Tag: ಕೃಷಿ ಕಾಯ್ದೆ

  • ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ

    ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ

    ರಾಯಚೂರು: ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಅಂತ ಆಗ್ರಹಿಸಿ ರಾಯಚೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಹೋರಾಟಗಾರರು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

    ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶ್ವಾಸ ದ್ರೋಹ ಮಾಡಿದ ವರ್ಷಾಚರಣೆ ಅಂಗವಾಗಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವಲ್ಲಿ ದ್ವಂದ್ವ ನಿಲುವು ಪ್ರದರ್ಶಿಸುತ್ತಿವೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ

    ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು ಮತ್ತು ಕೋಮು ಭಾವನೆ ಕೆರಳಿಸುತ್ತಿರುವ ಸಂಘಟನೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿ ಶಾಸಕ ಡಾ.ಶಿವರಾಜ್ ಪಾಟೀಲ್‍ಗೆ ಮನವಿ ಸಲ್ಲಿಸಿದರು. ಇದನ್ನೂ ಓದಿ: ಕುಂಭಾಭಿಷೇಕಕ್ಕೆ ಮಸೀದಿಯಿಂದ ಫ್ಲೆಕ್ಸ್- ಸಮಾನತೆ ಸಾರಿದ ಕಾಫಿನಾಡ ಮುಸ್ಲಿಮರು

  • ರಾಜ್ಯದಲ್ಲಿರುವ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಏಪ್ರಿಲ್ 21ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶ: ಕೋಡಿಹಳ್ಳಿ

    ರಾಜ್ಯದಲ್ಲಿರುವ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಏಪ್ರಿಲ್ 21ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶ: ಕೋಡಿಹಳ್ಳಿ

    ಬೆಳಗಾವಿ: ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ, ಜಾನುವಾರು ಹತ್ಯೆ ಕಾಯ್ದೆ, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಯಾಗಿದ್ದು, ಇವುಗಳನ್ನು ವಾಪಾಸ್ ಪಡೆಯಬೇಕೆಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪಟ್ಟುಹಿಡಿದಿದ್ದಾರೆ.

    ಬೆಳಗಾವಿಯ ಸಾಹಿತ್ಯ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 21ರಂದು ಬಸವನಗುಡಿ ನ್ಯಾಷನಲ್‍ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ನಡೆಯಲಿದೆ. ಇದರ ಪ್ರಮುಖ ಉದ್ದೇಶ ಭಾರತ ಸರ್ಕಾರ ತಂದಂತಹ ಕೃಷಿ ಕಾಯ್ದೆಗಳನ್ನು ಶಾಸನ ಬದ್ಧವಾಗಿ ವಾಪಸ್ ಪಡೆದಾಯಿತು. ಕರ್ನಾಟಕದಲ್ಲಿ ಆ ಕಾಯ್ದೆಗಳನ್ನು ತಳಮಟ್ಟದಲ್ಲಿ ಸುಧಾರಣೆ ಮಾಡಲು ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ, ಜಾನುವಾರು ಹತ್ಯೆ ಕಾಯ್ದೆ, ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಾಗಿದೆ. ಇದನ್ನು ವಾಪಾಸ್ ಪಡೆಯಬೇಕೆಂದು ಸಿಎಂ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಕುರಿತು ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಕೃಷಿ ಕಾಯ್ದೆಯನ್ನು ಆದಷ್ಟು ಬೇಗನೆ ವಾಪಾಸ್ ಪಡೆಯದಿದ್ದರೆ ಸಮಾವೇಶದಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

    ಅಧಿವೇಶನ ಸಂದರ್ಭದಲ್ಲಿ ಇಡೀ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಕೃಷಿ ಮಾರುಕಟ್ಟೆಯ ಕಾಯ್ದೆಯ ತಿದ್ದುಪಡಿ ಅಪಾಯ ಯಾವ ರೀತಿ ಆಗುತ್ತದೆ ಎಂಬ ವಿಷಯ ಈಗಾಗಲೇ ತಿಳಿಸಲಾಗಿದೆ. ಕೃಷಿ ಮಾರುಕಟ್ಟೆಯು ಸುಮಾರು 90ರಷ್ಟು ಕಳೆದುಹೋಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಳ್ಳಲಾಗಿದೆ. ಆದರೂ ಕೂಡ ಸರ್ಕಾರದ ಚಟುವಟಿಕೆಗಳು ಇದರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದು, ನಾಗರಿಕರಾದ ನಾವು ಹೇಗೆ ಸುಮ್ಮನೆ ಇರಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 9 ಶಾಲೆಗಳಿಗೆ ಬಾಂಬ್ ಬೆದರಿಕೆ

  • ಪ್ರಧಾನಿ ಮೋದಿ ಕ್ಷಮೆ ಕೇಳುವುದು ಬೇಡ: ರಾಕೇಶ್ ಟಿಕಾಯತ್

    ಪ್ರಧಾನಿ ಮೋದಿ ಕ್ಷಮೆ ಕೇಳುವುದು ಬೇಡ: ರಾಕೇಶ್ ಟಿಕಾಯತ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ರೈತರಲ್ಲಿ ಕ್ಷಮೆ ಕೇಳುವುದರಿಂದ ವಿದೇಶದಲ್ಲಿ ಅವರ ಪ್ರತಿಷ್ಠೆಗೆ ದಕ್ಕೆ ಉಂಟಾಗುತ್ತದೆ. ಇದನ್ನು ನಾವು ಬಯಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.

    ಈ ಕುರಿತು ಟ್ವೀಟ್ ಮಾಡಿದ ಅವರು, ಪ್ರಧಾನಿ ಮೋದಿ ಕ್ಷಮೆ ಕೇಳುವುದು ನಮಗೆ ಇಷ್ಟವಿಲ್ಲ. ಜೊತೆಗೆ ವಿದೇಶದಲ್ಲಿ ಅವರ ಖ್ಯಾತಿಯನ್ನು ಕೆಡಿಸಲು ನಾವು ಬಯಸುವುದಿಲ್ಲ. ಪುನಃ ರೈತರ ಒಪ್ಪಿಗೆ ಇಲ್ಲದೆ ಕೃಷಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಕೈಗೊಂಡರೆ ಆ ಕಾನೂನನ್ನು ತರಲಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

    ಸುಮಾರು ಒಂದು ವರ್ಷದಿಂದ ಹಲವಾರು ರೈತ ಸಂಘಗಳು ಕೃಷಿ ಕಾಯ್ದೆ ರದ್ದುಗೊಳಿಸಲು ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರವು ಮೂರು ಕೃಷಿ ಕಾನೂನುಗಳನ್ನು ಕೇಂದ್ರವು ರದ್ದುಗೊಳಿಸಿತ್ತು. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

    ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೂರು ರದ್ದಾದ ಕೃಷಿ ಕಾನೂನುಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಕಾಯತ್, ಈ ಹೇಳಿಕೆಯು ರೈತರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿದೆ ಜೊತೆಗೆ ಪ್ರಧಾನಿ ಅವರನ್ನು ಅವಮಾನಿಸುತ್ತದೆ. ಒಂದು ವೇಳೆ ಕೃಷಿ ಕಾನೂನುಗಳನ್ನು ಕೇಂದ್ರವು ಪುನಃ ಪರಿಚಯಿಸಿದರೆ ಆಂದೋಲನವನ್ನು ಪುನಾರಂಭಿಸುವುದಾಗಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ: ಕೇಂದ್ರ ಕೃಷಿ ಸಚಿವ ಸ್ಪಷ್ಟನೆ

    ಈ ವಿಷಯದ ಕುರಿತು ಕೃಷಿ ಸಚಿವರು ಮಾತನಾಡಿ, ನಾಗ್ಪುರ ಕಾರ್ಯಕ್ರಮವೊಂದರಲ್ಲಿ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ. ಕೃಷಿ ಕಾನೂನುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಕೇಂದ್ರಕ್ಕೆ ಇಲ್ಲ ಎಂದು ನಂತರ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಓಮಿಕ್ರಾನ್ ಆತಂಕ – ಇಂದಿನಿಂದ ದೆಹಲಿಯಲ್ಲಿ ನೈಟ್ ಕರ್ಫ್ಯೂ

  • ರೈತ, ಸರ್ಕಾರ, ಮಾಧ್ಯಮಗಳ ನಡುವಿನ ಸೌಹಾರ್ದ ಮಾತುಕತೆ ನಿಂತು ಹೋಗಿದೆ: ಎಚ್.ಆರ್ ರಂಗನಾಥ್ ಬೇಸರ

    ರೈತ, ಸರ್ಕಾರ, ಮಾಧ್ಯಮಗಳ ನಡುವಿನ ಸೌಹಾರ್ದ ಮಾತುಕತೆ ನಿಂತು ಹೋಗಿದೆ: ಎಚ್.ಆರ್ ರಂಗನಾಥ್ ಬೇಸರ

    ಮೈಸೂರು: ದೇಶ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕೃಷಿ ವಿಚಾರದ ಬಗ್ಗೆ ರೈತರು, ಸರ್ಕಾರ ಹಾಗೂ ಮಾಧ್ಯಮಗಳು ನಡೆಸುವ ಸೌಹಾರ್ದ ಮಾತುಕತೆ ನಿಂತು ಹೋಗಿದೆ ಎಂದು ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಬೇಸರ ವ್ಯಕ್ತಪಡಿಸಿದರು.

    ರಾಜ್ಯ ಮಟ್ಟದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಸೌಹಾರ್ದ ಮಾತುಕತೆ ನಿಂತು ರೈತ ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಸಮಗ್ರ ರೈತ ಚಳವಳಿ ಕಲ್ಪನೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, ರೈತ ಈ ದೇಶದಲ್ಲಿ ಮತ ಅಲ್ಲ. ಸಮರ್ಥ ರೈತ ಹೋರಾಟ ಮತ್ತೆ ಶುರುವಾಗಬೇಕು. ರೈತ ಸಂಘಟನೆ ಹೇಳುತ್ತವೆ ಎಂದರೆ ಸರ್ಕಾರ ಆ ಮಾತು ಕೇಳಬೇಕು. ಹಿಂದಿನ ಚಳವಳಿಯ ಶಕ್ತಿ ರೈತ ಹೋರಾಟಕ್ಕೆ ಬರಬೇಕಿದೆ ಎಂದು ಹೇಳಿದರು.

    ಸರ್ಕಾರ ನೂತನ ಕಾನೂನುಗಳನ್ನು ತರುವಾಗ ರೈತರನ್ನು ಕೂರಿಸಿಕೊಂಡು ಚರ್ಚೆ ನಡೆಸಬೇಕು. ಈ ರೀತಿಯ ಸೌಜನ್ಯವನ್ನು ಸರ್ಕಾರ ಇಂದು ಕಳೆದುಕೊಂಡಿದೆ. ಇದರಿಂದಾಗಿ ಕೆಲವೊಮ್ಮೆ ಸರ್ಕಾರ ರೈತರಿಗೆ ಒಳ್ಳೆಯದಾಗುವ ಕಾನೂನನ್ನು ತಂದರೂ ಅದನ್ನು ಒಪ್ಪಿಕೊಳ್ಳದಂತ ಪರಿಸ್ಥಿತಿ ರೈತರಲಿಲ್ಲದ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

    ಕಬ್ಬು ಬೆಳೆಯುವುದು ಸುಲಭ ಎನ್ನುತ್ತಾರೆ. ಆದರೆ ರೈತನಿಗೆ ಅದರ ಕಷ್ಟ ಗೊತ್ತಿದೆ. ಕಬ್ಬಿಗೆ ಸರ್ಕಾರಗಳು ನಿಗದಿ ಪಡಿಸುವ ಬೆಲೆ ಬೇರೆ ಆಗಿರುತ್ತದೆ. ಕಾರ್ಖಾನೆಗಳು ನಿಗದಿಗೊಳಿಸುವ ಬೆಲೆಯೇ ಬೇರೆಯಾಗಿದೆ. ಇದರಿಂದಾಗಿ ರೈತ ತೊಂದರೆಗೀಡಾಗುತ್ತಾನೆ ಎಂದು ನುಡಿದರು.

    ಇತ್ತೀಚಿನ ದಿನಗಳಲ್ಲಿ ಯಾರು ರೈತರು, ಯಾರು ರೈತರಲ್ಲ ಎನ್ನುವುದೇ ತಿಳಿಯದಂತ ಪರಿಸ್ಥಿತಿ ಇದೆ. ಕೃಷಿಕರಲ್ಲದವರೂ ಕೃಷಿಕರಂತೆಯೂ, ಕೃಷಿಕರು ಕೃಷಿಕರಲ್ಲದವರಂತೆ ನಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕೃಷಿಯೇ ಆಧಾರವಾಗಿಸಿ ಸಂತೋಷದ ಜೀವನ ನಡೆಸಬಹುದು. ಆದರೆ ಏಕ ಧಾನ್ಯ ಪದ್ಧತಿಯಲ್ಲಿ ಸಿಲುಕಿಕೊಂಡಿರುವವರು, ಇದನ್ನೆ ನಾವು ಮಾಡಬೇಕು ಎಂದು ಹಠಕ್ಕೆ ಬಿದ್ದವರು ತೊಂದರೆಗೀಡಾಗುತ್ತಿದ್ದಾರೆ. ಕೃಷಿಕನಿಗೆ ಶ್ರಮದ ಜೊತೆಗೆ ಬುದ್ಧಿವಂತಿಕೆಯು ಇದ್ದರೆ ಸುಖಕರ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.

    ಒಂದು ನೋಟಿಸ್ ಅಥವಾ ಬೆಳೆ ನಷ್ಟಕ್ಕೆ ಹೆದರಿ ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಾವಿರಾರು ರೂಪಾಯಿ ದೋಚಿಕೊಂಡು ವಿದೇಶಕ್ಕೆ ಓಡಿ ಹೋದವರೇ ರಾಜಾರೋಷವಾಗಿ ಬದುಕುತ್ತಿದ್ದಾರೆ. ಅಂತವರೇ ಬದುಕಿದ್ದಾಗ ನಾವು ಈ ಚಿಕ್ಕಪುಟ್ಟ ಸಮಸ್ಯೆಗೆ ಹೆದರಬಾರದು ಎಂದು ಧೈರ್ಯ ತುಂಬಿದರು. ಇದನ್ನೂ ಓದಿ: ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ

    ಜಾಗತಿಕ ತಾಪಮಾನದ ಏರಿಳಿತಗಳು ನಮ್ಮನ್ನು ಎಲ್ಲಿಗೆ ತೆಗದುಕೊಂಡು ಹೋಗುತ್ತಿದೆ ಎನ್ನುವುದಕ್ಕೆ ಈ ವರ್ಷ ಮಾದರಿಯಾಗಿದೆ. ವಿಚಿತ್ರವಾದ ಹವಾಮಾನ ಏರು ಪೇರಾಗುತ್ತಿದೆ. ಇದು ಬೆಳೆಗಳ ಮೇಲೂ, ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಬೇಸರಿಸಿದರು.

    ಸಮಸ್ಯೆ ನಿವಾರಣೆಯಾಗುತ್ತಿಲ್ಲ:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ರೈತನಿಗೆ ಸೇರಿದ್ದು. ಈ ಸತ್ಯ ರಾಜಕೀಯ ಪಕ್ಷಗಳಿಗೆ ಅರ್ಥವಾಗಬೇಕು. ಈ ಮನೋಭಾವ ಬಂದರೆ ರೈತರ ಕಲ್ಯಾಣ ಸಾಧ್ಯ. ಚಳವಳಿ, ರಾಜಕಾರಣದ ನಡುವೆ ಸಂಬಂಧ ಇರಬೇಕಿತ್ತು. ಆದರೆ ಈ ಸಂಬಂಧ ಇಲ್ಲದ ಕಾರಣ ರೈತರ ಕಲ್ಯಾಣ ಆಗುತ್ತಿಲ್ಲ. ಆಹಾರ ಉತ್ಪಾದನೆ ಹೆಚ್ಚಾದರೂ ರೈತನ ಸಮಸ್ಯೆ ನಿವಾರಣೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ

    ಮೈಷುಗರ್ ಬಗ್ಗೆ ಮಾತನಾಡಿ, ಮೈಷುಗರ್‌ನಲ್ಲಿ ಕಬ್ಬು ಅರೆಯುವ ವ್ಯವಸ್ಥೆ ಬೇಗ ಪುನಾರಂಭವಾಗುತ್ತದೆ. ಶ್ರೀರಾಮ ಸಕ್ಕರೆ ಕಾರ್ಖಾನೆ ಖಾಸಗಿ ಅವರು ತೆಗೆದು ಕೊಂಡಿದ್ದಾರೆ. ಇದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ನಿವಾರಿಸಿ ಬೇಗ ಕಾರ್ಖಾನೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.

    ಗಂಭೀರವಾಗಿ ಪರಿಗಣಿಸಿ: ಕುರುಬೂರು ಶಾಂತಕುಮಾರ್ ಮಾತನಾಡಿ, ಆಹಾರ ಉತ್ಪಾದನೆ ಹೆಚ್ಚಾಗಿದ್ದರೂ ರೈತರ ಬಾಳು ಹಸನಾಗಿಲ್ಲ. ಸರಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

    ರೈತನದು ಅನಿಶ್ಚಿತತೆಯ ಬದುಕು. ರೈತನ ಬದುಕು ನಿಶ್ಚಿತತೆಗೆ ತರುವ ಕೆಲಸ ಆಗಬೇಕಿದೆ. ಕೃಷಿಯ ಉಪ ಚಟುವಟಿಕೆಗಳನ್ನು ರೂಪಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಬದ್ಧತೆಯಿಂದ ಚಿಂತನೆ ನಡೆಸಿದೆ. ರೈತನ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಖಾಸಗಿ ಮಾರುಕಟ್ಟೆ ಎಪಿಎಂಸಿ ಕಾಯ್ದೆಗಿಂತಾ ಮುಂಚೆಯೇ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಖಾಸಗಿ ಮಾರುಕಟ್ಟೆ ಆರಂಭಿಸಿ ಬಹಳ ವರ್ಷ ಆಗಿದೆ. ಖಾಸಗಿ ಮಾರುಕಟ್ಟೆ ಈಗ ಬಂದಿದಲ್ಲ ಎಂದರು. ಇದನ್ನೂ ಓದಿ: ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ: ರಾಜಾಸಿಂಗ್ ಠಾಕೂರ್

    ಈ ಕಾರ್ಯಕ್ರಮದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ಗೆ ರೈತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಶ್ರೀಗಳು, ಹಿರಿಯ ಪತ್ರಕರ್ತರಾದ ರವಿ ಹೆಗಡೆ ಭಾಗಿಯಾಗಿದ್ದರು.

  • ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

    ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

    – ಪಂಜಾಬ್‍ನ 177 ಕ್ಷೇತ್ರದಲ್ಲೂ ಸ್ಫರ್ಧೆ
    – 32ರ ಪೈಕಿ 22 ಸಂಘಟನೆಗಳಿಂದ ರಂಗ ಘೋಷಣೆ

    ಚಂಡೀಗಢ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷಕ್ಕೂ ಅಧಿಕ ಅವಧಿ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದ ರೈತ ಸಂಘಟನೆಗಳು ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆ ಅಖಾಡಕ್ಕೆ ಧುಮುಕಲು ನಿರ್ಧರಿಸಿವೆ.

    ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್‍ನ 32 ರೈತ ಸಂಘಟನೆಗಳ ಪೈಕಿ 22 ಸಂಘಟನೆಗಳು ಒಗ್ಗೂಡಿ ಸಂಯುಕ್ತ ಸಮಾಜ್ ಮೋರ್ಜಾ (SSM) ಹೆಸರಿನಲ್ಲಿ 177 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ನಿನ್ನೆ ಘೋಷಿಸಿದೆ. ಇದನ್ನೂ ಓದಿ: ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ರೈತ ನಾಯಕ ಬಲಬೀರ್ ಸಿಂಗ್ ರಾಜೇವಾಲ್ ಅವರು ಎಸ್‍ಎಸ್‍ಎಂ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ

    ನಿನ್ನೆ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಸ್ಪರ್ಧೆ ಘೋಷಣೆ ಮಾಡಿದ ರೈತ ನಾಯಕ ಬಲದೇವ ಸಿಂಗ್, ಪಂಜಾಬ್‍ಗೆ ನಮ್ಮ ರಂಗ ಹೊಸ ದಿಕ್ಕು ತೋರಿಸಲಿದೆ. ಆದರೆ ನಮ್ಮದು ರಾಜಕೀಯ ಪಕ್ಷವಲ್ಲ. ರಂಗ ( ಮೋರ್ಚಾ) ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

    ರಾಜೇವಾಲ್ ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಬದಲಾವಣೆ ತರಲು ಈ ನಿರ್ಧಾರ ಕೈಗೊಂಡಿದ್ದೇವೆ. 177 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದಾರೆ. ಮೈತ್ರಿ ಮಾಡಿಕೊಳ್ಳುವುದರ ಕುರಿತಾಗಿ ಯಾವುದೇ ತೀರ್ಮಾನಿಸಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ: ಕೇಂದ್ರ ಕೃಷಿ ಸಚಿವ ಸ್ಪಷ್ಟನೆ

  • ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಸಿಎಂ ಭರವಸೆ ನೀಡಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್

    ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಸಿಎಂ ಭರವಸೆ ನೀಡಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್

    ಶಿವಮೊಗ್ಗ: ರೈತ ಸಂಬಂಧಿಸಿದ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿರುವುದಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಬೆಳಗಾವಿ ಅಧಿವೆಶನದ ವೇಳೆ ಕೃಷಿ ಕಾಯ್ದೆ ಹಿಂಪಡೆಯುವಂತೆ ರಾಜ್ಯದ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದ್ದರು. ಸದ್ಯ ಈ ಸಂಬಂಧಿ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಮುಖ್ಯಮಂತ್ರಿ ಅವರು ರೈತರ ಜೊತೆ ಚರ್ಚೆ ಮಾಡಿದ್ದಾರೆ. ಬೆಳಗಾವಿ ಅಧಿವೇಶನ ಅವಧಿ ಕಡಿಮೆ ಸಮಯ ಇದೆ. ಇನ್ನು 20-25 ದಿನದಲ್ಲಿ ಮತ್ತೆ ಬೆಂಗಳೂರಿನಲ್ಲಿ ಅಧಿವೇಶನ ನಡೆಸುತ್ತೇವೆ. ಆ ಸಂದರ್ಭದಲ್ಲಿ ರೈತ ಸಂಬಂಧಿಸಿದ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದಿದೆ. ಹೀಗಾಗಿ ನಾವು ಕೂಡಾ ವಾಪಸ್ ಪಡೆಯುತ್ತೇವೆ ಎಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸುವರ್ಣಸೌಧ ಮುತ್ತಿಗೆ ಯತ್ನ ವಿಫಲ – ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರು ಪೊಲೀಸರ ವಶಕ್ಕೆ

    ದೆಹಲಿಯ ಹೋರಾಟಕ್ಕೂ ಮೀರಿದ ಹೋರಾಟ ನಡೆಸಲು ರಾಜ್ಯದ ರೈತರು ಸಿದ್ದರಿದ್ದಾರೆ. ಸರ್ಕಾರದ ನಡೆಯನ್ನು ನೋಡಿ ತೀರ್ಮಾನ ಕೈಗೊಳ್ಳುತ್ತೇವೆ. ಬೆಳೆಹಾನಿ ಪರಿಹಾರ ನೀಡುವ ವಿಚಾರದ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇವೆ. ಆದರೆ ಮುಖ್ಯಮಂತ್ರಿ ಅವರು ಖುರ್ಚಿಯ ಸುತ್ತಾ ಬ್ಯುಸಿ ಆಗಿದ್ದಾರೆ. ಪ್ರಾಕೃತಿಕವಾಗಿ ಬಹಳ ದೊಡ್ಡ ನಷ್ಟ ಆಗಿದೆ. ಸರ್ಕಾರ ಘೋಷಣೆ ಮಾಡಿದ ಪರಿಹಾರ ಇನ್ನೂ ತಲುಪಿಲ್ಲ. ಸರ್ಕಾರಕ್ಕೆ ಇಚ್ಚಾಶಕ್ತಿ ಇಲ್ಲದ ಕಾರಣ ರೈತರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ರೈತರಿಗೆ ಓಬಿರಾಯನ ಕಾಲದ ಪರಿಹಾರ ನೀಡುತ್ತಿದ್ದಾರೆ. ಎಂಎಲ್‍ಎ ವೇತನ, ಎಂಪಿ ವೇತನ, ಅಧಿಕಾರಿಗಳ ವೇತನ ಎಷ್ಟು ಬಾರಿ ಹೆಚ್ಚಳ ಆಯಿತು. ರೈತರಿಗೆ ಪರಿಹಾರ ಕೊಡಲು ಚೌಕಾಸಿ ಮಾಡುತ್ತಿದ್ದಾರೆ. ಓಬಿರಾಯನ ಕಾಲದ ಪರಿಹಾರ ನಿಲ್ಲಿಸಿ, ಬದಲಾವಣೆ ಮಾಡಿ. ವೈಜ್ಞಾನಿಕವಾದ ರೀತಿಯಲ್ಲಿ ಪರಿಹಾರ ಕೊಡಿ ಎಂದು ಕಿಡಿಕಾರಿದ್ದಾರೆ.

    ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಎಂಇಎಸ್ ಪುಂಡಾಟಿಕೆಯನ್ನು ಇಡೀ ರಾಜ್ಯದ ತುಂಬಾ ಚರ್ಚೆ ಮಾಡಬೇಕಿತ್ತಾ. ಯಾರೂ ಪುಂಡರು ಇದ್ದಾರೆ ಅವರನ್ನು ಒದ್ದು ಒಳಗೆ ಹಾಕಬೇಕು. ರೌಡಿಶೀಟ್ ಓಪನ್ ಮಾಡಬೇಕು, ಗಡಿಪಾರು ಮಾಡಬೇಕು. ಅದೇ ದೊಡ್ಡ ಸುದ್ದಿ ಏನು. ಕನ್ನಡ ಬಾವುಟ ಸುಟ್ಟು ಹಾಕುವುದಿರಲಿ, ಮಹಾತ್ಮರ ಪುತ್ಥಳಿ ಧ್ವಂಸ ಮಾಡಿದರೇ ನೋಡಿಕೊಂಡು ಸುಮ್ಮನಿರಬೇಕಾ. ಯಾರೇ ಇದ್ದರೂ ಅಂತಹವರ ವಿರುದ್ಧ ಕ್ರಮ ಕೈಗೊಂಡು, ರಾಜ್ಯದಿಂದ ಕುತ್ತಿಗೆ ಹಿಡಿದು ಹೊರಗೆ ತಳ್ಳಿ. ಗಡಿ ಭಾಗದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಓಟ್ ಇದ್ದಾವೆ. ಕೆಲವರು ಮಾತನಾಡುತ್ತಾರೆ, ಇನ್ನೂ ಕೆಲವರು ಹಾಗೆ ಸುಮ್ಮನಿರುತ್ತಾರೆ. ರಾಜಕೀಯ ಲಾಭದ ನಿರೀಕ್ಷೆ ಇಟ್ಟುಕೊಂಡು ಮಾತನಾಡುತ್ತಾರೆ. ರಾಜ್ಯದ ಹಿತಾಸಕ್ತಿ ಬಂದಾಗ, ನಮ್ಮ ಎಲ್ಲಾ ಧ್ವನಿ, ತೀರ್ಮಾನ ಒಂದೇ ಆಗಿರಬೇಕು. ಎಂಇಎಸ್ ಕೈವಾಡ ಇದೆ, ಇಲ್ಲ ಎಂಬ ಪ್ರಶ್ನೆಯೇ ಬೇಡ. ಯಾರು ಕಿಡಿಗೇಡಿಗಳು ಇದ್ದಾರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ

  • ದೆಹಲಿಯಿಂದ ಮನೆಗಳತ್ತ ಮುಖಮಾಡಿದ ರೈತರು- ಪೊಲೀಸರಿಂದ ಬ್ಯಾರಿಕೇಡ್ ತೆರವು

    ದೆಹಲಿಯಿಂದ ಮನೆಗಳತ್ತ ಮುಖಮಾಡಿದ ರೈತರು- ಪೊಲೀಸರಿಂದ ಬ್ಯಾರಿಕೇಡ್ ತೆರವು

    ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯವಾಗಿದ್ದು, ರೈತರು ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದ್ದಾರೆ.

    ಕಳೆದ 15 ತಿಂಗಳಿಂದ ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಲು ರೈತ ಸಂಘಟನೆಗಳು ನಿರ್ಧರಿಸಿದ್ದು, ಇಂದು (ಡಿ.11ರಂದು) ಪ್ರತಿಭಟನಾ ಸ್ಥಳಗಳಿಂದ ತಮ್ಮ ಊರುಗಳಿಗೆ ತೆರಳುತ್ತೇವೆ. ವಿಜಯೋತ್ಸವ ದಿನ ಆಚರಿಸಿ ಊರುಗಳಿಗೆ ತೆರಳುವುದಾಗಿ ರೈತ ಸಂಘಟನೆಗಳು ತಿಳಿಸಿದ್ದವು. ಆದರೆ ಇತ್ತೀಚೆಗೆ ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದರು. ದುರಂತದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರೈತರು ವಿಜಯೋತ್ಸವವನ್ನು ಮುಂದೂಡಿದ್ದಾರೆ. ದೆಹಲಿ ಗಡಿಭಾಗಗಳಿಂದ ರೈತರು ಮನೆಗೆ ತಿಂದಿರುಗುತ್ತಿದ್ದಂತೆ, ಪೊಲೀಸರು ಬ್ಯಾರಿಕೇಡ್‍ಗಳನ್ನು ತೆರವುಗೊಳಿಸುತ್ತಿದ್ದಾರೆ.ಇದನ್ನೂ ಓದಿ:  ದೆಹಲಿಯಲ್ಲಿ ರೈತರ ಪ್ರತಿಭಟನೆ ಅಂತ್ಯ

    ರೈತರು ಟ್ರ್ಯಾಕ್ಟರ್ ಮೂಲಕವಾಗಿ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ರೈತರನ್ನು ಸ್ವಾಗತಿಸಲು ಹೆದ್ದಾರಿಗಳ ಉದ್ದಕ್ಕೂ ವಿಶೇಷ ವ್ಯವಸ್ಥೆಯನ್ನು ಸಂಬಂಧಿಕರು ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಗುರುವಾರ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿದ ನಂತರ ಕೆಲ ರೈತರು ಈಗಾಗಲೇ ತಮ್ಮ ಗ್ರಾಮಗಳಿಗೆ ತೆರಳಲು ಪ್ರಾರಂಭಿಸಿದ್ದಾರೆ. ಆದರೆ ಎಲ್ಲಾ ರೈತರು ವಾಪಸ್ಸಾಗಲು 4ರಿಂದ 5 ದಿನಗಳ ಸಮಯ ಬೇಕಾಗುತ್ತದೆ. ನಾನು ಡಿಸೆಂಬರ್ 15 ರಂದು ಹೊರಡುತ್ತೇನೆ ಎಂದು ರೈತರ ಪ್ರತಿಭಟನೆ ನೇತೃತ್ವ ವಹಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ಮುಂದುವರಿಯಲಿದೆ: ನಾಳೆ ಮತ್ತೆ ರೈತರ ಸಭೆ

    ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‍ಪಿ) ಕಾನೂನು ಖಾತರಿ, ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ದಾಖಲಿಸಿರುವ ಅಪರಾಧ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಒತ್ತಾಯಿಸಿದ್ದರು. ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭರವಸೆಯ ಹೊಸ ಪ್ರಸ್ತಾಪಗಳನ್ನು ರೈತರಿಗೆ ನೀಡಿತ್ತು. ರೈತರ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿದ್ದು, ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದಾರೆ. ಇದನ್ನೂ ಓದಿ: ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ – ವೀಡಿಯೋ ವೈರಲ್

  • ಕೃಷಿ ಕಾಯ್ದೆ ಹೋರಾಟದಲ್ಲಿ ರೈತರು ಸಾವನ್ನಪ್ಪಿಲ್ಲ: ನರೇಂದ್ರ ಸಿಂಗ್ ತೋಮರ್

    ಕೃಷಿ ಕಾಯ್ದೆ ಹೋರಾಟದಲ್ಲಿ ರೈತರು ಸಾವನ್ನಪ್ಪಿಲ್ಲ: ನರೇಂದ್ರ ಸಿಂಗ್ ತೋಮರ್

    ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ರೈತರು ಸಾವನ್ನಪ್ಪಿಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಯ ವಿರುದ್ಧವಾಗಿ ರೈತರು ಸರಿಸುಮಾರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ರೈತರು ತಿಳಿಸಿದ್ದಾರೆ. ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಪರಿಹಾರವನ್ನು ನೀಡಲು ಸರ್ಕಾರ ಯೋಜಿಸುತ್ತಿದೆಯೇ ಎಂದು ಕಾಂಗ್ರೆಸ್ ನಾಯಕ ಧೀರಜ್ ಪ್ರಸಾದ್ ಸಾಹು ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರ ಜಂಟಿ ಪ್ರಶ್ನೆಗೆ ತೋಮರ್ ಚಳಿಗಾಲದ ಅಧಿವೇಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ

    ಕೃಷಿ ಕಾಯ್ದೆ ವಿರೋಧಿಸಿ ನಡೆದ ರೈತರ ಹೋರಾಟದಲ್ಲಿ ಯಾರು ಸಾವನ್ನಪ್ಪಿಲ್ಲ. ರೈತರ ಉಗ್ರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಅಂದರೆ ನವೆಂಬರ್ 29ರಂದು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ. ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು, ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಸೇರಿದಂತೆ ಅವರ ಪ್ರಮುಖ ಬಾಕಿ ಇರುವ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ ನಂತರ ದೆಹಲಿ ಗಡಿಯಲ್ಲಿ ವರ್ಷವಿಡೀ ನಡೆದ ಪ್ರತಿಭಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ಗುರುವಾರ ಸ್ಥಗಿತಗೊಳಿಸಿದೆ. ಇದನ್ನೂ ಓದಿ: ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

    ಒಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರ ಸಾವಿನ ವಿಷಯವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಬಾಕಿ ಉಳಿದಿರುವ ತಮ್ಮ ಪ್ರಮುಖ ಬೇಡಿಕೆಗಳನ್ನು ಅಂಗೀಕರಿಸಿ ಕೇಂದ್ರ ಸರ್ಕಾರದಿಂದ ಔಪಚಾರಿಕ ಪತ್ರವನ್ನು ಸ್ವೀಕರಿಸಿದ ನಂತರ ಪ್ರತಿಭಟನೆಯನ್ನು ಎಸ್‍ಕೆಎಂ ಸ್ಥಗಿತಗೊಳಿಸಿದ್ದು, ರೈತರು ಡಿಸೆಂಬರ್ 11 ಅನ್ನು ‘ವಿಜಯ್ ದಿವಸ್’ ಎಂದು ಆಚರಿಸುತ್ತಾರೆ. ವಿಜಯೋತ್ಸವವನ್ನು ಕೈಗೊಂಡ ನಂತರ ಮನೆಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.

  • ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದು ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

    ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದು ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

    ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದು ಪ್ರಕ್ರಿಯೆ ಇವತ್ತು ಅಧಿಕೃತವಾಗಿ ಪೂರ್ಣಗೊಂಡಿದೆ. ಇದಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

    ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಅವರು ಘೋಷಿಸಿದ ಬಳಿಕ ಸಂಸತ್ ಅಧಿವೇಶನದಲ್ಲಿ ಕಾಯ್ದೆಗಳನ್ನು ಹಿಂಪಡೆಯುವ ಮಸೂದೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಮುಂದಾಯಿತು. ಚರ್ಚೆಗೆ ಒಳಪಡಿಸದೇ ಮಸೂದೆಗಳ ಅಂಗೀಕಾರ ಸರಿಯಲ್ಲ. ಪ್ರತಿಭಟನೆ ವೇಳೆ ನೂರಾರು ರೈತರು ಸಾವನ್ನಪ್ಪಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ಹೀಗಾಗಿ ಮಸೂದೆಯನ್ನು ಚರ್ಚೆಗೆ ಒಳಪಡಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿದ್ದವು. ಪ್ರತಿಪಕ್ಷಗಳ ವಿರೋಧದ ನಡುವೆಯೂ ಮಸೂದೆಗೆ ಅಂಗೀಕಾರ ನೀಡಲಾಗಿದ್ದು, ಇದೀಗ ಅಧಿಕೃತವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಇದನ್ನೂ ಓದಿ: ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಬಗ್ಗೆ ದಾಖಲೆಗಳಿಲ್ಲ, ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ: ಕೇಂದ್ರ ಸರ್ಕಾರ

    ಸಂಸತ್ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಹೋರಾಟ ನಡೆಸುವ ವೇಳೆ ಸಾವನ್ನಪ್ಪಿದ ರೈತರ ಬಗ್ಗೆ ತಮ್ಮ ಬಳಿ ಮಾಹಿತಿ ಇಲ್ಲ. ಹೀಗಾಗಿ ಪರಿಹಾರ ನೀಡುವ ಪ್ರಶ್ನಯೇ ಉದ್ಭವಿಸಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಸಂಸತ್‍ಗೆ ಲಿಖಿತ ಉತ್ತರ ನೀಡಿದ್ದಾರೆ. ತೋಮರ್ ಉತ್ತರಕ್ಕೆ ವಿಪಕ್ಷಗಳು ತೀವ್ರ ಆಕ್ರೋಶ ಹೊರಹಾಕಿವೆ. ಹುತಾತ್ಮ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು. ವಿಪಕ್ಷಗಳು ರೈತ ಸಂಘಗಳ ಮುಖಂಡರು ಹೇಳುವ ಪ್ರಕಾರ, ಹೋರಾಟದ ವೇಳೆ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ, ರೈತರ ಉತ್ಪನ್ನಗಳಿಗೆ ಎಂಎಸ್‍ಪಿ ನೀಡುವ ಸಂಬಂಧ ಕೇಂದ್ರ ಸರ್ಕಾರ ರಚಿಸಲಿರುವ ಸಮಿತಿಗೆ ಐವರ ಹೆಸರು ಸೂಚಿಸುವಂತೆ ರೈತ ಸಂಘಟನೆಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ, ಡಿಸೆಂಬರ್ 4ರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ರೈತ ಸಂಘಟನೆಗಳು ತಿಳಿಸಿವೆ. ಇದನ್ನೂ ಓದಿ: ಮೈತ್ರಿ ಬಗ್ಗೆ ಪ್ರಧಾನಿ ಮೋದಿ, ಅಮಿತ್‌ ಶಾ ಜೊತೆ ಮಾತನಾಡಿದ್ದೇನೆ: ಅಮರೀಂದರ್‌ ಸಿಂಗ್‌

  • ಪಾರ್ಲಿಮೆಂಟ್ ಟ್ರ್ಯಾಕ್ಟರ್ ರ್‍ಯಾಲಿ ರದ್ದುಗೊಳಿಸಿದ ಸಂಯುಕ್ತ ಕಿಸಾನ್ ಮೋರ್ಚಾ

    ಪಾರ್ಲಿಮೆಂಟ್ ಟ್ರ್ಯಾಕ್ಟರ್ ರ್‍ಯಾಲಿ ರದ್ದುಗೊಳಿಸಿದ ಸಂಯುಕ್ತ ಕಿಸಾನ್ ಮೋರ್ಚಾ

    ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ ನವೆಂಬರ್ 29ರಂದು ಸಂಸತ್ತಿಗೆ ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರ್‍ಯಾಲಿಯನ್ನು ರದ್ದುಗೊಳಿಸಿದೆ. ಮುಂದಿನ ಹೋರಾಟದ ಬಗ್ಗೆ ಮುಂದಿನ ತಿಂಗಳು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

    ಮೂರು ಕೃಷಿ ಕಾಯ್ದೆಯನ್ನು ಸಂಸತ್ತಿನಲ್ಲಿ ವಾಪಸ್ ಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಆದರೆ ಕೇಂದ್ರ ಕೃಷಿ ಸಚಿವರ ಮನವಿ ಮೇರೆಗೆ ಮೆರವಣಿಗೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದರು.

    ರೈತರು ಹುಲ್ಲಿಗೆ ಬೆಂಕಿ ಹಾಕುವುದು ಅಪರಾಧವಲ್ಲ ಎಂಬ ಮಸೂದೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ದನ್ನೂ ಓದಿ: ಅಸಹ್ಯವಾಗಿ ನೋಡಿ ಹಿಂಭಾಗದಿಂದ ಅಪ್ಪಿಕೊಂಡ್ರು- ಶೃತಿ ದೂರಿನಲ್ಲಿ ಬೆಚ್ಚಿ ಬೀಳೋ ಆರೋಪ

    ಚಳಿಗಾಲ ಅಧಿವೇಶನದಲ್ಲಿ ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವ ಮಸೂದೆಯನ್ನು ಜಾರಿಗೊಳಿಸಲಾಗುವುದು. ಹಾಗೆಯೇ ಅಂದೇ ಈ ಎಲ್ಲ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದ್ದರು.

    ಕೃಷಿ ಕಾಯ್ದೆ ವಿರುದ್ಧ ಕಳೆದ ಒಂದು ವರ್ಷದಿಂದ ಸಂಯುಕ್ತ ಕಿಸಾನ್ ಮೊರ್ಚಾ ಹಾಗೂ ಇನ್ನಿತರೆ ರೈತ ಸಂಘಟನೆಗಳು ಪ್ರತಿಭಟನೆಯನ್ನು ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೃಷಿ ಕಾಯ್ದೆಯನ್ನು ವಾಪಸ್ ಪಡೆದು ಸಂಸತ್ತಿನಲ್ಲಿ ಮಸೂದೆಯನ್ನು ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ದನ್ನೂ ಓದಿ: #MeToo ಪ್ರಕರಣ – ನಟಿ ಶೃತಿ ಹರಿಹರನ್‌ಗೆ ನೋಟಿಸ್

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಕೆಎಂ ಮುಖಂಡ ದರ್ಶನ್‍ಪಾಲ್ ಅವರು, ನಾಳೆ ಮೆರವಣಿಗೆಯನ್ನು ರದ್ದುಗೊಳಿಸಿದ್ದೇವೆ. ರೈತರ ಮೇಲೆ ದಾಖಲಾಗಿದ್ದ ಎಲ್ಲಾ ದೂರುಗಳನ್ನು ಹಿಂಪಡೆಯಲು ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇವೆ, ಸಚಿವ ಅಜಯ್ ಮಿಶ್ರಾ ಅವರನ್ನು ಅಮಾನತುಗೊಳಿಸವುದು ಸೇರಿದಂತೆ ಇನ್ನಿತರೆ ಬೇಡಿಕೆಯನ್ನು ಈಡೇರಿಸುವ ನಿರೀಕ್ಷೆಯಿದೆ. ಈ ಬಗ್ಗೆ ಡಿ.4ರಂದು ಎಸ್‍ಕೆಎಂ ಮತ್ತೊಮ್ಮೆ ಸಭೆ ನಡೆಸಲಿದೆ ಎಂದು ಮಾಹಿತಿ ನೀಡಿದರು.

    ಸರ್ಕಾರವೂ ರೈತರೊಂದಿಗೆ ಸಂವಾದವನ್ನು ಪ್ರಾರಂಭಿಸಬೇಕು ಎಂದು ಎಸ್‍ಕೆಎಂ ಒತ್ತಾಯಿಸಿದೆ. ಇತ್ತೀಚೆಗಷ್ಟೇ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದರು.

    ಸರ್ಕಾರದ ಕ್ರಮವನ್ನು ರೈತ ಸಂಘಗಳು ಸ್ವಾಗತಿಸಿದ್ದವು. ಆದರೆ ಆ ಕಾಯ್ದೆಗಳನ್ನು ಕಾನೂನು ರೀತಿಯಲ್ಲಿ ಹಿಂಪಡೆಯುವವರೆಗೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ವಿವಿಧ ರೈತ ಸಂಘಗಳು ತಿಳಿಸಿದ್ದವು.