Tag: ಕೃಷಿ ಇಲಾಖೆ

  • ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಮಂಡ್ಯದ ಅರ್ಪಿತ ಸಾಧನೆ

    ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಮಂಡ್ಯದ ಅರ್ಪಿತ ಸಾಧನೆ

    ಮಂಡ್ಯ: ಮಲ್ಲೇಷಿಯಾದಲ್ಲಿ ನಡೆದ ಏಷ್ಯಾ ಪ್ಯಾನಿಕ್ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ (International Yoga Competition) ಮಂಡ್ಯದ ಜೆ.ಕೆ ಅರ್ಪಿತ 3ನೇ ಸ್ಥಾನ ಪಡೆದಿದ್ದಾರೆ.

    ಮಂಡ್ಯ (Mandya) ತಾಲ್ಲೂಕಿನ ಜವನಹಳ್ಳಿ ಗ್ರಾಮದ ಕುಮಾರ್ ಎಂಬುವರ ಪುತ್ರಿ ಅರ್ಪಿತಾ ಅಕ್ಟೋಬರ್ 14ರಂದು ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಮಂಡ್ಯಕ್ಕೆ ಕೀರ್ತಿ ತಂದಿದ್ದಾರೆ.

    ಪ್ರಸ್ತುತ ಹಾಸನ ಜಿಲ್ಲೆಯ ಶ್ರವಣಬೆಳಗೋಳದಲ್ಲಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಅರ್ಪಿತಾ, ಕಳೆದ ಜೂನ್‌ನಲ್ಲಿ ಶಿವಮೊಗ್ಗದ ಸಾಗರದಲ್ಲಿ ನಡೆದ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಹಾಗೂ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಡಬ್ಲ್ಯೂಎಫ್ ಯೋಗಾಸನ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದರು. ಬಳಿಕ ಕೇರಳದ ಎರ್ನಾಕಲಂನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಭಾಗಿಯಾಗಿ ಉತ್ತಮ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದರು.  

    ಈವರೆಗೆ ಎರಡು ರಾಜ್ಯಮಟ್ಟದ ಹಾಗೂ ಎರಡು ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾಗುವ ಜೊತೆಗೆ ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ 3ನೇ ಬಹುಮಾನ ಪಡೆಯುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

  • ದುಪ್ಪಟ್ಟು ಬೆಲೆಗೆ ಗೊಬ್ಬರ ಮಾರುತ್ತಿದ್ದ ಅಂಗಡಿ ಮೇಲೆ ಅಧಿಕಾರಿಗಳ ದಾಳಿ – ಮಾಲೀಕನಿಗೆ ನೋಟಿಸ್

    ದುಪ್ಪಟ್ಟು ಬೆಲೆಗೆ ಗೊಬ್ಬರ ಮಾರುತ್ತಿದ್ದ ಅಂಗಡಿ ಮೇಲೆ ಅಧಿಕಾರಿಗಳ ದಾಳಿ – ಮಾಲೀಕನಿಗೆ ನೋಟಿಸ್

    ಕಲಬುರಗಿ: ಸದ್ಯ ರಾಜ್ಯದಲ್ಲಿ ಉತ್ತಮ ಮಳೆ ಹಿನ್ನೆಲೆ ಬಿತ್ತನೆ ಕಾರ್ಯ ಸಹ ಜೋರಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕಲಬುರಗಿ (Kalaburagi) ಜಿಲ್ಲೆಯ ರೈತರಿಂದ ದುಪ್ಪಟ್ಟು ಹಣ ಪಡೆದು ಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

    ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ಹಿನ್ನೆಲೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡು ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ರೇವಣಸಿದ್ದೇಶ್ವರ ಅಗ್ರೋ ಏಜೆನ್ಸಿಯ ಗೊಬ್ಬರದ ಅಂಗಡಿ ಮಾಲೀಕ, ಗೊಬ್ಬರ ಹಾಗೂ ಇತರೆ ವಸ್ತುಗಳನ್ನು ಎಂಆರ್‌ಪಿ ದರಕ್ಕಿಂತ ಎರಡು ಪಟ್ಟು ಜಾಸ್ತಿ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆ?

    ಅಲ್ಲದೆ ರೈತರು ಗೊಬ್ಬರದ ಬಿಲ್ ಕೇಳಿದ್ರೆ ನಕಲಿ ಬಿಲ್ ನೀಡುತ್ತಿದ್ದಾರೆ. ಸದ್ಯ ರೈತ ಹಾಗೂ ಅಂಗಡಿ ಮಾಲೀಕರ ವೀಡಿಯೋ ವೈರಲ್ ಆಗುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿ ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

    ಒಂದೆಡೆ ಅಫಜಲಪುರದಲ್ಲಿ ಗೊಬ್ಬರ, ಯೂರಿಯಾ ಹಾಗೂ ಕ್ರಿಮಿನಾಶಕ ಔಷಧಿ ದುಪ್ಪಟ್ಟು ಬೆಲೆಗೆ ಮಾರಾಟವಾದ್ರೆ, ಇತ್ತ ಜೇವರ್ಗಿ ಹಾಗು ಯಡ್ರಾಮಿ ತಾಲೂಕಿನ ಕೆಲ ಗೊಬ್ಬರದ ಅಂಗಡಿ ಮಾಲೀಕರು 2 ವರ್ಷದ ಹಿಂದಿನ ಅವಧಿ ಮುಗಿದ ಕ್ರಿಮಿನಾಶಕಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಈ ರೀತಿಯಾಗಿ ರೈತರಿಗೆ ವಂಚಿಸುತ್ತಿರುವ ಫರ್ಟಿಲೈಸರ್ ಅಂಗಡಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳು ಅವಧಿ ಮುಗಿದ ಕ್ರಿಮಿನಾಶಕಗಳನ್ನು ವಶಕ್ಕೆ ಪಡೆದು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಸಿರು ಸೇನೆ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

  • ಹನಿ, ತುಂತುರು ನೀರಾವರಿ ಘಟಕ ಅಳವಡಿಕೆ ಯೋಜನೆ – 1.81 ಲಕ್ಷ ರೈತರಿಗೆ 440 ಕೋಟಿ ಸಹಾಯಧನ

    ಹನಿ, ತುಂತುರು ನೀರಾವರಿ ಘಟಕ ಅಳವಡಿಕೆ ಯೋಜನೆ – 1.81 ಲಕ್ಷ ರೈತರಿಗೆ 440 ಕೋಟಿ ಸಹಾಯಧನ

    – ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ

    ಬೆಂಗಳೂರು: 2025-26ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಬಾರಿ ಕೃಷಿ ಕ್ಷೇತ್ರಕ್ಕೂ ಬಂಪರ್‌ ಕೊಡುಗೆಗಳನ್ನ ಘೋಷಣೆ ಮಾಡಿದ್ದಾರೆ.

    ಹನಿ ಮತ್ತು ತುಂತುರು ನೀರಾವರಿ (Drip and sprinkler irrigation) ಘಟಕ ಅಳವಡಿಕೆಗೆ ಕೃಷಿ ಇಲಾಖೆಯಿಂದ ಒಟ್ಟು 1.81 ಲಕ್ಷ ರೈತರಿಗೆ 440 ಕೋಟಿ ರೂ. ಸಹಾಯಧನ ನೀಡುವುದಾಗಿ  ಘೋಷಣೆ ಮಾಡಿದ್ದಾರೆ.

    ಕೃಷಿ ಕ್ಷೇತ್ರಕ್ಕೆ ಹೊಸ ಘೋಷಣೆಗಳೇನು?
    * ರೈತ ಸಮೃದ್ಧಿ ಯೋಜನೆಯಡಿ 10 ಕೃಷಿ ಹವಾಮಾನ ವಲಯಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳ ಅಭಿವೃದ್ಧಿ ಮಾಡಲಾಗುವುದು.
    * ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 428 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ರೈತರಿಗೆ ಸಹಾಯಧನ ಸೌಲಭ್ಯ ಕಲ್ಪಿಸುವುದು.
    * ತೊಗರಿ ಉತ್ಪಾದನೆ ಉತ್ತೇಜನಕ್ಕೆ 88 ಕೋಟಿ ರೂ. ಒದಗಿಸಲಾಗುವುದು.
    * ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡಲಾಗುವುದು.
    * ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ ಗುರಿ ಹೊಂದಲಾಗಿದೆ.
    * ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ಡಿಜಿಟಲ್‌ ಕೃಷಿ ಸೇವೆಗಳ ಕೇಂದ್ರ ಸ್ಥಾಪಿಸಲಾಗುವುದು.
    * ಕೃಷಿ ಹವಾಮಾನ ವಲಯಗಳ ವರ್ಗೀಕರಣವನ್ನು ಮರುವ್ಯಾಖ್ಯಾನಗೊಳಿಸಲು ತಜ್ಞರ ಸಮಿತಿ ರಚನೆ ಮಾಡಲಾಗುವುದು.
    * ರೈತರ ಜೀವನೋಪಾಯ ಸುಧಾರಣೆಗೆ ಸಮಗ್ರ ಮಳೆಯಾಶ್ರಿತ ಕೃಷಿ ನೀತಿ ಜಾರಿ.
    * ಕೃಷಿ ಇಲಾಖೆಯ 58 ಪ್ರಯೋಗಾಲಯಗಳ ಬಲವರ್ಧನೆ.
    * 20 ಕೋಟಿ ರೂ. ವೆಚ್ಚದಲ್ಲಿ ಸಾವಯವ ಮತ್ತು ಸಿರಿಧಾನ್ಯ ಹಬ್‌ಗಳ ಸ್ಥಾಪನೆ ಮಾಡುವುದರ ಜೊತೆಗೆ ಉತ್ತರ ಕನ್ನಡ ಜಿಲ್ಲೆ, ಜೋಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕಾಗಿ ಪರಿವರ್ತಿಸಲು ಕ್ರಮ.
    * ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮೂಲಸೌಕರ್ಯ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಮೀಸಲಿಡಲಾಗುವುದು
    * ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಫೀನೋಟೈಪಿಂಗ್‌ ಸೌಲಭ್ಯ ಕಲ್ಪಿಸಲಾಗುವುದು
    * ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು
    * ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪಿಸುವ ಕುರಿತು ಕಾರ್ಯಸಾಧ್ಯತ ವರದಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದರು.

  • ಸಿಸಿಟಿವಿ ಎದುರಲ್ಲೇ ಲಂಚ ಸ್ವೀಕಾರ ಆರೋಪ – ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಸಸ್ಪೆಂಡ್

    ಸಿಸಿಟಿವಿ ಎದುರಲ್ಲೇ ಲಂಚ ಸ್ವೀಕಾರ ಆರೋಪ – ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಸಸ್ಪೆಂಡ್

    ಕಲಬುರಗಿ: ಸಿಸಿಟಿವಿ ಕ್ಯಾಮೆರಾ ಎದುರಲ್ಲೇ ಕಲಬುರಗಿ ಕೃಷಿ ಮಾರಾಟ ಇಲಾಖೆಯ (Agricultural Marketing Department) ಸಹಾಯಕ ನಿರ್ದೇಶಕಿ ಸವಿತಾ ನಾಯಕ ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಇಲಾಖೆಯ ನಿರ್ದೇಶಕ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ.

    ಎಪಿಎಂಸಿಗೆ ಬರುತ್ತಿದ್ದ ವರ್ತಕರಿಂದ ಲಂಚ ಸ್ವೀಕರಿಸುತ್ತಿದ್ದ ದೃಶ್ಯಾವಳಿ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಮಹಾಂತಗೌಡ ಎಂಬುವವರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಮಾಡಿದ್ದ ಹಿನ್ನೆಲೆಯಲ್ಲಿ ಲಂಚ ಸ್ವೀಕಾರ ಆರೋಪದ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಜೇವರ್ಗಿ ಪಟ್ಟಣದಲ್ಲಿ ವರ್ತಕರಿಂದ ಲಂಚ ಸ್ವೀಕರಿಸುತ್ತಿರುವುದು ಪತ್ತೆಯಾಗಿತ್ತು ಎನ್ನಲಾಗಿದೆ.

    ಕಚೇರಿ ಸಮಯ ಮುಗಿದ ಬಳಿಕ ಜೀಪ್‍ನಲ್ಲಿ ಬಂದು ಸಹಾಯಕ ನಿರ್ದೇಶಕಿ ಲಂಚ ಸ್ವೀಕರಿಸಿದ್ದರು ಎಂದು ಹೇಳಲಾಗಿದ್ದು, 5 ಲಕ್ಷ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ರೈತಪರ ಸಂಘಟನೆಯೊಂದು ಆರೋಪ ಮಾಡಿತ್ತು. ಎಪಿಎಂಸಿ ಯಾರ್ಡ್‍ನಿಂದ ಹೊರಹೊಗುವ ಪ್ರತಿ ವಾಹನಕ್ಕೂ ವರ್ತಕರು ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಿರುವಾಗ, ಒಂದು ವಾಹನದ ತೆರಿಗೆ ಪಾವತಿಸಿ ಉಳಿದ ವಾಹನಗಳಿಗೆ ಪಾವತಿಸದೇ ಕೆಲವು ವರ್ತಕರು ತೆರಿಗೆ ವಂಚಿಸುತ್ತಿದ್ದರು ಎನ್ನಲಾಗಿದ್ದು, ಇಂತಹ ವರ್ತಕರಿಂದ ನಾಯಕ ಲಂಚ ಸ್ವೀಕರಿಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿವೆ.

    ಇನ್ನೂ ಅಮಾನತು ಆದೇಶದ ಜೊತೆಗೆ, ಸವಿತಾ ನಾಯಕ್‌ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ, ಸಕ್ಷಮ ಪ್ರಾಧಿಕಾರಿಗಳ ಲಿಖಿತ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸಹ ಆದೇಶದಲ್ಲಿ ನಿರ್ದೇಶಕ ಶಿವಾನಂದ ಕಟ್ಟಪ್ಪಣೆ ಮಾಡಿದ್ದಾರೆ.

    ಬೆಳಕಿಗೆ ಬಂದದ್ದು ಹೇಗೆ?
    ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫಜಲಪುರ, ಚಿತ್ತಾಪುರ, ಯಡ್ರಾಮಿ, ಸೇಡಂ, ಚಿಂಚೋಳಿ ತಾಲೂಕಿನ ವರ್ತಕರು ಮತ್ತು ಹತ್ತಿ ಮಾರಾಟಗಾರರು ಹಾಗೂ ವ್ಯಾಪಾರಿಗಳಿಂದ ಸಹಾಯಕ ನಿರ್ದೇಶಕಿ ಸವಿತಾ ನಾಯಕ ಲಂಚ ಪಡೆದಿದ್ದರು ಎಂಬ ದೂರುಗಳ ಹಿನ್ನೆಲೆಯಲ್ಲಿ ಆರ್‌ಟಿಐ ಅಡಿ ಮನವಿ ಸಲ್ಲಿಸಿ ಪಡೆದಿದ್ದ ಸಿಸಿಟಿವಿ ದೃಶ್ಯಾವಳಿ ತುಣುಕುಗಳನ್ನು ಮಹಾಂತಗೌಡ ಎಂಬುವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಕುರಿತು ದಿನಪತ್ರಿಕೆಯೊಂದರಲ್ಲಿ ವರದಿ ಪ್ರಕಟಗೊಂಡಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ನಿರ್ದೇಶಕ ಶಿವಾನಂದ ಕಾಪಶಿ ಅಮಾನತು ಆದೇಶ ಹೊರಡಿಸಿದ್ದಾರೆ.

  • ಕೃಷಿ ಇಲಾಖೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೇಡ್ – 2 ಆಮೆಗಳು ಪತ್ತೆ

    ಕೃಷಿ ಇಲಾಖೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೇಡ್ – 2 ಆಮೆಗಳು ಪತ್ತೆ

    ಬಾಗಲಕೋಟೆ: ಇಲ್ಲಿನ ಕೃಷಿ ಇಲಾಖೆ ಅಧಿಕಾರಿಗಳ (Agriculture Department) ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಎರಡು ಸಾಕು ಆಮೆಗಳು (Tortoise) ಪತ್ತೆಯಾಗಿವೆ.

    ಬಾಗಲಕೋಟೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಹಾಗೂ ಸಹಾಯಕ ನಿರ್ದೇಶಕ ಕೃಷ್ಣಾ ಶಿರೂರು ಅವರ ಮನೆಗಳ ಮೇಲೆ ಲೋಕಾಯುಕ್ತ (Karnataka Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಜೈಲಿಗೆ ಹೋಗೋವಾಗ ದುಡ್ಡು ಹೊಡೆದು ಹೋದೆ ಅಂತ ಜೊತೆಯಲ್ಲಿದ್ದವರೇ ಹೇಳಿದ್ರು: ಡಿಕೆಶಿ

    ವಿದ್ಯಾಗಿರಿಯ ಅಕ್ಕಿಮರಡಿ ಬಡಾವಣೆಯಲ್ಲಿರುವ ಚೇತನಾ ಪಾಟೀಲ್ ಹಾಗೂ ವಿದ್ಯಾಗಿರಿಯ 18ನೇ ಕ್ರಾಸ್‌ನಲ್ಲಿರುವ ಕೃಷ್ಣಾ ಶಿರೂರು ಅವರ ಮನೆಗಳ ಮೇಲೆ ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ ನೇತೃತ್ವದ ತಂಡ ದಾಳಿ ನಡೆಸಿದೆ. ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌

    ಈ ವೇಳೆ ಚೇತನಾ ಪಾಟೀಲ್ ಅವರ ಮನೆಯಲ್ಲಿ 2 ಸಾಕು ಆಮೆಗಳು ಪತ್ತೆಯಾಗಿವೆ. ಆಮೆಗಳನ್ನ ಮನೆಯಲ್ಲಿ ಸಾಕಿದ್ದೇಕೆ ಎಂಬ ಕುತೂಹಲ ವ್ಯಕ್ತಪಡಿಸಿರುವ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳನ್ನೂ ಕರೆಸಿ ಪರಿಶೀಲಿಸಲಾಗುತ್ತಿದೆ. ಇದೇ ವೇಳೆ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಬಾಗಲಕೋಟೆ ವಿದ್ಯಾಗಿರಿಯ ಅಕ್ಕಿಮರಡಿ ಬಡಾವಣೆಯಲ್ಲಿರುವ ಮನೆಯಲ್ಲಿ ಶೋಧ ಮುಂದುವರಿದಿದ್ದು, ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಬೆಂಗಳೂರಿನ ಕೆಆರ್‌ಪುರಂ ತಹಶೀಲ್ದಾರ್‌ ಅಜಿತ್‌ ರೈ ಮನೆ ಸೇರಿ 10 ಕಡೆ ಲೋಕಾಯುಕ್ತ ದಾಳಿ ನಡೆಸಿತು. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮನೆ, ಕಚೇರಿ ಸೇರಿದಂತೆ 10 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ 40 ಲಕ್ಷ ರೂ. ನಗದು ಸೇರಿದಂತೆ ಅನೇಕ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಹಲವೆಡೆ ದಾಳಿ ನಡೆದಿದ್ದು, ಅಧಿಕಾರಿಗಳಿಂದ ಶೋಧ ಮುಂದುವರಿದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕೋಟ್ಯಂತರ ರೂ. ಭ್ರಷ್ಟಾಚಾರ – ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಯಲ್ಲಿ ದೂರು

    ಕೋಟ್ಯಂತರ ರೂ. ಭ್ರಷ್ಟಾಚಾರ – ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಯಲ್ಲಿ ದೂರು

    ಬೆಂಗಳೂರು: ಕೃಷಿ ಇಲಾಖೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ.

    ಕೃಷಿ ಇಲಾಖೆ ವತಿಯಿಂದ ರೈತರಿಗೆ ಕೊಡುವ ಯಂತ್ರೋಪಕರಣಗಳ ಟೆಂಡರ್ ನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸಿ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಗೆ ಎಸಿಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಕೃಷ್ಣ ಮೂರ್ತಿ ದೂರು ನೀಡಿದ್ದಾರೆ.  ಇದನ್ನೂ ಓದಿ: ಪ್ರೀತಿಸಿದ ಯುವತಿಯನ್ನು ದೂರ ಮಾಡಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ 

    ಬಿ.ಸಿ. ಪಾಟೀಲ್ ಆಪ್ತ ನಿರ್ದೇಶಕ ದಿವಾಕರ್ ಮುಂದೆ ಇಟ್ಟುಕೊಂಡು ಸುಮಾರು 210 ಕೋಟಿಗೂ ಅಧಿಕ ಹಣ ಅಕ್ರಮ ಮಾಡಿದ್ದಾರೆ. ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುವಂತೆ ಆಗ್ರಹಿಸಿ ದೂರು ನೀಡಲಾಗಿದೆ. ಇದನ್ನೂ ಓದಿ: ತಾಲಿಬಾನ್‍ನಲ್ಲಿ ಸರ್ಕಾರ ಘೋಷಣೆ – ಮೋಸ್ಟ್ ವಾಂಟೆಡ್ ಉಗ್ರ ಈಗ ಆಂತರಿಕ ಸಚಿವ

    ನಿರ್ದೇಶಕ ದಿವಾಕರ್ ಕೃಷಿ ಇಲಾಖೆಯಿಂದ ಸಬ್ಸಿಡಿ ರೂಪದಲ್ಲಿ ನೀಡುವ ವಸ್ತುಗಳಿಗೆ ಬಿಲ್ ಮಂಜೂರು ಮಾಡಲು ಲಂಚ ಪಡೆದಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಬಿ.ಸಿ.ಪಾಟೀಲ್

    ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಬಿ.ಸಿ.ಪಾಟೀಲ್

    ಬೆಂಗಳೂರು: ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.

    ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷದಿಂದ ಕೈಗೊಂಡಿರುವ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ದೇಶದ್ಯಾಂತ ಗಮನ ಸೆಳೆದಿದ್ದು, ಕೇಂದ್ರದಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೊಬೈಲ್ ಬೆಳೆ ಸಮೀಕ್ಷೆ ಈ ಬಾರಿಯೂ ಕೂಡ ಯಶಸ್ವಿಯಾಗಬೇಕೆಂದು ಕೇಳಿಕೊಂಡಿದ್ದಾರೆ.ಇದನ್ನೂ ಓದಿ:ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ಕಳೆದ ವರ್ಷ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಕ್ಷಿಪ್ರ ಗತಿಯಲ್ಲಿ ಇತರೆ ಇಲಾಖೆಗಳ ಸಹಯೋಗದಲ್ಲಿ ಕೈಗೊಂಡು ಯಶಸ್ವಿಯೂ ಆಗಿದೆ. ಇತರೆ ರಾಜ್ಯಗಳಿಗೆ ಕರ್ನಾಟಕ ಕೃಷಿ ಇಲಾಖೆಯ ಈ ಸಾಧನೆ ಮಾದರಿಯೂ ಆಗಿದೆ. ಕೇಂದ್ರದಿಂದ ಅಗ್ರಿ ಟ್ರೆಂಡ್ ಸೆಟ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಸಾಧನೆ ಇನ್ನು ಮುಂದೆಯೂ ಆಗಬೇಕು. ರೈತ ತಾನೇ ತನ್ನ ಬೆಳೆಗೆ ಪ್ರಮಾಣ ಪತ್ರ ನೀಡುವಂತಹ ಜಮೀನಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹನೆಂದು ಹೇಳಿಕೊಳ್ಳುವಂತಹ ಮೊಬೈಲ್ ಬೆಳೆ ಸಮೀಕ್ಷೆ ನಿರಂತರ ನಡೆಯಬೇಕು. ಕಳೆದ ಬಾರಿಯಂತೆ ಎಲ್ಲಾ ಕೃಷಿ ಅಧಿಕಾರಿಗಳು ಈ ಪ್ರಕ್ರಿಯೆ ಯಶಸ್ಸಿಗೆ ಮತ್ತೆ ಚುರುಕಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

    2021-22ನೇ ಸಾಲಿನಲ್ಲಿ ಪೂರ್ವ ಮುಂಗಾರಿನಲ್ಲಿ 2.94 ಲಕ್ಷ ತಾಕುಗಳನ್ನು ರೈತರೇ ಸ್ವತಃ ರೈತರ ಆ್ಯಪ್‍ನಲ್ಲಿ ಹಾಗೂ 44.77 ಲಕ್ಷ ತಾಕುಗಳನ್ನು ಖಾಸಗಿ ನಿವಾಸಿಗಳ ಆ್ಯಪ್‍ನಲ್ಲಿ ಬೆಳೆ ಮಾಹಿತಿಯನ್ನು ದಾಖಲು ಮಾಡಲಾಗಿರುತ್ತದೆ. 2021-22ನೇ ಸಾಲಿನಲ್ಲಿ ಮುಂಗಾರಿನಲ್ಲಿ 6.18 ಲಕ್ಷ ತಾಕುಗಳನ್ನು ರೈತರೇ ಸ್ವತಃ ರೈತರ ಆ್ಯಪ್‍ನಲ್ಲಿ ಹಾಗೂ 0.66 ಲಕ್ಷ ತಾಕುಗಳನ್ನು ಖಾಸಗಿ ನಿವಾಸಿಗಳ ಆ್ಯಪ್‍ನಲ್ಲಿ ಆಗಸ್ಟ್.30 ರವರೆಗೆ ಅಪೆÇ್ಲೀಡ್ ಮಾಡಲಾಗಿದ್ದು, ಬೆಳೆ ಸಮೀಕ್ಷೆಯು ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಕೇರಳದ 32 ಮಂದಿಗೆ ಸೋಂಕು, ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ: ಸುಧಾಕರ್

    ಪ್ರತಿ ವರ್ಷದಂತೆ ಈ ವರ್ಷವೂ ಸಹ ಮುಂಗಾರು ಹಂಗಾಮಿನಲ್ಲಿ ಸುಮಾರು 2.09 ಕೋಟಿ ತಾಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಿದ್ದು, ರೈತರಿಂದಲೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಆ್ಯಪ್ ಮೂಲಕ ಅಪೆÇ್ಲೀಡ್ ಮಾಡಿಸುವ ಉದ್ದೇಶವನ್ನು ಹೊಂದಿದ್ದೇವೆ. ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ರೈತರೇ ಸ್ವತಃ ಬೆಳೆ ಸಮೀಕ್ಷೆ ಮಾಹಿತಿಯನ್ನು ದಾಖಲಿಸಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ.ಇದನ್ನೂ ಓದಿ:ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ವಿಕಾಸಸೌಧದ ಕಚೇರಿಯಲ್ಲಿ ಕೃಷಿ ಇಲಾಖಾಧಿಕಾರಿಗಳೊಂದಿಗೆ 2021-22 ನೇ ಸಾಲಿನ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಪ್ರಗತಿ ಕುರಿತು ಬಿ.ಸಿ.ಪಾಟೀಲ್ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕೃಷಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ, ಆಯುಕ್ತ ಬ್ರಿಜೆಶ್ ಕುಮಾರ್ ದೀಕ್ಷಿತ್, ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

  • ಕೃಷಿ ಕೊಟ್ಟರೆ ಖುಷಿಯಿಂದ ಮಾಡ್ತೇನೆ ಅಂದಿದ್ದು ಅದೇ ಖಾತೆ ಸಿಕ್ಕಿದೆ: ಬಿ.ಸಿ ಪಾಟೀಲ್

    ಕೃಷಿ ಕೊಟ್ಟರೆ ಖುಷಿಯಿಂದ ಮಾಡ್ತೇನೆ ಅಂದಿದ್ದು ಅದೇ ಖಾತೆ ಸಿಕ್ಕಿದೆ: ಬಿ.ಸಿ ಪಾಟೀಲ್

    – ನಾನು ರೈತನ ಮಗ

    ಹಾವೇರಿ: ಕೃಷಿ ಇಲಾಖೆ ಯಾವತ್ತೂ ಮುಳ್ಳಿನ ಹಾಸಿಗೆ ಅಂತಾ ಗೊತ್ತಿದ್ದೆ, ಕೃಷಿ ಇಲಾಖೆ ಕೇಳಿದ್ದೆ ನಾನು ರೈತನ ಮಗನಾಗಿ ರೈತರ ಕಣ್ಣೀರು ಒರೆಸುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

    ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್, ನಾವು ರೈತರ ಮಕ್ಕಳಾಗಿ ರೈತರ ಕಣ್ಣೀರು ಒರೆಸದೆ, ರೈತರ ಸಮಸ್ಯೆಗೆ ಸ್ಪಂದಿಸದೇ ಓಡಿ ಹೋದರೆ ರೈತರನ್ನುನೋಡಿಕೊಳ್ಳುವವರು ಯಾರು? ಕೃಷಿ ಕೊಟ್ಟರೆ ಖುಷಿಯಿಂದ ಖಾತೆ ನಿರ್ವಹಿಸುತ್ತೇನೆ ಎಂದು ಮುಖ್ಯಮಂತ್ರಿ ಅವರೊಂದಿಗೆ ಹೇಳಿದ್ದೆ ಎಂದರು. ಇದನ್ನೂ ಓದಿ: ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    ಈ ಹಿಂದೆಯೂ ಕೃಷಿ ಸಚಿವನಾಗಿದ್ದೆ ಈಗಲೂ ಕೃಷಿ ಖಾತೆ ಸಿಕ್ಕಿದೆ. ಕೃಷಿ ಇಲಾಖೆಯಲ್ಲಿ ಅರ್ಧಕ್ಕೆ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಅನುಕೂಲ ಆಗುತ್ತದೆ. ಕೃಷಿ ಖಾತೆ ಸಿಕ್ಕಿರೋದು ಖುಷಿಯಾಗಿದೆ. ಕೃಷಿಯಲ್ಲಿ ಹೊಸ ಹೊಸ ತಾಂತ್ರಿಕ ವ್ಯವಸ್ಥೆ ತಂದು ರೈತಪರವಾಗಿ ಕೆಲಸ ಮಾಡಲು ಸಜ್ಜಾಗಿದ್ದೇನೆ. ಖಾತೆ ಹಂಚಿಕೆ ವಿಚಾರದಲ್ಲಿ ಕೆಲವರ ಅಸಮಾಧಾನ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಂದೆ ಏನಾಗುತ್ತೆ ನೋಡೋಣ ಎಂದರು.

  • ನಕಲಿ ರಸಗೊಬ್ಬರ ದಾಸ್ತಾನು ಪತ್ತೆಹಚ್ಚಿದ ರೈತರು

    ನಕಲಿ ರಸಗೊಬ್ಬರ ದಾಸ್ತಾನು ಪತ್ತೆಹಚ್ಚಿದ ರೈತರು

    ವಿಜಯಪುರ: ಅಕ್ರಮ ರಸಗೊಬ್ಬರ ತಯಾರಿಕಾ ಜಾಲವನ್ನು ರೈತರೇ ಬೇಧಿಸಿದ್ದಾರೆ. ಜಿಲ್ಲೆಯ ಇಂಡಿ ತಾಲೂಕಿನ ಇಂಗಳಗಿ ಗ್ರಾಮದ ಹೊರ ಭಾಗದಲ್ಲಿ ಅಕ್ರಮ ದಾಸ್ತಾನು ಪತ್ತೆಯಾಗಿದೆ.

    ಜಮ್ಮು ಭಾಗವಾನ್ ಅವರಿಗೆ ಸೇರಿದ ತೋಟದ ಮನೆಯಲ್ಲಿ ಅಕ್ರಮವಾಗಿ ಇಟ್ಟಿದ್ದ ರಸಗೊಬ್ಬರಗಳ ಮೂಟೆಗಳನ್ನು ರೈತರು ಪತ್ತೆಹಚ್ಚಿದ್ದಾರೆ. ನಂತರ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಧಿಕಾರಿಗಳೊಂದಿಗೆ ದಾಳಿ ಮಾಡಿದ್ದಾರೆ.

    ದಾಳಿ ವೇಳೆ ತೋಟದ ಮನೆಯಲ್ಲಿ ಯಾರೂ ಕಂಡು ಬಂದಿಲ್ಲ. ನಂತರ ಅಧಿಕಾರಿಗಳು ರಸಗೊಬ್ಬರ ತಯಾರಿಕೆ, ಸಾಗಾಟ ಹಾಗೂ ಮಾರಾಟ ಮಾಡಿದ್ದರ ಬaಗ್ಗೆ ತನಿಖೆ ನಡೆಸಿದ್ದಾರೆ.ನಕಲಿ ರಸಗೊಬ್ಬರ ಸಂಗ್ರಹಿಸಿದ ಮನೆಗೆ ಪೊಲೀಸ್ ಕಾವಲು ಇರಿಸಿ, ನಕಲಿ ರಸಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೃಷಿ ಜಂಟಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ್ ಹಾಗೂ ಇತರ ಸಿಬ್ಬಂದಿಯಿಂದ ಪರಿಶೀಲನೆ ನಡೆಸಲಾಗಿದ್ದು, ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.

  • ರಾಯಭಾರಿಯಾಗಿ ದರ್ಶನ್ ನೇಮಕ – ಕೃಷಿ ಇಲಾಖೆಯಿಂದ ಅಧಿಕೃತ ಆದೇಶ

    ರಾಯಭಾರಿಯಾಗಿ ದರ್ಶನ್ ನೇಮಕ – ಕೃಷಿ ಇಲಾಖೆಯಿಂದ ಅಧಿಕೃತ ಆದೇಶ

    ಬೆಂಗಳೂರು: ರಾಜ್ಯ ಕೃಷಿ ಇಲಾಖೆಯ ರಾಯಭಾರಿಯಾಗಿ ನಟ ದರ್ಶನ್ ನೇಮಕದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

    ಜನವರಿ 25ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜ್ಯ ಸರ್ಕಾರದರ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ ಎಂದು ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದರು. ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಿಸುವ ಸಂದೇಶ ಸಾರುವ ರಾಯಭಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಕಾಡಿದ್ದರೆ ನಾಡು ವನವಿದ್ದರೆ ಜೀವನ ಎಂದು ಸಾರಿದ್ದರು. ಇದೀಗ ನೇಗಿಲಯೋಗಿ ಪರ ನಿಂತು ಪ್ರೋತ್ಸಾಹ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.

    ಕೃಷಿ ಇಲಾಖೆಯ ಕಾರ್ಯಕ್ರಮಗಳ ಪ್ರಚಾರ ಮತ್ತು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ದರ್ಶನ್ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ.