕೈಕ ಮಹಿಳಾ ಪ್ರಧಾನಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಇವರನ್ನು ಸೊಳ್ಳೆಗಳಂತೆ ತಮ್ಮ ಶೂ ಕೆಳಗೆ ಹೊಸಕಿ ಹಾಕಿದ್ದರು. ಆದರೆ ದೇಶವನ್ನು ಒಡೆಯಲು ಬಿಟ್ಟಿಲ್ಲ. ದಶಕಗಳ ನಂತರವೂ ಅವರ ಹೆಸರನ್ನು ಕೇಳಿದರೆ ಖಲಿಸ್ತಾನಿ ಉಗ್ರರು ಹೆದರಿ ನಡುಗುತ್ತಾರೆ. ಇವರಿಗೆ ಅಂತಹ ಗುರು ಬೇಕು ಎಂದಿದ್ದರು.

  • ಈಗ ರದ್ದಾಗಿದ್ರೂ ಅಗತ್ಯ ಎನಿಸಿದ್ರೆ ಮತ್ತೆ ಕೃಷಿ ಕಾಯ್ದೆ ಜಾರಿ: ರಾಜಸ್ಥಾನ ರಾಜ್ಯಪಾಲ

    ಈಗ ರದ್ದಾಗಿದ್ರೂ ಅಗತ್ಯ ಎನಿಸಿದ್ರೆ ಮತ್ತೆ ಕೃಷಿ ಕಾಯ್ದೆ ಜಾರಿ: ರಾಜಸ್ಥಾನ ರಾಜ್ಯಪಾಲ

    ಲಕ್ನೋ: ಕೃಷಿ ಕಾನೂನುಗಳನ್ನು ಸರ್ಕಾರ ಈಗ ರದ್ದುಗೊಳಿಸಿದ್ದರೂ ಅಗತ್ಯವೆಂದೆನಿಸಿದಲ್ಲಿ ಮರು ಜಾರಿಗೊಳಿಸಬಹುದು ಎಂದು ರಾಜಸ್ಥಾನ ರಾಜ್ಯಪಾಲ ಕಲ್‌ರಾಜ್ ಮಿಶ್ರಾ ಹೇಳಿದ್ದಾರೆ.

    ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸಿದ ಅವರು, ಸರ್ಕಾರವು ರೈತರಿಗೆ ಕೃಷಿ ಕಾನೂನಿನ ಸಾಧಕಗಳನ್ನು ವಿವರಿಸಲು ಪ್ರಯತ್ನಿಸಿತು. ಆದರೆ ರೈತರು ರದ್ದುಪಡಿಸುವಂತೆ ಹಠ ಹಿಡಿದಿದ್ದರು ಎಂದರು.

    ಕಾಯ್ದೆಗಳ ಪ್ರಯೋಜನಗಳನ್ನು ರೈತರು ಅರ್ಥಮಾಡಿಕೊಳ್ಳಬಹುದು ಎಂದು ಸರ್ಕಾರ ಭಾವಿಸಿತ್ತು. ಆದರೆ, ರೈತರು ಪ್ರತಿಭಟನೆಯನ್ನು ಮುಂದುವರಿಸಿದ್ದರು ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

    ರೈತರ ಪ್ರತಿಭಟನೆಗೆ ಮಣಿದ ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆಯನ್ನು ವಾಪಸ್‌ ಪಡೆಯುವುದಾಗಿ ಶುಕ್ರವಾರ ಪ್ರಕಟಿಸಿದ್ದರು. ಮುಂದಿನ ಸಂಸತ್‌ ಅಧಿವೇಶನದಲ್ಲಿ ಕಾಯ್ದೆಗಳ ರದ್ದು ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು. ಇದನ್ನೂ ಓದಿ:  ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದರೂ ರೈತರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿಲ್ಲ. ಚಳಿಗಾಲದ ಅಧಿವೇಶನದ ವೇಳೆ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸುವುದಾಗಿ ಹೇಳಿದ್ದಾರೆ.

  • ಏಳುನೂರು ಜನ ರೈತರ ಪ್ರಾಣ ತೆಗೆದು ಈಗ ವಾಪಸ್ ಪಡೆದಿದ್ದೇವೆ ಅಂತಿದ್ದಾರೆ: ಶಿವಲಿಂಗೇಗೌಡ

    ಏಳುನೂರು ಜನ ರೈತರ ಪ್ರಾಣ ತೆಗೆದು ಈಗ ವಾಪಸ್ ಪಡೆದಿದ್ದೇವೆ ಅಂತಿದ್ದಾರೆ: ಶಿವಲಿಂಗೇಗೌಡ

    ಹಾಸನ: ದೇಶದ ರೈತರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೆದರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ಕೃಷಿ ಕಾಯ್ದೆ ಹಿಂಪಡೆದಿದ್ದು ಅವರಿಗೆ ಇದು ಎಚ್ಚರಿಕೆ ಗಂಟೆ ಆಗಿದೆ ಎಂದು ಶಾಸಕ ಕೆ.ಎಮ್.ಶಿವಲಿಂಗೇಗೌಡ ತಿಳಿಸಿದ್ದಾರೆ.

    PM MODI

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ದೇಶದಲ್ಲಿ ರೈತರನ್ನು ಬಿಟ್ಟು ಯಾರು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಕೃಷಿ ಕಾಯ್ದೆಯನ್ನು ಹಲವು ತಿಂಗಳುಗಳ ಹಿಂದೆಯೇ ಹಿಂಪಡೆಯಬೇಕಾಗಿತ್ತು. ಆದರೆ ಇದುವರೆಗೂ ರೈತರ ಬಲಿ ಪಡೆದಿರುವ ಬಿಜೆಪಿ ಸರ್ಕಾರ ರೈತ ವಿರೋಧಿ ಕೆಲಸ ಮಾಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಜನರ ಕಲಿಸಲಿದ್ದಾರೆ ಎಂದರು.

    ಕೃಷಿ ಕಾಯ್ದೆ ಹಿಂಪಡೆಯುವಂತೆ ಹಲವು ತಿಂಗಳಿಂದ ಹೋರಾಟ ನಡೆಸುತ್ತಿರುವ ರೈತರನ್ನು ನರಮೇಧ ಮಾಡಿದ ಬಿಜೆಪಿ ಸರ್ಕಾರ, ಇದುವರೆಗೆ ಸುಮಾರು 700 ಜನ ರೈತರ ಪ್ರಾಣವನ್ನು ತೆಗೆದು ಕರಾಳ ಶಾಸನ ವಾಪಸ್ ಪಡೆದಿದ್ದಾರೆ. ವಿಳಂಬ ನೀತಿಯೇ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಲ್ವಾ ಎಂದು ಕಿಡಿಕಾರಿದರು.  ಇದನ್ನೂ ಓದಿ: ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ

    ಇದೀಗ ನರೇಂದ್ರ ಮೋದಿ ಬಿಜೆಪಿಯವರಿಗೆ ಬುದ್ಧಿ ಬಂದಿದ್ದು ಉತ್ತರ ಭಾರತದಲ್ಲಿ ಚುನಾವಣೆ ಬಂದಿದೆ ಎಂದು ಕರಾಳ ಶಾಸನ ವಾಪಸ್ ಪಡೆದಿದ್ದೀರಿ. ರೈತರನ್ನು ಏನೆಂದುಕೊಂಡಿದ್ದೀರಿ. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸುತ್ತೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಂಧ್ರದ ಕಡಪಾದಲ್ಲಿ ಪ್ರವಾಹ – ಮೂವರು ಸಾವು, 30 ಮಂದಿ ನಾಪತ್ತೆ

    ಕಾಯ್ದೆ ಹಿಂಪಡೆದಿರುವುದು ಸ್ವಾಗತಾರ್ಹ ಆದರೆ ಇಷ್ಟು ದಿನ ಏನು ಮಾಡುತ್ತಿದ್ದೀರಿ. ನೀವು ರೈತರ ನರಮೇಧ ಮಾಡಿದ್ದೀರಿ ನಮ್ಮದು ರೈತರ ಪರವಾದ ಸರ್ಕಾರ ಈ ಕಾಯ್ದೆ ವಿರುದ್ಧ ನಾವು ಕೂಡ ಹೋರಾಟ ಮಾಡಿದ್ದೇವೆ ಎಂದು ಜೆಡಿಎಸ್ ಪಕ್ಷ ಈ ಹಿಂದೆ ನಡೆಸಿದ ಹೋರಾಟವನ್ನು ಶಿವಲಿಂಗೇಗೌಡರು ಸಮರ್ಥಿಸಿಕೊಂಡರು.

  • ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ

    ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ

    ಬೆಂಗಳೂರು: ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ತಿಂಗಳು ಕಾಲ ರೈತರು ಪ್ರತಿಭಟಿಸಿದ್ದಾರೆ. ಕೇಂದ್ರ ಸರ್ಕಾರ ಅಮಾನುಷವಾಗಿ ನಡೆದುಕೊಂಡಿದೆ. ಲಖೀಂಪುರ ಘಟನೆಯೇ ಇದಕ್ಕೆ ಉತ್ತಮ ನಿದರ್ಶನ. ಕೇಂದ್ರ ಸಚಿವರ ಮಗನೇ ಕಾರು ಹತ್ತಿಸಿ ಕೊಂದ. ಇದೀಗ ವಿಧಿ ಇಲ್ಲದೆ ಕಾಯ್ದೆ ವಾಪಸ್ ಪಡೆದಿದೆ. ರೈತರು ಮತ್ತು ವಿರೋಧ ಪಕ್ಷದ ಹೋರಾಟಕ್ಕೆ ಸಿಕ್ಕ ಜಯ. ರೈತರ ವಿರುದ್ಧ ಕಾನೂನು ತೆಗೆದುಕೊಂಡಿತ್ತು ಎಂದರು.

    ರೈತರ ಮೇಲಿನ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆಯಿರಿ. ಉಪಚುನಾವಣೆಯಲ್ಲಿ ಸೋತಿದ್ದಕ್ಕೆ ಪೆಟ್ರೋಲ್ ಕಡಿಮೆ ಮಾಡಿದ್ರು. ಚುನಾವಣೆಯಲ್ಲಿ ಸೋಲುವ ಭಯಕ್ಕೆ ಇದೀಗ ಕಾಯ್ದೆ ವಾಪಸ್ ಪಡೆದಿದ್ದಾರೆ. ನಿರಂತರ ಹೋರಾಟದಿಂದ ಜಯ ಸಾಧಿಸಿದ್ದಾರೆ. ರೈತರನ್ನು ದೇಶದ್ರೋಹಿಗಳು ಅಂದರು. ಬಿಜೆಪಿಗೆ ಸೋಲಾಗಿದೆ. ಇದು ರೈತರಿಗೆ ಸಿಕ್ಕ ಜಯ. ಮತ್ತೊಂದು ಸ್ವಾತಂತ್ರ್ಯ ಹೋರಾಟದ ಜಯ ಇದು. ಬಿಜೆಪಿಗೆ ವಕ್ರ ದೆಶೆ, ಕಾಂಗ್ರೆಸ್ಸಿಗೆ ಶುಕ್ರ ದೆಶೆ ಅಂತ ಹೇಳುವುದಿಲ್ಲ. ಒಟ್ಟಿನಲ್ಲಿ ಇದು ರೈತರ ಜಯ ಅಷ್ಟೇ ಎಂದು ಸಿದ್ದರಾಮಯ್ಯ ತಿಳಿಸಿದರು.

    ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ವಾಪಸ್ ಪಡೆದಿದ್ದಾರೆ. ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಹಾಗಾಗಿ ಹೆದರಿ ಈ ಕಾಯ್ದೆ ಹಿಂಪಡೆದಿದ್ದಾರೆ. ಬೆಲೆ ಇಳಿಸಿದ್ದೂ ಚುನಾವಣೆ ಸೋತಿದ್ದಕ್ಕೆ. ರೈತರ ಹೋರಾಟಕ್ಕೆ ಮಣಿದಿದ್ದಾರೆ. ಹೋರಾಟ ಹತ್ತಿಕ್ಕಲು ಬಹಳ ಪ್ರಯತ್ನ ಮಾಡಿದ್ರು. ಇವರ ಪ್ರಯತ್ನಕ್ಕೆ ರೈತರು ಮಣಿಯಲಿಲ್ಲ. ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಇವರಿಗೆ ತೀವ್ರ ಮುಖಭಂಗವಾಗಿದೆ. ಈ ಜಯ ರೈತರಿಗೆ ಸಿಕ್ಕ 2ನೇ ಸ್ವಾತಂತ್ರ್ಯ. ಕಾಂಗ್ರೆಸ್ ಅಭಿಪ್ರಾಯದಂತೆ ಇದು ಸ್ವಾತಂತ್ರ್ಯ ಹೋರಾಟ ಎಂದು ಬಣ್ಣಿಸಿದರು.

  • ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್

    ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್

    -ದೇಶದ ಅನ್ನದಾತ, ಕಾಂಗ್ರೆಸ್ ಹೋರಾಟಕ್ಕೆ ಸಿಕ್ಕ ಜಯ

    ನವದೆಹಲಿ: ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬ ದೇಶದ ಅನ್ನದಾತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿದೆ. ಇದು ದೇಶದ ಅನ್ನದಾತ ಮತ್ತು ಕಾಂಗ್ರೆಸ್ ನ ಹೋರಾಟಕ್ಕೆ ಸಂದ ಚಾರಿತ್ರಿಕ ಜಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

    ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮದಿನವಾದ ಶುಕ್ರವಾರ ದೆಹಲಿಯಲ್ಲಿರುವ ಅವರ ಸ್ಮಾರಕ ಶಕ್ತಿ ಸ್ಥಳ ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೆರಳಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದ ಮೂರು ಕೃಷಿ ಕಾಯ್ದೆಗಳು ಎಪಿಎಂಸಿ ಮಾರುಕಟ್ಟೆಗೆ ಮಾರಕವಾಗಿದ್ದವು. ಬೆಂಬಲ ಬೆಲೆಗೆ ಕಾನೂನು ರಕ್ಷಣೆ ನೀಡಿರಲಿಲ್ಲ. ದೇಶದ ಕೃಷಿ ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶ, ಒಪ್ಪಂದ ಕೃಷಿ ಸೇರಿದಂತೆ ಇತರೆ ಅಂಶಗಳು ರೈತರ ಭವಿಷ್ಯವನ್ನೇ ಸಮಾಧಿ ಮಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ದೇಶದ ಅನ್ನದಾತರು ಚಳಿ, ಮಳೆ, ಬಿಸಿಲೆನ್ನದೆ ಬೀದಿಗಿಳಿದು ಸುದೀರ್ಘ ಹೋರಾಟ ಮಾಡಿದ್ದರು. ಈ ಹೋರಾಟ ಹತ್ತಿಕ್ಕಲು ಸರ್ಕಾರ ಅಧಿಕಾರ, ಪೊಲೀಸ್ ಬಲ ಪ್ರಯೋಗಿಸಿತ್ತು. ಇದ್ಯಾವುದಕ್ಕೂ ಜಗ್ಗದ ರೈತರು ತಮ್ಮ ಭವಿಷ್ಯ ರಕ್ಷಣೆಗೆ ಬದ್ಧವಾಗಿ ನಿಂತರು ಎಂದಿದ್ದಾರೆ. ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ಈ ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರು ಪ್ರಾಣ ತ್ಯಾಗ ಮಾಡಿದ್ದು, ಕೇಂದ್ರ ಸರ್ಕಾರ ಇದೀಗ ಅನ್ನದಾತನ ಮುಂದೆ ಮಂಡಿಯೂರಿದೆ. ದೇಶದ ಅನ್ನದಾತನನ್ನು ಎದುರುಹಾಕಿಕೊಂಡು ಉಳಿದವರಿಲ್ಲ. ಅಂದು ಬ್ರಿಟೀಷರು ರೈತರ ಮೇಲೆ ದಬ್ಬಾಳಿಕೆ ನಡೆಸಿ ದೇಶದಿಂದ ಕಾಲ್ಕಿತ್ತರು. ಇಂದು ಬಿಜೆಪಿ ಅದೇ ತಪ್ಪು ಮಾಡಿ ಬುದ್ಧಿ ಕಲಿತಿದೆ ಎಂದು ಶಿವಕುಮಾರ್ ಅವರು ಹೇಳಿದ್ದಾರೆ.

    ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ರೈತನೂ ದೇಶದ ರಕ್ಷಣೆಯಲ್ಲಿ ಯೋಧನಂತೆ ಕೆಲಸ ಮಾಡಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ ವಿರುದ್ಧ ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು. ದುಷ್ಟ ಮನಸ್ಥಿತಿ ವಿರುದ್ಧ ಸಿಕ್ಕ ಗೆಲುವು. ರೈತರ ಹಿತದೃಷ್ಟಿಯಿಂದ ಕಾಂಗ್ರೆಸ್ ಕೂಡ ರೈತರ ಈ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು. ಕಾಂಗ್ರೆಸ್ ಪಕ್ಷ ಸಂಸತ್ತಿನ ಉಭಯ ಸದನಗಳು, ರಾಜ್ಯ ವಿಧಾನ ಮಂಡಲಗಳಲ್ಲಿ ಈ ಕರಾಳ ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡಿತ್ತು. ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಈ ಕರಾಳ ಕಾಯ್ದೆಯ ಹಿಂದೆ ಅಡಗಿರುವ ಕೇಂದ್ರ ಸರ್ಕಾರದ ಷಡ್ಯಂತ್ರವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದೆವು. ಕೇಂದ್ರ ಸರ್ಕಾರ ಇನ್ನುಮುಂದಾದರು ತನ್ನ ಸರ್ವಾಧಿಕಾರಿ ಮನಃಸ್ಥಿತಿಯಿಂದ ಹೊರಬಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದನ್ನು ನಿಲ್ಲಿಸಬೇಕು. ದೇಶ ಹಾಗೂ ಅನ್ನದಾತನ ಹಿತದೃಷ್ಟಿಯಿಂದ ಎಲ್ಲರ ಜತೆ ಚರ್ಚೆ ಮಾಡಬೇಕು ಎಂದು ಈ ಸಮಯದಲ್ಲಿ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಎಂದೆಂದಿಗೂ ರೈತರು ಸೇರಿದಂತೆ ಎಲ್ಲ ವರ್ಗವರ ಜೊತೆಗೆ ಇರಲಿದೆ. ಅವರ ಹಿತಾಸಕ್ತಿಗೆ ಧಕ್ಕೆಯಾದರೆ ಹೋರಾಟ ಮಾಡಲಿದೆ ಎಂದೂ ಶಿವಕುಮಾರ್ ಅವರು ತಿಳಿಸಿದ್ದಾರೆ.

  • ರೈತರ ಹೋರಾಟಕ್ಕೆ ಬೆಲೆ ಕೊಟ್ಟ ಸರ್ಕಾರದ ನಿರ್ಧಾರಕ್ಕೆ ಸ್ವಾಗತ:  ಎಚ್‌ಡಿಡಿ

    ರೈತರ ಹೋರಾಟಕ್ಕೆ ಬೆಲೆ ಕೊಟ್ಟ ಸರ್ಕಾರದ ನಿರ್ಧಾರಕ್ಕೆ ಸ್ವಾಗತ: ಎಚ್‌ಡಿಡಿ

    ಬೆಂಗಳೂರು: ಕೇಂದ್ರ ಸರ್ಕಾರ ವಿವಾದಿತ 3 ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಮಾಜಿ ಪ್ರಧಾನಿ ದೇವೇಗೌಡ ಟ್ವೀಟ್ ಮಾಡಿ ಕೇಂದ್ರದ ನಿರ್ಧಾರಕ್ಕೆ ಸ್ವಾಗತ ಕೋರಿದ್ದಾರೆ.

    ನಾನು ಪ್ರಧಾನಿಯನ್ನು ಸ್ವಾಗತಿಸುತ್ತೇನೆ. ರೈತರ ಹೋರಾಟಕ್ಕೆ ಬೆಲೆ ಕೊಟ್ಟ ಸರ್ಕಾರದ ನಿರ್ಧಾರ ಸ್ವಾಗತ ಮಾಡೋದಾಗಿ ಟ್ವೀಟ್ ಮಾಡಿ ಶುಭ ಕೊರಿದ್ದಾರೆ. ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ವೇಳೆ ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುತ್ತಿದ್ದು, 3 ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರ ಒಳಿತಿಗಾಗಿಯೇ ಕೃಷಿ ಕಾಯ್ದೆ ಜಾರಿಗೆ ತಂದಿದ್ದೆವು. ಈ 3 ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿದ್ದವು. ರೈತರ ಹಿತ ದೃಷ್ಟಿಯಲ್ಲಿಟ್ಟುಕೊಂಡೇ ಕಾಯ್ದೆ ಜಾರಿ ಮಾಡಲಾಗಿತ್ತು. ಯೋಜನೆ ಬಗ್ಗೆ ರೈತರಿಗೆ ತಿಳಿಸುವಲ್ಲಿ ಸಾಕಷ್ಟು ಯತ್ನಿಸಿದ್ದೇವೆ. ಆದರೆ ಕೆಲವು ರೈತರು ಕಾಯ್ದೆಯನ್ನು ಅವರ ಸಲಹೆ ಒಪ್ಪಿಕೊಂಡಿದ್ದರೂ ವಿರೋಧಿಸುತ್ತಿದ್ದಾರೆ. ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಕೃಷಿ ಮಾರುಕಟ್ಟೆ ಆಧುನೀಕರಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ರೈತರು ಈಗ ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಬಹುದು. ಕೃಷಿ ಬಜೆಟ್ ಮೊದಲಿಗಿಂತ 5 ಪಟ್ಟು ಹೆಚ್ಚಿಸಿದ್ದೇವೆ. ರೈತರಿಗೆ 22 ಕೋಟಿ ಸಾಯಿಲ್ ಹೆಲ್ತ್ ಕಾರ್ಡ್ ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

  • ರೈತರ ಭಾವನೆಗೆ ಬೆಲೆ ಕೊಟ್ಟಿದ್ದು, ಇದಕ್ಕೂ ಪಂಚರಾಜ್ಯ ಚುನಾವಣೆಗೂ ಸಂಬಂಧವಿಲ್ಲ: ಬೊಮ್ಮಾಯಿ

    ರೈತರ ಭಾವನೆಗೆ ಬೆಲೆ ಕೊಟ್ಟಿದ್ದು, ಇದಕ್ಕೂ ಪಂಚರಾಜ್ಯ ಚುನಾವಣೆಗೂ ಸಂಬಂಧವಿಲ್ಲ: ಬೊಮ್ಮಾಯಿ

    ಬೆಂಗಳೂರು: ರೈತರ ಭಾವನೆಗಳಿಗೆ ಬೆಲೆ ಕೊಟ್ಟಿದ್ದು, ಇದಕ್ಕೂ ಪಂಚರಾಜ್ಯ ಚುನಾವಣೆಗಳಿಗೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೃಷಿ ಕಾಯ್ದೆ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯುಪಿಎ ಅವಧಿಯಲ್ಲಿ ಜಾಗತೀಕರಣ, ಉದಾರೀಕರಣ ಆದ ಮೇಲೆ ಹೊಸ ಕಾಯ್ದೆ ಬಂದಿವೆ. ಯುಪಿಎ ಸರ್ಕಾರದಲ್ಲಿ ಕರಡು ಇತ್ತು. ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದು ಜಾರಿ ಮಾಡಲಾಗಿತ್ತು. ಪಂಜಾಬ್, ಹರಿಯಾಣದ ರೈತರು ವಿರೋಧ ಮಾಡಿದ್ರು. ಪ್ರಧಾನಿಗಳು ಈಗ ಕಾಯ್ದೆ ವಾಪಸ್ ಪಡೆಯುತ್ತೇವೆ ಅಂತ ಹೇಳಿದ್ದಾರೆ. ಇದು ಸ್ಪಂದನಾಶೀಲ ಸರ್ಕಾರ ಇದು. ಹೀಗಾಗಿ ರೈತರ ಭಾವನೆಗೆ ಬೆಲೆ ಕೊಟ್ಟಿದ್ದೇವೆ. ಇದಕ್ಕೂ ಪಂಚರಾಜ್ಯ ಚುನಾವಣೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಆ ಮೂರು ವಿವಾದಿತ ಕೃಷಿ ಕಾಯ್ದೆ ಯಾವುದು?- ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದೇಗೆ?

    ದೇಶದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದೆ. ಹೀಗಾಗಿ ಚುನಾವಣೆ ದೃಷ್ಟಿಯಿಂದ ಪ್ರಧಾನಿಗಳು ಈ ನಿರ್ಧಾರ ಮಾಡಿಲ್ಲ. ರೈತರಿಗೆ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿಯವರು ಮಾಡಿದರು. ಆದರೆ ಅದು ಹೋರಾಟ ಮಾಡೋರಿಗೆ ಅರ್ಥ ಆಗಿರಲಿಲ್ಲ. ಹೀಗಾಗಿ ವಿಶ್ವಾಸ ಬರಬೇಕು ಅನ್ನೋ ದೃಷ್ಟಿಯಿಂದ ಈ ಕಾಯ್ದೆ ವಾಪಸ್ ಪಡೆದಿದ್ದಾರೆ ಎಂದರು.

    ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆ ವಾಪಸ್ ಪಡೆಯೋದಾಗಿ ಪಿಎಂ ಹೇಳಿದ್ದಾರೆ. ಮೋದಿ ಸರ್ಕಾರ ಸ್ಪಂದನಶೀಲ ಸರ್ಕಾರವಾಗಿದ್ದು, ಹೀಗಾಗಿ ರೈತರ ಮಾತಿಗೆ ಬೆಲೆ ಕೊಟ್ಟಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ