Tag: ಕೃಷಿ ಇಲಾಖೆ

  • ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್ ನೇಮಕ

    ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್ ನೇಮಕ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜ್ಯ ಸರ್ಕಾರದರ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ ಎಂದು ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

    ಯಾವುದೇ ಗೌರವ ಧನ, ಸಂಭಾವನೆ ಪಡೆಯದೆ ಚಾಲೆಂಜಿಂಗ್ ಸ್ಟಾರ್ ರೈತರ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಡಿ ಫ್ಯಾನ್ಸ್ ಅಭಿಮಾನಿಗಳಲ್ಲಿ ಈ ವಿಚಾರ ತಿಳಿದು ಸಂತಸ ಮನೆಮಾಡಿದೆ.

    ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಿಸುವ ಸಂದೇಶ ಸಾರುವ ರಾಯಭಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಕಾಡಿದ್ದರೆ ನಾಡು ವನವಿದ್ದರೆ ಜೀವನ ಎಂದು ಸಾರಿದ್ದರು. ಇದೀಗ ನೇಗಿಲಯೋಗಿ ಪರ ನಿಂತು ಪ್ರೋತ್ಸಾಹ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.

    ಸಿನಿಮಾಗಳಿಂದ ಮಾತ್ರವಲ್ಲದೆ ಹಲವು ಒಳ್ಳೆ ಕಾರ್ಯಗಳಿಂದ ದರ್ಶನ್ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅನ್ನದಾತನ ರಾಯಭಾರಿಯಾಗಿ ನಿಂತಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು, ನೆಟ್ಟಿಗರು ಮೆಚ್ಚಿ ಉತ್ತಮ ಪ್ರಶಂಸೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

    ರಾಜ್ಯದ ಕೃಷಿ ಇಲಾಖೆಯಲ್ಲಿ ಹಲವಾರು ಮಹತ್ತರ ಬದಲಾವಣೆ ಹಾಗೂ ನಾಡಿನ ಯುವ ಜನತೆಗೆ “ವೀಕೆಂಡ್ ಅಗ್ರಿಕಲ್ಚರ್ ಸಂಸ್ಕøತಿ” ಪರಿಚಯಿಸುವ ನಮ್ಮ ಪ್ರಯತ್ನಕ್ಕೆ ಮುಕ್ತ ಮನಸ್ಸಿನಿಂದ ಕೈ ಜೋಡಿಸಿರುವ ದರ್ಶನ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಚಿತ್ರರಂಗದ ವೃತ್ತಿ ಬದುಕಿನ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವ ದರ್ಶನ್ ಅವರು ನಾಡಿನ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಅಲ್ಲದೇ, ಅವರ ಪರಿಸರ ಪ್ರಜ್ಞೆ, ಪ್ರಾಣಿ ಸಂರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳೆಡಗಿನ ಒಲವು ಇಂದಿನ ಯುವ ಕೃಷಿಕರಿಗೆ ಮಾದರಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

  • ಹುಟ್ಟಹಬ್ಬದಂದೇ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಮಾಡಿದ್ರು ಬಿ.ಸಿ ಪಾಟೀಲ್!

    ಹುಟ್ಟಹಬ್ಬದಂದೇ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಮಾಡಿದ್ರು ಬಿ.ಸಿ ಪಾಟೀಲ್!

    ಮಂಡ್ಯ: ಗ್ರಾಮ ವಾಸ್ತವ್ಯ ಮಾದರಿಯಲ್ಲಿ ರೈತರೊಂದಿಗೆ ವಾಸ್ತವ್ಯ ಮಾಡಲು ಕೃಷಿ ಸಚಿವ ಬಿಸಿ ಪಾಟೀಲ್ ರೈತರೊಂದಿಗೆ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದ್ದು, ಮಂಡ್ಯದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆಗೆ ಚಾಲನೆ ನೀಡಿದರು. ತಮ್ಮ ಹುಟ್ಟಹಬ್ಬದ ದಿನದಂದೇ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

    ಕೆ.ಆರ್. ಪೇಟೆ ತಾಲೂಕಿನ ಮಡುವಿನಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ನಾನು ವಾಸ್ತವತೆಯನ್ನು ಅರಿಯುತ್ತಿದ್ದೇನೆ. ನಾನು ಅವರನ್ನು ಕಾಪಿ ಮಾಡುತ್ತಿಲ್ಲ. ಅವರು ಗ್ರಾಮದಲ್ಲಿ ಇದ್ದು ಮಲಗಿ ಹೋಗುತ್ತಿದ್ದರು. ನಾನು ಬೆಳಗ್ಗಿಯಿಂದ ರಾತ್ರಿವರೆಗೂ ಇದ್ದು ವಾಸ್ತವತೆ ಅರಿಯುತ್ತಿದ್ದೇನೆ. ಪ್ರತಿ ಜಿಲ್ಲೆಗೂ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸುತ್ತೇವೆ. ನಾವು ಮಾಡುವ ಕಾರ್ಯಕ್ರಮದಿಂದ ರೈತರ ಸಮಸ್ಯೆ ತಿಳಿಯುತ್ತದೆ. ತಿಂಗಳಿಗೆ ಮೂರು ದಿನ ಈ ಕಾರ್ಯಕ್ರಮ ಮಾಡುತ್ತೇನೆ. ಎಲ್ಲಾ ಜಿಲ್ಲೆ ಸುತ್ತಿದ ಬಳಿಕ ಸಿಎಂಗೆ ವರದಿ ನೀಡುತ್ತೇನೆ. ರೈತರ ಸಂಕಷ್ಟಗಳನ್ನು ಹೇಗೆ ನಿವಾರಿಸಬಹುದು ಎಂದು ಯೋಚನೆ ಮಾಡುತ್ತೇವೆ. ನಾನು ರೈತನ ಮಗನಾಗಿದ್ದು, ಮೊದಲೆಲ್ಲಾ ನಾನು ಎಲ್ಲಾ ಕೆಲಸವನ್ನು ಮಾಡಿದ್ದೇನೆ. ಪೊಲೀಸ್ ಇಲಾಖೆಗೆ, ಸಿನಿಮಾಗೆ ಬಂದ ಮೇಲೆ ಅನುಭವ ಕಡಿಮೆಯಾಗಿದೆ. ಹೀಗಾಗಿ ಮೈ ಸ್ವಲ್ಪ ಬಗ್ಗುತ್ತಿಲ್ಲ. ಈಗ ಮತ್ತೆ ಮೈ ಬಗ್ಗಿಸಿದ್ರೆ ರೈತರ ರೀತಿ ಕೆಲಸ ಮಾಡುತ್ತೇವೆ ಎಂದರು.

    ಜಿಲ್ಲೆಯ ಮಡುವಿನಕೋಡಿ ಗ್ರಾಮದ ಹೊರಹೊಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಬಿಸಿ ಪಾಟೀಲ್ ಕಬ್ಬು ತರಗು ನಿವರ್ಹಣೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಚಾಲನೆ ನೀಡಿದರು. ಅಲ್ಲದೇ ಮಾಯಿಗೌಡ ಅವರ ಜಮೀನಿನಲ್ಲಿ ರೈತ ಮಹಿಳೆಯರೊಂದಿಗೆ ರಾಗಿ ನಾಟಿ ಮಾಡಿದರು. ಜೈ ಕಿಸಾನ್ ಘೋಷಣೆ ಕೂಗೂತ್ತ ಸಚಿವರು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.

    ಬಳಿಕ ಕೆಆರ್ ಪೇಟೆ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿರುವ ಲಕ್ಷ್ಮೀ ದೇವಮ್ಮ ಅವರ ಸಮಗ್ರ ಕೃಷಿ ತೋಟಕ್ಕೆ ಭೇಟಿ ಕೊಟ್ಟ ಸಚಿವರು, ಭತ್ತದ ಗದ್ದೆ ವೀಕ್ಷಿಣೆ ಮಾಡಿ ಗೊಬ್ಬರವನ್ನು ಚೆಲ್ಲುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸು ಮತ್ತು ಕುರಿಗಳ ಮೇವಿಗಾಗಿ ಹಲ್ಲು ಕಟಾವು ಮಾಡಿದರು. ಬಿಸಿ ಪಾಟೀಲ್ ಅವರಿಗೆ ಸಚಿವ ನಾರಾಯಣಗೌಡ ಸಾಥ್ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ತೋಟಗಾರಿಕಾ ಸಚಿವರಾದ ನಾರಾಯಣಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರಿಗೆ, ಕಾರ್ಯಕರ್ತರು ಶುಭಾಶಯ ಕೋರಿದರು.

    ರೈತರಿಗೆ ಆತ್ಮಸ್ಥೆರ್ಯ ತುಂಬುವ, ಸಮಗ್ರ ಕೃಷಿ ಮತ್ತು ಉತ್ಪಾದನಾ ವೆಚ್ಚ ಹಾಗೂ ರೈತರ ಆತ್ಮಹತ್ಯೆ ಕಾರಣ ಏನು ಎಂಬುದನ್ನು ತಿಳಿಯುವುದು. ಮಾದರಿ ರೈತರನ್ನು ಭೇಟಿ ಮಾಡಿ ಅವರ ಅನುಭವ ಬೇರೆ ರೈತರಿಗೆ ಮಾದರಿಯಾಗುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿ ತಿಂಗಳು 2 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 7 ರಿಂದ ದಿನಪೂರ್ತಿ ರೈತರೊಂದಿಗೆ ಇದ್ದು, ಸಮಗ್ರ ಮಾಹಿತಿ ಸಂಗ್ರಹಿಸಿ ಕೃಷಿ ಇಲಾಖೆಯಲ್ಲಿ ಹೊಸ ಬದಲಾವಣೆ ಮಾಡಲು ಸಚಿವರು ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.

  • ಕೃಷಿ ಇಲಾಖೆ ಮೂವರು ನೌಕರರು ಕೊರೊನಾಗೆ ಬಲಿ

    ಕೃಷಿ ಇಲಾಖೆ ಮೂವರು ನೌಕರರು ಕೊರೊನಾಗೆ ಬಲಿ

    ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೂ ಮಹಾಮಾರಿ ಕೊರೊನಾ ಕಾಟ ಹೆಚ್ಚಾಗಿದ್ದು, ಕೃಷಿ ಇಲಾಖೆಯ ಮೂರು ಮಂದಿ ನೌಕರರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

    ಕಳೆದ ಎರಡು ದಿನಗಳಲ್ಲಿ ಕೃಷಿ ಇಲಾಖೆ ಮೂರು ಮಂದಿ ನೌಕರರು ಸಾವನ್ನಪ್ಪಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಲ್ಲೂ ಕೂಡ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಧಿಕೃತ ಮಾಹಿತಿ ನೀಡಿದ್ದಾರೆ.

    ಜಿಲ್ಲಾ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಸೇರಿ ಮೂವರು ಸಾವ್ನಪ್ಪಿದ್ದಾರೆ. ಮಹಾಮಾರಿ ಕೋವಿಡ್ ಸೋಂಕಿನಿಂದ ಸಹಾಯಕ ನಿರ್ದೇಶಕ ಹಾಗೂ ಇಬ್ಬರು ಎಫ್‍ಡಿಎ ನೌಕರರು ಬಳಲುತ್ತಿದ್ದರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆಂದು ಡಿಸಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

  • ಬೀದರಿಗೆ ಮಿಡತೆ ಸೈನ್ಯ ದಾಳಿ ಸಾಧ್ಯತೆ – ಸಕಲ ಸಿದ್ಧತೆ ಮಾಡ್ಕೊಂಡ ಕೃಷಿ ಇಲಾಖೆ

    ಬೀದರಿಗೆ ಮಿಡತೆ ಸೈನ್ಯ ದಾಳಿ ಸಾಧ್ಯತೆ – ಸಕಲ ಸಿದ್ಧತೆ ಮಾಡ್ಕೊಂಡ ಕೃಷಿ ಇಲಾಖೆ

    ಬೀದರ್: ಪಾಕಿಸ್ತಾನದ ಮೂಲಕ ದೇಶದ ನಾನಾ ರಾಜ್ಯಗಳಿಗೆ ದಾಳಿ ಮಾಡಿರುವ ಮಿಡತೆ ಸೇನೆಗೆ ದೇಶದ ರೈತರು ಆತಂಕಗೊಂಡಿದ್ದಾರೆ. ಈ ಮಿಡತೆ ದಂಡು ಕರ್ನಾಟಕದ ಗಡಿ ಜಿಲ್ಲೆ ಬೀದರಿಗೂ ದಾಳಿ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಉತ್ತರ ಭಾರತ, ಮಹಾರಾಷ್ಟ್ರ ಆಯ್ತು, ಈಗ ಕರ್ನಾಟಕಕ್ಕೂ ಮಿಡತೆ ಆತಂಕ

    ಮಿಡತೆ ಸೈನ್ಯ 500 ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ನಾಗಪುರದಲ್ಲಿ ದಾಳಿ ಮಾಡಿವೆ. ಈ ಹಿನ್ನೆಲೆಯಲ್ಲಿ ಈ ಮಿಡತೆ ಸೈನ್ಯ ಗಡಿ ಜಿಲ್ಲೆ ಬೀದರಿಗೆ ದಾಳಿ ಮಾಡುವ ಸಾಧ್ಯತೆಯಿಂದಾಗಿ ಮಿಡತೆ ದಾಳಿ ಎದುರಿಸಲು ಬೀದರ್ ಕೃಷಿ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಪ್ರಮುಖವಾಗಿ ಜಿಲ್ಲೆಯ ಗಡಿ ಭಾಗದ ತಾಲೂಕುಗಳಾದ ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ್‍ನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಮಟೆ ಹಾಗೂ ಬಿತ್ತಿ ಪತ್ರ ಹಂಚಲು ಕೃಷಿ ಇಲಾಖೆ ನಿರ್ಧಾರ ಮಾಡಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೃಷಿ ಜಂಟಿ ನಿರ್ದೇಶಕರು ಈಗಾಗಲೇ ಸೂಚನೆ ನೀಡಿದ್ದಾರೆ. ಸೊಲ್ಲಾಪುರ ಕಡೆಯಿಂದ ಬೀದರಿಗೆ ಮಿಡತೆಗಳು ದಂಡು ಎರಡು ದಿನಗಳಲ್ಲಿ ಎಂಟ್ರಿಯಾಗುವ ಸಾಧ್ಯತೆ ಇದೆ.

    ಒಟ್ಟು 4 ಲಕ್ಷ ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಕಬ್ಬು, ತರಕಾರಿ ಹಾಗೂ ಹಣ್ಣುಗಳನ್ನು 30 ಸಾವಿರ ಎಕರೆಯಲ್ಲಿ ರೈತರು ಬೆಳೆದಿದ್ದಾರೆ. ಒಂದು ವೇಳೆ ಮಿಡತೆ ದಾಳಿ ಮಾಡಿದರೆ ಎಲ್ಲಾ ರೀತಿ ಕ್ರಿಮಿನಾಶಕಗಳನ್ನ ರೈತ ಸಂಪರ್ಕ ಕೇಂದ್ರದಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ರೈತರಿಗೆ ಒದಗಿಸುತ್ತೇವೆ ಎಂದು ಜಂಟಿ ಕೃಷಿ ನಿರ್ದೇಶಕರಾದ ವಿದ್ಯಾನಂದ ಮಾಹಿತಿ ನೀಡಿದ್ದಾರೆ.

    ಒಂದು ವೇಳೆ ಗಾಳಿ ದಿಕ್ಕು ಬದಲಾದರೆ ಮಧ್ಯಪ್ರದೇಶದ ಕಡೆ ಹೋಗುತ್ತವೆ ಎಂದು ಕೃಷಿ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದು, ಜಿಲ್ಲೆಯ ರೈತರು ಈ ಕಡೆ ಮಿಡತೆ ದಂಡು ಸುಳಿಯದಿರಲಿ ಎನ್ನುತ್ತಿದ್ದಾರೆ.

  • ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಕೊಪ್ಪಳದ ಗ್ರಾಮಸ್ಥರ ಕೈ ಹಿಡಿದ ನರೇಗಾ ಯೋಜನೆ

    ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಕೊಪ್ಪಳದ ಗ್ರಾಮಸ್ಥರ ಕೈ ಹಿಡಿದ ನರೇಗಾ ಯೋಜನೆ

    ಕೊಪ್ಪಳ: ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವ ಸಂಕಷ್ಟದ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಕೂಲಿಕಾರರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮತ್ತು ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಕೂಲಿ ಆಧಾರಿತ ಕಾಮಗಾರಿಗಳನ್ನು ಗುರುತಿಸಿಸಲಾಗಿದೆ. ಅಲ್ಲದೇ ಕೋವಿಡ್-19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೂಲಿಕಾರರಿಗೆ ಕೆಲಸವನ್ನು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

    ಕೊಪ್ಪಳ ತಾಲೂಕಿನ ಇರಕಲ್ಲಗಡಾ, ಹುಲಿಗಿ, ಅಳವಂಡಿ, ಬೆಟಗೇರಿ, ಹಲಗೇರಿ, ಬಿಸರಳ್ಳಿ, ಗುಳದಳ್ಳಿ, ಕಲ್ತಾವರಗೇರಾ, ಚಿಕ್ಕಬೊಮ್ಮನಾಳ, ಹಿರೇಬೊಮ್ಮನಾಳ, ಗೊಂಡಬಾಳ, ಕುಷ್ಟಗಿ ತಾಲೂಕಿನ ಶಿರಗುಂಪಿ, ಬಿಜಕಲ್, ಹೂಲಗೇರಾ, ಚಳಗೇರಾ, ಹಿರೇಬನ್ನಿಗೊಳ, ತಳುವಗೇರಾ, ಹನುಮನಾಳ, ಬೆನಕನಾಳ, ಮಾಲಗಿತ್ತಿ, ನಿಲೋಗಲ್, ಜುಮಲಾಪುರ, ಕಿಲ್ಲಾರಹಟ್ಟಿ, ಮೆಣೇಧಾಳ, ಯಲಬುರ್ಗಾ ತಾಲೂಕಿನ ಮುಧೋಳ, ಬಂಡಿ, ತುಮ್ಮರಗುದ್ದಿ, ಬಳೂಟಗಿ, ಬೇವೂರು, ಗೆದಗೇರಿ, ಹಿರೇವಂಕಲಕುಂಟಾ, ಚಿಕ್ಕೊಪ್ಪಾ, ಗಂಗಾವತಿ ತಾಲೂಕಿನ ಮುಸಲಾಪುರ, ಹುಲಿಹೈದರ, ಬಸರಿಹಾಳ, ಗೌರಿಪುರ, ಚಿಕ್ಕಮಾದಿನಾಳ, ಸುಳೇಕಲ್, ಆಗೋಲಿ, ನವಲಿ ಗ್ರಾಮ ಪಂಚಾಯ್ತಿಗಳಲ್ಲಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿ ಇನ್ನೂ ಮುಂತಾದ ಕೂಲಿ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ಒದಗಿಸಿ ಸಕಾಲದಲ್ಲಿ ಕೂಲಿ ಹಣ ಪಾವತಿಗೆ ಕ್ರಮವಹಿಸಲಾಗಿದೆ. ಸರ್ಕಾರದ ಆದೇಶದಂತೆ 5 ಜನರಿಗಿಂತ ಹೆಚ್ಚು ಕೂಲಿಕಾರರು ಕೆಲಸ ನಿರ್ವಹಿಸದಂತೆ ನಿಗಾವಹಿಸಿ ಮತ್ತು ಪರಸ್ಪರ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವಂತೆ ನಿಗಾವಹಿಸಲಾಗುತ್ತಿದೆ.

    ಕೃಷಿಗೆ ಪೂರಕ ನರೇಗಾ ಯೋಜನೆ :
    ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಮುಂಗಾರು ಹಂಗಾಮಿಗೆ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಕೃಷಿ ಇಲಾಖೆಯಿಂದ ಕ್ಷೇತ್ರ ಬದು ಮತ್ತು ಕಂದಕ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನೀಡಲಾಗಿದೆ.

    ನೀರಾವರಿ ಇರುವ ಪ್ರದೇಶಗಳಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕಾಮಗಾರಿಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚಿಸಿಕೊಳ್ಳಲು ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರಯೋಜನಕಾರಿಯಾಗಿವೆ.

    ಸಂಕಷ್ಟದ ಜನತೆಗೆ ಪರಿಹಾರವಾದ ನರೇಗಾ:
    ಕೊರೊನಾ ಸಂಕಷ್ಟದಿಂದ ಎಲ್ಲಾ ಕಡೆ ಉದ್ಯೋಗಗಳು ಸ್ಥಗಿತಗೊಂಡಿವೆ. ಉದ್ಯೋಗಕ್ಕೆಂದು ಮಹಾನಗರಗಳಿಗೆ ವಲಸೆ ಹೋದ ಅನೇಕ ಕೂಲಿಕಾರರು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಉದ್ಯೋಗವಿಲ್ಲದೆ ಕುಳಿತುಕೊಂಡಿದ್ದ ಗ್ರಾಮಸ್ಥರಿಗೆ, ಕೃಷಿ ಕಾರ್ಮಿಕರಿಗೆ, ರೈತರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಸ್ವಗ್ರಾಮಗಳಲ್ಲಿ ಉದ್ಯೋಗವನ್ನು ಒದಗಿಸಲಾಗಿದೆ. ಇದರಿಂದ ಜನರು ಆರ್ಥಿಕವಾಗಿ ಕೊಂಚ ಗಟ್ಟಿಯಾಗಿದ್ದಾರೆ. ನರೇಗಾ ಯೋಜನೆಯಡಿ ಒಂದು ದಿನಕ್ಕೆ ಪ್ರಸ್ತುತ 275 ರೂಪಾಯಿಗಳನ್ನು ನೀಡಲಾಗುತ್ತಿದೆ. ಕೆಲಸಕ್ಕೆ ಬರುವರರು ತಮ್ಮದೇ ಗುದ್ದಲಿ, ಸಲಕೆ ತಂದರೆ ಹೆಚ್ಚುವರಿಯಾಗಿ 10 ರೂಪಾಯಿ ಸೇರಿ ಒಟ್ಟು 285 ರೂಪಾಯಿಗಳನ್ನು ನೀಡಲಾಗುತ್ತದೆ.

    ಈಗಾಗಲೇ ಜಿಲ್ಲೆಯಲ್ಲಿ 52,655 ಮಾನವ ದಿನಗಳನ್ನು ಸೃಜಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಗುರಿಯನ್ನು ಹೊಂದಲಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿನ ಗ್ರಾಮೀಣ ಕೂಲಿಕಾರರು ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದು, ಅವರು ಜಾಬ್‍ಕಾರ್ಡ ಕೇಳಿದಲ್ಲಿ ತುರ್ತಾಗಿ ಜಾಬ್‍ಕಾರ್ಡ ಒದಗಿಸಿ ಕೆಲಸ ನೀಡಲಾಗಿದೆ. ಪ್ರತಿ ದಿನ ಕೂಲಿಕಾರರು ಸ್ಥಳದಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ಕೋವಿಡ್-19ರ ಕುರಿತು ಅರಿವು ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಕೈತೊಳೆಯಲು ನೀರು ಹಾಗೂ ಸಾಬೂನು, ನೆರಳಿನ ವ್ಯವಸ್ಥೆ, ಮಕ್ಕಳ ಪಾಲನೆಗೆ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ, ಸ್ಯಾನಿಟೈಜರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ತಾಂತ್ರಿಕ ಸಹಾಯಕರು, ಬೇರ್ ಫುಟ್ ಟೆಕ್ನಿಷಿಯನ್, ಕಾಯಕ ಬಂಧುಗಳನ್ನು ನೇಮಿಸಿ ಕೂಲಿಕಾರರಲ್ಲಿ ನೆಗಡಿ, ಕೆಮ್ಮು, ಜ್ವರ ಇತ್ಯಾದಿ ಅನಾರೋಗ್ಯ ಕಂಡುಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಪರೀಕ್ಷೆಗೆ ಹಾಗೂ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳಲು ಸೂಚಿಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಗ್ರಾಮೀಣ ಭಾಗದ ಕೂಲಿಕಾರರು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದ್ದು, ಸ್ವಪ್ರೇರಿತರಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

  • ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    – ಆನ್‍ಲೈನ್ ದ್ರಾಕ್ಷಿ ಮಾರಾಟಕ್ಕೆ ಕ್ರಮ
    – ಪರಿಸ್ಥಿತಿಯ ದುರ್ಲಾಭ ಪಡೆದರೆ ಕಠಿಣ ಕ್ರಮ

    ವಿಜಯಪುರ: ರೈತ ಸಮುದಾಯಕ್ಕಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ. ಹೀಗಾಗಿ ರೈತರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಅಂತರಾಜ್ಯ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು ಕೊರೊನಾ ಹಿನ್ನಲೆಯಲ್ಲಿ ರೈತ ಮತ್ತು ಕೃಷಿ ಚಟುವಟಿಕೆಗಳ ಕುರಿತು ಜಿಲ್ಲಾ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ವಿಜಯಪುರ ಜಿಲ್ಲಾ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು, ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಈ ಚಟುವಟಿಕೆಗಳು ಜೂನ್ ನಂತರ ಪ್ರಾರಂಭವಾಗಲಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆನ್‍ಲೈನ್ ಟ್ರೆಡಿಂಗ್ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು. ರೈತರು, ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕರಿಂದ ಅಗತ್ಯ ಮಾಹಿತಿ ಪಡೆದ ನಂತರ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ ಸೂಕ್ತ ನಿರ್ದೇಶನಗಳನ್ನು ನೀಡಿದರು.

    ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳ ಸಭೆ ನಡೆಸಿದ್ದೇನೆ. ಈ ಸಭೆಯ ಮುಖ್ಯ ಉದ್ದೇಶ ರೈತರಿಗೆ ಅನುಕೂಲ ಕಲ್ಪಿಸುವುದಾಗಿದೆ. ವಿಜಯಪುರ ಜಿಲ್ಲೆಗೆ ಬೇಕಾದ ಎಲ್ಲಾ ಬೀಜ, ಗೊಬ್ಬರ ವ್ಯವಸ್ಥೆ ಆಗಿದೆ. ಕಡಲೇ ಖರೀದಿಗೆ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದರೆ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಸಾರಿಗೆ ಸಮಸ್ಯೆಯೂ ಉಂಟಾಗುತ್ತದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ವ್ಯಾಪಕ ಪ್ರಚಾರವೂ ಅಗತ್ಯವಿದ್ದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ನೆರವು ಪಡೆಯುವಂತೆ ಸಲಹೆ ನೀಡಿದರು.

    ದ್ರಾಕ್ಷಿ ಬೆಳೆಗಾರರು ಗಮನ ಸೆಳೆದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು, ದ್ರಾಕ್ಷಿ ಆನ್‍ಲೈನ್ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ತೊಡಕುಗಳಿದ್ದರೂ ನಿವಾರಿಸಲು ಜಿಲ್ಲಾಧಿಕಾರಿಗೆ ಕೃಷಿ ಸಚಿವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ. ಆದರೆ ಕಿಡಿಗೇಡಿಗಳು ಕಲ್ಲಂಗಡಿ ತಿಂದರೆ ರೋಗ ಬರುತ್ತದೆ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಸುಳ್ಳು, ಹೀಗೆ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದರು.

    ಕಲ್ಲಂಗಡಿ, ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದಾರೆ. ಅವರಿಂದ ಮಾಹಿತಿಗಳನ್ನು ಪಡೆಯಲಾಗಿದೆ. ಆದ್ದರಿಂದ ಭೀತಿಯಿಲ್ಲದೇ ಈ ಹಣ್ಣುಗಳ ಸೇವನೆ ಮಾಡುವಂತೆ ಸಚವರು ಸಲಹೆ ನೀಡಿದರು. ಕಲ್ಲಂಗಡಿ ತಿಂದರೆ ಕೊರೊನಾ ಬರುತ್ತೆ ಅಂತ ಅಪಪ್ರಚಾರ ಮಾಡಲಾಗಿದೆ. ಹಾಗಾಗಿ ಕಲ್ಲಂಗಡಿ ಮಾರಾಟ ಆಗುತ್ತಿಲ್ಲ ಎಂದು ದೂರುಗಳು ಬಂದಿವೆ. ಒಂದು ಮೂಲದ ಪ್ರಕಾರ, ಕಲ್ಲಂಗಡಿ ಹಾಗೂ ಸವತೆಕಾಯಿ ತಿಂದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಯಾರೂ ಭಯಪಡಬಾರದು. ರೈತರಿಗೆ ಯಾರೇ ಅಧಿಕಾರಿಗಳು ತೊಂದರೆ ಮಾಡಿದಲ್ಲಿ ಅಂಥವರ ಮೇಲೆ ಹಿಂದುಮುಂದು ನೋಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ. ಹಾಪ್ ಕಾಮ್ಸ್ ನಲ್ಲಿ ತರಕಾರಿ, ಹಣ್ಣು, ಮೊಟ್ಟೆ ಮಾರಾಟಕ್ಕೆ ಸೂಚಿಸಲಾಗಿದೆ. ರೈತರೆಲ್ಲ ಹೆದರಬಾರದು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

    ಹಾಗೆಯೇ ಯಾರಾದರೂ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವುದಾಗಲೀ, ಪಡೆದುಕೊಂಡಿದ್ದಾಗಲಿ ತಮ್ಮ ಗಮನಕ್ಕೆ ಬಂದರೆ ಅವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮಜರುಗಿಸ ಬೇಕಾಗುತ್ತದೆ ಎಂದು ಕೃಷಿ ಸಚಿವರು ಖಡಕ್ ಎಚ್ಚರಿಕೆ ನೀಡಿದರು.

    ತಾವು ಹಾಗೂ ಸರ್ಕಾರ ರೈತರ ಜೊತೆಗೆ ಇದ್ದೇವೆ. ರೈತರು ಹತಾಶರಾಗಬಾರದು. ಕೊರೊನಾ ಹಾವಳಿ ಆದಷ್ಟು ಬೇಗ ಕಡಿಮೆಯಾಗಲಿದೆ, ನಾವೆಲ್ಲರೂ ಇದರಿಂದ ಪಾರಾಗುತ್ತೇವೆ. ಕೊರೊನಾ ಎಂಬ ಸಾಮಾಜಿಕ ಕುತ್ತು ಆದಷ್ಟು ಬೇಗ ನಿವಾರಣೆಯಾಗಲಿದೆ. ಕೊರೊನಾ ಕಂಟಕದಿಂದ ಪಾರಾಗಿ ಜನರನ್ನು ಬದುಕಿಸಿಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು. ಹಾಗೆಯೇ ರಾಜ್ಯದ ಸಹಕಾರ ಸಚಿವರು 1200 ಕೋಟಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಸೊಸೈಟಿಗಳ ಚಟುವಟಿಕೆಗೆ ಯಾವುದೇ ತೊಂದರೆಯೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಂಭಾಗದಲ್ಲಿ ರೈತರಿಂದ ನೇರವಾಗಿ ಗ್ರಾಹಕರ ಮನೆಬಾಗಿಲಿಗೆ ತಾಜಾ ಹಣ್ಣು ಮತ್ತು ತರಕಾರಿ ಮಾರಾಟ ಸೇವೆಗೆ ಕೃಷಿ ಸಚಿವರು ಚಾಲನೆ ನೀಡಿದರು. ಶಾಸಕರಾದ ಶಿವಾನಂದ್ ಪಾಟೀಲ್, ಅರುಣ್ ಶಾಪುರ್, ಬಸನಗೌಡ ಪಾಟೀಲ್ ಯತ್ನಾಳ, ಈಶ್ವಂತ್ ರಾಯ್, ದೇವಾನಂದ್ ಚೌಹಣ್, ಮುರುಗೇಶ್ ನಿರಾಣಿ ಸೇರಿದಂತೆ ಇಲಾಖಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

  • ಭೂಮಿಗೆ ರಾಸಾಯನಿಕ ಬಳಸಬೇಡಿ ಎಂದವರನ್ನ ತರಾಟೆಗೆ ತೆಗೆದುಕೊಂಡ ರೈತರು

    ಭೂಮಿಗೆ ರಾಸಾಯನಿಕ ಬಳಸಬೇಡಿ ಎಂದವರನ್ನ ತರಾಟೆಗೆ ತೆಗೆದುಕೊಂಡ ರೈತರು

    ಬೆಳಗಾವಿ: ರಾಸಾಯನಿಕ ಬಳಸಿ ನಮ್ಮ ಭೂಮಿಯನ್ನು ನಾವೇ ಹಾಳು ಮಾಡುತ್ತಿದ್ದೇವೆ ಎಂದು ಹೇಳಿದ ಕೃಷಿ ಇಲಾಖೆ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

    ಹುಕ್ಕೇರಿ ಪಟ್ಟಣದಲ್ಲಿ ಆಯೋಜಿಸಿದ್ದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ರಾಸಾಯನಿಕ ಬಳಿಸೋದು ಕಡಿಮೆ ಮಾಡಬೇಕು ಎಂದು ಅಧಿಕಾರಿಗಳು ರೈತರಿಗೆ ಹೇಳಿದ್ದಾರೆ. ಈ ವೇಳೆ ರೈತರು ನೀವೇ ಯೂರಿಯಾ ಡಿಎಪಿ ತಯಾರು ಮಾಡಿ ಸಬ್ಸಿಡಿ ದರದಲ್ಲಿ ಕೊಡುತ್ತೀರಾ. ಮತ್ತೆ ತಪ್ಪನ್ನೆಲ್ಲ ನಮ್ಮ ಮೇಲೆ ಹಾಕುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಹುಕ್ಕೇರಿ ಇಂಚಿಗೇರಿ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಹಾಗೂ ಕೃಷಿ ಅಧಿಕಾರಿಗಳು ಭಾಷಣದಲ್ಲಿ ರೈತರು ರಾಸಾಯನಿಕ ಬಳಿಸಿ ಭೂಮಿ ಹಾಳಾಗುತ್ತಿದೆ ಎಂದು ಹೇಳಿದ್ದರು. ಇದರಿಂದ ಕೆರಳಿದ ರೈತರು ನಮ್ಮ ಮೇಲೆ ಯಾಕೆ ನೀವು ತಪ್ಪು ಹೊರಿಸುತ್ತೀರಾ ಎಂದು ತರಾಟೆಗೆ ತೆಗದುಕೊಂಡರು.

    ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹುಕ್ಕೇರಿಯ ಇಂಚಿಗೇರಿ ಮಠದ ಅಭಿನವ ಮಂಜುನಾಥ ಸ್ವಾಮೀಜಿ, ರೈತರು ಸರ್ಕಾರಗಳಲ್ಲಿ ಸಾಲಮನ್ನಾ ಮಾಡಿ ಎಂದು ಬೇಡುವುದನ್ನು ಬಿಟ್ಟು ದೇವರಲ್ಲಿ ಕಾಲಕ್ಕೆ ತಕ್ಕಂತೆ ಮಳೆ, ಕಾಲಕ್ಕೆ ತಕ್ಕಂತೆ ಬೆಳೆ, ಕಾಲಕ್ಕೆ ತಕ್ಕಂತೆ ಬೆಲೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಬೇಕು ಎಂದರು.

    ಭಾರತ ದೇಶ ರೈತರ ಕೈಯಲ್ಲಿದೆ. ನಮ್ಮ ದೇಶದ ರೈತರು ಉಳುಮೆ ಮಾಡುವುದನ್ನು ಬಿಟ್ಟರೆ ಇಡೀ ವ್ಯವಸ್ಥೆಯಲ್ಲೇ ಅಲ್ಲೋಲ ಕಲ್ಲೋಲವಾಗುತ್ತೆ. ಇಂದಿನ ದಿನಮಾನಗಳಲ್ಲಿ ರಾಸಾಯನಿಕಗಳನ್ನು ಬಳಸಿ ಭೂಮಿ ತಾಯಿಯನ್ನು ಬಂಜರು ಮಾಡಲಾಗುತ್ತಿದೆ. ರೈತರು ರಾಸಾಯನಿಕಗಳನ್ನು ಬಳಸುವುದನ್ನು ಸಾಯುವವ ಕೃಷಿಯತ್ತ ಹೆಚ್ಚು ತೊಡಗಿಕೊಳ್ಳಿವಂತೆ ಸ್ವಾಮೀಜಿ ರೈತರಿಗೆ ಕರೆ ಕೊಟ್ಟರು. ಕೃಷಿ ಅಭಿಯಾನದಲ್ಲಿ ನೂರಾರು ರೈತರು ಭಾಗವಹಿಸಿ ಹೊಸ ಹೊಸ ಕೃಷಿ ಚಟುವಟಿಕೆಗಳ ಮಾಹಿತಿ ಪಡೆದುಕೊಂಡರು.

    ಕಾರ್ಯಕ್ರಮದಲ್ಲಿ ಕೃಷಿ ತಜ್ಜರು ರೈತರಿಗೆ ಕೃಷಿಯಲ್ಲಿ ನೂತನ ತಂತ್ರಾಶಗಳನ್ನು ಬಳಸಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಹುಕ್ಕೇರಿ ವಿರಕ್ತ ಮಠದ ಶಿವ ಬಸವ ಸ್ವಾಮೀಜಿ ವಹಿಸಿದ್ದರು. ಕೃಷಿ ಇಲಾಖೆಯ ಸಹ ನಿರ್ದೇಶಕ ಎಂ ಎಸ್ ಪಟಗುಂದಿ, ಕೃಷಿ ಅಧಿಕಾರಿ ಎ.ಕೆ ಬಡಿಗೇರ ಸೇರಿದಂತೆ ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಮಾಹಿತಿ ಕೇಳಲು ಹೋದ ರೈತರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅಧಿಕಾರಿ

    ಮಾಹಿತಿ ಕೇಳಲು ಹೋದ ರೈತರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅಧಿಕಾರಿ

    ಕಲಬುರಗಿ: ಕೃಷಿ ಹೊಂಡದ ಮಾಹಿತಿ ಕೇಳಲು ಹೋದ ರೈತರಿಗೆ ಅಧಿಕಾರಿಯೋರ್ವ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಅಫಜಲಪುರ್ ತಾಲೂಕಿನ ಕೃಷಿ ಇಲಾಖೆಯಲ್ಲಿ ನಡೆದಿದೆ.

    ತಾಲೂಕಿನ ಚಿಂಚೋಳಿ ಗ್ರಾಮದ ರೈತರು ನಾವು ದಾಖಲಾತಿ ನೀಡಿದ್ದರೂ ನಮ್ಮ ಜಮೀನಿನಲ್ಲಿ ಮಾತ್ರ ಯಾಕೆ ಕೃಷಿ ಹೊಂಡ ನಿರ್ಮಿಸಿಲ್ಲ ಅಂತಾ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೊಪಗೊಂಡ ಅಧಿಕಾರಿ ನಿಮ್ಮ ಫಾರಂ ರಿಜಕ್ಟ್ ಮಾಡಿ ಹರಿದು ಹಾಕಿದ್ದೇನೆ. ಸಿಒಡಿ-ಸಿಬಿಐ ಅಲ್ಲದೇ ಯಾರಿಗಾದರೂ ಕರೆದುಕೊಂಡು ಬನ್ನಿ ನಾನು ನೋಡ್ಕೊತೀನಿ ಅಂತ ಅವಾಚ್ಯ ಶಬ್ಧಗಳಿಂದ ರೈತರಿಗೆ ನಿಂದಿಸಿದ್ದಾನೆ.

    ಅಧಿಕಾರಿ ಅಸಭ್ಯ ವರ್ತನೆಗೆ ರೈತರು ಬೇಸತ್ತು ನಾವು ನಿಮ್ಮ ಮೇಲೆ ಯಾವ ತನಿಖೆಗೂ ಹಾಕಲ್ಲ, ಹಾಗೆ ಮಾಡೋದಾಗಿದ್ರೆ ನಿಮ್ಮ ಬಳಿ ಯಾಕೆ ಬರುತ್ತಿದ್ದೇವು? ಅಧಿಕಾರಿಗಳೇ ಹೀಗೆ ಹೇಳಿದರೆ ರೈತರು ಏನು ಮಾಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಕೋಪಗೊಂಡ ಅಧಿಕಾರಿ ಏನಾದರೂ ಮಾಡಿಕೊಳ್ಳಿ ನಾನು ಯಾರಿಗೂ ಹೆದರೋದಿಲ್ಲ ಎನ್ನುವ ರೀತಿ ಉತ್ತರ ನೀಡಿ ರೈತರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ.

    ಈ ಘಟನೆಯನ್ನು ಸ್ಥಳದಲ್ಲಿದ್ದವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಅಧಿಕಾರಿಯ ದರ್ಪದ ವರ್ತನೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೋರ್‌ವೆಲ್‌ ನೀರಿನಿಂದ ತುಂಬಿಸಿದ್ದ ಕೃಷಿಹೊಂಡಕ್ಕೆ ಸಚಿವ ಶಿವಶಂಕರರೆಡ್ಡಿಯಿಂದ ಬಾಗಿನ!

    ಬೋರ್‌ವೆಲ್‌ ನೀರಿನಿಂದ ತುಂಬಿಸಿದ್ದ ಕೃಷಿಹೊಂಡಕ್ಕೆ ಸಚಿವ ಶಿವಶಂಕರರೆಡ್ಡಿಯಿಂದ ಬಾಗಿನ!

    ದಾವಣಗೆರೆ: ಸಚಿವರನ್ನು ಮೆಚ್ಚಿಸಲು ಕೃಷಿ ಅಧಿಕಾರಿಗಳು ಕೃಷಿ ಹೊಂಡಕ್ಕೆ ಬೋರ್‌ವೆಲ್‌ ನೀರು ತುಂಬಿಸಿ ಸಚಿವರನ್ನು ಮೆಚ್ಚಿಸಿದ ಘಟನೆ ಜಿಲ್ಲೆಯ ಈಚಘಟ್ಟ ಗ್ರಾಮದಲ್ಲಿ ನಡೆದಿದೆ.

    ಈಚಗಟ್ಟ ಗ್ರಾಮದಲ್ಲಿ ಕೃಷಿ ಸಚಿವ ಶಿವಶಂಕರರೆಡ್ಡಿ ರೈತರ ಜೊತೆ ಸಂವಾದವನ್ನು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ ಗ್ರಾಮದ ಮಲ್ಲಿಕಾರ್ಜುನ್ ಎಂಬವರ ಜಮೀನಿನ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನೆರವೇರಿಸಿದರು. ಆದರೆ ಮಳೆಯೇ ಇಲ್ಲದ ಜಿಲ್ಲೆಯಲ್ಲಿ ಕೃಷಿ ಹೊಂಡಕ್ಕೆ ಬೋರ್‌ವೆಲ್‌ ನೀರನ್ನು ತುಂಬಿಸಿ ಸಚಿವರಿಂದ ಮೆಚ್ಚುಗೆ ಪಡಿಯಲು ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

     

    ಮಳೆ ನೀರಿನ ಮೂಲಕ ಕೃಷಿ ಹೊಂಡ ತುಂಬಿಸುವ ಯೋಜನೆಗೆ ಇದಾಗಿದೆ. ಆದರೆ ಈ ಯೋಜನೆಗೆ ಅಧಿಕಾರಿಗಳೇ ಎಳ್ಳುನೀರು ಬಿಟ್ಟಿದ್ದಾರೆ. ಇದರ ಮಾಹಿತಿ ಅರಿಯದ ಕೃಷಿ ಸಚಿವರು ತುಂಬಿದ್ದ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸಿ ಸಂವಾದ ಕಾರ್ಯಕ್ರಮಕ್ಕೆ ತೆರಳಿದರು. ಅಲ್ಲದೇ ಕೃಷಿ ಸಚಿವರು ಬರುತ್ತಾರೆಂದು ಕೃಷಿ ಹೊಂಡಕ್ಕೆ ಅಧಿಕಾರಿಗಳು ತಂತಿ ಬೇಲಿಯನ್ನು ಸಹ ನಿರ್ಮಿಸಿದ್ದರು.

    ನಂತರ ರೈತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಾನುಭವಿಗಳಿಗೆ ಕೃಷಿ ಭಾಗ್ಯ ಪರಿಕರ ವಿತರಿಸಿ, ಮಾತನಾಡಿದ ಕೃಷಿ ಸಚಿವರು, ಆತ್ಮಹತ್ಯೆ ಮಾಡಿಕೊಂಡು ಸತ್ತವರೆಲ್ಲಾ ಸಾಲಭಾದೆಯಿಂದ ಸಾವನ್ನಪ್ಪಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರು ತಮ್ಮ ಕೌಟುಂಬಿಕ ತೊಂದರೆ ಹಾಗೂ ಬೇರೆ ಬೇರೆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇಂತಹ ಆತ್ಮಹತ್ಯೆ ವಿಚಾರಗಳನ್ನು ಮಾಧ್ಯಮಗಳು ವೈಭವಿಕರಿಸುವುದು ಸರಿಯಲ್ಲ. ನಮ್ಮ ಸರ್ಕಾರ ರೈತರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆ- ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಜಿ.ಪಂ ಸದಸ್ಯ

    ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆ- ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಜಿ.ಪಂ ಸದಸ್ಯ

    ಚಾಮರಾಜನಗರ: ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯ ಮತ್ತು ಬೆಂಬಲಿಗರು ಕೊಳ್ಳೆಗಾಲದ ಕೃಷಿ ಇಲಾಖೆಯ ಕಚೇರಿಗೆ ನುಗ್ಗಿ ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಿಲ್ಲೆಯ

    ಕುಂತೂರು ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಎಲ್.ನಾಗರಾಜು ಮತ್ತು ಬೆಂಬಲಿಗರು ಕೊಳ್ಳೆಗಾಲದ ಸಹಾಯಕ ಕೃಷಿ ಇಲಾಖೆಯ ಕಚೇರಿಗೆ ನುಗ್ಗಿ ಸಹಾಯಕ ನಿರ್ದೇಶಕ ಬಿ.ಎಸ್.ಮಹದೇವಯ್ಯ ಹಾಗೂ ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಉಮಾಶಂಕರ್ ಎಂಬ ಡಿ.ದರ್ಜೆಯ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ.

    ಸಹಾಯಕ ನಿರ್ದೇಶಕ ಎಲ್.ಮಹದೇವಯ್ಯ

    ಮಾಹಿತಿ ಹಕ್ಕಿನಡಿ ಸರಿಯಾದ ಮಾಹಿತಿ ನೀಡಿಲ್ಲವೆಂದು ಆರೋಪಿಸಿ ಡಿ ದರ್ಜೆ ನೌಕರನ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಉಪನಿರ್ದೇಶಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ತಮ್ಮ ಬಳಿಯಿರುವ ದಾಖಲೆಗಳನ್ನು ನೀಡಿದ್ದೇವೆ ಎಂದು ತಿಳಿಸಿದ್ರೂ ನಮ್ಮ ಹಲ್ಲೆ ನಡೆಸಿದ್ದಾರೆ ಎಂದು ಸಹಾಯಕ ನಿರ್ದೇಶಕ ಎಲ್.ಮಹದೇವಯ್ಯ ಹೇಳಿದ್ದಾರೆ.

    ಎಲ್.ನಾಗರಾಜು ಸೇರಿದಂತೆ ಐವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಹಾಗೂ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಸಹಾಯಕ ನಿರ್ದೇಶಕ ಎಲ್.ಮಹದೇವಯ್ಯ ದೂರು ದಾಖಲಿಸಿದ್ದಾರೆ. ಇನ್ನೂ ಹಲ್ಲೆಗೊಳಗಾದ ಡಿ ದರ್ಜೆ ನೌಕರ ಉಮಾಶಂಕರ್ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     

    ನೌಕರ ಉಮಾಶಂಕರ್