Tag: ಕೃಷಿ ಕಾಯ್ದೆಗಳು

  • ಮೂರು ಕೃಷಿ ಕಾಯ್ದೆಗಳಿಗೆ ಶೇ.86 ರೈತ ಸಂಘಟನೆಗಳ ಬೆಂಬಲವಿತ್ತು: ʻಸುಪ್ರೀಂʼ ಸಮಿತಿ ವರದಿ ಬಹಿರಂಗ

    ಮೂರು ಕೃಷಿ ಕಾಯ್ದೆಗಳಿಗೆ ಶೇ.86 ರೈತ ಸಂಘಟನೆಗಳ ಬೆಂಬಲವಿತ್ತು: ʻಸುಪ್ರೀಂʼ ಸಮಿತಿ ವರದಿ ಬಹಿರಂಗ

    ನವದೆಹಲಿ: ರೈತರ ತೀವ್ರ ಪ್ರತಿರೋಧದಿಂದಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಹಿಂಪಡೆದ 3 ಕೃಷಿ ಕಾಯ್ದೆಗಳ ಪರವಾಗಿ ದೇಶದ ಶೇ.86 ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂಬ ವಿಚಾರ ಅಧ್ಯಯನಕ್ಕಾಗಿ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಸಮಿತಿಯ ವರದಿಯಿಂದ ತಿಳಿದುಬಂದಿದೆ.

    ಕಳೆದ ವರ್ಷ ಅಂದರೆ 2021ರ ಮಾರ್ಚ್‌ 19ರಂದು ಸಮಿತಿಯು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ವರದಿಯ ಅಂಶಗಳು ಈಗ ಬಹಿರಂಗಗೊಂಡಿವೆ. ಮೂರು ಕೃಷಿ ಕಾನೂನುಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಶೇ. 86 ರೈತ ಸಂಘಟನೆಗಳು ಸುಮಾರು 3 ಕೋಟಿ ರೈತರು ಪ್ರತಿನಿಧಿಸುತ್ತವೆ ಎಂದು ಸಮಿತಿ ತಿಳಿಸಿದೆ. ಇದನ್ನೂ ಓದಿ: ಪ್ರತಿಭಟನೆ ಕೈ ಬಿಡುವಂತೆ ರೈತರಲ್ಲಿ ಮೋದಿ ಮನವಿ

    SUPREME COURT

    ಈ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ತುಂಬಾ ಅನುಕೂಲ ಆಗಲಿದ್ದು, ಅವುಗಳನ್ನು ಹಿಂಪಡೆಯಬಾರದು. ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಅವುಗಳನ್ನು ಅನುಷ್ಠಾನಗೊಳಿಸಬಹುದು ಎಂದು ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು ಎಂಬುದು ಈಗ ತಿಳಿದು ಬಂದಿದೆ.

    ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕ್ರಮದಿಂದ, ಕಾಯ್ದೆಗಳನ್ನು ಬೆಂಬಲಿಸುವ ಬಹುಸಂಖ್ಯಾತ ರೈತರಿಗೆ ಅನ್ಯಾಯವಾಗಲಿದೆ ಎಂಬ ಅಂಶವನ್ನು ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ ಸರ್ಕಾರ ಯಾಕಿರಬೇಕು: ಕಂಗನಾ ಅಸಮಾಧಾನ

    ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡುವ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕು ಎಂಬುದು ಸೇರಿದಂತೆ ಈ ಕಾಯ್ದೆಯಲ್ಲಿ ಮತ್ತಿತ್ತರ ಬದಲಾವಣೆಗಳನ್ನು ಮಾಡಬೇಕು ಎಂದು ಮೂವರು ಸದಸ್ಯರ ಸಮಿತಿ ಸಲಹೆ ನೀಡಿತ್ತು.

    ವರದಿಯನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಸಮಿತಿಯ ಸದಸ್ಯ ಅನಿಲ್ ಗಣಾವತ್, ಈ ವರದಿಯನ್ನು ಸಾರ್ವಜನಿಕಗೊಳಿಸಲು ಸುಪ್ರೀಂ ಕೋರ್ಟ್‌ಗೆ 3 ಬಾರಿ ಪತ್ರ ಬರೆದಿದ್ದೆವು. ಆದರೆ ಸುಪ್ರೀಂ ಕೋರ್ಟ್‌ನಿಂದ ನಮಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಈ ಕಾಯ್ದೆಗಳನ್ನು ಹಿಂಪಡೆಯಲಾದ ಕಾರಣ ಈಗ ವರದಿಗೆ ಯಾವುದೇ ಮಹತ್ವವಿಲ್ಲ. ಇದೇ ಕಾರಣಕ್ಕೆ ವರದಿಯ ಸಾರಂಶವನ್ನು ಬಿಡುಗಡೆಗೊಳಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ಮನೆಗಳತ್ತ ಮುಖಮಾಡಿದ ರೈತರು- ಪೊಲೀಸರಿಂದ ಬ್ಯಾರಿಕೇಡ್ ತೆರವು

    ಮೂರು ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ತಡೆ ನೀಡಿ ಸುಪ್ರೀಂ ಕೋರ್ಟ್ 2020 ರ ಜನವರಿಯಲ್ಲಿ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿತ್ತು. ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ, ಶೆಟ್ಕರಿ ಸಂಘಟನೆ (ಮಹಾರಾಷ್ಟ್ರ) ಅಧ್ಯಕ್ಷ ಅನಿಲ್ ಗಣಾವತ್‌, ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಪ್ರಮೋದ್ ಕುಮಾರ್ ಜೋಶಿ ಸಮಿತಿಯಲ್ಲಿದ್ದರು.

    ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಲವು ರಾಜ್ಯಗಳ ರೈತ ಸಂಘಟನೆಗಳು ದೆಹಲಿ ಗಡಿ ಭಾಗಗಳಲ್ಲಿ ನಿರಂತರ ಪ್ರತಿಭಟನೆ ನಡೆಸಿದವು. ಕೃಷಿ ಕಾಯ್ದೆಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಅವುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

  • ರದ್ದಾಗಿರುವ ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೊಳಿಸುವ ಯೋಚನೆಯಿಲ್ಲ: ಕೇಂದ್ರ ಕೃಷಿ ಸಚಿವ

    ರದ್ದಾಗಿರುವ ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೊಳಿಸುವ ಯೋಚನೆಯಿಲ್ಲ: ಕೇಂದ್ರ ಕೃಷಿ ಸಚಿವ

    ನವದೆಹಲಿ: ರದ್ದುಪಡಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೆ ತರುವ ಯಾವುದೇ ಯೋಚನೆ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಶುಕ್ರವಾರ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ಇತ್ಯಾದಿ ವಿಷಯ ಸಂಬಂಧಪಟ್ಟ ರಾಜ್ಯ ಸರ್ಕಾರದಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಯಾವತ್ತೂ ಹಿಜಬ್, ಬುರ್ಖಾ ಪರ ಇಲ್ಲ: ಜಾವೇದ್ ಅಖ್ತರ್

    ಈವರೆಗೆ 11.78 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ವಿವಿಧ ಕಂತುಗಳ ಮೂಲಕ ಅಂದಾಜು 1.82 ಕೋಟಿ ಮೊತ್ತವನ್ನು ಜಮಾ ಮಾಡಲಾಗಿದೆ. ಅವರಲ್ಲಿ 48.04 ಲಕ್ಷ ಮಂದಿ ಅನರ್ಹರು ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೋವಿಡ್‌ ಸಾಂಕ್ರಾಮಿಕ ಹೊರತಾಗಿಯೂ 2020-21ರ ಅವಧಿಯಲ್ಲಿ ಜಿಡಿಪಿಗೆ ಶೇ.1.6 ಪಾಲನ್ನು ಹೊಂದಿರುವ 3,09,939 ಕೋಟಿ ಮೊತ್ತದ ಕೃಷಿ ರಫ್ತುಗಳಲ್ಲಿ ಶೇ.22.8ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ: ಕಾಲೇಜುಗಳಿಗೆ ಫೆ.16ರವರೆಗೂ ರಜೆ ಘೋಷಿಸಿದ ಸರ್ಕಾರ

  • ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಯಾತ್ರೆ: ಎಸ್.ಆರ್.ಹಿರೇಮಠ

    ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಯಾತ್ರೆ: ಎಸ್.ಆರ್.ಹಿರೇಮಠ

    ರಾಯಚೂರು: ಕೇಂದ್ರ ಸರ್ಕಾರ ಹಿಂಪಡೆದಂತೆ ರಾಜ್ಯ ಸರ್ಕಾರ ಕೂಡ ಕೃಷಿ ಕಾಯ್ದೆ ಹಿಂಪಡೆಯಬೇಕು. ಸರ್ಕಾರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಫೆಬ್ರವರಿಯಲ್ಲಿ ಜನಾಂದೋಲ ಯಾತ್ರೆ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಎಸ್.ಆರ್‌.ಹಿರೇಮಠ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸೋಂಕು ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿ, ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ: ಇದನ್ನೂ ಒದಿ: ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಈ ಮೂರು ವಿಚಾರಗಳನ್ನು ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಯಾತ್ರೆ ನಡೆಸಲಾಗುವುದು. ಮುಂದಿನ ತಿಂಗಳು ಬಸವಕಲ್ಯಾಣದಿಂದ ಬೆಂಗಳೂರು, ಮಲೆಮಹದೇಶ್ವರದಿಂದ ಬೆಂಗಳೂರಿಗೆ ಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ.

    ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪೆಡೆಯುವಂತೆ ದೆಹಲಿ ಗಡಿ ಭಾಗಗಳಲ್ಲಿ ರೈತ ಸಂಘಟನೆಗಳು ಸತತ ಒಂದು ವರ್ಷ ಪ್ರತಿಭಟನೆ ನಡೆಸಿದವು. ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಪ್ರತಿಭಟನೆ ಹಿಂಪಡೆದ ರೈತರು, ಕೇಂದ್ರ ಮುಂದೆ ಮತ್ತಷ್ಟು ಬೇಡಿಕೆಗಳನ್ನಿಟ್ಟಿದ್ದಾರೆ.

  • ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ: ಕೇಂದ್ರ ಕೃಷಿ ಸಚಿವ ಸ್ಪಷ್ಟನೆ

    ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ: ಕೇಂದ್ರ ಕೃಷಿ ಸಚಿವ ಸ್ಪಷ್ಟನೆ

    ಭೋಪಾಲ್: ಈಗಾಗಲೇ ಹಿಂಪಡೆದಿರುವ ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಸ್ಪಷ್ಟಪಡಿಸಿದ್ದಾರೆ.

    ಕೆಲವು ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಾದ ಬಳಿಕ ತಿದ್ದುಪಡಿಯೊಂದಿಗೆ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಮತ್ತೆ ಜಾರಿಗೊಳಿಸಲಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಈ ಮಾತನ್ನು ಅಲ್ಲಗಳೆದಿರುವ ಕೃಷಿ ಸಚಿವ ತೋಮರ್‌, ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೃಷಿ ಕಾನೂನುಗಳ ಬಗ್ಗೆ ಮಾತನಾಡುವಾಗ, ಕೇಂದ್ರ ಸರ್ಕಾರ ದೂರದೃಷ್ಟಿಯಿಂದ ಕೃಷಿ ಕಾನೂನುಗಳನ್ನು ಜಾರಿಗೊಳಿಸಿತ್ತು. ಕಾರಣಾಂತರಗಳಿಂದ ಅವುಗಳನ್ನು ಹಿಂಪಡೆದಿದೆ. ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಸದಾ ಕ್ರಿಯಾಶೀಲವಾಗಿರುತ್ತದೆ ಎಂದು ತೋಮರ್‌ ಅಭಿಪ್ರಾಯಪಟ್ಟಿದ್ದಾರೆ.

    ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಒಳ್ಳೆಯ ಕೃಷಿ ಕಾಯ್ದೆಗಳನ್ನು ತರಲಾಗಿತ್ತು. ಆದರೂ ಅವುಗಳಿಗೆ ವಿರೋಧ ವ್ಯಕ್ತವಾಯಿತು. ಇದರಿಂದ ಸರ್ಕಾರ ಬೇಸರಗೊಂಡಿಲ್ಲ. ಸರ್ಕಾರ ಒಂದು ಹೆಜ್ಜೆ ಹಿಂದೆ ಇರಿಸಿದೆ. ಆದರೆ ಖಂಡಿತ ಸುಧಾರಣೆಯತ್ತ ಸಾಗಲಿದೆ. ರೈತರು ಈ ದೇಶದ ಬೆನ್ನೆಲುಬು. ಈ ಬೆನ್ನೆಲುಬು ಗಟ್ಟಿಯಾಗಿದ್ದರೆ ದೇಶವೂ ಸಮರ್ಥವಾಗಿ ಮುನ್ನಡೆಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ

    ಕೇಂದ್ರ ಸರ್ಕಾರವು ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೊಳಿಸುವ ಷಡ್ಯಂತ್ರ ರೂಪಿಸಿದೆ. ಸದ್ಯದಲ್ಲೇ ಐದು ರಾಜ್ಯಗಳಿಗೆ ನಡೆಯುವ ವಿಧಾನಸಭಾ ಚುನಾವಣೆ ನಂತರ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಸರ್ಕಾರ ಚಿಂತಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಮಾತನಾಡಿದ್ದರು.

    ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸತತ ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸಿದ್ದರು. ರೈತರ ಪ್ರಬಲ ವಿರೋಧವನ್ನು ಅರಿತು ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು.

  • ದೆಹಲಿಯಲ್ಲಿ ರೈತರ ಪ್ರತಿಭಟನೆ ಅಂತ್ಯ

    ದೆಹಲಿಯಲ್ಲಿ ರೈತರ ಪ್ರತಿಭಟನೆ ಅಂತ್ಯ

    ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 15 ತಿಂಗಳಿಂದ ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಡಿ.11ರಂದು ಪ್ರತಿಭಟನೆ ಅಂತಿಮಗೊಳಿಸಿ ತಮ್ಮ ಊರುಗಳಿಗೆ ತೆರಳುವುದಾಗಿ ರೈತ ನಾಯಕರು ತಿಳಿಸಿದ್ದಾರೆ.

    ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‍ಪಿ) ಕಾನೂನು ಖಾತರಿ, ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ದಾಖಲಿಸಿರುವ ಅಪರಾಧ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಒತ್ತಾಯಿಸಿದ್ದರು. ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭರವಸೆಯ ಹೊಸ ಪ್ರಸ್ತಾಪಗಳನ್ನು ರೈತರಿಗೆ ನೀಡಿತ್ತು. ಅದನ್ನು ಒಪ್ಪಿರುವ ರೈತರು ಪ್ರತಿಭಟನೆ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ಮುಂದುವರಿಯಲಿದೆ: ನಾಳೆ ಮತ್ತೆ ರೈತರ ಸಭೆ

    ರೈತರು ತಮ್ಮ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಘೋಷಿಸಿದ್ದಾರೆ. ತಮ್ಮ ಊರುಗಳಿಗೆ ವಾಪಸ್ಸಾಗಲು ಸಿದ್ಧತೆ ನಡೆಸಿದ್ದು, ಇಂದು ಸಂಜೆ 5.30ರ ಸಮಯಕ್ಕೆ ವಿಜಯದ ಪ್ರಾರ್ಥನೆ ಮಾಡಲಿದ್ದಾರೆ. ಅಲ್ಲದೇ ಡಿ.11ರಂದು ಟಿಕ್ರಿ ಮತ್ತು ಸಿಂಘು ಗಡಿ ಭಾಗಗಳಲ್ಲಿ ವಿಜಯದ ಮೆರವಣಿಗೆ ನಡೆಸಲಿದ್ದಾರೆ. ನಂತರ ಡಿ.15ರಂದು ದೆಹಲಿಯಲ್ಲಿ ಮತ್ತೊಂದು ಸಭೆ ನಡೆಸಲು ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ನಿರ್ಧರಿಸಿದೆ.

    6 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿ ಕೇಂದ್ರ ಸರ್ಕಾರ ನಿನ್ನೆ ಲಿಖಿತ ಭರವಸೆಯ ಪ್ರಸ್ತಾಪವನ್ನು ಎಸ್‌ಕೆಎಂ ಮುಖಂಡರಿಗೆ ನೀಡಿದೆ. ಆದ್ದರಿಂದ ರೈತ ಸಂಘಟನೆಗಳು ಪ್ರತಿಭಟನೆ ಹಿಂತೆಗೆದುಕೊಳ್ಳಲು ನಿರ್ಧರಿಸಿವೆ. ಇದನ್ನೂ ಓದಿ: ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ – ವೀಡಿಯೋ ವೈರಲ್

    ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಮಿತಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ತಜ್ಞರು, ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ರೈತ ಸಂಘಟನೆಗಳ ಪ್ರಮುಖರನ್ನು ಒಳಗೊಂಡಿರುತ್ತದೆ.

  • ಪ್ರತಿಭಟನೆ ಮುಂದುವರಿಯಲಿದೆ: ನಾಳೆ ಮತ್ತೆ ರೈತರ ಸಭೆ

    ಪ್ರತಿಭಟನೆ ಮುಂದುವರಿಯಲಿದೆ: ನಾಳೆ ಮತ್ತೆ ರೈತರ ಸಭೆ

    ನವದೆಹಲಿ: ರೈತರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಇತರೆ ಪ್ರಮುಖ ಬೇಡಿಕೆಗಳ ಈಡೇರಿಕೆ ಸಂಬಂಧ ಕೇಂದ್ರ ಸರ್ಕಾರ ನೀಡಿರುವ ಪರಿಷ್ಕೃತ ಪ್ರಸ್ತಾವನೆಯನ್ನು ರೈತ ಸಂಘಟನೆ ಒಪ್ಪಿದೆ. ಕೇಂದ್ರದಿಂದ ಲಿಖಿತ ಪತ್ರ ಬಂದ ನಂತರ ನಾಳೆ ಮತ್ತೊಂದು ಸಭೆ ನಡೆಸಲಾಗುವುದು. ಪ್ರತಿಭಟನೆ ಮುಂದುವರಿಯಲಿದೆ ಎಂದು ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಗುರ್ನಾಮ್ ಸಿಂಗ್ ಛಾರುಣಿ ಸ್ಪಷ್ಟಪಡಿಸಿದ್ದಾರೆ.

    ಬುಧವಾರ ನಡೆದ ಸಭೆ ಬಳಿಯ ಮಾತನಾಡಿದ ಅವರು, ಪ್ರತಿಭಟನೆ ಮುಂದುವರಿಯಲಿದೆ. ಪ್ರತಿಭಟನೆ ನಿಲ್ಲಿಸಿದರೆ ನಮಗೆ ಸಮಸ್ಯೆ ಆಗಲಿದೆ. ಕೇಂದ್ರ ಸರ್ಕಾರ ಪ್ರಕರಣಗಳನ್ನು ತೆಗೆದುಕೊಳ್ಳದೆಯೇ ಇರಬಹುದೆಂಬ ಅನುಮಾನ ಇದೆ. ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ದಿನಾಂಕವನ್ನು ನಿಗದಿಪಡಿಸಲಿ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಹೋದಲ್ಲೆಲ್ಲ ಮೋದಿ…ಮೋದಿ… ಅಂತಾರೆ, ಸಿದ್ರಾಮಯ್ಯರ ಹೆಸರನ್ನು ಪಾಕಿಸ್ತಾನದಲ್ಲಿ ಹೇಳಬಹುದಷ್ಟೆ: ಸಿ.ಟಿ.ರವಿ

    ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನಾನಿರತ ರೈತರ ಮೇಲೆ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ವಜಾಗೊಳಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಲಿಖಿತ ಭರವಸೆ ನೀಡಲಾಗುವುದೆಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿದ್ದವು.

    ಕೇಂದ್ರ ಸರ್ಕಾರ ನಿನ್ನೆಯೇ ಈ ನಿರ್ಧಾರವನ್ನು ತಿಳಿಸಿದೆ. ಆದರೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಸಂಬಂಧ ರೈತರು ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ. ಒಟ್ಟಾರೆ ಸರ್ಕಾರದ ಈ ನಿಲುವಿನಿಂದ ರೈತರಲ್ಲಿ ಸಂತಸ ಮೂಡಿದೆ. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ

    ಕೇಂದ್ರ ಸರ್ಕಾರವು ಕಳುಹಿಸಿರುವ ಪರಿಷ್ಕೃತ ಪ್ರಸ್ತಾವನೆ ಬಗ್ಗೆ ಚರ್ಚಿಸಲು ಐವರು ಸದಸ್ಯರ ರೈತ ಮುಖಂಡರ ತಂಡವು ದೆಹಲಿಯಲ್ಲಿ ಇಂದು ಸಭೆ ನಡೆಯಿತು.

  • ಕೃಷಿ ಕಾಯ್ದೆಗಳ ರದ್ದತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

    ಕೃಷಿ ಕಾಯ್ದೆಗಳ ರದ್ದತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

    ನವದೆಹಲಿ: ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ವೇಳೆ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ನಡೆಸಲಾಗುವುದು. ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಕಳೆದ ವಾರ ಪ್ರಧಾನಿ ಮೋದಿ ಅವರು ಮನವಿ ಮಾಡಿದ್ದರು. ಇದನ್ನೂ ಓದಿ: ನನ್ನ ಮೊದಲ ಮೊಹಬ್ಬತ್ ರಾಹುಲ್ ದ್ರಾವಿಡ್ ಎಂದ ಬಾಲಿವುಡ್ ನಟಿ

    ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ದೆಹಲಿ ಗಡಿ ಭಾಗಗಳಲ್ಲಿ ರೈತರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ನೇತೃತ್ವವನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ವಹಿಸಿಕೊಂಡಿದ್ದಾರೆ. ನವೆಂಬರ್ 29ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳನ್ನು ಅಧಿಕೃತವಾಗಿ ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ಚಿಕ್ಕತಿರುಪತಿಯಲ್ಲಿ ಮಗನ ಕೇಶಮುಂಡನ ಮಾಡಿಸಿದ ನಟಿ ಮಯೂರಿ

    PM MODI

    ಪ್ರಧಾನಿಗಳ ಸುಳ್ಳು ಭರವಸೆಗಳಿಂದ ಜನ ಬೇಸತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಬಗ್ಗೆ ರೈತರಲ್ಲಿ ಯಾವುದೇ ಭರವಸೆ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು.

  • ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿ, ನಮ್ಮ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಿ- ರೈತರ ಬಿಗಿಪಟ್ಟು

    ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿ, ನಮ್ಮ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಿ- ರೈತರ ಬಿಗಿಪಟ್ಟು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಕಾಯ್ದೆಗಳು ಸಂಪೂರ್ಣ ರದ್ದಾಗುವವರೆಗೂ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತರು ದೆಹಲಿ ಗಡಿಯಲ್ಲಿ ಪಟ್ಟು ಹಿಡಿದು ಕುಳಿತಿದ್ದಾರೆ.

    ಕೃಷಿ ಕಾಯ್ದೆಗಳ ರದ್ದುಗೊಳಿಸುವುದು ಸೇರಿದಂತೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸಬೇಕು ಹಾಗೂ ಕಳೆದ ಒಂದು ವರ್ಷದಿಂದ ನಡೆದ ಪ್ರತಿಭಟನೆಯಲ್ಲಿ ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಈಗ ರದ್ದಾಗಿದ್ರೂ ಅಗತ್ಯ ಎನಿಸಿದ್ರೆ ಮತ್ತೆ ಕೃಷಿ ಕಾಯ್ದೆ ಜಾರಿ: ರಾಜಸ್ಥಾನ ರಾಜ್ಯಪಾಲ

    ನವೆಂಬರ್‌ ತಿಂಗಳ ಅಂತ್ಯದಲ್ಲಿ ನಡೆಯುವ ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ ಮಾತ್ರ ಈ ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳಲಾಗುವುದು.

    ಕೃಷಿ ಕಾನೂನುಗಳ ಕುರಿತು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಯುಕ್ತ ಕಿಸಾನ್‌ ಮಾರ್ಚ್‌ (ಎಸ್‌ಕೆಎಂ) ಪೂರ್ವ ನಿರ್ಧಾರಿತ ಕಾರ್ಯಕ್ರಮಗಳನ್ನು ಹಾಗೆಯೇ ಮುಂದುವರಿಸುತ್ತೇವೆ ಎಂದು ರೈತ ನಾಯಕ ಬಲ್ಬೀರ್‌ ಸಿಂಗ್‌ ರಾಜೇವಾಲ ತಿಳಿಸಿದ್ದಾರೆ. ಇದನ್ನೂ ಓದಿ: ತಿದ್ದುಪಡಿಯೊಂದಿಗೆ ಕೃಷಿ ಮಸೂದೆ ಮತ್ತೆ ಮಂಡನೆ ಆಗುತ್ತೆ: ಪ್ರಭಾಕರ ಭಟ್

    ಲಕ್ನೋದಲ್ಲಿ ನ.22ಕ್ಕೆ ನಿಗದಿಪಡಿಸಿರುವ ರೈತರ ಸಭೆ, ನ.26ರಂದು ಪಾರ್ಲಿಮೆಂಟ್‌ಗೆ ರೈತರ ಮಾರ್ಚ್‌ ನಡೆಸಲು ನಿರ್ಧರಿಸಲಾಗಿದ್ದು, ಅದನ್ನು ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಹಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೆ ರೈತರು ಪತ್ರ ಬರೆದಿದ್ದಾರೆ.

    ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಅವರು ಘೋಷಿಸಿದ್ದರು. ಈ ನಿರ್ಧಾರವನ್ನು ಕೇಳಿ ರೈತರು ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಆದರೆ ಕೃಷಿ ಕಾಯ್ದಗಳನ್ನು ಅಧಿವೇಶನದಲ್ಲಿ ಅಧಿಕೃತವಾಗಿ ರದ್ದುಗೊಳಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

  • ಈಗಲೂ ರೈತರು ಪ್ರತಿಭಟನೆ ಮಾಡುತ್ತಿರುವುದು ಯಾಕೆ – ಅಮರಿಂದರ್ ಪ್ರಶ್ನೆ

    ಚಂಡೀಗಢ: ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಆದರೂ ರೈತರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿರುವುದೇಕೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ರೈತರನ್ನು ಪ್ರಶ್ನಿಸಿದ್ದಾರೆ.

    ರೈತರ ಬಳಿ ಪ್ರಧಾನಮಂತ್ರಿಗಳು ಕ್ಷಮೆಯಾಚಿಸಿದ್ದಾರೆ. ಆದರೆ ಕಾಯ್ದೆಗಳನ್ನು ರದ್ದುಪಡಿಸುವ ಸಂಬಂಧ ಸದನ ಯಾವಾಗ ನಡೆಯುತ್ತದೆ ಎಂಬುದಷ್ಟೇ ಪ್ರಶ್ನೆಯಾಗಿತ್ತು. ನ.29ರಂದು ಸದನ ನಡೆಯಲಿದೆ. ಮಸೂದೆಯನ್ನು ಹೊರಡಿಸಿದರು, ಈಗ ರದ್ದುಗೊಳಿಸಲಾಗುವುದು. ಈ ವಿಷಯ ಅಲ್ಲಿಗೆ ಮುಗಿಯುತ್ತದೆ. ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿಗಳು ಘೋಷಿಸಿದ ನಂತರವೂ, ರೈತರು ಪ್ರತಿಭಟನೆ ಮುಂದುವರಿಸಲು ಕುಳಿತಿರುವುದರ ಪ್ರಯೋಜನವಾದರೂ ಏನು ಎಂದು ಅಮರೀಂದರ್ ಸಿಂಗ್ ಕೇಳಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ಕೃಷಿ ಕಾಯ್ದೆಗಳ ವಿರುದ್ಧ ನಾವು ಆರಂಭಿಸಿದ ಹೋರಾಟಕ್ಕೆ ನ.26ಕ್ಕೆ ಒಂದು ವರ್ಷವಾಗಲಿದೆ. ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಾವು ಹೋರಾಟವನ್ನು ಮುಂದುವರಿಸುತ್ತೇವೆ. ಆ ದಿನಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದರು. ಅದಕ್ಕೆ ಅಮರೀಂದರ್ ಸಿಂಗ್ ಮೇಲಿನಂತೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ: ರಾಕೇಶ್ ಟಿಕಾಯತ್

    ಮತ್ತೊಂದು ಗಮನಾರ್ಹ ವಿಚಾರವೆಂದರೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದರು. ರೈತರ ಸಮಸ್ಯೆಯನ್ನು ಪರಿಹರಿಸಿದರೆ 2022ರಲ್ಲಿ ಪಂಜಾಬ್ ವಿಧಾನಸಭಾ ಚುಣಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಈ ನಡುವೆ ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಈಗ ಅಮರೀಂದರ್ ಸಿಂಗ್ ಅವರ ಮುಂದಿನ ನಡೆ ಏನೆಂಬುದು ಪ್ರಶ್ನೆಯಾಗಿದೆ.

  • ಕೃಷಿ ಕಾಯ್ದೆಗಳನ್ನು ಹಿಂಪಡೆದಿರೋ ವಿಚಾರ ಗೊತ್ತಿಲ್ಲ, ಆಗ ಹೊಲದಲ್ಲಿದ್ದೆ: ಸಚಿವ ಬಿ.ಸಿ.ಪಾಟೀಲ್

    ಕೃಷಿ ಕಾಯ್ದೆಗಳನ್ನು ಹಿಂಪಡೆದಿರೋ ವಿಚಾರ ಗೊತ್ತಿಲ್ಲ, ಆಗ ಹೊಲದಲ್ಲಿದ್ದೆ: ಸಚಿವ ಬಿ.ಸಿ.ಪಾಟೀಲ್

    ಹಾವೇರಿ: ಮೂರು ಕೃಷಿ ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ವಾಪಸ್ ಪಡೆದರೆಂಬ ವಿಚಾರ ಗೊತ್ತಿಲ್ಲ. ಆಗ ನಾನು ಹೊಲದಲ್ಲಿದ್ದೆ, ತಿಳಿದುಕೊಂಡು ಹೇಳುತ್ತೇನೆ ಎಂದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

    ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಹಳ್ಳೂರು, ಪುರದಕೇರಿ ಗ್ರಾಮಗಳಲ್ಲಿ ಬೆಳೆ ಹಾನಿ ಪರಿಶೀಲನೆ ನಂತರ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ವಿಚಾರವಾಗಿ ನನಗೆ ಇನ್ನೂ ಮಾಹಿತಿ ಬಂದಿಲ್ಲ. ಮಾಹಿತಿ ಬಂದ ನಂತರ ಹೇಳುತ್ತೇನೆ. ಕಾಯ್ದೆಗಳನ್ನು ಯಾವ ಕಾರಣಕ್ಕೆ ತೆಗೆದಿದ್ದಾರೆ, ಏನು ಮಾಡಿದ್ದಾರೆ. ಪ್ರಧಾನಿಯವರು ಏನು ಹೇಳಿದ್ದಾರೆ ಗೊತ್ತಿಲ್ಲ. ಅದರ ಬಗ್ಗೆ ತಿಳಿದುಕೊಂಡು, ಪರಿಶೀಲನೆ ಮಾಡಿ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ.

    ಅಕಾಲಿಕ ಮಳೆಯಿಂದ ಭತ್ತ, ಜೋಳ, ಬಾಳೆ ನೆಲಕಚ್ಚಿದೆ. ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಂದಾಯ ಇಲಾಖೆಯವರ ಜೊತೆ ಸೇರಿ ಸಮೀಕ್ಷೆ ಮಾಡಿ ವರದಿ ಕೊಡುವಂತೆ ತಿಳಿಸಿದ್ದೇನೆ. ಚಿಕ್ಕಕಬ್ಬಾರ, ಹಿರೇಕಬ್ಬಾರ, ಚಟ್ನಳ್ಳಿ, ಪುರುದಕೇರಿ ಭಾಗದಲ್ಲಿ ನಾನೂ ಕೂಡ ವೀಕ್ಷಣೆ ಮಾಡಿದ್ದೇನೆ. ಕೂಡಲೆ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಕೊಟ್ಟ ನಂತರ ಸರ್ಕಾರದಿಂದ ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಜುಲೈನಿಂದ ಇಲ್ಲಿಯವರೆಗೆ 10 ಲಕ್ಷ 73 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅದಕ್ಕೆ ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದೇವೆ. ಎನ್‍ಡಿಆರ್‌ಎಫ್‌ ಮತ್ತು ಎಸ್‍ಡಿಆರ್‌ಎಫ್‌ ನಿಯಮದಂತೆ ಪರಿಹಾರ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ. ಸಿಎಂ ಅವರಿಗೂ ಪರಿಹಾರಕ್ಕಾಗಿ ಒತ್ತಾಯ ಮಾಡುತ್ತೇನೆ. ಕೂಡಲೆ ಹಣ ಬಿಡುಗಡೆ ಮಾಡಿ ರೈತರಿಗೆ ಸಂದಾಯ ಆಗಬೇಕು. ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಹೆಚ್ಚಿನ ಪ್ರಮಾಣದ ಹಾನಿ ಆಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಹಾನಿ ಆಗಿದೆ. ಅದರ ಬಗ್ಗೆ ಪರಿಶೀಲನೆ ಮಾಡಿ ವರದಿ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.