Tag: ಕೂ

  • ʼಕೂʼ ಮೂಲಕ ಟ್ವಿಟ್ಟರ್‌ಗೆ ಸಡ್ಡು ಹೊಡೆಯಲು ಮುಂದಾದ ಕೇಂದ್ರ ಸರ್ಕಾರ

    ʼಕೂʼ ಮೂಲಕ ಟ್ವಿಟ್ಟರ್‌ಗೆ ಸಡ್ಡು ಹೊಡೆಯಲು ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ತನ್ನ ಆದೇಶಗಳನ್ನು ಪಾಲಿಸದ ಅಮೆರಿಕದ ಟ್ವಿಟ್ಟರ್‌ ಕಂಪನಿ ವಿರುದ್ಧ ಕೇಂದ್ರ ಸರ್ಕಾರ ಈಗ ಸ್ವದೇಶಿ ಬೆಂಗಳೂರು ಮೂಲದ ‘ಕೂ’ ಆಪ್‌ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದೆ.

    ಹೌದು. ರೈತರ ಹೋರಾಟದ ಹೆಸರಿನಲ್ಲಿ ಪ್ರಚೋದನಕಾರಿ ಟ್ವೀಟ್‌ಗಳನ್ನು ಡಿಲೀಟ್‌ ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಸೂಚಿಸಿತ್ತು. ಆದರೆ ಆದೇಶವನ್ನು ಸರಿಯಾಗಿ ಪಾಲಿಸದ್ದಕ್ಕೆ ತನ್ನ ಸರ್ಕಾರದ ನಿರ್ಧಾರದ ವಿಷಯವನ್ನು ಟ್ವಿಟ್ಟರ್‌ಗಿಂತ ಮೊದಲು ಕೂ ಆಪ್‌ ನಲ್ಲಿ ಪ್ರಕಟ ಮಾಡಲು ಮುಂದಾಗಿದೆ.

    ಮಾಧ್ಯಮಗಳಲ್ಲಿ ಪ್ರಕಟವಾದಂತೆ ಸರ್ಕಾರದ ಆದೇಶ ಅಥವಾ ಇನ್ನಿತರ ಆದೇಶಗಳನ್ನು ಟ್ವಿಟ್ಟರ್‌ಗಿಂತ ಕನಿಷ್ಠ 1-3 ಗಂಟೆ ಮೊದಲು ಕೂ ಆಪ್‌ನಲ್ಲಿ ಪ್ರಕಟವಾಗಲಿದೆ.

    ಪ್ರಮುಖ ನಿರ್ಧಾರಗಳು ಮೊದಲೇ ಕೂ ಆಪ್‌ನಲ್ಲಿ ಪ್ರಕಟಿಸಿದರೆ ಜನರ ಒಲವು ಸಹಜವಾಗಿಯೇ ಕೂ ಆಪ್‌ನತ್ತ ಬರಲಿದೆ. ಇದರಿಂದಾಗಿ ಜನರ ಪಾಲ್ಗೊಳ್ಳುವಿಕ್ಕೆ ಹೆಚ್ಚಾಗಲಿದೆ. ಟ್ವಿಟ್ಟರ್‌ಗೆ ಸಡ್ಡುಹೊಡೆಯಲು ಕೇಂದ್ರ ಸರ್ಕಾರ ಈ ಕಾರ್ಯತಂತ್ರ ಅನುಸರಿಸಿದೆ ಎಂದು ಉನ್ನತ ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

    ಕೇಂದ್ರದ ಬಹುತೇಕ ಸಚಿವಾಲಯ ಸಚಿವರು ಈಗಾಗಲೇ ʼಕೂʼನಲ್ಲಿ ಖಾತೆ ತೆರೆದಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ನಾಯಕರು ಸಹ ʼಕೂʼನಲ್ಲಿ ಖಾತೆ ತೆರೆಯುತ್ತಿದ್ದಾರೆ.

    ಟ್ವಿಟ್ಟರ್‌ ಕಂಪನಿ ಭಾರತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂಬ ಆರೋಪನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಈ ಆರೋಪಕ್ಕೆ ಪೂರಕ ಎಂಬಂತೆ ಟ್ವಿಟ್ಟರ್‌ ಸಂಸ್ಥಾಪಕ ಜಾಕ್‌ ಡೊರ್ಸೆ ಪಾಪ್‌ ಗಾಯಕಿ ಮತ್ತು ನಟಿ ರಿಯಾನಾ ರೈತರ ಹೋರಾಟಕ್ಕೆ ಸಂಬಂಧಿಸಿದ ಮಾಡಿದ್ದ ಟ್ವೀಟ್‌ ಅನ್ನು ಲೈಕ್‌ ಮಾಡಿದ್ದರು. ಅಷ್ಟೇ ಅಲ್ಲದೇ ಅಮೆರಿಕದ #BlackLivesMatter ಹೋರಾಟಕ್ಕೆ ಸಂಬಂಧಿಸಿದಂತೆ ಹೇಗೆ ಇಮೋಜಿ ಮಾಡಲಾಗಿತ್ತು ಅದೇ ರೀತಿಯ ಇಮೋಜಿಯನ್ನು ರೈತರ ಹೋರಾಟಕ್ಕೆ ಮಾಡಬೇಕೆಂದು ಎಂದು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಪತ್ರಕರ್ತೆ ಮಾಡಿದ್ದ ಟ್ವೀಟ್‌ ಅನ್ನು ಜಾಕ್‌ ಲೈಕ್‌ ಮಾಡಿದ್ದರು.

    ಒಂದು ದೇಶದ ಆತರಿಕ ವಿಚಾರ ಬಂದಾಗ ಟ್ವಿಟ್ಟರ್‌ ಮುಖ್ಯಸ್ಥ ಜಾಕ್‌ ತಟಸ್ಥ ನೀತಿಯನ್ನು ಅನುಸರಿಸಬೇಕಿತ್ತು. ಆದರೆ ಭಾರತ ವಿರೋಧಿ ಬೇಡಿಕೆಯ ಟ್ವೀಟ್‌ ಗಳನ್ನು ಜಾಕ್‌ ಲೈಕ್‌ ಮಾಡಿದ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಸ್ವೀಕರಿಸಿತ್ತು.

    ಈ ಹಿಂದೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೂ ಕಂಪನಿಯ ಸಿಇಒ ಅಪ್ರಮೇಯ ರಾಧಾಕೃಷ್ಣ, ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಹಾಗಿದ್ದರೂ ದೇಶದ ಕಾನೂನನ್ನು ಪಾಲಿಸುತ್ತೇವೆ ಎಂದು ಹೇಳಿದ್ದರು.